ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಗೆ (ಸಂಸತ್ತು) ಚುನಾವಣೆ ಮುಗಿದು 15 ದಿನ ಕಳೆದಿವೆ. ಜನರು ಯಾವ ಪಕ್ಷಕ್ಕೂ ಬಹುಮತ ನೀಡಲಿಲ್ಲ. ಈ ಕಾರಣ ಈವರೆಗೂ ಸರ್ಕಾರ ರಚನೆಯಾಗಿಲ್ಲ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) (54 ಸ್ಥಾನ) ಹಾಗೂ ಪಾಕಿಸ್ತಾನ ಮುಸ್ಲಿಂ ಲೀಗ್ –ನವಾಜ್ (ಪಿಎಂಎಲ್‌ಎನ್) (75 ಸ್ಥಾನ) ಸೇರಿ ಸರ್ಕಾರ ರಚನೆ ಆಗಲಿದೆ ಎಂದು ಮಂಗಳವಾರ ತಡರಾತ್ರಿ ಸುದ್ದಿಗೋಷ್ಠಿ ನಡೆಸಿ ಘೋಷಿಸಿವೆ. ಕೆಲವು ಸಣ್ಣ ಸಣ್ಣ ಪಕ್ಷಗಳೂ ಈ ಮೈತ್ರಿಯೊಂದಿಗೆ ಸೇರಿ ಬಹುಮತದ 133 ಸಂಖ್ಯೆಯನ್ನು ತಲುಪಿವೆ. ಆದರೆ, ರಾಜಕೀಯ ಅಸ್ಥಿರತೆ ಮಾತ್ರ ತನ್ನ ಹಿಡಿತವನ್ನು ಬಿಗಿ ಮಾಡುತ್ತಲೇ ಇದೆ.
ತಾವು ವಿರೋಧ ಪಕ್ಷದಲ್ಲಿ ಕೂರುತ್ತೇವೆ ಎಂದಿದ್ದ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹರೀಕ್ ಎ ಇನ್ಸಾಫ್ (ಪಿಟಿಐ) ಈಗ ಪಿಪಿಪಿ ಹಾಗೂ ಪಿಎಂಎಲ್‌ಎನ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಏರುವುದು ರಾಜಕೀಯ ಅಸ್ಥಿರತೆಗೆ ನಾಂದಿ ಆಗಲಿದೆ ಎಂದಿದೆ. ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಹಿಂದೇಟು ಹಾಕಿದೆ. ಈ ಬಾರಿಯ ಚುನಾವಣೆಯಲ್ಲಿ ಪಿಟಿಐ ಪಕ್ಷವು ಸ್ಪರ್ಧಿಸದಂತೆ ಪಾಕಿಸ್ತಾನ ಚುನಾವಣಾ ಆಯೋಗ ನಿರ್ಬಂಧ ಹೇರಿತ್ತು. ಈ ಕಾರಣ ಈ ಪಕ್ಷದ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಹೀಗೆ ಸ್ಪರ್ಧಿಸಿ ಕೂಡ 93 ಸ್ಥಾನಗಳನ್ನು ಅವರು ಗೆದ್ದುಕೊಂಡಿದ್ದಾರೆ. ನೈತಿಕವಾಗಿ ತಾವೇ ಅಧಿಕಾರದಲ್ಲಿ ಕೂರಬೇಕು ಎನ್ನುವುದು ಪಿಟಿಐನ ಅಭಿಲಾಷೆ. ಆದರೆ, ಪಿಪಿಪಿ ಹಾಗೂ ಪಿಎಂಎಲ್‌ಎನ್ ಮೈತ್ರಿ ಮಾಡಿಕೊಂಡಿವೆ.
