ಕುಟುಂಬವೊಂದರ ಮನೆವಾರ್ತೆ ವೆಚ್ಚ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಆಹಾರ, ಇಂಧನ, ವೈದ್ಯಕೀಯ, ಶೈಕ್ಷಣಿಕ ಮತ್ತಿತರ ವೆಚ್ಚಗಳು ಏರಿಕೆಯಾಗುತ್ತಲೇ ಇವೆ. 2020-2021ನೇ ಆರ್ಥಿಕ ವರ್ಷದ ನಂತರದ ವರ್ಷಗಳಲ್ಲಿ ಈ ವೆಚ್ಚವು ಭಾರಿ ಪ್ರಮಾಣದ ಏರಿಕೆ ದಾಖಲಿಸಿದೆ. ಕುಟುಂಬವೊಂದರ ವೆಚ್ಚ ಏರಿಕೆಯಾದುದರ ಪರಿಣಾಮವಾಗಿ, ಅದರ ಉಳಿತಾಯ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಈಚೆಗೆ ಬಿಡುಗಡೆ ಮಾಡಿರುವ ವರದಿಯಲ್ಲಿನ ದತ್ತಾಂಶಗಳು ಹೇಳುವ ಮಾತಿದು. ಒಟ್ಟಾರೆಯಾಗಿ ದೈನಂದಿನ ಜೀವನದ ವೆಚ್ಚ ಏರಿಕೆಯಾಗುತ್ತಿರುವುದರಿಂದ ಜನರ ಉಳಿತಾಯದ ಸಾಮರ್ಥ್ಯ ಕುಸಿಯುತ್ತಿದೆ ಮತ್ತು ಅವರ ಈವರೆಗಿನ ಉಳಿತಾಯವೂ ಕರಗುತ್ತಿದೆ.
ದೇಶದ ಜನರು ದೈನಂದಿನ ಜೀವನದ ವೆಚ್ಚ ಏರಿಕೆಯಾಗುತ್ತಿದೆ ಮತ್ತು ಇದರಿಂದ ಕುಟುಂಬ ನಿರ್ವಹಣೆಯ ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರಿಂದ ಜನರ ಮೇಲಿನ ಆರ್ಥಿಕ ಹೊರೆ ಹೆಚ್ಚುತ್ತಿದೆ ಎಂಬುದು ಹೊಸ ವಿಚಾರವೇನಲ್ಲ. ದಿನಬಳಕೆಯ ವಸ್ತು–ಪದಾರ್ಥಗಳ ಬೆಲೆ ಏರಿಕೆ, ಹಣದುಬ್ಬರ ಇದನ್ನೇ ಹೇಳುತ್ತವೆ. ಸರ್ಕಾರದ್ದೇ ವರದಿಯ ಪ್ರಕಾರ ದೇಶದ ಪ್ರತಿ ಕುಟುಂಬವೊಂದು ಜೀವನ ನಿರ್ವಹಿಸಲು ಮಾಡಲೇಬೇಕಾದ ಅತ್ಯಗತ್ಯದ ಖರ್ಚಿನ ಮೊತ್ತವು 2020–21ರಿಂದ 2022–23ರ ನಡುವೆ ಶೇ 19ರಷ್ಟು ಏರಿಕೆಯಾಗಿದೆ ಎಂದು ‘ರಾಷ್ಟ್ರೀಯ ಲೆಕ್ಕಪತ್ರ ಸಾಂಖ್ಯಿಕ ವರದಿ–2024’ಯ ಅಂಕಿಸಂಖ್ಯೆಗಳು ಹೇಳುತ್ತವೆ. ಅಂದರೆ ಕೇಂದ್ರ ಸರ್ಕಾರವೂ ಈಗ ಇದನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ. ಏರಿಕೆಯಾಗುತ್ತಿರುವ ವೆಚ್ಚವನ್ನು ಸರಿದೂಗಿಸಲು ಜನರ ಆದಾಯ ಸಾಲುತ್ತಿಲ್ಲ ಎಂಬುದನ್ನೂ ಈ ವರದಿಯ ದತ್ತಾಂಶಗಳು ಹೇಳುತ್ತವೆ.
