ಅಭಿವೃದ್ಧಿ ಗುರಿಗಳ ಸಾಧನೆಗೆ ಲಿಂಗ ಸಮಾನತೆ ಬಹಳ ಮುಖ್ಯ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಕೂಡ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಜಗತ್ತಿನಲ್ಲಿಯೇ ಮಹಿಳೆಯರು ಅತ್ಯಂತ ಹಿಂದುಳಿದ ವರ್ಗವಾಗಿದ್ದು, ಭಾರತದ ಸ್ಥಿತಿ ಅದಕ್ಕಿಂತ ಭಿನ್ನವೇನಲ್ಲ. ದೇಶವು ಆರ್ಥಿಕ ಅಭಿವೃದ್ಧಿ ಸಾಧಿಸಲು ಮಹಿಳೆಯರಿಗೆ ಎಲ್ಲ ವಲಯಗಳಲ್ಲಿಯೂ ಸಮಾನ ಅವಕಾಶಗಳನ್ನು ಕಲ್ಪಿಸಿ, ಸಬಲೀಕರಣಗೊಳಿಸುವುದು ಬಹಳ ಮುಖ್ಯ.
ಈ ದಿಸೆಯಲ್ಲಿ ವಸ್ತುಸ್ಥಿತಿ ಮೇಲೆ ಬೆಳಕು ಚೆಲ್ಲಲು ಕೇಂದ್ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ವಿವಿಧ ಇಲಾಖೆಗಳ ಲಿಂಗ–ಸಂಬಂಧಿ ಅಂಕಿ ಸಂಖ್ಯೆಗಳನ್ನು ಒಳಗೊಂಡಿರುವ ‘ಭಾರತದಲ್ಲಿ ಮಹಿಳೆಯರು ಮತ್ತು ಪುರುಷರು–2023’ ಎನ್ನುವ ವರದಿ ಬಿಡುಗಡೆ ಮಾಡಿದೆ. 2011ರ ಜನಗಣತಿ ಆಧರಿಸಿರುವ ಈ ವರದಿಯಲ್ಲಿ, 2020, 2023ರವರೆಗಿನ ಲಿಂಗಾನುಪಾತ, ಆರೋಗ್ಯ, ಉದ್ಯೋಗ, ಮಹಿಳಾ ಸಬಲೀಕರಣ, ಶಿಕ್ಷಣ, ಆರ್ಥಿಕತೆ ರಾಜಕೀಯಕ್ಕೆ ಸಂಬಂಧಿಸಿದ ಅಂಕಿ ಅಂಶಗಳಿವೆ. ಭಾರತದಲ್ಲಿ ಮಹಿಳೆಯರ ಹಿಂದುಳಿದಿರುವಿಕೆ, ಈಗ ಅವರು ಸಾಧಿಸುತ್ತಿರುವ ಪ್ರಗತಿಯ ಚಿತ್ರಣವನ್ನು ವರದಿ ನೀಡುತ್ತದೆ.
ಹೆಚ್ಚಲಿದೆ ಲಿಂಗಾನುಪಾತ
2011ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 121.1 ಕೋಟಿ. ಈ ಪೈಕಿ ಶೇ 48.5ರಷ್ಟು ಮಹಿಳೆಯರು. 2036ರ ವೇಳೆಗೆ ದೇಶದ ಜನಸಂಖ್ಯೆ 152.2 ಕೋಟಿಗೆ ಏರುವ ಅಂದಾಜಿದ್ದು, ಮಹಿಳೆಯರ ಸಂಖ್ಯೆಯಲ್ಲೂ ಕೊಂಚ ಹೆಚ್ಚಳವಾಗಲಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ 48.8ರಷ್ಟು ಮಹಿಳೆಯರು ಇರಲಿದ್ದಾರೆ ಎಂದು ವರದಿ ಹೇಳಿದೆ.
