ADVERTISEMENT

ಆಳ–ಅಗಲ | ವಾಹನ ಚಾಲನಾ ಪರವಾನಗಿ ನಿಯಮ ಬದಲು ಏನು, ಎತ್ತ?

​ಪ್ರಜಾವಾಣಿ ವಾರ್ತೆ
Published 28 ಮೇ 2024, 0:53 IST
Last Updated 28 ಮೇ 2024, 0:53 IST
   
‘ಜೂನ್‌ 1ರಿಂದ ವಾಹನ ಚಾಲನಾ ಪರವಾನಗಿ (ಡಿಎಲ್‌) ನೀಡಿಕೆ ನಿಯಮಗಳು ಬದಲಾಗುತ್ತವೆ. ಡಿಎಲ್‌ ಪಡೆಯಲು ಇನ್ನು ಮುಂದೆ ಆರ್‌ಟಿಒಗೆ ಹೋಗಲೇಬೇಕಿಲ್ಲ. ಡಿಎಲ್ ಪಡೆಯಲು ಚಾಲನಾ ಪರೀಕ್ಷೆಯನ್ನೂ ಎದುರಿಸಬೇಕಿಲ್ಲ’ ಎಂಬ ವಿವರ ಇರುವ ಸುದ್ದಿಗಳು ಹರಿದಾಡುತ್ತಿವೆ. ಡಿಎಲ್‌ ಪಡೆಯುವ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆಯಾದರೂ, ಅದು ಈಗಲೇ ಜಾರಿಗೆ ಬರುವ ಸಾಧ್ಯತೆ ತೀರಾ ಕಡಿಮೆ. ಡಿಎಲ್‌ ಪಡೆಯುವ ಸಂಬಂಧ ಕೇಂದ್ರ ಸರ್ಕಾರವು ತರಲು ಹೊರಟಿರುವ ಬದಲಾವಣೆಗಳ ವಿವರ ಈ ಮುಂದಿನಂತಿವೆ...

ವಾಹನ ಚಾಲನಾ ಪರವಾನಗಿ (ಡಿಎಲ್‌) ನಿಯಮಾವಳಿಗಳಿಗೆ ಕೇಂದ್ರ ಸರ್ಕಾರವು ಬದಲಾವಣೆ ತಂದಿದೆ. ಡಿಎಲ್‌ ಪಡೆಯುವುದು, ಡಿಎಲ್‌ ಪಡೆಯಲು ಚಾಲನಾ ಪರೀಕ್ಷೆ ಮತ್ತು ಚಾಲನಾ ತರಬೇತಿ ನೀಡುವ ಕೇಂದ್ರಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಗಣನೀಯ ಬದಲಾವಣೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜಾರಿಗೆ ತಂದಿದೆ. ಒಟ್ಟಾರೆ, ಈ ಪ್ರಕ್ರಿಯೆಗಳನ್ನು ಸರಳಗೊಳಿಸಲು ಮತ್ತು ವಾಹನ ಚಾಲನಾ ತರಬೇತಿಯಲ್ಲಿ ಮತ್ತಷ್ಟು ಶಿಸ್ತು ತರುವ ಉದ್ದೇಶದಿಂದ ಈ ಬದಲಾವಣೆಗಳನ್ನು ತರಲಾಗಿದೆ ಎಂದು ಸಚಿವಾಲಯ ಹೇಳಿದೆ. ಆದರೆ ಚಾಲನಾ ತರಬೇತಿ ನೀಡುವ ಕೇಂದ್ರಗಳಿಗೆ ಸಂಬಂಧಿಸಿದ ನೂತನ ನಿಯಮಗಳಿಗೆ ಆಕ್ಷೇಪ ವ್ಯಕ್ತವಾಗಿದೆ.

