ADVERTISEMENT

ಆಳ-ಅಗಲ | ಮಕ್ಕಳ ನಾಪತ್ತೆ ಮತ್ತು ಅಪಹರಣ: ಕಳವಳ ಮೂಡಿಸಿದ ಏರಿಕೆ ಪ್ರಮಾಣ

ಪ್ರಜಾವಾಣಿ ವಿಶೇಷ
Published 21 ಫೆಬ್ರುವರಿ 2023, 22:30 IST
Last Updated 21 ಫೆಬ್ರುವರಿ 2023, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಜ್ಯದಲ್ಲಿ ಕಾಣೆಯಾಗುತ್ತಿರುವ ಮತ್ತು ಅಪಹರಣವಾಗುತ್ತಿರುವ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. 2018ರಿಂದ 2022ರ ಅಂತ್ಯದವರೆಗೆ ಒಟ್ಟು 9,223 ಮಕ್ಕಳು ಕಾಣೆಯಾಗಿದ್ದಾರೆ. ಹೀಗೆ ಕಾಣೆಯಾದ ಮಕ್ಕಳಲ್ಲಿ ಶೇ 88ರಷ್ಟು ಮಕ್ಕಳು ಪತ್ತೆಯಾಗಿದ್ದಾರೆ. ಆದರೆ, ಪತ್ತೆಯಾಗದ ಮಕ್ಕಳ ಸಂಖ್ಯೆ 1,063ರಷ್ಟಿದೆ. ರಾಜ್ಯ ಗೃಹ ಸಚಿವರು ವಿಧಾನ ಪರಿಷತ್ತಿಗೆ ನೀಡಿರುವ ಮಾಹಿತಿಯಲ್ಲಿ ಈ ದತ್ತಾಂಶಗಳು ಇವೆ.

2018ರಲ್ಲಿ ಕಾಣೆಯಾದ ಅಥವಾ ಅಪಹರಣವಾದ ಮಕ್ಕಳ ಒಟ್ಟು ಸಂಖ್ಯೆ 770 ಇತ್ತು. ನಂತರದ ವರ್ಷಗಳಲ್ಲಿ ಇದು ಏರಿಕೆಯಾಗುತ್ತಲೇ ಬಂದಿದೆ. 2019ರಲ್ಲಿ ಈ ಸಂಖ್ಯೆ 2,124ಕ್ಕೆ ಏರಿಕೆಯಾಗಿದೆ. ಕಾಣೆಯಾದವರ ಸಂಖ್ಯೆ ಒಂದೇ ವರ್ಷದಲ್ಲಿ ಶೇ 175ರಷ್ಟು ಏರಿಕೆಯಾಗಿದೆ. ನಂತರದ ವರ್ಷಗಳಲ್ಲಿ ಕಾಣೆಯಾದವರ ಸಂಖ್ಯೆ ಸ್ವಲ್ಪ ಇಳಿಕೆಯಾಗಿದೆಯಾದರೂ, ಆ ಸಂಖ್ಯೆ 2018ರ ಸಂಖ್ಯೆಗಿಂತ ಹೆಚ್ಚೇ ಇದೆ. 2022ರಲ್ಲಿ ಈ ಸಂಖ್ಯೆ 2,639ಕ್ಕೆ ಏರಿಕೆಯಾಗಿದೆ. 2018ರಲ್ಲಿ ಕಾಣೆಯಾದವರ ಸಂಖ್ಯೆಗೆ ಹೋಲಿಸಿದರೆ, 2022ರಲ್ಲಿ ಕಾಣೆಯಾದವರ ಸಂಖ್ಯೆಯಲ್ಲಿ ಆದ ಏರಿಕೆ ಪ್ರಮಾಣ ಶೇ 242.7ರಷ್ಟು.