2036ರ ವೇಳೆಗೆ ದೇಶದಲ್ಲಿ ಲಿಂಗಾನುಪಾತ ಕೂಡ ಜಾಸ್ತಿಯಾಗಲಿದೆ. 2011ರಲ್ಲಿ 943 ಪುರುಷರಿಗೆ 943 ಮಹಿಳೆಯರಿದ್ದರು. 2036ರ ವೇಳೆಗೆ ಈ ಸಂಖ್ಯೆ 952ಕ್ಕೆ ತಲುಪುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ. 2036ರ ವೇಳೆಗೆ ಗ್ರಾಮೀಣ ಭಾಗಗಳಲ್ಲಿ ಲಿಂಗಾನುಪಾತ 1000:969 ಇದ್ದರೆ, ನಗರ ಪ್ರದೇಶಗಳಲ್ಲಿ 1000:926 ಇರಲಿದೆ. ಲಿಂಗ ಸಮಾನತೆಯ ದೃಷ್ಟಿಯಿಂದ ಇದು ಸಕಾರಾತ್ಮಕ ಬೆಳವಣಿಗೆ ಎಂದು ವರದಿ ವಿವರಿಸಿದೆ.
ಫಲವಂತಿಕೆ ದರ ಕುಸಿತ
ದೇಶದಲ್ಲಿ ಮಹಿಳೆಯರು ಮಕ್ಕಳನ್ನು ಪಡೆಯುವ ಒಟ್ಟು ಫಲವಂತಿಕೆ ದರ (total fertility rate–ಟಿಎಫ್‌ಆರ್) ಕಡಿಮೆಯಾಗುತ್ತಿರುವುದನ್ನು ವರದಿ ಉಲ್ಲೇಖಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲೂ ಈ ದರ ಕಡಿಮೆಯಾಗಿದೆ. (ಟಿಎಫ್‌ಆರ್ ಎಂದರೆ, ಸಂತಾನೋತ್ಪತ್ತಿ ವಯೋಮಾನದ ಪ್ರತಿಯೊಬ್ಬ ಮಹಿಳೆಯು ಮಕ್ಕಳನ್ನು ಪಡೆಯುವ ಸರಾಸರಿ ಸಾಮರ್ಥ್ಯ. ದೇಶದ ಜನಿಸುವ ಮಕ್ಕಳ ಸಂಖ್ಯೆಯನ್ನು ಸಂತಾನೋತ್ಪತ್ತಿ ವಯೋಮಾನದ ಒಟ್ಟು ಮಹಿಳೆಯರ ಸಂಖ್ಯೆಯೊಂದಿಗೆ ತಾಳೆ ಮಾಡಿ ಫಲವಂತಿಕೆ ದರವನ್ನು ಲೆಕ್ಕ ಹಾಕಲಾಗುತ್ತದೆ). 2016ರಲ್ಲಿ ಈ ದರ 2.3 ಇದ್ದರೆ, 2020ರಲ್ಲಿ ಇದು 2ಕ್ಕೆ ಇಳಿದಿದೆ. ಅನಕ್ಷರಸ್ಥ ತಾಯಂದಿರಲ್ಲಿ ಈ ದರ 3.1ರಷ್ಟಿದ್ದರೆ, ಶಿಕ್ಷಿತರಲ್ಲಿ 1.9ರಷ್ಟಿದೆ. ಪದವಿ ಪಡೆದಿರುವ ತಾಯಂದಿರ ಫಲವಂತಿಕೆ ದರ 1.6ರಷ್ಟು ಇದೆ.
