ADVERTISEMENT

ಆಳ-ಅಗಲ | ಭಾರತ–ಚೀನಾ ಒಪ್ಪಂದ: ಗಡಿಯಲ್ಲಿ ನೆಲಸುವುದೇ ಶಾಂತಿ?

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 0:30 IST
Last Updated 24 ಅಕ್ಟೋಬರ್ 2024, 0:30 IST
   

ಭಾರತ ಮತ್ತು ಚೀನಾ ಸಂಬಂಧದಲ್ಲಿ ಹೊಸ ಬದಲಾವಣೆಯೊಂದು ಘಟಿಸುತ್ತಿದೆ. ಎರಡೂ ದೇಶಗಳ ನಡುವೆ ಗಡಿ ಪಹರೆಗೆ ಸಂಬಂಧಿಸಿದಂತೆ ಒಪ್ಪಂದವೊಂದು ಏರ್ಪಟ್ಟಿದೆ. ಗಾಲ್ವಾನ್ ಕಣಿವೆಯಲ್ಲಿ ನಡೆದಿದ್ದ ಘರ್ಷಣೆಯ ನಂತರ ಉಭಯ ರಾಷ್ಟ್ರಗಳ ನಡುವೆ ಸೃಷ್ಟಿಯಾಗಿದ್ದ ಅಂತರ ಕಿರಿದಾಗಬಹುದೆನ್ನುವ ಬಗ್ಗೆ ಕೆಲವರು ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಚೀನಾದ ಬದಲಾದ ನಿಲುವಿಗೆ ಏನು ಕಾರಣ, ಈಗಿನ ಒಪ್ಪಂದದಿಂದ ಭಾರತ ಎಷ್ಟು ದಿನ ನಿರಾಳವಾಗಿರಬಹುದು ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವೇನಲ್ಲ

ಭಾರತ–ಚೀನಾ ನಡುವಣ ಗಡಿ ವಿವಾದ ಸ್ವಲ್ಪ ಪ್ರಮಾಣದಲ್ಲಿ ಬಗೆಹರಿದಿದೆ; ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಗಸ್ತು ನಡೆಸುವ ಸಂಬಂಧ ಭಾರತ ಮತ್ತು ಚೀನಾ ನಡುವೆ ಒಪ್ಪಂದ ಏರ್ಪಟ್ಟಿದೆ ಎಂದು ಭಾರತ ಘೋಷಿಸಿದೆ. ಈ ಒಪ್ಪಂದವು ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ಪಹರೆ ಕಾಯುವುದಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ. ಉಭಯ ರಾಷ್ಟ್ರಗಳ ನಡುವಿನ ಉಳಿದ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆ ನಡೆಯುತ್ತಿದೆ ಎಂದು ಭಾರತ ತಿಳಿಸಿದೆ.         

ಎರಡು ದೇಶಗಳ ನಡುವಿನ ಸ್ನೇಹ ಮತ್ತು ಸಂಘರ್ಷಕ್ಕೆ ದಶಕಗಳ ಇತಿಹಾಸವಿದೆ. 1962ರ ಯುದ್ಧದ ನಂತರ ಎರಡೂ ದೇಶಗಳು ಪರಸ್ಪರ ಮಾತುಕತೆಯೊಂದಿಗೆ ಎಲ್‌ಎಸಿ ರೂಪಿಸಿಕೊಂಡಿದ್ದವು. 2020ರವರೆಗೆ ಆ ರೇಖೆಯಲ್ಲಿ ಬದಲಾವಣೆ ಆಗಿರಲಿಲ್ಲ. ಪ್ಯಾಂಗಾಂಗ್ ಸರೋವರದ ಉತ್ತರದ ದಂಡೆಯಲ್ಲಿರುವ ಎಂಟು ಫಿಂಗರ್‌ವರೆಗೆ (ಪರ್ವತದ ಚಾಚುಗಳು) ಭಾರತ ಪಹರೆ ನಡೆಸಬಹುದಿತ್ತು.