ಅತ್ಯಾಧುನಿಕ ಸವಲತ್ತುಗಳ ಮೂಲಕ, ಅತ್ಯಾಧುನಿಕ ವಾಹನಗಳ ಮೂಲಕ ಪರಿಣಾಮಕಾರಿಯಾಗಿ ತರಬೇತಿ ನೀಡುವುದು ಇದರ ಉದ್ದೇಶ. ಚಾಲನಾ ತರಬೇತಿಯಲ್ಲಿನ ನ್ಯೂನತೆಗಳ ಕಾರಣದಿಂದಲೇ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ದೇಶದಲ್ಲಿ ಪ್ರತಿ ವರ್ಷ ಸಂಭವಿಸುವ ರಸ್ತೆ ಅಪಘಾತಗಳಲ್ಲಿ, ಚಾಲಕನ ತಪ್ಪಿನಿಂದ ಸಂಭವಿಸುವ ಅಪಘಾತಗಳ ಪ್ರಮಾಣ ಶೇ 98ರಷ್ಟು. ಚಾಲನಾ ತರಬೇತಿಯ ಹಂತದಲ್ಲೇ ಬದಲಾವಣೆ ತರುವುದರಿಂದ ಇಂತಹ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ಈ ಸಂಬಂಧ ಹೊರಡಿಸಿದ್ದ ಅಧಿಸೂಚನೆಯಲ್ಲಿ ಸಚಿವಾಲಯ ವಿವರಿಸಿತ್ತು.

ಹೀಗೆ ತರಬೇತಿಯನ್ನು ಕಠಿಣಗೊಳಿಸುವ ಉದ್ದೇಶದಿಂದ ‘ಚಾಲನಾ ತರಬೇತಿ ಕೇಂದ್ರ’ಗಳ ಮಾನ್ಯತಾ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಇಂತಹ ಕೇಂದ್ರಗಳು ಹೊಂದಬೇಕಾದ ಮೂಲಸೌಕರ್ಯಗಳು, ತರಬೇತಿ ಸಿಬ್ಬಂದಿಯ ಅರ್ಹತೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಣ್ಣ ಮಟ್ಟದ ಚಾಲನಾ ತರಬೇತಿ ಕೇಂದ್ರಗಳಿಗೆ ಈ ನಿಯಮಗಳು ಹೊರೆಯಾಗಲಿವೆ. ನಿಯಮಗಳಲ್ಲಿ ಉಲ್ಲೇಖಿಸಿರುವಷ್ಟು ಮೂಲಸೌಕರ್ಯವನ್ನು ಒದಗಿಸಿಕೊಳ್ಳುವುದು ಆರ್ಥಿಕವಾಗಿ ತೀರಾ ಹೊರೆಯಾಗಲಿದೆ. ಪರಿಣಾಮವಾಗಿ ಸಣ್ಣ ಮಟ್ಟದ ತರಬೇತಿ ಕೇಂದ್ರಗಳು ಬಾಗಿಲು ಹಾಕಬೇಕಾದ ಅನಿವಾರ್ಯ ಎದುರಾಗಬಹುದು ಎಂಬ ಕಳವಳ ವ್ಯಕ್ತವಾಗಿದೆ. ಈ ಸಂಬಂಧ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪ್ರತಿಭಟನೆ ಹಾಗೂ ಮುಷ್ಕರಗಳು ನಡೆದಿವೆ.

ADVERTISEMENT

ಮಾರ್ಗಸೂಚಿಗಳ ಪ್ರಕಾರ ನಾಲ್ಕು ಚಕ್ರದ ವಾಹನಗಳ ತರಬೇತಿ ಕೇಂದ್ರ ನಡೆಸಲು ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು. ಇದಲ್ಲದೇ ಕಂಪ್ಯೂಟರ್ ಆಧಾರಿತ ತರಗತಿ, ಎಲ್ಲಾ ವರ್ಗದ ವಾಹನಗಳ ಸಿಮ್ಯುಲೇಟರ್‌ಗಳು, ಎಲ್ಲಾ ವರ್ಗದ ವಾಹನಗಳು, ಪ್ರತ್ಯೇಕ ತರಬೇತಿ ಮತ್ತು ಪರೀಕ್ಷಾ ಟ್ರ್ಯಾಕ್‌ ಹೊಂದಿರಬೇಕು ಎನ್ನುತ್ತದೆ ನೂತನ ನಿಯಮಾವಳಿ.

