ADVERTISEMENT

ಆಳ– ಅಗಲ: ದ್ವೇಷದ ಭರದಲ್ಲಿ ಮರೆಯಾದ ಕ್ರೀಡಾಸ್ಫೂರ್ತಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2023, 0:17 IST
Last Updated 23 ಅಕ್ಟೋಬರ್ 2023, 0:17 IST
<div class="paragraphs"><p>ಅಹಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಭಾರತ–ಪಾಕಿಸ್ತಾನ ವಿಶ್ವಕಪ್‌ ಪಂದ್ಯದಲ್ಲಿ ಭಾರತ ಜಯಗಳಿಸಿದ ಕಾರಣ ಜಮ್ಮುವಿನಲ್ಲಿ ಜನರು ಸಂಭ್ರಮಾಚರಣೆ ಮಾಡಿದ್ದರು </p></div>

ಅಹಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಭಾರತ–ಪಾಕಿಸ್ತಾನ ವಿಶ್ವಕಪ್‌ ಪಂದ್ಯದಲ್ಲಿ ಭಾರತ ಜಯಗಳಿಸಿದ ಕಾರಣ ಜಮ್ಮುವಿನಲ್ಲಿ ಜನರು ಸಂಭ್ರಮಾಚರಣೆ ಮಾಡಿದ್ದರು

   

ಪಿಟಿಐ ಚಿತ್ರ

ಕ್ರೀಡೆಯಲ್ಲಿ ಶತ್ರುತ್ವ ಇಲ್ಲ. ಯಾವುದೇ ಆಟವು ಎರಡು ತಂಡಗಳ ನಡುವಣ ಸಂಘರ್ಷ ಅಲ್ಲವೇ ಅಲ್ಲ. ಆಟದಲ್ಲಿ ಸೋಲು–ಗೆಲುವಿಗಿಂತ ಭಾಗವಹಿಸುವಿಕೆಯೇ ಮಹತ್ವದ್ದು ಎಂಬ ಭಾವನೆ ಇದೆ. ನಿಜ ಜೀವನದಲ್ಲಿಯೂ ಕ್ರೀಡಾಸ್ಫೂರ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಲಾಗುತ್ತಿದೆ. ಆದರೆ, ಕೆಲವೊಮ್ಮೆ ಕ್ರೀಡಾಂಗಣವೇ ದ್ವೇಷಕ್ಕೆ ಸಾಕ್ಷಿಯಾಗಿಬಿಡುತ್ತದೆ. ಅಂತಹ ಕೆಲವು ಘಟನೆಗಳ ಸುತ್ತ...

ಭಾರತದಲ್ಲಿ ವಿಶ್ವಕಪ್‌ ನಡೆಯುತ್ತಿದೆ. ಅ.14ರಂದು ಭಾರತ–ಪಾಕಿಸ್ತಾನ ಪಂದ್ಯವು ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಸೇರಿದ್ದ ಭಾರತದ ಕ್ರೀಡಾಭಿಮಾನಿಗಳ ನಡವಳಿಕೆಯ ಕುರಿತು ಸರಿ–ತಪ್ಪುಗಳ ಚರ್ಚೆ ನಡೆಯಿತು. ಪಾಕಿಸ್ತಾನದ ಆಟಗಾರರನ್ನು ಭಾರತದ ಕ್ರೀಡಾಭಿಮಾನಿಗಳು ನಡೆಸಿಕೊಂಡ ರೀತಿಯ ಬಗ್ಗೆ ಹಲವರು ಬೇಸರ ಹಾಗೂ ಆತಂಕವನ್ನು ವ್ಯಕ್ತಪಡಿಸಿದರು.

