ADVERTISEMENT

ಆಳ-ಅಗಲ | ಚುನಾವಣಾ ಬಾಂಡ್‌: ಮುಚ್ಚಿಟ್ಟಿದ್ದೇ ಹೆಚ್ಚು

ಜಯಸಿಂಹ ಆರ್.
ಸುಕೃತ ಎಸ್.
Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
   

ಚುನಾವಣಾ ಬಾಂಡ್‌ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಚುನಾವಣಾ ಬಾಂಡ್‌ಗಳನ್ನು ಯಾರು ಖರೀದಿಸುತ್ತಾರೆ ಎಂಬ ವಿವರ ಬಹಿರಂಗಕ್ಕೆ ಇರುವ ನಿಷೇಧ, ಖರೀದಿ ಮತ್ತು ನಗದೀಕರಿಸಿಕೊಳ್ಳುವ ಸ್ವರೂಪವು ಅಪಾರದರ್ಶಕವಾಗಿದೆ ಎಂಬುದರ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಮತ್ತು ಕೆಲವು ವಿರೋಧ ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಚುನಾವಣಾ ಬಾಂಡ್‌ ಯೋಜನೆ ಜಾರಿಗೆ ತರುವ ಮುನ್ನವೇ ಭಾರತೀಯ ರಿಸರ್ವ್ ಬ್ಯಾಂಕ್‌ ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆ ಆಕ್ಷೇಪವನ್ನು ಕಸದ ಬುಟ್ಟಿಗೆ ಎಸೆದಿದ್ದ ಕೇಂದ್ರ ಹಣಕಾಸು ಸಚಿವಾಲಯವು, ಯೋಜನೆ ಜಾರಿಗೆ ಒಪ್ಪಿಗೆ ನೀಡಿತ್ತು

ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಚುನಾವಣಾ ಬಾಂಡ್‌ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು 2017ರಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಲೋಕಸಭೆಯಲ್ಲಿ ಹೇಳಿದ್ದರು. ನಗದು ರೂಪದಲ್ಲಿ ದೇಣಿಗೆ ನೀಡುವ ಮತ್ತು ಆ ಮೂಲಕ ಕಪ್ಪು ಹಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪದ್ಧತಿಗೆ ಚುನಾವಣಾ ಬಾಂಡ್‌ ಕೊನೆ ಹಾಡಲಿದೆ. ಚುನಾವಣಾ ಬಾಂಡ್‌ ಸಂಪೂರ್ಣ ಪಾರದರ್ಶಕ ವ್ಯವಸ್ಥೆ ಎಂದೂ ಸಚಿವರು ಹೇಳಿದ್ದರು. ಆದರೆ ಯೋಜನೆ ಜಾರಿಗೆ ಬಂದ ಆರು ವರ್ಷಗಳ ನಂತರ ಸುಪ್ರೀಂ ಕೋರ್ಟ್‌ ಚುನಾವಣಾ ಬಾಂಡ್‌ ಎಂಬುದು ಅಸಾಂವಿಧಾನಿಕ ಎಂದು ತೀರ್ಪಿತ್ತಿದೆ.

ಈ ಬಾಂಡ್ ಯೋಜನೆ ಜಾರಿಗೆ ತರುವುದಕ್ಕೂ ಮೊದಲು ಹಣಕಾಸು ಸಚಿವಾಲಯವು ಆರ್‌ಬಿಐನ ಸಲಹೆಯನ್ನು ಕೇಳಿತ್ತು. ಇದು ಪ್ರಾಮಿಸರಿ ನೋಟ್‌ ಸ್ವರೂಪದ ಬಾಂಡ್‌. ಎಸ್‌ಬಿಐ ಈ ಬಾಂಡ್‌ಗಳನ್ನು ವಿತರಿಸುತ್ತದೆ ಎಂದು ಹೇಳಿತ್ತು. ಜತೆಗೆ ಬಾಂಡ್‌ ಖರೀದಿಸುವವರ ವಿವರವನ್ನು ಯಾವುದೇ ಕಾರಣಕ್ಕೂ ಎಸ್‌ಬಿಐ ಬಹಿರಂಗಪಡಿಸುವಂತಿಲ್ಲ (ನ್ಯಾಯಾಲಯ ಕೇಳಿದರೆ ಮಾತ್ರ ನೀಡಬೇಕು) ಎಂಬ ಷರತ್ತು ಆ ಯೋಜನೆಯಲ್ಲಿ ಇತ್ತು. ಈ ಎಲ್ಲಾ ಅಂಶಗಳಿಗೂ ರಿಸರ್ವ್‌ ಬ್ಯಾಂಕ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ADVERTISEMENT