ಇಷ್ಟು ಬಂಡವಾಳ ಹೂಡಿ ತರಬೇತಿ ಕೇಂದ್ರ ಆರಂಭಿಸಲು ದೊಡ್ಡ–ದೊಡ್ಡ ಕಾರ್ಪೊರೇಟ್‌ ಕಂಪನಿಗಳಿಂದ ಮಾತ್ರ ಸಾಧ್ಯ. ಇದು ಈ ಕ್ಷೇತ್ರದಲ್ಲಿ ದೊಡ್ಡ ಕಾರ್ಪೊರೇಟ್‌ ಕಂಪನಿಗಳ ಏಕಸ್ವಾಮ್ಯಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಮುಂಬೈನ ‘ವಾಹನ ಚಾಲನಾ ತರಬೇತಿ ಕೇಂದ್ರಗಳ ಸಂಘಟನೆ’ ಕಳವಳ ವ್ಯಕ್ತಪಡಿಸಿದೆ. ಈ ಮಾರ್ಗಸೂಚಿಗಳನ್ನೇ ಆಧರಿಸಿ ಕೇರಳ ಸರ್ಕಾರವು ಮೇ 1ರಿಂದಲೇ ನೂತನ ನಿಯಮಗಳ ಜಾರಿಗೆ ಮುಂದಾಗಿತ್ತು. ಆದರೆ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ ಕೇರಳ ಸರ್ಕಾರವು ಈ ನಿಯಮಗಳನ್ನು ಸಡಿಲಗೊಳಿಸಿದೆ.

ಚಾಲನಾ ಪರೀಕ್ಷೆಗಾಗಿ ಬಹು ಆಯ್ಕೆ...

ವಾಹನ ಚಾಲನಾ ಪರೀಕ್ಷೆಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೇ (ಆರ್‌ಟಿಒ) ಹೋಗಬೇಕಿಲ್ಲ ಎನ್ನುತ್ತವೆ ನೂತನ ನಿಯಮಗಳು. ಚಾಲನಾ ಪರೀಕ್ಷೆ ಎದುರಿಸಲು ಮತ್ತು ಡಿಎಲ್‌ ಪಡೆಯಲು ಆರ್‌ಟಿಒ ಕಚೇರಿಗಳಲ್ಲಿ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ಈಗ ಇದೆ. ಮೂಲಸೌಕರ್ಯ ಕೊರತೆ ಇರುವ ಕಾರಣ ಪರೀಕ್ಷೆ ಮತ್ತು ಡಿಎಲ್‌ ನೀಡಿಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಖಾಸಗಿ ಚಾಲನಾ ತರಬೇತಿ ಶಾಲೆಗಳೇ ಚಾಲನಾ ಪರೀಕ್ಷೆಯನ್ನೂ ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ.

ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರಗಳು ಚಾಲನಾ ಪರೀಕ್ಷೆ ನಡೆಸುವ ಅವಕಾಶ ಪಡೆಯಲಿವೆ. ತರಬೇತಿ ಕೇಂದ್ರಗಳಲ್ಲಿ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಆಯಾ ಕೇಂದ್ರಗಳು ಪ್ರಮಾಣಪತ್ರ ನೀಡಲಿವೆ. ಡಿಎಲ್‌ ಪಡೆಯಲು ಅರ್ಜಿ ಸಲ್ಲಿಸುವಾಗ ಆರ್‌ಟಿಒನಲ್ಲಿ ಆ ಪ್ರಮಾಣಪತ್ರವನ್ನು ಸಲ್ಲಿಸಿದರೆ, ಮತ್ತೆ ಚಾಲನಾ ಪರೀಕ್ಷೆ ಎದುರಿಸುವ ಅವಶ್ಯಕತೆ ಇರುವುದಿಲ್ಲ. ಇದರ ಜತೆಯಲ್ಲಿ ನೇರವಾಗಿ ಆರ್‌ಟಿಒನಲ್ಲೇ ಚಾಲನಾ ಪರೀಕ್ಷೆ ಎದುರಿಸುವ ವ್ಯವಸ್ಥೆಯೂ ಮುಂದುವರಿಯಲಿದೆ. ಹೀಗೆ ಚಾಲನಾ ಪರೀಕ್ಷೆ ಎದುರಿಸಲು ಸಾರ್ವಜನಿಕರಿಗೆ ಬಹುಆಯ್ಕೆಯನ್ನು ಈ ನಿಯಮಾವಳಿಗಳು ಮಾಡಿಕೊಡುತ್ತವೆ.