ADVERTISEMENT

ಆದರೆ, 2020ರ ಮೇ ನಂತರ ಚೀನಾ ಒಪ್ಪಂದ ಮುರಿದು, ರೇಖೆಯನ್ನು ಬದಲಿಸಲು ಯತ್ನಿಸಿತ್ತು. ಅದು ಉಭಯ ರಾಷ್ಟ್ರಗಳ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಗಾಲ್ವಾನ್‌ನಲ್ಲಿ ಜೂನ್‌ ತಿಂಗಳಲ್ಲಿ ಘರ್ಷಣೆ ನಡೆದ ಬಳಿಕ ಎರಡೂ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಉಲ್ಬಣಿಸಿತ್ತು. ಭಾರತದ 20 ಸೈನಿಕರು ಹುತಾತ್ಮರಾಗಿದ್ದರೆ, ಚೀನಾದ ಸೇನೆಗೂ ಹಾನಿಯಾಗಿತ್ತು. ಸಂಘರ್ಷದ ನಂತರ ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಡುವೆ ಹಲವು ಸುತ್ತಿನ ಮಾತುಕತೆ ನಡೆದು, ಸಂಘರ್ಷದ ತಾಣಗಳಾಗಿದ್ದ ಗಾಲ್ವಾನ್‌ ಕಣಿವೆ, ಪ್ಯಾಂಗಾಂಗ್‌ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆ, ಗೋಗ್ರಾ–ಹಾಟ್‌ ಸ್ಪ್ರಿಂಗ್ಸ್‌ಗಳಲ್ಲಿ ನಿಯೋಜಿಸಲಾಗಿದ್ದ ಸೇನಾ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳುವ ತೀರ್ಮಾನಕ್ಕೆ ಬರಲಾಗಿತ್ತು. ಇಲ್ಲೆಲ್ಲ ಎರಡೂ ಕಡೆಗಳಲ್ಲಿ ಬಫರ್‌ ವಲಯಗಳನ್ನು ಸೃಷ್ಟಿಸಿ, ಅಲ್ಲಿ ಗಸ್ತು ತಿರುವುದಕ್ಕೆ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದವು. 

ಆದರೆ, ಡೆಪ್ಸಾಂಗ್ ಬಯಲು ಪ್ರದೇಶ ಮತ್ತು ಡೆಮ್‌ಚೋಕ್ ಪ್ರದೇಶಗಳಲ್ಲಿ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿದ್ದ ಚೀನಾ, ಸೇನೆಯನ್ನು ವಾಪಸ್‌ ಕರೆಸಿಕೊಳ್ಳಲು ಒಪ್ಪಿರಲಿಲ್ಲ. ಈ ಬಗ್ಗೆ ನಾಲ್ಕೂವರೆ ವರ್ಷಗಳಿಂದ ಭಾರತವು ಚೀನಾ ಮೇಲೆ ಸತತ ಒತ್ತಡ ಹೇರುತ್ತಲೇ ಇತ್ತು. ಅಂತಿಮವಾಗಿ ಚೀನಾ ಅದಕ್ಕೆ ಈಗ ಸಮ್ಮತಿಸಿದೆ.  

ಈಗ ನಡೆದಿರುವ ಒಪ್ಪಂದವು ಈ ಎರಡು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದು, ಅಲ್ಲಿ ಗಾಲ್ವಾನ್‌ ಘರ್ಷಣೆಗೆ ಪೂರ್ವದಲ್ಲಿದ್ದಂತೆ ಭಾರತ ಗಸ್ತು ತಿರುಗಬಹುದು. ಆದರೆ, ಒಪ್ಪಂದವು ಗಾಲ್ವಾನ್‌ ಕಣಿವೆ, ಪ್ಯಾಂಗಾಂಗ್‌ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆ, ಗೋಗ್ರಾ–ಹಾಟ್‌ ಸ್ಪ್ರಿಂಗ್ಸ್‌ಗಳಿಗೆ ಅನ್ವಯವಾಗುವುದಿಲ್ಲ. 

ಹಿಂದೆ ಗಸ್ತು ತಿರುಗುತ್ತಿದ್ದ ಪ್ರದೇಶ ಈಗ ಭಾರತದ ನಿಯಂತ್ರಣದಲ್ಲಿ ಇಲ್ಲ. ಭಾರತವು ತನ್ನ ಗಡಿಯಲ್ಲಿನ ಬೆಟ್ಟ ಶ್ರೇಣಿಗಳ ಸುಮಾರು 300 ಚದರ ಕಿಲೋಮೀಟರ್ ನೆಲವನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ.

