ADVERTISEMENT

ಆಳ–ಅಗಲ | ಮಣಿಪುರ: ತಿದಿ ಒತ್ತಿದ ಹಿಂಸೆಯ ಕುಲುಮೆ

ಮೈತೇಯಿ, ಕುಕಿ ಜೊ ಸಮುದಾಯಗಳ ಜತೆಗೆ ಹಮಾರ್ ಪಂಗಡ ರಂಗಪ್ರವೇಶ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 19:14 IST
Last Updated 18 ನವೆಂಬರ್ 2024, 19:14 IST
<div class="paragraphs"><p>ಮಣಿಪುರ ಹಿಂಸಾಚಾರ</p></div>

ಮಣಿಪುರ ಹಿಂಸಾಚಾರ

   

ಪಿಟಿಐ

ಮಣಿಪುರದಲ್ಲಿ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಯತ್ನವನ್ನು ವಿರೋಧಿಸಿ ಬುಡಕಟ್ಟು ಸಮುದಾಯಗಳಾದ ಕುಕಿ–ನಾಗ ಸಮುದಾಯಗಳು ಮೇ 3ರಂದು ಚುರಾಚಾಂದ್‌ಪುರ ಜಿಲ್ಲೆಯ ತೋರಬಂಗ್‌ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾಥಾ ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿಂಸಾಚಾರ ಬಹು ಬೇಗ ಇಂಫಾಲ ಕಣಿವೆಯ ಮೈತೇಯಿಗಳು ಮತ್ತು ಬೆಟ್ಟ ಪ್ರದೇಶಗಳಲ್ಲಿರುವ ಕುಕಿಗಳ ನಡುವಿನ ಜನಾಂಗೀಯ ಸಂಘರ್ಷವಾಗಿ ಬದಲಾಗಿತ್ತು. ಒಂದೂವರೆ ವರ್ಷದಿಂದ ಹಿಂಸಾಚಾರದಲ್ಲಿ ಕನಿಷ್ಠ 250 ಮಂದಿ ಸತ್ತಿದ್ದು, 60,000 ಮಂದಿ ನಿರಾಶ್ರಿತರಾಗಿದ್ದಾರೆ. 

ADVERTISEMENT

ಮಣಿಪುರದ ಜನಸಂಖ್ಯೆಯಲ್ಲಿ ಮೈತೇಯಿಗಳು ಶೇ 53ರಷ್ಟಿದ್ದು, ಅವರು ಹೆಚ್ಚಾಗಿ ಇಂಫಾಲ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಉಳಿದಂತೆ ಬುಡಕಟ್ಟು ಸಮುದಾಯಗಳಾದ ನಾಗಾಗಳು, ಕುಕಿಗಳು ಶೇ 40ರಷ್ಟಿದ್ದು, ಬೆಟ್ಟ ಪ್ರದೇಶಗಳಲ್ಲಿ ವಾಸ ಮಾಡುತ್ತಾರೆ. ಇವರ ಕ್ರಿಯೆ ಪ್ರತಿಕ್ರಿಯೆಯ ಹಿಂಸಾತ್ಮಕ ಸರಣಿಯಿಂದ ಮಣಿ‍ಪುರ ಅಗ್ನಿಕುಂಡವಾಗಿತ್ತು.     

ಒಂದಷ್ಟು ದಿನ ಶಾಂತಿಯಿಂದ ಇದ್ದ ಮಣಿಪುರ ಮತ್ತೆ ಉದ್ವಿಗ್ನಗೊಂಡಿದೆ. ಈಶಾನ್ಯ ರಾಜ್ಯದ ಹೊಸ ಭಾಗಗಳಲ್ಲಿ ಸಂಘರ್ಷ ಕಾಣಿಸಿಕೊಂಡಿದ್ದು, ಹಿಂಸಾಚಾರ ಭುಗಿಲೆದ್ದಿದೆ. ಮೈತೇಯಿ ಮತ್ತು ಕುಕಿ ಜೊ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಮತ್ತೊಂದು ಸಮುದಾಯ ಪ್ರವೇಶ ಪಡೆದಿದೆ. ಒಂದು ಕಡೆ ಮಹಿಳೆಯರ ಮೇಲೆ ಅತ್ಯಾಚಾರ, ಮಹಿಳೆಯರು ಮತ್ತು ಮಕ್ಕಳ ಅಪಹರಣ; ಮತ್ತೊಂದು ಕಡೆ, ಸೇನಾ ಪಡೆಗಳ ಗುಂಡಿಗೆ ಹತ್ತಾರು ಮಂದಿ ಸಾವು. ಸುಮಾರು ಒಂದೂವರೆ ವರ್ಷದಿಂದ ತಣ್ಣಗಿದ್ದ ಜಿರೀಬಾಮ್ ಜಿಲ್ಲೆಗೆ ಈಗ ಬೆಂಕಿ ಬಿದ್ದಿದೆ. ಚರ್ಚು, ಅಂಗಡಿ, ಮನೆಗಳ ಜತೆಗೆ ಜನರ ಮನಸ್ಸುಗಳು ಕೂಡ ದಳ್ಳುರಿಗೆ ಸಿಲುಕಿ ಉರಿಯತೊಡಗಿವೆ

