ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವರದಿಯಾದಾಗ ದೇಶದಲ್ಲಿ ವ್ಯಾಪಕ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿತ್ತು. ಅದು ಕಾನೂನು ತಿದ್ದುಪಡಿಗೂ ಕಾರಣವಾಗಿತ್ತು. ಆದರೆ, ಅದರ ನಂತರ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಕಾನೂನು ಕಟ್ಟಳೆ ಬಿಗಿಗೊಳಿಸಿದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿರುವ ಪ್ರಮಾಣ ಕಡಿಮೆ ಇದೆ. ಅತ್ಯಾಚಾರದ ಹೆಸರಿನಲ್ಲಿ ಹೆಣ್ಣಿನ ಘನತೆ, ಮಾನ, ಪ್ರಾಣದ ಮೇಲೆ ದಾಳಿ ಮಾಡುವ ಪ್ರವೃತ್ತಿ ಹೆಚ್ಚಳವಾಗಿದೆ...
ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣವು ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರವಾದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನಿರ್ಭಯಾ ಪ್ರಕರಣದ ನಂತರ ಮಹಿಳೆಯರ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಬಿಗಿ ಕಾನೂನು ಜಾರಿಗೆ ತಂದಿದ್ದರೂ, ನಿರ್ಭಯಾ ನಿಧಿ ಸ್ಥಾಪನೆಯಂತಹ ಕ್ರಮಗಳನ್ನು ಕೈಗೊಂಡಿದ್ದರೂ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರ ವಿರುದ್ಧ ಹೀನ ಅಪರಾಧ ಎಸಗುತ್ತಿರುವವರಿಗೆ ಎಷ್ಟರ ಮಟ್ಟಿಗೆ ಶಿಕ್ಷೆ ಆಗುತ್ತಿದೆ ಎಂಬ ಬಗ್ಗೆಯೂ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದಂಥ ಕೃತ್ಯಗಳನ್ನು ಎಸಗುವವರಿಗೆ ಶಿಕ್ಷೆ ವಿಧಿಸುವ ದಿಸೆಯಲ್ಲಿ ನಿರ್ಭಯಾ ಕಾಯ್ದೆ ಬಹಳ ಮಹತ್ವದ್ದು. 2012ರಲ್ಲಿ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಆರು ಮಂದಿ ಅಪರಾಧಿಗಳು ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದರು. ವಿದ್ಯಾರ್ಥಿನಿಯ ಜೊತೆಯಲ್ಲಿದ್ದ ಸ್ನೇಹಿತನ ಮೇಲೆಯೂ ಹಲ್ಲೆ ನಡೆಸಿ, ನಂತರ ಇಬ್ಬರನ್ನೂ ರಸ್ತೆಗೆ ಬಿಸಾಡಿದ್ದರು. ಅದರ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅತ್ಯಾಚಾರಿಗಳ ಕ್ರೂರ ವರ್ತನೆಗೆ ತಕ್ಕಂತೆಯೇ ಶಿಕ್ಷೆಯೂ ಕಠಿಣವಾಗಿರಬೇಕು ಎಂಬ ಕೂಗು ಕೇಳಿಬಂದಿತ್ತು. ತ್ವರಿತಗತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿ ಅತ್ಯಾಚಾರಿಗಳ ಪೈಕಿ ನಾಲ್ವರಿಗೆ ಮರಣ ದಂಡನೆ ವಿಧಿಸಲಾಗಿತ್ತು. ಅಷ್ಟು ಹೊತ್ತಿಗೆ ಒಬ್ಬ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಉಳಿದವರಿಗೆ ವಿಧಿಸಿದ್ದ ಶಿಕ್ಷೆ, ಘಟನೆ ನಡೆದ ಎಂಟು ವರ್ಷಗಳ ಬಳಿಕ, ಜಾರಿಯಾಗಿತ್ತು. ಅತ್ಯಾಚಾರಿಗಳ ಪೈಕಿ ಬಾಲಕನೊಬ್ಬನೂ ಇದ್ದ. ನ್ಯಾಯಾಲಯವು ಅವನಿಗೆ ಕೇವಲ 3 ವರ್ಷ ಶಿಕ್ಷೆ ವಿಧಿಸಿದ್ದರ ವಿರುದ್ಧವೂ ಆಕ್ಷೇಪಣೆ ವ್ಯಕ್ತವಾಗಿತ್ತು. ಕಾನೂನಿಗೆ ತಿದ್ದುಪಡಿ ತರುವ ಸಂಬಂಧ ಕೇಂದ್ರ ಸರ್ಕಾರವು ನ್ಯಾ.ಜೆ.ಎಸ್.ವರ್ಮಾ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ನೇಮಿಸಿತ್ತು.
