ADVERTISEMENT

ಆಳ–ಅಗಲ| ಕಪ್ಪತಗುಡ್ಡ: ಮತ್ತೆ ಚಿನ್ನದ ಗಣಿಗಾರಿಕೆ ಆತಂಕ

ಪ್ರಸ್ತಾವ ಮರುಪರಿಶೀಲನೆಗೆ ಸೂಚಿಸಿದ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 22:30 IST
Last Updated 25 ಜನವರಿ 2023, 22:30 IST
   

ಕಪ್ಪತಗುಡ್ಡ ಅಭಯಾರಣ್ಯದಲ್ಲಿ ಚಿನ್ನದ ಗಣಿಗಾರಿಕೆ ಆರಂಭಿಸಲು ರಾಮಗಢ ಮಿನರಲ್ಸ್ ಅಂಡ್ ಮೈನ್ಸ್‌ ಲಿಮಿಟೆಡ್‌ ಸಲ್ಲಿಸಿದ್ದ ಪ್ರಸ್ತಾವವನ್ನು ತಿರಸ್ಕರಿಸಲು ಶಿಫಾರಸು ಮಾಡಿ ಅರಣ್ಯ ಸಂರಕ್ಷಣಾಧಿಕಾರಿಗಳು ವರದಿ ಸಲ್ಲಿಸಿದ್ದರು. ಈ ಪ್ರಸ್ತಾವವನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಬಾರದು ಎಂದು ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ಉನ್ನತಾಧಿಕಾರಿ ಶಿಫಾರಸು ಮಾಡಿದ್ದರು. ಆದರೆ, ಈಗ ಕಂಪನಿಯು ಸರ್ಕಾರಕ್ಕೆ ಮತ್ತೆ ಇಂತಹ ಪ್ರಸ್ತಾವ ಸಲ್ಲಿಸಿದೆ. ಅದೇ ಪ್ರಸ್ತಾವವನ್ನು ಮರುಪರಿಶೀಲಿಸಿ ವರದಿ ನೀಡಿ, ಎಂದು ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಇಲಾಖೆಯ ಉನ್ನತಾಧಿಕಾರಿ ವಾರದ ಹಿಂದಷ್ಟೇ ಮತ್ತೆ ಪತ್ರ ಬರೆದಿದ್ದಾರೆ

-------

‘ಕಪ್ಪತಗುಡ್ಡ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಶಿರಹಟ್ಟಿ ತಾಲ್ಲೂಕಿನ ಜಲ್ಲಿಗೇರಿ ಗ್ರಾಮದ ಸರ್ವೆ ಸಂಖ್ಯೆ 45, 49 ಮತ್ತು 50ರ ಒಟ್ಟು 39.90 ಎಕರೆಯಷ್ಟು ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಭೂಪರಿವರ್ತನೆ ಮಾಡಿಕೊಡಿ’ ಎಂದು ರಾಮಗಢ ಮಿನರಲ್ಸ್ ಅಂಡ್ ಮೈನ್ಸ್‌ ಲಿಮಿಟೆಡ್‌ ಕಂಪನಿಯು 2020ರ ಜೂನ್‌ 26ರಂದು ಪ್ರಸ್ತಾವವನ್ನು ಸಲ್ಲಿಸಿತ್ತು. ಈ ಪ್ರಸ್ತಾವವನ್ನು ತಿರಸ್ಕರಿಸುವಂತೆ 2021ರ ಮೇ 5ರಂದು ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳು ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದರು. ಅಭಯಾರಣ್ಯದಲ್ಲಿ ಚಿನ್ನದ ಗಣಿಗಾರಿಕೆ ಆರಂಭವಾಗುವುದಿಲ್ಲ ಎಂದೇ ಕಪ್ಪತಗುಡ್ಡ ಸಂರಕ್ಷಣೆಗಾಗಿ ಹೋರಾಟಕ್ಕೆ ಇಳಿದಿದ್ದ ಕಾರ್ಯಕರ್ತರು, ಸಂಘಟನೆಗಳು ಸಂಭ್ರಮಿಸಿದ್ದವು.