ವಯಸ್ಸಿಗೆ ಅನುಗಣವಾಗಿ ಫಲವಂತಿಕೆ ದರದಲ್ಲಿ (ಎಎಸ್‌ಎಫ್‌ಆರ್– ನಿರ್ದಿಷ್ಟ ವಯಸ್ಸಿನ ಅಥವಾ ವಯೋಮಾನದ ಮಹಿಳೆಯರು ಮಕ್ಕಳಿಗೆ ಜನ್ಮ ನೀಡುವ ಪ್ರಮಾಣ. ಆ ವಯಸ್ಸಿನ ಅಥವಾ ಆ ವಯೋಮಾನದ 1000 ಮಹಿಳೆಯರ ಆಧಾರದಲ್ಲಿ ಈ ದರವನ್ನು ಲೆಕ್ಕಹಾಕಲಾಗುತ್ತದೆ) ಏರಿಳಿತ ಕಂಡುಬಂದಿದೆ.
2016ಕ್ಕೆ ಹೋಲಿಸಿದರೆ, 20ರಿಂದ 24 ವರ್ಷ ವಯಸ್ಸಿನ ಮಹಿಳೆಯರ ಫಲವಂತಿಕೆ ದರ 2020ರಲ್ಲಿ 135.4ರಿಂದ 113ಕ್ಕೆ ಇಳಿದಿದೆ. ಅದೇ ರೀತಿ, 25ರಿಂದ 29 ವರ್ಷ ವಯಸ್ಸಿನ ಮಹಿಳೆಯರ ಫಲವಂತಿಕೆ ದರ 166ರಿಂದ 139.6ಕ್ಕೆ ಕುಸಿದಿದೆ. ಶಿಕ್ಷಣ ಪಡೆದು, ಉದ್ಯೋಗಕ್ಕೆ ಸೇರಿ ಆರ್ಥಿಕವಾಗಿ ಸ್ವಾವಲಂಬಿಗಳಾದ ಬಳಿಕ ಮಕ್ಕಳು ಪಡೆಯುವ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿರುವುದು ಇದಕ್ಕೆ ಕಾರಣವಿರಬಹುದು ಎಂದು ವರದಿ ಹೇಳಿದೆ. ಒಂದು ವೇಳೆ ಇದು ನಿಜವಾಗಿದ್ದಲ್ಲಿ ‘ಮಹಿಳೆಯರು ಬೇಗ ಮದುವೆಯಾಗಿ ಮಕ್ಕಳನ್ನು ಪಡೆಯಬೇಕು’ ಎಂಬ ಸಮಾಜದ ತಪ್ಪು ಕಲ್ಪನೆಯನ್ನು ಮಹಿಳೆಯರು ದೂರಮಾಡಿದಂತಾಗುತ್ತದೆ ಎಂದು ವರದಿ ಹೇಳಿದೆ.
15ರಿಂದ 19ರ ವಯೋಮಾನದವರ ಫಲವಂತಿಕೆ ದರ 2020ರಲ್ಲಿ 11.3ರಷ್ಟಿದ್ದು, ಹೆಣ್ಣುಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಮದುವೆ ಮಾಡುವುದು ಮತ್ತು ಮಕ್ಕಳನ್ನು ಪಡೆಯುವುದರ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅದು ಪ್ರತಿಪಾದಿಸಿದೆ.
ಇಳಿದ ಶಿಶು ಮತ್ತು ತಾಯಿ ಮರಣ ಪ್ರಮಾಣ
ಸರ್ಕಾರಗಳ ಸತತ ಪ್ರಯತ್ನದಿಂದಾಗಿ ನವಜಾತ ಶಿಶು ಮತ್ತು ತಾಯಿ ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ವರದಿ ಹೇಳಿದೆ. 2008ರಲ್ಲಿ ನವಜಾತ ಶಿಶು ಮರಣ ಪ್ರಮಾಣ (Infant Mortality rate) (ಪ್ರತಿ 1,000 ಸಜೀವ ಜನನಕ್ಕೆ ಮೃತಪಡುವ ನವಜಾತ ಶಿಶುಗಳ ಸಂಖ್ಯೆ) 53 ಇತ್ತು. 2020ರ ವೇಳೆಗೆ ಅದು 28ಕ್ಕೆ ಇಳಿಕೆಯಾಗಿದೆ.