ಕೇಂದ್ರ ಸರ್ಕಾರವು ನಿರ್ಭಯಾ ಪ್ರಕರಣದ ವೇಳೆ ವ್ಯಕ್ತವಾದ ಸಾರ್ವಜನಿಕ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು, ನ್ಯಾ. ವರ್ಮಾ ಸಮಿತಿಯ ಶಿಫಾರಸುಗಳ ಅನ್ವಯ ಅತ್ಯಾಚಾರ ಸೇರಿದಂತೆ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯದ ಕಾನೂನಿಗೆ ಕೆಲವು ತಿದ್ದುಪಡಿಗಳನ್ನು ತಂದಿತು. ಭಾರತೀಯ ದಂಡ ಸಂಹಿತೆಯ (ಐಪಿಸಿ) 375, 376 ಸೆಕ್ಷನ್‌ಗಳಿಗೆ ತಿದ್ದುಪಡಿ ತರಲಾಗಿತ್ತು. ಜತೆಗೆ, 166ಎ, 166ಬಿ, 326 ಎ ಮತ್ತು ಬಿ, 354ಎ, ಸಿ ಮತ್ತು ಡಿ ಸೆಕ್ಷನ್‌ಗಳನ್ನು ಹೊಸದಾಗಿ ಸೇರಿಸಲಾಗಿತ್ತು. ಅದು ನಿರ್ಭಯಾ ಕಾಯ್ದೆ ಎಂದೇ ಹೆಸರು ಪಡೆಯಿತು. ಬಾಲಾಪರಾಧ ಕಾಯ್ದೆಗೂ ತಿದ್ದುಪಡಿ ತಂದು, ಹೀನ ಕೃತ್ಯ ಎಸಗಿದ ಆರೋಪಿಯು 16ರಿಂದ 18 ವರ್ಷದ ಒಳಗಿದ್ದರೆ, ಅವನನ್ನೂ ಕೂಡ ವಯಸ್ಕ ಮತ್ತು ಶಿಕ್ಷೆಗೆ ಅರ್ಹ ಎಂದು ಪರಿಗಣಿಸಲಾಗುವುದು (ಜೆ.ಜೆ.ಕಾಯ್ದೆ) ಎಂದು ಬದಲಾಯಿಸಲಾಯಿತು.
ಆದರೆ, ನಂತರವೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸೇರಿದಂತೆ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗಿವೆ. ಅವುಗಳಲ್ಲಿ ಅತ್ಯಾಚಾರ ಪ್ರಕರಣಗಳು ಗಮನಾರ್ಹವಾಗಿ ಏರಿಕೆ ಕಂಡಿವೆ. ಅದರಲ್ಲೂ ಬಾಲಕಿಯರು, ಪುಟ್ಟ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಏರಿಕೆಯಾಗಿವೆ. ಬಹುತೇಕ ಪ್ರಕರಣಗಳು ಪರಿಚಿತರಿಂದಲೇ ನಡೆಯುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು ಅತ್ಯಾಚಾರಗಳು ವರದಿಯಾಗುತ್ತಿವೆ.
