ADVERTISEMENT

ಆಳ–ಅಗಲ | T20 ವಿಶ್ವಕಪ್ : ಕ್ರಿಕೆಟ್ ಕಣದಲ್ಲಿ ‘ಡಾಲರ್ ಕನಸು’

ಗಿರೀಶ ದೊಡ್ಡಮನಿ
ಪ್ರದೀಶ್ ಎಚ್.ಮರೋಡಿ
ಕೆ.ಎಸ್ ಸುನಿಲ್
Published 1 ಜೂನ್ 2024, 0:25 IST
Last Updated 1 ಜೂನ್ 2024, 0:25 IST
   

ಜೂನ್ 12ರಂದು ನ್ಯೂಯಾರ್ಕ್‌ನ ನಾಸೌ ಕೌಂಟಿ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಅಮೆರಿಕ ನಡುವಣ ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್‌ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಕ್ರಿಕೆಟ್‌ಪ್ರೇಮಿಗಳ ಕುತೂಹಲ ಮುಗಿಲುಮುಟ್ಟಿದೆ. ಏಕೆಂದರೆ; ಈ ಊರಿನ ನಾಸ್ತುಷ್ ಪ್ರದೀಪ್ ಕೆಂಜಿಗೆ ಅಮೆರಿಕ ತಂಡದಲ್ಲಿ ಆಡಲಿದ್ದಾರೆ. 

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದ ಎದುರು ತನ್ನ ಪ್ರತಿಭೆ ತೋರಲು ಸಿದ್ಧವಾಗಿದ್ದಾರೆ ಕನ್ನಡಿಗ ನಾಸ್ತುಷ್. ಎಡಗೈ ಸ್ಪಿನ್ನರ್ ನಾಸ್ತುಷ್ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಭ್ ಪಂತ್ ಹಾಗೂ ಸೂರ್ಯಕುಮಾರ್ ಯಾದವ್ ಅವರಂತಹ ನುರಿತ ಬ್ಯಾಟರ್‌ಗಳಿಗೆ ಸವಾಲೊಡ್ಡಲು ಕಾತರದಿಂದ ಕಾದಿದ್ದಾರೆ. ಇವರಷ್ಟೇ ಅಲ್ಲ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿರುವ ಅಮೆರಿಕದ ತಂಡದಲ್ಲಿ ಅರ್ಧಕ್ಕರ್ಧ ಭಾರತೀಯ ಹುಡುಗರೇ ಇದ್ದಾರೆ. ಅವರೆಲ್ಲರೂ ತಮ್ಮ ನೆಚ್ಚಿನ ತಾರೆಗಳ ಎದುರು ತೊಡೆ ತಟ್ಟಲು ಸಿದ್ಧವಾಗಿದ್ದಾರೆ.  

ನಿತೀಶ್ ಕುಮಾರ್, ಮಿಲಿಂದ್ ಕುಮಾರ್ (2019ರಲ್ಲಿ ಆರ್‌ಸಿಬಿ ತಂಡದಲ್ಲಿದ್ದರು), ಜಸ್‌ದೀಪ್ ಸಿಂಗ್, ನಿಸರ್ಗ್ ಪಟೇಲ್, ಸೌರಭ್ ನಟವಾಳ್ಕರ್, ಜಸ್‌ದೀಪ್ ಸಿಂಗ್, ಹರ್ಮೀತ್ ಸಿಂಗ್ ಅವರಿದ್ದ ತಂಡವು ಈಚೆಗೆ ಬಾಂಗ್ಲಾದೇಶದ ವಿರುದ್ಧ ಸರಣಿ ಜಯಿಸಿದೆ. ಬೇರೆ ಬೇರೆ ಉದ್ಯೋಗಗಳಲ್ಲಿರುವ ಇವರೆಲ್ಲರಿಗೂ ಕ್ರಿಕೆಟಿಗರಾಗುವ ಕನಸು ಸಾಕಾರಗೊಳಿಸಿಕೊಳ್ಳಲು ಅಮೆರಿಕದಲ್ಲಿ ಅವಕಾಶಸಿಕ್ಕಿದೆ.

