ಒಳ ಮೀಸಲಾತಿ ಜಾರಿಯ ಕುರಿತು ಕರ್ನಾಟಕ ಸರ್ಕಾರವೂ ಸೇರಿದಂತೆ ರಾಜ್ಯ ಸರ್ಕಾರಗಳು ಮತ್ತು ರಾಷ್ಟ್ರಮಟ್ಟದ ಪ್ರಮುಖ ಪಕ್ಷಗಳಾಗಿರುವ ಕಾಂಗ್ರೆಸ್- ಬಿಜೆಪಿ ಕಾಲಹರಣದಲ್ಲಿ ತೊಡಗಿವೆ. ಈ ಹಿಂದೆ ಸಂವಿಧಾನ ತಿದ್ದುಪಡಿಯ ಸಬೂಬು ಒಡ್ಡಿ ತಪ್ಪಿಸಿಕೊಳ್ಳುತ್ತಿದ್ದ ರಾಜಕೀಯ ಪಕ್ಷಗಳ ಅಸಲು ಬಣ್ಣ ಬಯಲಾಗತೊಡಗಿದೆ. ನೆಲದ ಅತ್ಯುನ್ನತ ನ್ಯಾಯಾಲಯವೇ ತೀರ್ಪು ಕೊಟ್ಟರೂ ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಲಾಭನಷ್ಟದ ಲೆಕ್ಕಾಚಾರ ಹಾಕಿ ಮೀನಮೇಷ ಎಣಿಸುತ್ತಿವೆ.
ತಾವು ಪಂಜಾಬಿನ ಮುಖ್ಯಮಂತ್ರಿಯಾಗಿದ್ದಾಗ 1975ರಲ್ಲಿ ದಲಿತರಿಗೆ ಒಳ ಮೀಸಲಾತಿ ಕಲ್ಪಿಸಿದ ಮೊದಲಿಗರು ಗ್ಯಾನಿ ಜೈಲ್ ಸಿಂಗ್. ಹಿಂದುಳಿದ ವರ್ಗಕ್ಕೆ ಸೇರಿದ ಜೈಲ್ ಸಿಂಗ್ ಪರಿಶಿಷ್ಟ ಜಾತಿಗಳ ಪೈಕಿ ಅತ್ಯಂತ ಹಿಂದುಳಿದಿದ್ದ ವಾಲ್ಮೀಕಿ ಮತ್ತು ಮಜಹಬಿ ಸಿಖ್ ಪಂಗಡಗಳಿಗೆ //ಶೇ 50ರಷ್ಟು// ಒಳಮೀಸಲಾತಿ ನೀಡುತ್ತಾರೆ. ಅಂದಿನಿಂದ ಪಂಜಾಬ್- ಆಂಧ್ರಪ್ರದೇಶದ ಒಳ ಮೀಸಲಾತಿ ಪ್ರಶ್ನೆಯು ನ್ಯಾಯಾಲಯಗಳ ಕಟ್ಟೆ ತುಳಿದು ಏಳುಬೀಳುಗಳನ್ನು ಕಾಣುತ್ತದೆ.
ಪರಿಶಿಷ್ಟ ಜಾತಿಗಳ ಪೈಕಿ ಅತಿ ಹಿಂದುಳಿದ ಮತ್ತು ಅತಿ ಶೋಷಿತ ಜಾತಿಗಳಿಗೆ ಒಳ ಮೀಸಲಾತಿಯನ್ನು ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ಎರಡು ತಿಂಗಳ ಹಿಂದೆ ಎತ್ತಿ ಹಿಡಿಯುತ್ತದೆ. ಈ ಮೀಸಲಾತಿಯನ್ನು ಕಲ್ಪಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆಯೆಂದೂ ಐತಿಹಾಸಿಕ ತೀರ್ಪು ನೀಡುತ್ತದೆ.