ಸುದೀರ್ಘ ಮಾತುಕತೆ: ಗಾಲ್ವಾನ್ ಘರ್ಷಣೆಯ ನಂತರ ಎರಡೂ ದೇಶಗಳ ನಡುವಿನ ವಾತಾವರಣ ಬಿಗುವಿನಿಂದ ಕೂಡಿತ್ತು. ಆ ಬಳಿಕ ಪ್ಯಾಂಗಾಂಗ್‌ ಸರೋವರ ಹಾಗೂ ಎಲ್‌ಎಸಿ ಉದ್ದಕ್ಕೂ ಚೀನಾ ತನ್ನ ಸೇನಾ ಸೌಲಭ್ಯಗಳನ್ನು ಹೆಚ್ಚಿಸಿದೆ. ಸೇನಾ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದೆ.   

‘ಗಡಿ ವಿವಾದವೇನೋ ಮುಕ್ಕಾಲು ಭಾಗ ಬಗೆಹರಿದಿದೆ. ಆದರೆ, ಚೀನಾ ತನ್ನ ಸೇನಾ ಬಲವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಬಹುದೊಡ್ಡ ಸಮಸ್ಯೆಯಾಗಿದೆ’ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಈಚೆಗೆ ಹೇಳಿದ್ದರು. ಇನ್ನೊಂದೆಡೆ, ತೈವಾನ್‌, ತನ್ನ ತೈಪೇಯಿ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ಕಚೇರಿಯನ್ನು ಮುಂಬೈನಲ್ಲಿ ಆರಂಭಿಸಲು ಅನುಮತಿಸಿದ್ದ ಭಾರತದ ವಿರುದ್ಧ ಚೀನಾ ಅಸಮಾಧಾನ ವ್ಯಕ್ತಪಡಿಸಿತ್ತು. ತೈವಾನ್ ಚೀನಾದ ಅವಿಭಾಜ್ಯ ಅಂಗ ಎಂದು ಹೇಳಿತ್ತು.‌ ಇದರ ನಡುವೆಯೂ ಶಾಂತಿ ಸ್ಥಾಪನೆಯ ಯತ್ನಗಳು ಮುಂದುವರಿದಿದ್ದವು. ನಾಲ್ಕೂವರೆ ವರ್ಷಗಳಲ್ಲಿ ಉಭಯ ದೇಶಗಳ ನಡುವೆ ಒಟ್ಟು 38 ಸುತ್ತುಗಳ ಮಾತುಕತೆ ನಡೆದಿದೆ. 

ಒಪ್ಪಂದದಿಂದ ಲಾಭವಾಗಲಿದೆಯೇ? : 

ವಿಶ್ವದ ಪ್ರಮುಖ ಆರ್ಥಿಕತೆಗಳ ನಡುವಿನ ಈ ಒಪ್ಪಂದವು ಉಭಯ ದೇಶಗಳ ನಡುವೆ ಶಾಂತಿ ಸ್ಥಾಪಿಸುವ ವಿಚಾರದಲ್ಲಿ ಪ್ರಮುಖ ಹೆಜ್ಜೆ ಎನ್ನುವುದರಲ್ಲಿ ಅನುಮಾನವಿಲ್ಲ. ಗಡಿಯಲ್ಲಿ ಶಾಂತಿ ಸ್ಥಾಪನೆಯಿಂದ ಎರಡೂ ರಾಷ್ಟ್ರಗಳಿಗೆ ಹಲವು ಅನುಕೂಲಗಳಿವೆ. ಜಮ್ಮು ಕಾಶ್ಮೀರ ಸೇರಿದಂತೆ ಪಾಕಿಸ್ತಾನಕ್ಕೆ ಅಂಟಿಕೊಂಡಿರುವ ಗಡಿಗಳು, ಈಶಾನ್ಯ ರಾಜ್ಯಗಳ ಗಡಿಗಳತ್ತ ಹೆಚ್ಚು ಗಮನ ಹರಿಸಲು ಭಾರತದ ಸೇನೆಗೆ ಇದು ನೆರವಾಗಲಿದೆ. ಚೀನಾಕ್ಕೆ ಕೂಡ ಫಿಲಿಪ್ಪೀನ್ಸ್‌ನೊಂದಿಗಿನ ಸಂಘರ್ಷಕ್ಕೆ ಹೆಚ್ಚು ಒತ್ತು ಕೊಡಲು ಅನುಕೂಲವಾಗಲಿದೆ. 