ಒಂದಷ್ಟು ದಿನ ತಣ್ಣಗಾದಂತೆ ಕಂಡಿದ್ದ ಹಿಂಸಾಚಾರ ಈಗ ಬೇರೊಂದು ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಆ ಪ್ರದೇಶವೇ ಜೀರಿಬಾಮ್. ಹೊಸ ಸಮುದಾಯವೊಂದು ಸಂಘರ್ಷದ ಭಾಗವಾಗಿದೆ. ಅದುವೇ ಹಮಾರ್ ಸಮುದಾಯ. ಅದು ಕುಕಿ ಜೊ ಸಮುದಾಯದ ಉಪಪಂಗಡ. ಇವರೂ ಕುಕಿ ಸಮುದಾಯದೊಂದಿಗೆ ಗುರುತಿಸಿಕೊಂಡಿದ್ದಾರೆ. 

ಮುಯ್ಯಿಗೆ ಮುಯ್ಯಿ: ಕೆಲವು ತಿಂಗಳುಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರವು ಮತ್ತೆ ಹೊತ್ತಿ ಉರಿಯಲು ಒಬ್ಬ ಮಹಿಳೆಯ ಕೊಲೆ ಕಾರಣವಾಯಿತು. 

ಕಳೆದ ವರ್ಷ ಸಂಘರ್ಷ ಆರಂಭಗೊಂಡ ನಂತರ ಮುಯ್ಯಿಗೆ ಮುಯ್ಯಿ ಎಂಬಂತೆ ಮೈತೇಯಿ ಮತ್ತು ಕುಕಿ ಸಮುದಾಯಗಳು ದಾಳಿ, ಪ್ರತಿದಾಳಿಯಲ್ಲಿ ತೊಡಗಿವೆ. ಎರಡೂ ಸಮುದಾಯಗಳಲ್ಲೂ ಶಸ್ತ್ರ ಸಜ್ಜಿತ ಬಂಡುಕೋರರ ಗುಂಪುಗಳು ಸಕ್ರಿಯವಾಗಿದ್ದು, ಸಮಾಜ ಘಾತುಕ ಚಟುವಟಿಕೆಗಳಲ್ಲೂ ತೊಡಗಿವೆ ಎಂದು ಹೇಳುತ್ತವೆ ಭದ್ರತಾ ಪಡೆಗಳ ಮೂಲಗಳು.

ಇಂಫಾಲ ಕಣಿವೆ ಮತ್ತು ಅದಕ್ಕೆ ಹೊಂದಿಕೊಂಡ ಗುಡ್ಡಗಾಡು ಪ್ರದೇಶಗಳಲ್ಲಿ ಹಿಂದೆ ಹಿಂಸಾಚಾರ ನಡೆಯುತ್ತಿದ್ದರೂ ಜಿರೀಬಾಮ್ ಜಿಲ್ಲೆ ಬಹುತೇಕ ಶಾಂತಿಯಿಂದಿತ್ತು. ಆದರೆ, ಜೂನ್‌ನಲ್ಲಿ ರೈತರೊಬ್ಬರ ಮೃತದೇಹ ಹೊಲದಲ್ಲಿ ಪತ್ತೆಯಾದ ನಂತರ ಇಲ್ಲಿಯೂ ನಿಧಾನಕ್ಕೆ ಹಿಂಸಾಚಾರ ಆರಂಭವಾಯಿತು. ಅದು ತೀವ್ರಗೊಂಡಿದ್ದು ನವೆಂಬರ್ 7ರಂದು ಹಮಾರ್ ಸಮುದಾಯಕ್ಕೆ ಸೇರಿದ ಶಿಕ್ಷಕಿಯೊಬ್ಬರ ಮೇಲೆ ಅಮಾನುಷ ದೌರ್ಜನ್ಯ ನಡೆದ ನಂತರ.