ಆದರೆ, ಕರ್ನಾಟಕ ಸರ್ಕಾರವೂ ಸೇರಿದಂತೆ ರಾಜ್ಯ ಸರ್ಕಾರಗಳು ಮತ್ತು ರಾಷ್ಟ್ರಮಟ್ಟದ ಪ್ರಮುಖ ಪಕ್ಷಗಳಾಗಿರುವ ಕಾಂಗ್ರೆಸ್- ಬಿಜೆಪಿ ಕಾಲಹರಣದಲ್ಲಿ ತೊಡಗಿವೆ. ಈ ಹಿಂದೆ ಸಂವಿಧಾನ ತಿದ್ದುಪಡಿಯ ಸಬೂಬು ಒಡ್ಡಿ ತಪ್ಪಿಸಿಕೊಳ್ಳುತ್ತಿದ್ದ ರಾಜಕೀಯ ಪಕ್ಷಗಳ ಅಸಲು ಬಣ್ಣ ಬಯಲಾಗತೊಡಗಿದೆ. ನೆಲದ ಅತ್ಯುನ್ನತ ನ್ಯಾಯಾಲಯವೇ ತೀರ್ಪು ಕೊಟ್ಟರೂ ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಲಾಭನಷ್ಟದ ಲೆಕ್ಕಾಚಾರ ಹಾಕಿ ಮೀನಮೇಷ ಎಣಿಸುತ್ತಿವೆ. ತಮ್ಮ ಪಕ್ಷ ಮೊದಲಿನಿಂದಲೂ ಒಳ ಮೀಸಲಾತಿಯ ಪರ ಎಂಬುದು ತಮಿಳುನಾಡಿನ ಡಿಎಂಕೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರತಿಕ್ರಿಯೆ. ಎಂ.ಕರುಣಾನಿಧಿ ಅವರ ಕಾಲದಲ್ಲೇ ಅರುಂಧತಿಯಾರ್ ಒಳಪಂಗಡಕ್ಕೆ ಶೇ 3ರಷ್ಟು ಪ್ರತ್ಯೇಕ ಮೀಸಲು ಕಲ್ಪಿಸಲಾಗಿತ್ತು. ದಕ್ಷಿಣ ಭಾರತ ಹೆಚ್ಚುಕಡಿಮೆ ಒಳ ಮೀಸಲಾತಿಯ ಪರವಾಗಿದ್ದರೆ, ಉತ್ತರ ಭಾರತದ ರಾಜಕಾರಣ ಬಹುತೇಕ ಒಳ ಮೀಸಲಾತಿಯನ್ನು ವಿರೋಧಿಸಿದೆ.
ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳ ದಲಿತರ ಪೈಕಿ ಜಾಟವರು ಬಹುಸಂಖ್ಯಾತರು ಮತ್ತು ಪರಿಶಿಷ್ಟರ ಪೈಕಿ ಮುಂದುವರಿದವರು. ಜಾಟವ ಎಂಬುದು ಚಮ್ಮಾರ ಒಳಪಂಗಡದ ಇನ್ನೊಂದು ಜಾತಿ ಸೂಚಕ ಪದ ಅಷ್ಟೇ. ಹರಿಯಾಣದ ಒಟ್ಟು ಪರಿಶಿಷ್ಟ ಜಾತಿಗಳ ಪೈಕಿ ಜಾಟವರ ಪ್ರಮಾಣ ಶೇ 50ರಷ್ಟು. ಕಾಂಗ್ರೆಸ್‌ನ ಕುಮಾರಿ ಸೆಲ್ಜಾ ಇದೇ ಒಳಪಂಗಡಕ್ಕೆ ಸೇರಿದವರು. ಜಾಟವರು ಬಹುತೇಕ ಬಿಎಸ್‌ಪಿ ಮತ್ತು ಕಾಂಗ್ರೆಸ್ ಮತದಾರರೆಂದು ಬಿಜೆಪಿ ಇವರ ಗೊಡವೆಗೆ ಹೋಗುವುದಿಲ್ಲ. ಜಾಟವೇತರ ಪರಿಶಿಷ್ಟ ಜಾತಿಗಳ ಪೈಕಿ ವಾಲ್ಮೀಕಿಯ ಪ್ರಮಾಣ ಶೇ 25ರಿಂದ ಶೇ 30. ನಗರ ಪ್ರದೇಶಗಳಲ್ಲಿ ಹೆಚ್ಚು ವಾಸಿಸುವ ಇವರು ನೈರ್ಮಲ್ಯದ ಕೆಲಸಗಳಲ್ಲಿ ತೊಡಗಿದವರು. ಧಾನಕ್ ಜಾತಿಯ ಪ್ರಮಾಣ ಶೇ 10. ಉಳಿದಂತೆ ಡೋಮ್, ಪಾಸಿ, ಮಜಹಬಿ ಸಿಖ್, ಖಾಟಿಕ್, ಬಾಜೀಗಾರ್ ಹಾಗೂ ಸಪೇರಾ ಜಾತಿಗಳ ಜನಸಂಖ್ಯೆ ಅತಿ ಕಡಿಮೆಯದು. ಉತ್ತರ ಪ್ರದೇಶದ ದಲಿತರ ಪೈಕಿ ಜಾಟವರ ಪ್ರಮಾಣ ಶೇ 54.23. ಕುಮಾರಿ ಮಾಯಾವತಿ ಈ ಜನಾಂಗದ ಅತಿ ಎತ್ತರದ ನಾಯಕಿಯಾಗಿ ಹೊರಹೊಮ್ಮಿದ್ದರು.
