ADVERTISEMENT

ಅನುಭವ ಮಂಟಪ | ಸತ್ಯ, ಅರ್ಧ ಸತ್ಯಗಳ ಮಧ್ಯೆ ಜಾತಿ ಗಣತಿ ಚರ್ಚೆ

ಯೋಗೇಂದ್ರ ಯಾದವ್
Published 3 ಅಕ್ಟೋಬರ್ 2024, 23:30 IST
Last Updated 3 ಅಕ್ಟೋಬರ್ 2024, 23:30 IST
   
ಈ ದೇಶದ ‘ಅಭಿಪ್ರಾಯ ರೂಪಿಸುವ ವರ್ಗ’ದಲ್ಲಿ ಹೆಚ್ಚಿನವರು ಪ್ರಬಲ ಜಾತಿಗೆ ಸೇರಿದವರೇ ಆಗಿದ್ದಾರೆ. ಜಾತಿ ಗಣತಿಯನ್ನು ಈ ರೀತಿ ‘ಸೈದ್ಧಾಂತಿಕ’ವಾಗಿ ವಿರೋಧಿಸಲು ಮಂಡಿಸುವ ಈ ‘ಅಭಿಪ್ರಾಯ ರೂಪಿಸುವ ವರ್ಗ’ದ ವಾದವು ಹಲವು ಅರ್ಧ ಸತ್ಯಗಳಿಂದ ಕೂಡಿದೆ.10 ಅರ್ಧ ಸತ್ಯಗಳ ಪಟ್ಟಿ ಇಲ್ಲಿದೆ

ಹಂಗೆರಿಯ ಸಮಾಜಶಾಸ್ತ್ರಜ್ಞ ಕಾರ್ಲ್‌ ಮ್ಯಾನ್‌ಹೈಮನ್‌ ಅವರು ‘ಸಿದ್ಧಾಂತ’ ಎನ್ನುವ ಆಲೋಚನಾ ಕ್ರಮವನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಅವರ ಪ್ರಕಾರ ‘ಸಿದ್ಧಾಂತ’ ಎಂದರೆ, ಹುಸಿ ನಂಬಿಕೆಗಳು ಅಥವಾ ಅದೊಂದು ಭ್ರಮೆ. ಈ ಹುಸಿ ನಂಬಿಕೆಗಳು, ಈ ಭ್ರಮೆಗಳು ಸಮಾಜದ ನಿಜ ಸ್ವರೂಪವನ್ನು ಮಸುಕು ಮಾಡಿ ಬಿಡುತ್ತವೆ ಎಂದು ಅವರು ಅಭಿಪ್ರಾಯಪಡುತ್ತಾರೆ. ಮ್ಯಾನ್‌ಹೈಮನ್‌ ಅವರ ಈ ಅರ್ಥ ವಿವರಣೆಯು ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ಚರ್ಚೆಯಾಗಿದೆ. ಇವರ ಈ ವ್ಯಾಖ್ಯಾನಕ್ಕೆ ಉದಾಹರಣೆವೊಂದನ್ನು ಹುಡುಕುತ್ತಿದ್ದೀರಿ ಎಂದಾದರೆ, ನಮ್ಮ ದೇಶದಲ್ಲಿ ಜಾತಿ ಗಣತಿಯ ಕುರಿತು ನಡೆಯುತ್ತಿರುವ ಚರ್ಚೆಯು ಹೆಚ್ಚು ಸೂಕ್ತವಾಗಬಲ್ಲದು.

