ADVERTISEMENT

ಆಳ–ಅಗಲ: ಸಂಕಥನಗಳ ಒಡೆದುಹಾಕಿದ ಚುನಾವಣೆ

ಸುಕೃತ ಎಸ್.
Published 4 ಜೂನ್ 2024, 23:43 IST
Last Updated 4 ಜೂನ್ 2024, 23:43 IST
   

ಸುಮಾರು ಎಂಬತ್ತು ದಿನಗಳ ಸುದೀರ್ಘ ಚುನಾವಣೆ. ಪ್ರಚಾರವೂ ಅಷ್ಟೇ ಅಬ್ಬರದಲ್ಲಿ, ಅಷ್ಟೇ ವ್ಯಾಪಕವಾಗಿ ನಡೆಯಿತು. ಈಗ ಫಲಿತಾಂಶ ಹೊರಬಿದ್ದ ಸಮಯ. ಪತ್ರಿಕೆಯು ಮುದ್ರಣಕ್ಕೆ ಹೋಗುವವರೆಗೂ ಸ್ಪಷ್ಟ ಫಲಿತಾಂಶ ಪ್ರಕಟಗೊಂಡಿಲ್ಲ. ಆದರೆ, ಎನ್‌ಡಿಎ ಮೈತ್ರಿಕೂಟವು ಸರಳ ಬಹುಮತದ ಮುನ್ನಡೆಯನ್ನಂತೂ ಸಾಧಿಸಿದೆ.

ಈ ಬಾರಿಯ ಚುನಾವಣೆಯು ಬಿಜೆಪಿಗೆ ಪ್ರಯಾಸವನ್ನೇ ನೀಡಿದೆ. ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ಪ್ರಬಲವಾಗಿ ಸವಾಲೊಡ್ಡುವಲ್ಲಿ ಯಶಸ್ವಿಯಾಗಿದೆ. ಸೋಲು–ಗೆಲುವು ಯಾರದ್ದೇ ಆಗಿದ್ದರೂ 2024ರ ಲೋಕಸಭಾ ಚುನಾವಣೆಯ ಪ್ರಚಾರವು ಹಲವು ಸಂಕಥನಗಳನ್ನು ಒಡೆದು ಹಾಕಿದೆ ಮತ್ತು ಹಲವು ಸಂಕಥನಗಳನ್ನು ಹುಟ್ಟುಹಾಕಿದೆ.

ಸಂಸತ್ತಿನಲ್ಲಿನ ತಮ್ಮ ಕೊನೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ‘ಚಾರ್‌ಸೌ ಪಾರ್‌’ (400ಕ್ಕೂ ಹೆಚ್ಚು ಸ್ಥಾನಗಳು) ಎನ್ನುವ ಘೋಷಣೆಯನ್ನು ಕೂಗಿದ್ದರು. ಜನವರಿಯಲ್ಲಿ ರಾಮ ಮಂದಿರದ ಉದ್ಘಾಟನೆಯೂ ನಡೆಯಿತು. ಇದು ಬಿಜೆಪಿಯ ವಿಶ್ವಾಸವನ್ನು ಸಹಜವಾಗಿಯೇ ಹೆಚ್ಚಿಸಿತ್ತು. ಇದರ ನಡುವೆಯೇ ಸಂವಿಧಾನವನ್ನು ಬದಲಿಸುವ ಹೇಳಿಕೆಗಳನ್ನು ವಿವಿಧ ರಾಜ್ಯಗಳ ಪಕ್ಷದ ಕೆಲವು ನಾಯಕರು ನೀಡಿದರು. ಇದು ರಾಷ್ಟ್ರಮಟ್ಟದ ಸುದ್ದಿಯಾಯಿತು. ಈ ಎಲ್ಲದರ ನಡುವೆ ಒಂದಕ್ಕೊಂದು ಕಾರ್ಯಕಾರಣ ಸಂಬಂಧ ಏರ್ಪಟ್ಟವು. ಇದನ್ನು ವಿರೋಧ ಪಕ್ಷಗಳು ತಮ್ಮ ಪ್ರಚಾರದ ಮುಖ್ಯ ವಿಷಯವನ್ನಾಗಿಸಿಕೊಂಡವು.

