ADVERTISEMENT

ವಿದೇಶ ವಿದ್ಯಮಾನ | ಅಮೆರಿಕ: ಆಟಿಕೆ ಆದ ಬಂದೂಕು

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 20:18 IST
Last Updated 14 ಜುಲೈ 2024, 20:18 IST
   

ಜಗತ್ತಿನ ‘ದೊಡ್ಡಣ್ಣ’ ಎಂದು ಕರೆಸಿಕೊಳ್ಳುವ ಅಮೆರಿಕದಲ್ಲಿ ಬಂದೂಕುವಿನಿಂದ ಹಿಂಸಾಚಾರ ಹೊಸದೇನಲ್ಲ. ಬಂದೂಕಿನ ನಳಿಗೆಯಿಂದ ಚಿಮ್ಮುವ ಗುಂಡುಗಳಿಗೆ ಪ್ರತಿ ದಿನ 132 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಮೇಲೆ ನಡೆದ ಗುಂಡಿನ ದಾಳಿಯ ಕಾರಣಕ್ಕೆ, ‘ಬಂದೂಕು ಚರ್ಚೆ’ ಮತ್ತೆ ಮುನ್ನೆಲೆಗೆ ಬಂದಿದೆ. 

ಅಮೆರಿಕದಲ್ಲಿ ಬಂದೂಕು ಹೊಂದಿರುವವರು

ಅಮೆರಿಕದ ಪೆನ್ಸಿಲ್ವೇನಿಯಾದ ಬಟ್ಲರ್‌ ಎಂಬಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ, ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್‌ ಟ್ರಂಪ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬಂದೂಕು ಹಿಂಸಾಚಾರಕ್ಕೆ ಕುಖ್ಯಾತಿ ಪಡೆದಿರುವ ಅಮೆರಿಕದಲ್ಲಿ ಬಂದೂಕುಗಳ ನಿಯಂತ್ರಣ ಪ್ರತಿ ಚುನಾವಣೆಯ ಸಂದರ್ಭದಲ್ಲೂ ಚರ್ಚೆಯಾಗುವ ವಿಷಯ. ಬೇಕಾಬಿಟ್ಟಿ ಬಂದೂಕು ಮಾರಾಟ, ಬಳಕೆಗೆ ಕಡಿವಾಣ ಹಾಕಬೇಕು ಎಂಬ ಕೂಗು ದಶಕಗಳಿಂದಲೂ ಕೇಳಿ ಬರುತ್ತಿದೆ. ಆದರೆ, ನಿಯಂತ್ರಣ ಸಾಧ್ಯವಿಲ್ಲ. ಹೀಗಾಗಿ ಬಂದೂಕು ಹಿಂಸಾಚಾರ, ಕೊಲೆ ಪ್ರಕರಣಗಳು ಅಮೆರಿಕದಾದ್ಯಂತ ವರದಿಯಾಗುತ್ತಲೇ ಇವೆ. 

ADVERTISEMENT

ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿರುವ ಅಮೆರಿಕದಲ್ಲಿ ಬಂದೂಕು ಹೊಂದುವುದು ಪ್ರತಿಷ್ಠೆಯ ಸಂಕೇತ. ಪ್ರತಿ 100 ಜನ ಅಮೆರಿಕನ್ನರ ಬಳಿ 120.5 ಬಂದೂಕುಗಳಿವೆ ಎಂದು ಹೇಳುತ್ತದೆ ಸ್ವಿಟ್ಜರ್ಲೆಂಡ್‌ ಮೂಲದ ಸ್ಮಾಲ್‌ ಆರ್ಮ್ಸ್‌ ಸರ್ವೆ (ಎಸ್‌ಎಎಸ್‌). ಬೇರೆ ಯಾವುದೇ ದೇಶದ ಜನರಲ್ಲಿ ಈ ಮಟ್ಟದ ಬಂದೂಕು ಮೋಹ ಇಲ್ಲ.  2023ರ ಜೂನ್‌ನಲ್ಲಿ ಪ್ಯೂ ರಿಸರ್ಚ್‌ ಸೆಂಟರ್‌, ಅಮೆರಿಕದಲ್ಲಿ ಬಂದೂಕು ಬಳಕೆಗೆ ಸಂಬಂಧಿಸಿದಂತೆ ಅಧ್ಯಯನವೊಂದು ನಡೆಸಿದೆ. ಇದರ ಪ್ರಕಾರ, ಶೇ 32ರಷ್ಟು ಜನರು (ಮೂರನೇ ಒಂದರಷ್ಟು) ಸ್ವಂತ ಬಂದೂಕು ಹೊಂದಿದ್ದಾರೆ. ಶೇ 46ರಷ್ಟು ವಯಸ್ಕ ಅಮೆರಿಕನ್ನರು ಬಂದೂಕು ಇರುವ ಮನೆಗಳಲ್ಲಿ ವಾಸವಿದ್ದಾರೆ. 

