ADVERTISEMENT

ಆಳ–ಅಗಲ | ಚುನಾವಣಾ ಚಾಣಾಕ್ಷರಿಗೆ ಬಲು ಬೇಡಿಕೆ

ಸುಕೃತ ಎಸ್.
Published 23 ಏಪ್ರಿಲ್ 2024, 21:49 IST
Last Updated 23 ಏಪ್ರಿಲ್ 2024, 21:49 IST
   
ಚುನಾವಣೆ ಬಂತೆಂದರೆ, ಪಕ್ಷಗಳ ಕಾರ್ಯಾಲಯಗಳು ಗಿಜಿ ಗಿಜಿ ಎನ್ನುತ್ತವೆ. ಚುನಾವಣೆ ಮುಗಿಯುವವರೆಗೂ ಇದೇ ಸ್ಥಿತಿ. ಚುನಾವಣೆಯಲ್ಲಿ ಪಕ್ಷದ ಕಾರ್ಯತಂತ್ರ ಏನಾಗಿರಬೇಕು, ಪ್ರಣಾಳಿಕೆ ಏನು, ಜನರು ಏನು ಬಯಸುತ್ತಿದ್ದಾರೆ... ಇವೇ ಮಾತುಕತೆಗಳು. ಆದರೆ, ಈಗ ಈ ಎಲ್ಲ ಚರ್ಚೆಗಳು ಈಗ ಒಂದು ಕೋಣೆಗೆ ಸೀಮಿತವಾಗಿವೆ. ಒಂದು ಲ್ಯಾಪ್‌ಟಾಪ್‌ಗೆ ಸೀಮಿತವಾಗಿವೆ. ಪಕ್ಷಗಳ ಚುನಾವಣಾ ಕಾರ್ಯತಂತ್ರ ರೂಪಿಸುವುದು ಪಕ್ಷಗಳ ನಾಯಕರಾಗಲಿ, ಕಾರ್ಯಕರ್ತರಾಗಲಿ ಅಲ್ಲ. ಬದಲಿಗೆ, ಚುನಾವಣಾ ಕಾರ್ಯತಂತ್ರ ರೂಪಿಸುವ ಸಂಸ್ಥೆಗಳು. ಇವುಗಳೇ ರಾಜಕೀಯ ಪಕ್ಷಗಳ ಗೆಲುವಿನ ಜೀವಾಳವಾಗಿವೆ. ಭಾರತದ ಚುನಾವಣೆ ರಾಜಕೀಯ ತಂತ್ರಗಾರಿಕೆಯನ್ನೇ ಈ ಸಂಸ್ಥೆಗಳು ಬದಲಾಯಿಸಿ ಬಿಟ್ಟಿವೆ...

‘ನಿಮ್ಮ ಬಳಿ ಶಕ್ತಿಯುತ ಸಂಕಥನವೊಂದಿರಬೇಕು. ನಿಮ್ಮ ವಿರೋಧಿಗಳಿಗಲ್ಲ, ನಿಮಗೇ ಯಾಕೆ ಜನ ಮತ ಹಾಕಬೇಕು ಎಂಬುದನ್ನು ಒತ್ತಿ ಹೇಳುವುದಕ್ಕೆ, ಜನರು ನಂಬುವಂಥ ಕತೆಗಳನ್ನು ಹೇಳಬೇಕು. ನಿಮ್ಮ ಬಳಿ ಇಂಥದ್ದೊಂದು ಕತೆ ಇದ್ದರೆ, ಜನರು ನಿಮಗೆ ಮತ ನೀಡುತ್ತಾರೆ’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ, ಪ್ರೊಫೆಸರ್‌ ಕೆ. ನಾಗೇಶ್ವರ್‌. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಎರಡು ಬಾರಿ ಇವರು ಗೆಲುವು ಸಾಧಿಸಿದ್ದಾರೆ.