ADVERTISEMENT

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸರಿಸುಮಾರು ತಮ್ಮ ಎಲ್ಲ ಚುನಾವಣಾ ಪ್ರಚಾರ ಸಭೆಗಳಲ್ಲೂ ಸಂವಿಧಾನದ ಹೊತ್ತಗೆಯನ್ನು ಹಿಡಿದು ಭಾಷಣ ಮಾಡಿದ್ದಾರೆ. ಇದು ಸಂವಿಧಾನವನ್ನು ಉಳಿಸಿಕೊಳ್ಳುವ, ಮೀಸಲಾತಿಯನ್ನು ಉಳಿಸಿಕೊಳ್ಳುವ ಚುನಾವಣೆ ಎಂದು ಪದೇ ಪದೇ ಹೇಳಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದ ಎಲ್ಲ ನಾಯಕರು ಈ ವಿಷಯವನ್ನು ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸಿದ್ದರು. ಬಿಜೆಪಿ ಎಣಿಸಿದಂತೆ ರಾಮ ಮಂದಿರವೂ ಚುನಾವಣಾ ಪ್ರಚಾರದ ಪ್ರಮುಖ ವಿಷಯವೇ ಆಗಲಿಲ್ಲ. 

ಪ್ರಧಾನಿ ಮೋದಿ ಅವರ ಭಾಷಣಗಳು ಹಾಗೂ ಅವರು ವಿವಿಧ ಸುದ್ದಿ ಸಂಸ್ಥೆಗಳಿಗೆ ನೀಡಿದ ಸಂದರ್ಶನಗಳು ಈ ಬಾರಿಯ ಚುನಾವಣೆಯ ಪ್ರಮುಖ ಚರ್ಚಾ ವಿಷಯವಾಗಿದ್ದವು. ಜೊತೆಗೆ, ಈ ಭಾಷಣ ಹಾಗೂ ಸಂದರ್ಶನಗಳೇ ಬಿಜೆಪಿಯ ಚುನಾವಣಾ ವಿಚಾರಗಳೇ ಆಗಿವೆಯೇನೋ ಎಂಬಂತೆ ಪ್ರಚಾರದುದ್ದಕ್ಕೂ ಕಂಡುಬಂದಿತು.

ತಮ್ಮ ಭಾಷಣಗಳಲ್ಲಿ ಪ್ರಧಾನಿ ಮೋದಿ ಅವರು ಪ್ರಸ್ತಾಪಿಸುವ ವಿಚಾರಗಳಿಗೆ ವಿರುದ್ಧವಾದ ಅಭಿಪ್ರಾಯವನ್ನು ಖುದ್ದು ಪ್ರಧಾನಿ ಅವರೇ ತಮ್ಮ ಸಂದರ್ಶನಗಳಲ್ಲಿ  ನೀಡಿದ್ದು ಪಕ್ಷಕ್ಕೆ ತುಸು ಮುಜುಗರವನ್ನೇ ಉಂಟು ಮಾಡಿತು. ದೇವರು ತನ್ನನ್ನು ಯಾವುದೋ ಕಾರ್ಯಸಾಧನೆಗಾಗಿಯೇ ಕಳುಹಿಸಿದ್ದಾರೆ ಎನ್ನಿಸುತ್ತಿದೆ ಎಂದು ಪ್ರಧಾನಿ ಅವರು ಹೇಳಿದ್ದು, ಪುರಿಯ ಜಗನ್ನಾಥನು ಪ್ರಧಾನಿ ಮೋದಿ ಅವರು ಭಕ್ತ ಎಂದು ಪಕ್ಷದ ನಾಯಕ ಸಂಬಿತ್‌ ಪಾತ್ರಾ ಅವರು ಹೇಳಿಕೆ ನೀಡಿದ್ದು (ಬಾಯಿತಪ್ಪಿನಿಂದ ಹೇಳಿದ್ದಾಗಿ ಅವರು ನಂತರ ಹೇಳಿಕೆ ನೀಡಿದರು) ಹಾಸ್ಯಾಸ್ಪದವಾಯಿತು.