‘ಅಸ್ಥಿರತೆ’ ಎನ್ನುವುದು ಪಾಕಿಸ್ತಾನ ರಾಜಕೀಯಕ್ಕೆ ಹೊಸತೇನು ಅಲ್ಲ. ಪಾಕಿಸ್ತಾನದಲ್ಲಿ ಐದು ವರ್ಷದ ಅವಧಿ ಪೂರೈಸಿದ ಪ್ರಧಾನಿಗಳ ಸಂಖ್ಯೆ ಬಹಳ ಕಮ್ಮಿ ಇದೆ. ಅಧಿಕಾರದಿಂದ ಇಳಿದ ಬಳಿಕ ಒಂದೋ ದೇಶ ಬಿಡುತ್ತಾರೆ. ಇಲ್ಲವೇ ಪ್ರಕರಣವೊಂದರಲ್ಲಿ ಜೈಲು ಸೇರುತ್ತಾರೆ. ಚುನಾವಣೆಯ ಹಿಂದೆ ಮುಂದೆ ಇಂತಹ ಕ್ಷಿಪ್ರ ಬೆಳವಣಿಗೆಗಳಿಗೆ ಪಾಕಿಸ್ತಾನವು ಸದಾ ಸಾಕ್ಷಿಯಾಗಿದೆ.
ಈ ಬಾರಿಯ ಚುನಾವಣಾ ವಾತಾವರಣ ಕೂಡ ಇದೇ ರೀತಿಯಿತ್ತು. 2022ರಲ್ಲಿ ಪ್ರಧಾನಿ ಯಾಗಿದ್ದ ಇಮ್ರಾನ್ ಖಾನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ವಿವಿಧ ಪ್ರಕರಣಗಳಲ್ಲಿ ಇಮ್ರಾನ್ ಅವರಿಗೆ ಜೈಲು ಶಿಕ್ಷೆಯಾಯಿತು. ಇತ್ತೀಚೆಗೆ ಅವರ ಪತ್ನಿಯನ್ನೂ ಜೈಲಿಗೆ ಕಳುಹಿಸಲಾಯಿತು. ನಂತರ, ಪಿಎಂಎಲ್‌ಎನ್ ಪಕ್ಷದ ಶೆಹಬಾಜ್ ಷರೀಫ್ ಅವರು ಪ್ರಧಾನಿಯಾದರು. ಅಸೆಂಬ್ಲಿಯ ಅವಧಿ ಮುಕ್ತಾಯಗೊಂಡಿತು. ನಂತರ ಹಂಗಾಮಿ ಸರ್ಕಾರವನ್ನು ನಿಯೋಜಿಸಲಾಯಿತು. ಈ ಎಲ್ಲಾ ರಾಜಕೀಯ ಅಸ್ಥಿರತೆಯ ಮಧ್ಯೆ ದೇಶದ ಆರ್ಥಿಕತೆ ಮಾತ್ರ ಕುಸಿಯುತ್ತಲೇ ಸಾಗಿತು.
ಸೇನೆ ಮಾತು ಕೇಳದ ಜನ: ಪಾಕಿಸ್ತಾನ ರಾಜಕೀಯಕ್ಕೂ ಅಲ್ಲಿನ ಸೇನೆಗೂ ಇರುವ ನೇರ ಸಂಬಂಧ ರಹಸ್ಯವಾದುದೇನಲ್ಲ. ಸೇನೆ ಬಯಸಿದ ಪಕ್ಷ, ವ್ಯಕ್ತಿಯೇ ಅಲ್ಲಿನ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಕ್ಷಕ್ಕೆ ಈ ಬಾರಿ ಸೇನೆಯು ತಮ್ಮ ಬೆಂಬಲ ನೀಡಿತ್ತು. ಆದರೆ, ಚುನಾವಣಾ ಫಲಿತಾಂಶವನ್ನು ಗಮನಿಸಿದರೆ, ಈ ಬಾರಿಯ ಚುನಾವಣೆಯಲ್ಲಿ ಸೇನೆ ಬೆಂಬಲಿಸಿದ ಪಕ್ಷಕ್ಕೆ ಜನರು ಬಹುಮತ ನೀಡಲಿಲ್ಲ.
