ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಹೀಗಾಗಿ, ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖಾಸಗಿ ಉದ್ದಿಮೆಗಳಲ್ಲಿ ಸಮಾಜದ ಅಂಚಿನ ಜನರಿಗೆ ಸಾಮಾಜಿಕ ಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ಪ್ರಯತ್ನ ಫಲಪ್ರದ ಆಗಿಲ್ಲ. ಆಯಾ ರಾಜ್ಯಗಳಲ್ಲಿ ಸ್ಥಳೀಯರಿಗೆ ನಿಗದಿತ ಪ್ರಮಾಣದಲ್ಲಿ ಉದ್ಯೋಗಾವಕಾಶ ಸಿಗುವಂತೆ ಮಾಡಬೇಕು ಎನ್ನುವ ಕೆಲವು ರಾಜ್ಯಗಳ ಪ್ರಯತ್ನ ಇದುವರೆಗೆ ತಾರ್ಕಿಕ ಅಂತ್ಯ ಕಂಡೇ ಇಲ್ಲ...
ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ರಾಜ್ಯಗಳ ಪ್ರಯತ್ನಗಳು ಕೋರ್ಟ್ ಮೆಟ್ಟಿಲೇರಿದ್ದರೆ, ಎಸ್‌ಸಿ, ಎಸ್‌ಟಿ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾವ ಹಳ್ಳ ಹಿಡಿದಿದೆ.
ಕೇಂದ್ರ ಸರ್ಕಾರವು ಖಾಸಗಿ ವಲಯದಲ್ಲಿ ಸಾಮಾಜಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸುವ ದಿಸೆಯಲ್ಲಿ ಕಾರ್ಯೋನ್ಮುಖವಾಗಿತ್ತು. ಹಲವು ರಾಜ್ಯ ಸರ್ಕಾರಗಳು ಸ್ಥಳೀಯ ಅಭ್ಯರ್ಥಿಗಳಿಗೆ ಖಾಸಗಿ ಕಂಪನಿಗಳಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಉದ್ಯೋಗ ನೀಡಬೇಕು ಎನ್ನುವ ನೀತಿ ರೂಪಿಸಿದವು. ಆದರೆ, ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಈ ದಿಸೆಯಲ್ಲಿ ಇದುವರೆಗೂ ನಿರೀಕ್ಷಿತ ಯಶಸ್ಸು ಕಂಡಿಲ್ಲ; ಎಲ್ಲೂ ಖಚಿತವಾದ ಕಾರ್ಯಕ್ರಮ ಜಾರಿಯಾಗಿಲ್ಲ.
ಖಾಸಗಿ ವಲಯದಲ್ಲಿ ಸಾಮಾಜಿಕ ನ್ಯಾಯದ ಭಾಗವಾಗಿ ಮೀಸಲಾತಿ ಕಲ್ಪಿಸುವ ಬಗ್ಗೆ ಸಮಾಲೋಚಿಸಲು ಕೇಂದ್ರದ ಯುಪಿಎ ಸರ್ಕಾರವು 2006ರಲ್ಲಿ ಸಮನ್ವಯ ಸಮಿತಿ ರಚಿಸಿತ್ತು. ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಬುಡಕಟ್ಟು ವ್ಯವಹಾರಗಳ ಇಲಾಖೆ, ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯ ಕಾರ್ಯದರ್ಶಿಗಳು ಸರ್ಕಾರದ ಪರವಾಗಿ ಸಮಿತಿಯ ಭಾಗವಾಗಿದ್ದರು. ಅವರ ಜತೆಗೆ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಐಸಿಸಿ), ಭಾರತೀಯ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಮಂಡಳಿ (ಎಫ್‌ಐಸಿಸಿಐ) ಮತ್ತು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಹಾಗೂ ದಲಿತರ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿ (ಡಿಐಸಿಸಿಐ) ಉದ್ಯಮ ಕ್ಷೇತ್ರವನ್ನು ಪ್ರತಿನಿಧಿಸಿ ಸಮಿತಿಯಲ್ಲಿ ಸ್ಥಾನ ಪಡೆದಿದ್ದವು.