ನಾಗೇಶ್ವರ್‌ ಅವರು ಹೇಳಿದ ಸಂಕಥನಗಳನ್ನು ಈ ಮೊದಲು ರಾಜಕೀಯ ಪಕ್ಷಗಳೇ ರೂಪಿಸುತ್ತಿದ್ದವು. ತಮ್ಮ ಆಡಳಿತದಿಂದ, ತಮ್ಮ ನಡವಳಿಕೆಯಿಂದ, ತಮ್ಮದೇ ಕಾರ್ಯಕರ್ತರ ಪಡೆಗಳಿಂದ... ಆದರೆ, ಈಗ ಇಂಥ ಸಂಕಥನಗಳನ್ನು ರೂಪಿಸುವುದು ರಾಜಕೀಯ ಕಾರ್ಯತಂತ್ರ ರೂಪಿಸಲು ಸಲಹೆ, ಸಹಕಾರ ನೀಡುವಂಥ ಸಂಸ್ಥೆಗಳು. 2014ರ ಲೋಕಸಭಾ ಚುನಾವಣೆ ವೇಳೆಗೆ ದೇಶದಲ್ಲಿ ಇಂಥ 150 ಸಂಸ್ಥೆಗಳು ಕಾರ್ಯಾರಂಭ ಮಾಡಿದ್ದವು. 2024ರ ಹೊತ್ತಿಗೆ ಇವುಗಳ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ರಾಜಕೀಯ ಪಕ್ಷಗಳು, ರಾಜಕಾರಣಿಗಳು ಇಂಥ ಸಂಸ್ಥೆಗಳಿಗೆ ಕೋಟಿ ಕೋಟಿ ಹಣ ನೀಡಿ, ಚುನಾವಣೆಯಲ್ಲಿ ಗೆಲುವಿನ ಹಾದಿ ಹಿಡಿದಿದ್ದಾರೆ, ಈ ಬಾರಿಯೂ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಇದು ಭಾರತದಲ್ಲಿನ ವಿದ್ಯಮಾನ ಮಾತ್ರವಲ್ಲ. ಎಲ್ಲ ದೇಶಗಳ ದೊಡ್ಡ ದೊಡ್ಡ ನಾಯಕರು ಚುನಾವಣೆ ವೇಳೆಯಲ್ಲಿ ಇಂಥ ಸಂಸ್ಥೆಗಳ ನೆರವು ಪಡೆದುಕೊಂಡಿದ್ದಾರೆ. ಅಮೆರಿಕದಂಥ ದೇಶಗಳಲ್ಲಿ ಇದು ಹೊಸ ವಿಚಾರವೇನೂ ಅಲ್ಲ. ಆದರೆ, ಭಾರತದ ಮಟ್ಟಿಗೆ ಇಂಥ ಸಂಸ್ಥೆಗಳ ಕಾರ್ಯಾಚರಣೆ ಆರಂಭವಾದದ್ದು 2014ರಲ್ಲಿ. ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಅವರನ್ನು ‘ಅಭಿವೃದ್ಧಿಯ ಹರಿಕಾರ’ ಎಂದು ಬಿಂಬಿಸುವುದರ ಮೂಲಕವಾಗಿ. ಅಲ್ಲಿಂದೀಚೆಗೆ, ಕಾಂಗ್ರೆಸ್‌, ಟಿಎಂಸಿ, ಎಎಪಿ ಸೇರಿದಂತೆ ಹಲವು ಪಕ್ಷಗಳು ಇಂತಹ ಸಂಸ್ಥೆಗಳ ಮೊರೆ ಹೋಗಿವೆ. ರಾಜಕೀಯ ಪಕ್ಷ ಮಾತ್ರವಲ್ಲದೆ, ರಾಜಕಾರಣಿಗಳಿಗೂ ಇಂಥ ಸಂಸ್ಥೆಗಳು ನೆರವು ನೀಡುತ್ತವೆ.

ADVERTISEMENT
‘ಇಮೇಜ್‌ ಬಿಲ್ಡಿಂಗ್‌’ ಕಾರ್ಯತಂತ್ರ: ಏನು, ಎತ್ತ?