ಹಾಗೆಯೇ, ಇಷ್ಟು ವರ್ಷ ಹಟಮಾರಿ ಧೋರಣೆ ಅನುಸರಿಸುತ್ತಿದ್ದ ಚೀನಾ ತುಸು ಮೆತ್ತಗಾಗಿರುವುದೇಕೆ ಎನ್ನುವ ವಿಶ್ಲೇಷಣೆಯೂ ನಡೆಯುತ್ತಿದೆ. ಚೀನಾದ ವಸ್ತುಗಳು ಮತ್ತು ತಂತ್ರಜ್ಞಾನಕ್ಕೆ ಭಾರತ ಬಹುದೊಡ್ಡ ಮಾರುಕಟ್ಟೆ ಎನ್ನುವುದು ಮುಖ್ಯ ಕಾರಣ; ಅದರ ಜತೆಗೆ ಹಲವರು ರಾಜಕೀಯ ಕಾರಣಗಳನ್ನೂ ಗುರುತಿಸುತ್ತಾರೆ. ಅವುಗಳಲ್ಲಿ ಒಂದು, ಅಮೆರಿಕದ ಅಧ್ಯಕ್ಷೀಯ ಚುನಾವಣೆ. ಅದರಲ್ಲಿ ಡೊನಾಲ್ಡ್ ಟ್ರಂಪ್‌ ಪುನರಾಯ್ಕೆ ಆದರೆ, ಅದರಿಂದ ಮುಂದೊದಗಬಹುದಾದ ಪರಿಣಾಮಗಳನ್ನು ಎದುರಿಸುವ ಸಲುವಾಗಿಯೇ ಚೀನಾ ಒಪ್ಪಂದಕ್ಕೆ ಮುಂದಾಗಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಇದೇ ವೇಳೆ, ಗಡಿಯಲ್ಲಿ ಶಾಂತಿ ಸ್ಥಾಪನೆಯ ವಿಚಾರದಲ್ಲಿ ಸಿಕ್ಕಿರುವ ಯಶಸ್ಸು ಎಷ್ಟು ಕಾಲ ಉಳಿಯಲಿದೆ ಎನ್ನುವುದರ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಚೀನಾ ಸರ್ಕಾರ ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿ ಎರಡೂ ಅಸ್ಥಿರ ವರ್ತನೆಗೆ ಹೆಸರಾಗಿದ್ದು, ಭಾರತ ನಿರಾಳವಾಗುವಂತಿಲ್ಲ ಎಂದು ಕೆಲವರು ಎಚ್ಚರಿಸಿದ್ದಾರೆ. 

ಡೆಪ್ಸಾಂಗ್‌ ಭಾರತಕ್ಕೆ ಏಕೆ ಮುಖ್ಯ? 

2020ರ ಗಾಲ್ವಾನ್‌ ಘರ್ಷಣೆಯ ನಂತರ ಚೀನಾ ಸೇನೆಯು ಲಡಾಖ್‌ನ ಉತ್ತರಕ್ಕಿರುವ ಡೆಪ್ಸಾಂಗ್‌ ‍ಬಯಲು ಪ್ರದೇಶ ಮತ್ತು ದಕ್ಷಿಣಕ್ಕಿರುವ ಡೆಮ್‌ಚೋಕ್‌ ಪ್ರದೇಶದಲ್ಲಿ ಭಾರತಕ್ಕೆ ಸೇರಿದ ಭೂಪ್ರದೇಶದ ಪ್ರಮುಖ ಭಾಗಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. 