ಕಳೆದ ಐದು ವರ್ಷಗಳಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷಕ್ಕೂ ಸೇನೆಗೂ ಇರುವ ವೈಮನಸ್ಯ ಹಲವು ಬಾರಿ ಬಹಿರಂಗಗೊಂಡಿತ್ತು. ಅಧಿಕಾರದಿಂದ ಇಳಿದ ಬಳಿಕ ಇಮ್ರಾನ್ ಖಾನ್ ಹಲವು ಸಾರ್ವಜನಿಕ ರ್‍ಯಾಲಿಗಳನ್ನು ನಡೆಸಿದರು. ಅಲ್ಲೆಲ್ಲಾ ಪಕ್ಷದ ಹಾಗೂ ಸೇನೆಯ ನಡುವೆ ಜಟಾಪಟಿ ನಡೆದಿತ್ತು. ಇಮ್ರಾನ್ ಅವರಿಗೆ ರ್‍ಯಾಲಿಯೊಂದರಲ್ಲಿ ಗುಂಡೇಟು ಬಿದ್ದಿತ್ತು ಕೂಡ. ಸೇನೆ ಹಾಗೂ ಪಿಟಿಐ ಮಧ್ಯದ ವೈರತ್ವದ ಕುರಿತು ಜನರು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಜನರು ಪಿಟಿಐ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ಕೊಟ್ಟಿದ್ದಾರೆ. ಸೇನೆಯ ಆದ್ಯತೆಯನ್ನೂ ಮೀರಿ ತಮ್ಮ ಇಚ್ಛೆಯ ಪಕ್ಷಕ್ಕೆ ಜನ ಮತ ಹಾಕಿದ್ದಾರೆ. ಆದರೆ ಆ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ಅತಂತ್ರ ಸ್ಥಿತಿ ನಿರ್ಮಾಣವಾದ ಕಾರಣ ಪಾಕಿಸ್ತಾನದ ರಾಜಕೀಯ ಅಸ್ಥಿರತೆ ಮತ್ತೂ ಮುಂದುವರಿದಿದೆ.
ಚೀನಾ ಜೊತೆಗಿದ್ದರೆ ಸಾಕು...
ದೇಶದ ಒಳಗಿನ ರಾಜಕೀಯ ಅಸ್ಥಿರತೆಯ ಕಾರಣಕ್ಕಾಗಿಯೇ ಪಾಕಿಸ್ತಾನದ ಆರ್ಥಿಕತೆ ಜೊತೆಗೆ ಈ ದೇಶದ ವಿದೇಶಾಂಗ ನೀತಿಗಳೂ ಕೆಟ್ಟಿವೆ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತು. ಪಾಕಿಸ್ತಾನವು ಯಾವ ದೇಶವನ್ನು ಹೆಚ್ಚು ಅವಲಂಬಿಸುತ್ತದೆ ಎನ್ನುವುದರ ಮೇಲೆ ಅದರ ಬೆಳವಣಿಗೆ ನಿಂತಿದೆ. ಮೊದಲು ಪಾಕಿಸ್ತಾನವು ಅಮೆರಿಕವನ್ನು ಹೆಚ್ಚು ಅವಲಂಬಿಸಿತ್ತು. ಈಗ ಅದಕ್ಕಿಂತ ಹೆಚ್ಚು ಅವಲಂಬನೆಯು ಚೀನಾದ ಮೇಲಾಗಿದೆ. ತನ್ನ ಸಾಂಪ್ರದಾಯಿಕ ಸ್ನೇಹವಲಯದಲ್ಲಿದ್ದ ಯುಎಇ ಅನ್ನು ಕೂಡ ಪಾಕಿಸ್ತಾನ ದೂರ ಮಾಡಿಕೊಂಡಿದೆ.