ADVERTISEMENT

ಆದರೆ, ಚಿನ್ನದ ಗಣಿಗಾರಿಕೆ ನಡೆಸಲು ಅದೇ ಜಾಗದಲ್ಲಿ ಭೂಪರಿವರ್ತನೆ ಮಾಡಿಕೊಡಿ ಎಂದು ರಾಮಗಢ ಮಿನರಲ್ಸ್ ಅಂಡ್ ಮೈನ್ಸ್‌ ಕಂಪನಿಯು 2022ರ ಜುಲೈ 26ರಂದು ಮತ್ತೆ ಪ್ರಸ್ತಾವ ಸಲ್ಲಿಸಿದೆ. ಈ ಪ್ರಸ್ತಾವವನ್ನು ಪರಿಶೀಲಿಸಿ, ನಿಮ್ಮ ಅಭಿಪ್ರಾಯದೊಂದಿಗೆ ತಕ್ಷಣವೇ ವರದಿಯನ್ನು ಸಲ್ಲಿಸಿ ಎಂದು ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದ ಪ್ರತಿಯು ಪ್ರಜಾವಾಣಿಗೆ ಲಭ್ಯವಾಗಿದೆ. ಇದೇ 20ರಂದು ಈ ಪತ್ರ ಬರೆಯಲಾಗಿದೆ. ರಾಮಗಢ ಮೈನ್ಸ್‌ ಕಂಪನಿಯ ಪ್ರಸ್ತಾವನ್ನು ಈ ಹಿಂದೆ ತಿರಸ್ಕರಿಸಲು ಶಿಫಾರಸು ಮಾಡಲಾಗಿತ್ತು. ಅದಕ್ಕೆ ಸಂಬಂಧಿಸಿದ ದಾಖಲೆ ಮತ್ತು ಕಂಪನಿ ಮತ್ತೆ ಸಲ್ಲಿಸಿರುವ ಪ್ರಸ್ತಾವನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ. ಈ ಪ್ರಸ್ತಾವನೆಯನ್ನು ಮರುಪರಿಶೀಲಿಸಿ ನಿಮ್ಮ ಸಮಂಜಸವಾದ, ಸ್ಪಷ್ಟ ಅಭಿಪ್ರಾಯ/ವರದಿಯನ್ನು ಕೂಡಲೇ ಕಳುಹಿಸಿ ಎಂದು ಪತ್ರದಲ್ಲಿ ಸೂಚನೆ ನೀಡಲಾಗಿದೆ.

‘ಕಪ್ಪತಗುಡ್ಡ ಅಭಯಾರಣ್ಯ ಪ್ರದೇಶದಲ್ಲಿ ಯಾವ ಕಾರಣಕ್ಕೂ ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಬಾರದು. ಅಂತಹ ಯಾವ ಪ್ರಸ್ತಾವನ್ನೂ ಕರ್ನಾಟಕ ಸರ್ಕಾರ ಒ‍ಪ್ಪಿಕೊಳ್ಳಬಾರದು’ ಎಂದು 2021ರ ಮೇ 5ರಂದು ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸಲ್ಲಿಸಿದ್ದ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರು. ಹೀಗಿದ್ದೂ ಅದೇ ಪ್ರಸ್ತಾವದ ಬಗ್ಗೆ ಮತ್ತೆ, ‘ಸಮಂಜಸವಾದ, ಸ್ಪಷ್ಟ ಅಭಿಪ್ರಾಯ/ವರದಿಯನ್ನು ಸಲ್ಲಿಸಿ’ ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಂದ ಸೂಚನೆ ಹೊರಡಿಸಲಾಗಿದೆ. ಪ್ರಸ್ತಾವ ಮರುಪರಿಶೀಲನೆಗೆ ಸೂಚಿಸಿರುವುದಕ್ಕೆ ಕಪ್ಪತಗುಡ್ಡ ಸಂರಕ್ಷಣಾ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಸ್ತಾವ ತಿರಸ್ಕಾರ ಶಿಫಾರಸಿಗೆ ಕಾರಣಗಳು

