ADVERTISEMENT

ಆಳ-ಅಗಲ | ಬ್ರಿಕ್ಸ್ ಶೃಂಗಸಭೆ: ಕದನ ಕುತೂಹಲ

ಸಂಘರ್ಷದ ವಾತಾವರಣದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ತರಹೇವಾರಿ ಲೆಕ್ಕಾಚಾರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 0:18 IST
Last Updated 23 ಅಕ್ಟೋಬರ್ 2024, 0:18 IST
<div class="paragraphs"><p>ನರೇಂದ್ರ ಮೋದಿ, ವ್ಲಾದಿಮಿರ್ ಪುಟಿನ್</p></div>

ನರೇಂದ್ರ ಮೋದಿ, ವ್ಲಾದಿಮಿರ್ ಪುಟಿನ್

   

(ರಾಯಿಟರ್ಸ್ ಚಿತ್ರ)

ರಷ್ಯಾದ ಕಜಾನ್ ನಗರದಲ್ಲಿ 16ನೇ ಬ್ರಿಕ್ಸ್ ಶೃಂಗಸಭೆ ಆರಂಭವಾಗಿದೆ. ಉಕ್ರೇನ್ ಯುದ್ಧದಿಂದಾಗಿ ವಿಶ್ವದ ಹಲವು ರಾಷ್ಟ್ರಗಳ ವಿರೋಧ ಎದುರಿಸುತ್ತಿರುವ ರಷ್ಯಾ ಅಧ್ಯಕ್ಷ ಪುಟಿನ್‌ಗೆ ಈ ಸಭೆಯು ಮಹತ್ವದ್ದಾಗಿದೆ. ಚೀನಾಗೆ ಈ ಸಂಬಂಧ ಹಲವು ಲೆಕ್ಕಾಚಾರ ಇದ್ದರೆ, ದ್ವಿಪಕ್ಷೀಯ ಮಾತುಕತೆ ಸೇರಿದಂತೆ ಹಲವು ನೆಲೆಯಲ್ಲಿ ಭಾರತಕ್ಕೂ ಇದು ಮುಖ್ಯವಾದುದಾಗಿದೆ. ಜಗತ್ತು ಹಲವು ರೀತಿಯ ಸಂಘರ್ಷಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಬ್ರಿಕ್ಸ್ ಸಮಾವೇಶ ನಡೆಯುತ್ತಿದ್ದು, ಅಮೆರಿಕವೂ ಸೇರಿದಂತೆ ರಾಷ್ಟ್ರ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಇದು ಎಂಥ ಪರಿಣಾಮಗಳನ್ನು ಉಂಟುಮಾಡಲಿದೆ ಎನ್ನುವ ಕುತೂಹಲ ಜಾಗತಿಕ ವಲಯದಲ್ಲಿದೆ

ADVERTISEMENT

ಜಗತ್ತಿನ ಬೆಳೆಯುತ್ತಿರುವ ಆರ್ಥಿಕತೆಯ ದೇಶಗಳಾದ ಭಾರತ, ಚೀನಾ, ಸೌದಿ ಆರೇಬಿಯಾ, ಯುಎಇ ಸೇರಿದಂತೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿರುವ ಶೃಂಗಸಭೆಯತ್ತ ಇಡೀ ವಿಶ್ವವೇ ಗಮನ ನೆಟ್ಟಿದೆ. 2006ರಲ್ಲಿ ಬ್ರಿಕ್ ಆರಂಭವಾದಾಗ (ದಕ್ಷಿಣ ಆಫ್ರಿಕಾ ಸೇರ್ಪಡೆಗೊಂಡ ನಂತರ ಅದು ಬ್ರಿಕ್ಸ್ ಆಯಿತು) ಅದನ್ನು ಜಿ–20ಗೆ ವಿರುದ್ಧವಾದ ಕೂಟ ಎಂದೇ ಕೆಲವರು ಅರ್ಥೈಸಿದ್ದರು. ಜಗತ್ತಿನ ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳ ಕೂಟವಾಗಿದ್ದ ಬ್ರಿಕ್ಸ್, ಪಾಶ್ಚಿಮಾತ್ಯ ಮತ್ತು ಐರೋಪ್ಯ ರಾಷ್ಟ್ರಗಳ ಜಾಗತಿಕ ಏಕಸ್ವಾಮ್ಯಕ್ಕೆ ಸಡ್ಡು ಹೊಡೆಯುವ ಯತ್ನ ಎಂದೇ ವಿಶ್ಲೇಷಿಸಲಾಗಿತ್ತು. ಈ ದಿಸೆಯಲ್ಲಿ ಬ್ರಿಕ್ಸ್ ಶೃಂಗಸಭೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಕುತೂಹಲವಿದ್ದು, ಅಲ್ಲಿನ ಬೆಳವಣಿಗೆಗಳ ಬಗ್ಗೆ ಅರಿಯಲು ಜಗತ್ತಿನ ಪ್ರಮುಖ ರಾಷ್ಟ್ರಗಳು ಕುತೂಹಲದಿಂದ ಕಾಯುತ್ತಿವೆ. 