ಅದೇ ರೀತಿ, 2004–06ರಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಂದಿರ ಮರಣ ಅನುಪಾತ 254 ಇತ್ತು (maternal mortality ratio– ತಾಯಿ ಮರಣ ಅನುಪಾತ ಎಂದರೆ, ಹೆರಿಗೆ ಸಂದರ್ಭದಲ್ಲಿ ಮೃತಪಡುವ ಮಹಿಳೆಯರ ಸಂಖ್ಯೆ. ವರ್ಷದಲ್ಲಿ ವರದಿಯಾಗುವ ಪ್ರತಿ ಒಂದು ಲಕ್ಷ ಸಜೀವ ಜನನ ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಇದನ್ನು ಲೆಕ್ಕಹಾಕಲಾಗುತ್ತದೆ). 2016–18ಕ್ಕೆ ಅದು 97ಕ್ಕೆ ಇಳಿದಿದೆ.
ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ) ಅನುಸಾರ 2030ರ ವೇಳೆಗೆ ಈ ಅನುಪಾತವನ್ನು 70ರ ಒಳಗೆ ತರಬೇಕಾಗಿದೆ.
ದಿನಗೂಲಿಯಲ್ಲಿ ವ್ಯತ್ಯಾಸ
ಸರ್ಕಾರಿ ಕಾಮಗಾರಿಗಳನ್ನು ಬಿಟ್ಟು ಇತರೆ ಕೆಲಸಗಳಲ್ಲಿ ತಾತ್ಕಾಲಿಕ ಅವಧಿಯ ಕಾರ್ಮಿಕರು ಪಡೆಯುವ ದಿನಗೂಲಿಯಲ್ಲಿಯೂ ಪುರುಷರು ಮತ್ತು ಮಹಿಳೆಯರಲ್ಲಿ ಎದ್ದುಕಾಣುವ ವ್ಯತ್ಯಾಸವಿದೆ. ಈ ವಿಚಾರದಲ್ಲಿ ಗ್ರಾಮೀಣ ಪ್ರದೇಶಗಳಿಗಿಂತಲೂ ನಗರ ಪ್ರದೇಶದಲ್ಲಿ ಹೆಚ್ಚು ಅಂತರ ಇರುವುದು ಗಮನಾರ್ಹವಾಗಿದೆ.
ಕೇಂದ್ರ ಮಂತ್ರಿ ಪರಿಷತ್‌ನಲ್ಲಿ ಮಹಿಳೆಯರ ಪಾಲು
ಭಾರತದ ರಾಜಕಾರಣದಲ್ಲಿ ಮಹಿಳೆಯರ ಪಾತ್ರವು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವ ಮತ್ತು ಲೋಕಸಭ, ವಿಧಾನಸಭೆಗಳಿಗೆ ಆಯ್ಕೆ ಆಗುತ್ತಿರುವ ಪ್ರತಿನಿಧಿಗಳ ಸಂಖ್ಯೆಯು ಪುರುಷರಿಗೆ ಹೋಲಿಸಿದರೆ ಭಾರಿ ಕಡಿಮೆ ಇದೆ. ಅದಕ್ಕೆ ತಕ್ಕಂತೆ ಕೇಂದ್ರ ಮಂತ್ರಿ ಪರಿಷತ್‌ನಲ್ಲಿ ಮಹಿಳೆಯರ ಸಂಖ್ಯೆ ದಶಕಗಳಿಂದಲೂ ಕಡಿಮೆಯೇ ಇದೆ. ಮಹಿಳಾ ಮಂತ್ರಿಗಳ ಪ್ರಮಾಣವು 2015ರಲ್ಲಿ ಗರಿಷ್ಠ ಮಟ್ಟ ಮುಟ್ಟಿತ್ತು (ಶೇ 17.8). ಹತ್ತಕ್ಕಿಂತ ಹೆಚ್ಚು ಲೋಕಸಭಾ ಸ್ಥಾನಗಳಿರುವ ರಾಜ್ಯಗಳ ಪೈಕಿ ಒಟ್ಟು ಸಂಸದರ ಪೈಕಿ ಮಹಿಳಾ ಸಂಸದರ ಪ್ರಮಾಣವು ಒಡಿಶಾದಲ್ಲಿ ಅತಿ ಹೆಚ್ಚು (ಶೇ 33) ಇದ್ದರೆ, ಕೇರಳದಲ್ಲಿ ಅತಿ ಕಡಿಮೆ (ಶೇ 5) ಇತ್ತು (2023ರ ಅಂಕಿಅಂಶ).