ಆರ್‌ಬಿಐ ಆಕ್ಷೇಪ: 

‘ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಚುನಾವಣಾ ಬಾಂಡ್‌ ವ್ಯವಸ್ಥೆ ಅಸ್ತಿತ್ವಕ್ಕೆ ಬರಲಿದೆ ಎನ್ನಲಾಗಿದೆ. ಆದರೆ, ಯಾರು ಈ ಬಾಂಡ್ ಖರೀದಿಸುತ್ತಾರೆ ಮತ್ತು ಯಾರು ಇದನ್ನು ರಾಜಕೀಯ ಪಕ್ಷಗಳಿಗೆ ನೀಡುತ್ತಾರೆ ಎಂಬುದರ ದಾಖಲೆ ಇರುವುದಿಲ್ಲ. ಈ ದಾಖಲೆ ಇಲ್ಲದಿರುವ ಕಾರಣ, ಈ ಯೋಜನೆಯ ಮೂಲ ಉದ್ದೇಶವನ್ನು ಸಾಧಿಸಲು ಸಾಧ್ಯವೇ ಇಲ್ಲ. ಬಾಂಡ್‌ ಖರೀದಿಸುವವರು ‘ನಿಮ್ಮ ಗ್ರಾಹಕರನ್ನು ತಿಳಿಯಿರಿ’ (ಕೆವೈಸಿ) ದಾಖಲೆಗಳನ್ನು ಸಲ್ಲಿಸಬೇಕು. ಅದರಲ್ಲಿ ಅವರ ಗುರುತು ಇರುತ್ತದೆ. ಆದರೆ, ಬಾಂಡ್‌ ಅನ್ನು ಪಡೆಯುವವರ ಗುರುತು ಇರುವುದಿಲ್ಲ. ಇದು ಹಣದ ಅಕ್ರಮ ವರ್ಗಾವಣೆಗೆ ದಾರಿ ಮಾಡಿಕೊಡುತ್ತದೆ.

‘ಇಂತಹ ಬಾಂಡ್‌ಗಳನ್ನು ವಿತರಿಸುವ ಅಧಿಕಾರ ಇರುವುದು ರಿಸರ್ವ್‌ ಬ್ಯಾಂಕ್‌ಗೆ ಮಾತ್ರ. ಆದರೆ ಸರ್ಕಾರವು ರೂಪಿಸಿದ್ದ ಯೋಜನೆಯಲ್ಲಿ ಎಸ್‌ಬಿಐಗೆ ಅಧಿಕಾರ ನೀಡಲಾಗುತ್ತಿದೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ.

‘ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಉದ್ದೇಶದಿಂದ ಮಾತ್ರ ಈ ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗುತ್ತದೆ. ಈಗ ಚಾಲ್ತಿಯಲ್ಲಿರುವ ಚೆಕ್‌, ಡಿಮ್ಯಾಂಡ್‌ ಡ್ರಾಫ್ಟ್‌–ಡಿ.ಡಿ, ಆನ್‌ಲೈನ್‌ ಬ್ಯಾಂಕಿಂಗ್‌, ಮೊಬೈಲ್ ಬ್ಯಾಂಕಿಂಗ್ ಮತ್ತು ಇತರ ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೂಲಕವೇ ದೇಣಿಗೆ ನೀಡಲು ಅವಕಾಶವಿದೆ. ಇಂತಹ ವ್ಯವಸ್ಥೆಗಳು ಇರುವಾಗಲೇ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಉದ್ದೇಶದಿಂದ ವಿಶೇಷ ಮತ್ತು ಪ್ರತ್ಯೇಕ ವ್ಯವಸ್ಥೆಯನ್ನು ಜಾರಿಗೆ ತರುವ ಅವಶ್ಯಕತೆ ಇಲ್ಲ’ ಎಂದು ಆರ್‌ಬಿಐನ ಅಂದಿನ ಗವರ್ನರ್ ಆಗಿದ್ದ ಉರ್ಜಿತ್ ಪಟೇಲ್‌ ಅವರು ಆಕ್ಷೇಪ ಸಹಿತ ಸಲಹೆ ನೀಡಿದ್ದರು.