ಆಗಷ್ಟೇ ಐಐಟಿ, ಐಐಎಂ ಸೇರಿದಂತೆ ಇನ್ನಿತರ ಉನ್ನತ ಶಿಕ್ಷಣಗಳನ್ನು ಮುಗಿಸಿದ ಯುವಕರನ್ನೇ ಇಂಥ ಸಂಸ್ಥೆಗಳು ತಮ್ಮೊಳಗೆ ಸೇರಿಸಿಕೊಳ್ಳುತ್ತವೆ. ಈ ಉದ್ಯಮ ಬಲ್ಲವರು ಹೇಳುವಂತೆ, 25–26 ವರ್ಷ ಯುವಕರನ್ನೇ ಇಂಥ ಸಂಸ್ಥೆಗಳು ಆಯ್ಕೆ ಮಾಡಿಕೊಳ್ಳುತ್ತವೆ. ಇದಕ್ಕೆ ಹಲವು ಕಾರಣಗಳಿವೆ. ಒಂದು, ಅವರಿಗೆ ಕೆಲಸ ಮಾಡುವ ಉತ್ಸಾಹ ಇರುತ್ತದೆ. ಎರಡನೆಯದು ಮತ್ತು ಮುಖ್ಯವಾದ ಕಾರಣವೇನೆಂದರೆ, ಇಂಥ ಯುವಕರಿಗೆ ಬಹುಪಾಲು ಯಾವುದೇ ಪಕ್ಷದ ಸಿದ್ಧಾಂತದ ಬಗ್ಗೆ ಒಲವು ಇರುವುದಿಲ್ಲ ಮತ್ತು ಬದ್ಧರೂ ಆಗಿರುವುದಿಲ್ಲ. ಹೀಗಾಗಿಯೇ ಇಂಥ ಸಂಸ್ಥೆಗಳಿಗೆ ರಾಜಕೀಯ ಪಕ್ಷಗಳ, ಅವುಗಳ ಸಿದ್ಧಾಂತಗಳ ಗೊಡವೆ ಇರುವುದಿಲ್ಲ. ಇಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಅಗತ್ಯವಾಗಿ ಬೇಕಾದ ಗುಣ ಇದು. ಏಕೆಂದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿಗಾಗಿ ಒಂದು ಸಂಸ್ಥೆ ಕೆಲಸ ಮಾಡುತ್ತಿದೆ ಎಂದಾದರೆ, ಅದೇ ಸಂಸ್ಥೆಯು ಅದೇ ಕಾಲಘಟ್ಟದಲ್ಲಿ ಆಂಧ್ರ ಪ್ರದೇಶದಲ್ಲಿ ಬಿಜೆಪಿಯ ವಿರೋಧಿ ಪಕ್ಷಕ್ಕೂ ಕೆಲಸ ಮಾಡಿಕೊಡುತ್ತಿರುತ್ತದೆ.