ಶಿಕ್ಷೆಯಾದ ಪ್ರಮಾಣ ಕಡಿಮೆ
ಒಂದು ಕಡೆ, ದೇಶದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದು ಕಡೆ, ಆರೋಪಿಗಳಿಗೆ ಶಿಕ್ಷೆಯಾಗುತ್ತಿರುವ ಪ್ರಮಾಣ ಅತ್ಯಂತ ಕಡಿಮೆ ಇದೆ. ಜಾಗತಿಕ ಮಟ್ಟದಲ್ಲಿ ಅತ್ಯಾಚಾರಿಗಳಿಗೆ ಶಿಕ್ಷೆಯಾಗುತ್ತಿರುವ ಪ್ರಮಾಣ ಭಾರತದಲ್ಲಿಯೇ ಕಡಿಮೆ ಇದೆ. 2013ರಿಂದ 2022ರ ನಡುವೆ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯಾದ ಪ್ರಮಾಣ ಶೇ 29.25ರಷ್ಟು ಮಾತ್ರ.
ತಪ್ಪಿತಸ್ಥರಿಗೆ ಶಿಕ್ಷೆ ನೀಡುವುದಕ್ಕೆ ಹೆಚ್ಚು ಗಮನ ಕೊಡಲಾಗುತ್ತಿದೆಯೇ ವಿನಾ ಅತ್ಯಾಚಾರ ನಡೆಯುವುದಕ್ಕೆ ಕಾರಣವಾಗುವಂಥ ಸಂದರ್ಭ ಗಳು, ಅಂಶಗಳು ಹಾಗೂ ಅಪರಾಧ ಎಸಗುವವರ ಮನಃಸ್ಥಿತಿಯ ಬದಲಾವಣೆಗೆ ಹೆಚ್ಚು ಒತ್ತು ನೀಡಲಾಗುತ್ತಿಲ್ಲ. ಈ ಕಾರಣಕ್ಕಾಗಿ ಪ್ರಕರಣಗಳು ಕಡಿಮೆ ಆಗಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ನಿರ್ಭಯಾ ನಿಧಿ ಶೇ 75ರಷ್ಟು ಬಳಕೆ
ನಿರ್ಭಯಾ ಪ್ರಕರಣದ ನಂತರ, ದೇಶದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಅವರಿಗೆ ಭದ್ರತೆ ಒದಗಿಸಲು ಪೂರಕವಾದ ಕ್ರಮಗಳು, ಮೂಲಸೌಕರ್ಯಗಳನ್ನು ಕಲ್ಪಿಸುವುದಕ್ಕಾಗಿ ಕೇಂದ್ರ ಸರ್ಕಾರ 2013ರಲ್ಲಿ ನಿರ್ಭಯಾ ನಿಧಿಯನ್ನು ಸ್ಥಾಪಿಸಿತ್ತು. ಆದರೆ, ಕೇಂದ್ರದ ಈ ಪ್ರಯತ್ನ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಹಾಕುವುದರಲ್ಲಿ ಯಶಸ್ವಿಯಾದಂತೆ ಕಾಣುತ್ತಿಲ್ಲ.
ಇದರ ಅಡಿಯಲ್ಲಿ ಕೇಂದ್ರ ಸರ್ಕಾರವು ವಿವಿಧ ಇಲಾಖೆಗಳಿಗೆ, ರಾಜ್ಯಗಳಿಗೆ, ಅವುಗಳು ಮುಂದಿಡುವ ಪ್ರಸ್ತಾವಗಳ ಆಧಾರದಲ್ಲಿ ಅನುದಾನ ಬಿಡುಗಡೆ ಮಾಡುತ್ತದೆ. ನಿಧಿ ಆರಂಭವಾದಾಗಿನಿಂದ 2023–24ರವರೆಗೆ ನಿಧಿಗೆ ಮೀಸಲಿಟ್ಟ ಹಣದಲ್ಲಿ ಶೇ 75ರಷ್ಟು ಹಣವನ್ನು ಕೇಂದ್ರ ಸರ್ಕಾರ ಸಚಿವಾಲಯಗಳಿಗೆ ಬಿಡುಗಡೆ ಮಾಡಿದೆ.
