ADVERTISEMENT

ಆಳ-ಅಗಲ | ಜಗದಗಲ ಭಾರತೀಯರ ಬಲ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2022, 21:00 IST
Last Updated 24 ಅಕ್ಟೋಬರ್ 2022, 21:00 IST
ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್   

ಭಾರತ ಮೂಲದ ರಿಷಿ ಸುನಕ್‌ ಅವರು ಬ್ರಿಟನ್‌ನ ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ. ಭಾರತವನ್ನು ವಸಾಹತನ್ನಾಗಿ ಮಾಡಿಕೊಂಡಿದ್ದ ದೇಶದ ಮುಖ್ಯಸ್ಥರಾಗಿ ಭಾರತ ಮೂಲದವರು ಆಯ್ಕೆ ಆಗಿರುವುದು ದೇಶಕ್ಕೆ ದೊಡ್ಡ ಹೆಗ್ಗಳಿಕೆಯ ವಿಚಾರ. ಬ್ರಿಟನ್‌ನಲ್ಲಿ ಮಾತ್ರವಲ್ಲ, ಜಗತ್ತಿನ ಹಲವು ದೇಶಗಳ ಅಧ್ಯಕ್ಷ, ಪ್ರಧಾನಿ ಹುದ್ದೆಯಲ್ಲಿ ಭಾರತ ಮೂಲದವರು ಇದ್ದಾರೆ. ದೇಶಗಳ ಉಪಮುಖ್ಯಸ್ಥರಾಗಿ, ಸಚಿವರಾಗಿ, ಸಂಸದರಾಗಿಯೂ ಹಲವಾರು ನಾಯಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕುರಿತ ಒಂದು ನೋಟ ಇಲ್ಲಿದೆ:

ಗಯಾನಾ: ಇರ್ಫಾನ್‌ ಅಲಿ, ಭರತ್‌ ಜಗದೇವ್‌

ಗಯಾನಾ ದೇಶದ ಅತ್ಯುನ್ನತವಾದ ಎರಡು ಹುದ್ದೆಗಳಲ್ಲಿ ಭಾರತ ಮೂಲದವರು ಇದ್ದಾರೆ. ಆ ದೇಶದ ಅಧ್ಯಕ್ಷ ಮೊಹಮ್ಮದ್‌ ಇರ್ಫಾನ್‌ ಅಲಿ ಮತ್ತು ಉಪಾಧ್ಯಕ್ಷ ಭಗತ್‌ ಜಗದೇವ್ ಅವರಿಗೆ ಭಾರತದ ಜತೆಗೆ ನಂಟು ಇದೆ. ಇರ್ಫಾನ್‌ ಅಲಿ ಅವರ ಹಿರೀಕರು ಭಾರತದಿಂದ ವಲಸೆ ಹೋಗಿ ಗಯಾನಾದಲ್ಲಿ ನೆಲೆಯಾದವರು. ಇರ್ಫಾನ್‌ ಅವರ ತಾಯಿ ಬೀಬಿ ಶರಿಮಾನ್‌ ಅವರು ಶಿಕ್ಷಕಿ. ‘ಬಾಲಕ ಇರ್ಫಾನ್‌ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ, ದೇಶದ ಅಧ್ಯಕ್ಷನಾಗುವುದು ತನ್ನ ಗುರಿ ಎಂದಿದ್ದ. ನಾವು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ನಿರಂತರ ಪರಿಶ್ರಮದಿಂದ ಅವನು ಅದನ್ನು ಸಾಧಿಸಿಬಿಟ್ಟ’ ಎಂದು ಶರಿಮಾನ್‌ ಅವರು 2020ರ ಆಗಸ್ಟ್‌ ಒಂದರಂದು ಇರ್ಫಾನ್‌ ಅಲಿ ಅವರು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಹೇಳಿದ್ದರು.

ಇರ್ಫಾನ್‌ ಅಲಿ ಅಧ್ಯಕ್ಷರಾಗಿ ಆಯ್ಕೆ ಆದಾಗ ಅವರಿಗೆ 40 ವರ್ಷವಾಗಿತ್ತು. ಅವರು ಗಯಾನಾ ದೇಶದ ಮೊದಲ ಮುಸ್ಲಿಂ ಅಧ್ಯಕ್ಷ ಮತ್ತು ಈ ಹುದ್ದೆಗೆ ಏರಿದ ಎರಡನೇ ಅತಿ ಕಿರಿಯ ವ್ಯಕ್ತಿ.