ತನ್ನಲ್ಲಿ ಆಶ್ರಯ ಪಡೆದಿದ್ದ ಅಫ್ಗಾನಿಸ್ತಾನದ ಲಕ್ಷಗಟ್ಟಲೆ ಜನರನ್ನು ಪಾಕಿಸ್ತಾನವು ಗಡೀಪಾರು ಮಾಡಿ ವಾಪಸು ಅಫ್ಗಾನಿಸ್ತಾನದ ಗಡಿಗೆ ದೂಡಿದೆ. ಇದರಿಂದ ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಪಾಕಿಸ್ತಾನದೊಂದಿಗೆ ಗಡಿ ಜಗಳಕ್ಕೆ ಅದು ಮುಂದಾಗಿದೆ. ಬಲೂಚಿಸ್ತಾನ ನಮ್ಮದು ಎನ್ನುವ ಇರಾನ್‌ನ ಜಗಳ ಕೂಡ ಹೆಚ್ಚಾಗತೊಡಗಿದೆ. ಈ ಜಗಳಗಳು ಪಾಕಿಸ್ತಾನದ ಒಳಗೆ ಅಸ್ಥಿರತೆಯನ್ನು, ಭಯೋತ್ಪಾದನಾ ಚಟುವಟಿಕೆಯನ್ನು ಉಂಟುಮಾಡುತ್ತಿವೆ. ಭಾರತದೊಂದಿಗಿನ ಪಾಕಿಸ್ತಾನದ ಸಂಬಂಧವು ಹಳಸುತ್ತಲೇ ಸಾಗಿದೆ. ‘ಅರಬ್ ರಾಷ್ಟ್ರದವರ ಬಳಿ ಆರ್ಥಿಕ ಸಹಾಯ ಕೇಳಲು ಹೋದಾಗ ಅವಮಾನವಾಯಿತು’ ಎಂದು ಶೆಹಬಾಜ್ ಷರೀಫ್ ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.
ಚೀನಾ ಜೊತೆಗಿದ್ದರೆ ಸಾಕು. ಬೇರೆ ಯಾವ ದೇಶದ ಸ್ನೇಹ ಸಂಬಂಧವೂ ಯಾಕೆ ಬೇಕು – ಹೀಗೆ ಪಾಕಿಸ್ತಾನದ ವಿದೇಶಾಂಗ ನೀತಿಯನ್ನು ಒಂದು ಮಾತಿನಲ್ಲಿ ಬಣ್ಣಿಸಬಹುದು ಎನ್ನುವುದು ವಿದೇಶಾಂಗ ನೀತಿ ತಜ್ಞರ ಅಭಿಪ್ರಾಯ.
ಕುಸಿತದ ಹಾದಿಯಲ್ಲಿ ಆರ್ಥಿಕತೆ
ಪಾಕಿಸ್ತಾನದ ಆರ್ಥಿಕತೆ ಕುಸಿಯುತ್ತಲೇ ಇದೆ. ಅದು ದಿನೇ ದಿನೇ ಬಿಗಡಾಯಿಸುತ್ತಿದೆಯೇ ಹೊರತು, ಸುಧಾರಿಸುತ್ತಿಲ್ಲ ಎಂಬುದು ಜಾಗತಿಕ ಮಟ್ಟದ ಆರ್ಥಿಕ ತಜ್ಞರ ಅಭಿಮತ. ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿಗೆ ಅಲ್ಲಿನ ರಾಜಕೀಯ ಅಸ್ಥಿರತೆಯನ್ನೇ ಮೊದಲ ಹೊಣೆ ಮಾಡಬೇಕಾಗುತ್ತದೆ. ಅದರ ಜತೆಯಲ್ಲಿ ವಿದೇಶಾಂಗ ನೀತಿಯೂ ಆರ್ಥಿಕತೆ ಹದಗೆಡಲು ಅಷ್ಟೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಪಾಕಿಸ್ತಾನದ ಆರ್ಥಿಕತೆಯು ಸ್ವಾವಲಂಬಿ ಆಗಿದ್ದಕ್ಕಿಂತ ಬಾಹ್ಯ ನೆರವಿನಿಂದ ಚಲಾವಣೆಯಲ್ಲಿತ್ತು ಎಂಬುದನ್ನು ಅಲ್ಲಿನ ಆರ್ಥಿಕ ತಜ್ಞರೂ ಒಪ್ಪಿಕೊಳ್ಳು ತ್ತಾರೆ. ಸ್ವಾತಂತ್ರ್ಯಾನಂತರ ಆರ್ಥಿಕ ನೆರವಿಗೆ ಪಾಕಿಸ್ತಾನವು ಅಮೆರಿಕವನ್ನು ಆಶ್ರಯಿಸಿತ್ತು. ಈಚಿನ ದಶಕಗಳಲ್ಲಿ ಅಷ್ಟೇ ಪ್ರಮಾಣದಲ್ಲಿ ಚೀನಾವನ್ನು ಆಶ್ರಯಿಸಿದೆ. ಅಮೆರಿಕಕ್ಕೆ ಏಷ್ಯಾದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳಲು ಒಂದು ದೇಶಬೇಕಾಗಿತ್ತು ಮತ್ತು ಅದಕ್ಕಷ್ಟೇ ಪಾಕಿಸ್ತಾನವನ್ನು ಬಳಸಿಕೊಂಡಿತು. ಅಲ್ಲಿನ ಆರ್ಥಿಕತೆಯನ್ನು ಉತ್ತೇಜಿಸಲು ಅಮೆರಿಕ ಆದ್ಯತೆ ನೀಡಲಿಲ್ಲ. ಅಮೆರಿಕದ ಸೇನಾ ನೆಲೆಯಂತೆ ಬಳಕೆಯಾದುದರ ಪರಿಣಾಮವಾಗಿ ಪಾಕಿಸ್ತಾನವೂ, ಸೇನಾ ಬಲವನ್ನು ಹೆಚ್ಚಿಸಿಕೊಳ್ಳಲೇ ಆದ್ಯತೆ ನೀಡಿತು. ಅದೇ ಅದರ ಆರ್ಥಿಕತೆ ಕುಸಿತಕ್ಕೆ ಕಾರಣವಾಯಿತು ಎಂದು ‘ದಿ ಡಾನ್’ ವಿಶ್ಲೇಷಿಸಿದೆ.