16ನೇ ಬ್ರಿಕ್ಸ್ ಶೃಂಗಸಭೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಟ್ಟಿಗಂತೂ ಬಹಳ ಮುಖ್ಯವಾದ ಕೂಟವಾಗಿದೆ. ಉಕ್ರೇನ್ ಯುದ್ಧದ ಸಂಬಂಧ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ (ಐಸಿಸಿ) ಪುಟಿನ್ ಬಂಧನಕ್ಕೆ ವಾರಂಟ್ ಜಾರಿ ಮಾಡಿದೆ. ರಷ್ಯಾ ಮೇಲೆ ಹಲವು ರಾಷ್ಟ್ರಗಳು ನಿರ್ಬಂಧಗಳನ್ನು ಹೇರಿವೆ. ಜಾಗತಿಕ ಮಟ್ಟದಲ್ಲಿ ರಷ್ಯಾವನ್ನು ಒಬ್ಬಂಟಿಯನ್ನಾಗಿಸುವಂಥ ಬೆಳವಣಿಗೆಗಳ ನಡುವೆ ಬ್ರಿಕ್ಸ್ ಶೃಂಗಸಭೆ ಅದಕ್ಕೆ ವರದಾನವಾಗಿ ಒದಗಿದೆ. ಜಾಗತಿಕ ಮಟ್ಟದ 20ಕ್ಕೂ ಹೆಚ್ಚು ನಾಯಕರು ಅಲ್ಲಿ ನೆರೆಯುವುದು, ಅವರೊಂದಿಗೆ ಪುಟಿನ್ ಮಾತುಕತೆ ನಡೆಸುವುದು ರಷ್ಯಾವನ್ನು ಏಕಾಂಗಿಯನ್ನಾಗಿಸುವ ಪ್ರಯತ್ನಗಳನ್ನು ವಿಫಲಗೊಳಿಸಲಿದೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ. ವಿಶೇಷ ಎಂದರೆ, ಕಳೆದ ವರ್ಷ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಬ್ರಿಕ್ಸ್ ಸಮ್ಮೇಳನದಲ್ಲಿ ಐಸಿಸಿಯ ವಾರಂಟ್ ಕಾರಣದಿಂದ ಪುಟಿನ್ ರಷ್ಯಾದಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. 

ಉಕ್ರೇನ್ ಯುದ್ಧ ಆರಂಭವಾದ ನಂತರ ರಷ್ಯಾದಲ್ಲಿ ನಡೆಯುತ್ತಿರುವ ಮೊದಲ ಮಹತ್ವದ ಅಂತರರಾಷ್ಟ್ರೀಯ ಸಮಾವೇಶ ಇದಾಗಿದೆ. ಹಾಗೆಯೇ ಈಜಿಪ್ಟ್, ಇಥಿಯೋಪಿಯಾ, ಯುಎಇ, ಇರಾನ್, ಸೌದಿ ಅರೇಬಿಯಾ ದೇಶಗಳು ಬ್ರಿಕ್ಸ್‌ ಸೇರ್ಪಡೆಗೊಂಡ ನಂತರ ನಡೆಯುತ್ತಿರುವ ಮೊದಲ ಶೃಂಗಸಭೆಯೂ ಹೌದು. ಭಾರತವು ಜಾಗತಿಕ ಅಭಿವೃದ್ಧಿ ಕಾರ್ಯಸೂಚಿ, ಬಹುಪಕ್ಷೀಯ ಮಾತುಕತೆ, ಹವಾಮಾನ ಬದಲಾವಣೆ, ಆರ್ಥಿಕ ವಿಚಾರಗಳಲ್ಲಿ ಇತರೆ ರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸುವ ಸಂಬಂಧ ಮಾತುಕತೆ ನಡೆಸುವ ಇರಾದೆ ಹೊಂದಿದೆ. ಚೀನಾ, ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳಲ್ಲಿ ವಿವಿಧ ಬೃಹತ್ ಯೋಜನೆಗಳಿಗೆ ಹಣಕಾಸು, ಇತರೆ ನೆರವು ನೀಡುವ ಮೂಲಕ ಪರೋಕ್ಷ ಹಿಡಿತ ಸಾಧಿಸುವ ದಿಕ್ಕಿನಲ್ಲಿ ಪ್ರಯತ್ನ ನಡೆಸುತ್ತಿದೆ. 