ADVERTISEMENT

ಭರತ್‌ ಜಗದೇವ್‌ ಅವರು 1999ರಲ್ಲಿ ತಮ್ಮ 35ನೇ ವಯಸ್ಸಿನಲ್ಲಿಯೇ ಗಯಾನಾದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದರು. ನಂತರ, 2001 ಮತ್ತು 2006ರಲ್ಲಿ ಪುನರಾಯ್ಕೆ ಆಗಿದ್ದರು. ಉತ್ತರ ಪ್ರದೇಶದ ಅಮೇಠಿ ಸಮೀಪದ ಒಂದು ಕುಗ್ರಾಮದಲ್ಲಿ ಅವರ ಪೂರ್ವಜರು ನೆಲೆಸಿದ್ದರು. 2003ರಲ್ಲಿ ಜಗದೇವ್ ಅವರು ಈ ಗ್ರಾಮಕ್ಕೆ ಬಂದು, ತಮ್ಮ ಅತ್ತೆ ಮತ್ತು ಇತರ ಸಂಬಂಧಿಕರನ್ನು ಭೇಟಿ ಆಗಿದ್ದರು.

ಐರ್ಲೆಂಡ್: ಲಿಯೊ ವರಾಡಕರ್

ಐರ್ಲೆಂಡ್‌ನ ಉಪ ಪ್ರಧಾನಿಯಾಗಿರುವಲಿಯೊ ವರಾಡಕರ್ ಅವರು ಮಹಾರಾಷ್ಟ್ರ ಮೂಲದವರು.2017ರಲ್ಲಿ ಐರ್ಲೆಂಡ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಅವರು 2020ರಲ್ಲಿ ರಾಜೀನಾಮೆ ನೀಡಿದ್ದರು.ಇದೇ ಡಿಸೆಂಬರ್‌ನಲ್ಲಿ ಐರ್ಲೆಂಡ್ ಪ್ರಧಾನಿಯಾಗಿ ಮತ್ತೆ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಈಗಿನ ಪ್ರಧಾನಿ ಮೈಕೆಲ್ ಮಾರ್ಟಿನ್ ಅವರೊಂದಿಗೆ 2020ರಲ್ಲಿ ನಡೆದಿದ್ದ ಐತಿಹಾಸಿಕ ಮೈತ್ರಿ ಒಪ್ಪಂದದ ಅನ್ವಯ ಎರಡು ವರ್ಷದ ಅವಧಿಗೆ ಮಾರ್ಟಿನ್ ಅವರು ಪ್ರಧಾನಿಯಾಗಿ ಇರಲಿದ್ದಾರೆ. ಡಿಸೆಂಬರ್‌ನಲ್ಲಿ ವರಾಡಕರ್ ಪ್ರಧಾನಿ ಗದ್ದುಗೆ ಅಲಂಕರಿಸಲಿದ್ದಾರೆ.

ಪ್ರಧಾನಿಯಾಗಿದ್ದಾಗ,2019ರ ಡಿಸೆಂಬರ್‌ನಲ್ಲಿ ವರಾಡಕರ್ ಅವರು ಭಾರತಕ್ಕೆ ಬಂದಿದ್ದರು. ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಮಾಲ್ವನ್ ತಹಶೀಲ್‌ಗೆ ಸೇರಿದ ವರಾಡ್‌ ಎಂಬ ತಮ್ಮ ಪೂರ್ವಜರ ಊರಿಗೆ ಒಂದು ದಿನದ ಖಾಸಗಿ ಭೇಟಿ ನೀಡಿದ್ದರು. ವರಾಡಕರ್ ಅವರ ತಂದೆ ಅಶೋಕ್ ವರಾಡಕರ್ ವೃತ್ತಿಯಲ್ಲಿ ವೈದ್ಯರಾಗಿದ್ದು, 1960ರಲ್ಲಿ ಬ್ರಿಟನ್‌ಗೆ ವಲಸೆ ಹೋಗಿದ್ದರು. ಐರಿಷ್ ಮಹಿಳೆಯನ್ನು ಅವರು ವಿವಾಹವಾಗಿದ್ದರು. ವರಾಡಕರ್ ಅವರು ಡಬ್ಲಿನ್‌ನಲ್ಲಿ ಜನಿಸಿದವರು.

