ADVERTISEMENT

ವಿದೇಶ ವಿದ್ಯಮಾನ: ಮಾಲ್ದೀವ್ಸ್‌– ಭಾರತದಿಂದ ದೂರ.. ಚೀನಾಕ್ಕೆ ಹತ್ತಿರ!

ಮೋದಿ ಅವರು ಲಕ್ಷದ್ವೀಪಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಮಾಲ್ದೀವ್ಸ್‌ಗೆ ಸಮನಾಗಿ ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಮೋದಿ ಅಲ್ಲಿಗೆ ಭೇಟಿ ನೀಡಿದರು ಎನ್ನುವ ಚರ್ಚೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 20:31 IST
Last Updated 7 ಜನವರಿ 2024, 20:31 IST
<div class="paragraphs"><p>ಮಾಲ್ದೀವ್ಸ್‌</p></div>

ಮಾಲ್ದೀವ್ಸ್‌

   

ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಮಾಲ್ದೀವ್ಸ್‌ಗೆ ಸರಿಸಾಟಿಯಾಗಿ ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಪ್ರಧಾನಿ ಮೋದಿ ಅವರು ಅಲ್ಲಿಗೆ ಭೇಟಿ ನೀಡಿದರು ಎನ್ನುವ ಚರ್ಚೆ ಆರಂಭವಾಯಿತು. ಪ್ರಧಾನಿ ಅವರ ಚಿತ್ರ ಹಾಗೂ ವಿಡಿಯೊಗಳು ಇದಕ್ಕೆ ಪುಷ್ಟಿ ನೀಡಿದವು. ಈ ಚಿತ್ರ ಹಾಗೂ ವಿಡಿಯೊಗಳಿಗೆ ಮಾಲ್ದೀವ್ಸ್‌ನ ಸಚಿವೆಯಾಗಿದ್ದ ಮರಿಯಂ ಸಿನಾ ಪ್ರತಿಕ್ರಿಯಿಸಿ, ‘ಎಂಥ ಕೋಡಂಗಿ, ಇಸ್ರೇಲ್‌ನ ಕೈಗೊಂಬೆ ಮಿಸ್ಟರ್‌ ನರೇಂದ್ರ ಮೋದಿ ಅವರು ಲೈಫ್‌ ಜಾಕೆಟ್‌ನೊಂದಿಗೆ ಸಮುದ್ರಕ್ಕೆ ಹಾರಿದರು’ ಎಂದು ‘ಎಕ್ಸ್‌’ ಪೋಸ್ಟ್‌ ಮಾಡಿದರು. ಇದು ಭಾರತದಲ್ಲಿ ದೊಡ್ಡ ವಿವಾದಕ್ಕೆ ಕಾರಣ ಆಗಿದೆ. ಸಿನಾ ಅವರು ತಮ್ಮ ಎಕ್ಸ್‌ ಪೋಸ್ಟ್‌ ಅನ್ನು ಅಳಿಸಿದ್ದಾರೆ. ಆದರೂ, ಅವರ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ವಿವಾದವನ್ನು ಬಿಸಿಯಾಗಿಯೇ ಇರಿಸಿವೆ.

––––

ADVERTISEMENT

ಇಸ್ಲಾಂ ದೇಶ ಮಾಲ್ದೀವ್ಸ್‌ನ ಕಡಲತೀರದ ರಾಜಕೀಯ ಲೆಕ್ಕಾಚಾರಗಳು ಈಗ ಬದಲಾಗಿವೆ. ಹಲವು ವರ್ಷಗಳಿಂದ ಇಲ್ಲಿನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗಳು ಭಾರತ ಹಾಗೂ ಚೀನಾದ ‘ಪರ’ ಅಥವಾ ‘ವಿರೋಧ’ ಎನ್ನುವ ಚರ್ಚೆಯ ಕುರಿತೇ ನಡೆದಿವೆ. ಚೀನಾ ಅಥವಾ ಭಾರತ ಎನ್ನುವ ಚರ್ಚೆಯು ಅಲ್ಲಿನ ಜನರ ಮೇಲೆ ಅಷ್ಟೇನು ಪ್ರಭಾವ ಬೀರಿಲ್ಲ ಎನ್ನುವುದು ಅಲ್ಲಿನ ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಆದರೂ, ಅಲ್ಲಿನ ರಾಜಕೀಯ ಮಾತ್ರ ಭಾರತ ಪರವೇ ಅಥವಾ ಚೀನಾ ಪರವೇ ಎನ್ನುವ ಚರ್ಚೆಯ ಸುತ್ತಲೇ ನಡೆಯುತ್ತಿದೆ. 2023ರಲ್ಲಿ ನಡೆದ ಚುನಾವಣೆಯಲ್ಲಿ ಭಾರತವನ್ನು ಹೆಚ್ಚು ಕಡಿಮೆ ಮಾಲ್ದೀವ್ಸ್‌ನಿಂದ ಹೊರ ಹಾಕಲಾಗಿದೆ. ಚೀನಾವು ಭಾರತದ ಸ್ಥಾನವನ್ನು ಪಡೆದುಕೊಂಡಿದೆ.

