ಆಗಸದಲ್ಲಿ ತೇಲುತ್ತಿರುವ ಮೋಡಗಳ ಮೇಲೆ, ವಿಮಾನಗಳ ಮೂಲಕ ಸಿಲ್ವರ್ ಅಯೋಡೈಡ್ ಎಂಬ ರಾಸಾಯನಿಕವನ್ನು ಸಿಂಪಡಿಸಿ ಮಳೆ ಬರಿಸುವ ವಿಧಾನವೇ ಮೋಡಬಿತ್ತನೆ. ಇಂತಹ ರಾಸಾಯನಿಕಗಳನ್ನು ಸಿಂಪಡಿಸಿದಾಗ ಮೋಡಗಳಲ್ಲಿ ಇರುವ ನೀರಿನ ಕಣಗಳ ಸಾಂದ್ರತೆ ಹೆಚ್ಚಾಗುತ್ತದೆ. ಅದರ ಪರಿಣಾಮವಾಗಿ ಮಳೆಯಾಗುತ್ತದೆ. ಇಂತಹ ಮೊದಲ ಪ್ರಯೋಗ 1946ರಲ್ಲೇ ಅಮೆರಿಕದಲ್ಲಿ ನಡೆದಿತ್ತು. ಭಾರತದಲ್ಲೂ 1951–52ರಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಅಂತಹ ಪ್ರಯೋಗ ನಡೆಸಿತ್ತು. ಮೋಡ ಬಿತ್ತನೆಯಿಂದ ಮಳೆಯಾಗುವುದಿಲ್ಲ ಎಂದು ಕೆಲವರು ವಾದಿಸಿದರೆ, ಮಳೆಯಾಗುತ್ತದೆ ಎಂಬುದು ಇನ್ನೂ ಕೆಲವರ ವಾದ. ಇದರ ಮಧ್ಯೆ ಈ ಪ್ರಯೋಗ ಎಷ್ಟು ಪರಿಣಾಮಕಾರಿ ಎಂಬುದನ್ನು ಪರಿಶೀಲಿಸಲು ಹಲವು ದೇಶಗಳು ಅಧ್ಯಯನ ನಡೆಸಿವೆ. ಪ್ರಯೋಗವನ್ನು ಕರಾರುವಕ್ಕಾಗಿ ಮಾಡಿದರೆ, ಮಳೆಯಾಗುತ್ತದೆ ಎಂದು ಈ ಅಧ್ಯಯನಗಳು ಹೇಳುತ್ತವೆ. ರಾಜ್ಯದಲ್ಲೇ ಈ ಹಿಂದೆ ನಡೆಸಿದ ಹಲವು ಮೋಡ ಬಿತ್ತನೆ ಕಾರ್ಯಗಳ ನಂತರ ಮಳೆಯಾದದ್ದು ದಾಖಲಾಗಿದೆ
‘ನಿಮಗೆ ಗೊತ್ತಾ? ಮೋಡ ಬಿತ್ತನೆ ಎಲ್ಲೂ ಯಶಸ್ವಿಯಾಗಿಲ್ಲ ಕಣ್ರೀ?’ ಎಂದು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋಡ ಬಿತ್ತನೆ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆದರೆ, 2017ರಲ್ಲೂ (ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು) ಸೇರಿದಂತೆ ಹಲವು ಬಾರಿ ರಾಜ್ಯದಲ್ಲಿ ಮೋಡ ಬಿತ್ತನೆ ನಡೆದಿದೆ. ಈ ಎಲ್ಲದರಲ್ಲೂ ಯಶಸ್ಸನ್ನೂ ಗಳಿಸಲಾಗಿದೆ ಎಂಬುದನ್ನು ವೈಜ್ಞಾನಿಕ ಅಧ್ಯಯನಗಳು ತೋರಿಸಿಕೊಟ್ಟಿವೆ.
