ತಮಿಳುನಾಡು, ಆಂಧ್ರದ ಮುಖ್ಯಮಂತ್ರಿಗಳು ತಮ್ಮ ರಾಜ್ಯದ ಜನರಿಗೆ ಜನಸಂಖ್ಯೆ ಏರಿಕೆಗೆ ಕರೆ ನೀಡಿದ ಬೆನ್ನಲ್ಲೇ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ವಿಚಾರ ಮುನ್ನೆಲೆಗೆ ಬಂದಿದೆ. ಉತ್ತರ ಪ್ರದೇಶ, ಬಿಹಾರದಂಥ ರಾಜ್ಯಗಳ ಕ್ಷೇತ್ರಗಳು ಹೆಚ್ಚಾಗಿ, ದಕ್ಷಿಣದ ರಾಜ್ಯಗಳು ಲೋಕಸಭೆಯಲ್ಲಿ ತಮ್ಮ ಬಲ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಹಿಂದಿ ಭಾಷಿಕ ರಾಜ್ಯಗಳು ಬಿಜೆಪಿಗೆ ಅನುಕೂಲಕರವಾಗಿ ಇವೆ. ಹಾಗಾಗಿ, ಕೇಂದ್ರವು ಈ ಅವಕಾಶ ಬಳಸಿಕೊಳ್ಳಬಹುದೇ ಎಂಬ ಪ್ರಶ್ನೆ ದಕ್ಷಿಣದ ರಾಜ್ಯಗಳಲ್ಲಿ ಮೂಡಿದೆ.
ಭಾರತದಲ್ಲಿ ಇಷ್ಟು ವರ್ಷ ಜನಸಂಖ್ಯೆ ಏರಿಕೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿತ್ತು. ಆದರೆ, ಈ ಬಾರಿ ಜನಸಂಖ್ಯೆ ಇಳಿಕೆಯ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಹೆಚ್ಚು ಮಕ್ಕಳನ್ನು ಹೊಂದುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮ್ಮ ರಾಜ್ಯದ ಜನರಿಗೆ ಕರೆ ನೀಡಿದ್ದಾರೆ.
ಪರಸ್ಪರ ವಿರುದ್ಧ ಕೂಟಗಳಲ್ಲಿರುವ ಈ ಇಬ್ಬರು ಮುಖ್ಯಮಂತ್ರಿಗಳು ನೀಡಿರುವ ಈ ಕರೆಯ ಹಿಂದಿರುವುದು ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ. ಲೋಕಸಭಾ ಕ್ಷೇತ್ರಗಳನ್ನು ಜನಸಂಖ್ಯೆಗೆ ಅನುಗುಣವಾಗಿ ಪುನರ್‌ವಿಂಗಡಿಸಲಾಗುತ್ತದೆ. ದಕ್ಷಿಣದ ರಾಜ್ಯಗಳು ಕುಟುಂಬ ಕಲ್ಯಾಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರಿಂದ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಅವಿಭಜಿತ ಆಂಧ್ರಪ್ರದೇಶದ ಜನಸಂಖ್ಯೆಯ ಏರಿಕೆ ಪ್ರಮಾಣ ಕಡಿಮೆ ಆಗಿದೆ. ಆದರೆ, ಜನನ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಲ್ಲಿ ಉತ್ತರ ಪ್ರದೇಶ, ಬಿಹಾರ ಮುಂತಾದ ಉತ್ತರದ ರಾಜ್ಯಗಳು ವಿಫಲವಾಗಿವೆ.