ಉದಾರವಾದಿ ‘ಸಿದ್ಧಾಂತ’ದ, ಪ್ರಗತಿಪರವಾಗಿ ಚಿಂತಿಸುವ ಸಾಕ್ಷರ ಭಾರತೀಯರು ಜಾತಿ ಗಣತಿ ಕುರಿತಾಗಿ ಚರ್ಚಿಸುವುದನ್ನು ಕಂಡರೆ, ನನಗೆ ಆಶ್ಚರ್ಯವಾಗುತ್ತದೆ. ಹುಟ್ಟು ಎನ್ನುವುದೊಂದು ಆಕಸ್ಮಿಕವಷ್ಟೆ ಎಂದು ಜನರು ನಂಬುತ್ತಾರೆ. ಹೀಗೆ ಹೇಳುವಾಗ, ಅವರಲ್ಲಿನ ಅಜ್ಞಾನ, ಅವರ ಪೂರ್ವಗ್ರಹಗಳು ಹಾಗೂ ಅವರ ದುರಹಂಕಾರದ ಕುರಿತು ನನಗೆ ಸಿಟ್ಟು ಬರುತ್ತದೆ. ಹುಟ್ಟಿನ ಕುರಿತು ಈ ರೀತಿಯಾಗಿ ಮಾತನಾಡುವ ಈ ದೇಶದ ‘ಅಭಿಪ್ರಾಯ ರೂಪಿಸುವ ವರ್ಗ’ದಲ್ಲಿ ಹೆಚ್ಚಿನವರು ಪ್ರಬಲ ಜಾತಿಗೆ ಸೇರಿದವರೇ ಆಗಿದ್ದಾರೆ. ಜಾತಿ ಗಣತಿಯನ್ನು ಈ ರೀತಿ ‘ಸೈದ್ಧಾಂತಿಕ’ವಾಗಿ ವಿರೋಧಿಸಲು ಮಂಡಿಸುವ ಈ ‘ಅಭಿಪ್ರಾಯ ರೂಪಿಸುವ ವರ್ಗ’ದ ವಾದವು ಹಲವು ಅರ್ಧ ಸತ್ಯಗಳಿಂದ ಕೂಡಿದೆ. ಹಾಗಾದರೆ, ಯಾವುವು ಆ ಅರ್ಧ ಸತ್ಯಗಳು?

ಇಲ್ಲಿದೆ 10 ಅರ್ಧ ಸತ್ಯಗಳ ಪಟ್ಟಿ...

1.1931ರ ನಂತರ ದೇಶದಲ್ಲಿ ಜಾತಿ ಗಣತಿ ನಡೆದೇ ಇಲ್ಲ

ನಿಜ, 1931ರ ನಂತರ ನಡೆದ ಎಲ್ಲ ಗಣತಿಯ ವೇಳೆ, ಪ್ರತಿಯೊಬ್ಬರಲ್ಲಿಯೂ ಅವರ ಜಾತಿಯ ಕುರಿತು ಪ್ರಶ್ನೆಗಳನ್ನು ಕೇಳಿಲ್ಲ. ಆದರೆ, ಇಲ್ಲೊಂದು ತಪ್ಪು ಗ್ರಹಿಕೆ ಇದೆ. ವಾಸ್ತವವಾಗಿ, ಸ್ವತಂತ್ರ ಭಾರತದಲ್ಲಿ 10 ವರ್ಷಗಳಿಗೊಮ್ಮೆ ನಡೆಯುವ ಗಣತಿಯ ವೇಳೆ ಜನರಲ್ಲಿ ಜಾತಿ ಕುರಿತ ಪ್ರಶ್ನೆಗಳನ್ನು ಕೇಳಲಾಗಿದೆ. ‘ನೀವು ಪರಿಶಿಷ್ಟ ಜಾತಿಗೆ ಸೇರಿದ್ದೀರೋ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದೀರೋ ಎಂದು ಕೇಳಲಾಗಿದೆ. ಇಷ್ಟೇ ಅಲ್ಲ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಶೈಕ್ಷಣಿಕ ಹಾಗೂ ಆರ್ಥಿಕ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗುತ್ತದೆ. ಈ ಸೂಚ್ಯಂಕದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಈ ಸೂಚ್ಯಂಕದ ತಯಾರಿಕೆಯ ಕಾರಣಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಜನರಲ್ಲಿ ಗಣತಿಯ ವೇಳೆಯಲ್ಲಿಯೇ ಜಾತಿ ಕುರಿತು ಪ್ರಶ್ನಿಸಲಾಗುತ್ತದೆ.