ಅರಂಬಾಯ್ ಟೆಂಗೋಲ್ ಸಂಘಟನೆಯ ಕಾರ್ಯಕರ್ತರು ತನ್ನ ಪತ್ನಿಯ ಮೇಲೆ ಅತ್ಯಾಚಾರ ಮಾಡಿ, ಆಕೆಗೆ ಗುಂಡು ಹೊಡೆದು ಜೀವಂತವಾಗಿ ಸುಟ್ಟಿದ್ದಾರೆ ಎಂದು ಶಿಕ್ಷಕಿಯ ಪತಿ ಪೊಲೀಸರಿಗೆ ದೂರು ನೀಡಿದ್ದರು. ಅರಂಬಾಯ್ ಟೆಂಗೋಲ್ ಎನ್ನುವುದು ಮೈತೇಯಿಗಳ ಬಂಡುಕೋರ ಸಂಘಟನೆಯಾಗಿದ್ದು, ತನ್ನ ಆಕ್ರಮಣಕಾರಿ ಸ್ವಭಾವಕ್ಕೆ ಹೆಸರಾಗಿದೆ. ಇದಾದ ಎರಡು ದಿನಕ್ಕೆ ಮೈತೇಯಿ ಸಮುದಾಯದ ರೈತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗುವುದರೊಂದಿಗೆ ಪರಿಸ್ಥಿತಿ ಹದಗೆಟ್ಟಿತು.       

ಇದರ ನಡುವೆಯೇ ಜಿರೀಬಾಮ್ ಜಿಲ್ಲೆಯ ಬೊರೊಬೆಕ್ರಾ ಪೊಲೀಸ್ ಠಾಣೆ ಸನಿಹವೇ ಆಂತರಿಕವಾಗಿ ಸ್ಥಳಾಂತರಗೊಂಡಿದ್ದ 100 ಮಂದಿಗಾಗಿ ಶಿಬಿರವೊಂದನ್ನು ಆರಂಭಿಸಲಾಗಿತ್ತು. ಆ ಶಿಬಿರದ ಮೇಲೆ ಮತ್ತು ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಸಶಸ್ತ್ರ ಬಂಡುಕೋರರು ದಾಳಿ ನಡೆಸಿದ್ದು, 10 ಮಂದಿ ದಾಳಿಕೋರರು ತಮ್ಮ ಗುಂಡಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ನವೆಂಬರ್ 11ರಂದು ಹೇಳಿದರು. ದಾಳಿ ನಂತರ ಇಬ್ಬರು ನಾಗರಿಕರ ಮೃತದೇಹಗಳು ಸಿಕ್ಕಿದ್ದವು. ಜತೆಗೆ ಆರು ಮಂದಿ ನಾಪತ್ತೆಯಾಗಿದ್ದರು. ಮೈತೇಯಿ ಸಮುದಾಯಕ್ಕೆ ಸೇರಿದ್ದ ಅವರೆಲ್ಲ ಒಂದೇ ಕುಟುಂಬದವರು. ಅವರ ಪೈಕಿ ಮೂವರು ಮಹಿಳೆಯರು, ಮೂವರು ಮಕ್ಕಳು. ಈ ಘಟನೆಯ ನಂತರ ಪರಿಸ್ಥಿತಿ ಬಿಗಡಾಯಿಸಿತು.

ಮೈತೇಯಿಗಳ ದಾಳಿಯಿಂದ ತಮ್ಮನ್ನು ರಕ್ಷಿಸುತ್ತಿದ್ದ ಗ್ರಾಮ ಸ್ವಯಂಸೇವಕರನ್ನು ಬಂಡುಕೋರರು ಎಂಬುದಾಗಿ ಪರಿಗಣಿಸಿ ಪೊಲೀಸರು ಕೊಂದಿದ್ದಾರೆ ಎಂದು ಕುಕಿ ಜೊ ಸಮುದಾಯದ ಜತೆಗೆ ಹಮಾರ್ ವಿದ್ಯಾರ್ಥಿ ಸಂಘವೂ ಅಖಾಡಕ್ಕಿಳಿದು, ಪ್ರತಿಭಟನೆ ನಡೆಸತೊಡಗಿತು. ಇದು ಯೋಜಿತ ಹತ್ಯಾಕಾಂಡವಾಗಿದ್ದು, ಕೇವಲ ಅವರ ಕುಟುಂಬಗಳಿಗಷ್ಟೇ ಅಲ್ಲದೇ ತಮ್ಮ ಇಡೀ ಸಮುದಾಯಕ್ಕೆ ಆದ ನಷ್ಟ ಎಂದು ಕುಕಿ ಸಂಘಟನೆ ಆಕ್ರೋಶ ವ್ಯಕ್ತಪಡಿಸಿತು. ಬಂದ್‌ಗೆ ಕರೆ ನೀಡಲಾಯಿತು, ಅಂಗಡಿ, ಮನೆಗಳ ಮೇಲೆ ದಾಳಿಗಳು ನಡೆದವು. 