ADVERTISEMENT

ಪಾಕಿಸ್ತಾನದ ಮೊಹಮ್ಮದ್‌ ರಿಜ್ವಾನ್‌ ತಮ್ಮ ವಿಕೆಟ್ ಕಳೆದುಕೊಂಡು ಪೆವಿಲಿಯನ್‌ ಅತ್ತ ಬರುತ್ತಿದ್ದಾಗ ಭಾರತದ ಕ್ರೀಡಾಭಿಮಾನಿಗಳು ‘ಜೈ ಶ್ರೀರಾಮ್‌’ ಎಂದು ಘೋಷಣೆಗಳನ್ನು ಕೂಗಿದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹರಿದಾಡಿತು. ‘ನನ್ನ 30 ವರ್ಷಗಳ ವೃತ್ತಿ ಜೀವನದಲ್ಲಿ ಇಂಥ ವೈರತ್ವವನ್ನು ನಾನು ಹಿಂದೆಂದೂ ಕಂಡಿಲ್ಲ. ಮತ್ತು ಭಾರತದ ಇತರೆ ಯಾವ ಭಾಗದಲ್ಲೂ ಕಂಡಿಲ್ಲ’ ಎಂದು ಹಿರಿಯ ಕ್ರಿಕೆಟ್‌ ಬರಹಗಾರ ಕುಲ್‌ದೀಪ್‌ ಲಾಲ್‌ ಅವರು ‘ಅಲ್‌ಜಜೀರಾ’ ಪತ್ರಿಕೆಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದರು. ‘1.32 ಲಕ್ಷ ಆಸನ ವ್ಯವಸ್ಥೆ ಇರುವ ವಿಶ್ವದ ಅತ್ಯಂತ ದೊಡ್ಡ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಕೆಲವೇ ಅಭಿಮಾನಿಗಳು ಮಾತ್ರ ಇದ್ದರು. ಹತ್ತು ಜನರಿಗೆ ಮಾತ್ರವೇ ಟಿಕೆಟ್‌ ನೀಡಲಾಗಿತ್ತು’ ಎಂದು ಎಎಫ್‌ಪಿ ವರದಿ ಮಾಡಿದೆ. ಭಾರತದ ಕ್ರೀಡಾಭಿಮಾನಿಗಳ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಐಸಿಸಿಗೆ ಅದು ದೂರನ್ನು ನೀಡಿದೆ ಕೂಡ.

ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ತಮ್ಮ ವಿರೋಧಿ ಆಟಗಾರರ ಬಗೆಗೆ ಅಸಹನೆ ತೋರುವುದು, ಮಾತಿನ ಚಕಮಕಿ ನಡೆಸುವುದು ಸಾಮಾನ್ಯ. ಹಲವು ಬಾರಿ ಬೌಂಡರಿ ಗೆರೆಯ ಬಳಿ ನಿಂತ ಆಟಗಾರರ ಕುರಿತು ದ್ವೇಷದ ಮಾತು ಆಡಿದ್ದು, ಅವಮಾನ ಮಾಡಿದ್ದೂ ಈ ಹಿಂದೆ ನಡೆದಿದೆ. ಆದರೆ, ಅಹಮದಾಬಾದ್‌ನಲ್ಲಿ ಮಾತ್ರ, ಇಡೀ ಕ್ರೀಡಾಂಗಣದಲ್ಲಿಯೇ ಕ್ರೀಡಾಭಿಮಾನಿಗಳ ನಡವಳಿಕೆಯು ಬದಲಾದ ಕ್ರೀಡಾಮನೋಭಾವವನ್ನು ತೋರಿಸುತ್ತಿತ್ತು. ಇದರ ಜೊತೆಯಲ್ಲಿ ಮಾಧ್ಯಮ ಕೂಡ ಭಾರತ–ಪಾಕಿಸ್ತಾನ ಪಂದ್ಯವನ್ನು ಸಮರ ಎಂಬಂತೆ ತೋರಿಸುವುದು ಕೂಡ ಜನರಲ್ಲಿ ದ್ವೇಷ ಭಾವನೆ ಮೂಡುವುದಕ್ಕೆ ಕಾರಣ ಎನ್ನುತ್ತಾರೆ ಕ್ರೀಡಾಭಿಮಾನಿಗಳು. 

