ತೀವ್ರ ಬರದಿಂದಾಗಿ ನಮೀಬಿಯಾ, ಜಿಂಬಾಬ್ವೆಯಲ್ಲಿ ಆಹಾರದ ಕೊರತೆ ತಲೆದೋರಿದೆ. ಜನರ ಆಹಾರಕ್ಕಾಗಿ ನೂರಾರು ಆನೆಗಳನ್ನು ಕೊಲ್ಲಲು ಸರ್ಕಾರಗಳು ಮುಂದಾಗಿವೆ. ಇನ್ನೊಂದೆಡೆ, ಹನಿ ನೀರಿಗೂ ಜನ ಪರದಾಡುತ್ತಿದ್ದಾರೆ. ಕಿ. ಮೀ. ಗಟ್ಟಲೇ ನಡೆದರೂ ಒಂದು ಪಾತ್ರೆಯಷ್ಟು ನೀರು ಸಿಗದಂತಾಗಿದೆ. ಆಫ್ರಿಕಾದ ದಕ್ಷಿಣ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಬರ ಒಂದು ಮಾನವೀಯ ಬಿಕ್ಕಟ್ಟಾಗಿದೆ
ಆಫ್ರಿಕಾ ಖಂಡದ ದಕ್ಷಿಣ ಭಾಗದ ರಾಷ್ಟ್ರಗಳು ತೀವ್ರ ಬರದಿಂದ ತತ್ತರಿಸಿವೆ. ಜಿಂಬಾಬ್ವೆ, ಜಾಂಬಿಯಾ, ಬೋತ್ಸ್ವಾನಾ, ಅಂಗೋಲಾ, ನಮೀಬಿಯಾ ಮುಂತಾದ ದೇಶಗಳ ಕೋಟ್ಯಂತರ ಮಂದಿ ಆಹಾರದ ಕೊರತೆಯಿಂದ ನಲುಗುತ್ತಿದ್ದಾರೆ. ಜನ ಹನಿ ನೀರಿಗಾಗಿ ಕಿಲೋಮೀಟರುಗಟ್ಟಲೇ ನಡೆದು, ನದಿಯ ಒಡಲನ್ನು ಬಗೆದು ಹೈರಾಣಾಗುತ್ತಿದ್ದಾರೆ. ಜಿಂಬಾಬ್ವೆ ಮತ್ತು ನಮೀಬಿಯಾದ ಜನ ತಮ್ಮ ದೇಶದ ಹೆಮ್ಮೆಯ ಪ್ರತೀಕವಾಗಿದ್ದ ನೂರಾರು ಆನೆಗಳು ಸೇರಿದಂತೆ ಕಾಡು ಪ್ರಾಣಿಗಳನ್ನು ಆಹಾರಕ್ಕಾಗಿ ವಧಿಸುತ್ತಿದ್ದಾರೆ.
ಎಲ್ ನಿನೊದ ಪರಿಣಾಮವಾಗಿ ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿ ಬರ ಮತ್ತು ಪ್ರವಾಹ ಕಾಣಿಸಿಕೊಂಡು, ಆಹಾರದ ಅಭದ್ರತೆ ಕಾಡಬಹುದೆಂದು ವಿಶ್ವಸಂಸ್ಥೆಯು ಈ ವರ್ಷದ ಆರಂಭದಲ್ಲೇ ಎಚ್ಚರಿಸಿತ್ತು. ಈ ಭಾಗದ ಶೇ 70ರಷ್ಟು ಜನರ ಮುಖ್ಯ ಕಸುಬು ಬೇಸಾಯ; ಅದೂ ಮಳೆಯಾಶ್ರಿತ ಬೇಸಾಯ. ವಾಸ್ತವವಾಗಿ, ಇಲ್ಲಿ 2023ರ ಅಕ್ಟೋಬರ್‌ನಲ್ಲಿಯೇ ಬರದ ಸೂಚನೆಗಳು ಸಿಕ್ಕಿದ್ದವು. ಜನವರಿಯಲ್ಲಿ ಬಿಸಿಲಿನ ಪ್ರಖರತೆಗೆ ಜನ ಬಳಲಿ ಬೆಂಡಾಗಿದ್ದರು. ಫೆಬ್ರುವರಿ, ಅತಿ ಹೆಚ್ಚು ಮಳೆ ಬೀಳುವ ತಿಂಗಳು. ಆದರೆ, ಈ ಬಾರಿಯ ಫೆಬ್ರುವರಿಯು ಈ ಪ್ರದೇಶವು ದಶಕಗಳಲ್ಲಿ ಕಂಡ ಅತ್ಯಂತ ತೀವ್ರ ತಾಪಮಾನದ ತಿಂಗಳಾಗಿತ್ತು. ವಾಡಿಕೆಯ ಮಳೆಯಲ್ಲಿ ಶೇ 20ರಷ್ಟು ಮಾತ್ರ ಬಿದ್ದಿತ್ತು.