ದೇಶದ ಒಟ್ಟಾರೆ ಫಲವಂತಿಕೆ ದರ (ಟಿಎಫ್‌ಆರ್) ಕಡಿಮೆ ಆಗಿದ್ದರೂ ದಕ್ಷಿಣಕ್ಕೆ ಹೋಲಿಸಿದರೆ ಉತ್ತರದ ರಾಜ್ಯಗಳ ಜನಸಂಖ್ಯೆಯ ಏರಿಕೆ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ, ದಕ್ಷಿಣದ ರಾಜ್ಯಗಳಿಗೆ ನಷ್ಟವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜನನ ನಿಯಂತ್ರಣವನ್ನು ಯಶಸ್ವಿಯಾಗಿ ಸಾಧಿಸಿದ ತಪ್ಪಿಗೆ ದಕ್ಷಿಣ ರಾಜ್ಯಗಳಿಗೆ ಶಿಕ್ಷೆ ವಿಧಿಸಲಾಗುತ್ತಿದೆ ಎನ್ನುವ ಆಕ್ರೋಶವೂ ಈ ರಾಜ್ಯಗಳ ಮುಖಂಡರಲ್ಲಿದೆ. ಎಂ.ಕೆ.ಸ್ಟಾಲಿನ್ ಇದೇ ವರ್ಷದ ಫೆಬ್ರುವರಿ 14ರಂದು ಕ್ಷೇತ್ರ ಪುನರ್ ವಿಂಗಡಣೆ ಮತ್ತು ‘ಒಂದು ರಾಷ್ಟ್ರ ಒಂದು ಚುನಾವಣೆ’ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರವಾಗುವಂತೆ ನೋಡಿಕೊಂಡಿದ್ದರು. ಇನ್ನೊಂದೆಡೆ, ದಕ್ಷಿಣದಲ್ಲಿ ಕಡಿಮೆ ಜನರಿದ್ದರೂ ಹೆಚ್ಚು ಲೋಕಸಭಾ ಕ್ಷೇತ್ರಗಳಿವೆ; ಉತ್ತರದಲ್ಲಿ ಹೆಚ್ಚು ಜನರಿದ್ದು, ಅವರ ಸಂಖ್ಯೆಗೆ ತಕ್ಕಂತೆ ಸಂಸದರ ಸ್ಥಾನಗಳಿಲ್ಲ ಎನ್ನುವ ವಾದವನ್ನು ಉತ್ತರದ ರಾಜ್ಯಗಳು ಮುಂದಿಡುತ್ತಿವೆ.
‘ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್’ ಎನ್ನುವ ಚಿಂತಕರ ಚಾವಡಿಯು 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಡೆಸಿದ್ದ ಅಧ್ಯಯನದ ಪ್ರಕಾರ, ನಿಗದಿಯಂತೆ 2026ರಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ನಡೆದರೆ, ಉತ್ತರದ ರಾಜ್ಯಗಳು 32 ಹೆಚ್ಚು ಕ್ಷೇತ್ರಗಳನ್ನು ಪಡೆದರೆ, ದಕ್ಷಿಣದ ರಾಜ್ಯಗಳು 24 ಕ್ಷೇತ್ರಗಳನ್ನು ಕಳೆದುಕೊಳ್ಳಲಿವೆ.
ಈಗಿರುವ ಲೋಕಸಭಾ ಸ್ಥಾನಗಳನ್ನು ಉಳಿಸಿಕೊಂಡು, 2026ರ ಜನಸಂಖ್ಯೆಯ ಅಂದಾಜು ಏರಿಕೆಗೆ ತಕ್ಕಂತೆ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಬಹುದಾಗಿದೆ ಎಂದೂ ಈ ಅಧ್ಯಯನ ಹೇಳಿದೆ. ಹೀಗೆ ಮಾಡಿದರೆ, ಲೋಕಸಭೆಯ ಬಲವು 846ಕ್ಕೆ ಏರಿಕೆಯಾಗಲಿದೆ. ಇದೇ ಆಧಾರದಲ್ಲಿಯೇ ಹೊಸ ಸಂಸತ್ ಭವನದಲ್ಲಿ ಲೋಕಸಭೆಯಲ್ಲಿ ಆಸನಗಳ ಸಂಖ್ಯೆಯನ್ನು 888ಕ್ಕೆ ಏರಿಸಲಾಗಿದೆ ಎನ್ನುವ ಮಾತುಗಳೂ ಕೇಳಿಬಂದಿದ್ದವು. ಉತ್ತರ ಪ್ರದೇಶದ ಕ್ಷೇತ್ರಗಳ ಸಂಖ್ಯೆಯು 80ರಿಂದ 143ಕ್ಕೆ ಹೆಚ್ಚಾಗಲಿದ್ದು, ಕೇರಳದ ಕ್ಷೇತ್ರಗಳ ಸಂಖ್ಯೆಯು ಈಗಿನಂತೆ 20ರಲ್ಲಿಯೇ ಉಳಿಯಲಿದೆ.
