ಚುನಾವಣಾ ಬಾಂಡ್ ಯೋಜನೆ ಅಡಿ ರಾಜಕೀಯ ಪಕ್ಷಗಳಿಗೆ ಎರಡನೇ ಅತಿಹೆಚ್ಚು ದೇಣಿಗೆ ನೀಡಿದ ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್), ನಿರ್ಮಾಣ ಕ್ಷೇತ್ರದಲ್ಲಿ ದೇಶದ ಎರಡನೇ ಅತ್ಯಂತ ದೊಡ್ಡ ಕಂಪನಿಯೂ ಹೌದು. ಹೈದರಾಬಾದ್‌ನ ಈ ಕಂಪನಿ ಆರಂಭವಾಗಿದ್ದು 1989ರಲ್ಲಿ. ಈಗ ನಿರ್ಮಾಣ, ಬಂದರು, ವಿದ್ಯುತ್ ಪ್ರಸರಣ, ನವೀಕರಿಸಬಹುದಾದ ವಿದ್ಯುತ್, ವಿದ್ಯುತ್ ಚಾಲಿತ ವಾಹನ, ಮಾಧ್ಯಮ ಕ್ಷೇತ್ರಗಳ ಒಟ್ಟು 86 ಕಂಪನಿಗಳನ್ನು ಎಂಇಐಎಲ್ ಹೊಂದಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರ ಈ ಕಂಪನಿಯ ಪ್ರಗತಿ ಹಲವು ಪಟ್ಟು ಏರಿಕೆಯಾಗಿದೆ. ಚುನಾವಣಾ ಬಾಂಡ್ ಮೂಲಕ ಈ ಕಂಪನಿ ಮತ್ತು ಅದರ ಅಧೀನ ಕಂಪನಿಗಳು ಒಟ್ಟು ₹1,200 ಕೋಟಿಯಷ್ಟು ದೇಣಿಗೆಯನ್ನು ರಾಜಕೀಯ ಪಕ್ಷಗಳಿಗೆ ನೀಡಿವೆ. ಈ ದೇಣಿಗೆ ಯಾವೆಲ್ಲಾ ಪಕ್ಷಗಳಿಗೆ ಹೋಗಿದೆ ಎಂಬುದು ಇನ್ನಷ್ಟೇ ಪತ್ತೆಯಾಗಬೇಕಿದೆ.
2014–2023ರ ನಡುವೆ ಈ ಕಂಪನಿಯು ದೇಶದ ಎಲ್ಲಾ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಭಾಗಿಯಾಗಿದೆ. ಭಾರತಮಾಲಾ ಯೋಜನೆ, ಛಾರ್ ಧಾಮ್ ರೈಲು ಯೋಜನೆ, ಬುಲೆಟ್ ರೈಲು ಯೋಜನೆ, ಸಮೃದ್ಧಿ ಎಕ್ಸ್‌ಪ್ರೆಸ್ ವೇ ಯೋಜನೆ, ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಯೋಜನೆ, ಸೂರತ್–ಚೆನ್ನೈ ಆರ್ಥಿಕ ಕಾರಿಡಾರ್ ಯೋಜನೆ, ಬೆಂಗಳೂರು–ವಿಜಯವಾಡ ಎಕ್ಸ್‌ಪ್ರೆಸ್‌ವೇ ಯೋಜನೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಬಂಧಿಸಿದ ಬಹುತೇಕ ಎಲ್ಲಾ ಯೋಜನೆಗಳಲ್ಲೂ ಈ ಕಂಪನಿ ಗುತ್ತಿಗೆ ಪಡೆದುಕೊಂಡಿದೆ.
ಹೆದ್ದಾರಿಗಳು ಮಾತ್ರವಲ್ಲ ನೀರಾವರಿ ಯೋಜನೆ, ಏತ ನೀರಾವರಿ ಯೋಜನೆ, ಬುಲೆಟ್ ರೈಲು ನಿಲ್ದಾಣ ಯೋಜನೆ, ಕೈಗಾರಿಕಾ ತ್ಯಾಜ್ಯ ಸಾಗಣೆ ಕೊಳವೆಮಾರ್ಗ ಯೋಜನೆ, ಸುರಂಗ ಮಾರ್ಗಗಳಂತಹ ಯೋಜನೆಗಳನ್ನೂ ಈ ಕಂಪನಿ ನಿರ್ವಹಿಸುತ್ತಿದೆ. ಬಹುತೇಕ ಈ ಎಲ್ಲಾ ಯೋಜನೆಗಳ ಗುತ್ತಿಗೆ ಈ ಕಂಪನಿಗೆ ದೊರೆತಿರುವುದು 2015–16ರ ನಂತರ. 2018–19ರ ನಂತರ ಕಂಪನಿಗೆ ದೊರೆತ ಯೋಜನೆಗಳ ಸಂಖ್ಯೆ ಏರಿಕೆಯಾಗಿದೆ. ಕ್ರಿಸಿಲ್ ವರದಿಯ ಪ್ರಕಾರ 2023ರ ಸೆಪ್ಟೆಂಬರ್ ವೇಳೆಗೆ ಎಂಇಐಎಲ್ ಬಳಿ ಒಟ್ಟು ₹1.87 ಲಕ್ಷ ಕೋಟಿ ಮೊತ್ತದಷ್ಟು ಯೋಜನೆಗಳು ಇದ್ದವು. 2022ರಲ್ಲಿ ಕಂಪನಿಗೆ ದೊರೆತ ಒಟ್ಟು ಯೋಜನೆಗಳಲ್ಲಿ ಶೇ 70ರಷ್ಟು ಯೋಜನೆಗಳು ಕೇಂದ್ರ ಸರ್ಕಾರದ್ದೇ ಆಗಿದ್ದವು. 2023 ಮತ್ತು 2024ರಲ್ಲಿ ಕಂಪನಿಗೆ ದೊರೆತ ಯೋಜನೆಗಳ ಸಂಖ್ಯೆ ಮತ್ತು ಯೋಜನೆಗಳ ಮೊತ್ತ ಇನ್ನಷ್ಟು ಏರಿಕೆಯಾಗಿದೆ.