ಸಾಮೂಹಿಕ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಮಟ್ಟದಲ್ಲಿ ಸಂಪನ್ಮೂಲಗಳ ಸಮಾನ ಹಂಚಿಕೆಯ ಗುರಿಗಳನ್ನು ಹೊಂದಿದ್ದೇವೆ ಎನ್ನುವುದು ಬ್ರಿಕ್ಸ್ ದೇಶಗಳ ಹೇಳಿಕೆ. ಆದರೆ, ಬ್ರಿಕ್ಸ್‌ನ ದೂರಗಾಮಿ ಉದ್ದೇಶಗಳ ಬಗೆಗೂ ವಿಶ್ವಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಏಕಸ್ವಾಮ್ಯದ ವಿರುದ್ಧ ಪ್ರಬಲ ಜಾಗತಿಕ ದಕ್ಷಿಣವನ್ನು ಕಟ್ಟುವುದು, ಅದಕ್ಕೆ ಪೂರಕವಾಗಿ ಆರ್ಥಿಕ, ರಾಜಕೀಯ ವಿಚಾರಗಳಲ್ಲಿ ಸಮನ್ವಯ ಸಾಧಿಸುವುದು; ಒಟ್ಟಾರೆಯಾಗಿ, ಜಾಗತಿಕ ಅಧಿಕಾರ ಚಿತ್ರಣದಲ್ಲಿ ಗಮನಾರ್ಹ ಬದಲಾವಣೆ ತರುವುದು ಕೂಟದ ಉದ್ದೇಶ ಎನ್ನಲಾಗುತ್ತಿದ್ದು, ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪುಟಿನ್ ಆಡಿರುವ ಮಾತುಗಳು ಇದನ್ನೇ ಧ್ವನಿಸುತ್ತಿವೆ.

ಬ್ರಿಕ್ಸ್ ರಾಷ್ಟ್ರಗಳ ಹೆಚ್ಚುತ್ತಿರುವ ಆರ್ಥಿಕ ಮತ್ತು ರಾಜಕೀಯ ಪ್ರಭಾವದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿರುವ ಪುಟಿನ್, ‘ಇದು ಯಾರೂ ನಿರಾಕರಿಸಲಾಗದ ವಾಸ್ತವ’ ಎಂದಿದ್ದಾರೆ. ‘ಬ್ರಿಕ್ಸ್ ಮತ್ತು ಇತರ ಸಮಾನ ಆಸಕ್ತಿಯ ರಾಷ್ಟ್ರಗಳು ಜೊತೆಗೂಡಿ ಕೆಲಸ ಮಾಡಿದರೆ, ಹೊಸ ಜಾಗತಿಕ ವ್ಯವಸ್ಥೆಯ ಸೃಷ್ಟಿಗೆ ನಾಂದಿ ಹಾಡಬಹುದಾಗಿದೆ’ ಎಂದೂ ಹೇಳಿರುವ ಅವರು, ‘ಬ್ರಿಕ್ಸ್ ಎನ್ನುವುದು ಪಶ್ಚಿಮ ವಿರೋಧಿ ಒಕ್ಕೂಟ’ ಎನ್ನುವುದನ್ನು ನಿರಾಕರಿಸಿದ್ದಾರೆ.

ಶೃಂಗಸಭೆಯಲ್ಲಿ ರಷ್ಯಾ–ಉಕ್ರೇನ್ ಯುದ್ಧದ ಬಗ್ಗೆ ಸಹಜವಾಗಿಯೇ ಚರ್ಚೆ ನಡೆಯಲಿದೆ. ಜತೆಗೆ ಇರಾನ್–ಇಸ್ರೇಲ್ ಸಂಘರ್ಷವೂ ಸೇರಿದಂತೆ ಮಧ್ಯಪ್ರಾಚ್ಯದ ಬಿಕ್ಕಟ್ಟು, ಇಸ್ರೇಲ್‌ಗೆ ಅಮೆರಿಕದ ಬೆಂಬಲ ಮತ್ತಿತರ ವಿಚಾರಗಳೂ ಚರ್ಚೆಯಾಗಲಿವೆ. ಬ್ರಿಕ್ಸ್ ಶೃಂಗಸಭೆಯಿಂದ ಕೂಟದ ಹೊರಗೆ ಮತ್ತು ಒಳಗೆ ಎಂಥ ಪರಿಣಾಮಗಳು ಘಟಿಸಲಿವೆ ಎನ್ನುವ ಕುತೂಹಲವೂ ವ್ಯಾಪಕವಾಗಿದೆ.   

