ADVERTISEMENT

ಕಾರ್ಪೊರೇಟ್‌ ತೆರಿಗೆ ಕಡಿತ: ಎರಡೇ ವರ್ಷದಲ್ಲಿ ಸರ್ಕಾರಕ್ಕೆ ₹2.28ಲಕ್ಷ ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 0:30 IST
Last Updated 5 ಜನವರಿ 2024, 0:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕಾರ್ಪೊರೇಟ್‌ ಕಂಪನಿಗಳ ಗಳಿಕೆಯ ಮೇಲಿನ ತೆರಿಗೆ ಪ್ರಮಾಣವನ್ನು 2019–20ನೇ ಸಾಲಿನಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರವು ಕಡಿತ ಮಾಡಿತ್ತು. ತೆರಿಗೆ ಕಡಿತ ಮಾಡಿದ ನಂತರದ ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರಕ್ಕೆ ₹2 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಆದಾಯ ನಷ್ಟವಾಗಿದೆ. ಕಾರ್ಪೊರೇಟ್‌ ಕಂಪನಿಗಳಿಗೆ ತೆರಿಗೆ ಕಡಿತ ಮಾಡಿದ್ದರಿಂದ ಆದ ಲಾಭವೇನು ಎಂಬುದಕ್ಕೆ ಕೇಂದ್ರ ಸರ್ಕಾರದ ಬಳಿ ಉತ್ತರವಿಲ್ಲ. ತೆರಿಗೆ ಇಳಿಕೆ ಮಾಡಿದ್ದರಿಂದ ಆದ ಲಾಭದ ಬಗ್ಗೆ ತಾನು ಅಧ್ಯಯನ ನಡೆಸಿಲ್ಲ ಎನ್ನುತ್ತಿದೆ ಕೇಂದ್ರ ಹಣಕಾಸು ಸಚಿವಾಲಯ. ತೆರಿಗೆ ಕಡಿತ ಮಾಡಿದ್ದರಿಂದ ಹೂಡಿಕೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯೂ ಆಗಿಲ್ಲ

–––––

ADVERTISEMENT

ಕಾರ್ಪೊರೇಟ್‌ ವಲಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು 2019–20ನೇ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ಕಾರ್ಪೊರೇಟ್ ತೆರಿಗೆಯನ್ನು ಶೇ 25ರಿಂದ ಶೇ 22ಕ್ಕೆ ಮತ್ತು ಶೇ 22ರಿಂದ ಶೇ 15ಕ್ಕೆ ಇಳಿಕೆ ಮಾಡಿತ್ತು. ತೆರಿಗೆ ಕಡಿತ ಮಾಡುವುದರಿಂದ ಕಂಪನಿಗಳಿಗೆ ಉಳಿತಾಯವಾಗುತ್ತವೆ. ಅವನ್ನು ಹೂಡಿಕೆ ಮಾಡಲು ಕಂಪನಿಗಳು ಬಳಸಿಕೊಳ್ಳುತ್ತವೆ. ಇದರಿಂದ ದೇಶದಲ್ಲಿ ಕಾರ್ಪೊರೇಟ್‌ ವಲಯದಲ್ಲಿ ಹೂಡಿಕೆ ಹೆಚ್ಚಾಗುತ್ತದೆ ಎಂದು ಕೇಂದ್ರ ಸರ್ಕಾರವು ಹೇಳಿತ್ತು. ತೆರಿಗೆ ಕಡಿತ ಮಾಡಿದಾಗ ಅದಕ್ಕೆ ವಿರೋಧ ಪಕ್ಷಗಳಿಂದ ಭಾರಿ ಆಕ್ಷೇಪ ವ್ಯಕ್ತವಾಗಿತ್ತು. ಇದರಿಂದ ಸರ್ಕಾರಕ್ಕೆ ತೆರಿಗೆ ನಷ್ಟವಾಗುತ್ತದೆ. ಅದನ್ನು ಭರಿಸಿಕೊಳ್ಳಲು ಬೇರೆ ತೆರಿಗೆಗಳನ್ನು ಹೆಚ್ಚಿಸಬೇಕಾಗುತ್ತದೆ. ಅದರಿಂದ ಸಾಮಾನ್ಯ ಜನರಿಗೆ ಹೊರೆಯಾಗುತ್ತದೆ ಎಂಬುದು ವಿರೋಧ ಪಕ್ಷಗಳ ಕಳವಳವಾಗಿತ್ತು. ಸರ್ಕಾರದ ಲೆಕ್ಕಪತ್ರಗಳು ಇದನ್ನೇ ಪುಷ್ಟೀಕರಿಸುತ್ತವೆ. ಕಾರ್ಪೊರೇಟ್‌ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡಿದ್ದರಿಂದ 2019–20 ಮತ್ತು 2020–21ರಲ್ಲಿ ಕೇಂದ್ರ ಸರ್ಕಾರಕ್ಕೆ ಒಟ್ಟು ₹2.28 ಲಕ್ಷ ಕೋಟಿ ನಷ್ಟವಾಗಿದೆ.