‘ರಾಜ್ಯದಲ್ಲಿ ಬರದ ಛಾಯೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಎನ್‌ಡಿಆರ್‌ಎಫ್ ಮಾನದಂಡದ ಅನ್ವಯ ಕೇಂದ್ರವು ಪರಿಹಾರ ನೀಡುತ್ತದೆ’ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ. ಮಳೆ ಪ್ರಮಾಣದಲ್ಲಿ ಕಡಿತವಾಗಿ ಬರದ ಛಾಯೆ ಎದುರಾದಾಗಲೆಲ್ಲಾ ರಾಜ್ಯದಲ್ಲಿ ಮೋಡ ಬಿತ್ತನೆ ಮಾಡಲಾಗಿದೆ. ಇದರಿಂದ ನೀರು ಸಂಗ್ರಹಣೆಯಲ್ಲಿ ಏರಿಕೆಯೂ ಆಗಿದೆ. ‘ಇನ್ನೂ ಕಾಲ ಮಿಂಚಿಲ್ಲ. ಈಗಲೂ ಮೋಡ ಬಿತ್ತನೆ ಮಾಡಬಹುದು. ಬರದ ಛಾಯೆಯಿಂದ ತಪ್ಪಿಸಿಕೊಳ್ಳಲು ಮೋಡ ಬಿತ್ತನೆ ಉತ್ತಮ ಉಪಾಯವಾಗಬಲ್ಲದು’ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಮೋಡ ಬಿತ್ತನೆ ಎನ್ನುವುದು ರಾಜ್ಯಕ್ಕೆ ಹೊಸ ಯೋಜನೆ ಏನಲ್ಲ. ಎಂ.ಎಸ್. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಅಂದರೆ, 2002–03ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಮೋಡ ಬಿತ್ತನೆ ನಡೆದಿತ್ತು. ‘ಪ್ರಾಜೆಕ್ಟ್ ವರುಣಾ’ ಹೆಸರಿನ ಈ ಯೋಜನೆಯನ್ನು 26 ಜಿಲ್ಲೆಗಳಲ್ಲಿ ನಡೆಸಲಾಗಿತ್ತು. ‘ಮೋಡ ಬಿತ್ತನೆ ಯೋಜನೆಯು ಶೇ 95ರಷ್ಟು ಯಶಸ್ವಿಯಾಗಿದೆ’ ಎಂದು ಅಂದಿನ ನೀರಾವರಿ ಸಚಿವ ಎಚ್.ಕೆ. ಪಾಟೀಲ ಅವರು ಮಾಹಿತಿ ನೀಡಿದ್ದರು.
ಅಂತೆಯೇ, 2012–13ರಲ್ಲಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಕೂಡ ಮೋಡ ಬಿತ್ತನೆಯನ್ನು ಮಾಡಲಾಗಿತ್ತು. 2014ರಲ್ಲಿ ಮಡಿಕೇರಿ ಪ್ರದೇಶದಲ್ಲಿ ಮಾತ್ರವೇ ಮೋಡ ಬಿತ್ತನೆ ಮಾಡಲಾಗಿತ್ತು. ಅಲ್ಲಿಯೂ ಇದು ಯಶಸ್ವಿಯಾಗಿತ್ತು. 2017 ಹಾಗೂ 2019ರಲ್ಲಿ ‘ವರ್ಷಧಾರೆ’ ಹೆಸರಿನ ಮೋಡ ಬಿತ್ತನೆ ಯೋಜನೆ ನಡೆದಿತ್ತು. ಆಗ ಸುಮಾರು ಶೇ 27.9ರಷ್ಟು ಹೆಚ್ಚುವರಿ ಮಳೆ ಆಗಿತ್ತು. ಇದರಿಂದ 2.1 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿತ್ತು ಎಂಬ ಮಾಹಿತಿಯನ್ನು 2020ರಲ್ಲಿ ಬಂದ ‘ಕರ್ನಾಟಕ ರಾಜ್ಯ ಮೋಡ ಬಿತ್ತನೆ ವರದಿ’ಯಲ್ಲಿ ವಿವರಿಸಲಾಗಿದೆ.