ಕುಟುಂಬ ನಿರ್ವಹಣೆಗೆ ಹೆಚ್ಚು ವೆಚ್ಚವಾಗುತ್ತಿರುವ ಕಾರಣ ಜನರ ಉಳಿತಾಯದ ಸಾಮರ್ಥ್ಯ ಕುಸಿಯುತ್ತಿದೆ. 2018–19ರಲ್ಲಿ ದೇಶದ ಎಲ್ಲಾ ಜನರು ಬ್ಯಾಂಕ್ ಠೇವಣಿ, ಅಂಚೆಕಚೇರಿ ಠೇವಣಿ, ಚಿಟ್‌ಫಂಡ್‌ಗಳು, ಸಣ್ಣ ಉಳಿತಾಯ, ಹೂಡಿಕೆ, ಚಿನ್ನದ ರೂಪದಲ್ಲಿ ₹14.92 ಲಕ್ಷ ಕೋಟಿಯಷ್ಟು ಉಳಿತಾಯ ಮಾಡಿದ್ದರು. 2020–21ರಲ್ಲಿ ಇಂತಹ ಉಳಿತಾಯದ ಒಟ್ಟು ಮೊತ್ತವು ₹23.29 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಆದರೆ ವೆಚ್ಚ ಏರಿಕೆಯ ಪರಿಣಾಮದಿಂದ ಇಂತಹ ಉಳಿತಾಯದ ಮೊತ್ತ 2022–23ರಲ್ಲಿ ₹14.16 ಲಕ್ಷ ಕೋಟಿಗೆ ಇಳಿಕೆಯಾಗಿದೆ. ದೇಶದ ಜನರ ಉಳಿತಾಯವು 2018–19ರಲ್ಲಿ ಇದ್ದ ಉಳಿತಾಯಕ್ಕಿಂತ ಕಡಿಮೆ ಮೊತ್ತಕ್ಕೆ ಕುಸಿದಿದೆ ಎಂಬುದು ಗಮನಾರ್ಹ. ಅಂದರೆ ದೇಶದ ಜನರ ಉಳಿತಾಯದ ಸಾಮರ್ಥ್ಯ ಮಾತ್ರ ಕಡಿಮೆಯಾಗುತ್ತಿಲ್ಲ, ಬದಲಿಗೆ ಅವರಲ್ಲಿ ಈಗಾಗಲೇ ಇದ್ದ ಉಳಿತಾಯದ ಹಣವೂ ವೆಚ್ಚವಾಗುತ್ತಿದೆ. ಜನರು ವೆಚ್ಚವನ್ನು ಭರಿಸಲು ಉಳಿತಾಯದ ಹಣವನ್ನು ಬಳಕೆ ಮಾಡುತ್ತಿದ್ದಾರೆ ಎಂಬುದರತ್ತಲೂ ಈ ಅಂಕಿಅಂಶಗಳು ಗಮನ ಸೆಳೆಯುತ್ತವೆ.
ಇನ್ನೊಂದೆಡೆ ದೇಶದ ಜನರ ಸಾಲವೂ ಏರಿಕೆಯಾಗುತ್ತಿದೆ. ವೆಚ್ಚ ಏರಿಕೆಯನ್ನು ಸರಿದೂಗಿಸುವ ಉದ್ದೇಶದಿಂದಲೇ ಜನರು ಸಾಲ ಮಾಡುತ್ತಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಜನರು ಪಡೆದುಕೊಂಡ ಸಾಲದ ಪ್ರಮಾಣವು 2018–19ರಿಂದ 2022–23ರ ನಡುವೆ ಶೇ 115ರಷ್ಟು ಏರಿಕೆಯಾಗಿದೆ. ಒಟ್ಟು ಅರ್ಥವೇನೆಂದರೆ, ಜನರ ಬಳಿಯಲ್ಲಿ ಹಣ ಉಳಿಯುತ್ತಿಲ್ಲ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ.
ಮನೆ ವೆಚ್ಚ ಭಾರಿ ಏರಿಕೆ
(ಆರ್ಥಿಕ ವರ್ಷ; ವ್ಯಕ್ತಿಯೊಬ್ಬನ ವಾರ್ಷಿಕ ವೆಚ್ಚ; ನಾಲ್ಕು ಜನರ ಕುಟುಂಬವೊಂದರ ವಾರ್ಷಿಕ ವೆಚ್ಚ)
2018–19; ₹55,590; ₹2.22 ಲಕ್ಷ
2019–20; ₹58,493; ₹2.33 ಲಕ್ಷ
2020–21; ₹54,965; ₹2.19 ಲಕ್ಷ
2021–22; ₹61,256; ₹2.45 ಲಕ್ಷ
2022–23; ₹65,638; ₹2.62 ಲಕ್ಷ
19.65% : 2020–21ನೇ ಸಾಲಿಗೆ ಹೋಲಿಸಿದರೆ 2022–23ರಲ್ಲಿ ಪ್ರತಿ ಕುಟುಂಬದ ಮನೆವಾರ್ತೆ ವೆಚ್ಚದಲ್ಲಿ ಆದ ಏರಿಕೆ ಪ್ರಮಾಣ
****
ಬರಿದಾಗುತ್ತಿದೆ ಉಳಿತಾಯ
(ಆರ್ಥಿಕ ವರ್ಷ;ವ್ಯಕ್ತಿಯೊಬ್ಬನ ವಾರ್ಷಿಕ ಉಳಿತಾಯ;ನಾಲ್ಕು ಜನರ ಕುಟುಂಬವೊಂದರ ವಾರ್ಷಿಕ ಉಳಿತಾಯ)