ಆದರೆ ಆರ್‌ಬಿಐನ ಆಕ್ಷೇಪ ಮತ್ತು ಸಲಹೆ ಎರಡನ್ನೂ, ಆಗ ಕೇಂದ್ರ ಸರ್ಕಾರದ ರೆವಿನ್ಯೂ ಕಾರ್ಯದರ್ಶಿಯಾಗಿದ್ದ ಹಸಮುಖ್ ಆಧಿಯಾ ಅವರು ನಿರಾಕರಿಸಿದ್ದರು. ಆರ್‌ಬಿಐನ ಆಕ್ಷೇಪವನ್ನು ತಿರಸ್ಕರಿಸಿ ಅವರು ಹಣಕಾಸು ಸಚಿವಾಲಯದ ಕಾರ್ಯದರ್ಶಿಗೆ, ‘ದೇಣಿಗೆ ನೀಡುವವರ ವಿವರವನ್ನು ಗೋಪ್ಯವಾಗಿ ಇಡುವುದರ ಹಿಂದಿನ ಉದ್ದೇಶವನ್ನು ಆರ್‌ಬಿಐ ಅರ್ಥಮಾಡಿಕೊಂಡಿಲ್ಲ. ಅಲ್ಲದೆ, ಆರ್‌ಬಿಐ ತಡವಾಗಿ ಸಲಹೆ ನೀಡಿದೆ. ಈಗಾಗಲೇ ಹಣಕಾಸು ಮಸೂದೆಯ ಮುದ್ರಣ ಮುಗಿದಿದೆ. ಹೀಗಾಗಿ, ಯೋಜನೆಯನ್ನು ಜಾರಿಗೆ ತರೋಣ’ ಎಂದು 2017ರ ಜನವರಿ 30ರಂದು ಪತ್ರ ಬರೆದರು. 

ರಿಸರ್ವ್‌ ಬ್ಯಾಂಕ್‌ನ ಅಧಿಕಾರಗಳನ್ನು ಮೊಟಕುಗೊಳಿಸುವ ಸ್ವರೂಪದ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು. ಅಂತಹ ನಿಯಮಗಳಿಗೆ ಹಣಕಾಸು ಮಸೂದೆ (ಮನಿ ಬಿಲ್‌) ಹೆಸರಿನಲ್ಲಿ ಸಂಸತ್ತಿನ ಅನುಮೋದನೆ ಪಡೆದುಕೊಂಡಿತು. ಅಂದರೆ ಸಂಸತ್ತಿನಲ್ಲಿ ಯಾವುದೇ ಚರ್ಚೆ ಇಲ್ಲದೆ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ‘ಚುನಾವಣಾ ಬಾಂಡ್‌ ಯೋಜನೆ–2018’ ಎಂಬ ಒಂದು ಅಧಿಸೂಚನೆಯನ್ನು ಹೊರಡಿಸಿ, ಚಾಲನೆ ನೀಡಲಾಯಿತು. 