ವೈಯಕ್ತಿಕ ರಕ್ಷಣೆಯ ಉದ್ದೇಶದಿಂದ ತಾವು ಬಂದೂಕು ಹೊಂದಿರುವುದಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇ 72ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ. ಬೇಟೆ, ಕ್ರೀಡಾ ಶೂಟಿಂಗ್‌, ಬಂದೂಕು ಸಂಗ್ರಹ, ಉದ್ಯೋಗದ ನಿಮಿತ್ತ ಬಂದೂಕು ಖರೀದಿಸುವವರೂ ಇದ್ದಾರೆ. 

ಅಪರಾಧ ಪ್ರಕರಣಗಳು ಹೆಚ್ಚು

ಬಂದೂಕು ಖರೀದಿ, ಬಳಕೆ ಹೆಚ್ಚಿರುವುದರಿಂದ ಅಮೆರಿಕದಲ್ಲಿ ಹಿಂಸಾಚಾರಗಳೂ ಹೆಚ್ಚು ನಡೆಯುತ್ತಿವೆ. ಗುಂಡಿನ ದಾಳಿಯಲ್ಲಿ (ಆತ್ಮಹತ್ಯೆಯೂ ಸೇರಿದಂತೆ) ಪ್ರತಿ ದಿನ 132 ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಎಫ್‌ಬಿಐ ಹೇಳಿದೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರಗಳ (ಸಿಡಿಸಿ) ಪ್ರಕಾರ, 2021ರಲ್ಲಿ ಬಂದೂಕು ದಾಳಿಯಲ್ಲಾದ ಗಾಯಗಳಿಂದ 48,830 ಸಾವು ಸಂಭವಿಸಿವೆ. ಇವುಗಳಲ್ಲಿ 26,328 ಸಾವು ಆತ್ಮಹತ್ಯೆ ಆಗಿದ್ದರೆ, 20,958 ಪ್ರಕರಣಗಳು (ಶೇ 43) ಗುಂಡಿನ ದಾಳಿ ನಡೆಸಿದ ಹತ್ಯೆಗಳಾಗಿವೆ. ಕಳೆದ ವರ್ಷವೂ (2023) ಬಂದೂಕಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 40 ಸಾವಿರ ದಾಟಿತ್ತು. 

ನಿಯಂತ್ರಣಕ್ಕೆ ಹೆಚ್ಚಿದ ಕೂಗು

ಬಂದೂಕುಗಳಿಂದಾಗುತ್ತಿರುವ ಅನಾಹುತಗಳಿಂದ ಆತಂಕಗೊಂಡಿರುವ ಅಮೆರಿಕದ ನಾಗರಿಕರು ಬಂದೂಕಿನ ಬಳಕೆ ಮೇಲೆ ಮೇಲಿನ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸುತ್ತಿದ್ದಾರೆ. 

‘ದೇಶದಲ್ಲಿ ಬಂದೂಕು ಹಿಂಸಾಚಾರ ದೊಡ್ಡ ಸಮಸ್ಯೆ’ ಎಂದು ಪ್ಯೂ ರಿಸರ್ಚ್‌ ಸೆಂಟರ್‌ ನಡೆಸಿದ ಸಮೀಕ್ಷೆಯಲ್ಲಿ ಪ್ರತಿ 10ರಲ್ಲಿ 4 ಮಂದಿ (ಶೇ 61) ಅಭಿಪ್ರಾಯಪಟ್ಟಿದ್ದಾರೆ. ‘ಬಂದೂಕು ಮಾರಾಟ, ಬಳಕೆ ಮೇಲೆ ನಿರ್ಬಂಧ ಹೇರಬೇಕು’ ಎಂದು ಪ್ರತಿ 10ರಲ್ಲಿ ಆರು ಜನರು ಪ್ರತಿಪಾದಿಸಿದ್ದಾರೆ. 