ADVERTISEMENT

2. ಜಾತಿ ಗಣತಿ ಎನ್ನುವುದು ರಾಹುಲ್ ಗಾಂಧಿ ಅವರ ಆವಿಷ್ಕಾರ

ನಿಜ, ಕಾಂಗ್ರೆಸ್‌ ಪಕ್ಷವು ತೀರಾ ಇತ್ತೀಚೆಗೆ ಜಾತಿ ಗಣತಿ ಕುರಿತು ತನ್ನ ಇಚ್ಛಾಶಕ್ತಿಯನ್ನು ತೋರಿಸುತ್ತಿದೆ. ಇದು ರಾಹುಲ್‌ ಗಾಂಧಿ ಅವರ ಕಾರಣಕ್ಕಾಗಿಯೇ ಆಗುತ್ತಿದೆ. ಆದರೆ, ಜಾತಿ ಗಣತಿ ನಡೆಯಬೇಕು ಎನ್ನುವ ಆಗ್ರಹವು ದೇಶಕ್ಕೆ ಹೊಸತೇನಲ್ಲ. ಅಟಲ್‌ ಬಿಹಾರಿ ವಾಜಪೇಯಿ ಅವರ ಆಡಳಿತದ ಅವಧಿಯಲ್ಲಿ ಸಾಮಾಜಿಕ ನ್ಯಾಯ ಸಚಿವಾಲಯ, ರಿಜಿಸ್ಟ್ರಾರ್‌ ಜನರಲ್‌ ಹಾಗೂ ಗಣತಿ ಆಯೋಗವು ಜಾತಿ ಗಣತಿ ನಡೆಸಬೇಕು ಎಂದು ಶಿಫಾರಸು ಮಾಡಿದ್ದವು. ಈ ಬಗ್ಗೆ 2010ರಲ್ಲಿ ಲೋಕಸಭೆಯಲ್ಲಿ ವಿಸ್ತೃತವಾತ ಚರ್ಚೆಯೂ ನಡೆದಿತ್ತು ಮತ್ತು ಬಿಜೆಪಿಯು ಈ ಬಗ್ಗೆ ತನ್ನ ಸಹಮತವನ್ನೂ ನೀಡಿತ್ತು. ಆ ಕಾರಣ, ಜಾತಿ ಗಣತಿ ನಡೆಸುವ ಸಂಬಂಧ ಲೋಕಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆಯೂ ದೊರೆತಿತ್ತು. ಮುಂಬರುವ ಗಣತಿಯ ವೇಳೆ ‘ಇತರ ಹಿಂದುಳಿದ ಜಾತಿ’ (ಒಬಿಸಿ) ಕಾಲಂ ಅನ್ನು ಸೇರಿಸುವುದಾಗಿ 2018ರಲ್ಲಿ ಅಂದಿನ ಗೃಹ ಸಚಿವ ರಾಜನಾಥ ಸಿಂಗ್‌ ಭರವಸೆ ನೀಡಿದ್ದರು. ಒಬಿಸಿ ಕಾಲಂ ಅನ್ನು ಗಣತಿಯಲ್ಲಿ ಸೇರಿಸುವಂತೆ ಸಾಮಾಜಿಕ ನ್ಯಾಯದ ಕುರಿತ ಸಂಸದೀಯ ಸಮಿತಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಮಾಡಿದ್ದವು. ಬಿಹಾರದ ಎನ್‌ಡಿಎ ಸರ್ಕಾರವೂ ಸೇರಿದಂತೆ ಕೆಲವು ರಾಜ್ಯ ಸರ್ಕಾರಗಳೂ ಇದರ ಪರವಾಗಿದ್ದವು.