ಸೇನಾ ಕಾರ್ಯತಂತ್ರದ ದೃಷ್ಟಿಯಿಂದ ಈ ಬಯಲು ಪ್ರದೇಶ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಎಲ್‌ಎಸಿಯು ಪೂರ್ತಿ ಕಡಿದಾದ ಬೆಟ್ಟಗಳಿಂದ ಆವರಿಸಿದೆ. ಅದರ ನಡುವೆ ಡೆಪ್ಸಾಂಗ್‌ ಮಾತ್ರ ಬಯಲು ಪ್ರದೇಶವಾಗಿದೆ. ಭಾರತದ ಅತಿ ಸೂಕ್ಷ್ಮ ದೌಲತ್‌ ಬೇಗ್ ಓಲ್ಡಿ ಸೇನಾ ಠಾಣೆಯಿಂದ (ಕಾರಾಕೋರಂ ಪಾಸ್‌ ಹತ್ತಿರ) ಇದು ಕೇವಲ 30 ಕಿ.ಮೀ ದೂರದಲ್ಲಿದೆ. ಇಲ್ಲಿ ಚೀನಾ ಸೇನೆಯು ಭಾರತದ ಭೂಭಾಗದಲ್ಲಿ 15 ಕಿ.ಮೀ ಒಳಕ್ಕೆ ಬಂದಿತ್ತು. 

ಈಗ ಉಭಯ ರಾಷ್ಟ್ರಗಳ ನಡುವೆ ಒಪ್ಪಂದ ನಡೆದಿರುವುದರಿಂದ 2020ಕ್ಕೂ ಮೊದಲಿದ್ದ ರೀತಿಯಲ್ಲಿ ಡೆಪ್ಸಾಂಗ್ ಬಯಲಿನ 10ರಿಂದ 13ನೇ ಸಂಖ್ಯೆಯ ಗಸ್ತು ಠಾಣೆವರೆಗೆ ಗಸ್ತು ತಿರುಗಬಹುದಾಗಿದೆ. ಡೆಮ್‌ಚೋಕ್‌ನಲ್ಲಿ ಚರ್ಡಿಂಗ್‌ ನುಲ್ಲಾ ಪ್ರದೇಶದವರೆಗೂ ಗಸ್ತು ನಡೆಸಬಹುದಾಗಿದೆ.

ಸಂಘರ್ಷದ ಹಾದಿ

* ಮೇ 5, 2020: ಪ್ಯಾಂಗಾಂಗ್‌ ಸರೋವರದ ಬಳಿ ವಾಸ್ತವ ನಿಯಂತ್ರಣ ರೇಖೆ ದಾಟಿ ಭಾರತ ಪಹರೆ ನಡೆಸುತ್ತಿದ್ದ ಪ್ರದೇಶ ಪ್ರವೇಶಿಸಿದ ಚೀನಾ ಸೇನೆ. ಸಣ್ಣ ಪ್ರಮಾಣದ ಘರ್ಷಣೆ. ಬಳಿಕ ಎರಡೂ ರಾಷ್ಟ್ರಗಳಿಂದ ಎಲ್‌ಎಸಿಯಲ್ಲಿ ಸೇನೆಗಳ ನಿಯೋಜನೆ 

* ಜೂನ್‌ 15, 2020: ಗಾಲ್ವಾನ್‌ ಕಣಿವೆಯಲ್ಲಿ ಉಭಯ ಸೇನಾ ಸಿಬ್ಬಂದಿ ನಡುವೆ ಘರ್ಷಣೆ. ಭಾರತದ 20 ಸೇನಾ ಸಿಬ್ಬಂದಿ ಹುತಾತ್ಮ. ತನ್ನ ನಾಲ್ವರು ಸೈನಿಕರು ಮೃತಪಟ್ಟಿದ್ದಾರೆ ಎಂದು ನಂತರ ಚೀನಾ ಘೋಷಣೆ