ಎಡಿಆರ್ (ಅಸೋಸಿಯೇಷನ್‌ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌) ಸೇರಿದಂತೆ ಹಲವು ಸಂಘಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಬಾಂಡ್‌ ವಿರುದ್ಧ ಅರ್ಜಿ ಸಲ್ಲಿಸಿದ್ದರು. ‘ಚುನಾವಣಾ ಬಾಂಡ್‌ಗಳಲ್ಲಿ ದೇಣಿಗೆ ನೀಡುವವರ ಹೆಸರೂ ಇರುವುದಿಲ್ಲ, ದೇಣಿಗೆ ಪಡೆಯುವವರ ಹೆಸರೂ ಇರುವುದಿಲ್ಲ. ಇನ್ನು ಚುನಾವಣಾ ಬಾಂಡ್ ಮೂಲಕ ಪಡೆದ ದೇಣಿಗೆ ಬಗ್ಗೆ ರಾಜಕೀಯ ಪಕ್ಷಗಳೂ ವಿವರ ಬಹಿರಂಗಪಡಿಸಬೇಕಿಲ್ಲ. ಇದು ಯಾವ ಸ್ವರೂಪದ ಪಾರದರ್ಶಕತೆ’ ಎಂದು ಪ್ರಶ್ನಿಸಿದ್ದವು. ಈಗ ಚುನಾವಣಾ ಬಾಂಡ್ ವಿರುದ್ಧ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ ಸಹ ಸರಿಸುಮಾರು ಇಂಥದ್ದೇ ಅಭಿಪ್ರಾಯ ವ್ಯಕ್ತಪಡಿಸಿದೆ.

ಪಾರದರ್ಶಕತೆಗೆ ಮುಸುಕು

ಪಾರದರ್ಶಕತೆ ಹೆಸರಿನಲ್ಲಿ ಜಾರಿಗೆ ತರಲಾಗಿದ್ದ ಚುನಾವಣಾ ಬಾಂಡ್‌ ಮುಚ್ಚಿಡುತ್ತಿದ್ದ ವಿವರಗಳೇ ಹೆಚ್ಚು. ಅದೊಂದು ಕಾಗದದ ತುಂಡು. ಅದನ್ನು ಎಸ್‌ಬಿಐ ಮಾತ್ರ ಮಾರಾಟ ಮಾಡುತ್ತದೆ. ಎಸ್‌ಬಿಐ ಹೆಸರಿನ ಬಾಂಡ್‌, ಬ್ಯಾಂಕ್ ಶಾಖೆಯ ವಿವರ ಮತ್ತು ಯೋಜನೆಗೆ ಸಂಬಂಧಿಸಿದ ಷರತ್ತುಗಳು ಆ ಕಾಗದದಲ್ಲಿ ಇರುತ್ತವೆ. ಆ ಬಾಂಡ್‌ನಲ್ಲಿ ದೇಣಿಗೆಗೆ ಸಂಬಂಧಿಸಿದ ಅತ್ಯಂತ ಕನಿಷ್ಠ ವಿವರಗಳು ಮಾತ್ರ ಇರುತ್ತವೆ. 

*ಭಾರತದ ಯಾವೊಬ್ಬ ಪ್ರಜೆ, ಹಿಂದೂ ಅವಿಭಕ್ತ ಕುಟುಂಬ, ಸಂಸ್ಥೆಗಳು, ಸಂಘಟನೆಗಳು ಚುನಾವಣಾ ಬಾಂಡ್‌ ಖರೀದಿಸಬಹುದು

*ಬಾಂಡ್‌ ಖರೀದಿ ವೇಳೆ ಎಸ್‌ಬಿಐಗೆ ‘ಕೆವೈಸಿ’ ದಾಖಲೆ ಎಂದು ಆಧಾರ್‌ ಮತ್ತು ಪ್ಯಾನ್‌/ಮತದಾರರ ಗುರುತಿನ ಚೀಟಿ/ವಿದ್ಯುತ್‌ ಬಿಲ್‌ ನೀಡಿದರೆ ಸಾಕಿತ್ತು

*ಬಾಂಡ್‌ ಖರೀದಿ ವೇಳೆ ನೀಡಲಾದ ಕೆವೈಸಿ ದಾಖಲೆಯನ್ನು ಸರ್ಕಾರದ ಯಾವ ಪ್ರಾಧಿಕಾರಕ್ಕೂ ನೀಡುವಂತಿಲ್ಲ. ಅವನ್ನು ಗೋಪ್ಯವಾಗಿ ಇರಿಸಬೇಕು. ನ್ಯಾಯಾಲಯವು ಕೇಳಿದರೆ ಮಾತ್ರ ಎಸ್‌ಬಿಐ ಆ ಮಾಹಿತಿಯನ್ನು ನೀಡಲು ಅವಕಾಶವಿಲ್ಲ

