ADVERTISEMENT

ಆಳ–ಅಗಲ: ವಿದೇಶಿ ವಿನಿಮಯ ಮೀಸಲು ಇಳಿಕೆ

​ಪ್ರಜಾವಾಣಿ ವಾರ್ತೆ
Published 8 ಮೇ 2022, 22:45 IST
Last Updated 8 ಮೇ 2022, 22:45 IST
   

ದೇಶದ ವಿದೇಶಿ ವಿನಿಮಯ ಮೀಸಲು 10 ವಾರಗಳಿಂದ ಸತತವಾಗಿ ಇಳಿಕೆಯಾಗುತ್ತಿದೆ. ಏಳು ತಿಂಗಳ ಅವಧಿಯಲ್ಲಿ ಒಟ್ಟು ವಿದೇಶಿ ವಿನಿಮಯ ಮೀಸಲಿನಲ್ಲಿ ₹2.39 ಲಕ್ಷ ಕೋಟಿಯಷ್ಟು ಕುಸಿದಿದೆ. ಇದು ಶೇ 5ರಷ್ಟು ಕುಸಿತ. ವಿದೇಶಿ ವಿನಿಮಯ ಮೀಸಲನ್ನು ಜಾಗತಿಕ ವಿದ್ಯಮಾನಗಳು ಮತ್ತು ದೇಶದೊಳಗಿನ ಬೆಳವಣಿಗೆಗಳು ಪ್ರಭಾವಿಸುತ್ತವೆ. ಇವೆಲ್ಲವುಗಳ ಒಟ್ಟಾರೆ ಪರಿಣಾಮವಾಗಿ ವಿದೇಶಿ ವಿನಿಮಯ ಮೀಸಲಿನಲ್ಲಿ ಏರಿಳಿತವಾಗುತ್ತದೆ.

2021ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಈವರೆಗಿನ ಅತ್ಯಂತ ಗರಿಷ್ಠಮಟ್ಟಕ್ಕೆ ತಲುಪಿತ್ತು. 2021ರ ಅಕ್ಟೋಬರ್ ಅಂತ್ಯದ ವೇಳೆಗೆ ದೇಶದ ವಿದೇಶಿ ವಿನಿಮಯ ಮೀಸಲು ₹48.07 ಲಕ್ಷ ಕೋಟಿಗೆ ತಲುಪಿತ್ತು. ಆ ಮೂಲಕ ಭಾರತವು ವಿಶ್ವದ ಅತ್ಯಂತ ದೊಡ್ಡ ವಿದೇಶಿ ವಿನಿಮಯ ಮೀಸಲುಗಳಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತ್ತು. ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಆಮದು ಪ್ರಮಾಣ ಕಡಿಮೆ ಯಾಗಿದ್ದರಿಂದ ರಫ್ತು ಮೌಲ್ಯ ಮತ್ತು ಆಮದು ಮೌಲ್ಯದ ನಡುವಣ ಅಂತರ ಕಡಿಮೆಯಾಗಿತ್ತು. ಈ ಕಾರಣದಿಂದ ಮೀಸಲಿನ ಮೊತ್ತವು ಸಾರ್ವಕಾಲಿಕ ಗರಿಷ್ಠಮಟ್ಟಕ್ಕೆ ಏರಿಕೆಯಾಗಿತ್ತು. ಆದರೆ ನಂತರದ ತಿಂಗಳುಗಳಲ್ಲೇ ಮೀಸಲು ಕುಸಿತದ ಹಾದಿ ಹಿಡಿದಿತ್ತು.‌

2022ರ ಜನವರಿ ಮತ್ತು ಫೆಬ್ರುವರಿಯಲ್ಲಿ ಮೀಸಲಿನ ಮೊತ್ತ ಸ್ವಲ್ಪ ಏರಿಕೆಯಾಗಿತ್ತು. ಆದರೆ, ಮಾರ್ಚ್‌ನಲ್ಲಿ ಭಾರಿ ಕುಸಿತಕ್ಕೆ ಸಾಕ್ಷಿಯಾಯಿತು. ಮಾರ್ಚ್‌ ಅಂತ್ಯದ ವೇಳೆಗೆ ₹1.63 ಲಕ್ಷ ಕೋಟಿಯಷ್ಟು ಕುಸಿತ ಕಂಡಿತ್ತು. ಇದು ಒಂದು ವರ್ಷದ ಅವಧಿಯಲ್ಲಿನ ಅತ್ಯಂತ ಗರಿಷ್ಠ ಕುಸಿತ. ವಿಶ್ವದ ಅತ್ಯಂತ ದೊಡ್ಡ ವಿದೇಶಿ ವಿನಿಮಯ ಮೀಸಲು ಪಟ್ಟಿಯಲ್ಲಿ ಭಾರತವು ಈಗ 5ನೇ ಸ್ಥಾನದಲ್ಲಿದೆ.