ಲೋಕಸಭೆಯಲ್ಲಿ ಹಾಲಿ 543 ಸ್ಥಾನಗಳಿವೆ. ಸಂವಿಧಾನದ ವಿಧಿ 82ರ ಪ್ರಕಾರ, ಪ್ರತಿ ಜನಗಣತಿಯ ನಂತರವೂ ಜನಸಂಖ್ಯೆಯ ಪ್ರಮಾಣಕ್ಕೆ ತಕ್ಕಂತೆ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡಬೇಕು. ಈ ವಿಧಿಗೆ ತುರ್ತುಪರಿಸ್ಥಿತಿಯ ಸಮಯದಲ್ಲಿ 42ನೇ (1976) ತಿದ್ದುಪಡಿ ತರಲಾಯಿತು. ಅದರಂತೆ, 2001ರ ಜನಗಣತಿಯವರೆವಿಗೂ ಕ್ಷೇತ್ರ ಪುನರ್ ವಿಂಗಡಣಾ ಪ್ರಕ್ರಿಯೆಯನ್ನು ಅಮಾನತಿನಲ್ಲಿಡಲಾಯಿತು. ಆ ತಿದ್ದುಪಡಿ ತರುವಾಗ ಇಂದಿರಾ ಗಾಂಧಿ ಅವರ ಮನಸ್ಸಿನಲ್ಲಿ ಇದ್ದ ವಿಚಾರವೇನೆಂದರೆ, ದೇಶದಲ್ಲಿ ಜನನ ನಿಯಂತ್ರಣ ನೀತಿಯನ್ನು ಯಶಸ್ವಿಯಾಗಿ ಜಾರಿಗೆ ತರುವುದು ಮತ್ತು ಜನಸಂಖ್ಯೆಯನ್ನು ನಿಯಂತ್ರಿಸುವುದು.
2002ರಲ್ಲಿ ಸಂಸತ್ ಸಂವಿಧಾನಕ್ಕೆ 84ನೇ ತಿದ್ದುಪಡಿ ತರುವ ಮೂಲಕ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯನ್ನು 2026ರ ನಂತರದ (ಅಂದರೆ 2031ರ) ಜನಗಣತಿಯವರೆಗೆ ಮತ್ತೆ ಮುಂದೂಡಿತು. ಆದಾಗ್ಯೂ ಸಂವಿಧಾನಕ್ಕೆ 2003ರಲ್ಲಿ ತರಲಾದ 87ನೇ ತಿದ್ದುಪಡಿಯ ಪ್ರಕಾರ, ರಾಜ್ಯಗಳ ಕ್ಷೇತ್ರಗಳಲ್ಲಿ ಹೆಚ್ಚುಕಡಿಮೆ ಮಾಡದಂತೆ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಬಹುದು.
ದೇಶದಲ್ಲಿ ಇದುವರೆಗೆ ನಾಲ್ಕು ಬಾರಿ (1952, 1963, 1973 ಮತ್ತು 2002) ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲಾಗಿದೆ. ‘2024ರ ಲೋಕಸಭಾ ಚುನಾವಣೆಯ ನಂತರ ಜನಗಣಗತಿ ನಡೆಯಲಿದ್ದು, ಅದರ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ನಡೆಯಲಿದೆ. ಆಗ ದಕ್ಷಿಣದ ರಾಜ್ಯಗಳು ಎತ್ತಿರುವ ಆಕ್ಷೇಪಗಳನ್ನೂ ಪರಿಗಣಿಸಲಾಗುವುದು’ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಇದೇ ಜನವರಿಯಲ್ಲಿ ಹೇಳಿದ್ದರು. ಆದರೆ, ಉತ್ತರದ ಹಿಂದಿ ಭಾಷಿಕ ರಾಜ್ಯಗಳ ಪರವಾಗಿರುವ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ ವಿಂಗಡಣೆ ಅವಕಾಶವನ್ನು ಹೇಗೆ ಬಳಸಿಕೊಳ್ಳಲಿದೆ ಎನ್ನುವುದರ ಬಗ್ಗೆ ದಕ್ಷಿಣದ ರಾಜ್ಯಗಳಲ್ಲಿ ಅನುಮಾನ ಮತ್ತು ಆತಂಕ ಇದೆ.