ಸುರಿನಾಮ್: ಚಂದ್ರಿಕಾಪ್ರಸಾದ್ ಸಂತೋಖಿ

ದಕ್ಷಿಣ ಅಮೆರಿಕದ ಸುರಿನಾಮ್ ದೇಶದ ಅಧ್ಯಕ್ಷರಾಗಿ ಭಾರತ ಮೂಲದ ಚಂದ್ರಿಕಾಪ್ರಸಾದ್ ಸಂತೋಖಿ (ಚಾನ್ ಸಂತೋಖಿ) ಅವರು ಆಡಳಿತ ನಡೆಸುತ್ತಿದ್ದಾರೆ. ಪೊಲೀಸ್ ಆಯುಕ್ತರಾಗಿದ್ದ ಸಂತೋಖಿ ಅವರು 2020ರ ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿದ್ದರು. ಈ ಚುನಾವಣೆಯಲ್ಲಿ ಡೇಸಿ ಬೌಟರ್ಸ್ ಅವರ ಸರ್ವಾಧಿಕಾರಿ ಆಡಳಿತವನ್ನು ಕೊನೆಗೊಳಿಸಿದ್ದರು.ಡಚ್ಚರ ವಸಾಹತುವಾಗಿದ್ದ ಈ ಪುಟ್ಟ ದೇಶದಲ್ಲಿ ಶೇ 22ರಷ್ಟು ಹಿಂದೂ ಧರ್ಮೀಯರಿದ್ದಾರೆ.

1959ರಲ್ಲಿ ಸುರಿನಾಮ್‌ನ ಕೆಲಿಡರ್ಪ್‌ನಲ್ಲಿ ಜನಿಸಿದ ಸಂತೋಖಿ ಅವರ ಪೂರ್ವಜರು ಬಿಹಾರದವರು. 19ನೇ ಶತಮಾನದಲ್ಲಿ ಕಾರ್ಮಿಕರಾಗಿ ಸುರಿನಾಮ್‌ಗೆ ವಲಸೆ ಹೋಗಿದ್ದರು.ಸಂತೋಖಿ ಅವರು ಮೆಲ್ಲಿಸಾ ಕವಿತಾದೇವಿ ಎಂಬುವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಇದು ಅವರ ಎರಡನೇ ಮದುವೆ. ಕವಿತಾದೇವಿ ಅವರೂ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ.

ಮಾರಿಷಸ್: ಪ್ರವಿಂದ್ ಜಗನ್ನಾಥ್

2019ರಲ್ಲಿ ಮಾರಿಷಸ್ ಪ್ರಧಾನಿಯಾಗಿ ಪ್ರವಿಂದ್ ಜಗನ್ನಾಥ್ ಅವರು ಆಯ್ಕೆಯಾಗುತ್ತಿದ್ದಂತೆಯೇ, ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ರಸಡಾ ಪಟ್ಟಣದಲ್ಲಿ ಸಂಭ್ರಮ ಗರಿಗೆದರಿತ್ತು. ಜಗನ್ನಾಥ್ ಪೂರ್ವಜರು ಮಾರಿಷಸ್‌ಗೆ ವಲಸೆ ಹೋಗಿದ್ದರು ಎನ್ನಲಾಗಿದೆ. ಆದರೆ ಅವರ ಊರು ಯಾವುದು ಎಂಬುದು ಖಚಿತವಾಗಿ ಗೊತ್ತಿಲ್ಲ. ರಸಡಾದ ಕೆಲವರು ತಾವು ಜಗನ್ನಾಥ್ ಅವರ ವಂಶಸ್ಥರು ಎಂದು ಹೇಳಿಕೊಳ್ಳುತ್ತಾರಾದರೂ ಅದು ಖಚಿತವಿಲ್ಲ. ಮಾರಿಷಸ್‌ನ ಕೆಲವು ಅಧಿಕಾರಿಗಳು ರಸಡಾಕ್ಕೆ ಇತ್ತೀಚೆಗೆ ಭೇಟಿ ನೀಡಿ, ವಂಶಸ್ಥರನ್ನು ಪತ್ತೆಹಚ್ಚಲು ಯತ್ನಿಸಿದ್ದರು. ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಜಗನ್ನಾಥ್ ಅವರ ವಂಶಸ್ಥರು ಒಪ್ಪಂದದ ಕಾರ್ಮಿಕರಾಗಿ ದ್ವೀಪರಾಷ್ಟ್ರಕ್ಕೆ ತೆರಳಿದ್ದರು ಎನ್ನಲಾಗುತ್ತಿದೆ.