2013ರಿಂದ 2023– 24ನೇ ಸಾಲಿನವರೆಗೆ ಕೇಂದ್ರ ಸರ್ಕಾರ ನಿರ್ಭಯಾ ನಿಧಿ ಅಡಿಯಲ್ಲಿ ವಿವಿಧ ಸಚಿವಾಲಯಗಳು/ಇಲಾಖೆಗಳಿಗೆ ₹5,448 ಕೋಟಿ ಬಿಡುಗಡೆ ಮಾಡಿದೆ. ಅವುಗಳನ್ನು ವಿವಿಧ ಸಚಿವಾಲಯಗಳು ಬಳಕೆ ಮಾಡಿವೆ. ಇದರಲ್ಲಿ ಸಿಂಹಪಾಲನ್ನು (₹3,022 ಕೋಟಿ) ಗೃಹ ಇಲಾಖೆ ಪಡೆದಿದೆ. ₹992.5 ಕೋಟಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಬಳಸಿದೆ. ನ್ಯಾಯಾಂಗ ಇಲಾಖೆ ₹824.77 ಕೋಟಿ ಬಳಸಿಕೊಂಡಿದೆ.
ಪೂರ್ಣವಾಗಿ ಬಳಸದ ರಾಜ್ಯಗಳು
ರಾಜ್ಯಗಳು ಸಲ್ಲಿಸುವ ಪ್ರಸ್ತಾವಗಳಿಗೂ ನಿರ್ಭಯಾ ನಿಧಿಯಲ್ಲಿ ಅನುದಾನ ನೀಡಲಾಗುತ್ತದೆ. 60:40ರ ಅನುಪಾತದಲ್ಲಿ ಈ ಯೋಜನೆಗಳು ಅನುಷ್ಠಾನಕ್ಕೆ ಬರುತ್ತವೆ. ನಿಧಿಯ ಅಡಿಯಲ್ಲಿ ಕೇಂದ್ರದಿಂದ ಸಿಗುವ ಅನುದಾನವನ್ನು ರಾಜ್ಯಗಳು ಪೂರ್ಣವಾಗಿ ಬಳಸುತ್ತಿಲ್ಲ.
ಉದಾಹರಣೆಗೆ, 2016–17ರಿಂದ 2021–22ರವರೆಗೆ ಕರ್ನಾಟಕಕ್ಕೆ ₹299.74 ಕೋಟಿ ಹಂಚಿಕೆ ಮಾಡಲಾಗಿದೆ. ಈ ಮೊತ್ತದಲ್ಲಿ ರಾಜ್ಯವು ₹229.81ಕೋಟಿ ಮಾತ್ರ ಬಳಸಿದೆ.