ADVERTISEMENT

ದಶಕಗಳ ಹಿಂದೆ ಉದ್ಯೋಗ ಅರಸಿ ಭಾರತೀಯರು ಅಮೆರಿಕಕ್ಕೆ ಹೋಗುತ್ತಿದ್ದರು. ಅದರಲ್ಲೂ ಭಾರತದ ಮಧ್ಯಮ ವರ್ಗದ ವಿದ್ಯಾವಂತರ ‘ಡಾಲರ್ ಡ್ರೀಮ್ಸ್‌’ ಹಲವು ಕಥೆ, ಕಾದಂಬರಿ ಹಾಗೂ ಸಿನಿಮಾಗಳಿಗೆ ಗ್ರಾಸವಾಗಿದೆ. ಈಗ ಕ್ರಿಕೆಟ್ ಆಡಲೂ ಭಾರತೀಯರು ಅಮೆರಿಕ, ಕೆನಡಾ ಹಾಗೂ ಮತ್ತಿತರ ದೇಶಗಳತ್ತ ಮುಖ ಮಾಡಿದ್ದಾರೆ. ಜೂನ್ 2ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್  ಟೂರ್ನಿಯಲ್ಲಿ ಆಡಲಿರುವ ಯುರೋಪ್, ಆಫ್ರಿಕಾ ಹಾಗೂ ಅಮೆರಿಕ ತಂಡಗಳಲ್ಲಿ ಭಾರತದವರು ಇದ್ದಾರೆ. ಅಷ್ಟೇ ಅಲ್ಲ. ಪಾಕಿಸ್ತಾನ, ಬಾಂಗ್ಲಾ ಮತ್ತು ಅಫ್ಗಾನಿಸ್ತಾನ ಮೂಲದವರೂ ಇದ್ದಾರೆ.  ಅಮೆರಿಕ ತಂಡದಲ್ಲಿಯೇ ಪಾಕಿಸ್ತಾನದ ಅಲಿಖಾನ್ ಮತ್ತು ಭಾರತೀಯ ಆಟಗಾರರು ಜೊತೆಗೆ ಆಡುತ್ತಿರುವುದು ವಿಶೇಷ. 

ಕೆನಡಾ ತಂಡದಲ್ಲಿ ದಾವಣಗೆರೆ ಮೂಲದ ಶ್ರೇಯಸ್‌ ಮೊವ್ವ ಆಡುತ್ತಿದ್ದಾರೆ. ಅವರು ದಾವಣಗೆರೆಯಲ್ಲಿ ಹುಟ್ಟಿ ಬೆಳೆದಿರುವ ಶ್ರೇಯಸ್‌, ಎಂ.ಜಿ.ವಾಸುದೇವ ರೆಡ್ಡಿ ಹಾಗೂ ನಿವೃತ್ತ ಶಿಕ್ಷಕಿ ಎನ್‌.ಯಶೋದಾ ಅವರ ಮಗ.

ಡಾಲರ್ ಮಾರುಕಟ್ಟೆ..

ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಆರಂಭವಾದ ನಂತರ ಹಣದ ಹೊಳೆಯೇ ಈ ಆಟದತ್ತ ಹರಿದು ಬರುತ್ತಿದೆ. ಪ್ರಾಯೋಜಕರೆಲ್ಲರಿಗೂ ಐಪಿಎಲ್ ಮತ್ತು ಟಿ20 ಕ್ರಿಕೆಟ್ ಎಂದರೆ ಪಂಚಪ್ರಾಣವಾಗಿದೆ. ಈ ಮಾದರಿಯು ಯುವಸಮುದಾಯವನ್ನು ಬಹುವಾಗಿ ಆಕರ್ಷಿಸಿದೆ. ಮನರಂಜನೆಯ ಆಗರವಾಗಿರುವ ಈ ಮಾದರಿಯನ್ನು ಅಮೆರಿಕ ಮತ್ತು ಯುರೋಪ್‌ ದೇಶಗಳಲ್ಲಿ ಜನಪ್ರಿಯಗೊಳಿಸಿದರೆ ಬಹುದೊಡ್ಡ ಮಾರುಕಟ್ಟೆಯೊಂದು ಉದ್ಯಮಿಗಳಿಗೆ ದೊರೆಯಲಿದೆ. 