ಇದುವರೆಗೆ ಈ ಸಮಿತಿಯು ಒಂಬತ್ತು ಬಾರಿ ಸಭೆ ಸೇರಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದೆ. ಸಮಿತಿಯ ಮೊದಲ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉದ್ದಿಮೆಗಳು ಸ್ವಯಂಪ್ರೇರಿತವಾಗಿ ಕೌಶಲ ತರಬೇತಿ ನೀಡಬೇಕು ಎಂದು ತೀರ್ಮಾನಿಸಲಾಯಿತು. ಈ ಬಗ್ಗೆ ಶಿಕ್ಷಣ, ಉದ್ಯೋಗ ಪಡೆಯುವ ಕೌಶಲ, ಉದ್ಯಮಶೀಲತೆಗಳನ್ನು ರೂಢಿಸುವುದು ಒಳಗೊಂಡಂತೆ ಉದ್ದಿಮೆಗಳಿಗೆ ಸ್ವಯಂಪ್ರೇರಿತ ನೀತಿಸಂಹಿತೆಯನ್ನು (ವಿಸಿಸಿ) ರೂಪಿಸಲಾಯಿತು. ಸಮಾಜದ ಎಲ್ಲ ಜನರನ್ನೂ ಒಳಗೊಳ್ಳುವ ಸಲುವಾಗಿ ಶಿಷ್ಯವೇತನ, ಕೋಚಿಂಗ್, ಉದ್ಯಮಶೀಲತಾ ತರಬೇತಿ, ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ನಡೆಸುವಂತೆ ಐಸಿಸಿ, ಎಫ್‌ಐಸಿಸಿಐ, ಅಸೋಚಾಂ ಮುಂತಾದ ಸಂಸ್ಥೆಗಳು ತಮ್ಮ ಸದಸ್ಯ ಕಂಪನಿಗಳಿಗೆ ಸೂಚಿಸಿದವು. ಆದರೆ, ಅವುಗಳ ಪೈಕಿ ಯಾವುದು ಕಾರ್ಯರೂಪಕ್ಕೆ ಬಂತು ಮತ್ತು ಎಷ್ಟು ಜನ ಅವುಗಳ ಪ್ರಯೋಜನ ಪಡೆದರು ಎನ್ನುವ ಮಾಹಿತಿಯೇ ಲಭ್ಯವಿಲ್ಲ.
ಇದುವರೆಗೆ ನಡೆದಿರುವ ಸಮನ್ವಯ ಸಮಿತಿಯ ಕೊನೆಯ–ಅಂದರೆ ಒಂಬತ್ತನೆಯ– ಸಭೆಯಲ್ಲಿಯೂ ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವ ದಿಸೆಯಲ್ಲಿ ಒಂದು ಖಚಿತ ರೂಪುರೇಷೆ ತಯಾರಿಸಲು ಸಾಧ್ಯವಾಗಲಿಲ್ಲ. ಉದ್ದಿಮೆಗಳು ಅಭ್ಯರ್ಥಿಗಳನ್ನು ತರಬೇತಿಗೆ (ಅಪ್ರೆಂಟಿಸ್) ಆಯ್ಕೆ ಮಾಡಿಕೊಳ್ಳುವಾಗ ಕನಿಷ್ಠ ಶೇ 25ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಆಯ್ಕೆ ಮಾಡಿಕೊಳ್ಳುವಂತೆ ಈ ಸಭೆಯಲ್ಲಿ ಕೋರಲಾಯಿತು. ಜತೆಗೆ ಹಳ್ಳಿಗಳಿಂದ ಬಂದವರಿಗೆ ಆದ್ಯತೆ ನೀಡುವುದು, ಎಸ್‌ಸಿ, ಎಸ್‌ಟಿ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವುದು, ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಬುಡಕಟ್ಟು ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುವ ಕ್ರಮಗಳಿಗೆ ಮುಂದಾಗಬೇಕು ಎಂದು ವಾಣಿಜ್ಯೋದ್ಯಮ ಸಂಸ್ಥೆಗಳಿಗೆ ಮನವಿ ಮಾಡಲಾಯಿತು.