ದಶಕದಲ್ಲಿ ಸದ್ದು ಮಾಡಿದ ಪ್ರಕರಣಗಳು
ಆಗಸ್ಟ್ 22, 2013: ದಕ್ಷಿಣ ಮುಂಬೈನ ಶಕ್ತಿ ಮಿಲ್ಸ್‌ನಲ್ಲಿ 22 ವರ್ಷದ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಒಬ್ಬ ಬಾಲಕ ಸೇರಿದಂತೆ ಐದು ಮಂದಿ ಅತ್ಯಾಚಾರ ಮಾಡಿದ್ದರು
ಸೆಪ್ಟೆಂಬರ್ 3, 2013: ದಕ್ಷಿಣ ಮುಂಬೈನ ಶಕ್ತಿ ಮಿಲ್ಸ್‌ನಲ್ಲಿ ತನ್ನ ಮೇಲೆ ಜುಲೈ, 31, 2013ರಂದು ನಾಲ್ವರು ಅತ್ಯಾಚಾರವೆಸಗಿದ್ದಾರೆ ಎಂದು 18 ವರ್ಷದ ಟೆಲಿಫೋನ್ ಆಪರೇಟರ್ ದೂರು. ಪತ್ರಿಕಾ ಛಾಯಾಗ್ರಾಹಕಿ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣದ ಮೂವರು ಆರೋಪಿಗಳು ಈ ಪ್ರಕರಣದಲ್ಲಿಯೂ ಭಾಗಿಯಾಗಿದ್ದರು
ಏಪ್ರಿಲ್ 28, 2016: ಕೇರಳದ ಪೆರುಂಬಾವೂರ್‌ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಕಾನೂನು ವಿದ್ಯಾರ್ಥಿನಿ ಮೇಲೆ ವಲಸೆ ಕಾರ್ಮಿಕನೊಬ್ಬನಿಂದ ಅತ್ಯಾಚಾರ ಮತ್ತು ಹತ್ಯೆ
ಡಿಸೆಂಬರ್ 2016: ತಮಿಳುನಾಡಿನ ಅರಿಯಾಲೂರ್‌ನಲ್ಲಿ 17 ವರ್ಷದ ದಲಿತ ಬಾಲಕಿ ಮೇಲೆ ಆಕೆಯ ಗೆಳೆಯ ಸೇರಿದಂತೆ ನಾಲ್ವರಿಂದ ಅತ್ಯಾಚಾರ, ಹತ್ಯೆ
ಜೂನ್ 4, 2017: ಉತ್ತರ ಪ್ರದೇಶದ ಉನ್ನಾವೊದಲ್ಲಿ 17 ವರ್ಷದ ಬಾಲಕಿ ಮೇಲೆ ಬಿಜೆಪಿ ಶಾಸಕನಾಗಿದ್ದ ಕುಲ್‌ದೀಪ್ ಸಿಂಗ್ ಸೆಂಗರ್‌ನಿಂದ ಅತ್ಯಾಚಾರ
ಜನವರಿ, 2018: ಜಮ್ಮು–ಕಾಶ್ಮೀರದ ಕಠುವಾದಲ್ಲಿ ಒಬ್ಬ ಬಾಲಕ ಸೇರಿದಂತೆ ಏಳು ಮಂದಿಯಿಂದ 8 ವರ್ಷದ ಮುಸ್ಲಿಂ ಬಾಲಕಿಯ ಆಪಹರಣ, ಅತ್ಯಾಚಾರ, ಹತ್ಯೆ
ನವೆಂಬರ್ 28, 2019: ಹೈದರಾಬಾದ್‌ನ ಹೊರವಲಯದಲ್ಲಿ ಪಶುವೈದ್ಯ ವಿದ್ಯಾರ್ಥಿನಿ ಮೇಲೆ ನಾಲ್ವರಿಂದ ಅತ್ಯಾಚಾರ, ಕೊಲೆ
ಸೆಪ್ಟೆಂಬರ್ 14, 2020: ಉತ್ತರ ಪ್ರದೇಶದ ಹಾಥರಸ್‌ನಲ್ಲಿ 19 ವರ್ಷದ ದಲಿತ ಮಹಿಳೆಯ ಮೇಲೆ ಪ್ರಬಲ ಜಾತಿಯ ನಾಲ್ವರಿಂದ ಅತ್ಯಾಚಾರ, ಕೊಲೆ
ಆಗಸ್ಟ್ 21, 2021: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಬಾಲಕ ಸೇರಿದಂತೆ ಆರು ಮಂದಿಯಿಂದ ಸಾಮೂಹಿಕ ಅತ್ಯಾಚಾರ
ಆಧಾರ: ರಾಯಿಟರ್ಸ್, ಎನ್‌ಸಿಆರ್‌ಬಿ, ಸಂಸತ್‌ನಲ್ಲಿ ಸಚಿವರ ಹೇಳಿಕೆ, ಪಿಐಬಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.