2018–19; ₹10,510; ₹42,040
2019–20; ₹10,914; ₹43,656
2020–21; ₹16,406; ₹65,624
2021–22; ₹12,061; ₹48,244
2022–23; ₹9,974; ₹39,896
39.2% : 2020–21ನೇ ಸಾಲಿಗೆ ಹೋಲಿಸಿದರೆ 2022–23ರಲ್ಲಿ ಪ್ರತಿ ಕುಟುಂಬದ ವಾರ್ಷಿಕ ಉಳಿತಾಯದಲ್ಲಿ ಆದ ಇಳಿಕೆಯ ಪ್ರಮಾಣ
****
ಒಟ್ಟು ಸಾಲ (ಆರ್ಥಿಕ ವರ್ಷ;ದೇಶದ ಎಲ್ಲಾ ಜನರ ಒಟ್ಟು ಸಾಲ)
2018–19; ₹7.71 ಲಕ್ಷ ಕೋಟಿ
2019–20; ₹7.74 ಲಕ್ಷ ಕೋಟಿ
2020–21; ₹7.37 ಲಕ್ಷ ಕೋಟಿ
2021–22; ₹8.99 ಲಕ್ಷ ಕೋಟಿ
2022–23; ₹15.57 ಲಕ್ಷ ಕೋಟಿ
101.90% : 2018–19ಕ್ಕೆ ಹೋಲಿಸಿದರೆ 2022–23ರದಲ್ಲಿ ದೇಶದ ಜನರ ಒಟ್ಟು ಸಾಲದಲ್ಲಿ ಆದ ಏರಿಕೆ ಪ್ರಮಾಣ
****
ಬ್ಯಾಂಕ್‌ಗಳಿಂದ ಪಡೆದ ಸಾಲ ಶೇ 105ರಷ್ಟು ಹೆಚ್ಚಳ
ಇದು ಗೃಹ ಸಾಲ, ಅಡಮಾನ ಸಾಲ, ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್ ಸಾಲಗಳನ್ನು ಒಳಗೊಂಡಿದೆ. ಈ ಸಾಲವು ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ
(ಆರ್ಥಿಕ ವರ್ಷ;ದೇಶದ ಜನರು ಬ್ಯಾಂಕ್‌ಗಳಿಂದ ಪಡೆದ ಸಾಲ)
2018–19; ₹5.78 ಲಕ್ಷ ಕೋಟಿ
2019–20; ₹4.83 ಲಕ್ಷ ಕೋಟಿ
2020–21; ₹6.05 ಲಕ್ಷ ಕೋಟಿ
2021–22; ₹7.69 ಲಕ್ಷ ಕೋಟಿ
2022–23; ₹11.88 ಲಕ್ಷ ಕೋಟಿ
****
ಬ್ಯಾಂಕೇತರ ಸಾಲ ಶೇ110ರಷ್ಟು ಏರಿಕೆ
ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಜನರು ಪಡೆದುಕೊಂಡ ಸಾಲದ ಮೊತ್ತವು ಪ್ರತಿ ವರ್ಷ ಏರಿಕೆಯಾಗುತ್ತಲೇ ಇದೆ. ವಾಹನ ಸಾಲ, ಗೃಹೋಪಯೋಗಿ ವಸ್ತುಗಳ ಮೇಲಿನ ಸಾಲ, ಶೈಕ್ಷಣಿಕ ಸಾಲಗಳನ್ನೂ ಇದು ಒಳಗೊಂಡಿದೆ. ಆ್ಯಪ್ ಮೂಲಕ ನೀಡಲಾಗುವ ಸಾಲವನ್ನೂ ಈ ದತ್ತಾಂಶ ಒಳಗೊಂಡಿದೆ.
ಇಂತಹ ಸಾಲದ ಮೊತ್ತ ಏರಿಕೆಯಾಗುತ್ತಲೇ ಇರುವುದು, ತಮ್ಮ ಮತ್ತು ತಮ್ಮ ಕುಟುಂಬದ ಅಗತ್ಯ ವೆಚ್ಚ ಭರಿಸಲು ಜನರಲ್ಲಿ ಹಣದ ಕೊರತೆ ಇರುವುದನ್ನು ತೋರಿಸುತ್ತದೆ.
(ಆರ್ಥಿಕ ವರ್ಷ;ದೇಶದ ಜನರು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ)
2018–19; ₹1.58 ಲಕ್ಷ ಕೋಟಿ
2019–20; ₹2.56 ಲಕ್ಷ ಕೋಟಿ
2020–21; ₹0.93 ಲಕ್ಷ ಕೋಟಿ
2021–22; ₹1.92 ಲಕ್ಷ ಕೋಟಿ
2022–23; ₹3.33 ಲಕ್ಷ ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.