ಇನ್ನೊಂದು ಕಡೆ, ಆರು ಮಂದಿಯ ಅಪಹರಣ ವಿರೋಧಿಸಿ 13 ವಿವಿಧ ಸಂಘಟನೆಗಳು ಇಂಫಾಲ ಕಣಿವೆಯ ಐದು ಜಿಲ್ಲೆಗಳಲ್ಲಿ ಬಂದ್‌ಗೆ ಕರೆ ನೀಡಿದವು. ಮೈತೇಯಿ ಸಂಘಟನೆಗಳು ಬೀದಿಗಿಳಿದವು. ದೆಹಲಿ ಮೈತೇಯಿ ಸಮನ್ವಯ ಸಮಿತಿ ಕೂಡ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಲ್ಲದೇ ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿತು. ಮಣಿಪುರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷೆ ಶಾರದಾ ದೇವಿ ಸಶಸ್ತ್ರ ಬಂಡುಕೋರರು ಆರು ಮಂದಿಯನ್ನು ಅಪಹರಣ ಮಾಡಿದ್ದಾರೆ ಎಂದು ಘಟನೆ ಖಂಡಿಸಿದರು. 

ಮುಂದಿನ ಕೆಲವೇ ದಿನಗಳಲ್ಲಿ ಆರು ಮಂದಿಯ ಮೃತದೇಹಗಳು ಜಿರಿ ನದಿ ಮತ್ತು ಅಸ್ಸಾಂನ ವಿವಿಧೆಡೆ ಸಿಕ್ಕವು. ಇದರಿಂದ ಮೈತೇಯಿಗಳು ಮತ್ತಷ್ಟು ಕ್ರುದ್ಧರಾಗಿದ್ದಾರೆ. ಕುಕಿಗಳು ಮತ್ತು ಹಮಾರ್‌ ಪಂಗಡದವರು ತಮ್ಮ ಜನರನ್ನು ಕೊಂದಿದ್ದಾರೆ ಎಂದು ಮೈತೇಯಿಗಳು ಆಕ್ರೋಶಗೊಂಡಿದ್ದಾರೆ. ಇನ್ನೊಂದು ಕಡೆ, ಮೈತೇಯಿಗಳ ಜತೆ ಪೊಲೀಸರೂ ಸೇರಿಕೊಂಡು ತಮ್ಮನ್ನು ಬಲಿ ಪಡೆಯುತ್ತಿದ್ದಾರೆ ಎಂದು ಕುಕಿ ಮತ್ತು ಹಮಾರಾ ಪಂಗಡಗಳು ತೀವ್ರ ಪ್ರತಿರೋಧಕ್ಕೆ ಇಳಿದಿವೆ. 

ಮೈತೇಯಿ, ಕುಕಿ ಜೊ, ಹಮಾರ್ ಪಂಗಡಗಳು ಪರಸ್ಪರ ಅಪನಂಬಿಕೆ, ದ್ವೇಷ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯ ಹಾದಿ ಹಿಡಿದಿವೆ. ಸಮುದಾಯಗಳ ನಡುವೆ ವಿಶ್ವಾಸ ಮರುಸ್ಥಾಪಿಸಿ, ಹಿಂಸಾಚಾರ ನಿಲ್ಲಿಸುವ ಶಕ್ತಿಗಳೇ ರಾಜ್ಯದಲ್ಲಿ ಇಲ್ಲವಾಗಿದೆ. ಮೂರು ಸಮುದಾಯಗಳ ನಡುವಿನ ಸಂಘರ್ಷದ ಕುಲುಮೆಯಲ್ಲಿ ಮಣಿಪುರ ಮತ್ತೆ ಕುದಿಯುತ್ತಿದೆ. 

ಆಧಾರ: ಪಿಟಿಐ, ರಾಯಿಟರ್ಸ್

ತಡ ಮಾಡಿತೇ ಕೇಂದ್ರ ಸರ್ಕಾರ?

ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದ ಬಳಿಕ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಆರಂಭಿಸಿದೆ. ನ.7ರಂದು ನಡೆದ ಹಮಾರ್‌ ಮಹಿಳೆ ಹತ್ಯೆ, ಶಸ್ತ್ರಸಜ್ಜಿತ ವ್ಯಕ್ತಿಗಳು ಸಿಆರ್‌ಪಿಎಫ್‌ ಠಾಣೆಯ ಮೇಲೆ ನಡೆಸಿದ ದಾಳಿ ಮತ್ತು ನ.11ರಂದು ಬೊರೊಬೆಕ್ರಾದಲ್ಲಿ ಮನೆಗಳಿಗೆ ಬೆಂಕಿ ಹಚ್ಚಿ, ನಾಗರಿಕರನ್ನು ಕೊಂದ ಪ್ರಕರಣಗಳ ತನಿಖೆಯನ್ನು ಎನ್‌ಐಎ ಆರಂಭಿಸಿದೆ.

ಗೃಹ ಸಚಿವ ಅಮಿತ್‌ ಶಾ ಅವರು ಮಹಾರಾಷ್ಟ್ರದ ಚುನಾವಣಾ ರ‍್ಯಾಲಿಯನ್ನು ಸ್ಥಗಿತಗೊಳಿಸಿ, ಮಣಿಪುರ ಸ್ಥಿತಿಗತಿಗಳ ಬಗ್ಗೆ ಅಧಿಕಾರಿ
ಗಳೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲಿಗೆ ಹೆಚ್ಚುವರಿ ಭದ್ರತಾ ತುಕಡಿಗಳನ್ನು ಕಳುಹಿಸಲೂ ಕೇಂದ್ರ ಗೃಹ ಸಚಿವಾಲಯ ತೀರ್ಮಾನ ಕೈಗೊಂಡಿದೆ.

ಕಳೆದ ವರ್ಷದ ಮೇ ತಿಂಗಳಲ್ಲಿ ಹಿಂಸಾಚಾರ ಆರಂಭಗೊಂಡಿದ್ದರೂ, ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಲಿಲ್ಲ ಎಂಬುದು ವಿರೋಧ ಪಕ್ಷಗಳ ಆರೋಪ. ನಿರಂತರ ಘರ್ಷಣೆ ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಬಗ್ಗೆ ಮಾತನಾಡಿರಲಿಲ್ಲ. ಈ ವರ್ಷದ ಜುಲೈನಲ್ಲಿ ನಡೆದ ಸಂಸತ್‌ ಅಧಿವೇಶನದಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುವ ಚರ್ಚೆಯಲ್ಲಿ ಮಾತನಾಡುತ್ತಾ ಮಣಿಪುರದ ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸಿದ್ದರು. ಪ್ರಧಾನಿಯವರ ಮೌನವೂ ಚರ್ಚೆಗೆ ಗ್ರಾಸವಾಗಿತ್ತು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳಿದ್ದರೂ, ಹಿಂಸಾಚಾರ ತಡೆಯಲು ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಮತ್ತೆ ‘ಆಫ್‌ಸ್ಪಾ’ ಅಸ್ತ್ರ

ಜನಾಂಗೀಯ ಸಂಘರ್ಷ ನಿಯಂತ್ರಣಕ್ಕೆ ಬರದಿರುವುದನ್ನು ಮನಗಂಡು, ಹಿಂಸಾಪೀಡಿತ ಜಿರೀಬಾಮ್‌ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಆರು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರವು ವಿವಾದಾತ್ಮಕ 1958ರ ಸಶಸ್ತ್ರ ಪಡೆಗಳ (ವಿಶೇಷಾಧಿಕಾರ) ಕಾಯ್ದೆಯನ್ನು ಮರು ಜಾರಿಗೊಳಿಸಿರುವುದು ಪರ ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ, ಬಹುಸಂಖ್ಯಾತ ಮೈತೇಯಿ ಸಮುದಾಯ, ವಿರೋಧ ‍ಪಕ್ಷ ಕಾಂಗ್ರೆಸ್‌, ಮಣಿಪುರದ ನಾಗರಿಕ ಸಂಘಟನೆ ಸಿಇಸಿಒಎಂಐ ಇದನ್ನು ವಿರೋಧಿಸಿವೆ. ಕುಕಿ ಸಂಘಟನೆ ಮಾತ್ರ ಈ ಕಾಯ್ದೆಯನ್ನು ಇತರೆಡೆಗಳಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದೆ. 