ಸುಳ್ಳು ಸುದ್ದಿ ಮತ್ತು ವಿಶ್ವಕಪ್‌

ಭಾರತದಲ್ಲಿ ವಿಶ್ವಕಪ್‌ ಆರಂಭವಾಗುತ್ತಿದ್ದಂತೆ ಭಾರತದ ಕೆಲ ಆಟಗಾರರು ಹಾಗೂ ಪಾಕಿಸ್ತಾನ ತಂಡದ ಕುರಿತು ಸುಳ್ಳು ಸುದ್ದಿಗಳು ಪ್ರಾಮುಖ್ಯ ಪಡೆದುಕೊಂಡಿತು. ವಿರಾಟ್‌, ಸಿರಾಜ್‌ ಕುರಿತು ಸುಳ್ಳು ಸುದ್ದಿಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

1. ವಿರಾಟ್‌ ಕೊಹ್ಲಿ ಅವರು ತಮ್ಮ ಮನೆಯಲ್ಲಿ ಪಾಕಿಸ್ತಾನ ತಂಡಕ್ಕೆ ಔತಣಕೂಟ ಏರ್ಪಡಿಸಿದ್ದಾರೆ ಎಂಬ ಸುದ್ದಿಯು ದೊಡ್ಡ ಸದ್ದನ್ನೇ ಮಾಡಿತು. ಔತಣಕೂಟ ಏರ್ಪಡಿಸಿದ ಬಗ್ಗೆ ವಿರಾಟ್‌ ಅವರೇ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದೂ ಹೇಳಲಾಯಿತು. ಆದರೆ, ಅದೊಂದು ಸುಳ್ಳು ಸುದ್ದಿ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ಪ್ರಕಟಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪೋಸ್ಟ್‌ ಅನ್ನು ಶೇರ್‌ ಮಾಡಿದ್ದ ಖಾತೆಯು ನಕಲಿ ಎಂದು ಅದು ಹೇಳಿತು.

2. ‘ವಿಶ್ವಕಪ್‌ ಕ್ರಿಕೆಟ್‌ ಪಂದ್ಯದ ಗೆಲುವನ್ನು ನಾನು ಇಸ್ರೇಲ್‌ನ ಸೋದರ ಸೋದರಿಯರಿಗೆ ಅರ್ಪಿಸುತ್ತೇನೆ’ ಎಂದು ಮೊಹಮ್ಮದ್ ಸಿರಾಜ್‌ ಹೇಳಿದ್ದಾರೆ. ಜೊತೆಗೆ, ಅಫ್ಗಾನಿಸ್ತಾನದ ಕ್ರಿಕೆಟಿಗ ರಶೀದ್ ಖಾನ್‌ ಸಹ ಇದನ್ನೇ ಹೇಳಿದ್ದಾರೆ ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ‘ನೋಡಿ ಮುಸ್ಲಿಮರೂ ಇಸ್ರೇಲ್‌ ಅನ್ನೇ ಬೆಂಬಲಿಸುತ್ತಿದ್ದಾರೆ’ ಎಂಬ ಬರಹದೊಂದಿಗೆ ಈ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡರು. ಆದರೆ, ಅದೂ ಸುಳ್ಳು ಸುದ್ದಿಯಾಗಿತ್ತು. ಈ ಪೋಸ್ಟ್‌ ಅನ್ನು ಕೂಡ ನಕಲಿ ಖಾತೆಯಿಂದ ಮಾಡಲಾಗಿದೆ ಎಂದು ಪಿಟಿಐ ಹೇಳಿತು.