ಈ ಪ್ರಸ್ತಾವವನ್ನು ಪರಿಶೀಲಿಸಿದ್ದ ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪ್ರಸ್ತಾವವನ್ನು ಏಕೆ ತಿರಸ್ಕರಿಸಬೇಕು ಎಂಬುದನ್ನು ತಮ್ಮ ವರದಿಯಲ್ಲಿ ವಿವರಿಸಿದ್ದರು. ಆ ವರದಿಯ ಮುಖ್ಯಾಂಶಗಳು ಇಂತಿವೆ

l ಪರಿವರ್ತನೆಗೆ ಕೋರಿರುವ ಅರಣ್ಯ ಪ್ರದೇಶವು, ಮಣ್ಣಿನ ಸವಕಳಿಯ ಅಪಾಯವಿರುವ ಪ್ರದೇಶವಾಗಿದೆ. ಗಣಿಗಾರಿಕೆಯಿಂದ ಇಲ್ಲಿನ ಭೂಮಿಯ ಮೇಲ್ಮೈ ಲಕ್ಷಣಗಳಿಗೆ ಹಾನಿಯಾಗುತ್ತದೆ. ಇದು ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶವಾಗಿದೆ. ಇಲ್ಲಿನ ಪರಿಸರ ವ್ಯವಸ್ಥೆಗೆ ಧಕ್ಕೆಯಾದರೆ, ಅದನ್ನು ಮರುಸ್ಥಾಪಿಸಲು ಸಾಧ್ಯವೇ ಇಲ್ಲ

l ಗಣಿಗಾರಿಕೆಯನ್ನು ಅದಿರು ತೆಗೆಯುವ ಚಟುವಟಿಕೆ ಎಂದು ಸರಳವಾಗಿ ಪರಿಗಣಿಸಬಾರದು. ಗಣಿಸ್ಫೋಟ, ರಸ್ತೆ ನಿರ್ಮಾಣ, ವಾಹನಗಳ ಓಡಾಟದಿಂದ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಉಂಟಾಗುತ್ತದೆ. ಗಣಿಗಾರಿಕೆಯಿಂದ ತೊರೆಗಳ ಪಾತ್ರವೂ ಬದಲಾಗಲಿದೆ. ಇಲ್ಲಿನ ಪರಿಸರ ವ್ಯವಸ್ಥೆಗೆ ಭಾರಿ ಹಾನಿಯಾಗಲಿದೆ

l ಕಪ್ಪತಗುಡ್ಡ ಅಭಯಾರಣ್ಯವು ಗದಗ ಜಿಲ್ಲೆಯ, ಈ ಪ್ರದೇಶಕ್ಕಷ್ಟೇ ಸೀಮಿತವಾದ ಮತ್ತು ವಿಶಿಷ್ಟವಾದ ವಾತಾವರಣ ಹಾಗೂ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ಗಣಿಗಾರಿಕೆ ನಡೆಸುವುದರಿಂದ, ಇಲ್ಲಿಗೇ ವಿಶಿಷ್ಟವಾದ ಪರಿಸರಕ್ಕೆ ಧಕ್ಕೆಯಾಗುತ್ತದೆ

