ADVERTISEMENT

ಆಳ–ಅಗಲ: ಗುಕೇಶ್‌ ಮುಡಿಗೇರುವುದೇ ವಿಶ್ವ ಚೆಸ್‌ ಕಿರೀಟ?

ನಾಗೇಶ್ ಶೆಣೈ ಪಿ.
Published 25 ನವೆಂಬರ್ 2024, 0:27 IST
Last Updated 25 ನವೆಂಬರ್ 2024, 0:27 IST
<div class="paragraphs"><p>ಗುಕೇಶ್ </p></div>

ಗುಕೇಶ್

   

ಪಿಟಿಐ ಚಿತ್ರ

ಭಾರತದ ಪ್ರತಿಭಾವಂತ ಗುಕೇಶ್ ದೊಮ್ಮರಾಜು ಮತ್ತು ಹಾಲಿ ಚಾಂಪಿಯನ್, ಚೀನಾದ ಡಿಂಗ್ ಲಿರೆನ್‌ ನಡುವೆ ವಿಶ್ವ ಚಾಂಪಿಯನ್‌ ಕಿರೀಟಕ್ಕಾಗಿ 12 ಪಂದ್ಯಗಳ ಫೈನಲ್ ಸಿಂಗಪುರದ ಸೆಂಟೊಸಾ ದ್ವೀಪದಲ್ಲಿ ಇಂದು ಆರಂಭವಾಗಲಿದೆ. ಚೆಸ್‌ ಪರಿಣತರ ಪ್ರಕಾರ ಗುಕೇಶ್ ಫೇವರೀಟ್‌ ಆಗಿದ್ದಾರೆ. ಗುಕೇಶ್ ಚೆನ್ನೈನವರೇ ಆದ ವಿಶ್ವನಾಥನ್ ಆನಂದ್ ನಂತರ ಭಾರತದ ಎರಡನೇ ಹಾಗೂ ವಿಶ್ವದ ಅತಿ ಕಿರಿಯ ಚಾಂಪಿಯನ್ ಆಗುವರೇ ಎಂಬ ಕುತೂಹಲ ಮೂಡಿದೆ

ಅದು ಕಾನ್ಪುರದಲ್ಲಿ ನಡೆದ 2022ರ ರಾಷ್ಟ್ರೀಯ ಚೆಸ್‌ ಚಾಂಪಿಯನ್‌ಷಿಪ್‌. 23 ಗ್ರ್ಯಾಂಡ್‌ಮಾಸ್ಟರ್‌ಗಳು ಮತ್ತು 30 ಇಂಟರ್‌ನ್ಯಾಷನಲ್ ಮಾಸ್ಟರ್‌ಗಳು ಭಾಗವಹಿಸಿದ್ದು, ಅತಿ ಪ್ರಬಲ ಕಣ ಎನಿಸಿತ್ತು. ಈ ಕೂಟದಲ್ಲಿ ಆಡಿದ್ದ ಇಬ್ಬರು ಪ್ರತಿಭಾನ್ವಿತರು ತಮ್ಮ ಮೊದಲ ಪ್ರಯತ್ನದಲ್ಲೇ ಕ್ರಮವಾಗಿ ಚಾಂಪಿಯನ್ ಮತ್ತು ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಈಗ ಆ ಇಬ್ಬರು ಆಟಗಾರರು ಭಾರತದ ಚೆಸ್‌ನ ಮಿನುಗುತಾರೆಗಳಾಗಿದ್ದಾರೆ. ಅಲ್ಲಿ ಪ್ರಶಸ್ತಿ ಗೆದ್ದವರು ಅರ್ಜುನ್ ಇರಿಗೇಶಿ; ರನ್ನರ್ ಅಪ್ ಆದವರು ಗುಕೇಶ್ ದೊಮ್ಮರಾಜು.