ನಂತರದ ಆರ್ಥಿಕ ವರ್ಷಗಳಲ್ಲಿ ಎಷ್ಟು ಆದಾಯ ನಷ್ಟವಾಗಿದೆ ಎಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ, ‘ಆ ಬಗ್ಗೆ ಇನ್ನೂ ಲೆಕ್ಕಾಚಾರ ಮಾಡಿಲ್ಲ’ ಎಂದು ಹಣಕಾಸು ಸಚಿವಾಲಯ ಉತ್ತರಿಸಿದೆ. ಈ ಅವಧಿಯಲ್ಲಿ ಕಾರ್ಪೊರೇಟ್‌ ವಲಯದಿಂದ ಹೂಡಿಕೆ ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಆದರೆ ಸಚಿವಾಲಯವೇ ನೀಡುವ ದತ್ತಾಂಶಗಳು ಅದರ ಹೇಳಿಕೆಯನ್ನು ಸಮರ್ಥಿಸುವುದಿಲ್ಲ. ಬದಲಿಗೆ ಕಾರ್ಪೊರೇಟ್‌ ವಲಯದಿಂದ ಪ್ರತಿ ವರ್ಷ ಆಗುತ್ತಿದ್ದ ಹೂಡಿಕೆ ಪ್ರಮಾಣದಲ್ಲಿನ ಏರಿಕೆ ಈಚಿನ ವರ್ಷಗಳಲ್ಲಿ ಇಳಿಕೆಯಾಗಿದೆ. 

2017–18ನೇ ಸಾಲಿನಲ್ಲಿ ಕಾರ್ಪೊರೇಟ್‌ ವಲಯವು ₹17.18 ಲಕ್ಷ ಕೋಟಿಯಷ್ಟು ಹೂಡಿಕೆ ಮಾಡಿತ್ತು. 2018–19ರಲ್ಲಿ ಇದು ₹19.01 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಇದು ಶೇ 10.64ರಷ್ಟು ಏರಿಕೆ. ಕಾರ್ಪೊರೇಟ್‌ ತೆರಿಗೆ ಕಡಿತ ಮಾಡಿದ ವರ್ಷದಲ್ಲಿ ಹೂಡಿಕೆ ಪ್ರಮಾಣದ ಏರಿಕೆಯು ಶೇ 11.5ರಷ್ಟು ದಾಖಲಾಗಿತ್ತು. ಆನಂತರ ಅದು ಇಳಿಕೆಯತ್ತಲೇ ಸಾಗಿದೆ. 2020–21ರಲ್ಲಿ ಹೂಡಿಕೆ ಪ್ರಮಾಣವು ಶೇ 9.49ರಷ್ಟು ಇಳಿಕೆಯಾಗಿತ್ತು. ಅದು ಕೋವಿಡ್‌ ಇದ್ದ ವರ್ಷವಾದ ಕಾರಣ ಬೆಳವಣಿಗೆಯನ್ನು ಹಿಂದಿನ ಅಥವಾ ಮುಂದಿನ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ, ನೈಜವಾದ ಬೆಳವಣಿಗೆಯ ಚಿತ್ರಣ ದೊರೆಯುವುದಿಲ್ಲ. ಆದರೆ 2019–20ನೇ ಸಾಲು ಮತ್ತು 2021–22ನೇ ಸಾಲಿನ ಹೂಡಿಕೆಯನ್ನು ಗಮನಿಸಿದರೆ, ಏರಿಕೆ ಪ್ರಮಾಣ ಶೇ 9.26ರಷ್ಟು ಮಾತ್ರ. ಇದು ತೆರಿಗೆ ಕಡಿತ ಮಾಡುವುದಕ್ಕೂ ಮೊದಲು ಇದ್ದ ಹೂಡಿಕೆ ಬೆಳವಣಿಗೆ ದರಕ್ಕಿಂತ (ಶೇ 10.64) ಕಡಿಮೆ. ತೆರಿಗೆ ಕಡಿತದ ವಿನಾಯಿತಿ ನಿರೀಕ್ಷಿತ ಪ್ರಮಾಣದ ಲಾಭವನ್ನು ನೀಡಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