2023ರ ಜನವರಿ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 249 ಮಕ್ಕಳು ಕಾಣೆಯಾಗಿದ್ದಾರೆ. ಇವರಲ್ಲಿ ಬಾಲಕರ ಸಂಖ್ಯೆ 69 ಮತ್ತು ಬಾಲಕಿಯರ ಸಂಖ್ಯೆ 180. ತಿಂಗಳೊಂದರಲ್ಲೇ ಇಷ್ಟು ಮಕ್ಕಳು ಕಾಣೆಯಾಗಿರುವುದು, ಈ ವರ್ಷವೂ ಮಕ್ಕಳು ಕಾಣೆಯಾಗುವ ಅಥವಾ ಅಪಹರಣವಾಗುವ ಪ್ರಕರಣಗಳು ಏರುಗತಿಯಲ್ಲಿ ಇರುವುದನ್ನೇ ಸೂಚಿಸುತ್ತವೆ.

ADVERTISEMENT

ಈ ವರದಿಯಲ್ಲಿ ಈ ಎಲ್ಲಾ ಪ್ರಕರಣಗಳನ್ನು ‘ಮಕ್ಕಳ ಕಾಣೆ/ಅಪಹರಣ ಪ್ರಕರಣಗಳು’ ಎಂದು ಗುರುತಿಸಲಾಗಿದೆ. ಇವುಗಳಲ್ಲಿ ಕಾಣೆಯಾದ ಪ್ರಕರಣಗಳೆಷ್ಟು ಮತ್ತು ಅಪಹರಣ ಪ್ರಕರಣಗಳೆಷ್ಟು ಎಂಬ ಮಾಹಿತಿಯನ್ನು ಪ್ರತ್ಯೇಕವಾಗಿ ನೀಡಿಲ್ಲ. ಹೀಗಾಗಿ ಮಕ್ಕಳು ಕಾಣೆಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚು ಇದೆಯೇ ಅಥವಾ ಮಕ್ಕಳು ಅಪಹರಣವಾದ ಪ್ರಕರಣಗಳ ಸಂಖ್ಯೆ ಹೆಚ್ಚು ಇದೆಯೇ ಎಂಬ ಮಾಹಿತಿ ಲಭ್ಯವಿಲ್ಲ.

ಬಾಲಕಿಯರೇ ಹೆಚ್ಚು

2018ರ ಜನವರಿ ಒಂದರಿಂದ 2022ರ ಡಿಸೆಂಬರ್‌ 31ರವರೆಗೆ ಒಟ್ಟು 9,223 ಮಕ್ಕಳು ಕಾಣೆಯಾಗಿದ್ದಾರೆ. ಆದರೆ ಕಾಣೆ
ಯಾದವರಲ್ಲಿ ಬಾಲಕಿಯರ ಪ್ರಮಾಣ ಶೇ 69ಕ್ಕಿಂತಲೂ ಹೆಚ್ಚು. ಅಂದರೆ ರಾಜ್ಯದಲ್ಲಿ ಕಾಣೆಯಾಗುತ್ತಿರುವ ಪ್ರತಿ ಮೂವರು ಮಕ್ಕಳಲ್ಲಿ ಇಬ್ಬರು ಬಾಲಕಿಯರು ಎಂಬುದನ್ನು ಈ ದತ್ತಾಂಶ ಹೇಳುತ್ತದೆ. ಕಾಣೆಯಾಗುತ್ತಿರುವ ಮಕ್ಕಳಲ್ಲಿ ಬಾಲಕರ ಪ್ರಮಾಣ
ಶೇ 30.25ರಷ್ಟಿದೆ.