ಆದರೆ, ಇಷ್ಟೆಲ್ಲ ಆದ ನಂತರವೂ, ಖಾಸಗಿ ಕಂಪನಿಗಳ ಉನ್ನತ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಒಬಿಸಿಯ ಎಷ್ಟು ಮಂದಿ ಇದ್ದಾರೆ ಎನ್ನುವ ಬಗ್ಗೆ ಸರ್ಕಾರದ ಬಳಿ ಯಾವ ಮಾಹಿತಿಯೂ ಇಲ್ಲ. ಇದನ್ನು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವರಾಗಿದ್ದ ಎ.ನಾರಾಯಣಸ್ವಾಮಿ ಅವರೇ 2023ರ ಮಾರ್ಚ್ 22ರಂದು ರಾಜ್ಯಸಭೆಯಲ್ಲಿ ಹಂಚಿಕೊಂಡಿದ್ದಾರೆ.
ಅನುಷ್ಠಾನಕ್ಕೆ ಬಾರದ ನಿಯಮ, ಕಾನೂನು
ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಲು ಆದ್ಯತೆ ನೀಡಬೇಕು ಎಂಬ ನೀತಿಯನ್ನು ಜಾರಿಗೆ ತರಲು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌ನಂತಹ ಕೆಲವು ರಾಜ್ಯಗಳು ಈಗಾಗಲೇ ಹಲವು ಬಾರಿ ಪ್ರಯತ್ನ ನಡೆಸಿವೆ.
ಕರ್ನಾಟಕದಲ್ಲಿ 1984ರಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾದ ಸರೋಜಿನಿ ಮಹಿಷಿ ವರದಿಯು ಖಾಸಗಿ ಕ್ಷೇತ್ರದಲ್ಲಿ ಶೇ 100ರಷ್ಟು ‘ಸಿ’ ಮತ್ತು ‘ಡಿ’ ಶ್ರೇಣಿಯ ಉದ್ಯೋಗಗಳನ್ನು ಸ್ಥಳೀಯರಿಗೇ ನೀಡಬೇಕು ಎಂದು ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರವೂ ಶೇ 80ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕು ಎಂದು ಪ್ರತಿಪಾದಿಸುತ್ತಲೇ ಬಂದಿದೆ. ಆದರೆ, ಇದುವರೆಗೂ ಜಾರಿಗೆ ಬಂದಿಲ್ಲ.
ಮಹಾರಾಷ್ಟ್ರದಲ್ಲಿ ಖಾಸಗಿ ಕ್ಷೇತ್ರದಲ್ಲಿ ಶೇ 80ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕು ಎಂಬ ನೀತಿ ಜಾರಿಯಲ್ಲಿದೆ. ಗುಜರಾತ್‌ನಲ್ಲಿ 1995ರಲ್ಲೇ ಇಂತಹ ನೀತಿ ರೂಪಿಸಲಾಗಿದೆ. ಗುಜರಾತ್‌ನಲ್ಲಿ 15 ವರ್ಷಕ್ಕಿಂತ ಹೆಚ್ಚು ಸಮಯದಿಂದ ನೆಲೆಸಿರುವವರನ್ನು ರಾಜ್ಯದವರು ಎಂದು ಪರಿಗಣಿಸಬಹುದು ಎಂದು ಅಲ್ಲಿನ ನೀತಿ ಹೇಳುತ್ತದೆ.
ರಾಜಸ್ಥಾನ ಸರ್ಕಾರವು ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ 75ರಷ್ಟು ಮೀಸಲಾತಿ ಮತ್ತು ಮಧ್ಯಪ್ರದೇಶ ಸರ್ಕಾರವು ಸ್ಥಳೀಯರಿಗೆ ಶೇ 70ರಷ್ಟು ಮೀಸಲಾತಿ ಕಲ್ಪಿಸುವ ಕಾನೂನು ಜಾರಿಗೆ ಚಿಂತನೆ ನಡೆಸುತ್ತಿವೆ. ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ಆದರೆ, ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡುವ ಸಂಬಂಧ, ಆಂಧ್ರಪ್ರದೇಶ ಮತ್ತು ಹರಿಯಾಣ ರಾಜ್ಯಗಳು ಕಾನೂನು ರೂಪಿಸುವ ಪ್ರಯತ್ನ ನಡೆಸಿವೆ. ಜಾರ್ಖಂಡ್‌ನಲ್ಲೂ ಈ ಪ್ರಯತ್ನ ಮಸೂದೆಯ ಹಂತದಲ್ಲಿದೆ.