ಬೆಲೆ ಏರಿಕೆ, ನಿರುದ್ಯೋಗ, ಅಗ್ನಿವೀರ ಯೋಜನೆ, ಸಂವಿಧಾನ ಉಳಿವು –ಇವು ಆಡಳಿತ ಪಕ್ಷದ ವಿರುದ್ಧ ‘ಇಂಡಿಯಾ’ ಮೈತ್ರಿಕೂಟವು ತನ್ನ ಪ್ರಚಾರದಲ್ಲಿ ಚರ್ಚಿಸಿದ್ದ ವಿಚಾರಗಳು. ಇನ್ನೊಂದೆಡೆ, ತನ್ನ ನ್ಯಾಯಪತ್ರದಲ್ಲಿನ ಹಲವು ಗ್ಯಾರಂಟಿಗಳು, ಜಾತಿ ಜನಗಣತಿ, ಮೀಸಲಾತಿ ಮಿತಿ ಏರಿಕೆ– ಇವು ಕಾಂಗ್ರೆಸ್‌ ಪಕ್ಷವು ಜನರಿಗೆ ನೀಡಿದ ಭರವಸೆಗಳು. ಆದರೆ, ಬಿಜೆಪಿಯ ಪ್ರಚಾರವು ಮುಸ್ಲಿಂ ವಿರೋಧಕ್ಕಷ್ಟೇ ಸೀಮಿತವಾಯಿತು. ದೇಶದೆಲ್ಲೆಡೆ 370ನೇ ವಿಧಿ ರದ್ದತಿಯ ಕುರಿತು ಬಿಜೆಪಿ ಪ್ರಚಾರ ಮಾಡಿತು. ಆದರೆ, ಕಾಶ್ಮೀರದಲ್ಲಿಯೇ ಅಭ್ಯರ್ಥಿಗಳನ್ನು ಪಕ್ಷವು ನಿಲ್ಲಿಸಲಿಲ್ಲ. ಹೀಗೆ, ಈ ಬಾರಿಯ ಪ್ರಚಾರವು ಹಲವು ಸಂಕಥನಗಳನ್ನು ಒಡೆದು ಹಾಕಿದೆ. ಸಂವಿಧಾನ ಉಳಿವು ಪ್ರಮುಖವಾದುದು ಎನ್ನುವ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ರಾಹುಲ್ ಗಾಂಧಿಯ ‘ಪ್ರೀತಿಯ ಅಂಗಡಿ’
2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನವೂ, ಬಂದ ಮೇಲೂ ಬಿಜೆಪಿಯು ರಾಹುಲ್‌ ಗಾಂಧಿ ಅವರ ವ್ಯಕ್ತಿತ್ವವನ್ನು ಅಪಹಾಸ್ಯ ಮಾಡುತ್ತಲೇ ಬಂದಿದೆ. ರಾಹುಲ್ ಅವರ ಕುರಿತು ಬಂದ ಸುಳ್ಳು ಸುದ್ದಿಗಳೂ ದೊಡ್ಡ ಪ್ರಮಾಣದಲ್ಲಿದ್ದವು ಮತ್ತು ಈಗಲೂ ಇದೆ. ಫಲಿತಾಂಶದ ನಂತರ ರಾಹುಲ್‌ ಅವರು ಇಟಲಿಗೆ ಓಡಿಹೋಗುತ್ತಾರೆ, ಥಾಯ್ಲೆಂಡ್‌ಗೆ ಓಡುತ್ತಾರೆ, ಬ್ಯಾಂಕಾಕ್‌ಗೆ ಹೋಗುತ್ತಾರೆ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಆದರೆ, ಭಾರಿ ಬಹುಮತದೊಂದಿಗೆ ರಾಹುಲ್‌ ಗಾಂಧಿ ಅವರು ತಾವು ಸ್ಪರ್ಧಿಸಿದ್ದ ವಯನಾಡ್‌ ಹಾಗೂ ರಾಯಿಬರೇಲಿ ಕ್ಷೇತ್ರಗಳಿಂದ ಗೆದ್ದು ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ರಾಹುಲ್‌ ಗಾಂಧಿಗೂ ವಾಸ್ತವದಲ್ಲಿ ಇರುವ ರಾಹುಲ್‌ ಗಾಂಧಿಗೂ ಬಹಳ ವ್ಯತ್ಯಾಸವಿದೆ ಎಂದು ಜಗತ್ತಿಗೆ ತಿಳಿದಿದ್ದು, ಅವರ 'ಭಾರತ ಜೊಡೊ' ಹಾಗೂ 'ಭಾರತ ಜೊಡೊ ನ್ಯಾಯ ಯಾತ್ರೆ'ಗಳಿಂದ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇನೆ ಎಂದು ಅವರು ಪದೇ ಪದೇ ತಮ್ಮ ಭಾಷಣಗಳಲ್ಲಿ ಹೇಳಿಕೊಂಡಿದ್ದರು. ಈ ಯಾತ್ರೆಯ ಕಾರಣಕ್ಕಾಗಿ ಪಕ್ಷಕ್ಕೆ ಎಷ್ಟು ಮತಗಳು ಬಂದವು ಎನ್ನುವುದು ಚರ್ಚೆಯ ವಿಚಾರ. ಆದರೆ, ರಾಹುಲ್‌ ಅವರ ವ್ಯಕ್ತಿತ್ವದ ಪರಿಚಯ ಆಗಿದ್ದು ಮಾತ್ರ ಯಾತ್ರೆಯಿಂದಲೇ.

ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ ಅವರ ವಿಚಾರವನ್ನು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಕಳೆದ ಎರಡು–ಮೂರು ವರ್ಷಗಳಿಂದ ಮಾತನಾಡುತ್ತಲೇ ಬಂದಿದ್ದಾರೆ. ಇದಕ್ಕಾಗಿಯೇ ತಮ್ಮ ಸಂಸತ್‌ ಸದಸ್ಯತ್ವವನ್ನು ಕಸಿದುಕೊಳ್ಳಲಾಯಿತು ಎಂದು ಅವರು ಹೇಳುತ್ತಲೇ ಬಂದಿದ್ದಾರೆ. ಕಳೆದ 10 ವರ್ಷಗಳಲ್ಲಿ ಸಾರ್ವಜನಿಕವಾಗಿ ಅದಾನಿ ಹಾಗೂ ಅಂಬಾನಿ ಅವರ ಹೆಸರು ಹೇಳದೇ ಇದ್ದ ಪ್ರಧಾನಿ ಮೋದಿ ಅವರು ತಮ್ಮ ಪ್ರಚಾರ ಭಾಷಣವೊಂದರಲ್ಲಿ ಅದಾನಿ ಹಾಗೂ ಅಂಬಾನಿ ಅವರ ಹೆಸರುಗಳನ್ನು ಪ್ರಸ್ತಾಪಿಸಿದರು. ಇದು ಕೂಡ ಈ ಚುನಾವಣಾ ಪ್ರಚಾರದ ಪ್ರಮುಖಾಂಶ.

ಪ್ರಚಾರ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವಿದೆ. ‘ಇಂಡಿಯಾ’ ಮೈತ್ರಿಕೂಟದ ಕುರಿತು, ಮೈತ್ರಿಕೂಟವು ಶಕ್ತಿಯುತವಾಗಿಲ್ಲ, ನಾಯಕರ ನಡುವೆ ತಾಳಮೇಳವಿಲ್ಲ ಎನ್ನುವ ಕುರಿತು ಬಿಜೆಪಿಯು ತನ್ನ ಪ್ರಚಾರವನ್ನು ಮುಂದಿಟ್ಟಿತು. ಆದರೆ, ಈ ಆರೋಪಗಳನ್ನು ಮೈತ್ರಿಕೂಟವು ಸುಳ್ಳು ಮಾಡಿದೆ. ಪ್ರಚಾರ ನಡೆದ ಎಲ್ಲದಿನವೂ ಇಡೀ ಮೈತ್ರಿಕೂಟದ ನಾಯಕ ಮಾತುಗಳು, ಅಭಿಪ್ರಾಯಗಳು ಒಂದೇ ಆಗಿದ್ದವು. ಎಲ್ಲಿಯೂ ಮೈತ್ರಿಕೂಟದ ನಾಯಕರಿಂದ ವ್ಯತಿರಿಕ್ತ ಅಭಿಪ್ರಾಯಗಳು ಮೂಡಲಿಲ್ಲ.