ಪಕ್ಷಗಳ ಕುರಿತು, ‌ವ್ಯಕ್ತಿಗಳ ಕುರಿತು ಸಂಕಥನಗಳನ್ನು ರೂಪಿಸುವುದು ಸುಲಭದ ಮಾತಲ್ಲ. ಅದಕ್ಕಾಗಿ ಇಂಥ ಸಂಸ್ಥೆಗಳು ಹಲವು ತಿಂಗಳು ಮನೆ ಮನೆ ಸಮೀಕ್ಷೆ ನಡೆಸುತ್ತವೆ. ಜನರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತವೆ. ಜನರ ಒಲವು–ನಿಲುವುಗಳ ಸಂಪೂರ್ಣ ಮಾಹಿತಿಗಳನ್ನು ಕಲೆ ಹಾಕಿದ ನಂತರವಷ್ಟೇ ಕಾರ್ಯತಂತ್ರ ರೂಪಿಸುತ್ತವೆ. ಪಕ್ಷಗಳ ಕಾರ್ಯಕರ್ತರ ಪಡೆಗಳನ್ನು ಒಗ್ಗೂಡಿಸುತ್ತವೆ. ಒಂದು ಕೇಂದ್ರೀಕೃತ ವ್ಯವಸ್ಥೆಯನ್ನು ರೂಪಿಸಿ ಕೊಳ್ಳುತ್ತವೆ. ಒಂದರ್ಥದಲ್ಲಿ ಇಡೀ ಪಕ್ಷದ ಕಾರ್ಯ ಚಟುವಟಿಕೆಗಳನ್ನು ಅಥವಾ ರಾಜಕಾರಣಿಯೊಬ್ಬರ ಕಾರ್ಯಪಡೆಗಳನ್ನು ಸಂಪೂರ್ಣ ತನ್ನ ತೆಕ್ಕೆಗೆ ತಂದುಕೊಳ್ಳುತ್ತವೆ. ‘ಯಾವ ಸಂಸ್ಥೆಯ ಸಮೀಕ್ಷೆಯ ಮಾದರಿಯು ಹೆಚ್ಚು ಕ್ರಿಯಾಶೀಲವಾಗಿಯೂ, ಹೆಚ್ಚು ಸ್ಪಷ್ಟವಾಗಿಯೂ ಇರುತ್ತದೆಯೋ ಅದರ ಕಾರ್ಯತಂತ್ರವೂ ಫಲಿಸುತ್ತದೆ’ ಎನ್ನುತ್ತಾರೆ ಉದ್ಯಮದ ತಜ್ಞರು.

ಪ್ರಣಾಳಿಕೆ ಹೇಗಿರಬೇಕು, ಪಕ್ಷದ ನಾಯಕನು ಯಾರೊಂದಿಗೆ ಮಾತನಾಡಬೇಕು, ಭಾಷಣದಲ್ಲಿ ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು ಎಲ್ಲವನ್ನೂ ಇಂಥ ಸಂಸ್ಥೆಗಳು ನಿರ್ಧರಿಸುತ್ತವೆ. ತಮ್ಮ ಸಮೀಕ್ಷೆಗಳ ಆಧಾರದಲ್ಲಿಯೇ ಇಂಥ ಕಾರ್ಯಚಟುವಟಿಕೆಗಳನ್ನು ಸಂಸ್ಥೆಗಳು ರೂಪಿಸುತ್ತವೆ. 

ಬದಲಾದ ಕಾರ್ಯತಂತ್ರ

ಚುನಾವಣೆಯಲ್ಲಿ ಗೆದ್ದ ರಾಜಕಾರಣಿಯು ಐದು ವರ್ಷ ತನ್ನ ಕ್ಷೇತ್ರದಲ್ಲಿ ದುಡಿದು, ಜನರ ಸ್ಮೃತಿಗಳಲ್ಲಿ ಉಳಿದುಕೊಳ್ಳುವಂಥ ಕೆಲಸಗಳನ್ನು ಮಾಡಬೇಕಿತ್ತು. ಆದರೆ, ಈಗ ಜನರಿಗೆ ‘ಕಾಣಿಸುವಂಥ’ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೆ ಸಾಕು. ಕಾಣಿಸುವುದು ಎಂದರೆ, ಸಾಮಾಜಿಕ ಜಾಲತಾಣಗಳ ಉಪಯೋಗ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಕುರಿತು ಸಂಕಥನಗಳನ್ನು ಕಟ್ಟಿಕೊಳ್ಳಬೇಕು. ಅದು ಆಡಳಿತ ಪಕ್ಷದವರಿಗೂ ಸರಿಯೇ, ವಿರೋಧ ಪಕ್ಷದ ರಾಜಕಾರಣಿಗೂ ಸರಿಯೇ. ಅವರನ್ನು ಅವರು ಎಷ್ಟರ ಮಟ್ಟಿಗೆ ಕಾಣಿಸಿಕೊಳ್ಳುತ್ತಾರೊ ಅಷ್ಟರ ಮಟ್ಟಿಗೆ ಅವರು ಚಾಲ್ತಿಯಲ್ಲಿರುತ್ತಾರೆ. ಇಂಥ ಕೆಲಸಗಳನ್ನು ಈಗ ಇಂಥ ಸಂಸ್ಥೆಗಳು ಮಾಡುತ್ತಿವೆ.