3. ಜಾತಿ ಗಣತಿ ನಡೆಸುವುದು ಸುದೀರ್ಘವಾದ ಪ್ರಕ್ರಿಯೆ. ಇದರಿಂದ ಗಣತಿ ಕಾರ್ಯ ವಿಳಂಬವಾಗುತ್ತದೆ

ನಿಜ, ಗಣತಿಯ ವೇಳೆ ಕೇಳಲಾಗುವ ಪ್ರಶ್ನೋತ್ತರ ಮಾದರಿಯನ್ನೇ ಜಾತಿ ಗಣತಿ ವೇಳೆಯೂ ಬಳಸಲು ಸಾಧ್ಯವಿಲ್ಲ. ಪ್ರಶ್ನಾವಳಿಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಇದೊಂದು ಶ್ರಮದಾಯಕ ಕೆಲಸವೇನಲ್ಲ. ಗಣತಿಯ ವೇಳೆ ಕೇಳುವ ಪ್ರಶ್ನೋತ್ತರ ಮಾದರಿಯ ಕಾಲಂ 8ಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ. ಅದೇನೆಂದರೆ: ‘ಜಾತಿ: 8(a) ಕಾಲಂನಲ್ಲಿ ‘ವ್ಯಕ್ತಿಯು ಯಾವ ಸಾಮಾಜಿಕ ಗುಂಪಿಗೆ ಸೇರಿದ್ದಾರೆ’ ಎಂದು 8(b) ಕಾಲಂನಲ್ಲಿ ‘ಎಸ್‌ಸಿ/ಎಸ್‌ಟಿ/ಒಬಿಸಿ/ಸಾಮಾನ್ಯ ವರ್ಗ’ ಎಂದೂ ನಮೂದಿಸಬೇಕಾಗುತ್ತದೆ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿಯನ್ನೇನೂ ತರಬೇಕಾಗಿಲ್ಲ.

4. ದೇಶದಲ್ಲಿರುವ ಎಲ್ಲ ಜಾತಿಗಳ ಸಿದ್ಧಪಟ್ಟಿ ನಮ್ಮ ಬಳಿ ಇಲ್ಲ. ಆದ್ದರಿಂದ ಜಾತಿ ಗಣತಿಯು ಅಸಾಧ್ಯ ಕಾರ್ಯವಾಗಲಿದೆ

ನಿಜ, ಸಾಮಾನ್ಯ ವರ್ಗದ (General group) ಎಲ್ಲ ಜಾತಿ, ಉಪ ಜಾತಿಗಳ ಕುರಿತ ಅಧಿಕೃತ ಪಟ್ಟಿ ದೇಶದಲ್ಲಿ ಇಲ್ಲ. ಆದರೆ, ದೇಶದ ಜನಸಂಖ್ಯೆಯಲ್ಲಿ ನಾಲ್ಕನೇ ಮೂರರಷ್ಟು ಭಾಗ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ಪಟ್ಟಿಯು ನಮ್ಮ ಬಳಿ ಈಗಾಗಲೇ ಇದೆ. ಜಾತಿ ಗಣತಿಯ ವೇಳೆ ಸಾಮಾನ್ಯ ವರ್ಗದ ಜನರ ಜಾತಿಯನ್ನು ಮೊದಲು ನಮೂದು ಮಾಡಿಕೊಳ್ಳುವುದು. ಗಣತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಅವುಗಳನ್ನು ವರ್ಗೀಕರಿಸಬಹುದು. ಹೀಗೆಯೇ, ಭಾಷೆ ಹಾಗೂ ಧರ್ಮದ ಕುರಿತು ವಿವರವನ್ನು ಗಣತಿಯ ಬಳಿಕ ವರ್ಗೀಕರಿಸಲಾಗುತ್ತದೆ. ಶೂನ್ಯದಿಂದ ಏನನ್ನೂ ಆರಂಭಿಸಬೇಕಾಗಿಲ್ಲ. 1931ರ ಗಣತಿಯು ನಮ್ಮ ಬಳಿ ಇದೆ. ಜೊತೆಗೆ ಭಾರತೀಯ ಮಾನವಶಾಸ್ತ್ರ ಸರ್ವೇಕ್ಷಣೆ ಪ್ರಕಟಿಸಿರುವ, ಭಾರತೀಯರ ಜಾತಿ ಹಾಗೂ ಆದಿವಾಸಿಗಳ ವಿವರವುಳ್ಳ 90 ಸಂಪುಟದ ಎನ್‌ಸೈಕ್ಲೋಪೀಡಿಯಾ ಕೂಡ ನಮ್ಮ ಬಳಿ ಇದೆ. 