2022ರ ಏಪ್ರಿಲ್‌ನಿಂದ 2023ರ ಏಪ್ರಿಲ್‌ ನಡುವೆ ಮಣಿಪುರ ರಾಜ್ಯದ ಮೇಲೆ ಹೇರಲಾಗಿದ್ದ ‘ಆಫ್‌ಸ್ಪಾ’ವನ್ನು ವಾಪಸ್‌ ಪಡೆಯಲಾಗಿತ್ತು. ಆದರೆ, ನಂತರ ಹಿಂಸಾಚಾರ ಹೆಚ್ಚಾಗಿದ್ದರಿಂದ 19 ಪೊಲೀಸ್‌ ಠಾಣೆಗಳ ವ್ಯಾಪ್ತಿಯನ್ನು ಬಿಟ್ಟು ರಾಜ್ಯದಾದ್ಯಂತ ಅಕ್ಟೋಬರ್‌ 1ರಿಂದ ಕಾಯ್ದೆಯನ್ನು ಮರು ಜಾರಿಗೊಳಿಸಿ ಮಣಿಪುರ ಸರ್ಕಾರ ಆದೇಶ ಹೊರಡಿಸಿತ್ತು. ಈ 19 ಠಾಣೆಗಳ ವ್ಯಾಪ್ತಿಯ ಪೈಕಿ ಆರು ಠಾಣೆಗಳ ವ್ಯಾಪ್ತಿಯಲ್ಲಿ ಈಗ ಕಾಯ್ದೆಯನ್ನು ಮತ್ತೆ ಜಾರಿಗೆ ತರಲಾಗಿದೆ. ಈ ಠಾಣೆಗಳ ವ್ಯಾಪ್ತಿಯನ್ನು ‘ಸಂಘರ್ಷ ಪೀಡಿತ ಪ್ರದೇಶ’ ಎಂದು ಗುರುತಿಸಲಾಗಿದೆ.  

ಕಾಯ್ದೆಯ ಅಡಿಯಲ್ಲಿ ಯಾವುದೇ ಜಿಲ್ಲೆ ಅಥವಾ ಪ್ರದೇಶವನ್ನು ‘ಸಂಘರ್ಷ ಪೀಡಿತ’ ಎಂದು ಘೋಷಿಸಿದರೆ, ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಯಾವುದೇ ಕಠಿಣ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಭದ್ರತಾ ಪಡೆಗಳಿಗೆ ಈ ಕಾಯ್ದೆ ನೀಡುತ್ತದೆ. ಅಲ್ಲಿ ಸಶಸ್ತ್ರ ಪಡೆಗಳು ಶೋಧಕಾರ್ಯ ನಡೆಸಬಹುದು, ಶಂಕಿತರನ್ನು ಬಂಧಿಸಬಹುದು, ಗುಂಡಿನ ದಾಳಿಯನ್ನೂ ನಡೆಸಬಹುದು. 

ಮಣಿಪುರ, ಅಸ್ಸಾಂ ಸೇರಿದಂತೆ ಏಳು ಈಶಾನ್ಯ ರಾಜ್ಯಗಳನ್ನು ಗುರಿಯಾಗಿಸಿಕೊಂಡೇ 1958ರಲ್ಲಿ ಈ ಕಾಯ್ದೆಯನ್ನು ರೂಪಿಸಲಾಗಿತ್ತು. ಸಶಸ್ತ್ರ ಪಡೆಗಳು ಈ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಜನ ಸಾಮಾನ್ಯರ ಮೇಲೆ ದೌರ್ಜನ್ಯ ಎಸಗುತ್ತಿವೆ ಎಂಬ ಆರೋಪ ಹಿಂದಿನಿಂದಲೂ ಕೇಳಿಬರುತ್ತಿತ್ತು. ಮಣಿಪುರದ ‘ಉಕ್ಕಿನ ಮಹಿಳೆ’, ಮಾನವ ಹಕ್ಕುಗಳ ಹೋರಾಟಗಾರ್ತಿ  ಇರೋಮ್‌ ಶರ್ಮಿಳಾ ಅವರು ಈ ಕಾಯ್ದೆಯ ವಿರುದ್ಧ ಮಾಡಿದ್ದ ಸುದೀರ್ಘ ಹೋರಾಟ (16 ವರ್ಷಗಳ ಉಪವಾಸ ಸತ್ಯಾಗ್ರಹ)
ಈಗ ಇತಿಹಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.