2022–23 ಮತ್ತು 2023–24ನೇ ಸಾಲಿನಲ್ಲಿ (ಈವರೆಗೆ) ಆಗಿರುವ ಹೂಡಿಕೆ ಎಷ್ಟು ಎಂಬುದನ್ನು ಸರ್ಕಾರ ಇನ್ನೂ ಲೆಕ್ಕಾಚಾರ ಮಾಡಿಲ್ಲ. ಹೀಗಾಗಿ ಕಾರ್ಪೊರೇಟ್‌ ತೆರಿಗೆ ಕಡಿತ ಮಾಡಿದ್ದರಿಂದ ದೇಶದ ಆರ್ಥಿಕತೆಗೆ ಈವರೆಗೆ ಆದ ಲಾಭವೇನು ಎಂಬುದನ್ನು ಜನರ ಮುಂದೆ ಇಡಲು ಸರ್ಕಾರದ ಬಳಿ ಉತ್ತರವಿಲ್ಲ.

ಸೃಷ್ಟಿಯಾದ ಉದ್ಯೋಗಗಳು ಸರ್ಕಾರಕ್ಕಿಲ್ಲ ಮಾಹಿತಿ

ಕಾರ್ಪೊರೇಟ್‌ ತೆರಿಗೆ ಕಡಿತ ಮಾಡುವುದರಿಂದ ಉದ್ಯೋಗಾವಕಾಶ ಏರಿಕೆಯಾಗುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿತ್ತು. ಸರ್ಕಾರದ ಈ ಕ್ರಮದಿಂದ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಕೇಳಲಾದ ಪ್ರಶ್ನೆಗೂ ಸರ್ಕಾರದ ಬಳಿ ಉತ್ತರವಿಲ್ಲ.

‘ಈ ಬಗ್ಗೆ ಹಣಕಾಸು ಸಚಿವಾಲಯವು ಯಾವುದೇ ದತ್ತಾಂಶಗಳನ್ನು ನಿರ್ವಹಿಸಿಲ್ಲ’ ಎಂದಷ್ಟೇ ಉತ್ತರಿಸಿದೆ.

ಎರಡು ವರ್ಷದಲ್ಲಿ ₹2.28 ಲಕ್ಷ ಕೋಟಿಯಷ್ಟು ತೆರಿಗೆ ಆದಾಯ ನಷ್ಟವಾಗುವಂತಹ ಕ್ರಮ ತೆಗೆದುಕೊಂಡ ನಂತರವೂ ಸರ್ಕಾರವು, ಅದರ ಲಾಭ ಏನು ಎಂಬುದನ್ನು ಪರಿಶೀಲಿಸುವ ಗೋಜಿಗೆ ಹೋಗಿಲ್ಲ. ಇದು ಸರ್ಕಾರದ ಹೊಣೆಗೇಡಿತನಕ್ಕೆ ಹಿಡಿದ ಕನ್ನಡಿ ಎಂದು ಈ ಬಗ್ಗೆ ಪ್ರಶ್ನೆ ಕೇಳಿದ್ದ ಸಿಪಿಎಂ ಸಂಸದ ವಿ.ಶಿವದಾಸನ್‌ ಹೇಳಿದ್ದರು.

ಆಧಾರ: ರಾಜ್ಯಸಭೆಗೆ ಕೇಂದ್ರ ಹಣಕಾಸು ಸಚಿವಾಲಯವು ನೀಡಿದ ಲಿಖಿತ ಉತ್ತರಗಳು, ಕೇಂದ್ರ ಬಜೆಟ್‌, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.