ಪಾಕಿಸ್ತಾನದ ಆರ್ಥಿಕತೆಯ ಬಹುಪಾಲು ಕೊಡುಗೆ ಬರುವುದು ಜವಳಿ ಉದ್ಯಮದಿಂದ. ದೇಶದ ಒಟ್ಟು ಜಿಡಿಪಿಯಲ್ಲಿ ಜವಳಿಯದ್ದೇ ಶೇ 60ರಷ್ಟು ಪಾಲು. ಚೀನಾದ ‘ಒನ್ ಬೆಲ್ಟ್ ಒನ್ ರೋಡ್’ ಕಾರಿಡಾರ್ ಯೋಜನೆಯ ಭಾಗವಾದ ನಂತರ ಪಾಕಿಸ್ತಾನದ ಜವಳಿ ಉದ್ಯಮ ನೆಲಕಚ್ಚಿತು ಎಂದು ವಿಶ್ಲೇಷಿಸಲಾಗಿದೆ.
ಈ ಯೋಜನೆಯ ಭಾಗವಾಗಿ ಚೀನಾದ ಸರಕುಗಳು ಯಾವುದೇ ಸುಂಕವಿಲ್ಲದೆ ಪಾಕಿಸ್ತಾನದ ಮಾರುಕಟ್ಟೆಗೆ ಬಂದವು. ಸುಂಕವಿಲ್ಲದೇ ಇದ್ದ ಕಾರಣ ಕಡಿಮೆ ಬೆಲೆಗೆ ದೊರೆಯುತ್ತಿದ್ದ ಈ ವಸ್ತುಗಳಿಗೆ ಬೇಡಿಕೆ ಹೆಚ್ಚಾಯಿತು. ಸ್ಥಳೀಯ ಉತ್ಪನ್ನಗಳು ದುಬಾರಿಯಾಗಿದ್ದ ಕಾರಣ ಬೇಡಿಕೆ ಕಳೆದುಕೊಂಡವು. ಈ ಯೋಜನೆ ಆರಂಭಕ್ಕೂ ಮುನ್ನ ಪಾಕಿಸ್ತಾನದಲ್ಲಿ ಇದ್ದ ಬೃಹತ್ ಹತ್ತಿ ಗಿರಣಿಗಳು ಮತ್ತು ಸಿದ್ಧ ಉಡುಪು ಕಾರ್ಖಾನೆಗಳ ಸಂಖ್ಯೆ 5,000ದಷ್ಟು. ಆದರೆ ಯೋಜನೆ ಆರಂಭದಿಂದ ಈವರೆಗೆ ಅಂತಹ 1,600ಕ್ಕೂ ಹೆಚ್ಚು ಬೃಹತ್ ಉದ್ಯಮಗಳು ಬಾಗಿಲು ಹಾಕಿವೆ. ಇದು ಜವಳಿ ಉದ್ಯಮದ ಉದಾಹರಣೆ ಅಷ್ಟೆ. ಬೇರೆ ಉದ್ಯಮಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. 2022ರ ಭೀಕರ ನೆರೆ ಆರ್ಥಿಕತೆಯನ್ನು ಮತ್ತಷ್ಟು ಹದಗೆಡಿಸಿತು.
