ಜಗತ್ತಿನ 19 ದೇಶಗಳು ಹಾಗೂ ಐರೋಪ್ಯ ಒಕ್ಕೂಟದ ನಾಯಕರು ಪಾಲ್ಗೊಳ್ಳುವ ಅತಿ ದೊಡ್ಡ ವಾರ್ಷಿಕ ಶೃಂಗಸಭೆ ‘ಜಿ–20’ ನವದೆಹಲಿಯಲ್ಲಿ ನಾಳೆಯಿಂದ ಎರಡು ದಿನಗಳ ಕಾಲ (ಸೆ.9 ಹಾಗೂ 10) ನಡೆಯಲಿದೆ.
ಲೋಕಸಭಾ ಚುನಾವಣೆಗೆ ಎಂಟು ತಿಂಗಳುಗಳು ಉಳಿದಿರುವ ಸಮಯದಲ್ಲಿ ಸಂಘಟಿಸಿರುವ ‘ಶೃಂಗ’ದ ಮಹಾ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹೆಚ್ಚಿನ ಆಸ್ಥೆಯಿಂದ ಕೆಲಸ ಮಾಡುತ್ತಿದೆ. ‘ವಿಶ್ವ ಗುರು’ವಾಗಲು ಹಾಗೂ ಸತತ ಮೂರನೇ ಬಾರಿಗೆ ‘ಭಾರತ’ ಗೆಲ್ಲಲು ಇದೊಂದು ಏಣಿ ಎಂದು ಪರಿಭಾವಿಸಿರುವ ಮೋದಿ ಸರ್ಕಾರವು ಜಾಗತಿಕ ನಾಯಕರ ಸಭೆಯ ಭರ್ಜರಿ ಯಶಸ್ಸಿಗೆ ಆಹೋರಾತ್ರಿ ಶ್ರಮಿಸುತ್ತಿದೆ.
ಇಂಡೊನೇಷ್ಯಾದ ಬಾಲಿಯಲ್ಲಿ ನಡೆದ 17ನೇ ಶೃಂಗ ಸಭೆಯಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ ಅವರು, ‘ಮುಂದಿನ ವರ್ಷ ಭಗವಾನ್ ಬುದ್ಧ ಮತ್ತು ಮಹಾತ್ಮ ಗಾಂಧಿಯವರ ಪವಿತ್ರ ಭೂಮಿಯಲ್ಲಿ ಜಿ– 20 ನಾಯಕರು ಭೇಟಿಯಾದಾಗ, ಜಗತ್ತಿಗೆ ಶಾಂತಿಯ ಬಲವಾದ ಸಂದೇಶ ಸಾರಲು ನಾವೆಲ್ಲರೂ ಕಟಿಬದ್ಧರಾಗಿರುತ್ತೇವೆ ಎಂಬ ವಿಶ್ವಾಸ ಇದೆ’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಇಂಡೊನೇಷ್ಯಾದ ಅಧ್ಯಕ್ಷರಿಂದ ಅಧ್ಯಕ್ಷೀಯ ಅಧಿಕಾರ ವಹಿಸಿಕೊಂಡ 10 ತಿಂಗಳ ಬಳಿಕ ಮೋದಿ ಅವರು ಜಾಗತಿಕ ನಾಯಕರಿಗೆ ಆತಿಥ್ಯ ವಹಿಸಲು ಸಿದ್ಧರಾಗಿದ್ದಾರೆ. ಉಕ್ರೇನ್ ನೆಲದಲ್ಲಿ ಈಗಲೂ ಶಾಂತಿ ನೆಲೆಸಿಲ್ಲ. ನೆರೆಯ ಚೀನಾವು ಭಾರತದ ಭೂಭಾಗ ಕಬಳಿಸಲು ದೊಡ್ಡ ಸಂಚು ನಡೆಸುತ್ತಿದೆ. ಇಂತಹ ಸಮಯದಲ್ಲಿ ಮೋದಿ ಅವರ ‘ಶಾಂತಿ ಮಂತ್ರ’ದ ಜಾದೂ ಶೃಂಗಸಭೆಯಲ್ಲಿ ಕೆಲಸ ಮಾಡಲಿದೆಯೇ ಎಂಬುದು ಕುತೂಹಲಕರ ಸಂಗತಿ.