ADVERTISEMENT

ಒಂದೆಡೆ, ಅರ್ಜುನ್ ಅಲ್ಪ ಅವಧಿಯಲ್ಲೇ ಫಿಡೆ ವಿಶ್ವ ಕ್ರಮಾಂಕದಲ್ಲಿ ಮೇಲೇರುತ್ತಾ ಸದ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನೊಂದೆಡೆ, ಗುಕೇಶ್‌ ಕೂಡ ದಾಪುಗಾಲಿಟ್ಟು ಕ್ರಮಾಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಬುಡಾಪೆಸ್ಟ್‌ ಒಲಿಂಪಿಯಾಡ್‌ನಲ್ಲಿ ಮೊದಲ ಬಾರಿ ಭಾರತ ಐತಿಹಾಸಿಕ ಚಿನ್ನ ಗೆಲ್ಲಲು ಇವರಿಬ್ಬರ ಪಾತ್ರ ಪ್ರಮುಖವಾಗಿದ್ದು ಗೊತ್ತೇ ಇದೆ.

ಗುಕೇಶ್‌, ಈ ವರ್ಷದ ಏಪ್ರಿಲ್‌ನಲ್ಲಿ ಕೆನಡಾದ ಟೊರಾಂಟೊದಲ್ಲಿ ನಡೆದಿದ್ದ ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಗೆದ್ದು ವಿಶ್ವ ಚಾಂಪಿಯನ್‌ಗೆ ಸವಾಲೊಡ್ಡುವ ಸ್ಪರ್ಧಿ (ಚಾಲೆಂಜರ್‌) ಆಗುವ ಅರ್ಹತೆ ಪಡೆದಿದ್ದರು. ಗುಕೇಶ್ ವಯಸ್ಸು ಆಗ 18 ವರ್ಷ ತುಂಬಿರಲಿಲ್ಲ. ಅತಿ ಕಿರಿಯ ಸ್ಪರ್ಧಿ ಎಂಬ ಹಿರಿಮೆಗೆ ಭಾಜನರಾದ ಗುಕೇಶ್‌, ಅತಿ ಕಿರಿಯ ವಿಶ್ವ ಚಾಂಪಿಯನ್‌ ಆಗುವರೇ ಎಂಬುದನ್ನು ನಿರ್ಧರಿಸುವ ಗಳಿಗೆ ಈಗ ಬಂದಿದೆ.

ಫೇವರೀಟ್‌: ಚೆಸ್‌ ಪರಿಣತರು, ವಿಶ್ಲೇಷಕರು ಗುಕೇಶ್ ಅವರು ಚಾಂಪಿಯನ್ ಪಟ್ಟಕ್ಕೆ ಫೇವರೀಟ್‌ ಎಂದು ಒಕ್ಕೊರಲಿನಿಂದ ಈಗಾಗಲೇ ಹೇಳಿದ್ದಾರೆ. ಇದಕ್ಕೆ ಕಾರಣ ನೀಡುವುದು ಅಷ್ಟೇನೂ ಕಷ್ಟವಲ್ಲ. ಈ ವರ್ಷ ಗುಕೇಶ್ ಅಮೋಘ ಫಾರ್ಮ್‌ನಲ್ಲಿದ್ದಾರೆ. 2023ರ ಏಪ್ರಿಲ್‌ನಲ್ಲಿ ವಿಶ್ವ ಚಾಂಪಿಯನ್‌ ಆದ ನಂತರ ಡಿಂಗ್ ಲಿರೆನ್‌ ಕೆಲಕಾಲ ಚೆಸ್‌ನಿಂದ ದೂರವಾಗಿದ್ದರು. ಈ ವರ್ಷ ತಮ್ಮ ಎಂದಿನ ಲಯ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. 