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಸನಿಹದಲ್ಲಿದೆ. ಚುನಾವಣೆಯಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವುದು ಅಮೆರಿಕ ಮತ್ತು ಇತರ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ದಿಸೆಯಲ್ಲಿಯೂ ಬ್ರಿಕ್ಸ್ ಶೃಂಗಸಭೆಗೆ ವಿಶೇಷ ಮಹತ್ವ ಇದೆ. 

ಪರಸ್ಪರ ಸಹಕಾರದ ಉದ್ದೇಶ

ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳಾದ ಬ್ರೆಜಿಲ್‌, ರಷ್ಯಾ, ಭಾರತ ಮತ್ತು ಚೀನಾಗಳು 2006ರಲ್ಲಿ ಒಟ್ಟಾಗಿ ಹುಟ್ಟುಹಾಕಿದ ಸಂಘಟನೆ ‘ಬ್ರಿಕ್‌’. ನಾಲ್ಕು ವರ್ಷಗಳ ಬಳಿಕ, 2010ರಲ್ಲಿ ದಕ್ಷಿಣ ಆಫ್ರಿಕಾ ಕೂಡ ಈ ಕೂಟದ ಸದಸ್ಯ ರಾಷ್ಟ್ರವಾಯಿತು. ಆ ನಂತರ ಇದು ‘ಬ್ರಿಕ್ಸ್‌’ ಆಯಿತು. 2023ರಲ್ಲಿ ನಾಲ್ಕು ರಾಷ್ಟ್ರಗಳ (ಈಜಿಪ್ಟ್‌, ಇರಾನ್‌, ಇಥಿಯೋಪಿಯ, ಯುಎಇ) ಸೇರ್ಪಡೆಯನ್ನು ಘೋಷಿಸಲಾಗಿದ್ದು, ಈ ವರ್ಷದ ಜನವರಿಯಲ್ಲಿ ಸೌದಿ ಅರೇಬಿಯಾವೂ ಕೂಟವನ್ನು ಸೇರಿದೆ. ಸದ್ಯ 10 ದೇಶಗಳು ಸದಸ್ಯತ್ವ ಹೊಂದಿವೆ. ಮಲೇಷ್ಯಾ, ಥಾಯ್ಲೆಂಡ್‌ಗಳಂತಹ ದೇಶಗಳು ಈ ಸಂಘಟನೆಯನ್ನು ಸೇರಲು ಪ್ರಯತ್ನಿಸುತ್ತಿವೆ.

ವ್ಯಾಪಾರ, ಇಂಧನ, ಭದ್ರತೆ, ಅಭಿವೃದ್ಧಿ, ಹವಾಮಾನ ಬದಲಾವಣೆ ಸೇರಿದಂತೆ ಜಾಗತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಪರಸ್ಪರ ಸಹಕಾರ ನೀಡುವ ಧ್ಯೇಯೋದ್ದೇಶವನ್ನು ಬ್ರಿಕ್ಸ್ ಹೊಂದಿದೆ. ಜಾಗತಿಕ ಮಟ್ಟದಲ್ಲಿ ಅಮೆರಿಕ ಸೇರಿದಂತೆ ಪಶ್ಚಿಮದ ಅಭಿವೃದ್ಧಿ ಹೊಂದಿದ ದೇಶಗಳಿಗೆ ಪರ್ಯಾಯವಾದ ಶಕ್ತಿಯನ್ನು ಹುಟ್ಟುಹಾಕುವ ಲೆಕ್ಕಾಚಾರವೂ ಬ್ರಿಕ್ಸ್‌ ರಾಷ್ಟ್ರಗಳದ್ದು.

ವಿಶ್ವ ಬ್ಯಾಂಕ್‌ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮಾದರಿಯಲ್ಲೇ ಬ್ರಿಕ್ಸ್‌ ರಾಷ್ಟ್ರಗಳು ರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್‌ (ಎನ್‌ಡಿಬಿ) ಮತ್ತು ಆಪದ್ಧನ ವ್ಯವಸ್ಥೆಯನ್ನೂ (ಕಂಟಿಂಜೆಂಟ್‌ ರಿಸರ್ವ್‌ ಅರೇಂಜ್‌ಮೆಂಟ್‌– ಸಿಆರ್‌ಎ) ಹುಟ್ಟು ಹಾಕಿವೆ.