ಜಾಟವೇತರ ಜಾತಿಗಳ ಪೈಕಿ ಪಾಸಿ (ಶೇ 16), ಧೋಬಿ (ಶೇ 6), ಕೋರಿ, ಖಾಟಿಕ್ ಹಾಗೂ ಧಾನುಕ್ ಮುಂತಾದ ಸಣ್ಣಪುಟ್ಟ ಜಾತಿಗಳೆಲ್ಲ ಸೇರಿದರೆ ಅವುಗಳ ಒಟ್ಟು ಪ್ರಮಾಣ ಶೇ 46. ಮೀಸಲಾತಿ ಸೌಲಭ್ಯಗಳ ಗರಿಷ್ಠ ಬಳಕೆ ಮಾಡಿಕೊಂಡು ಮುಂದುವರಿದಿರುವ ಜಾತಿ ಜಾಟವರದು. ಉಳಿದ ಪರಿಶಿಷ್ಟ ಜಾತಿಗಳು ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಕೊರಗಿರುವ ತಬ್ಬಲಿಗಳು.
ಬಿಹಾರದ ಪರಿಸ್ಥಿತಿ ಬೇರೆ. ಅಲ್ಲಿ ಪಾಸ್ವಾನ್ ಜಾತಿಯೇ ಮುಂದುವರಿದ ದಲಿತ ಜಾತಿ. ಪಾಸ್ವಾನ್ ಸೇರಿದಂತೆ 22 ದಲಿತ ಜಾತಿಗಳ ಪೈಕಿ ನಿತೀಶ್ ಕುಮಾರ್ ಅವರು 21 ಜಾತಿಗಳನ್ನು ಮಹಾದಲಿತರೆಂದು ಕರೆದು ಒಳ ಮೀಸಲಾತಿ ಕಲ್ಪಿಸಿದ್ದರು. ಕಾಲಾನುಕ್ರಮದಲ್ಲಿ ರಾಜಕೀಯ ಕಾರಣಗಳಿಗಾಗಿ ಪಾಸ್ವಾನ್ ಜಾತಿಯನ್ನೂ ಮಹಾದಲಿತ ಪಟ್ಟಿಗೆ ಸೇರಿಸಬೇಕಾಯಿತು. ಇದೀಗ ಬಿಹಾರದಲ್ಲಿ ದಲಿತರೇ ಇಲ್ಲ, ಮಹಾದಲಿತರೇ ಎಲ್ಲ. ಬಿಹಾರದಿಂದ ಕೇಂದ್ರ ಮಂತ್ರಿಯಾಗಿರುವ ಜಿತನ್ ರಾಮ್ ಮಾಂಝೀ ಮೂಸಾಹರ್ ಎಂಬ ಅತಿ ಹಿಂದುಳಿದ ಪರಿಶಿಷ್ಟ ಜಾತಿಗೆ ಸೇರಿದವರು. ಒಂದು ಕಾಲದಲ್ಲಿ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾಗ ಬಿಹಾರದ ಮುಖ್ಯಮಂತ್ರಿಯಾಗಿ ಇವರನ್ನೇ ನೇಮಕ ಮಾಡಿದ್ದರು. ತರುವಾಯ ನಿತೀಶ್‌ಗೆ ಮುಖ್ಯಮಂತ್ರಿ ಪಟ್ಟವನ್ನು ಬಿಟ್ಟುಕೊಟ್ಟು ಮನಸ್ಸು ಕಹಿ ಮಾಡಿಕೊಂಡ ಜಿತನ್ ರಾಮ್ ತಮ್ಮದೇ ಪಕ್ಷ ಹಿಂದುಸ್ತಾನಿ ಆವಾಮ್ ಮೋರ್ಚಾ ಕಟ್ಟಿದರು. ಈ ಪಕ್ಷ ಇದೀಗ ಬಿಜೆಪಿಯ ಮಿತ್ರಪಕ್ಷ. ಒಳ ಮೀಸಲಾತಿ ಆದೇಶವನ್ನು ಜಾರಿಗೆ ತಂದು ಬಿಹಾರದ ಅಸಲಿ ಮಹಾದಲಿತರಿಗೆ ನ್ಯಾಯ ಒದಗಿಸಬೇಕೆಂದು ಜೀತನ್ ರಾಮ್ ಆಗ್ರಹಿಸಿದ್ದಾರೆ.