ADVERTISEMENT

ಕುಸಿತಕ್ಕೆ ಕಾರಣ

ಈ ವರ್ಷದ ಆರಂಭದಿಂದಲೂ ಭಾರತದ ವಿದೇಶಿ ವಿನಿಮಯ ಮೀಸಲಿನ ಮೊತ್ತದಲ್ಲಿ ಏರಿಳಿತವಾಗುತ್ತಿದೆ. ಇದಕ್ಕೆ ಜಾಗತಿಕ ವಿದ್ಯಮಾನಗಳೇ ಕಾರಣ ಎಂದು ಹೇಳಲಾಗುತ್ತಿದೆ. ಜತೆಗೆ, ಕೆಲವು ಆಂತರಿಕ ವಿದ್ಯಮಾನಗಳು ಇದನ್ನು ಪ್ರಭಾವಿಸಿವೆ. ಕೋವಿಡ್‌ನ ನಂತರ ವಿಶ್ವದ ಎಲ್ಲೆಡೆ ಆರ್ಥಿಕತೆ ಚೇತರಿಕೆಯ ಹಾದಿಗೆ ಮರಳಿದೆ. ಇದರ ಜತೆಯಲ್ಲಿಯೇ ವಿಶ್ವದ ಪ್ರಮುಖ ದೇಶಗಳಲ್ಲಿ ಹಣದುಬ್ಬರ ಏರಿಕೆಯಾಗಿದೆ. ಹಣದುಬ್ಬರ ನಿಯಂತ್ರಣ ಕ್ರಮವಾಗಿ ಹಲವು ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಬಡ್ಡಿದರವನ್ನು ಏರಿಕೆ ಮಾಡಿವೆ. ಇದರ ಪರಿಣಾಮವಾಗಿ ಭಾರತದಲ್ಲಿ ಹೂಡಿಕೆಯಾಗಿದ್ದ ವಿದೇಶಿ ಬಂಡವಾಳವನ್ನು ಹಿಂತೆಗೆಯಲಾಗುತ್ತಿದೆ.

ಜನವರಿಯಿಂದ ಏಪ್ರಿಲ್‌ ಅಂತ್ಯದವರೆಗೆ ಒಟ್ಟು ₹1.32 ಲಕ್ಷ ಕೋಟಿ ಮೊತ್ತದಷ್ಟು ವಿದೇಶಿ ಬಂಡವಾಳ ಹೂಡಿಕೆಯನ್ನು ಹಿಂತೆಗೆಯಲಾಗಿದೆ. ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತದ ಬಂಡವಾಳ ಹೊರಹೋದ ಕಾರಣ, ಅಮೆರಿಕದ ಡಾಲರ್‌ ಎದುರು ರೂಪಾಯಿಯ ಮೌಲ್ಯ ಕುಸಿದಿದೆ. ವಿಶ್ವದ ಬಹುತೇಕ ವಾಣಿಜ್ಯ ಚಟುವಟಿಕೆಗಳು ಅಮೆರಿಕದ ಡಾಲರ್‌ ಮೂಲಕ ನಡೆಯುವುದರಿಂದ, ಬಹುತೇಕ ದೇಶಗಳು ತಮ್ಮ ವಿದೇಶಿ ವಿನಿಮಯ ಮೀಸಲನ್ನು ಅಮೆರಿಕದ ಡಾಲರ್‌ನಲ್ಲಿ ನಿರ್ವಹಿಸುತ್ತವೆ. ಭಾರತವೂ ಇದಕ್ಕೆ ಹೊರತಲ್ಲ. ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿದ ಕಾರಣ, ವಿದೇಶಿ ವಿನಿಮಯ ಮೀಸಲಿನ ಮೌಲ್ಯ ಮತ್ತು ಮೊತ್ತ ಎರಡೂ ಇಳಿಕೆಯಾಗಿದೆ.

