ದೇಶದ ನ್ಯಾಯಾಲಯಗಳಲ್ಲಿ ವಿಲೇವಾರಿ ಮಾಡಲಾಗುವ ಅತ್ಯಾಚಾರ ಪ್ರಕರಣಗಳಲ್ಲಿ, ಶಿಕ್ಷೆಯಾದ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇದೆ. 2022ರಲ್ಲಿ ದೇಶದಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ವಿಲೇವಾರಿಯಾದ ಅತ್ಯಾಚಾರ ಪ್ರಕರಣಗಳಲ್ಲಿ, ಶಿಕ್ಷೆಯಾಗಿದ್ದು ಶೇ 21ರಷ್ಟು ಪ್ರಕರಣಗಳಲ್ಲಿ ಮಾತ್ರ. ದೇಶದ ಸ್ಥಿತಿ ಹೀಗಿದ್ದರೆ, ಕರ್ನಾಟಕದ ಸ್ಥಿತಿ ಇದಕ್ಕಿಂತ ಕಳವಳಕಾರಿಯಾಗಿದೆ. ಇದೇ ಅವಧಿಯಲ್ಲಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಲೇವಾರಿಯಾದ ಅತ್ಯಾಚಾರ ಪ್ರಕರಣಗಳಲ್ಲಿ, ಶಿಕ್ಷೆಯಾಗಿದ್ದು ಶೇ 5.21ರಷ್ಟರಲ್ಲಿ ಮಾತ್ರ. ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಅತ್ಯಂತ ಕಡಿಮೆ ಇರುವ ರಾಜ್ಯಗಳಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ಮೊದಲ ಎರಡು ಸ್ಥಾನಗಳಲ್ಲಿ ಆಂಧ್ರಪ್ರದೇಶ (4.5%) ಮತ್ತು ಗುಜರಾತ್ ಇವೆ (5.1%).
2022ರಲ್ಲಿ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 1.81 ಲಕ್ಷ ಅತ್ಯಾಚಾರ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಆದರೆ, ಇವುಗಳಲ್ಲಿ ಶಿಕ್ಷೆಯಾಗಿದ್ದು 38,136 ಪ್ರಕರಣಗಳಲ್ಲಿ ಮಾತ್ರ. ಇದೇ ಅವಧಿಯಲ್ಲಿ ಕರ್ನಾಟಕದ ವಿವಿಧ ನ್ಯಾಯಾಲಯಗಳು 10,351 ಅತ್ಯಾಚಾರ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು, ಶಿಕ್ಷೆಯಾಗಿದ್ದು 540 ಪ್ರಕರಣಗಳಲ್ಲಿ ಮಾತ್ರ.
ವಿಲೇವಾರಿ ಆಗುತ್ತಿರುವ ಒಟ್ಟು ಪ್ರಕರಣಗಳಲ್ಲಿ ವಿಚಾರಣೆಗೂ ಮುನ್ನವೇ ವಜಾ ಆಗುತ್ತಿರುವ, ವಿಚಾರಣೆ ಹಂತದಲ್ಲಿ ವಜಾ ಆಗುತ್ತಿರುವ ಮತ್ತು ಆರೋಪಿಗಳು ಖುಲಾಸೆ ಆಗುತ್ತಿರುವ ಪ್ರಕರಣಗಳ ಪ್ರಮಾಣವೇ ಹೆಚ್ಚು. ಅದರಲ್ಲೂ ಆರೋಪಿಗಳು ಖುಲಾಸೆ ಆಗುತ್ತಿರುವ ಪ್ರಕರಣಗಳ ಪ್ರಮಾಣ ಶೇ 50ಕ್ಕಿಂತಲೂ ಹೆಚ್ಚು ಇದೆ. 2022ರಲ್ಲಿ ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಲೇವಾರಿ ಆದ ಒಟ್ಟು ಪ್ರಕರಣಗಳಲ್ಲಿ ಶೇ 58ರಷ್ಟು ಪ್ರಕರಣಗಳಲ್ಲಿ (1.05 ಲಕ್ಷ ಪ್ರಕರಣಗಳು) ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ. ಕರ್ನಾಟಕದಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು. ಈ ಅವಧಿಯಲ್ಲಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಲೇವಾರಿಯಾದ ಒಟ್ಟು ಪ್ರಕರಣಗಳಲ್ಲಿ ಖುಲಾಸೆ ಆದ ಪ್ರಕರಣಗಳ ಪ್ರಮಾಣ ಶೇ 88.3ರಷ್ಟು (9,139 ಪ್ರಕರಣಗಳು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.