ರಾಜಕೀಯ ಸಮೀಕರಣ ಬದಲಿಸಿದ ಫಲಿತಾಂಶ

ಬಹುತೇಕ ರಾಜ್ಯಗಳಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದ್ದರೂ, ಕೆಲವು ರಾಜ್ಯಗಳು ಅನಿರೀಕ್ಷಿತ ಫಲಿತಾಂಶಕ್ಕೆ ಸಾಕ್ಷಿಯಾಗಿವೆ. ಈ ಫಲಿತಾಂಶವು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಸಂಖ್ಯೆ ಕುಸಿಯಲು ಕಾರಣವಾಗಿದ್ದರೆ, ಕೆಲವೆಡೆ ‘ಇಂಡಿಯಾ’ ಮೈತ್ರಿಕೂಟದ ಲೆಕ್ಕಾಚಾರವನ್ನೂ ತಲೆಕೆಳಗು ಮಾಡಿದೆ. ಇದು ಒಟ್ಟಾರೆ ದೇಶದ ರಾಜಕೀಯ ಸಮೀಕರಣವು ಬದಲಾಗಲು ಕಾರಣವಾಗಿದೆ.

ಗುಜರಾತ್‌: 2019ರ ಚುನಾವಣೆಯಲ್ಲಿ ರಾಜ್ಯದ 26 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಈ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕನಿಷ್ಠ 5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಮತ್ತು ಗಾಂಧಿನಗರ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು 10 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವುದಾಗಿ ರಾಜ್ಯ ಬಿಜೆಪಿ ಘಟಕ ಘೋಷಿಸಿತ್ತು. ಆದರೆ ಅಮಿತ್ ಅವರು 10 ಲಕ್ಷ ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ಬಿಜೆಪಿ ಅಭ್ಯರ್ಥಿಗಳು ಐದು ಲಕ್ಷಕ್ಕಿಂತಲೂ ಹೆಚ್ಚು ಅಂತರದಿಂದ ಗೆದ್ದಿದ್ದು ಮೂರು ಕ್ಷೇತ್ರಗಳಲ್ಲಿ ಮಾತ್ರ. ಬಿಜೆಪಿಯ ಪ್ರಾಬಲ್ಯದ ನಡುವೆಯೂ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದಿದ್ದಾರೆ. ಗುಜರಾತ್‌ನಲ್ಲಿ ಬಿಜೆಪಿ ಒಂದು ಸ್ಥಾನವನ್ನು ಕಳೆದುಕೊಂಡಂತಾಗಿದೆ

61.86% ಬಿಜೆಪಿ

33.95% ‘ಇಂಡಿಯಾ’ ಮೈತ್ರಿಕೂಟ

4.19% ಇತರೆ

ಕೇರಳ: ಕೇರಳದ 20 ಕ್ಷೇತ್ರಗಳಲ್ಲಿ 18ರಲ್ಲಿ ಕಾಂಗ್ರೆಸ್‌ ನೇತೃತ್ವದ ಎಲ್‌ಡಿಎಫ್‌ ಗೆದ್ದಿದೆ. ಎಲ್‌ಡಿಎಫ್‌ನಲ್ಲಿನ ಎಲ್ಲಾ ಪಕ್ಷಗಳೂ ‘ಇಂಡಿಯಾ’ ಮೈತ್ರಿಕೂಟದಲ್ಲಿವೆ. ‘ಇಂಡಿಯಾ’ ಮೈತ್ರಿಕೂಟದಲ್ಲಿದ್ದೂ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಎಡಪಕ್ಷಗಳು ಒಂದು ಕ್ಷೇತ್ರದಲ್ಲಷ್ಟೇ ಗೆದ್ದಿವೆ. ಅಚ್ಚರಿ ಮೂಡಿಸುವಂತೆ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆದ್ದು, ಕೇರಳದಲ್ಲಿ ಖಾತೆ ತೆರೆದಿದೆ. ತಿರುವನಂತರಪುರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಶಶಿ ತರೂರ್‌ ಅವರಿಗೆ ಬಿಜೆಪಿಯ ರಾಜೀವ್ ಚಂದ್ರಶೇಖರ್ ಪ್ರಬಲ ಪೈಪೋಟಿ ನೀಡಿದ್ದರು. ಇಲ್ಲಿ ತರೂರ್‌ ಗೆಲುವು ಪ್ರಯಾಸದ್ದಾಗಿತ್ತು. ‘ಇಂಡಿಯಾ’ ಮೈತ್ರಿಕೂಟಕ್ಕೆ 19 ಸ್ಥಾನಗಳು ಬಂದಿದ್ದರೂ, ಕೇರಳದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

