ಕರಗಿದ ಚಿನ್ನದಂತೆ ಬೆಳಗುತ್ತಿರುವವನೂ ಅಗ್ನಿಸ್ವರೂಪನೂ ಕತ್ತಲೆ ನಾಶ ಮಾಡುವವನೂ ವಿಶ್ವಸಾಕ್ಷಿಯಾದ ಜ್ಯೋತಿರ್ಮಯಿ ಸೂರ್ಯ, ಭೂಮಿಯ ಸಕಲ ಜೀವರಾಶಿಗಳಿಗೂ ಚೈತನ್ಯದ ಮೂಲ. ಬೆಳಕು, ಶಾಖ, ಶಕ್ತಿಯ ಆಕರವೇ ಸೂರ್ಯ. ಆತನ ಕುರಿತಂತೆ ಸೀಮಿತ ಪ್ರಮಾಣದ ಅಧ್ಯಯನ ಮಾಡುವುದು, ಅದರಿಂದ ಸಿಗುವ ವೈಜ್ಞಾನಿಕ ಮಾಹಿತಿ ಮತ್ತು ಜ್ಞಾನವನ್ನು ಮನುಕುಲಕ್ಕೆ ಹಂಚುವುದು ಇಸ್ರೊದ ‘ಆದಿತ್ಯ ಎಲ್–1’ ಯೋಜನೆಯ ಉದ್ದೇಶ. ಈ ಸಾಹಸಕ್ಕೆ ಕೈ ಹಾಕಿರುವ ನಾಲ್ಕನೇ ದೇಶ ಭಾರತ
ಹಿನೋಡೆ: ಜಪಾನಿನ ಜಾಕ್ಸಾ ಸಂಸ್ಥೆಯು 2006ರಲ್ಲಿ ಉಡಾವಣೆ ಮಾಡಿದ ವೀಕ್ಷಣಾಲಯ
ಸೋಹೋ: ಅಮೆರಿಕದ ನಾಸಾ ಸಂಸ್ಥೆಯು 1995ರಲ್ಲಿ ಉಡಾವಣೆ ಮಾಡಿದೆ. ಸೂರ್ಯನ ವೀಕ್ಷಣೆಯ ಜತೆಗೆ ಸೂರ್ಯನ ಸಮೀಪಿಸುವ ಧೂಮಕೇತುಗಳನ್ನು ಪತ್ತೆ ಮಾಡುತ್ತದೆ. ಈವರೆಗೆ, 4,000ಕ್ಕೂ ಹೆಚ್ಚು ಧೂಮಕೇತುಗಳನ್ನು ಪತ್ತೆ ಮಾಡಿದೆ
ಮ್ಯಾಗ್ನೆಟಿಕ್ ಮಲ್ಟಿ ಸ್ಕೇಲ್: ಇದನ್ನು ಯೂರೋಪಿಯನ್ ಸ್ಪೇಸ್ ಏಜೆನ್ಸಿ 2015ರಲ್ಲಿ ಉಡಾವಣೆ ಮಾಡಿತು. ಅಯಸ್ಕಾಂತ ಕ್ಷೇತ್ರ ಮತ್ತು ರಿಕನೆಕ್ಷನ್ ವಿದ್ಯಮಾನಗಳನ್ನು ಅಧ್ಯಯನ ಮಾಡುತ್ತದೆ
ಯೂಲಿಸಿಸ್: 1990ರಲ್ಲಿ ಯೂರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ನಾಸಾ ಜಂಟಿಯಾಗಿ ಉಡಾವಣೆ ಮಾಡಿವೆ. ಇದು ಸೂರ್ಯಗೋಳದ ಉತ್ತರ ಧ್ರುವವನ್ನು ವೀಕ್ಷಣೆ ಮಾಡುತ್ತದೆ
ಸ್ಟೀರಿಯೋ ಎ ಮತ್ತು ಬಿ: ಈ ಜೋಡಿ ನೌಕೆಗಳನ್ನು ನಾಸಾ 2006ರಲ್ಲಿ ಉಡಾವಣೆ ಮಾಡಿತು. ಸೂರ್ಯನನ್ನು ಬೇರೆ ಬೇರೆ ಕೋನಗಳಿಂದ ವೀಕ್ಷಿಸಿ ಅದರ ಮೂರು ಆಯಾಮದ ಚಿತ್ರಗಳನ್ನು ಒದಗಿಸಿವೆ