5. ಜಾತಿ ಗಣತಿ ಎಂದರೆ, ದೇಶದ ಪ್ರತಿಯೊಬ್ಬರ ಜಾತಿಯನ್ನು ನಮೂದಿಸುವುದು

ನಿಜ, ಜಾತಿ ಗಣತಿಯಿಂದ ಜನರ ಜಾತಿವಾರು ಮಾಹಿತಿಯು ತಿಳಿಯುತ್ತದೆ. ಇದು ಜಾತಿ ಗಣತಿಯಿಂದ ದೊರೆಯುವ ಪ್ರಾಥಮಿಕ ಮಾಹಿತಿಯಷ್ಟೆ. ಆದರೆ, ಈ ಗಣತಿಯಿಂದ ಪ್ರತೀ ಸಮುದಾಯದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ವಿವರಗಳು ಬಹಿರಂಗಗೊಳ್ಳುತ್ತವೆ. ಇವು ಜಾತಿ ಗಣತಿಯಿಂದ ದೊರೆಯುವ ಗಮನಾರ್ಹ ವಿವರಗಳಾಗಿವೆ. ಜಾತಿವಾರು ಲಿಂಗಾನುಪಾತ, ಶೈಕ್ಷಣಿಕ ಮಟ್ಟ, ಉದ್ಯೋಗ, ಆಸ್ತಿ, ನೀರು ಹಾಗೂ ವಿದ್ಯುತ್‌ ಸಂಪರ್ಕ ಹಾಗೂ ಅಡುಗೆ ಅನಿಲ ಸಿಲಿಂಡರ್‌ ಕುರಿತ ಮಾಹಿತಿ ಜಾತಿ ಗಣತಿಯಿಂದ ತಿಳಿಯುತ್ತದೆ. ಇಂಥದ್ದೇ ಜಾತಿವಾರು ವಿವರಗಳನ್ನು ಆಧಾರವಾಗಿಟ್ಟುಕೊಂಡೇ ಸರ್ಕಾರವು ನೀತಿ ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳುತ್ತದೆ.

6.ಹಿಂದೂಯೇತರ ಸಮುದಾಯದವರನ್ನು ಜಾತಿ ಗಣತಿಯಿಂದ ಹೊರಗಿಡಲಾಗುತ್ತದೆ. ಪ್ರತಿಯೊಬ್ಬರೂ ಒಂದು ಜಾತಿಯನ್ನು ಸೇರಿಕೊಳ್ಳುವಂತೆ ಒತ್ತಾಯಿಸಿದಂತಾಗುತ್ತದೆ

ಈ ವಾದವಂತೂ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಪ್ರತಿಯೊಂದು ಧರ್ಮದಲ್ಲಿಯೂ ಜಾತಿಗಳಿವೆ. ಅದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಸಿಖ್‌ ಹೀಗೆ... ಯಾವುದೇ ಧರ್ಮವಿದ್ದರೂ ಇವುಗಳಲ್ಲಿ ಜಾತಿಗಳಿವೆ. ಬಿಹಾರ ಸರ್ಕಾರ ನಡೆಸಿದ ಜಾತಿ ಗಣತಿಯಲ್ಲಿ ಇಸ್ಲಾಂ ಧರ್ಮದಲ್ಲಿನ ಹಲವಾರು ಜಾತಿಗಳನ್ನು ನಮೂದಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ನಡೆದ ಗಣತಿಯಲ್ಲಿಯೂ ಈ ವಿವರಗಳು ಇವೆ. ಗಣತಿಯ ವೇಳೆ ಜಾತಿಯ ಕುರಿತ ಮಾಹಿತಿಯನ್ನು ಕೇಳಲಾಗುತ್ತದೆ. ಆ ಮೂಲಕ ಎಲ್ಲ ಧರ್ಮಗಳಲ್ಲಿ ಇರುವ ಎಲ್ಲ ಜಾತಿಗಳ ವಿವರಗಳೂ ದಾಖಲಾಗುವಂತಾಗುತ್ತವೆ. ಗಣತಿಯ ವೇಳೆ ಧರ್ಮದ ಕುರಿತು ಪ್ರಶ್ನೆ ಕೇಳಿದಾಗ, ‘ನನಗೆ ಧರ್ಮವಿಲ್ಲ’ ಎಂದು ಹೇಳಲು ಹೇಗೆ ಸಾಧ್ಯವಿಲ್ಲವೋ, ಜಾತಿಯ ಕುರಿತ ಪ್ರಶ್ನೆಗೂ ‘ನನಗೆ ಜಾತಿಯಿಲ್ಲ’ ಎಂದು ಹೇಳಲು ಸಾಧ್ಯವಿಲ್ಲ.