ಕ್ಯಾಂಡಿಡೇಟ್ಸ್‌ ಟೂರ್ನಿಗೆ ಗುಕೇಶ್‌ ಅರ್ಹತೆ ಪಡೆದಿದ್ದು ಕೂಡ ಅದೃಷ್ಟದ ಬಲದಿಂದ. ಅವರಿಗೆ ನೆರವಾಗಲು ಡಿಸೆಂಬರ್‌ನಲ್ಲಿ ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಟೂರ್ನಿ ಏರ್ಪಡಿಸಲಾಯಿತು. ಇದರಲ್ಲಿ ಅವರು ಚಾಂಪಿಯನ್‌ ಆಗಿದ್ದು ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅವಕಾಶದ ಬಾಗಿಲನ್ನು ತೆರೆಯಿತು. ಅಲ್ಲಿ ಗೆದ್ದ ನಂತರ ಅವರು ಫಿಡೆ ಸರ್ಕಿಟ್‌ನಲ್ಲಿ ಕರುವಾನಾ ನಂತರ ಎರಡನೇ ಸ್ಥಾನದಲ್ಲಿದ್ದರು. ಆದರೆ, ವಿಶ್ವಕಪ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದರಿಂದ ಕರುವಾನಾ ಅವರಿಗೆ ಅದಕ್ಕೆ ಮೊದಲೇ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ದೊರಕಿತ್ತು. ಹೀಗಾಗಿ ಗುಕೇಶ್‌ ಅವರಿಗೆ, ಎಂಟೇ ಆಟಗಾರರಿಗೆ ಅವಕಾಶವಿರುವ ಕ್ಯಾಂಡಿಡೇಟ್ಸ್‌ ಟೂರ್ನಿಯ ಬಾಗಿಲು ತೆರೆಯಿತು. ನಂತರದ್ದು ಇತಿಹಾಸ.

ಈ ವರ್ಷ ಗುಕೇಶ್ ಉತ್ತಮ ಲಯದಲ್ಲಿದ್ದಾರೆ. ವರ್ಷದ ಆರಂಭದಲ್ಲಿ ನೆದರ್ಲೆಂಡ್ಸ್‌ನ ವಿಯ್ಕ್‌ ಆನ್‌ ಝೀಯಲ್ಲಿ ನಡೆದ ಟಾಟಾ ಸ್ಟೀಲ್‌ ಚೆಸ್ ಟೂರ್ನಿಯಲ್ಲಿ ಅವರಿಗೆ ರನ್ನರ್ ಅಪ್‌ ಸ್ಥಾನ. ಏಪ್ರಿಲ್‌ನಲ್ಲಿ ಕ್ಯಾಂಡಿಡೇಟ್ಸ್‌ ಗೆಲುವು. ಸೆಪ್ಟೆಂಬರ್‌ನಲ್ಲಿ ಬುಡಾಪೆಸ್ಟ್‌ ಒಲಿಂಪಿಯಾಡ್‌ನಲ್ಲಿ ಮೊದಲ ಬೋರ್ಡ್‌ನಲ್ಲಿ ಅವರ ಪ್ರದರ್ಶನ ಮಟ್ಟ ಅಮೋಘವಾಗಿತ್ತು. ಒಲಿಂಪಿಯಾಡ್‌ನಲ್ಲಿ ಅರ್ಜುನ್ ಮತ್ತು ಗುಕೇಶ್ ಜೋಡಿ ಅಜೇಯವಾಗಿದ್ದು, ಭಾರತ ಮೊದಲ ಬಾರಿ ಚಿನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತು. ಗುಕೇಶ್‌ ಆಡಿದ 10 ಪಂದ್ಯಗಳಲ್ಲಿ ಎಂಟು ಗೆಲುವು, ಎರಡು ಡ್ರಾ ಮಾಡಿಕೊಂಡು 9 ಅಂಕಗಳೊಡನೆ ಅಜೇಯರಾಗುಳಿದರು. ಮೂರನೇ ಬೋರ್ಡ್‌ನಲ್ಲಿ ಅರ್ಜುನ್ 11 ಪಂದ್ಯಗಳಿಂದ 10 ಅಂಕ ಗಳಿಸಿದರು. ವಿಶ್ವದ ಎರಡನೇ ಕ್ರಮಾಂಕದ ಫ್ಯಾಬಿಯಾನೊ ಕರುವಾನಾ ಮೇಲೆ ಗಳಿಸಿದ ಗೆಲುವು ಇದರಲ್ಲಿ ಪ್ರಮುಖವಾದುದು. ಮಹಾಬಲಿಪುರಂನಲ್ಲಿ ನಡೆದ 2022ರ ಒಲಿಂಪಿಯಾಡ್‌ನಲ್ಲೂ ಅವರು ಅಮೆರಿಕದ ಕರುವಾನಾ ಮೇಲೆ ಜಯಗಳಿಸಿದ್ದರು.