ಸೋಲಾರ್ ಡೈನಮಿಕ್ ಅಬ್ಸರ್ವೇಟರಿ: ನಾಸಾ 2010ರಲ್ಲಿ ಈ ವೀಕ್ಷಣಾಲಯವನ್ನು ಉಡಾವಣೆ ಮಾಡಿದೆ. ಇದು ಅಯಸ್ಕಾಂತ ಕ್ಷೇತ್ರವನ್ನು ದಾಖಲು ಮಾಡುತ್ತಿದೆ
ಪಾರ್ಕರ್ ವೀಕ್ಷಣಾಲಯ: 2018ರಲ್ಲಿ ನಾಸಾ ಇದನ್ನು ಉಡಾವಣೆ ಮಾಡಿದ್ದು ಸೂರ್ಯನ ಕಿರೀಟವನ್ನು ಪಾರ್ಕರ್ ಹಾದು ಹೋಗುವಂತೆ ವಿನ್ಯಾಸ ಮಾಡಲಾಗಿದೆ
ಸೋಲಾರ್ ಆರ್ಬೈಟರ್: ನಾಸಾ 2020 ರಲ್ಲಿ ಉಡಾವಣೆ ಮಾಡಿದ್ದು, ಈ ವೀಕ್ಷಣಾಲಯ ಸೂರ್ಯನನ್ನು ದೀರ್ಘವೃತ್ತ ಕಕ್ಷೆಯಲ್ಲಿ ಸುತ್ತುತ್ತಿದೆ
(ಅಮೆರಿಕ, ಯೂರೋಪ್, ಜಪಾನ್‌ನ ಬಾಹ್ಯಾಕಾಶ ಸಂಸ್ಥೆಗಳು.
ನಾಲ್ಕನೇ ದೇಶ ಭಾರತ)
ಏಳು ಉಪಕರಣಗಳು ಯಾವುವು?
(ಪೇಲೋಡ್; ತಯಾರಿಸಿದ ಸಂಸ್ಥೆ)
ವಿಇಎಲ್‌ಸಿ
ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ, ಬೆಂಗಳೂರು
ಎಸ್‌ಯುಐಟಿ
ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೊನಮಿ ಮತ್ತು ಆಸ್ಟ್ರೊಫಿಸಿಕ್ಸ್, ಪುಣೆ
ಎಎಸ್‌ಪಿಇಎಕ್ಸ್
ಫಿಸಿಕಲ್ ರೀಸರ್ಚ್ ಲ್ಯಾಬೊರೇಟರಿ, ಅಹಮದಾಬಾದ್
ಪಿಎಪಿಎ
ಸ್ಪೇಸ್ ಫಿಸಿಕ್ಸ್ ಲ್ಯಾಬೊರೇಟರಿ, ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್, ತಿರುವನಂತಪುರ
ಸೋಲೆಕ್ಸ್, ಹೆಲ್1ಒಎಸ್
ಯು.ಆರ್.ರಾವ್ ಸ್ಯಾಟಿಲೈಟ್ ಸೆಂಟರ್, ಬೆಂಗಳೂರು
ಮ್ಯಾಗ್ನೆಟೊಮೀಟರ್
ಲ್ಯಾಬೊರೇಟರಿ ಫಾರ್ ಎಲೆಕ್ಟ್ರೊ ಆಪ್ಟಿಕ್ಸ್ ಸಿಸ್ಟಮ್, ಬೆಂಗಳೂರು