l ಕಪ್ಪತಗುಡ್ಡ ಅಭಯಾರಣ್ಯದ ಎಲ್ಲಾ ಪ್ರದೇಶದಲ್ಲಿ ವನ್ಯಜೀವಿಗಳ ಸಮತೋಲನದ ಹಂಚಿಕೆ ಇದೆ. ಕೆಲವು ಮೃಗಗಳು ಬೆಟ್ಟದ ತುದಿಗಳಲ್ಲಿ ನೆಲೆಸಿದ್ದರೆ, ಕೆಲವು ಜೀವಿಗಳು ಬೆಟ್ಟದ ಇಳಿಜಾರಿನಲ್ಲಿ, ಇನ್ನೂ ಕೆಲವು ವನ್ಯಜೀವಿಗಳು ಬೆಟ್ಟದ ತಪ್ಪಲಿನಲ್ಲಿ ನೆಲೆಸಿವೆ. ಅಭಯಾರಣ್ಯದ ಹುಲ್ಲುಗಾವಲನ್ನು ಕೆಲವು ಜೀವಿಗಳು ಆಶ್ರಯಿಸಿವೆ. ಇಲ್ಲಿ ಒಂದು ಸ್ವರೂಪದ ಮೇಲ್ಮೈಗೆ ಹಾನಿಯಾದರೂ, ಇಡೀ ವ್ಯವಸ್ಥೆಗೆ ಧಕ್ಕೆಯಾಗಲಿದೆ. ಪ್ರಾಣಿಗಳ ಆಹಾರ ಸರಪಳಿಗೆ ಧಕ್ಕೆಯಾಗಲಿದೆ. ಚಿರತೆ, ಕಿರುಬ ಮತ್ತು ತೋಳದಂತಹ ಬೇಟೆ ಪ್ರಾಣಿಗಳು, ಆಹಾರ ಹುಡುಕಿಕೊಂಡು ಸುತ್ತಲಿನ ಗ್ರಾಮಗಳಿಗೆ ಬರುವ ಅಪಾಯವಿದೆ. ಇದು ಮಾನವ–ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಬಹುದು

‘ಯಾವ ಕಾರಣಕ್ಕೂ ಗಣಿಗಾರಿಕೆಗೆ ಅನುಮತಿ ನೀಡಬಾರದು’

ಶಿವಕುಮಾರ ಸ್ವಾಮೀಜಿ, ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನಮಠ, ಡೋಣಿ–ಗದಗ

ರಾಮಗಢ ಮಿನರಲ್ಸ್ ಅಂಡ್ ಮೈನ್ಸ್‌ ಸಂಸ್ಥೆಯವರು ಕಪ್ಪತಗುಡ್ಡ ಅಭಯಾರಣ್ಯದಲ್ಲಿ ಹೇಗಾದರೂ ಮಾಡಿ ಚಿನ್ನದ ಗಣಿಗಾರಿಕೆ ಆರಂಭಿಸಲು ಮಾಡುತ್ತಿರುವ ಕಸರತ್ತು ಹೊಸದಲ್ಲ. 2009ರಿಂದಲೂ ಸತತವಾಗಿ ಅವರು ಯತ್ನಿಸುತ್ತಿದ್ದಾರೆ. ಗಣಿಗಾರಿಕೆಯಿಂದ ಪರಿಸರ ಹಾಗೂ ವನ್ಯಜೀವಿಗಳಿಗೆ ಅಪಾರ ಹಾನಿ ಸಂಭವಿಸುತ್ತದೆ ಎಂಬ ಕಾರಣಕ್ಕೆ ನಾವು ಪ್ರತಿ ಬಾರಿಯೂ ಹೋರಾಟ ಮಾಡಿ, ಅವರ ಯತ್ನವನ್ನು ವಿಫಲಗೊಳಿಸುತ್ತಾ ಬಂದಿದ್ದೇವೆ. ಆದರೂ ಪಟ್ಟು ಬಿಡದ ಅವರು, ಅಧಿಕಾರಿಗಳ ಜೊತೆ ಶಾಮೀಲಾಗಿ ಮತ್ತೆ ಮತ್ತೆ ಅರ್ಜಿ ಸಲ್ಲಿಸುವ ಯತ್ನಕ್ಕೆ ಮುಂದಾಗುತ್ತಿದ್ದಾರೆ. ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆರ್‌ಎಫ್‌ಒ ಹಾಗೂ ಡಿಎಫ್‌ಒ ಸ್ಪಷ್ಟವಾಗಿ ವರದಿ ಸಲ್ಲಿಸಿದ ಬಳಿಕವೂ ಮತ್ತೆ ಮನವಿ ಸಲ್ಲಿಕೆಯಾಗುತ್ತಿವೆ. ಸರ್ಕಾರಗಳು ಹಾಗೂ ಅಧಿಕಾರಿಗಳು ಬದಲಾದಂತೆಲ್ಲಾ, ಹೊಸದಾಗಿ ಅರ್ಜಿ ಸಲ್ಲಿಸುವ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ. ಹೇಗಾದರೂ ಮಾಡಿ ಗಣಿಗಾರಿಕೆಗೆ ಅನುಮತಿ ಪಡೆಯುವುದೊಂದೇ ಅವರ ಮುಖ್ಯ ಉದ್ದೇಶವಾಗಿದೆ.