7.ಈಗಿರುವ ಮೀಸಲಾತಿಯನ್ನು ಹೆಚ್ಚಿಸುವ ಸಲುವಾಗಿ ಜಾತಿ ಗಣತಿ ಬೇಕು ಎನ್ನಲಾಗುತ್ತಿದೆ

ನಿಜ, ಜಾತಿ ಗಣತಿ ಬೇಡ ಎನ್ನುವವರ ಮನಸ್ಸಿನಲ್ಲಿ ಇದೇ ವಿಚಾರವೇ ಇದೆ. ಈ ಅಭಿಪ್ರಾಯ ಇಟ್ಟುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಈ ಅಭಿಪ್ರಾಯಕ್ಕೆ ಬರುವಾಗ, ಹಲವು ವಿಷಯಗಳನ್ನು ವಿಚಾರ ಮಾಡಬೇಕಾಗುತ್ತದೆ. ಒಂದು ವೇಳೆ, ಒಂದು ನಿರ್ದಿಷ್ಟ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ದೇಶದ ಸಂಪನ್ಮೂಲ ಮತ್ತು ಅವಕಾಶವು ಆ ಜಾತಿಯವರಿಗೆ ಸಿಗುತ್ತಿಲ್ಲ ಎಂದು ಜಾತಿ ಗಣತಿಯಿಂದ ತಿಳಿದುಬಂದರೆ ಜನರ ಮೀಸಲಾತಿ ಏರಿಕೆ ವಿರೋಧಿ ಆಲೋಚನೆಯನ್ನು ತಪ್ಪು ಎಂದು
ಹೇಳಬೇಕಾಗುತ್ತದೆ.

ಮೀಸಲಾತಿ ಏರಿಕೆಗಾಗಿ ಮಾತ್ರವೇ ಜಾತಿ ಗಣತಿ ಬೇಕಾಗಿರುವುದಲ್ಲ. ಇನ್ನೂ ಹಲವು ಕಾರಣಗಳಿವೆ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಒಬಿಸಿ ಮೀಸಲಾತಿಯಲ್ಲಿ ಒಳಮೀಸಲಾತಿ ನೀಡಬೇಕೇ? ಒಬಿಸಿ ಮೀಸಲಾತಿಯ ಪ್ರಯೋಜನ ‍ಪಡೆದುಕೊಳ್ಳುತ್ತಿರುವ ಕೆಲವು ಜಾತಿಗಳನ್ನು ಒಬಿಸಿ ಮೀಸಲಾತಿ ವ್ಯಾಪ್ತಿಯಿಂದ ಹೊರಗಿಡಬೇಕೇ? ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದಲ್ಲಿ ‘ಕೆನೆಪದರ’ವನ್ನು ರೂಪಿಸಬೇಕೇ? ಒಬಿಸಿಗಳಿಗೆ ಕೆನೆಪದರವನ್ನು ಹೇಗೆ ರೂಪಿಸಬೇಕು? ಪ್ರಬಲ ಜಾತಿಯಲ್ಲಿ ಬಡತನವು ಯಾವ ಮಟ್ಟದಲ್ಲಿದೆ? ಸಾಮಾಜಿಕ ಅಸಮಾನತೆಗಳನ್ನು ಜಾತಿಯ ಮೂಲಕ ಅರ್ಥ ಮಾಡಿಕೊಳ್ಳುವುದು ತೀರಾ ಸವಕಲು ಪ್ರಕ್ರಿಯೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎನ್ನುವುದಾದರೆ ಮೀಸಲಾತಿ ಪರ ಇರುವವರು ಅಥವಾ ಮೀಸಲಾತಿಯ ವಿರೋಧವಿರುವವರು ಎಲ್ಲರೂ ಜಾತಿ ಗಣತಿ ನಡೆಯಬೇಕು ಎಂದು ಆಗ್ರಹಿಸಬೇಕು.