ರಾಜಕೀಯ ಅಸ್ಥಿರತೆ, ವಿದೇಶಿ ವಿನಿಮಯ ಮೀಸಲು ಕುಸಿತ, ಸಾಲ ತೀರಿಸುವ ಸಾಮರ್ಥ್ಯ ಕ್ಷೀಣಿಸಿರುವುದು ಎಲ್ಲವೂ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದ ಆರ್ಥಿಕ ನೆರವಿನ ಬಾಗಿಲುಗಳನ್ನು ಮುಚ್ಚಿವೆ. ದೇಶದ ಜಿಡಿಪಿ ಬೆಳವಣಿಗೆ ದರಶೇ 1ಕ್ಕಿಂತಲೂ ಕಡಿಮೆ ಮಟ್ಟಕ್ಕೆ ಕುಸಿದಿದೆ. ಈಗಿನ ಹಣದುಬ್ಬರದ ಪ್ರಮಾಣ ಶೇ 29ರಷ್ಟು ಇದೆ. ಇಂತಹ ಪರಿಸ್ಥಿತಿಯಲ್ಲಿ ಫಲಿತಾಂಶ ಘೋಷಣೆಯಾಗಿ ಹಲವು ವಾರ ಕಳೆದರೂ ಸುಸ್ಥಿರ ಸರ್ಕಾರ ರಚನೆಯಾಗಿಲ್ಲ. ಮಾರ್ಚ್ ಮೊದಲ ವಾರದ ವೇಳೆಗೆ ಈ ರಾಜಕೀಯ ಅಸ್ಥಿರತೆ ಕೊನೆಗೊಳ್ಳದೇ ಇದ್ದರೆ, ಐಎಂಎಫ್ ನೆರವೂ ನಿಂತುಹೋಗುತ್ತದೆ. ಅಂತಹದ್ದೊಂದು ಇಕ್ಕಟ್ಟಿನ ಸ್ಥಿತಿಯಲ್ಲಿ ಪಾಕಿಸ್ತಾನವಿದೆ.
ಚುನಾವಣಾ ಅಕ್ರಮ ಆರೋಪ: ಜನರ ಹೋರಾಟ
ಯಾರು ಸರ್ಕಾರ ರಚಿಸಬೇಕು ಎನ್ನುವ ಲೆಕ್ಕಾಚಾರ ನಡೆಯುತ್ತಿದ್ದರೆ, ‘ಸೋಲುವ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇನೆ. ಈ ಮಹಾ ಅಪರಾಧದಲ್ಲಿ ಮುಖ್ಯ ಚುನಾವಣಾ ಆಯುಕ್ತ ಹಾಗೂ ಮುಖ್ಯ ನ್ಯಾಯಮೂರ್ತಿಯೂ ಶಾಮೀಲಾಗಿದ್ದಾರೆ’ ಎಂದು ರಾವಲ್ಪಿಂಡಿಯ ಕಮಿಷನರ್ ಲಿಯಾಕತ್ ಅಲಿ ಚಟ್ಟಾ ಅವರು ಇದೇ 17ರಂದು (ಶನಿವಾರ) ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದರು. ಇದು ದೇಶದಲ್ಲಿ ರಾಜಕೀಯ ತಲ್ಲಣಕ್ಕೆ ಕಾರಣವಾಯಿತು. ‘13 ಕ್ಷೇತ್ರಗಳಲ್ಲಿ ಪಿಟಿಐ ಪಕ್ಷದ ಅಭ್ಯರ್ಥಿಗಳು ಸುಮಾರು 70 ಸಾವಿರ ಮತಗಳಿಂದ ಗೆಲ್ಲುವವರಿದ್ದರು. ಆ ಮತಗಳನ್ನು ಕುಲಗೆಡಿಸಿ, ಅವರನ್ನು ಸೋಲಿಸಲಾಯಿತು’ ಎಂದಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು. ಇದಕ್ಕೆ ಸಾಕ್ಷ್ಯಗಳನ್ನು ಒದಗಿಸಿ ಎಂದು ಚುನಾವಣಾ ಆಯೋಗ ಸವಾಲು ಎಸೆಯಿತು.