ರಷ್ಯಾ–ಉಕ್ರೇನ್‌ ಯುದ್ಧವು ವಿಶ್ವದ ಎಲ್ಲಾ ಮಾರುಕಟ್ಟೆಗಳನ್ನು ಪ್ರಭಾವಿಸಿದೆ. ಈ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಮತ್ತು ಅಡುಗೆ ಎಣ್ಣೆಯ ದರ ವಿಪರೀತ ಮಟ್ಟದಲ್ಲಿ ಏರಿಕೆಯಾಗಿದೆ. ಭಾರತವು ಎರಡೂ ರೀತಿಯ ತೈಲಗಳಿಗಾಗಿ ಆಮದನ್ನು ಬಹುವಾಗಿ ಅವಲಂಬಿಸಿದೆ. ರೂಪಾಯಿ ಮೌಲ್ಯ ಕುಸಿದಿರುವ ಕಾರಣ, ಆಮದಿಗೆ ಪಾವತಿಸಬೇಕಿರುವ ಮೊತ್ತವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಚ್ಚಾ ತೈಲ ಮತ್ತು ಅಡುಗೆ ಎಣ್ಣೆಯ ಆಮದಿಗೆ ಹೆಚ್ಚಿನ ಮೊತ್ತ ವೆಚ್ಚ ಮಾಡುವ ಅನಿವಾರ್ಯ ಎದುರಾಗಿದೆ. ಇದರಿಂದಲೂ ದೇಶದ ವಿದೇಶಿ ವಿನಿಮಯ ಮೀಸಲು ಕರಗಿದೆ.

ಪರಿಣಾಮಗಳು

ವಿದೇಶಿ ವಿನಿಮಯ ಮೀಸಲು ಮೊತ್ತ ಇಳಿಕೆಯಾಗುವುದು ದೇಶದ ಆರ್ಥಿಕತೆಯನ್ನು ನೇರವಾಗಿ ಪ್ರಭಾವಿಸುತ್ತದೆ. ರೂಪಾಯಿ ಮೌಲ್ಯ ಕುಸಿತ ಮತ್ತು ವಿದೇಶಿ ವಿನಿಮಯ ಮೀಸಲು ಕುಸಿತ ಪರಸ್ಪರ ತಳಕು ಹಾಕಿಕೊಂಡಿರುವ ಕಾರಣ, ದೇಶದ ಆಮದು ಮತ್ತು ರಫ್ತನ್ನು ಈ ವಿದ್ಯಮಾನವು ಪ್ರಭಾವಿಸುತ್ತದೆ.

ರೂಪಾಯಿ ಮೌಲ್ಯ ಕುಸಿದಿರುವ ಕಾರಣ ದೇಶವು ಆಮದು ಮಾಡಿಕೊಳ್ಳುವ ಪ್ರತಿ ಸರಕು ಮತ್ತು ಸೇವೆಗೆ ಹೆಚ್ಚಿನ ಮೊತ್ತವನ್ನು ವೆಚ್ಚ ಮಾಡಬೇಕಾಗುತ್ತದೆ. ಇದರಿಂದ ವಿನಿಮಯ ಮೀಸಲಿನ ಮೊತ್ತ ಮತ್ತಷ್ಟು ಕಡಿಮೆಯಾಗುತ್ತದೆ. ವಿದೇಶಿ ವ್ಯಾಪಾರವನ್ನು ಸರಿದೂಗಿಸಲು ರಫ್ತು ಪ್ರಮಾಣವನ್ನು ಹೆಚ್ಚಿಸುವುದೂ ನಿರೀಕ್ಷಿತ ಪರಿಣಾಮಗಳನ್ನು ಬೀರುವುದಿಲ್ಲ. ಏಕೆಂದರೆ ಡಾಲರ್ ಎದುರು ರೂಪಾಯಿಯ ಮೌಲ್ಯ ಕುಸಿದಿರುವ ಕಾರಣ, ರಫ್ತು ಮಾಡಲಾದ ಸರಕು ಮತ್ತು ಸೇವೆಯಿಂದ ದೊರೆಯುವ ಹಣದ ಮೌಲ್ಯವು ಕಡಿಮೆ ಇರುತ್ತದೆ. ಇದರಿಂದ ದೇಶದ ಒಟ್ಟಾರೆ ವ್ಯಾಪಾರ ಕೊರತೆ (ರಫ್ತಿನಿಂದ ದೊರಕುವ ಮೊತ್ತಕ್ಕಿಂತ ಆಮದಿಗೆ ಹೆಚ್ಚಿನ ಮೊತ್ತ ಪಾವತಿಸಬೇಕಾದ ಸ್ಥಿತಿ) ಹೆಚ್ಚಾಗುತ್ತದೆ. ಇದರಿಂದ ವಿದೇಶಿ ವಿನಿಮಯ ಮೀಸಲು ಮತ್ತಷ್ಟು ಕುಸಿಯುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.