ಆ ಮೂಲಕ ಕ್ರಿಕೆಟ್‌ಗೆ ಮತ್ತಷ್ಟು ಹಣ ಹರಿದುಬರಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ  (ಐಸಿಸಿ) ಹೆಚ್ಚಿನ ಆದಾಯ ಹರಿದುಬರಲಿದೆ. ಭಾರತದಲ್ಲಿ ಕ್ರಿಕೆಟ್ ಅಪಾರ ಜನಪ್ರಿಯ ಆಟವಾಗಿದೆ. ಆದ್ದರಿಂದ ಕ್ರಿಕೆಟ್ ಮೂಲಕ ಪ್ರಚಾರ ಗಿಟ್ಟಿಸಿ ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬೇರೆ ದೇಶಗಳ ಪ್ರಾಯೋಜಕರು ಆಕರ್ಷಿತರಾಗಲಿದ್ದಾರೆಂಬ ಲೆಕ್ಕಾಚಾರದಲ್ಲಿ ಐಸಿಸಿ ಇದೆ. ಈ ಟೂರ್ನಿಯಿಂದ ಅಧಿಕೃತ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು ₹1000 ಕೋಟಿಗೂ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದೆ. 

ಈ ಎಲ್ಲ ಲೆಕ್ಕಾಚಾರಗಳಾಚೆ; ಅಮೆರಿಕದ ಹೊಸ ತಾಣಗಳಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಜನರೂ ಸಿದ್ಧರಾಗಿದ್ದಾರೆ. ಈ ಟೂರ್ನಿಯಲ್ಲಿ ನಡೆಯಲಿರುವ ಒಟ್ಟು 55 ಪಂದ್ಯಗಳಲ್ಲಿ 16 ಮಾತ್ರ ಅಮೆರಿಕದ ಮೂರು ತಾಣಗಳಲ್ಲಿ ನಡೆಯಲಿವೆ. ಅದರೂ ಈ ಪಂದ್ಯಗಳ ಆಕರ್ಷಣೆಯೇ ಹೆಚ್ಚಿದೆ.

ಒಲಿಂಪಿಕ್ಸ್ ಕನಸು..

ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸುತ್ತಿರುವ ಈ ಬಾರಿಯ ಟಿ20 ವಿಶ್ವಕಪ್‌ ಟೂರ್ನಿಯು ಒಲಿಂಪಿಕ್ ಕೂಟಕ್ಕೆ ಕ್ರಿಕೆಟ್‌ ಸೇರ್ಪಡೆಯ ಮೊದಲ ಮೆಟ್ಟಿಲಾಗುವ ನಿರೀಕ್ಷೆ ಇದೆ. 