ಇಂಥ ಪಕ್ಷಕ್ಕೆ, ಇಂಥ ವ್ಯಕ್ತಿಗೆ ಮತ ನೀಡುವುದು ಎನ್ನುವುದು ಒಂದು ಕುಟುಂಬದ, ಒಂದು ಸಮುದಾಯದ ನಿರ್ಧಾರವಾಗಿತ್ತು. ಆದರೆ, ಯುವಕರು ಈಗ ಇಂಥ ವರ್ತುಲಗಳಿಂದ ಹೊರಬಂದಿದ್ದಾರೆ. ಪೋಷಕರ ಅಭಿಪ್ರಾಯವೇ ಬೇರೆ, ಯುವಜನರ ಆಲೋಚನೆಗಳೇ ಬೇರೆ. ಇದನ್ನು ಸಾಧ್ಯವಾಗಿಸಿದ್ದು ಸಾಮಾಜಿಕ ಜಾಲತಾಣಗಳ ಬಳಕೆ. ಯುವಕರ ದಂಡೇ ಇರುವ ನಮ್ಮ ದೇಶದಲ್ಲಿ ಹೀಗೆ, ಸಾಂಪ್ರದಾಯಿಕ ಆಲೋಚನೆಗಳಿಂದ ಯುವಕರನ್ನು ಹೊರತಂದದ್ದು, 2014ರ ಚುನಾವಣೆ ಎಂದೇ ಹೇಳಬೇಕು. ‘ಗುಜರಾತ್‌ ಮಾದರಿ’ ಎನ್ನುವ ಸಂಕಥನ, ‘ಚಾಯ್‌ ಪೇ ಚರ್ಚಾ’ ಎನ್ನುವ ಚರ್ಚಾ ಕಾರ್ಯಕ್ರಮ ಯುವಜನರ ಗಮನವನ್ನು ಸೆಳೆಯಿತು. ಆಗ, ಭ್ರಷ್ಟಾಚಾರ ಎನ್ನುವ ಪೆಡಂಭೂತವನ್ನು ಓಡಿಸುವ ಮತ್ತು ಹೊಸ ಯುಗದ ಅಭಿವೃದ್ಧಿ ದೇಶವಾಗಿಸುವ ಸಂಕಥನವನ್ನು ರೂಪಿಸಿದ್ದು ರಾಜಕೀಯ ತಂತ್ರ ಪರಿಣತ ಪ್ರಶಾಂತ್‌ ಕಿಶೋರ್‌.

ಪಿ.ಕೆ ಎಂದೇ ಪ್ರಸಿದ್ಧರಾಗಿರುವ ಇವರು, ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ 2011ರಿಂದ ಕೆಲಸ ಶುರುವಿಟ್ಟಿದ್ದರು. 2013ರಲ್ಲಿ ಪಿ.ಕೆ ಅವರು ತಮ್ಮದೇ ಆದ, ‘ಸಿಟಿಜನ್‌ ಫಾರ್‌ ಅಕೌಂಟೆಬಲ್‌ ಗವರ್ನೆನ್ಸ್‌’ ಎನ್ನುವ ಎನ್‌ಜಿಒ ಅನ್ನು ಹುಟ್ಟು ಹಾಕಿದರು. ಐಐಎಂ, ಐಐಟಿಯಂಥ ಕಾಲೇಜುಗಳ ಉತ್ಸಾಹಿ ಯುವಕರ ತಂಡ ಅದಾಗಿತ್ತು. ಎರಡು ವರ್ಷಗಳ ಬಳಿಕ, ‘ಇಂಡಿಯನ್‌ ಪೊಲಿಟಿಕಲ್‌ ಆ್ಯಕ್ಷನ್‌ ಕಮಿಟಿ’ ಎಂದು ಸಂಸ್ಥೆಗೆ ಮರುನಾಮಕರಣ ಮಾಡಲಾಯಿತು. ಭಾರತದಲ್ಲಿ ಈಗಿರುವ ಇಂಥ ನೂರಾರು ಸಂಸ್ಥೆಗಳನ್ನು ಹುಟ್ಟು ಹಾಕಿದವರು, ಪ್ರಶಾಂತ್ ಕಿಶೋರ್‌ ಅವರ ಈ ಸಂಸ್ಥೆಯಲ್ಲಿಯೇ ಕೆಲಸ ಕಲಿತವರು.