ಜಾಂಬಿಯಾ, ನಮೀಬಿಯಾ, ಜಿಂಬಾಬ್ವೆ ಮತ್ತು ಮಾಲವಿ ಅತಿ ಹೆಚ್ಚು ಬಾಧಿತ ಪ್ರದೇಶಗಳು. ಮುಸುಕಿನ ಜೋಳವೂ ಸೇರಿದಂತೆ ಈ ದೇಶಗಳ ಜನರ ಪ್ರಮುಖ ಬೆಳೆಗಳು ಶೇ 40ರಿಂದ ಶೇ 80ರಷ್ಟು ಹಾನಿಗೊಳಗಾಗಿವೆ. ಇದರಿಂದ ಪ್ರದೇಶದಲ್ಲಿ ತೀವ್ರ ಆಹಾರದ ಬಿಕ್ಕಟ್ಟು ತಲೆದೋರಿದೆ.
ನಮೀಬಿಯಾದಲ್ಲಿ 2013 ಮತ್ತು 2019ರ ನಡುವೆ ಮೂರು ಬಾರಿ ಬರ ತುರ್ತುಸ್ಥಿತಿಯನ್ನು ಘೋಷಿಸಲಾಗಿತ್ತು. ಈ ಬಾರಿಯ ಬರ ಹಿಂದೆಂದಿಗಿಂತಲೂ ತೀವ್ರ ಸ್ವರೂಪದ್ದಾಗಿದ್ದು, 14 ಲಕ್ಷ ಮಂದಿ (ಶೇ 40ರಷ್ಟು) ತೀವ್ರ ಸ್ವರೂಪದ ಆಹಾರದ ಕೊರತೆ ಅನುಭವಿಸುತ್ತಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಇದನ್ನು ‘ಹಿಂದೆಂದೂ ಕಾಣದ ಮಾನವೀಯ ಬಿಕ್ಕಟ್ಟು’ ಎಂದು ವಿವರಿಸಿದ್ದಾರೆ. ಬರದಿಂದಾಗಿ ಐದು ವರ್ಷದ ಕೆಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಜತೆಗೆ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ಬರವು ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ನೀರಿನ ಕೊರತೆಯು ಅವರ ಮೇಲೆ ಹಲ್ಲೆ, ದೌರ್ಜನ್ಯಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದೆ.
ನಮೀಬಿಯಾದಲ್ಲಿ ಜನ ಊಟಕ್ಕೆ ಪರದಾಡಿದಂತೆ, ಜಿಂಬಾಬ್ವೆಯಲ್ಲಿ ನೀರಿಗಾಗಿ ಹಾಹಾಕಾರವೆದ್ದಿದೆ. ದೇಶದ ಬಹುತೇಕ ಅಣೆಕಟ್ಟುಗಳು ಮತ್ತು ನದಿಗಳು ಬತ್ತಿಹೋಗಿವೆ. ಶೇ 70ರಷ್ಟು ನೀರಿನ ಕೊರತೆ ಕಂಡುಬಂದಿದೆ. ನೀರನ್ನು ಹುಡುಕುತ್ತಾ ಬಕೆಟ್, ಪಾತ್ರೆ ಹಿಡಿದಿರುವ ಮಹಿಳೆಯರು ಮತ್ತು ಮಕ್ಕಳು ಕಿಲೋಮೀಟರ್‌ಗಟ್ಟಲೇ ನಡೆಯುತ್ತಿರುವ ದೃಶ್ಯಗಳು ಇಲ್ಲಿ ಸಹಜ ಎನ್ನುವಂತಾಗಿದೆ. ಬತ್ತಿದ ನದಿಯಲ್ಲಿ ಚಿಲುಮೆ ತೋಡಿ ನೀರಿನ ಪಸೆಗಾಗಿ ಹುಡುಕಲಾಗುತ್ತಿದೆ. ನೀರಿಗಾಗಿ ಜಗಳಗಳು ನಡೆಯುತ್ತಿದ್ದು, ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ.