ಈ ಶೃಂಗಸಭೆಗಾಗಿ ದೆಹಲಿ ನಗರದಾದ್ಯಂತ ಭಾರಿ ಸಿದ್ಧತೆ ನಡೆದಿದೆ. ರಾಷ್ಟ್ರ ರಾಜಧಾನಿ ಮದುವಣಗಿತ್ತಿಯಂತೆ ಕಂಗೊಳಿಸಲಾರಂಭಿಸಿದೆ. ಇನ್ನೊಂದೆಡೆ, ಜಗತ್ತಿನ ಮಹಾನಾಯಕರು ಒಂದೆಡೆ ಸೇರುತ್ತಿರುವ ಪರಿಣಾಮದ ಬಿಸಿ ನಗರದ ನಾಗರಿಕರಿಗೆ ತಟ್ಟಲಾರಂಭಿಸಿದೆ. ನಗರದಲ್ಲಿ ಅಘೋಷಿತ ಲಾಕ್‌ಡೌನ್‌ನ ಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಡೆ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ಸರ್ಕಾರಿ ಕಚೇರಿಗಳು ಹಾಗೂ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಖಾಸಗಿ ಕಂಪನಿಗಳು ಮನೆಯಿಂದಲೇ ಕೆಲಸಕ್ಕೆ ಅನುವು ಮಾಡಿಕೊಟ್ಟಿವೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಾಯಕರು 43 ಹೋಟೆಲ್‌ಗಳಲ್ಲಿ ತಂಗಲಿದ್ದಾರೆ. ಇದರಿಂದಾಗಿ, ಹೋಟೆಲ್‌ಗಳ ಬಾಡಿಗೆ ದರವು ಹಲವು ಪಟ್ಟು ಏರಿಕೆ ಆಗಿದೆ.
ಭಾರತದ ಜಿ–20 ಅಧ್ಯಕ್ಷತೆಯನ್ನು ಪ್ರಧಾನಿಯವರು ‘ಜನರ ಅಧ್ಯಕ್ಷತೆ’ ಎಂದು ಬಣ್ಣಿಸಿದ್ದಾರೆ. ಈ ಸಮ್ಮೇಳನದ ಲೋಗೊ ಮತ್ತು ಹೋರ್ಡಿಂಗ್‌ಗಳಲ್ಲಿ ಬಳಸಲಾದ ಬಣ್ಣ, ಸಂದೇಶಗಳು ಎಲ್ಲವೂ ರಾಜಕೀಯ ಸಂದೇಶಗಳನ್ನು ಒಳಗೊಂಡಿರುವುದನ್ನು ಕಾಣಬಹುದು.
ನಗರ ಮುಖ್ಯ ಭಾಗದ ಹೋಟೆಲ್‌ಗಳು ಹಾಗೂ ಸರ್ಕಾರಿ ಕಟ್ಟಡಗಳು ಮತ್ತು ಹಲವು ಫ್ಲೆಕ್ಸ್‌ಗಳಲ್ಲಿ ಜಿ–20 ಶೃಂಗಸಭೆಯದ್ದೇ ಸುದ್ದಿ. ಈ ಎಲ್ಲ ಜಾಹೀರಾತುಗಳಲ್ಲಿ ‘ಬಿಜೆಪಿಯ ಚಿಹ್ನೆ’ ಹೊಂದಿರುವ ಜಿ–20 ಲೋಗೋ ಮತ್ತು ಪ್ರಧಾನಿ ಅವರ ಭಾವಚಿತ್ರಗಳು ಪ್ರಮುಖವಾಗಿವೆ.
ಭಾರತದ ಜಿ–20 ಅಧ್ಯಕ್ಷತೆಯನ್ನು ಪ್ರಧಾನಿಯವರು ‘ಜನರ ಅಧ್ಯಕ್ಷತೆ’ ಎಂದು ಬಣ್ಣಿಸಿದ್ದಾರೆ. ಈ ಸಮ್ಮೇಳನದ ಲೋಗೊ ಮತ್ತು ಹೋರ್ಡಿಂಗ್‌ಗಳಲ್ಲಿ ಬಳಸಲಾದ ಬಣ್ಣ, ಸಂದೇಶಗಳು ಎಲ್ಲವೂ ರಾಜಕೀಯ ಸಂದೇಶಗಳನ್ನು ಒಳಗೊಂಡಿರುವುದನ್ನು ಕಾಣಬಹುದು.
ಜಿ–20 ಸಮ್ಮೇಳನ್ಕಾಗಿ ಜಗತ್ತಿನ ಮೂಲೆ ಮೂಲೆಯಿಂದ ಬರುವ ನಾಯಕರನ್ನು ಸ್ವಾಗತಿಸಲು ನಗರ ಸಜ್ಜಾಗಿದೆ. ವಿವಿಐಪಿಗಳನ್ನು ಹೊತ್ತ ವಿಮಾನಗಳು ನಗರಕ್ಕೆ ಬಂದಿಳಿಯಲು ಆರಂಭಿಸಿವೆ. ನೈಜೀರಿಯಾದ ಗಣ್ಯರ ತಂಡವು ರಾಜಧಾನಿಗೆ ಈಗಾಗಲೇ ತಲುಪಿದೆ. ಶುಕ್ರವಾರ ಹಾಗೂ ಶನಿವಾರ 55 ವಿವಿಐಪಿ ವಿಮಾನಗಳು ದೆಹಲಿಗೆ ಬರಲಿವೆ. ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಇಲ್ಲಿನ ಪೊಲೀಸರು ಸಕಲ ಕ್ರಮಗಳನ್ನು ಕೈಗೊಂಡಿದ್ದಾರೆ. ಬಹುತೇಕ ಕಡೆ ಹೈ ಅಲರ್ಟ್ ಘೋಷಿಸಲಾಗಿದೆ. ಪೊಲೀಸ್ ಸಿಬ್ಬಂದಿಯ ಜತೆಗೆ ಅರೆಸೇನಾ ಪಡೆಯ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ.