2019ರಲ್ಲಿ ಆಂಧ್ರಪ್ರದೇಶ (ಆಂಧ್ರಪ್ರದೇಶದ ಕೈಗಾರಿಕೆಗಳು/ಕಾರ್ಖಾನೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ಕಾಯ್ದೆ–2019) ಕಾಯ್ದೆ ರೂಪಿಸಿತ್ತು. ಈ ಕುರಿತ ಅರ್ಜಿಯ ವಿಚಾರಣೆ ಆಂಧ್ರಪ್ರದೇಶದ ಹೈಕೋರ್ಟ್ ನಡೆಯುತ್ತಿದೆ. ಹೈಕೋರ್ಟ್ ‘ಈ ಕಾಯ್ದೆ ಅಸಾಂವಿಧಾನಿಕವಾಗಿರಬಹುದು’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಇದೇ ರೀತಿ, ಹರಿಯಾಣ ಸರ್ಕಾರ (ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯ್ದೆ–2020) ಜಾರಿ ಮಾಡಿತ್ತು. ₹30 ಸಾವಿರಕ್ಕಿಂತ ಕಡಿಮೆ ವೇತನ ಇರುವ (ಆರಂಭದಲ್ಲಿ ಇದು ₹50 ಸಾವಿರ ಇತ್ತು) ಹುದ್ದೆಗಳಿಗೆ ಶೇ 75ರಷ್ಟು ಸ್ಥಳೀಯ ಅಭ್ಯರ್ಥಿಗಳನ್ನೇ ಪರಿಗಣಿಸಬೇಕು ಎಂದಿತ್ತು. ಪಂಜಾಬ್–ಹರಿಯಾಣ ಹೈಕೋರ್ಟ್ ಈ ಕಾಯ್ದೆಯನ್ನು 2023ರ ನವೆಂಬರ್ 17ರಂದು ರದ್ದುಪಡಿಸಿತ್ತು. ಹರಿಯಾಣ ಸರ್ಕಾರ ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ.
ಹರಿಯಾಣ ಮತ್ತು ಪಂಜಾಬ್ ಹೈಕೋರ್ಟ್ ಹೇಳಿದ್ದೇನು?
* ಕಾಯ್ದೆ 'ಅಸಾಂವಿಧಾನಿಕ’
* ಕಾಯ್ದೆಯು ಭಾರತದ ಸಂವಿಧಾನದ 3ನೇ ಭಾಗವನ್ನು (ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸುವ 12ರಿಂದ 35ರವರೆಗಿನ ಸಂವಿಧಾನದ ವಿಧಿಗಳು ಈ ಭಾಗದಲ್ಲಿವೆ) ಉಲ್ಲಂಘಿಸುತ್ತಿದೆ
* ಅಭ್ಯರ್ಥಿಗಳು ನಿರ್ದಿಷ್ಟ ರಾಜ್ಯಕ್ಕೆ ಸೇರಿಲ್ಲ ಎಂಬ ಕಾರಣದಿಂದ ರಾಜ್ಯವೊಂದು ಜನರ ನಡುವೆ ತಾರತಮ್ಯ ಮಾಡಲು ಸಾಧ್ಯವಿಲ್ಲ. ಸಂವಿಧಾನದ 16ನೇ ವಿಧಿಯು ಸಾರ್ವಜನಿಕ ಉದ್ಯೋಗದ ವಿಚಾರದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ
ದಶಕಗಳ ಹಿಂದಿನ ಬೇಡಿಕೆ
ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗ ಮಾರುಕಟ್ಟೆಯು ಈ ದೇಶದ ದಲಿತರು, ಎಸ್‌ಟಿ, ಒಬಿಸಿ, ಮಹಿಳೆಯರನ್ನು ದೊಡ್ಡ ಮಟ್ಟದಲ್ಲಿ ಒಳಗೊಂಡಿಲ್ಲ. ಹೀಗಾಗಿ ಈ ಸಮುದಾಯಗಳಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಖಾಸಗಿ ಕಂಪನಿಗಳು ಈ ದೇಶದ ನೆಲ, ಜಲದಂತಹ ಸಂಪನ್ಮೂಲಗಳ ಬಳಕೆಯ ಜೊತೆಗೆ ಸರ್ಕಾರದಿಂದಲೂ ಹಲವು ಸವಲತ್ತು ಪಡೆಯುತ್ತವೆ. ಹೀಗಾಗಿ ಸಾಮಾಜಿಕ ಅಸಮಾನತೆ ಮತ್ತು ಆರ್ಥಿಕ ಅಸಮಾನತೆ ಹೋಗಲಾಡಿಸಲು ಖಾಸಗಿ ವಲಯದಲ್ಲಿಯೂ ಮೀಸಲಾತಿ ನೀಡಬೇಕು ಎನ್ನುವ ಒತ್ತಾಯ ಹಿಂದಿನಿಂದಲೂ ಕೇಳಿಬರುತ್ತಿದೆ.