‘ಪಿಪಿಪಿ ಹಾಗೂ ಪಿಎಂಎಲ್‌ಎನ್ ಮಧ್ಯೆ ಮೈತ್ರಿಯ ಮಾತುಕತೆ ನಡೆಯುತ್ತಿದ್ದ ವೇಳೆಯಲ್ಲಿಯೇ ಜನರು ಬೀದಿಗಿಳಿದು ಪ್ರತಿಭಟಿಸಲು ಆರಂಭಿಸಿದರು. ‘ಖದೀಮರೆ ನಮ್ಮ ಮತವನ್ನು ಕದಿಯುವುದನ್ನು ನಿಲ್ಲಿಸಿ’ ಎಂದು ಫಲಕಗಳನ್ನು ಹಿಡಿದು ಪ್ರತಿಭಟಿಸತೊಡಗಿದರು. ಪಿಟಿಐ ಪಕ್ಷ ಕೂಡ ಹಲವು ಕಡೆ ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ನಡೆಸಿತು. ಇಸ್ಲಾಮಾಬಾದ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕುಟುಂಬ ಸಮೇತರಾಗಿ ಜನರು ಬೀದಿಗಿಳಿದು ಪ್ರತಿಭಟಿಸಿದರು.
ತಾನು ಚುನಾವಣಾ ಅಕ್ರಮ ಎಸಗಿದ್ದೇನೆ ಎಂದು ಕಮಿಷನರ್ ಒಬ್ಬರು ಬಹಿರಂಗವಾಗಿ ತಪ್ಪೊಪ್ಪಿಕೊಂಡಿದ್ದರೂ ಅವರ ಮೇಲೆ ಯಾವುದೇ ಕ್ರಮವನ್ನು ಇಲ್ಲಿಯವರೆಗೂ ಕೈಗೊಂಡಿಲ್ಲ. ಚುನಾವಣಾ ಆಯೋಗ ಹಾಗೂ ಮುಖ್ಯ ನ್ಯಾಯಮೂರ್ತಿಯು ಕಮಿಷನರ್ ಚಟ್ಟಾ ಅವರ ಆರೋಪವನ್ನು ಅಲ್ಲಗಳೆದಿದ್ದಾರೆ. ಕಮಿಷನರ್ ಒಬ್ಬರಿಗೆ ಈ ರೀತಿ ಅಕ್ರಮ ನಡೆಸಲು ಸಾಧ್ಯವೇ ಆಗುವುದಿಲ್ಲ ಎಂದು ಆಯೋಗ ಹೇಳಿಕೆ ನೀಡಿದೆ. ‘ಚಟ್ಟಾ ಅವರ ವಿರುದ್ಧ ಯಾವುದೇ ದೂರು ಬಂದಿಲ್ಲ. ಆದ್ದರಿಂದ ಅವರನ್ನು ಹೇಗೆ ಬಂಧಿಸಲು ಸಾಧ್ಯ’ ಎಂದು ಪೊಲೀಸರು ಪ್ರಶ್ನಿಸುತ್ತಾರೆ. ‘ಚಟ್ಟಾ ಅವರು ಮಾರ್ಚ್ 13ರಂದು ನಿವೃತ್ತರಾಗುವವರಿದ್ದರು. ನಂತರದ ತಮ್ಮ ರಾಜಕೀಯ ಜೀವನ ರೂಪಿಸಿಕೊಳ್ಳುವವರಿದ್ದರು. ಅದಕ್ಕಾಗಿ ಈ ರೀತಿ ಪ್ರಚಾರತಂತ್ರ ಅನುಸರಿಸಿದ್ದಾರೆ’ ಎಂದು ಪಿಎಂಎಲ್‌ಎನ್ ಹೇಳಿಕೆ ನೀಡಿದೆ.
ಆಧಾರ: ಪಿಟಿಐ, ರಾಯಿಟರ್ಸ್, ದಿ ಡಾನ್ ಪತ್ರಿಕೆ, ಬಿಬಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.