₹1.53 ಲಕ್ಷ ಕೋಟಿ
2014ರಿಂದ 2023ರ ಅಂತ್ಯದವರೆಗೆ ಎಂಇಐಎಲ್ ಮತ್ತು ಅದರ ಅಧೀನ ಕಂಪನಿಗಳಿಗೆ ಗುತ್ತಿಗೆ ದೊರೆತ ಮೂಲಸೌಕರ್ಯ ನಿರ್ಮಾಣ ಯೋಜನೆಗಳ ಒಟ್ಟು ಮೊತ್ತ (ಇದರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜನೆಗಳು, ವಿದೇಶದಲ್ಲಿ ಭಾರತ ಸರ್ಕಾರದ ಯೋಜನೆಗಳ ಮೊತ್ತವೂ ಸೇರಿದೆ. ಕೆಪಿಎಸ್1 ವಿದ್ಯುತ್ ಪ್ರಸರಣ ಯೋಜನೆಯ ನಿರ್ಮಾಣ ಗುತ್ತಿಗೆಯ ವರ್ಗಾವಣೆ ಮತ್ತು ಛಾರ್ ಧಾಮ್ ರೈಲು ಸುರಂಗ ಯೋಜನೆಯ ವಿವರ ಇದರಲ್ಲಿ ಸೇರಿಲ್ಲ)
₹1,232 ಕೋಟಿ
ಎಂಇಐಎಲ್ ಮತ್ತು ಅದರ ಅಧೀನ ಸಂಸ್ಥೆಗಳು ಚುನಾವಣಾ ಬಾಂಡ್ ಮೂಲಕ ನೀಡಿದ ಒಟ್ಟು ದೇಣಿಗೆ ಮೊತ್ತ
ಮಂಗೋಲಿಯಾ: ₹5,400 ಕೋಟಿ ಯೋಜನೆ
ಮಂಗೋಲಿಯಾ ತೈಲ ಸಂಸ್ಕರಣ ಘಟಕ ಯೋಜನೆಯ ನಿರ್ಮಾಣ ಗುತ್ತಿಗೆಯನ್ನು ಎಂಇಐಎಲ್ ಪಡೆದುಕೊಂಡಿದೆ. ಇದು ಭಾರತ ಸರ್ಕಾರ ಮತ್ತು ಮಂಗೋಲಿಯಾ ಸರ್ಕಾರದ ನಡುವಣ ಯೋಜನೆಯಾಗಿದ್ದು, ಎಂಇಐಎಲ್‌ಗೆ ಈ ಯೋಜನೆಯ ಗುತ್ತಿಗೆ ದೊರೆತಿದೆ.
₹966 ಕೋಟಿ
ಎಂಇಐಎಲ್ ಒಂದೇ ನೀಡಿದ ದೇಣಿಗೆಯ ಮೊತ್ತ
₹220 ಕೋಟಿ
ಎಂಇಐಎಲ್ ಒಡೆತನದ ಪಶ್ಚಿಮ ಉತ್ತರಪ್ರದೇಶ ವಿದ್ಯುತ್ ಪ್ರಸರಣ ಕಂಪನಿ ಲಿಮಿಟೆಡ್ ನೀಡಿದ ದೇಣಿಗೆಯ ಮೊತ್ತ
₹40 ಕೋಟಿ
ಎಂಇಐಎಲ್ ಒಡೆತನದ ಪಶ್ಚಿಮ ಉತ್ತರಪ್ರದೇಶ ವಿದ್ಯುತ್ ಪ್ರಸರಣ ಕಂಪನಿ ಲಿಮಿಟೆಡ್ ನೀಡಿದ ದೇಣಿಗೆಯ ಮೊತ್ತ
₹6 ಕೋಟಿ
ಎಂಇಐಎಲ್ ಒಡೆತನದ ಇಟಿಪಿಎಲ್ ನೀಡಿದ ದೇಣಿಗೆಯ ಮೊತ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.