ರಾಜಕೀಯ ‍ಪಕ್ಷಗಳ ಪೈಕಿ ರಿಪಬ್ಲಿಕನ್‌ ಪಕ್ಷದ ಸದಸ್ಯರು, ಬೆಂಬಲಿಗರು ಬಂದೂಕು ಬಳಕೆ, ಮಾರಾಟದ ಪರವಾಗಿದ್ದರೆ, ಡೆಮಾಕ್ರಟಿಕ್‌ ಪಕ್ಷದವರು ವಿರುದ್ಧವಾಗಿದ್ದಾರೆ. ಆದರೆ, ಏಕಕಾಲಕ್ಕೆ ಹೆಚ್ಚು ಗುಂಡುಗಳನ್ನು ಹೊಡೆಯುವ ಸಾಮರ್ಥ್ಯವಿರುವ ಬಂದೂಕುಗಳು ಮತ್ತು ಅಸಾಲ್ಟ್‌ ರೈಫಲ್‌ಗಳ ಮಾರಾಟ ಬಳಕೆಗೆ ನಿಯಂತ್ರಣ ಹೇರಬೇಕು ಎಂಬ ಅಭಿಪ್ರಾಯವನ್ನು ಉಭಯ ಪಕ್ಷಗಳ ಸದಸ್ಯರೂ ಹೊಂದಿದ್ದಾರೆ. ಅಲ್ಲದೇ, ಬಂದೂಕು ಖರೀದಿಸುವವರ ಕನಿಷ್ಠ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಏರಿಸಬೇಕು ಎಂಬ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ್ದಾರೆ. 

ಆಧಾರ: ಪ್ಯೂ ರಿಸರ್ಚ್‌ ಸೆಂಟರ್‌ ವರದಿ, ಬಿಬಿಸಿ, ದಿ ನ್ಯೂಯಾರ್ಕ್‌ ಟೈಮ್ಸ್‌, ಸಿಡಿಸಿ, ಅಮೆರಿಕ ನ್ಯಾಯಾಂಗ ಇಲಾಖೆ ವೆಬ್‌ಸೈಟ್‌

ಬಂದೂಕು ನಿಯಮಗಳು ಏನು ಹೇಳುತ್ತವೆ?

ಅಮೆರಿಕದಲ್ಲಿ ಜನರು ಬಂದೂಕು/ಪಿಸ್ತೂಲ್‌/ರೈಫಲ್‌ಗಳನ್ನು ಸುಲಭವಾಗಿ ಖರೀದಿಸಬಹುದು. ಸಂವಿಧಾನದಲ್ಲೇ ಅದಕ್ಕೆ ಮಾನ್ಯತೆ ಇದೆ. ಬಂದೂಕು ಮಾರಲು ಪರವಾನಗಿ ಹೊಂದಿರುವ ಮಳಿಗೆ‌ಗಳಿಗೆ ಹೋದರೆ ಗರಿಷ್ಠ ಎಂದರೆ ಒಂದೂವರೆ ಗಂಟೆಯಲ್ಲಿ ಹೊಸ ಪಿಸ್ತೂಲ್‌/ಬಂದೂಕು/ರೈಫಲ್‌ ಕೈಗೆ ಸಿಗುತ್ತದೆ. ವ್ಯಕ್ತಿಯು ಉತ್ತಮ ಚಾರಿತ್ರ್ಯ ಹೊಂದಿದ್ದರೆ (ಖರೀದಿದಾರನ ಹಿನ್ನೆಲೆ ಪರಿಶೀಲಿಸಲಾಗುತ್ತದೆ) ಭಾರತದಲ್ಲಿ ಆಟಿಕೆ ಖರೀದಿಸಿದಂತೆ ಅಮೆರಿಕದಲ್ಲಿ ಬಂದೂಕು ಖರೀದಿಸಬಹುದು.  