ಮನುಷ್ಯರ ನೀರಿನ ದಾಹ ಒಂದೆಡೆ ಆದರೆ, ಜನರಿಗೆ ತಮ್ಮ ದನಕರುಗಳಿಗೆ ಕುಡಿಯಲು ನೀರು ಒದಗಿಸುವುದು ಪ್ರಯಾಸದ ಕೆಲಸವಾಗಿದೆ. ಬಹುತೇಕ ಕಡೆ, ನದಿಗಳಲ್ಲಿ ತೋಡಿದ ಚಿಲುಮೆಯಲ್ಲಿ ನೀರು ಸಿಕ್ಕರೆ, ಜನ ತಮ್ಮ ದನಗಳಿಗೆ ಅಲ್ಲಿ ನೀರು ಕುಡಿಸಿ, ತಾವೂ ಅಲ್ಲಿಯೇ ನೀರು ಕುಡಿದು, ಮಕ್ಕಳಿಗೆ ಸ್ನಾನವನ್ನೂ ಮಾಡಿಸಿಕೊಂಡು ಬರುತ್ತಿದ್ದಾರೆ. ತಾವು ಇಂಥ ಬರಗಾಲವನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಹೇಳುತ್ತಾರೆ ಈ ಭಾಗದ ಜನ.
ಜಿಂಬಾಬ್ವೆಯ ಸುಮಾರು 80 ಲಕ್ಷ ಮಂದಿ ತೀವ್ರ ಹಸಿವೆಗೆ ಗುರಿಯಾಗಿದ್ದಾರೆ. ಜನರಲ್ಲಿ, ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ, ಅಪೌಷ್ಟಿಕತೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಿಗೆ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಹಿಳೆಯರು ಆಗಾಗ್ಗೆ ಒಂದೆಡೆ ಸೇರಿ ತಮ್ಮಲ್ಲಿ ಉಳಿದಿರುವ ಧಾನ್ಯ, ಆಹಾರವನ್ನು ಚಿಕ್ಕ ಮಕ್ಕಳಿಗೆ ಮೀಸಲಿಡುತ್ತಿದ್ದಾರೆ. ಜನರ ನೆರವಿಗೆ ಧಾವಿಸಿರುವ ವಿಶ್ವಸಂಸ್ಥೆಯು ವಾರಕ್ಕೆ ಮೂರು ಸಲ ಸಮುದಾಯಕ್ಕೆ ಆಹಾರ ಪೂರೈಕೆ ಮಾಡುತ್ತಿದೆ. ಬರದಿಂದಾಗಿ ಹಣದುಬ್ಬರ ಏರಿಕೆ ಕಂಡಿದ್ದು, ಅಗತ್ಯ ವಸ್ತುಗಳ ಬೆಲೆಗಳು ಗಗನಮುಖಿಯಾಗಿವೆ.
ಒಂದು ಕಾಲದಲ್ಲಿ ಜಿಂಬಾಬ್ವೆ, ಆಫ್ರಿಕಾದ ದಕ್ಷಿಣ ದೇಶಗಳ ಆಹಾರದ ಕಣಜ ಎಂದೇ ಹೆಸರಾಗಿತ್ತು. ಆದರೆ, ಈಗ ಅವರೇ ಆಹಾರಕ್ಕಾಗಿ ಹುಡುಕಾಡುತ್ತಿದ್ದಾರೆ. ಈ ಭಾಗದಲ್ಲಿ 1992ರಲ್ಲಿ ಇಂಥದ್ದೇ ಬರಗಾಲ ಕಾಣಿಸಿಕೊಂಡಿತ್ತು. ಆಗ ದೇಶದ ಶೇ 50ಕ್ಕೂ ಹೆಚ್ಚು ದನಕರುಗಳು ಸತ್ತು ನೆಲಕ್ಕೊರಗಿದ್ದವು.