ರಾಜಕಾರಣಿಯೊಬ್ಬರ ‘ಇಮೇಜ್‌’ ಏನೇ ಇರಲಿ. ಮಾಧ್ಯಮಗಳಲ್ಲಿ ವ್ಯಕ್ತಿಯ ಕುರಿತು ಯಾವ ರೀತಿ ಸುದ್ದಿಗಳು ಬಿತ್ತರವಾಗುವಂತೆ ಮಾಡಬೇಕು ಎಂಬುದನ್ನು ಈ ಸಂಸ್ಥೆಗಳು ನಿರ್ಧರಿಸುತ್ತವೆ. ಸಾಮಾಜಿಕ ಜಾಲತಾಣಗಳ ಮೂಲಕ ಆ ರಾಜಕಾರಣಿಯ ಇಮೇಜ್‌ ಅನ್ನು, ಜನಾನುರಾಗಿ ಆಗಿಸುವಲ್ಲಿ ಇಂಥ ಸಂಸ್ಥೆಗಳ ಕೆಲಸ ಮಾಡುತ್ತವೆ. ಆ ಮೂಲಕ ಆ ರಾಜಕಾರಣಿಯು ಗೆಲ್ಲುವುದಕ್ಕೆ ಸಹಕಾರ ನೀಡುತ್ತವೆ.

‘ಮೊದಲೆಲ್ಲಾ, ಚುನಾವಣೆಯಲ್ಲಿ ಗೆಲ್ಲುವುದು ಅಥವಾ ಸೋಲುವುದು ಎನ್ನುವುದು ಆಯಾ ನಾಯಕರ ಮೇಲೆ ನಿರ್ಧಾರವಾಗಿರುತ್ತಿತ್ತು. ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಡಿದ ನಾಯಕರಿದ್ದರು. ಅದಕ್ಕಾಗಿಯೇ ಅವರಿಗೆ ಯಾವುದೇ ತಜ್ಞತೆಯ, ತಂತ್ರಗಾರಿಕೆಯ ಅವಶ್ಯಕತೆ ಇರಲಿಲ್ಲ. ಅವರು ಸೋಲು ಗೆಲುವುಗಳು ಮುಂದಿನ 15 ವರ್ಷಕ್ಕೆ ನಿರ್ಧರಿತವಾಗಿರುತ್ತಿದ್ದವು. ನಂತರ, ರಾಜನ ಮಗ ರಾಜನಾಗುತ್ತಾನೆ ಎನ್ನುವ ಸಂಪ್ರದಾಯ ಬಂತು. ಇದೇ ಮನಃಸ್ಥಿತಿಯು ಹಲವು ವರ್ಷಗಳ ಕಾಲ ಉಳಿದುಕೊಂಡಿತ್ತು. ಆದ್ದರಿಂದ, ರಾಜಕೀಯ ತಂತ್ರಗಾರಿಕೆಗಾಗಿ ಸಂಸ್ಥೆಗಳ ಜನನವು, ರಾಜಕಾರಣದಲ್ಲಿ ಹೊಸ ಅಧ್ಯಾಯದಂತಾಗಿದೆ’ ಎನ್ನುತ್ತಾರೆ ‘ಆ್ಯಕ್ಸಿಸ್‌ ಮೈ ಇಂಡಿಯಾ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಗುಪ್ತಾ.