ಕ್ಯಾಂಡಿಡೇಟ್ಸ್‌ ಟೂರ್ನಿ ಗೆದ್ದ ನಂತರ ಗುಕೇಶ್ ವಿಶ್ವ ಚಾಂಪಿಯನ್‌ಷಿಪ್‌ಗೆ ಸಿದ್ಧತೆ ಆರಂಭಿಸಿದ್ದು, ಅದಕ್ಕೆ ಪೂರಕ ಎಂಬಂತೆ ಒಲಿಂಪಿಯಾಡ್‌ ಪ್ರದರ್ಶನವೂ ಇತ್ತು.

‌ಲಿರೆನ್‌ಗೆ ಒತ್ತಡ: ಕಜಕಸ್ತಾನದ ಅಸ್ತಾನದಲ್ಲಿ 2023ರ ಏಪ್ರಿಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌
ಷಿಪ್‌ನಲ್ಲಿ ರಷ್ಯಾದ ಇಯಾನ್‌ ನಿಪೊಮ್‌ನಿಷಿ ವಿರುದ್ಧ ಗೆದ್ದು ಕಿರೀಟ ಧರಿಸಿದ್ದ ಡಿಂಗ್ ಲಿರೆನ್‌ ನಂತರ ಅದೇ ಮಟ್ಟದಲ್ಲಿ ಆಡಲಿಲ್ಲ. ಹಾಗೆ ನೋಡಿದರೆ, ಅವರು ಆಡಿದ್ದೇ ಕಡಿಮೆ. ಈ ವರ್ಷವಂತೂ ಅವರು ಕ್ಲಾಸಿಕಲ್ (ಸಾಂಪ್ರದಾಯಿಕ) ಮಾದರಿಯ ಆಟದಲ್ಲಿ ಒಂದೂ ಪಂದ್ಯ ಗೆಲ್ಲಲು ಆಗಿಲ್ಲ. ಆಡಿದ ಕೆಲವೇ ಕೆಲವು ಟೂರ್ನಿಗಳಲ್ಲೂ ಅವರ ಪ್ರದರ್ಶನದ ಮಟ್ಟ ನಿರೀಕ್ಷೆಯಂತೆ ಇರಲಿಲ್ಲ. ಸ್ವತಃ ಲಿರೆನ್‌ ತಮ್ಮ ಆಟದ ಮಟ್ಟ ಕಡಿಮೆಯಾಗಿದೆ ಎಂದು ಎರಡು ಬಾರಿ ಹೇಳಿಕೆ ನೀಡಿದ್ದಾರೆ.

2017–18ರಲ್ಲಿ ಲಿರೆನ್‌ ಅಮೋಘ ಸಾಧನೆಯೊಡನೆ ಚೆಸ್‌ ಲೋಕದ ಗಮನಸೆಳೆದಿದ್ದರು. ಒಂದು ಹಂತದಲ್ಲಿ ಸತತವಾಗಿ 100 ಪಂದ್ಯಗಳಲ್ಲಿ ಅಜೇಯರಾಗಿದ್ದರು. ಅವರು 2018ರ ನವೆಂಬರ್‌ನಲ್ಲಿ 2816ರ ಜೀವನ ಶ್ರೇಷ್ಠ ರೇಟಿಂಗ್ ತಲುಪಿದ್ದರು. ಕಾರ್ಲ್‌ಸನ್‌ ನಂತರ ಎರಡನೇ ಸ್ಥಾನದಲ್ಲಿದ್ದರು.

