ADVERTISEMENT

ಅನುಭವ ಮಂಟಪ | ಸಮತಳ ಮೀಸಲಾತಿಯೇ ದಾರಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 0:27 IST
Last Updated 18 ಅಕ್ಟೋಬರ್ 2024, 0:27 IST
ಪ್ರೊ.ಎಂ.ನಾರಾಯಣಸ್ವಾಮಿ ತ್ಯಾವನಹಳ್ಳಿ
ಪ್ರೊ.ಎಂ.ನಾರಾಯಣಸ್ವಾಮಿ ತ್ಯಾವನಹಳ್ಳಿ   

ಪರಿಶಿಷ್ಟರ ಒಳ ಮೀಸಲಾತಿಯ ಹೋರಾಟಕ್ಕೆ ಮೂವತ್ತು ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತಿದೆ. ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಯ ಅಂದಿನ ಶೇಕಡ 15 ಮೀಸಲಾತಿ ಪ್ರಮಾಣವನ್ನು ವರ್ಗೀಕರಣ ಮಾಡಬೇಕು ಎಂಬ ಬೇಡಿಕೆ ಮುನ್ನೆಲೆಗೆ ಬಂತು. ‘ವರ್ಗೀಕರಣ’ದ ಬದಲಿಗೆ ‘ಉಪವರ್ಗೀಕರಣ’ ಎಂಬ ಪರಿಕಲ್ಪನೆಯನ್ನು ಬಳಸಿ ರೋಸ್ಟರ್ ಪದ್ದತಿಯಲ್ಲಿ ‘ಸಮತಳ ಮೀಸಲಾತಿ’ಯನ್ನು (ಹಾರಿಜಾಂಟಲ್ ರಿಸರ್ವೇಷನ್) ಕಲ್ಪಿಸಿದ್ದರೆ ಈ ಸಮಸ್ಯೆ ಎಂದೋ ಬಗೆಹರಿಯುತ್ತಿತ್ತು ಎನಿಸುತ್ತದೆ. ಅಂತಹ ‘ಸಮತಳ’ ಮೀಸಲಾತಿಯನ್ನು ಅನುಷ್ಠಾನ ಮಾಡಿದ್ದರೆ, ಪರಿಶಿಷ್ಟರಲ್ಲಿ ಪ್ರಾತಿನಿಧ್ಯ ಸಿಗದಿದ್ದ ವಂಚಿತ ಹಾಗೂ ಅಂಚಿನ ಜಾತಿಗಳಿಗೆ ಉದ್ಯೋಗ ಸಿಕ್ಕಿ ದಶಕಗಳೇ ಸರಿದುಹೋಗುತ್ತಿದ್ದವು. ನೇಮಕಾತಿಯಲ್ಲಿ ಕೆಲವು ಜಾತಿಗಳಿಗೆ ಸಾಮಾಜಿಕ ನ್ಯಾಯ ಸಿಗುತ್ತಿತ್ತು.

ಈಗಾಗಲೇ ಜಾರಿಯಲ್ಲಿರುವ ಸಮತಳ ಮೀಸಲಾತಿಯ ಉದಾಹರಣೆಗಳನ್ನು ಗಮನಿಸಬೇಕಿದೆ. ಸಮತಳ ಮೀಸಲಾತಿಯು ಸಾಮಾನ್ಯ ಅರ್ಹತೆಯ ಗುಂಪಿನಿಂದ ಹಿಡಿದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1, 2ಎ, 2ಬಿ, 3ಎ ಹಾಗೂ 3ಬಿ ಗುಂಪುಗಳಿಗೂ ಅನ್ವಯಿಸುತ್ತದೆ. ಮಹಿಳಾ ಮೀಸಲಾತಿ, ಮಾಜಿ ಸೈನಿಕರು, ಅಂಗವಿಕಲರು ಗುಂಪಿನ ಅಭ್ಯರ್ಥಿಗಳಿಗೆ ಯಾವುದೇ ಒಂದು ಮೀಸಲಾತಿ ಗುಂಪಿನ ಒಳಗೆ (ಒಳ ಮೀಸಲಾತಿ) ಸಮತಳ ಮೀಸಲಾತಿಯನ್ನು 1996ರ ಜುಲೈನಿಂದ ಜಾರಿಗೆ ಬರುವಂತೆ ಕೊಡಲಾಗಿದೆ. ಸದ್ಯ, ಸಮತಳ ಮೀಸಲಾತಿಯು ಸಾಧ್ಯವಾದಷ್ಟು ಮಟ್ಟಿಗೆ ಪಾಲನೆಯಾಗುತ್ತಿದೆ.