8.ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಒಬಿಸಿ ಸಮುದಾಯಗಳಿಗೆ ಮಾತ್ರವೇ ಜಾತಿ ಗಣತಿ ಬೇಕಾಗಿದೆ ವಿನಾ ಸಾಮಾನ್ಯ ವರ್ಗದವರಿಗಲ್ಲ

ನಿಜ, ದೇಶದ ಸಂಪನ್ಮೂಲಗಳು, ಆಸ್ತಿ ಹಾಗೂ ಅವಕಾಶಗಳಲ್ಲಿ ಯಾರಿಗೆ ಪಾಲು ದೊರೆತಿಲ್ಲ, ಯಾರಿಗೆ ಅನ್ಯಾಯವಾಗಿದೆ ಎಂದು ತಿಳಿಯಲು ಜಾತಿ ಗಣತಿ ಮುಖ್ಯವಾಗುತ್ತದೆ. ಆದರೆ, ‘ಸಾಮಾನ್ಯ’ರಿಗೆ ದೊರೆಯುತ್ತಿರುವ ಸೌಲಭ್ಯಗಳನ್ನು ದಾಖಲಿಸದೇ, ಈ ರೀತಿಯ ಸಮೀಕ್ಷೆ ನಡೆಸದೆಯೇ ವ್ಯವಸ್ಥೆಯಲ್ಲಿನ ಅನನುಕೂಲಗಳನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಹಿಂದೂ ಧರ್ಮದ ಪ್ರಬಲ ಜಾತಿಯವರಿಗೆ ದೊರೆಯುತ್ತಿರುವ ಸೌಲಭ್ಯಗಳನ್ನು ಬಹಿರಂಗ ಮಾಡದೆಯೇ, ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯ ಎನ್ನುವುದು ಸಾಂವಿಧಾನಿಕ ಹಕ್ಕು.

9. ಜಾತಿ ಗಣತಿಯು ಜಾತಿ ರಾಜಕಾರಣಕ್ಕೆ ರಹದಾರಿ ಒದಗಿಸುತ್ತದೆ ಮತ್ತು ಜಾತಿಗಳ ನಡುವಿನ ಕಲಹಕ್ಕೆ ಕಾರಣವಾಗುತ್ತದೆ

ನಿಜ, ಜಾತಿ ಗಣತಿಯಿಂದಾಗಿ ಸಮಾಜದಲ್ಲಿ ಜಾತಿ ರಾಜಕಾರಣ ಹಾಗೂ ಕಲಹ ಎರಡೂ ಗಟ್ಟಿಗೊಳ್ಳುತ್ತವೆ. ಆದರೆ, ಒಂದನ್ನು ಮರೆಯಬಾರದು. ದೇಶದ ಜನಸಂಖ್ಯೆಯ ನಾಲ್ಕನೇ ಮೂರರಷ್ಟು ಭಾಗದ ಜನರ ಜಾತಿ ವಿವರವು ಒಂದಲ್ಲ ಒಂದು ರೂಪದಲ್ಲಿ ಈಗಾಗಲೇ ದಾಖಲಾಗಿದೆ. ಇನ್ನುಳಿದ ನಾಲ್ಕನೇ ಒಂದು ಭಾಗದಷ್ಟು ಜನರು ಹೇಗೂ ವಧು–ವರರ ಜಾಹೀರಾತು ಹಾಕುತ್ತಾರಲ್ಲ. ಆ ಮೂಲಕ ಜಾತಿ ವಿವರ ತಿಳಿದುಬಿಡುತ್ತದೆ. ಯಾರು ಯಾವ ಜಾತಿ ಎನ್ನುವ ಕುರಿತು ಸ್ಥಳೀಯ ರಾಜಕಾರಣಿಗಳಿಗೆ ಗೊತ್ತಿಲ್ಲದಿರುವ, ಅವರು ಬಳಸಿಕೊಳ್ಳದಿರುವ ಯಾವ ಮಾಹಿತಿಯನ್ನೂ ಜಾತಿ ಗಣತಿಯು ಬಹಿರಂಗ ಪಡಿಸುವುದಿಲ್ಲ. ಗಣತಿ ವೇಳೆ ಧರ್ಮ ಹಾಗೂ ಭಾಷೆಯ ಕುರಿತು ಪ್ರಶ್ನೆ ಕೇಳಿದಾಗ ಸಾಮಾಜಿಕ ಕಲಹ ಏರ್ಪಡುವುದಿಲ್ಲ ಎಂದಾದ ಮೇಲೆ, ಜಾತಿ ಕುರಿತು ಪ್ರಶ್ನೆ ಕೇಳಿದರೆ ಕಲಹ ಉಂಟಾಗುತ್ತದೆ ಎಂದು ನಾವು ಕಲ್ಪಿಸಿಕೊಳ್ಳಬಾರದು.