ಆಧಾರ: ಯುಎಇಯ ರಾಷ್ಟ್ರೀಯ ಮಳೆವೃದ್ಧಿ ಸಂಶೋಧನಾ ಕಾರ್ಯಕ್ರಮ ವರದಿ, ಅಮೆರಿಕದ ಸಾಗರ ಮತ್ತು ವಾತಾವರಣ ಸಂಸ್ಥೆಯ ‘ಕ್ಲೌಡ್ ಸೀಡಿಂಗ್’ ವರದಿ, ಕರ್ನಾಟಕ ರಾಜ್ಯ ಮೋಡ ಬಿತ್ತನೆ ವರದಿ–2020, ಪಿಟಿಐ
ಭೂಮಿಯ ಮೇಲ್ಮೈನಿಂದ 16500 ಅಡಿ ಎತ್ತರ ಮತ್ತು ಅದಕ್ಕಿಂತಲೂ ಎತ್ತರದಲ್ಲಿ ಇರುವ ಮೋಡಗಳ ಮೇಲೆ ರಾಸಾಯನಿಕಗಳನ್ನು ಸಿಂಪಡಿಸಿ ಮಳೆ ಬರಿಸಲು ಸಾಧ್ಯ. ಭೂಮಿಯ ಮೇಲ್ಮೈನಿಂದ ಸರಾಸರಿ 16500 ಅಡಿ ಎತ್ತರದಲ್ಲಿ ನೀರು ಘನೀಕರಿಸುತ್ತದೆ. ಇದಕ್ಕಿಂತ ಹೆಚ್ಚು ಎತ್ತರದಲ್ಲಿ ನೀರು ಇನ್ನಷ್ಟು ತಂಪಾಗುತ್ತದೆ. ನೀರಿನ ಕಣಗಳ ಸಾಂದ್ರತೆ ಹೆಚ್ಚಾಗುತ್ತದೆ
ಇಂತಹ ಮೋಡಗಳು 16500 ಅಡಿಗಿಂತ ಇನ್ನೂ ಕಡಿಮೆ ಎತ್ತರದಿಂದಲೇ ರೂಪುಗೊಂಡಿರುತ್ತವೆ. ಆಕಾಶದಲ್ಲಿ ನೀರು ಘನೀಕರಿಸುವ ಎತ್ತರಕ್ಕಿಂತ ಇನ್ನೂ ಎತ್ತರದವರೆಗೆ ಇರುತ್ತವೆ. 16500 ಅಡಿಗಿಂತಲೂ ಹೆಚ್ಚು ಎತ್ತರದಲ್ಲಿ ಇರುವ ನೀರಿನ ಕಣಗಳು ಮಂಜುಕಣಗಳ ರೂಪದಲ್ಲಿರುತ್ತವೆ. ಇವನ್ನು ಅತಿತಂಪಿನ ಕಣಗಳು ಎಂದು ಕರೆಯಬಹುದು
ಇಂತಹ ಮೋಡಗಳಲ್ಲಿ ಒಂದು ಘನ ಮೀಟರ್ ಪ್ರದೇಶದಲ್ಲಿ ಇರುವ ನೀರಿನ ಕಣಗಳ ಸಂಖ್ಯೆ 500ಕ್ಕಿಂತಲೂ ಹೆಚ್ಚು ಇರಬೇಕು. ಆಗ ರಾಸಾಯನಿಕಗಳನ್ನು ಸಿಂಪಡಿಸಿದರೆ ಮಳೆಯಾಗುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ
6500 ಅಡಿ ಎತ್ತರದಿಂದ ಇಂತಹ ಮೋಡಗಳು ಆರಂಭವಾಗುತ್ತವೆ. ಇವನ್ನು ಮೋಡಗಳ ತಳಭಾಗ ಎಂದು ಪರಿಗಣಿಸಲಾಗುತ್ತದೆ. ಇಂತಹ ಮೋಡಗಳ ತುದಿ 20000 ಅಡಿ ಎತ್ತರದವರೆಗೂ ಇರುವ ಸಾಧ್ಯತೆ ಇರುತ್ತದೆ
6500 ಅಡಿಗಿಂತಲೂ ಕಡಿಮೆ ಎತ್ತರದಲ್ಲಿ ಇರುವ ಮೋಡಗಳ ಮೇಲೆ ರಾಸಾಯನಿಕಗಳನ್ನು ಸಿಂಪಡಿಸಿ ಮಳೆ ಬರಿಸಲು ಸಾಧ್ಯವಿಲ್ಲ