ಕಳೆದ ವರ್ಷ ವಿಶ್ವ ಚಾಂಪಿಯನ್‌ ಆದ ನಂತರ ಮಾನಸಿಕ ದಣಿವು, ನಿದ್ರಾಹೀನತೆ ಲಿರೆನ್ ಅವರನ್ನು ಕಾಡಿತ್ತು. ಖಿನ್ನತೆಗೆ ಚಿಕಿತ್ಸೆ ಪಡೆದಿರುವುದಾಗಿಯೂ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ವರ್ಷ ಅವರು ಸ್ಪರ್ಧಾತ್ಮಕ ಚೆಸ್‌ಗೆ ಮರಳಿದರೂ ‌‌ಯಶಸ್ಸು ಕಾಣುತ್ತಿಲ್ಲ. ಒಲಿಂಪಿಯಾಡ್‌ನಲ್ಲಿ ಗುಕೇಶ್ ಜೊತೆ ಅವರು ಮುಖಾಮುಖಿಯಾಗಲಿಲ್ಲ. ಕೊನೆಯ ಬಾರಿ, ಸಿಂಕ್ವೆಫೀಲ್ಡ್‌ ಟೂರ್ನಿಯಲ್ಲಿ (ಅಮೆರಿಕ) ಪರಸ್ಪರ ಎದುರಾದಾಗ ಆ ಪಂದ್ಯ ‘ಡ್ರಾ’ ಆಗಿತ್ತು.

ಈಗ ಗುಕೇಶ್‌ ಅವರಿಗೆ ವಿಶ್ವ ಚಾಂಪಿಯನ್ ಕಿರೀಟ ದಕ್ಕುವ ಅವಕಾಶ ಉಜ್ವಲವಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಅನುಭವಿ ಲಿರೆನ್‌ ಲಯ ಕಂಡುಕೊಂಡರೆ ಮಾತ್ರ ಉತ್ತಮ ಪೈಪೋಟಿ ಏರ್ಪಡಬಹುದು.

ಉಳಿದವರು ಕಂಡಂತೆ....

‘ಗುಕೇಶ್‌ ಅವರ ಲೆಕ್ಕಾಚಾರ ಆಳವಾಗಿರುತ್ತದೆ. ಅದು ಇತರ ಆಟಗಾರರ ಲೆಕ್ಕಾಚಾರಗಳಿಗಿಂತ ಹೆಚ್ಚೇ’ ಎನ್ನುತ್ತಾರೆ ವಿಶ್ವದ ಅಗ್ರಮಾನ್ಯ ಆಟಗಾರ ಹಾಗೂ ಮಾಜಿ ವಿಶ್ವ ಚಾಂಪಿಯನ್ ಮ್ಯಾಗ್ನಸ್‌ ಕಾರ್ಲ್‌ಸನ್‌. ದೀರ್ಘ ಅವಧಿಯ ಕ್ಲಾಸಿಕಲ್ ಆಟದಲ್ಲಿ ಇಂಥ ಲೆಕ್ಕಾಚಾರದ ಸಾಮರ್ಥ್ಯ ತುಂಬಾ ಅನುಕೂಲಕರ ಎನ್ನುವುದು ಕಾರ್ಲ್‌ಸನ್‌ ಅನಿಸಿಕೆ.

‘ನಾನು ಮತ್ತು ಪ್ರಗ್ಗು (ಪ್ರಜ್ಞಾನಂದ) ಬೋರ್ಡ್‌ನಲ್ಲಿನ ಸ್ಥಿತಿ ಅವಲೋಕಿಸಿ ಆ ಸಂದರ್ಭಕ್ಕೆ ಮನಸ್ಸಿಗೆ ಹೊಳೆದ ಉತ್ತಮ ನಡೆ ಆಡುವುದಕ್ಕೆ ಒತ್ತು ನೀಡುತ್ತೇವೆ. ಇದರಿಂದಾಗಿ ನಾವು ರ‍್ಯಾಪಿಡ್‌, ಬ್ಲಿಟ್ಜ್ ಮಾದರಿಯಲ್ಲಿ ಹೆಚ್ಚು ಯಶಸ್ಸು ಪಡೆಯುತ್ತೇವೆ. ಆದರೆ ಗುಕೇಶ್‌ ಗಹನವಾಗಿ, ಆಳ ಲೆಕ್ಕಾಚಾರಗಳನ್ನು ಮಾಡಿಯೇ ಮುಂದಿನ ನಡೆಗಳನ್ನು ಇರಿಸುತ್ತಾರೆ. ಅವರು ಆ ಕ್ಷಣಕ್ಕೆ ಪ್ರಜ್ಞಾಪೂರ್ವಕ ನಡೆ ಇಡುವುದಿಲ್ಲವೆಂದೇನಲ್ಲ. ಆದರೆ ಅವರು ಆಳವಾದ ವಿಶ್ಲೇಷಣೆ ನಡೆಸಿಯೇ ನಡೆಯನ್ನಿಡಲು ಮುಂದಾಗುತ್ತಾರೆ’ ಎಂದು ಬುಡಾಪೆಸ್ಟ್‌ ಒಲಿಂಪಿಯಾಡ್‌ ಸಮಾರೋಪದಲ್ಲಿ ಅರ್ಜುನ್ ಇರಿಗೇಶಿ, ಸಹ ಆಟಗಾರನ ಆಟದ ಶೈಲಿಯ ಬಗ್ಗೆ ಪ್ರತಿಕ್ರಿಯಿಸಿದ್ದರು.