ಭಾರತಕ್ಕೆ ಮಾಲ್ದೀವ್ಸ್‌ ಸಾಂಪ್ರದಾಯಿಕ ಸ್ನೇಹ ವಲಯದ ದೇಶ. ಈ ಹಿಂದೆ ಆಗಿ ಹೋದ ಹಲವು ಅಧ್ಯಕ್ಷರು ‘ಭಾರತ ಮೊದಲು’ ಎನ್ನುವ ವಿದೇಶಾಂಗ ನೀತಿಯನ್ನು ಅನುಸರಿಸಿದ್ದರು. ಆದರೆ, 2013ರಿಂದ 2018ರ ವರೆಗೆ ಅಧ್ಯಕ್ಷರಾಗಿದ್ದ ಅಬ್ದುಲ್ಲಾ ಯಮೀನ್‌, ಚೀನಾದ ಪರ ಒಲವು ಹೊಂದಿದವರಾಗಿದ್ದರು. ‘ಭಾರತ ಮೊದಲು’ ಎಂದು ತೋರಿಸಿಕೊಂಡರೂ ಚೀನಾಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿದರು. ಈ ಕುರಿತು ದೇಶದಲ್ಲಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಯಿತು. ಈ ಕಾರಣಕ್ಕಾಗಿಯೇ 2018ರಲ್ಲಿ ಭಾರತದ ಪರ ಒಲವಿರುವ ಇಬ್ರಾಹಿಂ ಮೊಹಮ್ಮದ್‌ ಸಾಲಿಹ್‌ ಅಧ್ಯಕ್ಷರಾದರು. ಇವರು ಭಾರತದೊಂದಿಗೆ ಒಳ್ಳೆಯ ಸಂಬಂಧ ಇರಿಸಿಕೊಂಡಿದ್ದರು. ಹೀಗೆ, ಭಾರತ ಅಥವಾ ಚೀನಾ ಎನ್ನುವ ಚರ್ಚೆ ನಡೆಯುತ್ತಿದ್ದರೂ ಭಾರತದೊಂದಿಗೆ ಮಾಲ್ದೀವ್ಸ್‌ ಒಳ್ಳೆಯ ಸಂಬಂಧವನ್ನು ಇರಿಸಿಕೊಂಡಿತ್ತು. ಆದರೆ, 2023ರಲ್ಲಿ ಆಯ್ಕೆಯಾದ ಮೊಹಮ್ಮದ್‌ ಮುಯಿಜು, ಮಾಲ್ದೀವ್ಸ್‌ನೊಂದಿಗಿನ ಭಾರತದ ಸಂಬಂಧವನ್ನು ಸಂಪೂರ್ಣವಾಗಿ ವಿರೋಧಿಸಿದರು.

Maldives' President Mohamed Muizzu

‘ಭಾರತ ಹೊರಹೋಗಲಿ’ ಅಭಿಯಾನ

‘ಭಾರತ ಮೊದಲು’ ನೀತಿಯು ಈಗ ‘ಭಾರತ ಹೊರಹೋಗಲಿ’ ಎಂದು ಬದಲಾಗಿದೆ. ಮೊಹಮ್ಮದ್‌ ಮುಯಿಜು ಅವರ ಚುನಾವಣೆಯ ಪ್ರಚಾರದ ಕೇಂದ್ರವೇ ‘ಭಾರತ ಹೊರಹೋಗಲಿ’ ಎಂದಾಗಿತ್ತು. ತಮ್ಮ ಭಾಷಣಗಳಲ್ಲಿಯೂ ಅವರು ಇದನ್ನೇ ಪ್ರಸ್ತಾಪಿಸುತ್ತಿದ್ದರು. ಚೀನಾದ ಪರವಾಗಿ ಸಾರ್ವಜನಿಕವಾಗಿಯೇ ಮಾತನಾಡಿದರು.