* ಜೂನ್‌ 25, 2020: ಭಾರತ ಮತ್ತು ಚೀನಾ ರಾಜತಾಂತ್ರಿಕ ಅಧಿಕಾರಿಗಳ ನಡುವೆ ಮೊದಲ ಸಭೆ

* ಜೂನ್‌ 30, 2020: ಘರ್ಷಣೆ ನಡೆದ ಸ್ಥಳದಿಂದ ಸೇನೆ ವಾಪಸ್‌ ಕರೆಸಿಕೊಂಡ ಎರಡೂ ರಾಷ್ಟ್ರಗಳು. ಬಫರ್‌ ವಲಯ ಗುರುತು

* ಫೆಬ್ರುವರಿ 2021: ಪ್ಯಾಂಗಾಂಗ್‌ ಸರೋವರದ ಪೂರ್ವ ಮತ್ತು ದಕ್ಷಿಣ ದಂಡೆಗಳಿಂದ ಸೇನಾ ಸಿಬ್ಬಂದಿಯನ್ನು ವಾಪಸ್‌ ಕರೆಸಿಕೊಳ್ಳಲು ಉಭಯ ದೇಶಗಳ ತೀರ್ಮಾನ

* ಆಗಸ್ಟ್‌ 2021: ಗೋಗ್ರಾ ಪೋಸ್ಟ್‌ನಿಂದ ಸೇನಾ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳಲು ಒಪ್ಪಂದ

* ಸೆ.8ರಿಂದ 12, 2021: ಹಾಟ್‌ಸ್ಪ್ರಿಂಗ್ಸ್‌ನಿಂದ ಸೇನಾ ಪಡೆಗಳ ವಾಪಸಾತಿ

* ಜನವರಿ–ಜುಲೈ 2022: ಡೆಪ್ಸಾಂಗ್‌ ಬಯಲು ಪ್ರದೇಶ ಮತ್ತು ಡೆಮ್‌ಚೋಕ್‌ ಪ್ರದೇದಲ್ಲಿ ಮುಂದುವರಿದಿರುವ ಬಿಕ್ಕಟ್ಟಿನ ಪರಿಹಾರಕ್ಕಾಗಿ ಸೇನಾ ಕಮಾಂಡರ್‌ಗಳ ನಡುವೆ 14, 15 ಮತ್ತು 16ನೇ ಸುತ್ತಿನ ಮಾತುಕತೆ ವಿಫಲ

*ಏಪ್ರಿಲ್‌–ಅಕ್ಟೋಬರ್‌ 2023: ಸೇನಾ ಕಮಾಂಡರ್‌ಗಳ ನಡುವೆ 17, 18 ಮತ್ತು 19ನೇ ಸುತ್ತಿನ ಮಾತುಕತೆ. ಸ್ಪಷ್ಟ ನಿರ್ಧಾರಕ್ಕೆ ಬರಲು ವಿಫಲ

* ಮಾರ್ಚ್‌ 27, 2024: ಎರಡೂ ರಾಷ್ಟ್ರಗಳ ರಾಜತಾಂತ್ರಿಕರ ನಡುವೆ ಭಾರತ ಮತ್ತು ಚೀನಾ ಗಡಿ ವ್ಯವಹಾರಗಳಿಗೆ ಸಂಬಂಧಿಸಿದ ಸಮನ್ವಯ ಮತ್ತು ಸಹಕಾರ ವ್ಯವಸ್ಥೆಗೆ ಸಂಬಂಧಿಸಿದ 29ನೇ ಸಭೆ

* ಜುಲೈ 4, 2024: ಕಜಕ್‌ಸ್ತಾನದ ಆಸ್ತನದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್‌ ಈ ನಡುವೆ ಮಾತುಕತೆ

* ಸೆಪ್ಟೆಂಬರ್‌ 12, 2024: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್‌ ಈ ಚರ್ಚೆ

ಘರ್ಷಣೆಯ ಪರಿಣಾಮ ಏನಾಯಿತು?

ಗಾಲ್ವಾನ್ ಘರ್ಷಣೆಯ ಬಳಿಕ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ತೀವ್ರ ಧಕ್ಕೆಯಾಯಿತು. ವ್ಯಾಪಾರ ವಹಿವಾಟು ಎಂದಿನಂತೆ ನಡೆದರೂ, ಚೀನಾವನ್ನು ಗುರಿಯಾಗಿಸಿಕೊಂಡು ಭಾರತ ಹಲವು ನಿರ್ಬಂಧಗಳನ್ನು ವಿಧಿಸಿತು.