ಮುಖ್ಯವಾಗಿ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಬಿಜೆಪಿ ಈ ಎಲ್ಲ ಜಾಟವೇತರ ಜಾತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಹುತೇಕ ಯಶಸ್ಸು ಕಂಡಿದೆ. ಜಾಟವ ಜಾತಿಗೆ ಸೇರಿದ ಕುಮಾರಿ ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿ ಮತ್ತು ಅದೇ ಜಾತಿಗೆ ಸೇರಿದ ಚಂದ್ರಶೇಖರ ಆಜಾದ್ ಅವರ ಆಜಾದ್ ಸಮಾಜ್ ಪಾರ್ಟಿ (ಕಾನ್ಶೀರಾಮ್), ಪಾಸ್ವಾನ್ ಜಾತಿಗೆ ಸೇರಿದ ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿ, ರಾಮದಾಸ್ ಆಠವಲೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಲಾಲೂ ಪ್ರಸಾದ್ ಅವರ ರಾಷ್ಟ್ರೀಯ ಜನತಾದಳ ಒಳ ಮೀಸಲಾತಿಯನ್ನು ವಿರೋಧಿಸಿವೆ. ದಲಿತರ ಒಗ್ಗಟ್ಟನ್ನು ಒಡೆಯುವ ಹುನ್ನಾರ ಎಂದು ಪ್ರತಿಭಟಿಸಿವೆ.
ಕಾಂಗ್ರೆಸ್ ಪಕ್ಷ ಎರಡು ತಿಂಗಳಾದರೂ ತನ್ನ ಸ್ಪಷ್ಟ ನಿಲುವನ್ನು ಪ್ರಕಟಿಸಿಲ್ಲ. ಪಕ್ಷದೊಳಗೆ ಒಳ ಮೀಸಲಾತಿಯ ಪರ ಮತ್ತು ವಿರೋಧದ ನಿಲುವುಗಳೆರಡೂ ಬಲವಾಗಿರುವ ಕಾರಣ ‘ಎಚ್ಚರಿಕೆ’ಯ ಹೆಜ್ಜೆ ಇಡುತ್ತಿರುವುದಾಗಿ ಕಾಂಗ್ರೆಸ್ ಮೂಲಗಳು ಹೇಳಿವೆ. ಪರಾಮರ್ಶೆಗೆ ಸಮಿತಿಯೊಂದನ್ನು ರಚಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಸ್ಟ್ ಎರಡನೆಯ ವಾರದಲ್ಲಿ ಹೇಳಿದ್ದುಂಟು. ಜಾತಿ ಜನಗಣತಿ ನಡೆದು ಜಾತಿಗಳ ಜನಸಂಖ್ಯೆಯ ಆಧಾರದ ಪ್ರಕಾರ ಪಾಲು ಹಂಚಿಕೆಯಾಗಬೇಕು ಎನ್ನುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಾರ್ಟಿಯ ಆಗ್ರಹ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರುಕ್ಷಣವೇ ಜಾತಿಜನಗಣತಿ ನಡೆಯಲಿದೆ, ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ರಾಹುಲ್ ಗಾಂಧಿ ಪರಿಶಿಷ್ಟರ ಒಳ ಮೀಸಲಾತಿ ತೀರ್ಪು ಕುರಿತು ಬಾಯಿ ಬಿಟ್ಟಿಲ್ಲ.