ಮೊದಲೆಲ್ಲಾ ತಮ್ಮ ಕ್ಷೇತ್ರಗಳ ಮನೆ ಮನೆ ಮಾಹಿತಿಗಳು ಆಯಾ ರಾಜಕಾರಣಿಗಳಿಗೇ ಗೊತ್ತಿರುತ್ತಿತ್ತು. ಕಾರ್ಯಕರ್ತರಿಗೆ ಗೊತ್ತಿರುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಒಂದು ಹಂತದವರೆಗೆ, ಈಗಲೂ ಹಿರಿಯ ರಾಜಕಾರಣಿಗಳಿಗೆ ಇಂಥ ಮಾಹಿತಿಗಳಿವೆ. ಆದರೆ, ಯುವ ರಾಜಕಾರಣಿಗಳ ಮಾಹಿತಿ ಕಣಜ ಖಾಲಿ ಇದೆ. ಇಂಥ ರಾಜಕಾರಣಿಗಳಿಗೆ ಇಂಥ ಸಂಸ್ಥೆಗಳು ಸಹಕರಿಸುತ್ತವೆ.

ಮಿತಿಗಳೂ ಇವೆ

ಇಂಥ ಸಂಸ್ಥೆಗಳ ಸಹಾಯದಿಂದ ಗೆಲುವೇನೊ ದೊರಕೀತು. ಹಾಗೆಂದ ಮಾತ್ರಕ್ಕೆ ಆ ಗೆಲುವು ಅನಂತವೇನಲ್ಲ. ಅದು ಆ ಚುನಾವಣೆಯ ಮಟ್ಟಿಗಿನ ಕಾರ್ಯತಂತ್ರದ ಭಾಗವಾಗಿ ದೊರೆತ ಗೆಲುವಷ್ಟೆ. ಪಕ್ಷಗಳೇ ಇರಲಿ, ರಾಜಕಾರಣಿಯೇ ಇರಲಿ, ತಮ್ಮ ಆಡಳಿತದಿಂದ ಮಾತ್ರ ಈ ಗೆಲುವನ್ನು ಉಳಿಸಿಕೊಳ್ಳುವುದು ಸಾಧ್ಯ. ಚುನಾವಣೆ ಸಮಯದ ಇಂಥ ತಂತ್ರಗಾರಿಕೆಯ ಅರಿವು ಜನರಿಗೆ ಕ್ರಮೇಣ ತಿಳಿದುಬಿಡಲಿದೆ. ಇದೇ ಈ ಉದ್ಯಮದ ದೊಡ್ಡ ಮಿತಿ. ಒಂದು ಪಕ್ಷಕಷ್ಟೇ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಸಂಸ್ಥೆಗಳೂ ಇವೆ. ಆದರೆ, ಹಲವು ಸಂಸ್ಥೆಗಳು ಚುನಾವಣಾ ಹೊತ್ತಿನಲ್ಲಷ್ಟೇ ಸಕ್ರಿಯವಾಗುತ್ತವೆ.