ಸೂರ್ಯನ ಅಧ್ಯಯನಕ್ಕಾಗಿ ಭಾರತ ನಿರ್ಮಿಸಿರುವ ಪ್ರಥಮ ಅಂತರಿಕ್ಷ ವೀಕ್ಷಣಾಲಯವೇ ‘ಆದಿತ್ಯ ಎಲ್–1’. ಇದರ ಪರಿಕಲ್ಪನೆ ಹುಟ್ಟಿದ್ದು 2008ರಲ್ಲಿ. ಆದರೆ ಅದು ಕಲ್ಪನೆಯಾಗಿಯೇ ಉಳಿದಿತ್ತು. ಈ ಯೋಜನೆಗೆ ಮತ್ತೆ ಜೀವ ಸಿಕ್ಕಿದ್ದು 2016–17ರಲ್ಲಿ. ಈ ಯೋಜನೆಗೆ ಆರಂಭಿಕ ಮೊತ್ತವಾಗಿ ₹3 ಕೋಟಿಯನ್ನು ನಿಗದಿ ಪಡಿಸಲಾಯಿತು. 2019ರಲ್ಲಿ ಈ ಯೋಜನೆಗೆ ₹375 ಕೋಟಿ ಒದಗಿಸಲಾಯಿತು. ಈ ಅಂತರಿಕ್ಷ ವೀಕ್ಷಣಾಲಯವನ್ನು (ಆದಿತ್ಯ ಎಲ್–1) 15 ಲಕ್ಷ ಕಿ.ಮೀ ದೂರದಲ್ಲಿರುವ ಲಗ್ರಾಂಜಿಯನ್ ಬಿಂದುವಿನಲ್ಲಿರಿಸಲಾಗುತ್ತದೆ. ಇದು ಯಾವುದೇ ಅಡಚಣೆ ಇಲ್ಲದೇ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ಗಮನಿಸುತ್ತದೆ. ಇದರಲ್ಲಿ ಏಳು ಉಪಕರಣಗಳಿರುತ್ತವೆ. ನಾಲ್ಕು ವಿಶೇಷ ಉಪಕರಣಗಳು ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ ಅಧ್ಯಯನ ಮಾಡುತ್ತವೆ. ಉಳಿದ ಮೂರು ಉಪಕರಣಗಳು ಸ್ಥಳೀಯ ಅಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ಮಾಡುತ್ತವೆ.
ಇದರಿಂದ ಈವರೆಗೂ ಕಗ್ಗಂಟಾಗಿರುವ ಪ್ರಶ್ನೆಗಳಾದ ಕಿರೀಟದ ಉಷ್ಣತೆ (coronal heating), ಕಿರೀಟದಿಂದ ಹೊಮ್ಮುವ ಶಕ್ತಿಶಾಲಿ ಕಣ ಪ್ರವಾಹ, ಜ್ವಾಲೋನ್ನತಿಗೆ (flare) ಮುಂಚಿನ ಮತ್ತು ನಂತರದ ಚಟುವಟಿಕೆ, ಅಂತರ್ ಗ್ರಹ ಮಾಧ್ಯಮದಲ್ಲಿನ ಕಣ ಮತ್ತು ಅಯಸ್ಕಾಂತೀಯ ಕ್ಷೇತ್ರದ ಪಸರಿಸುವಿಕೆ ಮುಂತಾದ ವಿಷಯಗಳ ಬಗ್ಗೆ ಉತ್ತರ ಕಂಡುಕೊಳ್ಳಬಹುದು.