ಬಿಜೆಪಿ ರಾಷ್ಟ್ರಮಟ್ಟದಲ್ಲಿ ತನ್ನ ನಿಲುವನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ವಿಧಾನಸಭಾ ಚುನಾವಣೆ ಎದುರಿಸಿದ ಹರಿಯಾಣದಲ್ಲಿ ಮಾದರಿ ಚುನಾವಣಾ ಸಂಹಿತೆ ಜಾರಿಯಲ್ಲಿದ್ದರೂ ಲೆಕ್ಕಿಸದೆ ಒಳ ಮೀಸಲಾತಿಯನ್ನು ಜಾರಿಗೆ ತರುವುದಾಗಿ ತನ್ನ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಅವರಿಂದ ಹೇಳಿಸಿತು. ಬಿಜೆಪಿ ಮೂರನೆಯ ಸಲ ಗೆದ್ದಿದೆ. ಹೊಸ ಮುಖ್ಯಮಂತ್ರಿ ಒಳ ಮೀಸಲಾತಿ ಜಾರಿಗೆ ಸಮಿತಿ, ಆಯೋಗ ಮುಂತಾದ ಕಾಲಹರಣ ತಂತ್ರಗಳಿಗೆ ಶರಣಾದರೆ ಅಚ್ಚರಿಪಡಬೇಕಿಲ್ಲ.
ಕೆನೆಪದರ ಅಥವಾ ಕ್ರೀಮೀ ಲೇಯರ್ ಸುಪ್ರೀಂ ಕೋರ್ಟ್ ತೀರ್ಪಿನ ಭಾಗವೇ ಅಲ್ಲ. ಆದರೂ ರಾಜಕೀಯ ಪಕ್ಷಗಳು ಕೆನೆಪದರದ ನೆವವನ್ನು ಮುಂದೆ ಮಾಡಿ ಒಳಮೀಸಲಾತಿಯನ್ನೂ ಅದರೊಂದಿಗೆ ಲಗತ್ತಿಸಿ ವಿರೋಧ ಮಾಡುತ್ತಿರುವುದು ವಿಡಂಬನೆಯೇ ಸರಿ.
ಸಿಪಿಎಂ ಒಳಮೀಸಲನ್ನು ಸ್ವಾಗತಿಸಿದೆ. ತೀರ್ಪಿನ ಭಾಗ ಅಲ್ಲದೆ ಹೋದರೂ, ಏಳು ಮಂದಿಯ ಪೈಕಿ ನಾಲ್ವರು ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮೀಸಲಾತಿಗೆ ‘ಕೆನೆಪದರ’ ಅನ್ವಯ ಆಗಬೇಕು ಎಂದಿರುವುದನ್ನು ತಾನು ವಿರೋಧಿಸುವುದಾಗಿ ಹೇಳಿದೆ.
ಮೂರು ದಶಕಗಳ ಹೋರಾಟದ ನಂತರವೂ ಮಾದಿಗ ಒಳಪಂಗಡ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಪುನಃ ಬೀದಿಗಿಳಿದು, ಪ್ರತಿಭಟನೆಗಳು ಸಿಡಿದಿವೆ. ಸುದೀರ್ಘ ಹೋರಾಟಗಳನ್ನು ರೂಪಿಸುವ ಎಚ್ಚರಿಕೆ ನೀಡಿವೆ. ಒಳ ಮೀಸಲಾತಿ ಜಾರಿ ಮಾಡುವ ತನಕ ಸರ್ಕಾರಿ ನೇಮಕಾತಿಗಳನ್ನು ತಡೆಹಿಡಿಯುವುದಾಗಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಾವಾಗಿಯೇ ಹೇಳಿದ್ದರು. ಆದರೆ, ಶಿಕ್ಷಕರ ನೇಮಕಾತಿ ಪತ್ರಗಳನ್ನು ಸದ್ದಿಲ್ಲದೆ ನೀಡಲಾಗುತ್ತಿದೆ ಎಂಬುದು ಕೃಷ್ಣ ಮಾದಿಗ ಅವರ ಆಪಾದನೆ.
ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿ ಮಾಡಿ ತಕ್ಷಣವೇ ಸುಗ್ರೀವಾಜ್ಞೆ ಹೊರಡಿಸಲಾಗುವುದು, ತೆಲಂಗಾಣವು ಒಳ ಮೀಸಲಾತಿಯನ್ನು ಜಾರಿ ಮಾಡುವ ಮೊದಲ ರಾಜ್ಯವಾಗಲಿದೆ ಎಂದು ಆ ರಾಜ್ಯದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಆಗಸ್ಟ್ 1ರಂದೇ ವಿಧಾನಸಭೆಯಲ್ಲಿ ಸಾರಿದ್ದರು. ಆದರೆ, ಸುಗ್ರೀವಾಜ್ಞೆಯ ಭರವಸೆಯನ್ನು ಈಡೇರಿಸಿಲ್ಲ. ಬದಲಿಗೆ ವಿಷಯವನ್ನು ಸಚಿವ ಸಂಪುಟ ಉಪಸಮಿತಿಗೆ ವಹಿಸಿದರು. ಈ ಉಪಸಮಿತಿಯು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಏಕಸದಸ್ಯ ನ್ಯಾಯಾಂಗ ಆಯೋಗ ರಚಿಸುವಂತೆ ಶಿಫಾರಸು ಮಾಡಿದೆ.