ಜಿಂಬಾಬ್ವೆ, ನಮೀಬಿಯಾ ಸೇರಿದಂತೆ ವಿವಿಧ ದೇಶಗಳು ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿದ್ದು, ಪರಿಹಾರ ಕಾರ್ಯಗಳನ್ನು ಕೈಗೊಂಡಿವೆ. ಧನಸಹಾಯಕ್ಕಾಗಿ ಅಂತರರಾಷ್ಟ್ರೀಯ ಸಮುದಾಯಕ್ಕೆ ಮೊರೆ ಇಟ್ಟಿವೆ. ವಿಶ್ವಸಂಸ್ಥೆಯು ಕೂಡ ಧನಸಂಗ್ರಹ ಕಾರ್ಯದಲ್ಲಿ ತೊಡಗಿದ್ದು, ಉದಾರವಾಗಿ ಸಹಾಯ ಮಾಡುವಂತೆ ಕರೆ ನೀಡಿದೆ. ಆದರೆ, ನಿರೀಕ್ಷಿಸಿದಷ್ಟು ಹಣ ಬಾರದೇ ಪರಿಹಾರ ಕಾರ್ಯಗಳು ಕುಂಟುತ್ತಾ ಸಾಗುತ್ತಿವೆ.
ಕಾಡು ಪ್ರಾಣಿಗಳ ಹತ್ಯೆ
ಹೆಚ್ಚು ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ಹೊಂದಿರುವ ನಮೀಬಿಯಾ, ಜಿಂಬಾಬ್ವೆಗಳಲ್ಲಿ ಬರದಿಂದಾಗಿ ಜನ ಹಾಗೂ ಪ್ರಾಣಿಗಳಿಗೆ ಆಹಾರ ಕೊರತೆ ಉಂಟಾಗಿದೆ. ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಜಲಮೂಲಗಳು ಒಣಗಿರುವುದರಿಂದ, ಮಳೆಯಾಗದೆ ಕಾಡುಗಳು ಒಣಗಿ ಹೋಗಿರುವುದರಿಂದ ಪ್ರಾಣಿಗಳಿಗೂ ನೀರು ಆಹಾರ ಸಿಗುತ್ತಿಲ್ಲ. ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಹೀಗಾಗಿ ಜನರ ಹಸಿವು ನೀಗಿಸಲು, ಮಾನವ ವನ್ಯಜೀವಿ ಸಂಘರ್ಷ ತಪ್ಪಿಸಲು ನಮೀಬಿಯಾ ಮತ್ತು ಜಿಂಬಾಬ್ವೆಗಳು ಆನೆ ಸೇರಿದಂತೆ ವಿವಿಧ ಪ್ರಾಣಿಗಳನ್ನು ಕೊಲ್ಲಲು ನಿರ್ಧರಿಸಿವೆ. ನಮೀಬಿಯಾವು 723 ಪ್ರಾಣಿಗಳನ್ನು ಕೊಲ್ಲುವುದಾಗಿ ಹೇಳಿದ್ದರೆ, ಜಿಂಬಾಬ್ವೆಯು 200 ಆನೆಗಳನ್ನು ವಧಿಸುವುದಾಗಿ ತಿಳಿಸಿದೆ. ಈ ನಿರ್ಧಾರಕ್ಕೆ ಪ್ರಾಣಿ ದಯಾ ಸಂಘಟನೆಗಳು, ಪರಿಸರ ಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಆಫ್ರಿಕಾದ ದಕ್ಷಿಣದ ರಾಷ್ಟ್ರಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಆನೆಗಳಿವೆ. ಜಿಂಬಾಬ್ವೆಯೊಂದರಲ್ಲೇ ಲಕ್ಷದಷ್ಟು ಆನೆಗಳಿವೆ. ಮಾನವ ಪ್ರಾಣಿ ಸಂಘರ್ಷ ಹೆಚ್ಚಿರುವ ಪ್ರದೇಶಗಳಲ್ಲಿನ ಆನೆಗಳನ್ನು ಗುರುತಿಸಿ ಕೊಲ್ಲಲಾಗುವುದು. ಅವುಗಳ ಮಾಂಸವನ್ನು ಬರಪೀಡಿತ ಪ್ರದೇಶಗಳ ಜನರಿಗೆ ಹಂಚಲಾಗುವುದು ಎಂದು ಸರ್ಕಾರ ಹೇಳಿದೆ. ದೇಶದಲ್ಲಿ ಆನೆಗಳ ಸಾಂದ್ರತೆ ಹೆಚ್ಚಾಗಿದೆ ಎಂದು ತನ್ನ ನಿರ್ಧಾರವನ್ನು ಅದು ಸಮರ್ಥಿಸಿಕೊಂಡಿದೆ. ಜಿಂಬಾಬ್ವೆಯಲ್ಲಿ ಈ ಹಿಂದೆ 1988ರಲ್ಲಿ ಈ ರೀತಿ ಆನೆಗಳನ್ನು ಕೊಲ್ಲಲಾಗಿತ್ತು.