ಇಂತಹ ಮೋಡಗಳಲ್ಲಿ ಇರುವ ನೀರಿನ ಕಣಗಳ ಗಾತ್ರ ದೊಡ್ಡದಾಗಿರುತ್ತದೆ. ಆದರೆ ಅವುಗಳ ಸಾಂದ್ರತೆ ತೀರಾ ಕಡಿಮೆ ಇರುತ್ತದೆ. ನೈಸರ್ಗಿಕವಾಗಿಯೂ ಈ ಕಣಗಳು ಪರಸ್ಪರ ಘರ್ಷಣೆಗೆ ಒಳಗಾಗುವುದಿಲ್ಲ. ರಾಸಾಯನಿಕಗಳನ್ನು ಸಿಂಪಡಿಸಿದರೂ ಇಂತಹ ಕಣಗಳು ಘರ್ಷಣೆಗೆ ಒಳಗಾಗುವುದಿಲ್ಲ. ಈ ಕಾರಣದಿಂದಲೇ ಇಂತಹ ಮೋಡಗಳ ಬಿತ್ತನೆ ಫಲಕಾರಿಯಾಗುವುದಿಲ್ಲ
‘ಮಳೆ ಬರುತ್ತದೆ’ ಮೋಡ ಬಿತ್ತನೆ ಹಾಗೂ ಮೋಡ ಬಿತ್ತನೆಯ ಯಶಸ್ಸಿನ ಕುರಿತು ಸಾಮಾನ್ಯ ಜನರಲ್ಲಿ ರಾಜಕಾರಣಿಗಳಲ್ಲಿ ಸರ್ಕಾರಗಳಲ್ಲಿ ಮಾಧ್ಯಮದವರಲ್ಲಿ ಹಲವು ಬಗೆಯ ಅಭಿಪ್ರಾಯಗಳಿವೆ. ಮೋಡವು ನೆಲ ಮಟ್ಟದಿಂದ 2–5 ಕಿ.ಮೀ ಎತ್ತರದಲ್ಲಿರಬೇಕು. ಆಗ ಮಾತ್ರವೇ ಮೋಡ ಬಿತ್ತನೆ ಮಾಡಲು ಸಾಧ್ಯವಿದೆ. ಆಗ 30–40 ನಿಮಿಷದೊಳಗೆ ಮಳೆ ಬರುತ್ತದೆ. ಪ್ರತಿ ಐದು ಕಿ.ಮೀ.ಗೆ ಮಳೆಮಾಪಕ ಇರಬೇಕು ಮತ್ತು ಇದು ಸ್ವಯಂಚಾಲಿತ ಮಳೆಮಾಪಕವಾಗಿರಬೇಕು. ಆಗ ಮಳೆಯ ಪ್ರಮಾಣವನ್ನು ನೀವು ಇಂತಿಷ್ಟೇ ಎಂದು ನಿರ್ಧರಿಸಬಹುದು. ಇಲ್ಲವೆಂದರೆ ಮೋಡ ಬಿತ್ತನೆಯಿಂದಾಗಿ ಎಷ್ಟು ಪ್ರಮಾಣದ ಮಳೆಯಾಗಿದೆ ಎಂದು ಗುರುತಿಸುವುದು ಕಷ್ಟವಾಗುತ್ತದೆ. ಇಂಥ ಸಂದರ್ಭಗಳಲ್ಲಿ ಜನರು ಮೋಡ ಬಿತ್ತನೆಯಿಂದ ಉಪಯೋಗ ಇಲ್ಲ ಎಂದು ಹೇಳಿಬಿಡುತ್ತಾರೆ. ಆದರೆ ಕರ್ನಾಟಕದಲ್ಲಿ ಉತ್ತಮವಾದ ಮಳೆಮಾಪಕ ವ್ಯವಸ್ಥೆ ಇದೆ. 2017 ಹಾಗೂ 2019ರಲ್ಲಿ ನಾವು ಕರ್ನಾಟಕದಲ್ಲಿ ಮೋಡ ಬಿತ್ತನೆ ಮಾಡಿದ್ದೇವೆ. ಇದಾದ ಬಳಿಕ ಡೇಟಾವನ್ನು ವಿಶ್ಲೇಷಿಸಲಾಯಿತು. ಆಗ ನಮಗೆ ತಿಳಿದಿದ್ದು ಮಳೆ ಪ್ರಮಾಣದಲ್ಲಿ ಏರಿಕೆಯಾಯಿತು ಎಂಬುದಾಗಿ. ಆಗ 2.1 