ಅಮೆರಿಕನ್‌ ರೌಂಡ್ಸ್‌ ಎಂಬ ಕಂ‍ಪನಿಯು ಟೆಕ್ಸಾಸ್‌, ಅಲಬಾಮ, ಓಕ್ಲಹೋಮ ರಾಜ್ಯಗಳಲ್ಲಿ ದಿನಸಿ ಮಳಿಗೆಗಳಲ್ಲಿ ಬಂದೂಕು ಮಾರುವ ಯಂತ್ರಗಳನ್ನು (ವೆಂಡಿಂಗ್‌ ಮೆಶೀನ್‌) ಅಳವಡಿಸಿದೆ. 

ಬಂದೂಕುಗಳಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಹಲವು ಕಾನೂನುಗಳಿವೆ. 1968ರಲ್ಲಿ ಜಾರಿಗೆ ಬಂದ ಬಂದೂಕು ನಿಯಂತ್ರಣ ಕಾಯ್ದೆ (ಜಿಸಿಎ) ಪ್ರಮುಖವಾದುದು. ಅದರ ಪ್ರಕಾರ, 

* ಅಧಿಕೃತ ಪರವಾನಗಿ ಹೊಂದಿದ ಮಳಿಗೆಗಳಲ್ಲಿ ಮಾತ್ರ ಗನ್‌ ಖರೀದಿ ಮಾಡಬೇಕು

* ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದವರು, ಮಾದಕ ದ್ರವ್ಯ ವ್ಯಸನಿಗಳು, ಅಕ್ರಮ ಮಾದಕ ದ್ರವ್ಯಗಳ ಬಳಕೆದಾರರು ಖರೀದಿಸುವಂತಿಲ್ಲ

* ಮಾನಸಿಕ ಅಸ್ವಸ್ಥರಿಗೆ ಮಾರಾಟ ಮಾಡುವಂತಿಲ್ಲ

* ಸಶಸ್ತ್ರ ಪಡೆಗಳಿಂದ ವಜಾಗೊಂಡವರಿಗೆ ಮಾರುವಂತಿಲ್ಲ 

* ಅಮೆರಿಕ ಪೌರತ್ವ ತೊರೆದವರು, ಅಕ್ರಮ ವಲಸಿಗರು ಖರೀದಿಸುವಂತಿಲ್ಲ

* ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದವರಿಗೂ ಮಾರಾಟ ಮಾಡುವಂತಿಲ್ಲ

* 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಬಂದೂಕು ಹೊಂದುವಂತಿಲ್ಲ

1986ರಲ್ಲಿ ಜಾರಿಗೆ ಬಂದ ಬಂದೂಕು ಮಾಲೀಕರ ರಕ್ಷಣಾ ಕಾಯ್ದೆಯಲ್ಲಿ ಕೆಲವು ನಿಯಮಗಳನ್ನು ಸಡಿಲಗೊಳಿಸಿದ್ದರಿಂದ ಬಂದೂಕುಗಳ ದುರ್ಬಳಕೆಗೂ ದಾರಿ ಮಾಡಿಕೊಟ್ಟಿತು. ಈ ಕಾಯ್ದೆಯ ಅಡಿಯಲ್ಲಿ ಬಂದೂಕು ಮಾರಾಟ ಮೇಳ ಆಯೋಜನೆಗೆ ಅವಕಾಶ ನೀಡಲಾಗಿತ್ತು. 

1980ರ ದಶಕದ ಆರಂಭದಲ್ಲಿ ಶಾಲೆಗಳಲ್ಲಿ ಗುಂಡಿನ ದಾಳಿ ಪ್ರಕರಣ ಹೆಚ್ಚಾದ ಬಳಿಕ ಬಂದೂಕು ಮುಕ್ತ ಶಾಲಾ ವಲಯಗಳ ಕಾಯ್ದೆ, 1994ರಲ್ಲಿ ಯುವಜನರ ಹ್ಯಾಂಡ್‌ಗನ್‌ ಸುರಕ್ಷತಾ ಕಾಯ್ದೆಯನ್ನು ಅಮೆರಿಕ ಜಾರಿಗೊಳಿಸಿತ್ತು. 18 ವರ್ಷದ ಒಳಗಿನ ಮಕ್ಕಳು ಹ್ಯಾಂಡ್‌ಗನ್‌ ಹೊಂದುವುದನ್ನು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಯಸ್ಕರು ಬಂದೂಕು ಕೊಡುವುದನ್ನು ಈ ಕಾನೂನು ನಿರ್ಬಂಧಿಸುತ್ತದೆ. 