ಇದೇ ರೀತಿಯ ಸಮತಳ ಮೀಸಲಾತಿಯನ್ನು ಒಳ ಮೀಸಲಾತಿಯ ಲೆಕ್ಕದಲ್ಲಿ ಪರಿಶಿಷ್ಟ ಜಾತಿಯನ್ನು ಒಳಗುಂಪುಗಳಾಗಿ ವಿಂಗಡಿಸಿ ನೀಡಬಹುದಿತ್ತಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಹೀಗೆ ಮಾಡಿದ್ದರೆ, ಮುಖ್ಯವಾಗಿ ಒಳ ಮೀಸಲಾತಿ ಕೇಳುತ್ತಿರುವ ಮಾದಿಗ ಮತ್ತು ಸಮಾನಾಂತರ ಜಾತಿಗಳಿಗೆ ಈಗಾಗಲೇ ಹಲವು ಹುದ್ದೆಗಳು ದಕ್ಕುತ್ತಿದ್ದವು. ಆ ಮೂಲಕ ಪರಿಶಿಷ್ಟ ಜಾತಿಯ ಹಿಂದಿನ ಶೇ 15 ಅಥವಾ ಈಗಿನ ಶೇ 17 ಮೀಸಲಾತಿ ಪ್ರಮಾಣವನ್ನು ಒಂದು ಅಖಂಡ ಪ್ರಮಾಣವನ್ನಾಗಿ ಸಂವಿಧಾನದ ಅನುಚ್ಛೇದ 16(4) ಮತ್ತು 341ರಂತೆ ಉಳಿಸಿಕೊಳ್ಳಬಹುದು.

ADVERTISEMENT

ಪಂಜಾಬ್ ಮತ್ತು ತಮಿಳುನಾಡು ಕಂಡುಕೊಂಡಿರುವ ಸಮತಳ ಮೀಸಲಾತಿಯ ಸರಿದಾರಿಯು ನಮ್ಮ ರಾಜ್ಯದಲ್ಲೂ ಒಪ್ಪಿಗೆಯಾಗಬೇಕಿದೆ. ಆ ಮೂಲಕ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಎಲ್ಲಾ 101 ಜಾತಿಗಳೂ ಶೇ 17 ಮೀಸಲಾತಿಯ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ.

ರಾಜ್ಯ ಸಿವಿಲ್ ಸೇವೆಗಳಲ್ಲಿ ಪರಿಶಿಷ್ಟ ಜಾತಿಗೆ ಶೇ 17ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 7ರಷ್ಟು ಮೀಸಲಾತಿ ನಿಗದಿಗೊಳಿಸಿ 2022ರ ಡಿಸೆಂಬರ್‌ 28ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸದ್ಯ ಈ ಅದೇಶದ 100 ಬಿಂದುಗಳ ರೋಸ್ಟರ್ ಚಕ್ರ ಜಾರಿಯಲ್ಲಿದೆ. ಅದರಂತೆ, ಪರಿಶಿಷ್ಟ ಜಾತಿಗೆ 01, 09, 15, 23, 27, 33, 41, 46, 49, 53, 59, 67, 75, 81, 89, 93, ಮತ್ತು 96ನೇ ಬಿಂದುಗಳನ್ನು ಮೀಸಲಿಡಿಸಲಾಗಿದೆ. ಈ ಬಿಂದುಗಳಿಗೆ ಮಹಿಳಾ ಮೀಸಲಾತಿ, ಗ್ರಾಮೀಣ ಅಭ್ಯರ್ಥಿ, ಮಾಜಿ ಸೈನಿಕರು, ಕನ್ನಡ ಮಾಧ್ಯಮ ಅಭ್ಯರ್ಥಿ, ಯೋಜನೆಗಳಿಂದ ನಿರಾಶ್ರಿತರಾದ ಅಭ್ಯರ್ಥಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ನವೆಂಬರ್ 2002ರ ಆದೇಶದಲ್ಲಿ ನಿಗದಿಪಡಿಸಲಾದ ಸಮತಳ ಮೀಸಲಾತಿಯ ಬಿಂದುಗಳು ಅನ್ವಯವಾಗುತ್ತವೆ. ಸಮತಳ ಮೀಸಲಾತಿಯಲ್ಲಿ ಯಾವುದೇ ಪರಿಶಿಷ್ಟ ಜಾತಿಯ ಗುಂಪು ಪರಸ್ಪರ ಪ್ರತ್ಯೇಕ ಗುಂಪಾಗುವುದಿಲ್ಲ. ಇಲ್ಲಿ ಪರಸ್ಪರ ‘ಒಳಗೊಳ್ಳುವಿಕೆ’ಯ ಮೂಲಕ ತಟ್ಟೆಯ ಊಟವನ್ನು ಹಂಚಿಕೊಳ್ಳಬೇಕಿದೆ.‌ ಇದು ಪರಿಶಿಷ್ಟರಿಗಿರುವ ವಿವೇಕದ ಸರಿದಾರಿ.‌

ಲೇಖಕ: ಕರ್ನಾಟಕ ಮೀಸಲಾತಿ ಕಾವಲು ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.