ADVERTISEMENT

ಒಳ ಮೀಸಲಿನ ಒಡಲಾಳ: ‘ಮುಖ್ಯಮಂತ್ರಿಯಿಂದ ನ್ಯಾಯಾಂಗ ನಿಂದನೆ’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 23:30 IST
Last Updated 4 ಅಕ್ಟೋಬರ್ 2024, 23:30 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

ಭಾರತದಲ್ಲಿ ಸುಪ್ರೀಂ ಕೋರ್ಟ್‌ ನೀಡುವಂತಹ ತೀರ್ಪುಗಳು ಅಂತಿಮವಾಗಿರುತ್ತವೆ. 70 ವರ್ಷಗಳಿಂದ ಸುಪ್ರೀಂ ಕೋರ್ಟ್ ನೀಡಿರುವ ಸಾವಿರಾರು ತೀರ್ಪುಗಳಲ್ಲಿ ಆಗಸ್ಟ್‌ 1ರಂದು ಒಳಮೀಸಲಾತಿಗೆ ಸಂಬಂಧಿಸಿದ್ದು ಕೂಡ ಒಂದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯೊಳಗೆ ಒಳ ಮೀಸಲಾತಿಯನ್ನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪಿನಿಂದಾಗಿ ಈ ಸಂಬಂಧ ಇದ್ದ ಗೊಂದಲಕ್ಕೆ ತೆರೆಬಿದ್ದಂತಾಗಿದೆ.

ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮಾತಿನಲ್ಲಿ ಹೇಳುವುದಾದರೆ, ಅಸ್ಪೃಶ್ಯರು ಮತ್ತು ದುರ್ಬಲರು ತಮಗೆ ದಕ್ಕಬೇಕಾದ ನ್ಯಾಯೋಜಿತ ಅವಕಾಶಗಳನ್ನು ಹೋರಾಟಗಳ ಮೂಲಕ ಗಳಿಸಿಕೊಂಡಾಗ ಮಾತ್ರ ಸಹಜವಾಗಿ ಸಮಾನತೆ ಕಾಣಲು ಸಾಧ್ಯ. ಅಸ್ಪೃಶ್ಯರ ಸಮಸ್ಯೆ ಒಂದು ಸಾಮಾಜಿಕ ಸಮಸ್ಯೆ ಅಲ್ಲ; ಅದು ರಾಜಕೀಯ ಸಮಸ್ಯೆ. ಹಾಗಾಗಿ, ಒಳ ಮೀಸಲಾತಿಯ ಚೆಂಡು ಈಗ ನಮ್ಮನ್ನಾಳುವ ಸರ್ಕಾರಗಳ ಅಂಗಳಕ್ಕೆ ಬಿದ್ದಿದೆ. ಆಳುವ ಸರ್ಕಾರಗಳು ತಮ್ಮ ಇಚ್ಛಾಶಕ್ತಿಯ ಪ್ರದರ್ಶನದಿಂದ ನುಣುಚಿಕೊಳ್ಳದೆ, ಅವಕಾಶವಂಚಿತ ಸಮುದಾಯಗಳಿಗೆ ನ್ಯಾಯೋಚಿತವಾಗಿ ಮೀಸಲಾತಿ ವರ್ಗೀಕರಣವನ್ನು ರೂಪಿಸಬೇಕಿದೆ.

ADVERTISEMENT

1951ರ ಏಪ್ರಿಲ್ 9ರಂದು ಹಿಂದುಳಿದ ವರ್ಗದವರಿಗೆ ಹಾಗೂ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮೀಸಲಾತಿ ಸೌಲಭ್ಯವನ್ನು ಕಲ್ಪಿಸುವುದಕ್ಕೆ ಯಾವುದೇ ಅಡಚಣೆ ಇಲ್ಲ ಎಂದು ಸ್ಟೇಟ್ ಆಫ್ ಮದ್ರಾಸ್ ವಿರುದ್ಧ ಚಂಪಕ ದೊರೆರಾಜನ್ ಪ್ರಕರಣದಲ್ಲಿ ತೀರ್ಪು ನೀಡಿತ್ತು. 1992ರ ನವೆಂಬರ್‌ 16ರಂದು ನೀಡಿದ ಇಂದ್ರಾ ಸಾಹ್ನಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದ್ದು ಮತ್ತೊಂದು ಮಹತ್ವದ ತೀರ್ಪು; ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಯಾವುದೇ ರಾಜ್ಯವು ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಔದ್ಯೋಗಿಕ ಮೀಸಲಾತಿಯನ್ನು ಖಾತ್ರಿಪಡಿಸಿದೆ. ಈ ಎರಡು ಮಹತ್ವದ ತೀರ್ಪುಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಇನ್ನುಳಿದ ಆರು ನ್ಯಾಯಮೂರ್ತಿಗಳು ಒಳ ಮೀಸಲಾತಿ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಐತಿಹಾಸಿಕ ತೀರ್ಪನ್ನು ಪುನರ್ ಪರಿಶೀಲಿಸಬೇಕೆಂದು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ಹಾಗೆ ಸಲ್ಲಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಆದರೆ, ಕೆನೆಪದರ ಮತ್ತು ಮರುಪರಿಶೀಲನೆ ಅರ್ಜಿಯ ನೆಪ ಮುಂದೆ ಮಾಡಿ ಯಾವುದೇ ಸರ್ಕಾರಗಳು ಸುಪ್ರೀಂ ಕೋರ್ಟ್ ತೀರ್ಪಿನ ಅನುಷ್ಠಾನದಿಂದ ಹಿಂದೆ ಸರಿಯಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳಮೀಸಲಾತಿ ಜಾರಿ ಬಗ್ಗೆ ಪಕ್ಷದ ಹೈಕಮಾಂಡ್ ಜತೆ ಚರ್ಚೆ ಮಾಡಬೇಕು ಎಂದು ಹೇಳಿರುವುದು ನ್ಯಾಯಾಂಗ ನಿಂದನೆ ಎನ್ನಿಸಿಕೊಳ್ಳುತ್ತದೆ.

ಸ್ವಾಭಿಮಾನ ಮತ್ತು ಆತ್ಮಗೌರವದ ಬದುಕಿಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಒಳ ಮೀಸಲಾತಿ ಸಿಗಬೇಕು. ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಎಂದು ಹೇಳುವ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಒಳ ಮೀಸಲಾತಿಯನ್ನು ಹಂಚಿಕೆ ಮಾಡುವುದರ ಮೂಲಕ ತಮ್ಮ ಬದ್ಧತೆಯನ್ನು ತೋರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.