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ನೀರಿನ ಕೊರತೆಯಿಂದ ಬೆಳೆಗಳ ಹಾಳಾಗಿದ್ದವು. ಆಗ ಮೋಡ ಬಿತ್ತನೆಯು ಬೆಳೆಗಳ ಉಳಿವಿಗೆ ಸಹಕಾರಿಯಾಗಿತ್ತು. ನಮ್ಮ ಈ ವರದಿಯು ಹಲವು ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲೂ ಪ್ರಟಕವಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೇ ಬಂದಿತ್ತು. ಮೋಡ ಬಿತ್ತನೆ ಮಾಡಬೇಕು ಎಂದಾದರೆ ಮುಂಚಿತವಾಗಿ ಕೇಂದ್ರ ಸರ್ಕಾರದಿಂದ ಹಲವು ಒಪ್ಪಿಗೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಎಲ್ಲದಕ್ಕೂ ಸುಮಾರು ಒಂದು ತಿಂಗಳು ಸಮಯಬೇಕಾಗುತ್ತದೆ. ಕರ್ನಾಟಕದಲ್ಲಿ ಮಳೆಗಾಲ ಮುಗಿಯುತ್ತಾ ಬಂದಿದೆ. ಕೆಲವೊಮ್ಮೆ ಅಕ್ಟೋಬರ್‌ನಲ್ಲಿಯೂ ಮಳೆಯಾಗುತ್ತದೆ. ಆದರೆ ಹವಾಮಾನ ಇಲಾಖೆಯು ಈ ಬಾರಿ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತದೆ ಎಂದು ಹೇಳಿದೆ. ಆದ್ದರಿಂದ ಈ ಮೋಡ ಬಿತ್ತನೆ ಮಾಡುವ ಪ್ರಕ್ರಿಯೆ ಕೈಗೊಳ್ಳುವುದು ಕಷ್ಟವೇ ಸರಿ ಎನ್ನಿಸುತ್ತದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಮಾರ್ಚ್ ಹೊತ್ತಿಗೆ ಅಂದರೆ ಮಳೆಗಾಲ ಪ್ರಾರಂಭವಾಗುವುದಕ್ಕೂ ಮೊದಲೇ ಮಾಡಿಕೊಳ್ಳಬೇಕಿತ್ತು. ಒಂದು ವೇಳೆ ಮಳೆ ಚೆನ್ನಾಗಿ ಆದರೆ ತೊಂದರೆ ಇರುತ್ತಿರಲಿಲ್ಲ. ಮಳೆ ಕೊರತೆಯಾದರೆ ಮೋಡ ಬಿತ್ತನೆ ಕಾರ್ಯ ಮಾಡಬಹುದಿತ್ತು.– ಜೀವನ್ ಪ್ರಕಾಶ್ ಕುಲಕರ್ಣಿ world meteorological organisationನ ವೆದರ್ ಮಾಡಿಫಿಕೇಷನ್ ಕಮಿಟಿಯ ಮಾಜಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.