ವ್ಯಕ್ತಿಗಳು ಮಾತ್ರವಲ್ಲದೇ ಸ್ವಯಂಸೇವಾ ಸಂಘಟನೆಗಳು, ಕಾರ್ಪೊರೇಟ್‌ ಕಂಪನಿಗಳು, ವಾಹನ ತಯಾರಿಕಾ ಕಂಪನಿಗಳು ಮತ್ತು ಯಾವುದೇ ರೀತಿಯ ಕಂಪನಿಯೂ ಇಂತಹ ಕೇಂದ್ರಗಳನ್ನು ಆರಂಭಿಸಬಹುದು. ಈ ಕ್ಷೇತ್ರದಲ್ಲಿ ಯಾವುದೋ ಒಂದು ಕಂಪನಿಯು ಏಕಸ್ವಾಮ್ಯ ಸಾಧಿಸುವುದನ್ನು ತಪ್ಪಿಸಲೂ ನೂತನ ನಿಯಮಾವಳಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಒಂದು ಕಂಪನಿಯು ರಾಜ್ಯವೊಂದರಲ್ಲಿ ಗರಿಷ್ಠ ಐದು ತರಬೇತಿ ಕೇಂದ್ರಗಳನ್ನಷ್ಟೇ ಸ್ಥಾಪಿಸಲು ಅವಕಾಶವಿದೆ. 

ಈ ರೀತಿಯ ತರಬೇತಿ ಮತ್ತು ಪರೀಕ್ಷೆ ನಡೆಸಲು ಚಾಲನಾ ತರಬೇತಿ ಕೇಂದ್ರಗಳು ಹೊಂದಿರಬೇಕಾದ ಮೂಲಸೌಕರ್ಯಗಳು ಇಂತಿವೆ:

  • ಕನಿಷ್ಠ 2 ಎಕರೆ ಜಮೀನು. ಜಮೀನು ಸ್ವಂತದ್ದಾಗಿರಬಹುದು ಅಥವಾ ಕನಿಷ್ಠ ಹತ್ತು ವರ್ಷಗಳವರೆಗೆ ಭೋಗ್ಯಕ್ಕೆ ಪಡೆದ ಜಮೀನಾಗಿರಬಹುದು

  • ಚಾಲನಾ ತರಬೇತಿ ನೀಡುವವರು ಡಿಪ್ಲೊಮಾ ಪಡೆದಿರಬೇಕು ಮತ್ತು ಕನಿಷ್ಠ ಐದು ವರ್ಷಗಳ ಚಾಲನಾ ಅನುಭವವಿರಬೇಕು

  • ತರಬೇತಿ ಕೇಂದ್ರಗಳು ತಮ್ಮದೇ ಪ್ರತ್ಯೇಕ ಜಾಲತಾಣಗಳನ್ನು ಹೊಂದಿರಬೇಕು. ಕೇಂದ್ರದಲ್ಲಿ ಇರುವ ಸೌಲಭ್ಯಗಳು, ವಿದ್ಯಾರ್ಥಿಗಳು, ಉತ್ತೀರ್ಣರಾದವರ ಸಂಖ್ಯೆ, ಡಿಎಲ್‌ ಪಡೆದವರ ಸಂಖ್ಯೆ ಮತ್ತಿತರ ವಿವರಗಳನ್ನು ಜಾಲತಾಣಗಳಲ್ಲಿ ಪ್ರಕಟಿಸಬೇಕು

  • ತರಗತಿ ಕೊಠಡಿಗಳನ್ನು ಹೊಂದಿರಬೇಕು. ಡಿಜಿಟಲ್‌ ಬೋರ್ಡ್‌ಗಳು, ಆನ್‌ಲೈನ್‌ ಪರೀಕ್ಷೆ ನಡೆಸಲು ಕಂಪ್ಯೂಟರ್‌ಗಳು, ಇಂಟರ್‌ನೆಟ್‌ ಸೌಲಭ್ಯ ಹೊಂದಿರಬೇಕು

  • ಅರ್ಜಿ ಸಲ್ಲಿಕೆ, ವೆಬ್‌ಸೈಟ್‌ ಅಪ್‌ಡೇಟ್‌, ಆನ್‌ಲೈನ್‌ ಪರೀಕ್ಷೆ ಮತ್ತಿತರ ಕೆಲಸಗಳನ್ನು ನಿರ್ವಹಿಸಲು ತಂತ್ರಜ್ಞರನ್ನು ನೇಮಿಸಿಕೊಳ್ಳಬೇಕು.