ಭೂಮಿಯ ಸಕಲ ಜೀವರಾಶಿಗಳಿಗೂ ಚೈತನ್ಯದಾಯಕ ಸೂರ್ಯ ಎನ್ನುವುದೇನೋ ಸರಿ. ಆದರೆ, ಆತನ ಕೋಪ, ತಾಪ, ರೌದ್ರತೆಯ ಫಲ ಅನುಭವಿಸಬೇಕಾದವರೂ ನಾವೇ ಅಲ್ಲವೇ? ಸೂರ್ಯನ ಚಟುವಟಿಕೆಗಳಾದ ಸೌರ ಜ್ವಾಲೆ, ಸೌರ ತಂತು, ಸೌರ ಮಾರುತಗಳು ನೇರವಾಗಿ ಭೂಮಿಯ ಮೇಲೆ ಪರಿಣಾಮ ಬೀರುತ್ತವೆ. ಸೌರ ಕಿರೀಟದಲ್ಲಿರುವ (ಕೊರೋನ) ಪ್ಲಾಸ್ಮಾ ಕಣಗಳು ಸೆಕೆಂಡಿಗೆ 100 ಕಿ.ಮೀಗಳಷ್ಟು ವೇಗದಲ್ಲಿ ಅಡ್ಡಾದಿಡ್ಡಿಯಾಗಿ ಧಾವಿಸುತ್ತಿರುತ್ತವೆ. ಪ್ರಭಾಗೋಳದ ಬಳಿ ಇವನ್ನು ಗುರುತ್ವವು ಹಿಡಿದಿಟ್ಟುಕೊಂಡಿರುತ್ತದೆ. ಇನ್ನೂ ಎತ್ತರದಲ್ಲಿ ಪ್ರಭಾ ವಲಯವು ಕಡಿಮೆ ಆಗುವುದರಿಂದ ಅಯಾಣುಗಳು ದೂರ ದೂರಕ್ಕೆ ಚಿಮ್ಮುತ್ತವೆ. ಹೀಗೆ ಚಿಮ್ಮಿದ ಶಕ್ತಿಶಾಲಿ ಕಣಗಳು ಶಬ್ದದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಧಾವಿಸುತ್ತವೆ. ಇದನ್ನು ಸೌರ ಮಾರುತ ಎನ್ನಲಾಗುತ್ತದೆ. ವಿಜ್ಞಾನಿ ಯೂಜೆನ್ ಪಾರ್ಕರ್ (1927–2022) ಅವರು ಇದರ ಅಸ್ತಿತ್ವ ಮತ್ತು ವೇಗವನ್ನು ಊಹಿಸಿದ್ದರು. ಸೂರ್ಯನ ಅಯಸ್ಕಾಂತ ಶಕ್ತಿ ಬಹಳ ಹೆಚ್ಚು. ಇದು ಇಡೀ ಸೌರವ್ಯೂಹವನ್ನೇ ಅಂದರೆ ಸೌರಗೋಳದ ಅಂಚಿನವರೆಗೆ ವ್ಯಾಪಿಸಿದೆ. ಅಯಸ್ಕಾಂತ ಶಕ್ತಿಯನ್ನು ಎಲ್ಲಡೆ ವರ್ಗಾಯಿಸುವ ಪ್ರಮುಖ ಮಾಧ್ಯಮವೇ ಸೌರ ಮಾರುತ. ಇದರ ಗರಿಷ್ಠ ಚಟುವಟಿಕೆಯ ಅವಧಿಯಲ್ಲಿ ಹೊರ ಚೆಲ್ಲುವ ಶಕ್ತಿಶಾಲಿ ಕಣ ಚಿಮ್ಮುವಿಕೆಗೆ ಕರೋನಲ್ ಮಾಸ್ ಎಜೆಕ್ಷನ್ ಎನ್ನಲಾಗುತ್ತದೆ. ಇವು ಭೂಮಿಯ ಮೇಲೆ ಅಪ್ಪಳಿಸಿದಾಗ ವಿದ್ಯುತ್ ಸಂಪರ್ಕ, ದೂರಸಂಪರ್ಕಗಳಲ್ಲಿ ಏರುಪೇರಾಗಿ, ಅನಾಹುತಗಳು ಆಗುತ್ತವೆ. ಇದನ್ನು ಗಮನಿಸಲೆಂದೇ ಅಂತರಿಕ್ಷ ವೀಕ್ಷಣಾಲಯವನ್ನು ಕಳುಹಿಸಲಾಗುತ್ತದೆ. ಅಮೆರಿಕ, ಜಪಾನ್, ಯೂರೋಪ್ ಇಂತಹ ವೀಕ್ಷಣಾಲಯವನ್ನು ಕಳುಹಿಸಿದ್ದು, ಭಾರತ ಈಗ ‘ಆದಿತ್ಯ’ವನ್ನು ಕಳುಹಿಸುತ್ತಿದೆ. ದೇಶದಲ್ಲಿರುವ ವಿದ್ಯುತ್, ದೂರಸಂಪರ್ಕ ವ್ಯವಸ್ಥೆ, ನಭದಲ್ಲಿ ಸುತ್ತು ಹಾಕುತ್ತಿರುವ ಉಪಗ್ರಹಗಳ ರಕ್ಷಣೆಗೆ ಇದು ಸಹಾಯಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.