ನಾಪತ್ತೆ/ಕಾಣೆಯಾದವರಲ್ಲಿ ಬಾಲಕರು ಹಾಗೂ ಬಾಲಕಿಯರ ಸಂಖ್ಯೆಯನ್ನು ಸೂಚಿಸುವ ಗ್ರಾಫಿಕ್ಸ್

ಶೇ 11.5ರಷ್ಟು ಮಕ್ಕಳು ಪತ್ತೆಯಾಗಿಲ್ಲ

ರಾಜ್ಯದಲ್ಲಿ ಕಾಣೆಯಾಗಿರುವ ಮಕ್ಕಳಲ್ಲಿ ಬಹುಪಾಲು ಮಕ್ಕಳು ಪತ್ತೆಯಾಗಿದ್ದಾರೆ. ಆದರೆ, ಈ ಐದು ವರ್ಷಗಳಲ್ಲಿ ಕಾಣೆಯಾದ ಮಕ್ಕಳಲ್ಲಿ ಪತ್ತೆಯಾಗದೇ ಇರುವ ಮಕ್ಕಳ ಪ್ರಮಾಣ ಶೇ 11.5ರಷ್ಟಿದೆ. ಹೀಗೆ ಪತ್ತೆಯಾಗದ ಮಕ್ಕಳ ಪ್ರಕರಣಗಳನ್ನು ಮಾನವ ಕಳ್ಳಸಾಗಣೆ ತಡೆ ಘಟಕಗಳಿಗೆ ವರ್ಗಾಯಿಸಲಾಗುತ್ತದೆ. ಹೀಗೆ ವರ್ಗಾಯಿಸಲಾದ ಮಕ್ಕಳ ಪ್ರಕರಣದ ಸ್ಥಿತಿಗತಿ ಏನು ಎಂಬುದರ ಮಾಹಿತಿಯನ್ನು ಸರ್ಕಾರ ನೀಡಿಲ್ಲ.

ಐದು ವರ್ಷಗಳಲ್ಲಿ ಕಾಣೆ/ನಾಪತ್ತೆಯಾದ ಮಕ್ಕಳ ಪೈಕಿ ಪತ್ತೆಯಾದವರು ಹಾಗೂ ಪತ್ತೆಯಾಗದವರ ಸಂಖ್ಯೆ ಸೂಚಿಸುವ ಗ್ರಾಫಿಕ್ಸ್

ಬೆಂಗಳೂರಿನ ಪಾಲು ಶೇ 45

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ನಾಪತ್ತೆಯಾದ ಹಾಗೂ ಅಪಹರಣಕ್ಕೆ ಒಳಗಾದ ಮಕ್ಕಳ ಪ್ರಮಾಣ ಬೆಂಗಳೂರಿ
ನಲ್ಲಿ ಅತ್ಯಧಿಕವಾಗಿದೆ. 4,180 ಮಕ್ಕಳು ಬೆಂಗಳೂರು ಒಂದರಿಂದಲೇ ಕಾಣೆಯಾಗಿ ದ್ದಾರೆ ಅಥವಾ ಅಪಹರಣಕ್ಕೆ ಒಳಗಾಗಿ
ದ್ದಾರೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಈ ಸ್ವರೂಪದ ಪ್ರಕರಣಗಳು ಏರಿಕೆಯಾಗುವ ಪ್ರವೃತ್ತಿ ಕಂಡುಬಂದಿದೆ. ಐದು ವರ್ಷ
ಗಳಲ್ಲಿ ನಡೆದ ಇಂತಹ ಪ್ರಕರಣಗಳಲ್ಲಿ ಬೆಂಗಳೂರಿನ ಪಾಲೇ ಶೇ 45.3ರಷ್ಟಿದೆ ಎಂದು ಸರ್ಕಾರ ಹೇಳಿದೆ.

ಬೆಂಗಳೂರಿನಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆಯು ಐದು ವರ್ಷಗಳಲ್ಲಿ ಶೇ 230ರಷ್ಟು ಏರಿಕೆಯಾಗಿದೆ. 2018ರಲ್ಲಿ ಬಾಲಕ, ಬಾಲಕಿ ಸೇರಿದಂತೆ 261 ಮಕ್ಕಳು ನಾಪತ್ತೆ ಅಥವಾ ಅಪಹರಣಕ್ಕೆ ಒಳಗಾಗಿದ್ದರು. ಇವರ ಸಂಖ್ಯೆ 2022ರಲ್ಲಿ 869ಕ್ಕೆ ಏರಿಕೆಯಾಗಿದೆ. ಕೋವಿಡ್‌ ಸಾಂಕ್ರಾಮಿಕ ಹಾಗೂ ಆ ಕಾರಣಕ್ಕೆ ವಿಧಿಸಿದ್ದ ಲಾಕ್‌ಡೌನ್ ಅವಧಿಯಲ್ಲೂ 600ಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದರು ಎಂಬುದು ದತ್ತಾಂಶಗಳಿಂದ ತಿಳಿದುಬಂದಿದೆ. ಬಹುತೇಕ ಘಟನೆಗಳು ನಗರ ಪ್ರದೇಶಗಳಲ್ಲಿ ವರದಿಯಾಗಿವೆ. 2023ರ ಜನವರಿ ತಿಂಗಳೊಂದರಲ್ಲೇ 30 ಬಾಲಕರು ಹಾಗೂ 48 ಬಾಲಕಿಯರು ಬೆಂಗಳೂರು ಜಿಲ್ಲೆಯಲ್ಲಿ ನಾಪತ್ತೆ ಅಥವಾ ಅಪಹರಣಕ್ಕೆ ಒಳಗಾಗಿದ್ದಾರೆ.