ಫಲವಂತಿಕೆ ದರ ಕುಸಿತ
ದೇಶದಲ್ಲಿ ಮಹಿಳೆಯರು ಮಕ್ಕಳನ್ನು ಪಡೆಯುವ ಒಟ್ಟು ಫಲವಂತಿಕೆ ದರ (total fertility rate–ಟಿಎಫ್‌ಆರ್) ಕಡಿಮೆಯಾಗುತ್ತಿದೆ. ಟಿಎಫ್‌ಆರ್ ಎಂದರೆ, ಸಂತಾನೋತ್ಪತ್ತಿ ವಯೋಮಾನದ ಪ್ರತಿಯೊಬ್ಬ ಮಹಿಳೆಯು ಮಕ್ಕಳನ್ನು ಪಡೆಯುವ ಸರಾಸರಿ ಸಾಮರ್ಥ್ಯ. ದೇಶದಲ್ಲಿ ಜನಿಸಿದ ಮಕ್ಕಳ ಸಂಖ್ಯೆಯನ್ನು ಸಂತಾನೋತ್ಪತ್ತಿ ವಯೋಮಾನದ ಒಟ್ಟು ಮಹಿಳೆಯರ ಸಂಖ್ಯೆಯೊಂದಿಗೆ ತಾಳೆ ಮಾಡಿ ಫಲವಂತಿಕೆ ದರವನ್ನು ಲೆಕ್ಕ ಹಾಕಲಾಗುತ್ತದೆ. 1992–93 ಮತ್ತು 2019–21 ನಡುವೆ ಈ ದರದಲ್ಲಿ 1.4ರಷ್ಟು ಕಡಿಮೆಯಾಗಿದೆ. 1992–93ರಲ್ಲಿ ಟಿಎಫ್‌ಆರ್ 3.4ರಷ್ಟಿದ್ದಿದ್ದರೆ, 2019–21ರ ವೇಳೆಗೆ 2ಕ್ಕೆ ಕುಸಿದಿದೆ.
ಜನಸಂಖ್ಯೆ ಮತ್ತು ತೆರಿಗೆ ಪಾಲು
ಕೇಂದ್ರ ಸರ್ಕಾರವು ತೆರಿಗೆ ಆದಾಯ ಪಾಲನ್ನು ರಾಜ್ಯಗಳಿಗೆ ಹಂಚುವಾಗ ಜನಸಂಖ್ಯೆಯನ್ನೂ ಒಂದು ಮಾನದಂಡವಾಗಿ ಪರಿಗಣಿಸುತ್ತದೆ. ವರ್ಷದಿಂದ ವರ್ಷಕ್ಕೆ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿರುವ ತೆರಿಗೆ ಪಾಲಿನ ಮೊತ್ತ ಹೆಚ್ಚಾಗುತ್ತಿದ್ದರೂ, ಒಟ್ಟಾರೆ ಪಾಲಿನ ಶೇಕಡವಾರು ಪ್ರಮಾಣ ಕಡಿಮೆಯಾಗುತ್ತಿದೆ.
ಆರಂಭದ ಏಳು ಹಣಕಾಸು ಆಯೋಗಗಳು ತೆರಿಗೆ ಪಾಲನ್ನು ಹಂಚಿಕೆ ಮಾಡುವಾಗ ಜನಸಂಖ್ಯೆ ಮಾನದಂಡಕ್ಕೆ ಹೆಚ್ಚು ಪ್ರಾಮುಖ್ಯ ನೀಡಿದ್ದವು. ಆ ಪ್ರಮಾಣ ಈಗ ಗಣನೀಯವಾಗಿ ಇಳಿದಿದೆ.
14ನೇ ಹಣಕಾಸು ಆಯೋಗವು ಕೇಂದ್ರದ ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲನ್ನು ನಿಗದಿ ಪಡಿಸಲು ಜನಸಂಖ್ಯೆ ಸ್ವರೂಪ ಬದಲಾವಣೆ ಎಂಬ ಮಾನದಂಡವನ್ನು ಬಳಸಿತ್ತು. ಇದಕ್ಕಾಗಿ ಜನರ ವಲಸೆ ಮತ್ತು ವಯಸ್ಸನ್ನು ಪರಿಗಣಿಸಿತ್ತು. ಇದರಿಂದಾಗಿ, ತೆಲಂಗಾಣದಿಂದ ಪ್ರತ್ಯೇಕಗೊಂಡಿದ್ದ ಆಂಧ್ರಪ್ರದೇಶದ ಪಾಲು ಗಣನೀಯವಾಗಿ ಕುಸಿದಿತ್ತು. ಕರ್ನಾಟಕದ ಪಾಲು ಕೂಡ ಕಡಿಮೆ ಆಗಿದೆ. ಆದರೆ, ಜನಸಂಖ್ಯೆಯ ಕಾರಣಕ್ಕೆ ಉತ್ತರ ರಾಜ್ಯಗಳು ಹೆಚ್ಚು ಪಾಲನ್ನು ಪಡೆಯುತ್ತಿವೆ. ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿರುವ ದಕ್ಷಿಣದ ರಾಜ್ಯಗಳಿಗೆ ಕಡಿಮೆ ಪಾಲು ಸಿಗುತ್ತಿದೆ ಎಂಬ ಆರೋಪ ದಕ್ಷಿಣದ ರಾಜ್ಯಗಳದ್ದು. ಆದಾಯ ಹಂಚಿಕೆಯಲ್ಲಿ ಅನ್ಯಾಯವಾದಂತೆ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲೂ ತಮಗೆ ಅನ್ಯಾಯವಾಗಲಿದೆ ಎನ್ನುವ ಆತಂಕ ದಕ್ಷಿಣ ರಾಜ್ಯಗಳದ್ದು.