ಪ್ರವಿಂದ್ ಅವರ ತಂದೆ ಅನಿರುದ್ಧ ಜಗನ್ನಾಥ್ ಅವರೂ ಮಾರಿಷಸ್‌ನ ಪ್ರಧಾನಿಯಾಗಿ, ಅಧ್ಯಕ್ಷರಾಗಿ ಸುದೀರ್ಘ ಅವಧಿ ಅಧಿಕಾರ ಚಲಾಯಿಸಿದ್ದಾರೆ. 2017ರಲ್ಲಿ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಅವರು, ತಮ್ಮ ಪುತ್ರ ಪ್ರವಿಂದ್‌ ಅವರಿಗೆ ಅಧಿಕಾರ ವಹಿಸಿದ್ದರು. ಅನಿರುದ್ಧ ಅವರ ಅವಧಿಯಲ್ಲಿ ಮಾರಿಷಸ್‌ ಪ್ರಗತಿ ಸಾಧಿಸಿತ್ತು. ಅನಿರುದ್ಧ ಕಳೆದ ವರ್ಷ ನಿಧನರಾದರು.

ಮಾರಿಷಸ್: ಪೃಥ್ವಿರಾಜ ಸಿಂಹ ರೂಪನ್

ಮಾರಿಷಸ್‌ನ ಏಳನೇ ಅಧ್ಯಕ್ಷರಾಗಿ 2019ರಿಂದ ಕಾರ್ಯ ನಿರ್ವಹಿಸುತ್ತಿರುವ ಪೃಥ್ವಿರಾಜ ಸಿಂಹ ರೂಪನ್ ಅವರು ಭಾರತದ ಹಿಂದೂ ಆರ್ಯ ಸಮಾಜಕ್ಕೆ ಸೇರಿದ ಕುಟುಂಬದಲ್ಲಿ ಜನಿಸಿದ್ದಾರೆ. ಪ್ರದೀಪ್‌ಕುಮಾರ್ ಸಿಂಹ ಎಂದೂ ಅವರನ್ನು ಕರೆಯಲಾಗುತ್ತದೆ. ಸೆಂಟ್ರಲ್ ಲ್ಯಾಂಕ್‌ಶೈರ್ ವಿಶ್ವವಿದ್ಯಾಲಯದಿಂದ ‘ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಲಾ’ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಸಯುಕ್ತಾ ರೂಪನ್ ಅವರನ್ನು ವಿವಾಹವಾಗಿದ್ದಾರೆ. ದಿವ್ಯ, ಜೋತ್ಸ್ನಾ, ಆದಿಷ್ಟಾ ಹಾಗೂ ವೇದಿಶಾ ಮಕ್ಕಳು.2020ರ ಫೆಬ್ರುವರಿಯಲ್ಲಿ ವಾರಾಣಸಿಗೆ ಕುಟುಂಬ ಸಮೇತ ಖಾಸಗಿ ಭೇಟಿ ನೀಡಿದ್ದರು. ಗೊತ್ತುಪಡಿಸಿದ್ದಕ್ಕಿಂತ ಹೆಚ್ಚು ಭಾರದ ಲಗೇಜ್ ಹೊಂದಿದ್ದಾರೆ ಎಂಬ ಕಾರಣಕ್ಕೆ ಏರ್ ಇಂಡಿಯಾ ವಿಮಾನದ ಸಿಬ್ಬಂದಿ ರೂಪನ್ ಅವರನ್ನು ತಡೆದಿದ್ದು ಸುದ್ದಿಯಾಗಿತ್ತು.