ಬೆಂಗಳೂರು ಹೊರತುಪಡಿಸಿದರೆ, ಅತಿಹೆಚ್ಚು ಮಕ್ಕಳು ನಾಪತ್ತೆಯಾದ ಅಥವಾ ಅಪಹರಣಕ್ಕೆ ಒಳಗಾದ ಪ್ರಕರಣಗಳು ವರದಿಯಾಗಿರುವುದು ಮೈಸೂರು ಜಿಲ್ಲೆಯಲ್ಲಿ. ಇಲ್ಲಿ ಐದು ವರ್ಷಗಳಲ್ಲಿ 527 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಮಂಡ್ಯ ಇದ್ದು, ಇಲ್ಲಿ 424 ಮಕ್ಕಳು ನಾಪತ್ತೆ ಅಥವಾ ಅಪಹರಣಕ್ಕೆ ಒಳಗಾಗಿದ್ದಾರೆ. ರಾಮನಗರ, ದಾವಣಗೆರೆ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ 300ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಮೈಸೂರಿನಲ್ಲಿ, 2018ಕ್ಕೆ ಹೋಲಿಸಿ ದರೆ 2022ರಲ್ಲಿ ಶೇ 72ರಷ್ಟು ಅಧಿಕ ಪ್ರಕರಣಗಳು ವರದಿಯಾಗಿವೆ. ಮಂಡ್ಯ
ದಲ್ಲಿ ಐದು ವರ್ಷಗಳಲ್ಲಿ ಶೇ 129ರಷ್ಟು ಪ್ರಕರಣಗಳು ಅಧಿಕವಾಗಿವೆ. ಶಿವಮೊಗ್ಗ ದಲ್ಲಿ 27ರಿಂದ 117ಕ್ಕೆ ಏರಿಕೆಯಾಗಿದೆ. ರಾಮನಗರದಲ್ಲೂ 15ರಿಂದ 116ಕ್ಕೆ ತಲುಪಿವೆ. ದಾವಣಗೆರೆ ಜಿಲ್ಲೆಯಲ್ಲಿ ಶೇ 200ರಷ್ಟು ಹೆಚ್ಚಳ ಕಂಡುಬಂದಿದೆ.

ಯಾದಗಿರಿ ಜಿಲ್ಲೆಯಲ್ಲಿ ಈ ಸ್ವರೂಪದ ಕಡಿಮೆ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ 24 ಪ್ರಕರಣ
ಗಳು ದಾಖಲಾಗಿದ್ದು, ಇದು ರಾಜ್ಯದಲ್ಲೇ ಕಡಿಮೆ. ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಉಡುಪಿ, ಚಾಮರಾಜ ನಗರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಐದು ವರ್ಷಗಳಲ್ಲಿ ದಾಖಲಾದ ಪ್ರಕರಣಗಳು ನೂರರ ಒಳಗಿವೆ ಎಂದು ದಾಖಲೆಗಳು ಹೇಳುತ್ತವೆ.

ಪ್ರದೇಶವಾರು ಪರಿಗಣಿಸಿದರೆ, ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲೇ ಅತಿಹೆಚ್ಚು ಪ್ರಕರಣಗಳು ಕಂಡುಬಂದಿವೆ. ದಕ್ಷಿಣಕ್ಕೆ ಹೋಲಿಸಿದರೆ, ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ದಾಖಲಾದ ಈ ಸ್ವರೂಪದ ಪ್ರಕರಣಗಳ ಸಂಖ್ಯೆ ಕಡಿಮೆ. ರೈಲು ನಿಲ್ದಾಣಗಳ ಪೊಲೀಸ್‌ ಠಾಣೆಗಳಲ್ಲಿ ಇಂತಹ 17 ಪ್ರಕರಣಗಳು ದಾಖಲಾಗಿವೆ.