16.68% ಬಿಜೆಪಿ

75.51% ‘ಇಂಡಿಯಾ’ ಮೈತ್ರಿಕೂಟ

7.81% ಇತರೆ

ತಮಿಳುನಾಡು: ತಮಿಳುನಾಡಿನಲ್ಲಿ ಬಿಜೆಪಿ ಈ ಬಾರಿ ಉತ್ತಮ ಸಾಧನೆ ಮಾಡಲಿದೆ. ರಾಜ್ಯದಲ್ಲಿ ಬಿಜೆಪಿ ಮತ ಪ್ರಮಾಣ ಎರಡಂಕಿಯಷ್ಟಾಗಲಿದೆ ಎಂದು ಪಕ್ಷವೇ ಹೇಳಿಕೊಂಡಿತ್ತು. ಜತೆಗೆ ಪ್ರಾದೇಶಿಕ ಪಕ್ಷ ಪಿಎಂಕೆ ಒಟ್ಟಿಗೆ ಬಿಜೆಪಿ ಮೈತ್ರಿಯನ್ನೂ ಮಾಡಿಕೊಂಡಿತ್ತು. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವಿನ ನಗೆ ಬೀರುವಲ್ಲಿ ವಿಫಲರಾಗಿದ್ದಾರೆ. ಇರುವ 39 ಕ್ಷೇತ್ರಗಳಲ್ಲೂ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ

47.45% ‘ಇಂಡಿಯಾ’ ಮೈತ್ರಿಕೂಟ: ಡಿಎಂಕೆ, ವಿಸಿಕೆ, ಎಂಡಿಎಂಕೆ, ಕಾಂಗ್ರೆಸ್‌, ಎಡಪಕ್ಷಗಳು...

11.15% ಬಿಜೆಪಿ

20.5% ಎಐಎಡಿಎಂಕೆ

20.9% ಇತರೆ

ಪಶ್ಚಿಮ ಬಂಗಾಳ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 18 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ತಮ್ಮ ಸ್ಥಾನವನ್ನು ಉತ್ತಮಪಡಿಸಿಕೊಳ್ಳುವ ಯತ್ನದಲ್ಲಿದ್ದ ಬಿಜೆಪಿ, ಟಿಎಂಸಿ ವಿರುದ್ಧ ಪ್ರಬಲವಾದ ಪ್ರಚಾರ ನಡೆಸಿತ್ತು. ಆದರೆ 12 ಕ್ಷೇತ್ರಗಳನ್ನಷ್ಟೇ ಉಳಿಸಿಕೊಳ್ಳುವುದಕ್ಕೆ ಬಿಜೆಪಿ ತೃಪ್ತಿ ಪಡಬೇಕಾಯಿತು. ಕಾಂಗ್ರೆಸ್‌ ಒಂದು ಮತ್ತು ಟಿಎಂಸಿ 29 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಒಟ್ಟು ‘ಇಂಡಿಯಾ’ ಮೈತ್ರಿಕೂಟವು ಒಟ್ಟು 30 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

57.8% ‘ಇಂಡಿಯಾ’ ಮೈತ್ರಿಕೂಟ (ಟಿಎಂಸಿ, ಕಾಂಗ್ರೆಸ್‌, ಎಡಪಕ್ಷಗಳು)

38.7% ಬಿಜೆಪಿ

3.5% ಇತರೆ

ಒಡಿಶಾ: ಅನಿರೀಕ್ಷಿತ ಫಲಿತಾಂಶ ಬಂದಿರುವ ರಾಜ್ಯಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು ಒಡಿಶಾ. ಆಡಳಿತಾರೂಢ ಬಿಜೆಡಿಯನ್ನು ಅಧಿಕಾರದಿಂದ ದೂರವಿಟ್ಟಿರುವ ಬಿಜೆಪಿ, 21 ಕ್ಷೇತ್ರಗಳ ಪೈಕಿ 19ರಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಡಿಯು ಒಂದು ಸ್ಥಾನಕ್ಕೆ ಕುಸಿದಿದ್ದರೆ, ಕಾಂಗ್ರೆಸ್‌ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ

37.50% ಬಿಜೆಡಿ

45.32% ಬಿಜೆಪಿ

13% ಕಾಂಗ್ರೆಸ್‌

4.18% ಇತರೆ

ಈಶಾನ್ಯ ಭಾರತದಲ್ಲಿ ಬದಲಾವಣೆ: ಇಲ್ಲಿನ ಮಣಿಪುರ, ನಾಗಾಲ್ಯಾಂಡ್‌, ಮಿಜೋರಾಂ ರಾಜ್ಯಗಳ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಅಸ್ಸಾಂನ ಕೆಲವು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆದ್ದಿದೆ. ಮಣಿಪುರ ಗಲಭೆ ಮತ್ತು ಗಲಭೆಯನ್ನು ಬಿಜೆಪಿ ಸರ್ಕಾರ ನಿರ್ವಹಿಸಿದ ರೀತಿಗೆ ಇಲ್ಲಿನ ಜನರು ಪ್ರತಿಕೂಲವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಆದರೆ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಎಲ್ಲಾ ಎರಡು ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದೆ

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದೆ. ಫಲಿತಾಂಶದ ಚಿತ್ರಣ ಮತ್ತು ರಾಜಕೀಯ ಲೆಕ್ಕಾಚಾರ ಬದಲಾಗಲು ಉತ್ತರ ಪ್ರದೇಶದಲ್ಲಿನ ಫಲಿತಾಂಶವೇ ಕಾರಣ. ‘ಇಂಡಿಯಾ’ ಮೈತ್ರಿಕೂಟದ ಅಡಿ ಸ್ಪರ್ಧಿಸಿದ್ದ ಎಸ್‌ಪಿ, ಕಾಂಗ್ರೆಸ್‌ ಮತ್ತು ಆರ್‌ಎಲ್‌ಡಿ ಒಟ್ಟು 45 ಕ್ಷೇತ್ರಗಲ್ಲಿ ಮುನ್ನಡೆ ಸಾಧಿಸಿವೆ. ಬಿಜೆಪಿಗೆ ಮುನ್ನಡೆ ದೊರಕಿದ್ದು 33 ಕ್ಷೇತ್ರಗಳಲ್ಲಿ ಮಾತ್ರ.

41.37% ಬಿಜೆಪಿ

9.39% ಬಿಎಸ್‌ಪಿ

3.96% ಇತರೆ

45.28% ‘ಇಂಡಿಯಾ’ ಮೈತ್ರಿಕೂಟ

ಬಿಹಾರ: ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾದ ರಾಜ್ಯಗಳಲ್ಲಿ ಬಿಹಾರವೂ ಒಂದು. ಅತಿಹೆಚ್ಚು ಮತ ಪಡೆದ ಪಕ್ಷವಾಗಿ ಆರ್‌ಜೆಡಿ ಹೊರಹೊಮ್ಮಿದರೂ, ಅದಕ್ಕೆ ಮುನ್ನಡೆ ದೊರಕಿದ್ದು ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ. ‘ಇಂಡಿಯಾ’ ಮೈತ್ರಿಕೂಟದ ಕಾಂಗ್ರೆಸ್‌ ಮತ್ತು ಎಡಪಕ್ಷಗಳು ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಬಿಜೆಪಿ–ಜೆಡಿಯು–ಎಲ್‌ಜೆಪಿ ಮೈತ್ರಿಕೂಟವು 29 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಈ ರಾಜ್ಯದಲ್ಲಿ ‘ಇಂಡಿಯಾ’ ಮೈತ್ರಿಕೂಟವು ಭಾರಿ ಮುನ್ನಡೆ ಸಾಧಿಸುವ ನಿರೀಕ್ಷೆ ಇರಿಸಿಕೊಂಡಿತ್ತು. ಆದರೆ ಮುನ್ನಡೆ ದೊರಕಿದ್ದು ಎಂಟು ಕ್ಷೇತ್ರಗಳಲ್ಲಿ ಮಾತ್ರ

22.08% ಆರ್‌ಜೆಡಿ (ಇಂಡಿಯಾ ಮೈತ್ರಿಕೂಟದ ಭಾಗ)

45.52% ಎನ್‌ಡಿಎ

13.3% ಇತರೆ

19.1% ‘ಇಂಡಿಯಾ’ ಮೈತ್ರಿಕೂಟ (ಕಾಂಗ್ರೆಸ್ ಮತ್ತು ಎಡಪಕ್ಷಗಳು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.