ಅಧ್ಯಕ್ಷ ಯಮೀನ್‌ ಸಂಪುಟದಲ್ಲಿ ಸಚಿವರಾಗಿದ್ದ ಮುಯಿಜು ಅವರು ಮಾಲ್ದೀವ್ಸ್‌ ಅಭಿವೃದ್ಧಿಗಾಗಿ ಚೀನಾದಿಂದ ದೊಡ್ಡ ಮೊತ್ತದ ನೆರವು ಮತ್ತು ಸಾಲ ತಂದಿದ್ದರು. ಈ ಬಾರಿಯ ಚುನಾವಣಾ ಪ್ರಚಾರದ ವೇಳೆಯೇ, ಚೀನಾದ ಕಮ್ಯುನಿಸ್ಟ್‌ ಪಕ್ಷದೊಂದಿಗೆ ವಿಡಿಯೊ ಸಂವಾದ ನಡೆಸಿದ್ದ ಮುಯಿಜು ಅವರು, ಅಧಿಕಾರಕ್ಕೆ ಬಂದರೆ ಚೀನಾದೊಂದಿಗೆ ಗಟ್ಟಿ ಸಂಬಂಧ ಹೊಂದುವುದಾಗಿ ಹೇಳಿದ್ದರು.

ದೇಶಕ್ಕೆ ಸಾರ್ವಭೌಮತ್ವವಿದೆ. ಈ ದೇಶದಲ್ಲಿ ವಿದೇಶಿ ಸೇನೆ ಇರಕೂಡದು ಎಂದು ಭಾರತಕ್ಕೆ ಎಚ್ಚರಿಕೆಯನ್ನೂ ನೀಡಿದ್ದರು. ಅಂತೆಯೇ ಅವರು ಆಯ್ಕೆಯಾದ ಬಳಿಕ, ಭಾರತದ 77 ಸೈನಿಕರಿರುವ ತಂಡವನ್ನು ಮಾಲ್ದೀವ್ಸ್‌ನಿಂದ ಹಿಂಪಡೆಯುವಂತೆ ಪದೇ ಪದೇ ಹೇಳಲಾಗುತ್ತಿದೆ. ಮಾಲ್ದೀವ್ಸ್‌ನಲ್ಲಿ ಯಾರೇ ಅಧ್ಯಕ್ಷರಾದರೂ, ಅವರು ಮೊದಲು ಭಾರತಕ್ಕೆ ಭೇಟಿ ನೀಡುತ್ತಿದ್ದರು. ಆದರೆ, ಮುಯಿಜು ಅವರು ಈ ಸಂಪ್ರದಾಯವನ್ನು ಮುರಿದು, ಟರ್ಕಿಗೆ ಭೇಟಿ ನೀಡಿದರು. ಹಮಾಸ್‌ ಹಾಗೂ ಇಸ್ರೇಲ್‌ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಭಾರತದ ನಿಲುವಿನ ಕಾರಣಕ್ಕಾಗಿಯೇ ಮುಯಿಜು ಅವರು ಮೊದಲು ಟರ್ಕಿಗೆ ಭೇಟಿ ನೀಡಿದರು ಎನ್ನುವ ಚರ್ಚೆಯೂ ಇದೆ. ದುಬೈನಲ್ಲಿ ನಡೆದ ಹವಾಮಾನ ಬದಲಾವಣೆ ಶೃಂಗಸಭೆ–28ರಲ್ಲಿ ಭಾಗವಹಿಸಿದ್ದಾಗ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದರಷ್ಟೇ. ಈಗ ಜನವರಿ 8ರಿಂದ 12ರವರೆಗೆ ಚೀನಾ ಭೇಟಿಗೆ ಮುಯಿಜು ಸಿದ್ಧರಾಗಿದ್ದಾರೆ.

ರಫ್ತು ಕುಸಿತ

ಭಾರತ ಹಾಗೂ ಮಾಲ್ದೀವ್ಸ್‌ನ ವ್ಯಾಪಾರ ಸಂಬಂಧವು ಹಂತ ಹಂತವಾಗಿ ಕಡಿತಗೊಳ್ಳುತ್ತಾ ಬಂದಿದೆ. ಚೀನಾದೊಂದಿಗೆ ಮಾಲ್ದೀವ್ಸ್‌ ತನ್ನ ವ್ಯಾಪಾರವನ್ನು ಹಂತ ಹಂತವಾಗಿ ಹೆಚ್ಚಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಮಾಲ್ದೀವ್ಸ್‌ಗೆ ಭಾರತದ ರಫ್ತು ಪ್ರಮಾಣವು ಕುಸಿಯುತ್ತಿದೆ. 