ದಶಕಗಳಿಂದ ಏಷ್ಯಾ ದೇಶಗಳು, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಕ್ರಿಕೆಟ್ ಜನಪ್ರಿಯತೆ ಗಳಿಸಿದೆ. ಆದರೆ ಕ್ರಿಕೆಟ್ ಪಂದ್ಯಗಳ ಸುದೀರ್ಘ ಅವಧಿಯಿಂದಾಗಿ  (ಏಕದಿನ ಮತ್ತು ಟೆಸ್ಟ್ ಮಾದರಿಗಳು) ಒಲಿಂಪಿಕ್ಸ್‌ ಅರ್ಹತೆ ಪಡೆಯಲಿಲ್ಲ. ಅಲ್ಲದೇ ಈ ಕ್ರೀಡೆಯನ್ನು ಆಡುವ ದೇಶಗಳ ಸಂಖ್ಯೆಯೂ ಕಡಿಮೆ ಎನ್ನಲಾಗಿತ್ತು. ಆದರೆ 20 ವರ್ಷದ ಹಿಂದೆ ಟಿ20 ಮಾದರಿ ಆರಂಭವಾದಾಗ ಮತ್ತೆ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸುವ ಕನಸು ಚಿಗುರೊಡೆಯಿತು. 

ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಈಗಾಗಲೇ ಟಿ20 ಕ್ರಿಕೆಟ್ ಹೆಜ್ಜೆಗುರುತು ಮೂಡಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಅಮೆರಿಕದಲ್ಲಿ ಕ್ರಿಕೆಟ್...

18ನೇ ಶತಮಾನದಲ್ಲಿಯೇ ಅಮೆರಿಕದಲ್ಲಿ ಕ್ರಿಕೆಟ್ ಪಂದ್ಯ ನಡೆದ ದಾಖಲೆಗಳು ಇವೆ. 

ನ್ಯೂಯಾರ್ಕ್‌ನಲ್ಲಿ 1844ರಲ್ಲಿ ಮೊದಲ ಅಂತರ ರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಅಮೆರಿಕ ಮತ್ತು ಕೆನಡಾದ ನಡುವೆ ನಡೆದಿತ್ತು. ಅದೇ ತಾಣದಲ್ಲಿ ಈ ವಿಶ್ವಕಪ್ ಟೂರ್ನಿಯ ಮೂರನೇ ಪಂದ್ಯವು ನಡೆಯಲಿದ್ದು, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ. ಆ ಕಾಲದಲ್ಲಿ ಕ್ರಿಕೆಟ್ ಮಾದರಿಯು ಸುದೀರ್ಘವಾಗಿತ್ತು. 

1860ರ ನಂತರ ಬೇಸ್‌ಬಾಲ್ ಹೆಚ್ಚು ಜನಪ್ರಿಯವಾಗುತ್ತಿದ್ದಂತೆ ಕ್ರಿಕೆಟ್ ಖ್ಯಾತಿ ಕಡಿಮೆಯಾಗತೊಡಗಿತು. 1914ರ ನಂತರ ಕ್ರಿಕೆಟ್ ಚಟುವಟಿಕೆಗಳು ಬಹುತೇಕ ಸ್ಥಗಿತವಾದವು. 

1999ರಲ್ಲಿ ಅಮೆರಿಕದಲ್ಲಿ ಆಡಿದ್ದ ಕನ್ನಡಿಗರು

ಭಾರತದ ಎ ಕ್ರಿಕೆಟ್ ತಂಡವು 1999ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಮೂವ್ ಅಮೆರಿಕ ಚಾಲೆಂಜ್ ಕ್ರಿಕೆಟ್ ಸರಣಿ ಆಡಿತ್ತು.  ಆ ತಂಡದಲ್ಲಿ ಕರ್ನಾಟಕದ ದೊಡ್ಡ ಗಣೇಶ್ ಮತ್ತು ವಿಜಯ್ ಭಾರದ್ವಾಜ್ ಆಡಿದ್ದರು. 

ಆಸ್ಟ್ರೇಲಿಯಾ ಎ ವಿರುದ್ಧ ನಡೆದಿದ್ದ ಸರಣಿಯಲ್ಲಿ ವಿವಿಎಸ್ ಲಕ್ಷ್ಮಣ್ ಭಾರತ ಎ ತಂಡವನ್ನು ಮುನ್ನಡೆಸಿದ್ದರು. 