ಗುಕೇಶ್, ಒಂದು ಸಂದರ್ಭದಲ್ಲಿ ಒಂದೇ ವಿಷಯದ ಬಗ್ಗೆ ಹೆಚ್ಚು ಯೋಚಿಸುವುದನ್ನು ರೂಢಿಸಿಕೊಂಡವರು ಎನ್ನುತ್ತಾರೆ ವಿಶ್ವನಾಥನ್ ಆನಂದ್. ಗುಕೇಶ್ ಕೆಲ ಸಮಯದಿಂದ ಚೆನ್ನೈನಲ್ಲಿ ವಿಶ್ವನಾಥನ್ ಆನಂದ್ ಅವರ ವೆಸ್ಟ್‌ಬ್ರಿಜ್‌ ಆನಂದ್‌ ಚೆಸ್‌ ಅಕಾಡೆಮಿಯ ವಿದ್ಯಾರ್ಥಿ.

ಅಂದು ಪ್ರೇಕ್ಷಕ...

ಸುಮಾರು 11 ವರ್ಷಗಳ ಹಿಂದೆ ಚೆನ್ನೈನಲ್ಲಿ ವಿಶ್ವನಾಥನ್ ಆನಂದ್ ಮತ್ತು ಮ್ಯಾಗ್ನಸ್‌ ಕಾರ್ಲ್‌ಸನ್ ನಡುವೆ ವಿಶ್ವ ಚೆಸ್‌ ಚಾಂಪಿಯನ್‌ ಪಟ್ಟಕ್ಕಾಗಿ ಫೈನಲ್ ನಡೆದಿತ್ತು. ಚೆನ್ನೈನ ಹಯಾತ್ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಆ ಪಂದ್ಯ ನೋಡಲು ತಂದೆಯ ಜೊತೆ ಬಂದಿದ್ದ ಏಳು ವರ್ಷದ ಹುಡುಗ ಗುಕೇಶ್ ಈಗ ಸ್ವತಃ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಆಡುತ್ತಿದ್ದಾರೆ. ಆನಂದ್ 12 ವರ್ಷಗಳಲ್ಲಿ ಐದು ಬಾರಿ ವಿಶ್ವ ಚಾಂಪಿಯನ್‌ ಆಗಿದ್ದರು.

ಭಾರತದ ಚೆಸ್‌ ರಾಜಧಾನಿಯಾಗಿ ಚೆನ್ನೈ ಬೆಳೆದಿದೆ. ಆನಂದ್ ಅವರಂತೆ ಗುಕೇಶ್‌ ಕೂಡ ಚೆನ್ನೈನವರು. ಕಳೆದ ವರ್ಷ ವಿಶ್ವಕಪ್‌ ಫೈನಲ್ ಆಡಿದ್ದ ಪ್ರಜ್ಞಾನಂದ ರಮೇಶಬಾಬು ಅವರೂ ಚೆನ್ನೈನ ಆಟಗಾರ. ಭಾರತದ 85 ಗ್ರ್ಯಾಂಡ್‌ಮಾಸ್ಟರ್‌ಗಳಲ್ಲಿ 31 ಮಂದಿ ತಮಿಳುನಾಡಿನವರು.