ಶೃಂಗಸಭೆಯ ಭಾಗವಾಗಿ ದೆಹಲಿ ಮಹಾನಗರ ಪಾಲಿಕೆಯು ನಗರದ ಸೌಂದರ್ಯೀಕರಣ ಅಭಿಯಾನಗಳನ್ನು ನಡೆಸಿದೆ. ನಗರದ ಕೆಂಪುಕೋಟೆ, ಲೋಟಸ್ ಟೆಂಪಲ್ ಸೇರಿದಂತೆ ಐತಿಹಾಸಿಕ ಪ್ರವಾಸಿ ತಾಣಗಳ ಚಿತ್ರಗಳನ್ನು ಒಳಗೊಂಡ 450 ದೊಡ್ಡ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಹಲವೆಡೆ ಗೋಡೆಗಳ ಮೇಲೆ ಭಾರತದ ಸಾಂಸ್ಕೃತಿಕ ಚಿತ್ರಗಳನ್ನು ಮೂಡಿಸಲಾಗಿದೆ. ಜತೆಗೆ ಚಂದ್ರಯಾನ–3 ಚಂದ್ರನ ಮೇಲೆ ಇಳಿದಿರುವ ಚಿತ್ರಗಳನ್ನೂ ಕೂಡ ಚಿತ್ರಿಸಲಾಗಿದೆ. ನಗರದಲ್ಲಿ ವ್ಯಾಪಕವಾಗಿರುವ ಮಂಗಗಳ ಕಾಟ ನಿಯಂತ್ರಣಕ್ಕೆ ಉಪಕ್ರಮಗಳನ್ನು ಪಾಲಿಕೆ ಕೈಗೊಂಡಿದೆ.
2022ರಲ್ಲಿ ಇಂಡೊನೇಷ್ಯಾದ ಬಾಲಿಯಲ್ಲಿ ನಡೆದ 17ನೇ ಶೃಂಗಸಭೆಯಲ್ಲಿ ರಷ್ಯಾ–ಉಕ್ರೇನ್ ಯುದ್ಧವೇ ಪ್ರಮುಖ ಚರ್ಚಾ ವಿಷಯವಾಗಿತ್ತು. ಈ ಬಾರಿಯ ಶೃಂಗದಲ್ಲೂ ಜಗತ್ತಿನ ಹಲವು ರಾಷ್ಟ್ರಗಳ ಯುದ್ಧೋನ್ಮಾದ ಮನಃಸ್ಥಿತಿಯೇ ಪ್ರಮುಖ ಚರ್ಚಾ ವಿಷಯವಾಗುವ ಸಾಧ್ಯತೆ ಇದೆ. ಇದರ ಜತೆಗೆ, ಹಣದುಬ್ಬರ, ಜಾಗತಿಕ ಪೂರೈಕೆ ಸರಪಳಿಯಲ್ಲಿನ ಅಡಚಣೆ, ಆಹಾರ ಮತ್ತು ಇಂಧನ ಭದ್ರತೆ ಪ್ರಮುಖವಾಗಿ ಚರ್ಚೆಯಾಗಲಿವೆ. ಜತೆಗೆ, ಕ್ರಿಪ್ಟೊಕರೆನ್ಸಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ನಾಯಕರು ಸಮ್ಮತಿಸುವ ಸಾಧ್ಯತೆ ಇದೆ. ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಷೀ ಜಿನ್ ಪಿಂಗ್ ಅವರ ಅನುಪಸ್ಥಿತಿಯಲ್ಲಿ ಶೃಂಗಸಭೆಯಲ್ಲಿ ಯಾವುದೇ ಮಹತ್ವದ ತೀರ್ಮಾನ ಹೊರಬೀಳುವ ಸಾಧ್ಯತೆ ಕಡಿಮೆ. ಆದರೂ, ಈ ಸಭೆಯು ಭಾರತದ ರಾಜಕೀಯದ ಮೇಲೆ ಹಾಗೂ ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬುದು ಆಸಕ್ತಿಕರ ವಿಷಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.