ವಿವಿಧ ವಲಯಗಳಲ್ಲಿ ತೊಡಗಿರುವ ಜನಸಂಖ್ಯೆ
ವಿವಿಧ ವಲಯಗಳಲ್ಲಿ ತೊಡಗಿರುವ ಜನಸಂಖ್ಯೆಯನ್ನು ಗಮನಿಸಿದರೆ, ಗ್ರಾಮೀಣ ಪ್ರದೇಶದ ಮಹಿಳೆಯರ ಪೈಕಿ ಮುಕ್ಕಾಲು ಪಾಲು ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿದ್ದರೆ, ಪುರುಷರ ಪೈಕಿ ಸುಮಾರು ಅರ್ಧದಷ್ಟು ಮಂದಿ ಕೃಷಿಯಲ್ಲಿ ತೊಡಗಿದ್ದಾರೆ. ಉತ್ಪಾದನಾ ವಲಯದಲ್ಲಿ ಇಬ್ಬರೂ ಬಹುತೇಕ ಸಮನಾಗಿದ್ದರೆ, ನಿರ್ಮಾಣ ವಲಯದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶ ಎರಡೂ ಕಡೆ ಪುರುಷರು ಹೆಚ್ಚಾಗಿದ್ದಾರೆ.
ಡಬ್ಲ್ಯುಪಿಆರ್
15–59 ವರ್ಷದ ನಡುವಿನ ವಯಸ್ಸಿನ ಆಧಾರದಲ್ಲಿ ಡಬ್ಲ್ಯುಪಿಆರ್ (ಕಾರ್ಮಿಕ-ಜನಸಂಖ್ಯೆ ಅನುಪಾತವು ಒಂದು ನಿರ್ದಿಷ್ಟ ಪ್ರದೇಶದಲ್ಲಿರುವ ಒಟ್ಟು ಜನಸಂಖ್ಯೆ ಮತ್ತು ಆ ಜನಸಂಖ್ಯೆಯಲ್ಲಿ ಉದ್ಯೋಗಸ್ಥ ವ್ಯಕ್ತಿಗಳ ಪ್ರಮಾಣವನ್ನು ಒದಗಿಸುತ್ತದೆ)ಅನ್ನು ನೋಡುವುದಾದರೆ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಮಾಡುವ ಮಹಿಳೆಯರ ಸಂಖ್ಯೆಯು ಪುರುಷರ ಸಂಖ್ಯೆಗಿಂತ ಸುಮಾರು ಶೇ 50ರಷ್ಟು ಕಡಿಮೆ ಇದೆ. ನಗರ ಪ್ರದೇಶದಲ್ಲಿ ಈ ವಯಸ್ಸಿನ ಮಹಿಳೆಯರ ಡಬ್ಲ್ಯುಪಿಆರ್ ಪುರುಷರ ಪ್ರಮಾಣದಲ್ಲಿ ಕಾಲುಭಾಗದಷ್ಟಿದೆ.
ಆಧಾರ: ವುಮೆನ್ ಅಂಡ್ ಮೆನ್ ಇನ್ ಇಂಡಿಯಾ–2023 ವರದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.