ವೀರೇಂದ್ರ ಸೆಹ್ವಾಗ್, ಹರಭಜನ್ ಸಿಂಗ್, ಮೊಹಮ್ಮದ್ ಕೈಫ್, ಆಶಿಶ್ ನೆಹ್ರಾ ಕೂಡ ಆ ತಂಡದಲ್ಲಿ ಆಡಿದ್ದರು. 

‘ಅಮೆರಿಕದಲ್ಲಿ ಕ್ರಿಕೆಟ್ ಜನಪ್ರಿಯಗೊಳಿಸುವ ಪ್ರಯತ್ನ ಮೊದಲಿನಿಂದಲೂ ನಡೆದಿದೆ. ಅದರ ಅಂಗವಾಗಿಯೇ ನಮ್ಮ ತಂಡವನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಅದೊಂದು ಅವಿಸ್ಮರಣೀಯ ಟೂರ್ನಿಯಾಗಿತ್ತು.  ಅಂದು ಎ ತಂಡದಲ್ಲಿ ಆಡಿದ್ದ ಬಹುತೇಕರು ನಂತರ ರಾಷ್ಟ್ರೀಯ ತಂಡದಲ್ಲಿಯೂ ಆಡಿದ್ದೆವು. ಇದೀಗ ಟಿ20 ಮಾದರಿ ಇರುವುದರಿಂದ ಅಲ್ಲಿಯ ಜನರು ಕ್ರಿಕೆಟ್‌ನತ್ತ ಹೆಚ್ಚು ಆಕರ್ಷಿತರಾಗುವ ಭರವಸೆ ಇದೆ’ ಎಂದು ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಹೇಳುತ್ತಾರೆ.

ಸ್ಪರ್ಧಿಸುವ ತಂಡಗಳು 

ಎ ಗುಂಪು: ಭಾರತ, ಪಾಕಿಸ್ತಾನ, ಅಮೆರಿಕ, ಕೆನಡಾ, ಐರ್ಲೆಂಡ್

ಬಿ ಗುಂಪು: ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಒಮಾನ್, ಇಂಗ್ಲೆಂಡ್

ಸಿ ಗುಂಪು: ವೆಸ್ಟ್ ಇಂಡೀಸ್, ಅಫ್ಗಾನಿಸ್ತಾನ, ಉಗಾಂಡ, ಪಾಪುವಾ ನ್ಯೂಗಿನಿ, ನ್ಯೂಜಿಲೆಂಡ್

ಡಿ ಗುಂಪು: ನೆದರ್ಲೆಂಡ್ಸ್, ನೇಪಾಳ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ

ಟಿ20 ವಿಶ್ವಕಪ್‌: ಹಲವು ಮೈಲಿಗಲ್ಲುಗಳು

1141- ಭಾರತದ ವಿರಾಟ್‌ ಕೊಹ್ಲಿ ಗಳಿಸಿರುವ ಒಟ್ಟು ರನ್‌. ಒಟ್ಟು ಟೂರ್ನಿಗಳಲ್ಲಿ ಆಟಗಾರನೊಬ್ಬನ ಗರಿಷ್ಠ ಮೊತ್ತ ಇದಾಗಿದೆ

14 - ವಿರಾಟ್‌ ಕೊಹ್ಲಿ ಗಳಿಸಿರುವ ಅರ್ಧಶತಕಗಳು. ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ ಮತ್ತು ಕ್ರಿಸ್‌ ಗೇಲ್‌ ಇದ್ದಾರೆ (ತಲಾ 9)

319 - ಟೂರ್ನಿಯೊಂದರಲ್ಲಿ (2014) ವಿರಾಟ್‌ ಕೊಹ್ಲಿ 6 ಪಂದ್ಯಗಳಿಂದ ಗಳಿಸಿದ ಒಟ್ಟು ರನ್‌ 

181.29 - ಭಾರತದ ಸೂರ್ಯಕುಮಾರ್‌ ಯಾದವ್‌ ಹೊಂದಿರುವ ದಾಖಲೆಯ ಸ್ಟ್ರೈಕ್‌ ರೇಟ್‌ (10 ಇನಿಂಗ್ಸ್‌ಗಳಲ್ಲಿ 281 ರನ್‌ ಗಳಿಸಿದ್ದಾರೆ)