*ಒಬ್ಬ ವ್ಯಕ್ತಿ ಎಷ್ಟು ಬಾಂಡ್‌ಗಳನ್ನಾದರೂ ಖರೀದಿಸಬಹುದು

* ₹1,000, ₹10,000, ₹1 ಲಕ್ಷ, ₹10 ಲಕ್ಷ ಮತ್ತು ₹1 ಕೋಟಿ ಮುಖಬೆಲೆಯ ಬಾಂಡ್‌ಗಳನ್ನು ಖರೀದಿಸಬಹುದು. ಎಲ್ಲಾ ಮುಖಬೆಲೆಯ ಬಾಂಡ್‌ಗಳ ಖರೀದಿಗೂ ಏಕರೂಪದ ಗೋಪ್ಯತೆಯ ನಿಯಮ ಅನ್ವಯವಾಗುತ್ತದೆ

* ಯಾವುದೇ ಒಬ್ಬ ವ್ಯಕ್ತಿ ಬಾಂಡ್‌ ಅನ್ನು ಖರೀದಿಸಬಹುದಿತ್ತು. ಅದನ್ನು ಯಾವ ರಾಜಕೀಯ ಪಕ್ಷಕ್ಕೆ ನೀಡುತ್ತೇನೆ ಎಂಬ ವಿವರವನ್ನೂ ಆತ ಎಸ್‌ಬಿಐಗೆ ನೀಡಬೇಕಿಲ್ಲ. ಅದನ್ನು ಯಾವುದೇ ರಾಜಕೀಯ ಪಕ್ಷಕ್ಕೆ ನೀಡಬಹುದು.

* ಅಂತಹ ಬಾಂಡ್‌ಗಳನ್ನು ರಾಜಕೀಯ ಪಕ್ಷಗಳು ಎಸ್‌ಬಿಐಗೆ ಸಲ್ಲಿಸಬೇಕು. ಆಗ ತನಗೆ ಆ ಬಾಂಡ್‌ ನೀಡಿದವರು ಯಾರು ಎಂಬ ವಿವರವನ್ನು ಪಕ್ಷಗಳು ಎಸ್‌ಬಿಐಗೆ ನೀಡಬೇಕಿಲ್ಲ. ಪಕ್ಷಗಳ ಬ್ಯಾಂಕ್‌ ಖಾತೆಗೆ ಆ ಹಣ ಜಮೆಯಾಗುತ್ತದೆ.

* ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರದಲ್ಲಿ ರಾಜಕೀಯ ಪಕ್ಷಗಳು ತಮಗೆ ಎಷ್ಟು ಬಾಂಡ್‌ಗಳು ಮತ್ತು ಅವುಗಳ ಮೂಲಕ ದೊರೆತ ದೇಣಿಗೆಯ ಒಟ್ಟು ಮೊತ್ತ ಎಷ್ಟು ಎಂಬ ಮಾಹಿತಿ ನೀಡಿದರೆ ಸಾಕು. ಯಾರು ಬಾಂಡ್ ನೀಡಿದವರು ಎಂಬ ವಿವರ ನೀಡಬೇಕಿಲ್ಲ.

ಆರು ವರ್ಷದಲ್ಲಿ ಬಿಜೆಪಿಗೆ ₹6,566.12 ಕೋಟಿ

ಚುನಾವಣಾ ಬಾಂಡ್‌ ಮೂಲಕ 2017–18ರಿಂದ 2022–23ನೇ ಆರ್ಥಿಕ ವರ್ಷದವರೆಗೆ ಬಿಜೆಪಿ ಪಕ್ಷಕ್ಕೆ ಒಟ್ಟು ₹6,566.12 ಕೋಟಿ ದೇಣಿಗೆ ಬಂದಿದೆ. ಚುನಾವಣಾ ಬಾಂಡ್‌ ಮೂಲಕ ದೇಣಿಗೆ ಪಡೆದ ಒಟ್ಟು 21 ರಾಜಕೀಯ ಪಕ್ಷಗಳಿಗೆ ಹೋಲಿಸಿಕೊಂಡರೆ, ಬಿಜೆಪಿಗೇ ಶೇ 54.77ರಷ್ಟು ದೇಣಿಗೆ ಸಂದಾಯವಾಗಿದೆ.