10. 10 ವರ್ಷಕ್ಕೊಮ್ಮೆ ನಡೆಯುವ ಗಣತಿಯ ವೇಳೆಯೇ ‘ಜಾತಿ’ ಕಾಲಂ ಅನ್ನು ಸೇರಿಸಬಹುದು

ನಿಜ, ಜಾತಿ ಗಣತಿಯ ಕುರಿತು ಸಾಮಾನ್ಯವಾಗಿ ಎಲ್ಲರಿಗೂ ಇರುವ ಸೀಮಿತ ತಿಳಿವಳಿಕೆಯಿದು. ಯಾರು ಎಷ್ಟು ಆಸ್ತಿ ಹೊಂದಿದ್ದಾರೆ, ಯಾರಿಗೆ ಎಷ್ಟು ಸೌಲಭ್ಯ ದೊರೆಯುತ್ತಿದೆ, ಸಂ‍ಪನ್ಮೂಲಗಳ ಹಂಚಿಕೆ ಯಾವ ರೀತಿಯಲ್ಲಿ ನಡೆಯುತ್ತಿದೆ, ಅವಕಾಶಗಳು ಸಮಾನವಾಗಿದೆಯೇ, ಯಾವ ಜಾತಿಯವರ ಪ್ರಾತಿನಿಧ್ಯ ಎಷ್ಟು ಎಂಬ ಜಾತಿವಾರು ವಿವರಗಳು ಇರುವ ಒಂದು ಸಮಗ್ರ ಭಂಡಾರದ ಅಗತ್ಯ ಇದೆ.

ಗಣತಿ ಸ್ವರೂಪವನ್ನೇ ಹೋಲುವ ಹಲವು ಸಮೀಕ್ಷೆಗಳು ಜಾತಿಯ ಕುರಿತು ಮಾಹಿತಿಗಳನ್ನು ಕಲೆ ಹಾಕುತ್ತವೆ. ಆದರೆ ಅವು ಸೀಮಿತವಾದ ಅಥವಾ ಸ್ಥೂಲ ವ್ಯಾಪ್ತಿಯನ್ನಷ್ಟೇ ಹೊಂದಿವೆ. ಉದಾಹರಣೆಗೆ: ಆರ್ಥಿಕ ಗಣತಿ, ಕೃಷಿ ಗಣತಿ, ಉನ್ನತ ಶಿಕ್ಷಣದಲ್ಲಿ ಪ್ರಾತಿನಿಧ್ಯವನ್ನು ವಿವರಿಸುವ ಅಖಿಲ ಭಾರತ ಸಮೀಕ್ಷೆ, ಮನೆ ಬಳಕೆ ಮತ್ತು ವೆಚ್ಚ ಸಮೀಕ್ಷೆ, ಎನ್‌ಎಸ್‌ಎಸ್‌ಒ ಸಂಸ್ಥೆಯು ಕಾಲ ಕಾಲಕ್ಕೆ ನಡೆಸುವ ಕಾರ್ಮಿಕ ವರ್ಗದ ಕುರಿತ ಸಮೀಕ್ಷೆ ಹಾಗೂ ನೋಂದಾಯಿತ ಕಂಪನಿಗಳಲ್ಲಿ ಇರುವ ನಿರ್ದೇಶಕರ ಪಟ್ಟಿ, ಇದರೊಂದಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವ ನೌಕರರ ಪಟ್ಟಿ... ಹೀಗೆ ಹಲವು ಗಣತಿ ಹಾಗೂ ಸಮೀಕ್ಷೆಗಳಲ್ಲಿ ಜಾತಿ ಕುರಿತು ಮಾಹಿತಿಗಳನ್ನು ಕೇಳಲಾಗುತ್ತದೆ. 

ಲೇಖಕ: ಸ್ವರಾಜ್‌ ಇಂಡಿಯಾ ಸದಸ್ಯ

ಕನ್ನಡ ಅನುವಾದ: ಸುಕೃತ ಎಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.