ಗಣಿಗಾರಿಕೆಯಿಂದಾಗಿ ಬಳ್ಳಾರಿ ಹಾಗೂ ಸಂಡೂರಿನ ಗುಡ್ಡಗಳನ್ನು ಕಳೆದುಕೊಂಡಿರುವ ನಾವು, ಈಗ ಕಪ್ಪತಗುಡ್ಡ
ವನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. ಗದಗ ಸುತ್ತಮುತ್ತಲಿನ ಜಿಲ್ಲೆಯ ಜನರಿಗೆ ಆಮ್ಲಜನಕ ನೀಡುತ್ತಿರುವ ಹಸಿರು ಗುಡ್ಡವನ್ನು ಗಣಿಗಾರಿಕೆಗೆ ಬಲಿ ಕೊಡಲು ಸಾಧ್ಯವಿಲ್ಲ. ಜೀವ, ಜಲಕ್ಕೆ ಆಸರೆಯಾಗಿರುವ ಕಪ್ಪತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆಗೆ ಯಾವ ಕಾರಣಕ್ಕೂ ಸರ್ಕಾರ ಅವಕಾಶ ನೀಡಬಾರದು. ಗುಂಡಿ ತೋಡಿದರೆ ಅಂತರ್ಜಲ ವೃದ್ಧಿಯಾಗುತ್ತದೆ ಎಂಬಂತಹ ಸುಳ್ಳುಗಳನ್ನು ಹೆಣೆಯುತ್ತಿರುವ ಮೈನ್ಸ್ ಕಂಪನಿಯವರು ಗುಡ್ಡವನ್ನು ಕರಗಿಸುವ ಎಲ್ಲ ಅಪಾಯಗಳಿವೆ. ಮುಖ್ಯಮಂತ್ರಿಗಳು ಕಪ್ಪತಗುಡ್ಡ ವ್ಯಾಪ್ತಿಯ ಜಿಲ್ಲೆಗಳ ಎಲ್ಲ ಜನರ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು. ಜನಾಭಿಪ್ರಾಯಕ್ಕೆ ವಿರುದ್ಧವಾದ ನಿಲುವು ತೆಗೆದುಕೊಂಡಿದ್ದೇ ಆದಲ್ಲಿ, ಚುನಾವಣೆಯಲ್ಲಿ ಜನರೇ ಪಾಠ ಕಲಿಸಲಿದ್ದಾರೆ

ಶಿವಕುಮಾರ ಸ್ವಾಮೀಜಿ, ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನಮಠ, ಡೋಣಿ–ಗದಗ

***

‘ಮತ್ತೆ ಪರಿಶೀಲನೆಗೆ ಸೂಚಿಸಿದ್ದೇಕೆ?’

ಅರಣ್ಯ ಇಲಾಖೆ ಈ ಹಿಂದೆಯೇ ಗಣಿಗಾರಿಕೆ ಪ್ರಸ್ತಾವನೆಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಪ್ರಸ್ತಾವನೆ ಕುರಿತು ಮತ್ತೊಮ್ಮೆ ಅಭಿಪ್ರಾಯವನ್ನು ಸಲ್ಲಿಸುವಂತೆ ಅರಣ್ಯ ಇಲಾಖೆಗೆ ಏಕೆ ಸೂಚಿಸಿದೆ ಎಂಬುದು ತಿಳಿದಿಲ್ಲ. ಆದರೆ ಒಂದಂತೂ ಸ್ಪಷ್ಟ, ಜೂನ್ 2022ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಅನ್ವಯ ಅಭಯಾರಣ್ಯದ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲು ಬರುವುದಿಲ್ಲ

– ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.