*ಕೋವಿಡ್‌ ಸಮಯದಲ್ಲಿ ಸ್ಥಗಿತಗೊಂಡಿದ್ದ ಎರಡೂ ರಾಷ್ಟ್ರಗಳ ನಡುವೆ ವಿಮಾನ ಸೇವೆ ಮುಂದುವರಿಯಲಿಲ್ಲ. ಭಾರತ ಚೀನಾ ನಡುವೆ ಈಗ ನೇರ ವಿಮಾನ ಸಂಪರ್ಕ ಇಲ್ಲ. ಪ್ರಯಾಣಿಕರ ವಿಮಾನ ಸಂಚಾರ ನಡೆಸುವಂತೆ ಚೀನಾವು ಭಾರತದ ಮೇಲೆ ಒತ್ತಡ ಹಾಕುತ್ತಲೇ ಬಂದಿತ್ತು

*ಭಾರತಕ್ಕೆ ಭೇಟಿ ನೀಡುವ ಚೀನಾ ಪ್ರಜೆಗಳಿಗೆ ವೀಸಾ ನೀಡಿಕೆ ನಿಯಮಗಳನ್ನು ಭಾರತ ಬಿಗಿಗೊಳಿಸಿತ್ತು. ಇದರಿಂದ ಚೀನಾ ತಂತ್ರಜ್ಞರು ಇಲ್ಲಿಗೆ ಭೇಟಿ ನೀಡುವುದು ಕಷ್ಟವಾಯಿತು. ಉದ್ದಿಮೆಗಳ ಒತ್ತಾಯದ ನಂತರ ಇತ್ತೀಚೆಗಷ್ಟೆ ಭಾರತ ವೀಸಾ ನಿಯಮಗಳನ್ನು ಸಡಿಲಗೊಳಿಸಿತು

*ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡುವ ನಿಯಮಗಳನ್ನು ಭಾರತ ಬದಲಾಯಿಸಿತು. ನೆರೆಯ ದೇಶಗಳ ಕಂಪನಿಗಳು ನೇರ ಹೂಡಿಕೆ ಮಾಡುವಂತಿಲ್ಲ. ಅದಕ್ಕೆ ಕೇಂದ್ರದ ಅನುಮತಿ ಕಡ್ಡಾಯ ಎಂಬ ನಿಯಮ ರೂಪಿಸಿತ್ತು. ಭಾರತದಲ್ಲಿ ಚೀನಾ ಕಂಪನಿಗಳ ಬಂಡವಾಳ ಹೂಡಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ಈ ನಿಯಮ ಜಾರಿಗೆ ತರಲಾಗಿತ್ತು ಎಂದು ವಿಶ್ಲೇಷಿಸಲಾಗಿತ್ತು

*ಟಿಕ್‌ಟಾಕ್‌ ಸೇರಿದಂತೆ ಚೀನಾ ಮೂಲದ 250 ಮೊಬೈಲ್‌ ಆ್ಯಪ್‌ಗಳನ್ನು ನಿಷೇಧಿಸಲಾಗಿತ್ತು

*ಚೀನಾದ ಸ್ಮಾರ್ಟ್‌ಫೋನ್‌ ಕಂಪನಿ ವಿವೊ ಕಮ್ಯುನಿಕೇಷನ್ಸ್‌ ಟೆಕ್ನಾಲಜಿ ಕಂಪನಿಯು ಭಾರತದ ವೀಸಾ ನಿಯಮಗಳನ್ನು ಉಲ್ಲಂಘಿಸಿ 1,300 ಡಾಲರ್‌ಗಳಷ್ಟು ಹಣವನ್ನು (₹1.09 ಲಕ್ಷ ಕೋಟಿ) ವರ್ಗಾಯಿಸಿದೆ ಎಂದು ಕಳೆದ ವರ್ಷ ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ವಿವೊದ ಮಾತೃಸಂಸ್ಥೆ ಶಿಓಮಿಗೆ ಸೇರಿದ 60 ಕೋಟಿ ಡಾಲರ್‌ (₹5,042 ಕೋಟಿ) ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.