ಸದಸ್ಯ ರಾಷ್ಟ್ರಗಳು ಬ್ರಿಕ್ಸ್‌ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಸರದಿಯಂತೆ ವಹಿಸಿಕೊಳ್ಳುತ್ತವೆ. ಭಾರತ ಈವರೆಗೆ ಮೂರು ಬಾರಿ ಅಧ್ಯಕ್ಷ ಸ್ಥಾನ ಪಡೆದಿದೆ. ಈ ವರ್ಷ ರಷ್ಯಾ ಈ ಜವಾಬ್ದಾರಿಯನ್ನು ವಹಿಸಿದೆ.

ಬ್ರಿಕ್ಸ್‌ ವಿಸ್ತರಣೆಯಿಂದ ಭಾರತಕ್ಕೆ ಅನುಕೂಲ?

‘ಬ್ರಿಕ್ಸ್‌’, ಚೀನಾ ಪ್ರೇರಿತ ಸಂಘಟನೆ ಎಂಬ ಅಭಿಪ್ರಾಯ ಜಾಗತಿಕ ಮಟ್ಟದಲ್ಲಿದ್ದರೂ, ಇದರ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿರುವ ಭಾರತವು ಸಂಘಟನೆ ರೂಪುಗೊಳ್ಳುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಜಾಗತಿಕ ಮಟ್ಟದ ವೇದಿಕೆಗಳಲ್ಲಿ ಭಯೋತ್ಪಾದನೆ, ಹವಾಮಾನ ಬದಲಾವಣೆಯಂತಹ ಜಾಗತಿಕ ವಿಚಾರಗಳನ್ನು ಪ್ರಮುಖವಾಗಿ
ಪ್ರಸ್ತಾಪಿಸುತ್ತಿರುವ ಭಾರತ, ಜಾಗತಿಕ ನಾಯಕತ್ವ ವಹಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಪಶ್ಚಿಮ ಮತ್ತು ಪೂರ್ವ ರಾಷ್ಟ್ರಗಳ ನಡುವಿನ ಕೊಂಡಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ. ರಷ್ಯಾ, ಇರಾನ್‌ನಂತಹ ಅಮೆರಿಕದ ವಿರೋಧಿ ರಾಷ್ಟ್ರಗಳೊಂದಿಗೆ ಭಾರತ ಉತ್ತಮ ಸ್ನೇಹ ಹೊಂದಿದ್ದರೂ, ಅಮೆರಿಕ ಸೇರಿದಂತೆ ಪಶ್ಚಿಮದ ರಾಷ್ಟ್ರಗಳೊಂದಿಗೆ ಉತ್ತಮ ರಾಜತಾಂತ್ರಿಕ ಬಾಂಧವ್ಯವನ್ನು ಕಾಪಾಡಿಕೊಳ್ಳುವಲ್ಲಿಯೂ ಯಶಸ್ವಿಯಾಗಿದೆ.

ಬ್ರಿಕ್ಸ್‌ ಸಂಘಟನೆ ವಿಸ್ತಾರವಾಗಿರುವುದರಿಂದ ಭಾರತಕ್ಕೆ ಹೆಚ್ಚು ಅನುಕೂಲವಾಗಲಿದೆ. ಮಧ್ಯಪ್ರಾಚ್ಯ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಇನ್ನಷ್ಟು ಉತ್ತಮಗೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

2020ರಲ್ಲಿ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಉಂಟಾದ ಘರ್ಷಣೆಯ ಬಳಿಕ ಭಾರತ ಮತ್ತು ಚೀನಾ ನಡುವೆ ಉಂಟಾಗಿದ್ದ ಗಡಿ ಬಿಕ್ಕಟ್ಟು ಸದ್ಯದ ಮಟ್ಟಿಗೆ ಪರಿಹಾರ ಆಗಿರುವುದನ್ನು ಎರಡೂ ರಾಷ್ಟ್ರಗಳು ಶೃಂಗಸಭೆಗೂ ಮುನ್ನ ಘೋಷಿಸಿರುವುದು ಕೂಡ ಈ ಸಂದರ್ಭದಲ್ಲಿ ಮಹತ್ವ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.