ನಮೀಬಿಯಾವು ಈ ತಿಂಗಳ ಆರಂಭದಲ್ಲೇ 723 ಪ್ರಾಣಿಗಳನ್ನು ಕೊಲ್ಲಲು ತೀರ್ಮಾನಿಸಿತ್ತು. ಇವುಗಳಲ್ಲಿ 83 ಆನೆಗಳು, 30 ನೀರಾನೆಗಳು, 60 ಎಮ್ಮೆಗಳು, 50 ಇಂಪಾಲ (ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿ ಕಂಡು ಬರುವ ಸಣ್ಣ ಜಿಂಕೆ), 100 ಈಲಂಡ್‌ಗಳು (ದೊಡ್ಡ ಜಿಂಕೆ) 100 ಬ್ಲೂ ವೈಲ್ಡ್‌ಬೀಸ್ಟ್ (ಕಾಡುಕೋಣ ಹೋಲುವ ಪ್ರಾಣಿಗಳು), 300 ಜೀಬ್ರಾಗಳು ಸೇರಿವೆ. ಈಗಾಗಲೇ 150ಕ್ಕೂ ಹೆಚ್ಚು ಪ್ರಾಣಿಗಳನ್ನು ಹತ್ಯೆ ಮಾಡಲಾಗಿದೆ. ಇಷ್ಟು ಪ್ರಾಣಿಗಳಿಂದ 54 ಸಾವಿರ ಕೆ.ಜಿಗೂ ಹೆಚ್ಚು ಮಾಂಸ ಸಿಗಲಿದೆ ಎಂದು ಅಂದಾಜಿಸಲಾಗಿದ್ದು, ಆಹಾರ ಕೊರತೆ ಕಂಡುಬಂದಿರುವ ಪ್ರದೇಶಗಳ ಜನರಿಗೆ ಹಂಚಲು ನಮೀಬಿಯಾ ಸರ್ಕಾರ ತೀರ್ಮಾನಿಸಿದೆ.
ಎಲ್ ನಿನೊ ಕಾರಣ
ತೀವ್ರ ಬರಕ್ಕೆ ಎಲ್ ನಿನೊ ಪರಿಸ್ಥಿತಿ ಕಾರಣ. ಪೆಸಿಫಿಕ್ ಮಹಾಸಾಗರದ ನೀರಿನ ಮೇಲ್ಮೈ ಉಷ್ಣತೆಯು ಏರಿಕೆಯಾಗತೊಡಗಿದಾಗ ಎಲ್ ನಿನೊ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಪೆಸಿಫಿಕ್ ಸಾಗರದ ಪೂರ್ವ ಭಾಗದಲ್ಲಿ ನೀರು ಹೆಚ್ಚು ಬಿಸಿಯಾಗತೊಡಗುತ್ತಿದ್ದಂತೆಯೇ ಜಾಗತಿಕ ಹವಾಮಾನದ ಸ್ಥಿತಿಯಲ್ಲಿ ಬದಲಾವಣೆ ಕಂಡು ಬರುತ್ತದೆ.
ಈ ರಾಷ್ಟ್ರಗಳಲ್ಲಿ ಕಳೆದ ವರ್ಷವೂ ಹೆಚ್ಚು ಮಳೆಯಾಗಿಲ್ಲ. ಈ ವರ್ಷದ ಜನವರಿಯಿಂದಲೇ ಅಲ್ಲಿ ಮಳೆ ಕೊರತೆ ಉಂಟಾಗಿದ್ದು ಕೃಷಿ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಫೆಬ್ರುವರಿಯಿಂದಲೇ ಈ ರಾಷ್ಟ್ರಗಳಲ್ಲಿ ಬರಪರಿಸ್ಥಿತಿ ಇದ್ದು, ಜುಲೈ ನಂತರ ಅದು ಮತ್ತಷ್ಟು ಬಿಗಡಾಯಿಸಿದೆ.
ಆಧಾರ: ರಾಯಿಟರ್ಸ್, ಬಿಬಿಸಿ, ವರ್ಲ್ಡ್ ವೆದರ್ ಅಟ್ರಿಬ್ಯುಷನ್.ಒಆರ್‌ಜಿ, ಎಸ್‌ಎಡಿಸಿ, ಎಎಫ್‌ಪಿ, ವಿಶ್ವಸಂಸ್ಥೆಯ ವೆಬ್‌ಸೈಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.