ದೊಡ್ಡ ಅಡಚಣೆಯೊಂದು ನಿವಾರಣೆಯಾಗಿದೆ. ಆದಷ್ಟು ಶೀಘ್ರವಾಗಿ ನಿಚ್ಚಳ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಪಿನ ಮರುದಿನ ಆಶ್ವಾಸನೆ ನೀಡಿದ್ದರು. ಆದರೆ, ಆ ಭರವಸೆಯಲ್ಲಿ ತುರ್ತು ಕಾಣಲಿಲ್ಲ. ಕೆನೆಪದರದ ಪ್ರಶ್ನೆಯೂ ಸೇರಿದಂತೆ ಪರಿಶಿಷ್ಟ ಜಾತಿಗಳ ನಾಯಕರು ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದಿದ್ದರು. ಆದರೆ, ಕೆನೆಪದರದ ಪ್ರಶ್ನೆ ತೀರ್ಪಿನ ಭಾಗವೇ ಅಲ್ಲ. ಒಳ ಮೀಸಲಾತಿಯ ಕುರಿತು ಆತಂಕ ಹೊಂದಿರುವ ಇತರೆ ಪರಿಶಿಷ್ಟ ಜಾತಿಗಳೊಂದಿಗೆ ಸಮಾಲೋಚನೆ ನಡೆಸಿ ಪರಿಹಾರವೊಂದನ್ನು ರೂಪಿಸಬೇಕಿದೆ.
ರಾಜ್ಯ ಕಾಂಗ್ರೆಸ್ ಪಕ್ಷ 2023ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲೇ ಒಳ ಮೀಸಲಾತಿಯನ್ನು ಜಾರಿಗೆ ತರುವ ಸ್ಪಷ್ಟ ಭರವಸೆ ನೀಡಿತ್ತು. ಈ ಭರವಸೆಯಿಂದಾಗಿ ಚುನಾವಣೆಯಲ್ಲಿ ತಾನು ಕಾಂಗ್ರೆಸ್ ಪಕ್ಷವನ್ನು ಗಣನೀಯವಾಗಿ ಬೆಂಬಲಿಸಿದ್ದಾಗಿ ಮಾದಿಗ ಒಳಪಂಗಡ ಹೇಳಿಕೊಂಡಿದೆ. ಸಿದ್ದರಾಮಯ್ಯ ಸರ್ಕಾರ ಇದೇ ವರ್ಷದ ಜನವರಿಯಲ್ಲಿ ಒಳ ಮೀಸಲಾತಿಯ ಚೆಂಡನ್ನು ಸಂವಿಧಾನ ತಿದ್ದುಪಡಿಯ ಹೆಸರಿನಲ್ಲಿ ಕೇಂದ್ರ ಸರ್ಕಾರದ ಅಂಗಳಕ್ಕೆ ಒಗೆದಿತ್ತು.
ಸಂವಿಧಾನ ತಿದ್ದುಪಡಿಯ ಮೂಲಕ ಒಳಮೀಸಲಾತಿಯನ್ನು ಜಾರಿಗೊಳಿಸಬೇಕೆಂಬ ಉಷಾ ಮೆಹ್ರಾ ರಾಷ್ಟ್ರೀಯ ಆಯೋಗದ ಶಿಫಾರಸಿನ ಕುರಿತು ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂಬುದು ಮುಖ್ಯಮಂತ್ರಿಯವರ ಆಪಾದನೆ. ಆದರೆ, ಉಷಾ ಮೆಹ್ರಾ ರಾಷ್ಟ್ರೀಯ ಆಯೋಗದ ಶಿಫಾರಸನ್ನು ಕಡೆಗಣಿಸಿ ಕುಳಿತ ಅಪರಾಧ ಕೇವಲ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ್ದಲ್ಲ. ಅವರು 8-9 ವರ್ಷಗಳ ಕಾಲ ಕೈಕಟ್ಟಿ ಕುಳಿತರೆ, ಈ ಹಿಂದಿನ ಮನಮೋಹನಸಿಂಗ್ ನೇತೃತ್ವದ ಸರ್ಕಾರ ಸುಮಾರು 6 ವರ್ಷ ಮೌನ ಧರಿಸಿತ್ತು.