ವಿದೇಶಿ ವಿನಿಮಯ ಮೀಸಲಿನ ಕುಸಿತದಿಂದ ಆಮದು ಸರಕುಗಳ ಖರೀದಿಗೆ ಲಭ್ಯವಿರುವ ಮೊತ್ತ ಕಡಿಮೆಯಾಗುತ್ತದೆ. ಲಭ್ಯವಿರುವ ಮೊತ್ತವನ್ನೇ ಎಲ್ಲದಕ್ಕೂ ವಿನಿಯೋಗಿಸಬೇಕಿರುವ ಕಾರಣ, ಅಗತ್ಯ ಪ್ರಮಾಣದ ಸರಕುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ಅಂತಹ ಸರಕುಗಳ ಕೊರತೆ ಉಂಟಾಗುತ್ತದೆ. ಪರಿಣಾಮವಾಗಿ ಆ ಸರಕುಗಳ ಬೆಲೆ ಏರಿಕೆಯಾಗುತ್ತದೆ.

ಕರಗುತ್ತಿದೆ ಮೀಸಲು ನಿಧಿ

ಅತಿಹೆಚ್ಚು ವಿದೇಶಿ ವಿನಿಮಯ ಮೀಸಲು ಹೊಂದಿರುವ ಚೀನಾ ಸೇರಿದಂತೆ ಬಹುತೇಕ ದೇಶಗಳ ವಿದೇಶಿ ವಿನಿಮಯ ಮೀಸಲು ಕರಗುತ್ತಿದೆ. ಭಾರತದ ಅಕ್ಕಪಕ್ಕದ ದೇಶಗಳಾದ ನೇಪಾಳ, ಶ್ರೀಲಂಕಾದಲ್ಲಿ ವಿದೇಶಿ ವಿನಿಮಯ ಮೀಸಲು ಬಿಕ್ಕಟ್ಟು ಉಂಟಾಗಿದೆ. 2022ರ ಫೆಬ್ರುವರಿಗೆ ಹೋಲಿಸಿದರೆ, ಮಾರ್ಚ್‌ ತಿಂಗಳಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ.

ಚೀನಾದ ವಿದೇಶಿ ವಿನಿಮಯ ಮೀಸಲು ಮೊತ್ತವು ₹244 ಲಕ್ಷ ಕೋಟಿಯಿಂದ ₹240 ಲಕ್ಷ ಕೋಟಿಗೆ ಇಳಿಕೆಯಾಗಿದೆ. ನಿಧಾನ ಆರ್ಥಿಕ ಪ್ರಗತಿ, ಕೋವಿಡ್‌ನ ಹೊಸ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಚೀನಾದ ಹಲವು ನಗರಗಳಲ್ಲಿ ವಿಧಿಸಲಾಗಿರುವ ಲಾಕ್‌ಡೌನ್‌ ಕಾರಣಗಳಿಂದ ವಿದೇಶಿ ಹೂಡಿಕೆದಾರರು ಹಿಂದೆ ಸರಿಯುತ್ತಿದ್ದಾರೆ.ಇದರ ಜೊತೆಗೆ ಚೀನಾದ ಕರೆನ್ಸಿ ಯುವಾನ್ ಮೌಲ್ಯವು ಅಮೆರಿಕದ ಡಾಲರ್ ಎದುರು ಶೇ 4ರಷ್ಟು ಕುಸಿತ ಕಂಡಿರುವುದು ಮೀಸಲು ಇಳಿಕೆಗೆ ಕಾರಣ ಎನ್ನಲಾಗಿದೆ.