ಅಮೆರಿಕದಲ್ಲಿ ಒಂದು ಘಟನೆ ನಡೆಯಿತು. ಲಕ್ಷಗಟ್ಟಲೇ ಫೇಸ್‌ಬುಕ್‌ ಖಾತೆದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು. ತಮ್ಮ ಅನುಮತಿ ಇಲ್ಲದೆಯೇ, ತಮ್ಮ ಖಾಸಗಿ ಮಾಹಿತಿಗಳನ್ನು ಡೊನಾಲ್ಡ್‌ ಟ್ರಂಪ್‌ ಅವರಿಗೆ ಕಾರ್ಯತಂತ್ರ ರೂಪಿಸುತ್ತಿದ್ದ ಸಂಸ್ಥೆಯೊಂದಕ್ಕೆ ನೀಡಲಾಗಿದೆ ಎಂಬುದು ಆ ದೂರಾಗಿತ್ತು. ಆಡಳಿತದಲ್ಲಿರುವ ಪಕ್ಷಗಳು ಕಾರ್ಯಯೋಜನೆ ರೂಪಿಸುವುದಕ್ಕಾಗಿ, ತಮ್ಮ ಬಳಿ ಇರುವ ಮತದಾರರ ಮಾಹಿತಿಗಳನ್ನು ಇಂಥ ಖಾಸಗಿ ಸಂಸ್ಥೆಗಳಿಗೆ ನೀಡುತ್ತವೆ. ಇದು ಅಪಾಯಕಾರಿಯಾದಂಥ ಸಂಗತಿಯಾಗಿದೆ. ಆಂಧ್ರ ಪ್ರದೇಶದಲ್ಲಿ, ಟಿಡಿಪಿ ಸರ್ಕಾರವು ತನ್ನ ಮತದಾರರ ಎಲ್ಲ ಮಾಹಿತಿಗಳನ್ನು ರಾಜಕೀಯ ಕಾರ್ಯತಂತ್ರ ರೂಪಿಸುವ ಸಂಸ್ಥೆಯೊಂದರ ಸುಪರ್ದಿಗೆ ನೀಡಿದೆ ಎಂಬ ಆರೋಪಗಳನ್ನು ಮಾಡಿ, ವೈಎಸ್‌ಆರ್‌ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ನಂತರ, ಈ ಪ್ರಕ್ರಿಯೆಯನ್ನು ಸರ್ಕಾರ ನಿಲ್ಲಿಸಿತು.‌

ಗೆಲುವಿಗಾಗಿ ಇಡೀ ವ್ಯವಸ್ಥೆಯನ್ನೇ ಇಂಥ ಸಂಸ್ಥೆಗಳು ತಮ್ಮ ಕೈಗೆ ತೆಗೆದುಕೊಂಡು ಬಿಡುತ್ತದೆ. ಪಕ್ಷವೊಂದರ ಭಾರಿ ಗೆಲುವಿನ ಕಾರಣವು ಇಂಥ ಸಂಸ್ಥೆಗಳಾಗಿರುವುದರಿಂದ, ‘ಇಮೇಜ್‌ ಬಿಲ್ಡಿಂಗ್‌’ ನೆಪದಲ್ಲಿ ಇವುಗಳು ಸರ್ಕಾರದ ಆಡಳಿತದಲ್ಲಿಯೂ ಮೂಗು ತೂರಿಸುವ ಅಪಾಯವೂ ಇರುತ್ತದೆ. ಇದು ಕೂಡ ಅಪಾಯಕಾರಿ ಸನ್ನಿವೇಶಗಳನ್ನು ತಂದೊಡ್ಡಬಲ್ಲದು.

ಮೊದಲೇ ಹೇಳಿದ ಹಾಗೆ, ಇಂಥ ಸಂಸ್ಥೆಗಳ ಏಕಮೇವ ಗುರಿಯು ತಮ್ಮ ಗ್ರಾಹಕನನ್ನು ಗೆಲ್ಲಿಸುವುದು. ಸೈದ್ಧಾಂತಿಕವಾಗಿ ಯಾವ ಸ್ಪಷ್ಟತೆಯೂ ಇಲ್ಲದ, ಹಣವೇ ಮುಖ್ಯವಾಗಿರುವ ವ್ಯವಸ್ಥೆಯಿಂದ ಆದರ್ಶಪ್ರಾಯವಾದದ್ದನ್ನು ನಿರೀಕ್ಷಿಸಲಾಗದು. ದೇಶದಲ್ಲಿರುವ ಹಲವು ಇಂಥ ಸಂಸ್ಥೆಗಳ ಮೇಲೆ ಇಂಥ ಆರೋಪಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.