ಐದು ವರ್ಷಗಳಲ್ಲಿ ಕಾಣೆಯಾದ/ನಾಪತ್ತೆಯಾದ ಮಕ್ಕಳ ಸಂಖ್ಯೆಯನ್ನು ಸೂಚಿಸುವ ಗ್ರಾಫಿಕ್ಸ್

ನಾಪತ್ತೆ ತಡೆಗೆ ಹಲವು ಕ್ರಮ...

ನಾಪತ್ತೆಯಾದ ಮತ್ತು ಅಪಹರಣಕ್ಕೆ ಒಳಗಾದ ಮಕ್ಕಳ ಪತ್ತೆಗೆ ರಾಜ್ಯ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಗೃಹ ಸಚಿವರು ವಿಧಾನ ಪರಿಷತ್ತಿಗೆ ಮಾಹಿತಿ ನೀಡಿದ್ದಾರೆ. ಅಂತಹ ಕ್ರಮಗಳು ಇಂತಿವೆ;

*ಮಕ್ಕಳು ನಾಪತ್ತೆಯಾದ ಮತ್ತು ಅಪಹರಣವಾದ ಪ್ರಕರಣಗಳಲ್ಲಿ ಕ್ಷಿಪ್ರವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ರಾಜ್ಯದ 1,050 ಪೊಲೀಸ್‌ ಠಾಣೆಗಳಲ್ಲಿ ಸಹಾಯ ಕೇಂದ್ರಗಳನ್ನು ಆರಂಭಿಸಲಾಗಿದೆ

*ಇಂತಹ ಪ್ರಕರಣಗಳಲ್ಲಿ ಮಕ್ಕಳನ್ನು ತ್ವರಿತವಾಗಿ ಪತ್ತೆ ಮಾಡಿ, ರಕ್ಷಿಸುವ ದೃಷ್ಟಿಯಿಂದ ರಾಜ್ಯದ ಒಟ್ಟು 35 ಮಹಿಳಾ ಪೊಲೀಸ್‌ ಠಾಣೆಗಳಲ್ಲಿ ಮಾನವ ಕಳ್ಳಸಾಗಣೆ ತಡೆ ಘಟಕಗಳನ್ನು ಆರಂಭಿಸಲಾಗಿದೆ

*ಮಕ್ಕಳು ಕಾಣೆಯಾದ ಪ್ರಕರಣಗಳ ಮಾಹಿತಿಯನ್ನು ಕೇಂದ್ರ ಸರ್ಕಾರದ ‘ಕಾಣೆಯಾದ ಮಕ್ಕಳ ಪತ್ತೆ ಟ್ರ್ಯಾಕರ್‌’ ವ್ಯವಸ್ಥೆಯಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಈ ಪೋರ್ಟಲ್‌ನಲ್ಲಿ ಇರುವ ಮಾಹಿತಿಯ ಆಧಾರದಲ್ಲಿ ಹೊರ ರಾಜ್ಯದ ಪೊಲೀಸರೂ, ಈ ಪ್ರಕರಣಗಳ ಮೇಲೆ ನಿಗಾ ಇರಿಸುತ್ತಾರೆ

*ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡದಂತೆ, ಆಸೆ–ಆಮಿಷಗಳನ್ನು ಒಡ್ಡುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮಕ್ಕಳಿಗೆ ತಿಳಿವಳಿಕೆ ನೀಡಲಾಗುತ್ತಿದೆ

*ಮಾನವ ಕಳ್ಳಸಾಗಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ

ಐದು ವರ್ಷಗಳಲ್ಲಿ ಕಾಣೆಯಾದ/ನಾಪತ್ತೆಯಾದ ಮಕ್ಕಳ ಜಿಲ್ಲಾವಾರು ಸಂಖ್ಯೆಯನ್ನು ಸೂಚಿಸುವ ನಕ್ಷೆ

ಆಧಾರ: ವಿಧಾನ ಪರಿಷತ್ತಿನಲ್ಲಿ ರಾಜ್ಯ ಗೃಹ ಇಲಾಖೆ ನೀಡಿರುವ ಮಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.