ನ್ಯಾಯಮೂರ್ತಿ ಉಷಾ ಮೆಹ್ರಾ ಆಯೋಗ ರಚನೆಯಾದದ್ದು 2007ರಲ್ಲಿ. ಅದೂ ಅವಿಭಜಿತ ಆಂಧ್ರಪ್ರದೇಶ ಸರ್ಕಾರದ ಒಳಮೀಸಲಾತಿ ಕ್ರಮವನ್ನು ಸುಪ್ರೀಂ ಕೋರ್ಟು ರದ್ದು ಮಾಡಿದ ನಂತರ. ನೇಮಕಗೊಂಡ ಮರುವರ್ಷವೇ (2008ರ ಮೇ ತಿಂಗಳು) ಈ ಆಯೋಗ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿ ಅವಿಭಜಿತ ಆಂಧ್ರಪ್ರದೇಶದ ಒಳ ಮೀಸಲಾತಿಗೆ ಸೀಮಿತವಾಗಿದ್ದರೂ, ರಾಷ್ಟ್ರವ್ಯಾಪಿ ಸಾಮಾಜಿಕ ತುರ್ತಿನ ವ್ಯಾಪಕ ಪ್ರಶ್ನೆಯನ್ನು ಒಳಗೊಂಡಿತ್ತು. ಹೀಗಾಗಿಯೇ ಅದನ್ನು ರಾಷ್ಟ್ರೀಯ ಆಯೋಗ ಎಂದು ಕರೆಯಲಾಗಿತ್ತು. ಒಳ ಮೀಸಲಾತಿಯ ಅಗತ್ಯವನ್ನು ಎತ್ತಿ ಹಿಡಿದ ಆಯೋಗವು ಈ ದಿಸೆಯಲ್ಲಿ ಸಂವಿಧಾನ ತಿದ್ದುಪಡಿ ಆಗಬೇಕೆಂದು ಶಿಫಾರಸು ಮಾಡಿತ್ತು. ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಈ ವರದಿಯ ಕುರಿತು ನಾಮ ನಾಗೇಶ್ವರರಾವ್ ಪ್ರಶ್ನೆಗೆ 2010ರ ನವೆಂಬರ್ 29ರಂದು ಲೋಕಸಭೆಯಲ್ಲಿ ಲಿಖಿತ ಉತ್ತರವೊಂದನ್ನು ನೀಡಲಾಗಿದೆ. ‘ಉಷಾ ಮೆಹ್ರಾ ಆಯೋಗದ ಶಿಫಾರಸುಗಳ ಕುರಿತು ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ’ ಎಂದು ಅಂದಿನ ಕೇಂದ್ರ ಸಾಮಾಜಿಕ ನ್ಯಾಯ ಮಂತ್ರಿ ಡಿ.ನೆಪೋಲಿಯನ್ ಅವರ ಲಿಖಿತ ಉತ್ತರ ಹೇಳುತ್ತದೆ. ತರುವಾಯ 2014ರ ತನಕ ಯುಪಿಎ ಸರ್ಕಾರ ಈ ಆಯೋಗದ ಶಿಫಾರಸಿನ ತಂಟೆಗೆ ಹೋಗುವುದಿಲ್ಲ. ಆನಂತರ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕೂಡ ಯುಪಿಎ ಸರ್ಕಾರದ ಧೋರಣೆಯನ್ನೇ ಮುಂದುವರಿಸುತ್ತದೆ.