ರಾಜಕೀಯ ಲೆಕ್ಕಾಚಾರವೇನು?
ಚಂದ್ರಬಾಬು ನಾಯ್ಡು ಮತ್ತು ಸ್ಟಾಲಿನ್ ಅವರ ಹೇಳಿಕೆ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎಂದೂ ಹೇಳಲಾಗುತ್ತಿದೆ.
ಉತ್ತರದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಾಗಿದೆ. ಕ್ಷೇತ್ರ ಮರುವಿಂಗಡಣೆಗೊಂಡರೆ ದಕ್ಷಿಣ ರಾಜ್ಯಗಳಿಗಿಂತಲೂ ಉತ್ತರ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ ಗಣನೀಯ ಹೆಚ್ಚಳವಾಗಲಿದೆ. ಇದು ಚುನಾವಣೆಗಳಲ್ಲಿ ಬಿಜೆಪಿಗೆ ಅನುಕೂಲವಾಗಿ ಪರಿಣಮಿಸಬಹುದು ಎಂಬುದು ದಕ್ಷಿಣದ ಪ್ರಾದೇಶಿಕ ಪಕ್ಷಗಳ ಆತಂಕ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೂ ಮುನ್ನ ಅಲ್ಲಿ ಕ್ಷೇತ್ರಗಳ ಮರುವಿಂಗಡಣೆ ಮಾಡಲಾಗಿತ್ತು. ಬಿಜೆಪಿ ಪ್ರಾಬಲ್ಯವಿರುವ ಜಮ್ಮು ವಿಭಾಗದಲ್ಲಿ ಮೊದಲು 37 ಕ್ಷೇತ್ರಗಳಿದ್ದವು. ಮರುವಿಂಗಡಣೆಯ ನಂತರ ಅದು 43ಕ್ಕೆ ಹೆಚ್ಚಿತ್ತು. ಬಿಜೆಪಿ ಬೆಂಬಲಿಗರು ಕಡಿಮೆ ಸಂಖ್ಯೆಯಲ್ಲಿರುವ ಕಾಶ್ಮೀರ ವಿಭಾಗದಲ್ಲಿ ಮೊದಲು 46 ಕ್ಷೇತ್ರಗಳಿದ್ದರೆ, ಪುನರ್ ವಿಂಗಡಣೆಯ ನಂತರ 47 ಆಗಿತ್ತಷ್ಟೇ (ಆದರೆ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಲ್ಲಿ ಉತ್ತಮ ಸಾಧನೆಯನ್ನೇನೂ ಮಾಡಿಲ್ಲ).
‘ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಬೆಂಬಲ ಇಲ್ಲದಿದ್ದರೆ ಸರ್ಕಾರ ಉಳಿಯುವುದೂ ಕಷ್ಟ. ನಾಯ್ಡು ಅವರ ಈಗಿನ ಹೇಳಿಕೆ ನೋಡಿದರೆ ಅವರು ಪುನರ್‌ವಿಂಗಡಣೆಯನ್ನು ಬೆಂಬಲಿಸುವುದು ಅನುಮಾನ. ಇದಲ್ಲದೇ, ಕ್ಷೇತ್ರಗಳು ಕಡಿಮೆಯಾಗುತ್ತವೆ ಎಂದಿದ್ದರೆ ದಕ್ಷಿಣದ ರಾಜ್ಯಗಳು ಇದನ್ನು ಬೆಂಬಲಿಸುವ ಸಾಧ್ಯತೆಯೂ ಕಡಿಮೆ. ಇದು ದೇಶದ ಉತ್ತರ ಭಾಗ, ದಕ್ಷಿಣ ಭಾಗದ ನಡುವೆ ಘರ್ಷಣೆಗೂ ಕಾರಣವಾಗಬಹುದು. ಹಾಗಾಗಿ, ಅಂತಹ ದುಸ್ಸಾಹಸಕ್ಕೆ ಎನ್‌ಡಿಎ ಸರ್ಕಾರ ಕೈಹಾಕುವ ಸಾಧ್ಯತೆ ಕಡಿಮೆ‘ ಎಂಬ ವಿಶ್ಲೇಷಣೆಯೂ ರಾಜಕೀಯ ವಲಯದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.