ಆದರೆ, ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವ ಯಾವುದೇ ಕ್ರಮವು ದೇಶದಲ್ಲಿನ ಬಂಡವಾಳ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅಸೋಚಾಂನಂಥ ಉದ್ಯಮ ಸಂಸ್ಥೆಗಳು ಮೊದಲಿನಿಂದಲೂ ಪ್ರತಿಪಾದಿಸುತ್ತಿವೆ.
ಕ್ಷೀಣಿಸುತ್ತಿರುವ ಉದ್ಯೋಗಾವಕಾಶಗಳು
ಆರ್ಥಿಕ ಉದಾರೀಕರಣ ನೀತಿ ಅಳವಡಿಸಿಕೊಂಡ ನಂತರ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಭಾರತ ಪ್ರವೇಶಿಸಿದವು. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಯಿತು. ಅವುಗಳ ಜತೆಯಲ್ಲೇ ಸಾರ್ವಜನಿಕ ವಲಯದ ಅನೇಕ ಉದ್ದಿಮೆಗಳನ್ನು ಭಾಗಶಃ ಇಲ್ಲವೇ ಸಂಪೂರ್ಣವಾಗಿ ಖಾಸಗೀಕರಣ ಮಾಡಲಾಯಿತು. ಇವುಗಳಿಂದ ಸರ್ಕಾರಿ ಕೆಲಸಗಳು ಕಡಿಮೆಯಾಗಿ, ಖಾಸಗಿ ವಲಯದಲ್ಲಿ ಅಪಾರ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾದವು.
ಭಾರತದ ಸಂವಿಧಾನವು ಸರ್ಕಾರಿ ನೌಕರಿಗಳಲ್ಲಿ ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಹಿಂದುಳಿದ ಜನರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಾಮಾಜಿಕ ಹಿಂದುಳಿದಿರುವಿಕೆಯ ಆಧಾರದಲ್ಲಿ ಮೀಸಲಾತಿ ನೀಡುತ್ತಿದೆ. ಆದರೆ, ಖಾಸಗಿ ವಲಯದಲ್ಲಿ ಇಂಥ ಯಾವ ಉಪಕ್ರಮವೂ ಇಲ್ಲ. ಖಾಸಗಿ ಉದ್ಯಮಗಳ ಬೆಳವಣಿಗೆ, ಖಾಸಗೀಕರಣ ನೀತಿಗಳು ಎಸ್‌ಸಿ, ಎಸ್‌ಟಿ, ಒಬಿಸಿ ಜನರ ಮೇಲೆ ತೀವ್ರವಾದ ಪರಿಣಾಮ ಬೀರುತ್ತಿವೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ 2021ರ ವರದಿಯ ಪ್ರಕಾರ, 1991 ಮತ್ತು 2012ರ ನಡುವೆ ಆದಂಥ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದಿಂದ 20 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ನಷ್ಟವಾಗಿವೆ. ಇವುಗಳಲ್ಲಿ ಶೇ 50ರ ಮೀಸಲಾತಿ ಎಂದರೆ, ಸಾಮಾಜಿಕವಾಗಿ ಹಿಂದುಳಿದ ಜಾತಿಗಳಿಗೆ 10 ಲಕ್ಷ ಉದ್ಯೋಗಾವಕಾಶಗಳು ನಷ್ಟವಾದವು ಎಂದು ಅರ್ಥ. //
ಆಧಾರ: ಪ್ರೆಸ್ ಬ್ಯೂರೋ ಆಫ್ ಇಂಡಿಯಾ, ಪಿಟಿಐ, ಪಂಜಾಬ್–ಹರಿಯಾಣ ಹೈಕೋರ್ಟ್ ತೀರ್ಪುಗಳು
–––––––––––––––––––––––––––
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.