ರಾಜ್ಯಕ್ಕೆ ಇನ್ನೂ ಬಂದಿಲ್ಲ ಸುತ್ತೋಲೆ

ವಾಹನ ಚಾಲನಾ ಪರವಾನಗಿ ನೀಡುವ ಸಂಬಂಧ ಕೇಂದ್ರ ಸರ್ಕಾರ ರೂಪಿಸಿರುವ ನೂತನ ನಿಯಮಾವಳಿಗಳ ಸಂಬಂಧ ರಾಜ್ಯ ಸರ್ಕಾರಕ್ಕೆ ಇನ್ನೂ ಸುತ್ತೋಲೆ ಬಂದಿಲ್ಲ. ಹೀಗಾಗಿ ಜೂನ್‌ 1ರಿಂದ ನೂತನ ನಿಯಮಗಳು ಜಾರಿಗೆ ಬರುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರಿಗೆಯು ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಅಂದರೆ ಸಾರಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಸಮಾನವಾದ ಅಧಿಕಾರಗಳಿರುತ್ತವೆ. ಕೇಂದ್ರ ಸರ್ಕಾರವು ಸಾರಿಗೆಗೆ ಸಂಬಂಧಿಸಿದಂತೆ ಯಾವುದೇ ನಿಯಮವನ್ನು ರೂಪಿಸಿದರೂ, ಅವು ದೇಶದ ಎಲ್ಲೆಡೆ ಏಕಾಏಕಿ ಜಾರಿಗೆ ಬರುವುದಿಲ್ಲ. ಪ್ರತಿ ರಾಜ್ಯ ಸರ್ಕಾರವೂ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಿದರಷ್ಟೇ ಆ ನಿಯಮಗಳು ಜಾರಿಗೆ ಬರುತ್ತವೆ. ಅಗತ್ಯಬಿದ್ದರೆ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ನಿಯಮಗಳಿಗೆ ಬದಲಾವಣೆಯನ್ನೂ ಮಾಡಿಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರವು ಹೊರಡಿಸಿರುವ ಅಧಿಸೂಚನೆಗೆ ಸಂಬಂಧಿಸಿದ ಸುತ್ತೋಲೆಯು ರಾಜ್ಯ ಸರ್ಕಾರಕ್ಕೆ ಬರಬೇಕು. ಅದರ ಆಧಾರದಲ್ಲಿ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಬೇಕು. ಆನಂತರವಷ್ಟೇ ಈ ನಿಯಮಗಳು ರಾಜ್ಯದಲ್ಲಿ ಜಾರಿಗೆ ಬರುತ್ತವೆ. 

ಡಿಎಲ್‌ ನೀಡುವುದು ಆರ್‌ಟಿಒ ಮಾತ್ರ

ವಾಹನ ಚಾಲನಾ ತರಬೇತಿ ಕೇಂದ್ರಗಳೇ ಡಿಎಲ್‌ ನೀಡಬಹುದು. ಅದಕ್ಕಾಗಿ ಆರ್‌ಟಿಒಗೆ ಅಲೆಯಬೇಕಿಲ್ಲ ಎಂಬ ವಿವರ ಇರುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜತೆಗೆ ಕೆಲವು ಸುದ್ದಿ ಮಾಧ್ಯಮಗಳೂ ಇದೇ ರೀತಿಯ ಸುದ್ದಿಯನ್ನು ಪ್ರಕಟಿಸಿವೆ. ಆದರೆ ಇದು ತಪ್ಪು ಮಾಹಿತಿ. ಚಾಲನಾ ತರಬೇತಿ ಕೇಂದ್ರಗಳು ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಗ್ಗೆ ಪ್ರಮಾಣಪತ್ರವನ್ನು ಮಾತ್ರ ನೀಡುತ್ತವೆ. ಅದರ ಆಧಾರದಲ್ಲಿ ಆರ್‌ಟಿಒ ಡಿಎಲ್‌ ನೀಡುತ್ತದೆ. ಡಿಎಲ್‌ ನೀಡುವ ಸಂಬಂಧ ಆರ್‌ಟಿಒಗೆ ಇರುವ ಅಧಿಕಾರದಲ್ಲಿ ಯಾವುದೇ ಬದಲಾವಣೆ ಇಲ್ಲ.

ಆಧಾರ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಕಟಣೆಗಳು, ಸಾರಿಗೆ ಸಚಿವಾಲಯದ ‘ಚಾಲನಾ ತರಬೇತಿ ಕೇಂದ್ರಗಳಿಗೆ ಮಾನ್ಯತೆ: ಕೆಲವು ಮಾರ್ಗಸೂಚಿಗಳು’ ಅಧಿಸೂಚನೆ, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.