3. ಪಾಕಿಸ್ತಾನದ ಆಟಗಾರರು ವಿಶ್ವಕಪ್‌ಗಾಗಿ ಭಾರತಕ್ಕೆ ಬಂದಿಳಿದಾಗ ಅವರನ್ನು ಕೇಸರಿ ಶಾಲುಗಳನ್ನು ಹೊದಿಸಿ ಬರಮಾಡಿಕೊಳ್ಳಲಾಯಿತು ಎಂಬ ಸುದ್ದಿ ಕೂಡ ದೊಡ್ಡ ಸದ್ದು ಮಾಡಿತ್ತು. ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅವರು ಕೇಸರಿ ಶಾಲು ಹೊದ್ದ ವಿಡಿಯೊ ಕ್ಲಿಪ್‌ ಹರಿದಾಡಿತ್ತು. ಆದರೆ, ಇದು ಸುಳ್ಳು ಸುದ್ದಿಯಾಗಿತ್ತು. ಪಾಕಿಸ್ತಾನದ ಆಟಗಾರರನ್ನು ನೀಲಿ, ಹಸಿರು, ಗುಲಾಬಿ ಬಣ್ಣಗಳ ಶಾಲುಗಳನ್ನು ಹೊದಿಸುವ ಮೂಲಕ ಬರಮಾಡಿಕೊಳ್ಳಲಾಗಿತ್ತು ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿತು.

ವಿರಾಟ್‌ ಮಗಳಿಗೆ ಅತ್ಯಾಚಾರದ ಬೆದರಿಕೆ

2021ರಲ್ಲಿ ಟಿ20 ವಿಶ್ವಕಪ್‌ ನಡೆಯುತ್ತಿತ್ತು. ಅಕ್ಟೋಬರ್‌ 24ರಂದು ಭಾರತ–ಪಾಕಿಸ್ತಾನ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ಎದುರು ಸೋತಿತು. ಪಾಕಿಸ್ತಾನವು 10 ವಿಕೆಟ್‌ಗಳ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಮೊಹಮ್ಮದ್‌ ಶಮಿ ಅವರು ಕಳಪೆ ಪ್ರದರ್ಶನ ತೋರಿದರು ಎನ್ನುವ ಕಾರಣಕ್ಕೆ ಭಾರತದ ಕ್ರೀಡಾಭಿಮಾನಿಗಳು ಅವರ ವಿರುದ್ಧ ಮುಗಿಬಿದ್ದರು. ಶಮಿ ಅವರ ಧರ್ಮದ ಕಾರಣಕ್ಕಾಗಿಯೇ ಅವರನ್ನು ಹೀಗಳೆಯಲಾಗಿತ್ತು. ಆದರೆ, ಆಗಿನ ತಂಡದ ನಾಯಕನಾಗಿದ್ದ ವಿರಾಟ್‌ ಕೊಹ್ಲಿ ಶಮಿ ಪರ ನಿಂತರು. ವಿರಾಟ್‌ ಅವರು ಶಮಿ ಅವರ ಪರ ಇದ್ದಾರೆ ಎನ್ನುವ ಕಾರಣಕ್ಕಾಗಿಯೇ ವಿರಾಟ್‌ ಅವರ ವಿರುದ್ಧವೂ ದ್ವೇಷಭರಿತ ಟ್ವೀಟ್‌ಗಳನ್ನು ಅಭಿಮಾನಿಗಳು ಮಾಡಲಾಂಭಿಸಿದರು. ಇದು ಯಾವ ಮಟ್ಟಕ್ಕೆ ತಲುಪಿತು ಎಂದರೆ, ಹೈದರಾಬಾದ್‌ನ ಟಿಕ್ಕಿ ರಾಮ್‌ನಾಗೇಶ್‌ ಶ್ರೀನಿವಾಸ್‌ ಎಂಬವರು, ವಿರಾಟ್‌ ಮತ್ತು ಅನುಷ್ಕಾ ಶರ್ಮ ದಂಪತಿಯ 11 ತಿಂಗಳ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಎಸಗುವ ಬೆದರಿಕೆ ಹಾಕುವ ಮಟ್ಟಕ್ಕೆ ತಲುಪಿತು. ನಂತರ ದಂಪತಿಯು ಟಿಕ್ಕಿ ವಿರುದ್ಧ ಪೊಲೀಸರಿಗೆ ದೂರು ನೀಡಿದರು.