ಅಮೆರಿಕ: ಕಮಲಾ ಹ್ಯಾರಿಸ್

ಅಮೆರಿಕದ ಉಪಾಧ್ಯಕ್ಷೆ ಕಮಲಾದೇವಿ ಹ್ಯಾರಿಸ್ ಅವರ ಕುಟುಂಬದವರು ತಮಿಳುನಾಡು ಮೂಲದವರು. ಚುನಾವಣೆಯಲ್ಲಿ ಗೆದ್ದಾಗ, ಅವರ ಕುಟುಂಬದ ಊರಾದ ತುಳಸೇಂದ್ರಪುರ ಸಮಿಪದ ಪೈಂಗನಾಡಿನಲ್ಲಿ ಸಂಭ್ರಮ ಮನೆಮಾಡಿತ್ತು. ಅವರು, ಅಮೆರಿಕ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಮಹಿಳೆಯೂ ಆಗಿ ಇತಿಹಾಸ ಸೃಷ್ಟಿಸಿದ್ದರು. ಉಪಾಧ್ಯಕ್ಷೆಯಾಗಿ ಚುನಾಯಿತರಾಗುವ ಮುನ್ನ ಅವರು ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದರು. ಕಮಲಾ ಅವರ ಅಜ್ಜ ಪಿ.ವಿ ಗೋಪಾಲನ್ ತಮಿಳುನಾಡಿನವರು. ಅವರ ಪ್ರಗತಿಪರ ಹಾಗೂ ಪ್ರಜಾಪ್ರಭುತ್ವವಾದಿ ಧೋರಣೆಗಳು ಕಮಲಾ ಅವರ ಮೇಲೆ ಪ್ರಭಾವ ಬೀರಿದ್ದವು. ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್ ಅವರು ಆರು ದಶಕಗಳ ಹಿಂದೆ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಅವರು ಜಮೈಕಾ ಮೂಲದ ಡೊನಾಲ್ಡ್ ಹ್ಯಾರಿಸ್ ಎಂಬುವರನ್ನು ವಿವಾಹವಾಗಿದ್ದರು. 1964ರ ಅಕ್ಟೋಬರ್ 20ರಂದು ಅಮೆರಿಕದ ಓಕ್ಲಂಡ್‌ನಲ್ಲಿ ಕಮಲಾ ಜನಿಸಿದರು. 1986ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಕಮಲಾ ಅವರು ಭಾನುವಾರವಷ್ಟೇ, ಅಮೆರಿಕದ ಹಿಂದೂ ಧರ್ಮೀಯರ ಜೊತೆ ದೀಪಾವಳಿ ಹಬ್ಬ ಆಚರಿಸಿದರು. ಜೊ ಬೈಡನ್ ಅವರ ಅಧಿಕಾರಾವಧಿಯ ಬಳಿಕ ಕಮಲಾ ಅವರು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಆಯ್ಕೆಯಾಗಲಿದ್ದಾರೆ ಎಂಬ ಮಾತಿದೆ.

ಪೋರ್ಚುಗಲ್‌: ಅಂಟೊನಿಯೊ ಕೋಸ್ಟ

ಅಂಟೊನಿಯೊ ಕೋಸ್ಟ ಅವರು 2015ರಿಂದಲೇ ಪೋರ್ಚುಗಲ್‌ನ ಪ್ರಧಾನಿಯಾಗಿದ್ದಾರೆ. ಅವರ ತಂದೆ ಒರ್ಲಾಂಡೊ ಡಾ ಕೋಸ್ಟ ಅವರು ಗೋವಾದವರು. ಕಾನೂನು ಮತ್ತು ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದ ಅಂಟೊನಿಯೊ ಅವರನ್ನು 1995ರಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವರನ್ನಾಗಿ 1995ರಲ್ಲಿ ನೇಮಿಸಲಾಗಿತ್ತು. ಆಗ ಅವರಿಗೆ 34 ವರ್ಷ ವಯಸ್ಸು. ನಾಲ್ಕು ವರ್ಷಗಳ ಬಳಿಕ ಕಾನೂನು ಸಚಿವರಾಗಿ ಅವರಿಗೆ ಬಡ್ತಿ ದೊರಕಿತ್ತು. 2005ರಲ್ಲಿ ಆಂತರಿಕ ವ್ಯವಹಾರಗಳ ಸಚಿವರಾಗಿದ್ದರು. ಆದರೆ, 2006ರಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡಿ ಲಿಸ್ಬನ್‌ನ ಮೇಯರ್‌ ಹುದ್ದೆಗೆ ಸ್ಪರ್ಧಿಸಿ ಗೆದ್ದರು. ಬಳಿಕ, 2009 ಮತ್ತು 2013ರಲ್ಲಿ ಪುನರಾಯ್ಕೆ ಆದರು. ಇವರಿಗಿಂತ ಮುಂಚೆ ಪ್ರಧಾನಿಯಾಗಿದ್ದ ಸಾಕ್ರೆಟಿಸ್ ಅವರನ್ನು ಭ್ರಷ್ಟಾಚಾರ ಮತ್ತು ತೆರಿಗೆ ವಂಚನೆ ಆರೋಪದಲ್ಲಿ 2014ರಲ್ಲಿ ಬಂಧಿಸಲಾಗಿತ್ತು. ತೀವ್ರ ‌ಆರ್ಥಿಕ ಹಿಂಜರಿತಕ್ಕೆ ಒಳಗಾಗಿದ್ದ ದೇಶಕ್ಕೆ ಅಂತರರಾಷ್ಟ್ರೀಯ ನೆರವು ನೀಡಲಾಗಿತ್ತು. ಅಂಟೊನಿಯೊ ಅವರು ಪ್ರಧಾನಿಯಾದ ಬಳಿಕ ಅಲ್ಲಿನ ಆರ್ಥಿಕ ಸ್ಥಿತಿ ಸುಧಾರಿಸಿದೆ. ಅಂಟೊನಿಯೊ ಅವರು ಸದಾ ಹಸನ್ಮುಖಿಯಾಗಿಯೇ ಇರುತ್ತಾರೆ.