2 -ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ಗಳಿಸಿರುವ ಶತಕಗಳು. ಎರಡು ಶತಕ ದಾಖಲಿಸಿರುವ ಏಕೈಕ ಬ್ಯಾಟರ್‌

ಅಜೇಯ 170 - ಇಂಗ್ಲೆಂಡ್‌ನ ಜೋಸ್‌ ಬಟ್ಲರ್‌ ಮತ್ತು ಅಲೆಕ್ಸ್ ಹೇಲ್ಸ್ ಅವರ ದಾಖಲೆಯ ಜೊತೆಯಾಟ (2022ರ ಟೂರ್ನಿಯಲ್ಲಿ ಭಾರತದ ವಿರುದ್ಧ)

47 - ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್ ಗಳಿಸಿದ ಒಟ್ಟು ಗರಿಷ್ಠ ವಿಕೆಟ್‌ಗಳು

8ಕ್ಕೆ 6 -ಶ್ರೀಲಂಕಾದ ಅಜಂತಾ ಮೆಂಡೀಸ್‌ ಪಂದ್ಯವೊಂದರಲ್ಲಿ ಗಳಿಸಿದ ವಿಕೆಟ್‌ಗಳು (2012ರ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧ)

16- ಟೂರ್ನಿಯೊಂದರಲ್ಲಿ (2021) ಶ್ರೀಲಂಕಾದ ವನಿಂದು ಹಸರಂಗ ಗಳಿಸಿದ ಒಟ್ಟು ಗರಿಷ್ಠ ವಿಕೆಟ್‌ಗಳು

6ಕ್ಕೆ 260 -ಶ್ರೀಲಂಕಾ ತಂಡವು ಗಳಿಸಿದ ಗರಿಷ್ಠ ಮೊತ್ತ (2007ರಲ್ಲಿ ಕೆನ್ಯಾ ವಿರುದ್ಧ)

23 - ದಕ್ಷಿಣ ಆಫ್ರಿಕಾದ ಎ.ಬಿ.ಡಿವಿಲಿಯರ್ಸ್‌ ಪಡೆದಿರುವ ಕ್ಯಾಚ್‌ಗಳು. ಇದು ಫೀಲ್ಡರ್‌ರೊಬ್ಬರು ಪಡೆದ ಗರಿಷ್ಠ ಕ್ಯಾಚ್‌ ಇದಾಗಿದೆ

79 - ನೆದರ್ಲೆಂಡ್ಸ್‌ ತಂಡವು ಗಳಿಸಿದ ಕನಿಷ್ಠ ಮೊತ್ತ (2014ರಲ್ಲಿ ಶ್ರೀಲಂಕಾ ವಿರುದ್ಧ)

32 -ಭಾರತದ ಮಹೇಂದ್ರ ಸಿಂಗ್‌ ಧೋನಿ ಪಡೆದ ಒಟ್ಟು ಕ್ಯಾಚ್‌ ಮತ್ತು ಸ್ಟಂಪಿಂಗ್‌. ಇದು ವಿಕೆಟ್‌ ಕೀಪರ್‌ರೊಬ್ಬರ ಗರಿಷ್ಠ ಸಾಧನೆಯಾಗಿದೆ

459 -ಪಂದ್ಯವೊಂದರಲ್ಲಿ ದಾಖಲಾದ ಒಟ್ಟು ಗರಿಷ್ಠ ರನ್‌ (2016ರಲ್ಲಿ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ) ಎರಡು ಇನ್ನಿಂಗ್ಸ್‌ ಸೇರಿ

ಆಧಾರ: ಕ್ರೀಡಾ ವೆಬ್‌ಸೈಟ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.