‘ಚುನಾವಣಾ ಬಾಂಡ್‌ ಯೋಜನೆ’ಯನ್ನು ಅಂದಿನ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಅವರು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದರು. ‘ಪಕ್ಷವೊಂದಕ್ಕೆ ದೇಣಿಗೆ ನೀಡಿದವರ ಹೆಸರನ್ನು ಬಹಿರಂಗಪಡಿಸದೇ ಇರುವ ವ್ಯವಸ್ಥೆಯು ಆಡಳಿತ ಪಕ್ಷಕ್ಕಿಂತ ವಿರೋಧ ಪಕ್ಷಗಳಿಗೆ ಹೆಚ್ಚು ಅನುಕೂಲ ಮಾಡಿಕೊಡಲಿದೆ. ದೇಣಿಗೆ ನೀಡಿದವರ ಹೆಸರನ್ನು ಬಹಿರಂಗ ಮಾಡುವುದರಿಂದ ಆಡಳಿತ ಪಕ್ಷಕ್ಕೆ ಹೆಚ್ಚೆಚ್ಚು ಅನುಕೂಲವಾಗುತ್ತಿತ್ತು’ ಎಂದು ಪತ್ರಕರ್ತರು ಕೇಳಿದ್ದ ಪ್ರಶ್ನೆಗೆ ಅವರು ಉತ್ತರಿಸಿದ್ದರು.

ಆದರೆ, ಚುನಾವಣಾ ಬಾಂಡ್‌ ಯೋಜನೆಯಿಂದ 2017ರಿಂದ ಇಲ್ಲಿಯವರೆಗಿನ ಅಂಕಿ–ಅಂಶಗಳನ್ನು ಗಮನಿಸಿದರೆ, ಆಡಳಿತ ಪಕ್ಷವಾಗಿರುವ ಬಿಜೆಪಿಗೇ ಅತ್ಯಂತ ಅನುಕೂಲವಾಗಿದೆ. 2019–20ನೇ ವರ್ಷದಲ್ಲಿ ಬಿಜೆಪಿಗೆ ಅತ್ಯಂತ ಹೆಚ್ಚು ಪ್ರಮಾಣದ ದೇಣಿಗೆ ಸಂದಿದೆ. ಇದು ಲೋಕಸಭಾ ಚುನಾವಣಾ ವರ್ಷವೂ ಆಗಿತ್ತು. ಈ ವರ್ಷ ಚುನಾವಣಾ ಬಾಂಡ್‌ ಮೂಲಕ ಬಿಜೆಪಿಗೆ ₹2,555 ಕೋಟಿ ಸಂಗ್ರಹವಾಗಿತ್ತು. ಸ್ವತಃ ಬಿಜೆಪಿಗೂ ಸೇರಿದಂತೆ ಇನ್ನಿತರ ಯಾವ ಪಕ್ಷಕ್ಕೂ ಇಷ್ಟೊಂದು ದೊಡ್ಡ ಮೊತ್ತದ ದೇಣಿಗೆಯು ಬೇರೆ ಅವಧಿಯಲ್ಲಿ ಸಂದಾಯವಾಗಿಲ್ಲ. 

ಆಧಾರ: ‘ಚುನಾವಣಾ ಬಾಂಡ್‌ ಯೋಜನೆ–2018’ ಅಧಿಸೂಚನೆ, ಚುನಾವಣಾ ಬಾಂಡ್‌ ಎಂದರೇನು–ಎಸ್‌ಬಿಐ ಕೈಪಿಡಿ, ಎಡಿಆರ್‌ ವರದಿಗಳು, ಸುಪ್ರೀಂ ಕೋರ್ಟ್‌ ತೀರ್ಪು, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.