ಸಚಿವರಾಗಿರುವವರ ಸಂಖ್ಯೆ ಕಡಿಮೆ ಅಲ್ಲ

ವಿವಿಧ ದೇಶಗಳ ಅಧ್ಯಕ್ಷ, ಪ‍್ರಧಾನಿ, ಉಪಾಧ್ಯಕ್ಷ ಮತ್ತು ಉಪಪ್ರಧಾನಿಯಾಗಿ ಭಾರತ ಮೂಲದ ಹಲವರು ನಾಯಕರು ಇದ್ದಾರೆ. ಮಹತ್ವದ ಸಚಿವಾಲಯಗಳಲ್ಲಿ ಸಚಿವರಾಗಿ ಕೆಲಸ ಮಾಡುತ್ತಿರುವ ಭಾರತ ಮೂಲದ ಜನರ ಸಂಖ್ಯೆ 60ಕ್ಕೂ ಹೆಚ್ಚು ಇದೆ. ಸುರಿನಾಮ್‌ನ ಹಣಕಾಸು ಸಚಿವ ಅರ್ಮಂದ್‌ ಅಚಯ್‌ಬರ್ಸಿಂಗ್, ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊದ ಕಾನೂನು ಸಚಿವ ಫಾರಿಸ್‌ ಅಲ್ ರವಿ, ಸಿಂಗಪುರದ ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್‌, ಫಿಜಿಯ ಉದ್ಯೋಗ ಮತ್ತು ಕೈಗಾರಿಕಾ ವ್ಯವಹಾರಗಳ ಸಚಿವ ಪರ್ವಿನ್‌ ಬಾಲಾ, ‍ಪೋರ್ಚುಗಲ್‌ನ ಯೋಜನಾ ಸಚಿವ ನೆಲ್ಸನ್‌ ಡಿಸೋಜಾ, ದಕ್ಷಿಣ ಆಫ್ರಿಕಾದ ಸಾರ್ವಜನಿಕ ವ್ಯವಹಾರಗಳ ಸಚಿವ ‍ಪ್ರವೀಣ್‌ ಗೋವರ್ಧನ್‌ ಮುಖ್ಯರಾಗಿದ್ದಾರೆ. ಮಾರಿಷಸ್‌ನ ಸಚಿವ ಸಂಪುಟದಲ್ಲಿ ಭಾರತದ ಮೂಲದ ಹತ್ತಕ್ಕೂ ಹೆಚ್ಚು ಸಚಿವರು ಇದ್ದಾರೆ.

ವಿವಿಧ ದೇಶಗಳಲ್ಲಿ ಸಚಿವರಾಗಿರುವ ಭಾರತ ಮೂಲದ ಮಹಿಳೆಯರ ಸಂಖ್ಯೆಯೂ ಕಡಿಮೆ ಏನಲ್ಲ. ರೋಜಿ ಅಕ್ಬರ್‌ ಅವರು ಫಿಜಿಯ ಶಿಕ್ಷಣ ಸಚಿವೆ ಆಗಿದ್ದಾರೆ. ಕೆನಡಾದ ರಕ್ಷಣಾ ಸಚಿವರಾಗಿ ಅನಿತಾ ಆನಂದ್ ಅವರಿದ್ದಾರೆ. ಸುರಿನಾಮ್‌ ಮತ್ತು ಗಯಾನಾದಲ್ಲಿಯೂ ಭಾರತದ ಮೂಲದ ಹಲವು ಮಹಿಳೆಯರು ಸಚಿವರಾಗಿದ್ದಾರೆ.

ಆಧಾರ: ಇಂಡಿಯಸ್ಪೊರಾ ಡಾಟ್ ಆರ್ಗ್, ಬಿಬಿಸಿ, ಬ್ರಿಟಾನಿಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.