ಬಾಬರ್‌ಗೆ ಜರ್ಸಿ

ಅಕ್ಟೋಬರ್‌ 14ರಂದು ನಡೆದ ಭಾರತ–ಪಾಕಿಸ್ತಾನ ಪಂದ್ಯವು ಹಲವು ಕಾರಣಗಳಿಗಾಗಿ ಚರ್ಚೆಗೆ ಗ್ರಾಸವಾಯಿತು. ಅವುಗಳಲ್ಲಿ ವಿರಾಟ್‌ ಅವರು ಬಾಬರ್‌ ಅವರಿಗೆ ತಮ್ಮ ಜರ್ಸಿ ನೀಡಿದ್ದು ಕೂಡ ಒಂದು. ವಿರಾಟ್‌ ಕೊಹ್ಲಿ ಅವರು ಪಾಕಿಸ್ತಾನ ತಂಡದ ನಾಯಕ ಬಾಬರ್‌ ಆಜಂ ಅವರಿಗೆ ತಮ್ಮ ಹಸ್ತಾಕ್ಷರ ಇರುವ ಜರ್ಸಿ ಅನ್ನು ಉಡುಗೊರೆ ನೀಡಿದರು. ವಿರಾಟ್‌ ಅವರ ಈ ನಡವಳಿಕೆಯನ್ನು ದೊಡ್ಡ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಮೆಚ್ಚಿಕೊಂಡರು. ಆದರೂ, ಇದನ್ನು ವಿರೋಧಿಸಿ ಹಲವರು ಟ್ವೀಟ್‌ ಮಾಡಿದ್ದಾರೆ.

ನೀರಜ್‌ ಚೋಪ್ರಾಗೆ ಪ್ರೀತಿ–ದ್ವೇಷ

2021ರಲ್ಲಿ ಟೋಕಿಯೊದಲ್ಲಿ ಒಲಿಂಪಿಕ್ಸ್‌ ನಡೆದಿತ್ತು. ಈ ವೇಳೆ ಭಾರತದ ನೀರಜ್‌ ಚೋಪ್ರಾ ಅವರು ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಕೊನೇ ಸುತ್ತಿಗೂ ಮೊದಲು ಪಾಕಿಸ್ತಾನದ ಜಾವೆಲಿನ್‌ ಕ್ರೀಡಾಪಟು ಅರ್ಷದ್‌ ನದೀಮ್‌ ಅವರು ಅಭ್ಯಾಸ ಮಾಡುವುದಕ್ಕಾಗಿ ನೀರಜ್‌ ಅವರ ಜಾವೆಲಿನ್‌ ಅನ್ನು ಬಳಸಿಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಭಾರತೀಯ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ನದೀಮ್‌ ಅವರು ಚೋಪ್ರಾ ಅವರ ಜಾವೆಲಿನ್‌ ಅನ್ನು ಹಾಳುಗೆಡಹುವುದಕ್ಕೇ ತೆಗೆದುಕೊಂಡಿದ್ದಾರೆ ಎನ್ನುವ ವರದಿಗಳನ್ನು ಮಾಡಲಾಯಿತು. ಆದರೆ, ಆ ಪಂದ್ಯದಲ್ಲಿ ನೀರಜ್‌ ಚಿನ್ನ ಗೆದ್ದರು. ನದೀಮ್‌ ಅವರು ಐದನೇ ಸ್ಥಾನ ಪಡೆದುಕೊಂಡರು. 

‘ಕ್ರೀಡೆಯು ನಮಗೆ ಒಟ್ಟಿಗೆ ಇರಲು, ಒಗ್ಗೂಡಲು ಹೇಳಿಕೊಡುತ್ತದೆ. ನದೀಮ್‌ ಅವರು ನನ್ನ ಜಾವೆಲಿನ್‌ ತೆಗೆದುಕೊಂಡಿದ್ದರ ಕುರಿತು ಎದ್ದಿರುವ ವಿವಾದ, ಜನರ ಪ್ರತಿಕ್ರಿಯೆಗಳು ನನಗೆ ಬೇಸರ ತರಿಸಿವೆ’ ಎಂದು ನೀರಜ್‌ ಚೋಪ್ರಾ ಅವರು 2021ರಲ್ಲಿ ಹೇಳಿದ್ದರು.