ವೈಶಿಷ್ಟ್ಯಗಳು

  • ನವೆಂಬರ್‌ 25ರಿಂದ ಡಿಸೆಂಬರ್‌ 13ರವರೆಗೆ ನಿಗದಿಯಾಗಿರುವ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ನಾಲ್ಕು ವಿಶ್ರಾಂತಿ ದಿನಗಳೂ (ನವೆಂಬರ್‌ 28, ಡಿಸೆಂಬರ್‌ 2, 6 ಮತ್ತು 10) ಇವೆ. ಉಳಿದ ದಿನಗಳಲ್ಲಿ ಮಧ್ಯಾಹ್ನ 2:30ಕ್ಕೆ ಆಟ ಆರಂಭವಾಗುತ್ತದೆ

  • ಈ ಫೈನಲ್ 14 ಕ್ಲಾಸಿಕಲ್ (ಸಾಂಪ್ರದಾಯಿಕ ಮಾದರಿಯ) ಪಂದ್ಯಗಳನ್ನು ಒಳಗೊಂಡಿದೆ. ಮೊದಲು 7.5 ಪಾಯಿಂಟ್ಸ್ ಗಳಿಸಿದ ಆಟಗಾರ ಚಾಂಪಿಯನ್ ಎನಿಸುತ್ತಾರೆ. ಒಂದು ವೇಳೆ ಸ್ಕೋರ್‌ 7–7 ಸಮಬಲ ಆದರೆ ವಿಜೇತರನ್ನು ನಿರ್ಧರಿಸಲು ಅಲ್ಪಾವಧಿಯ ಟೈಬ್ರೇಕ್‌ ಆಟಗಳನ್ನು ಆಡಿಸಲಾಗುತ್ತದೆ

  • ಫೈನಲ್ ಪಂದ್ಯ ಸುಮಾರು ₹21 ಕೋಟಿ ಬಹುಮಾನ ಹಣ ಹೊಂದಿದೆ

  • ಇಲ್ಲಿ ಚಾಂಪಿಯನ್ ಆದಲ್ಲಿ 18 ವರ್ಷ ವಯಸ್ಸಿನ ಗುಕೇಶ್ ಅತಿ ಕಿರಿಯ ವಿಶ್ವ ಚಾಂಪಿಯನ್ ಎನಿಸಲಿದ್ದಾರೆ. 1985ರಲ್ಲಿ ರಷ್ಯಾದ ಗ್ಯಾರಿ ಕ್ಯಾಸ್ಪರೋವ್ ಅವರು ಅನತೋಲಿ ಕಾರ್ಪೋವ್‌ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆದಾಗ ಅವರ ವಯಸ್ಸು 22

  • ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನ 138 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿ ಫೈನಲ್‌ನಲ್ಲಿ ಏಷ್ಯಾದ ಇಬ್ಬರು ಆಟಗಾರರು ಎದುರಾಳಿಗಳಾಗಿದ್ದಾರೆ

  • ಸದ್ಯ 23ನೇ ಕ್ರಮಾಂಕದಲ್ಲಿರುವ ಲಿರೆನ್‌ (ರೇಟಿಂಗ್‌: 2728) ವಿಶ್ವ ಫೈನಲ್‌ನಲ್ಲಿ ಆಡುತ್ತಿರುವ ಕಡಿಮೆ ಕ್ರಮಾಂಕದ ಆಟಗಾರ. ಈ ಹಿಂದೆ, 2012ರಲ್ಲಿ ಆನಂದ್ ವಿರುದ್ಧ ಫೈನಲ್‌ ಆಡುವಾಗ ಬೋರಿಸ್‌ ಗೆಲ್ಫಾಂಡ್‌ (ಆಗ ರೇಟಿಂಗ್ 2727) ವಿಶ್ವ ಕ್ರಮಾಂಕದಲ್ಲಿ 20ನೇ ಸ್ಥಾನದಲ್ಲಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.