2015ರಲ್ಲಿ ಚೀನಾ–ಮಾಲ್ದೀವ್ಸ್‌ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಆರಂಭಿಸಿತ್ತು. 2017ರ ಹೊತ್ತಿಗೆ ಈ ಮಾತುಕತೆಯು ತಾರ್ಕಿಕ ಅಂತ್ಯ ಕಂಡು, ಚೀನಾ ಹಾಗೂ ಮಾಲ್ದೀವ್ಸ್‌ ಮಧ್ಯೆ ವ್ಯಾಪಾರ ಸಂಬಂಧ ಬೆಳೆಯಿತು. ಎರಡೂ ದೇಶಗಳ ಮಧ್ಯೆ ನಡೆಯುತ್ತಿದ್ದ ಒಟ್ಟು ವ್ಯಾಪಾರದಲ್ಲಿ ಶೇ 96ರಷ್ಟು ವ್ಯಾಪಾರವು ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿಯೇ ನಡೆದವು. ಇದು ಎರಡು ದೇಶಗಳನ್ನು ವ್ಯಾವಹಾರಿಕವಾಗಿ ಒಗ್ಗೂಡಿಸಿತು.  ಅಧ್ಯಕ್ಷರಾಗಿದ್ದ ಅಬ್ದುಲ್ಲಾ ಯಮೀನ್‌ ‘ಭಾರತ ಮೊದಲು’ ಎಂದು ಹೇಳಿದರೂ ಚೀನಾ ಮಾತ್ರ ಮಾಲ್ದೀವ್ಸ್‌ನ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತೊಡಗಿಯೇ ಇತ್ತು. ಆದರೆ, ನಂತರ 2018ರಲ್ಲಿ ಇಬ್ರಾಹಿಂ ಸಾಲಿಹ್‌ ಅವರು ಮಾಲ್ದೀವ್ಸ್‌ನ ಅಧ್ಯಕ್ಷರಾದರು. ಇವರು ‘ಭಾರತ ಮೊದಲು’ ಎನ್ನುವ ನೀತಿಯನ್ನು ಅಳವಡಿಸಿಕೊಂಡರು. 

ಭಾರತ ಹಾಗೂ ಮಾಲ್ದೀವ್ಸ್‌ ಸರ್ಕಾರಗಳ ಮಧ್ಯೆ ಒಳ್ಳೆಯ ಸಂಬಂಧ ಏರ್ಪಟಿತ್ತು. ಪ್ರಧಾನಿ ಮೋದಿ ಸೇರಿದಂತೆ, ವಿದೇಶಾಂಗ ಸಚಿವ ಜೈಶಂಕರ್‌, ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರೂ ಮಾಲ್ದೀವ್ಸ್‌ಗೆ ಭೇಟಿ ನೀಡಿದರು. ಸಾಲಿಹ್‌ ಸಹ ಭಾರತಕ್ಕೆ ಹಲವು ಬಾರಿ ಭೇಟಿ ನೀಡಿದರು. ಎರಡು ದೇಶಗಳೂ ಹಲವು ಒಪ್ಪಂದಗಳನ್ನು ಮಾಡಿಕೊಂಡಿತು. ಹಾಗಿದ್ದರೂ, ಮಾಲ್ದೀವ್ಸ್‌ಗೆ ಭಾರತದ ರಫ್ತು ಪ್ರಮಾಣವು ಕಡಿತಗೊಳ್ಳುತ್ತಲೇ ಬಂದಿತು.

2021–22ರಲ್ಲಿ ₹4,982 ಕೋಟಿಯಷ್ಟಿದ್ದ ಭಾರತದ ರಫ್ತು, 2022–23ರ ಹೊತ್ತಿಗೆ ₹3,835 ಕೋಟಿಗೆ ಇಳಿಕೆ ಕಂಡಿತು. 2023–24ರ ಏಪ್ರಿಲ್‌–ಅಕ್ಟೋಬರ್‌ನ ಏಳು ತಿಂಗಳಲ್ಲಿ ₹3,268 ಕೋಟಿಗೆ ಇಳಿಯಿತು. ನವೆಂಬರ್‌ನಲ್ಲಿ ಮೊಹಮ್ಮದ್‌ ಮುಯಿಜು ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಚೀನಾದ ಪರ ಹೆಚ್ಚಿನ ಒಲವು ಹೊಂದಿರುವ ಇವರ ಕಾಲಾವಧಿಯಲ್ಲಿ ಭಾರತದ ರಫ್ತು ಹೆಚ್ಚಿಗೆ ಆಗುವ ಲಕ್ಷಣಗಳಿಲ್ಲ.

ಆಧಾರ: ರಾಯಿಟರ್ಸ್‌, ಪಿಟಿಐ

***********

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.