ಇತಿಹಾಸದಲ್ಲೇ ಅತ್ಯಂತ ಭೀಕರ ಆರ್ಥಿಕ ದುಃಸ್ಥಿತಿ ಎದುರಿಸುತ್ತಿರುವ ಶ್ರೀಲಂಕಾದ ವಿದೇಶಿ ವಿನಿಮಯ ಮೀಸಲು ಅಕ್ಷರಶಃ ಪಾತಾಳಕ್ಕೆ ತಲುಪಿದೆ. ದೇಶದ ಖಜಾನೆಯಲ್ಲಿ ಕೇವಲ ₹375 ಕೋಟಿ (5 ಕೋಟಿ ಡಾಲರ್) ಮೀಸಲು ಮೊತ್ತ ಇದೆ. ಜನರಿಗೆ ತೀರಾ ಅಗತ್ಯವಾಗಿ ಬೇಕಿರುವ ಆಹಾರ, ಇಂಧನ, ಔಷಧಗಳನ್ನು ಇಷ್ಟು ಮೊತ್ತದಲ್ಲಿ ಖರೀದಿಸುವುದು ಅಸಾಧ್ಯ. ಸಾಲ ನೀಡುವಂತೆ ಐಎಂಎಫ್‌ಗೆ ಶ್ರೀಲಂಕಾ ಮನವಿ ಮಾಡಿದೆ. 2021ರಿಂದ ಇಲ್ಲಿಯವರೆಗೆ ಎರಡೂವರೆ ಪಟ್ಟು ವಿದೇಶಿ ವಿನಿಮಯ ಮೀಸಲು ಮೊತ್ತವನ್ನು ಖರ್ಚು ಮಾಡಿದ್ದರಿಂದ, ಶ್ರೀಲಂಕಾ ತೀವ್ರ ಮೀಸಲು ಕೊರತೆ ಎದುರಿಸುತ್ತಿದೆ ಎಂದು ಅಲ್ಲಿನ ಹಣಕಾಸು ಸಚಿವ ಅಲಿ ಸಾಬ್ರೆ ಅವರು ಹೇಳಿದ್ದಾರೆ.

ಪಕ್ಕದ ನೇಪಾಳದಲ್ಲೂ ವಿದೇಶಿ ವಿನಿಮಯ ಮೀಸಲು ಕರಗುತ್ತಿದೆ. ಇಲ್ಲಿ 2021ರ ಜುಲೈನಿಂದ ಇಳಿಕೆ ಶುರುವಾಗಿದೆ. ಆಮದು ಹೆಚ್ಚಳ, ರಫ್ತು ಕುಂಠಿತ ಹಾಗೂ ವಿದೇಶಿ ಗಳಿಕೆಯಲ್ಲಿ ಹಿನ್ನಡೆಯಾಗಿರುವ ಕಾರಣ, ಮೀಸಲು ಅನುಪಾತವು ಕುಸಿಯಲಾರಂಭಿಸಿದೆ. ಮೀಸಲು ಉಳಿತಾಯ ಮಾಡುವ ಉದ್ದೇಶದಿಂದ ಐಷಾರಾಮಿ ಉಪಕರಣಗಳು, ಮದ್ಯ, ತಂಬಾಕು ಮೊದಲಾದ ಉತ್ಪನ್ನಗಳನ್ನು ವಿದೇಶಗಳಿಂದ ತರಿಸಿಕೊಳ್ಳಲು ನಿರ್ಬಂಧ ವಿಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೀಸಲು ಉಳಿತಾಯಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಶ್ರೀಲಂಕಾದ ಪರಿಸ್ಥಿತಿಗೆ ತಲುಪಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ.

ಆಧಾರ: ಭಾರತೀಯ ರಿಸರ್ವ್ ಬ್ಯಾಂಕ್‌ ವಿದೇಶಿ ವಿನಿಮಯ ಮೀಸಲು ವರದಿಗಳು, ಪಿಟಿಐ, ರಾಯಿಟರ್ಸ್, ಎಎಫ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.