2021ರ ಆಗಸ್ಟ್ 11ರಂದು ಉಷಾ ಮೆಹ್ರಾ ಆಯೋಗದ ವರದಿ ಹಠಾತ್ತನೆ ಕುಟುಕು ಜೀವ ತಳೆಯುತ್ತದೆ. ‘ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ಕಲ್ಪಿಸಬೇಕೆಂದು ಕೋರಿ ತಮ್ಮ ವಿಧಾನಸಭೆಗಳಲ್ಲಿ ಅಂಗೀಕರಿಸಲಾದ ಗೊತ್ತುವಳಿಯ ಪ್ರತಿಯನ್ನು ಕೇಂದ್ರಕ್ಕೆ ಕಳಿಸಿವೆ. ಆಂಧ್ರಪ್ರದೇಶದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಉಷಾ ಮೆಹ್ರಾ ರಾಷ್ಟ್ರೀಯ ಆಯೋಗವು 2008ರಲ್ಲಿ ವರದಿ ಸಲ್ಲಿಸಿತ್ತು. ಈ ದಿಸೆಯಲ್ಲಿ ಸಂವಿಧಾನದ 341ನೆಯ ಕಲಂಗೆ ತಿದ್ದುಪಡಿ ತರುವಂತೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಕುರಿತು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಕೋರಿತ್ತು. ತಮ್ಮ ಅಭಿಪ್ರಾಯಗಳನ್ನು ತ್ವರಿತವಾಗಿ ತಿಳಿಸುವಂತೆ 2019ರ ಡಿಸೆಂಬರ್ ಒಂಬತ್ತರಂದು ನೆನಪಿಸಲಾಗಿತ್ತು. ಈ ವಿಷಯವು ಸುಪ್ರೀಂ ಕೋರ್ಟಿನಲ್ಲಿ ವಿಚಾರಣಾಧೀನವಾಗಿದೆ’ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಲಾದ ಲಿಖಿತ ಉತ್ತರದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಈ ಸಂಗತಿಯನ್ನು ತಿಳಿಸುತ್ತಾರೆ.
ಒಳ ಮೀಸಲಾತಿ ಬೇಡಿಕೆಯನ್ನು ಪರಿಶೀಲಿಸಲು ಸಮಿತಿಯೊಂದನ್ನು ನೇಮಕ ಮಾಡುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2023ರ ನವೆಂಬರ್ 11ರಂದು ಮಾದಿಗ ರಿಸರ್ವೇಷನ್ ಪೋರಾಟ ಸಮಿತಿಯ (ಎಂಆರ್‌ಪಿಎಸ್) ರ್‍ಯಾಲಿಯೊಂದರಲ್ಲಿ ಘೋಷಿಸುತ್ತಾರೆ. ಸಭೆ ಕೇಕೆ ಹಾಕಿ ಈ ಘೋಷಣೆಯನ್ನು ಸ್ವಾಗತಿಸಿತು. ವೇದಿಕೆಯ ಮೇಲಿದ್ದ ಎಂಆರ್‌ಪಿಎಸ್ ಮುಖ್ಯಸ್ಥ ಕೃಷ್ಣ ಮಾದಿಗ ಕಣ್ಣೀರಾಗುತ್ತಾರೆ. ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಸಂಘಟನೆಯು ಬಿಜೆಪಿಯನ್ನು ಬೆಂಬಲಿಸುವುದಾಗಿ ಘೋಷಿಸಿದರು. ಈಗಾಗಲೆ ಉಷಾ ಮೆಹ್ರಾ ಆಯೋಗದ ವರದಿಯ ಇರುವಿಕೆಯನ್ನು ಅವರ ಸಹೋದ್ಯೋಗಿಗಳು-ಅಧಿಕಾರಿಗಳು-ಸಹಾಯಕರು ಯಾರೂ ಅಂದು ಪ್ರಧಾನಿ ಅವರ ಗಮನಕ್ಕೆ ತರುವುದಿಲ್ಲ.
ಮೀಸಲಾತಿಯ ಪರಿಕಲ್ಪನೆಗೇ ಕುತ್ತು ಬಂದಿದ್ದು, ಸರ್ಕಾರಿ ವಲಯದಲ್ಲಿ ಅದನ್ನು ಕುಗ್ಗಿಸಲಾಗಿದೆ. ಖಾಸಗಿ ವಲಯದಲ್ಲಿ ಮೀಸಲಾತಿ ಇಲ್ಲ. ದಲಿತರು, ಬಹುಜನರು ಅಸ್ತಿತ್ವಕ್ಕಾಗಿ ಇನ್ನೂ ಬಹುದೊಡ್ಡ ಹೋರಾಟಗಳನ್ನು ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಯ ಒಳಪಂಗಡಗಳು ಇಲ್ಲದವರಿಗೆ ಕೊಟ್ಟು ಇದ್ದವರು ಕೊಂಚ ಹಿಂದೆ ಸರಿಯದೆ ಹೋದರೆ ದಲಿತವಿರೋಧಿ ಶಕ್ತಿಗಳ ಮೇಲುಗೈ ಗೋಡೆ ಮೇಲಿನ ಬರೆಹ.
ಲೇಖಕ: ಹಿರಿಯ ಪತ್ರಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.