ಇತ್ತೀಚೆಗೆ, ವಿಶ್ವ ಅಥ್ಲೆಟಿಕ್ಸ್‌ ಕೂಟ ಬುಡಾಪೆಸ್ಟ್‌ನಲ್ಲಿ ನಡೆಯಿತು. ಈ ವೇಳೆಯಲ್ಲಿ ನೀರಜ್‌ ಅವರು ಚಿನ್ನ ಗೆದ್ದುಕೊಂಡರು. ನದೀಮ್‌ ಅವರು ಬೆಳ್ಳಿ ಗೆದ್ದುಕೊಂಡರು. ಪದಕ ಪ್ರದಾನದ ಬಳಿಕ, ಫೋಟೊ ತೆಗೆಯುವ ವೇಳೆ, ನೀರಜ್‌ ಅವರು ನದೀಮ್‌ ಅವರನ್ನೂ ಕರೆದರು. ನೀರಜ್‌ ಅವರ ಈ ನಡವಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಪಡೆದುಕೊಂಡಿತು. ಆದರೂ, ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕ್ರಿಕೆಟ್‌, ಹಾಕಿ, ಕಬಡ್ಡಿ ಬಳಿಕ ಜಾವೆಲಿನ್‌ ಥ್ರೋ ಕೂಡ ಭಾರತ–ಪಾಕಿಸ್ತಾನದ ‘ಹೈವೋಲ್ಟೇಜ್’ ಪರಿಧಿಗೆ ಬರುತ್ತಿದೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಪಾಕಿಸ್ತಾನದಲ್ಲಿ ಅತಿರೇಕ

ಭಾರತದ ವಿರುದ್ಧ ಸೋತರೆ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಟಗಾರರಿಗೆ ದ್ವೇಷದ ಪ್ರತಿಕ್ರಿಯೆ ದೊರೆಯುತ್ತದೆ. ಕ್ರೀಡಾಭಿಮಾನಿಗಳು ತಮ್ಮ ಮನೆಯ ಟಿ.ವಿಗಳನ್ನು ಒಡೆದು ಹಾಕುತ್ತಾರೆ. ಅಭಿಮಾನಿಗಳು ಮನೆಯ ಮೇಲೆ ಕಲ್ಲು ಹೊಡೆಯುವ ಆತಂಕದ ಕಾರಣಕ್ಕೆ ಆಟಗಾರರು ಕೂಡ ಪಂದ್ಯಾವಳಿ ಮುಗಿದ ತಕ್ಷಣವೇ ತಮ್ಮ ಮನೆಗಳಿಗೆ ತೆರಳುವುದಿಲ್ಲ. 2016ರಲ್ಲಿ ಭಾರತ–ಆಸ್ಟ್ರೇಲಿಯಾ ಸರಣಿ ನಡೆಯುತ್ತಿತ್ತು. ಈ ವೇಳೆ ಪಂದ್ಯವೊಂದರಲ್ಲಿ ಭಾರತ ಗೆದ್ದಿತು. ಇದನ್ನು ಸಂಭ್ರಮಿಸಲು ಪಾಕಿಸ್ತಾನದ ವಿರಾಟ್‌ ಕೊಹ್ಲಿ ಅಭಿಮಾನಿಯೊಬ್ಬರು ತಮ್ಮ ಮನೆಯ ಮೇಲೆ ಭಾರತದ ಧ್ವಜವನ್ನು ಹಾಕಿದರು. ಇದಕ್ಕಾಗಿ ಅವರನ್ನು ಜೈಲಿಗೆ ಕಳುಹಿಸಲಾಯಿತು.

ಆಧಾರ: ಪಿಟಿಐ, ಎಎಫ್‌ಪಿ, ಅಲ್‌ಜಜೀರಾ, ಬಿಬಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.