ಅಮೆರಿಕದಲ್ಲಿ ಜಾರಿಯಲ್ಲಿರುವ ಕಾನೂನಿನ ಆಧಾರದಲ್ಲಿ ವಿವಿಧ ರಾಜ್ಯಗಳು ಮತ್ತು ನಗರಗಳು ಪ್ರತ್ಯೇಕ ನಿಯಮ ರೂಪಿಸುವುದಕ್ಕೆ ಅವಕಾಶ ಇದೆ.

ಬಂದೂಕು ದಾಳಿಗೆ ಕಾರಣಗಳು

* ಜನರಲ್ಲಿ ಹೆಚ್ಚುತ್ತಿರುವ ಅಭದ್ರತೆ ಭಾವನೆ ಮತ್ತು ಭಯ

* ಒತ್ತಡದ ಜೀವನ ಶೈಲಿ, ಹತಾಶ ಮನೋಭಾವ

* ಶಾಲೆ, ಕಾಲೇಜು, ಉದ್ಯೋಗ, ಹಣಕಾಸು ಮತ್ತಿತರ ವಿಚಾರಗಳಲ್ಲಿ ಅಸಂತೃಪ್ತಿ

* ಕೌಟುಂಬಿಕ ಸಮಸ್ಯೆ, ಹದಗೆಟ್ಟ ವೈವಾಹಿಕ–ಪ್ರೇಮ ಸಂಬಂಧ, ಅನಾರೋಗ್ಯ

* ಪುರುಷ ಪ್ರಧಾನ ಮನಃಸ್ಥಿತಿಯ ಅತಿರೇಕ (ಸಾಮೂಹಿಕ ಹತ್ಯೆ ಮಾಡಿದವರಲ್ಲಿ ಶೇ 98ರಷ್ಟು ಮಂದಿ ಪುರುಷರು)

ಕಠಿಣ ಕಾನೂನಿಗೆ ಟ್ರಂಪ್ ವಿರೋಧ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ನಡುವೆ ಬಂದೂಕಿಗೆ ಸಂಬಂಧಿಸಿದ ಕಾನೂನಿನ ಬಗ್ಗೆಯೂ ಪರಸ್ಪರ ವಿರುದ್ಧ ಅಭಿಪ್ರಾಯಗಳಿವೆ. 

ಬಂದೂಕು ಕೊಳ್ಳುವವರ ಹಿನ್ನೆಲೆ ಪರಿಶೀಲನೆ ಮತ್ತು ಇತರ ಬಿಗಿ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಜೋ ಬೈಡನ್ ಬಂದೂಕು ಭದ್ರತಾ ಕಾನೂನು ಜಾರಿಗೆ ತಂದಿದ್ದರು. ಅವರು ‘ಘೋಸ್ಟ್‌ ಗನ್‌’ (‍ಬಿಡಿ ಭಾಗ ತಂದು ಜೋಡಿಸಿದ ಬಂದೂಕು) ಅನ್ನು ನಿಷೇಧ ಮಾಡಿದ್ದರು. ನಿರ್ದಿಷ್ಟ ಬಗೆಯ ಹಾಗೂ ಉನ್ನತ ಸಾಮರ್ಥ್ಯದ ಬಂದೂಕುಗಳ ಮೇಲೆ ನಿಷೇಧ ಹೇರುವಂತೆ ಅವರು ಅಮೆರಿಕ ಕಾಂಗ್ರೆಸ್ ಮೇಲೆ ನಿರಂತರ ಒತ್ತಡ ಹೇರಿದ್ದರು.

ಆದರೆ, ಟ್ರಂಪ್‌ ಅವರು ಬಂದೂಕುಗಳ ನಿಯಂತ್ರಣದ ವಿರುದ್ಧವಾಗಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಬಂದೂಕು ಕಾನೂನನ್ನು ಸಡಿಲಗೊಳಿಸಿದ್ದರು. ಆದರೆ, ಅರೆ ಸ್ವಯಂಚಾಲಿತ ಬಂದೂಕುಗಳು ಅತ್ಯಂತ ವೇಗವಾಗಿ ಗುಂಡು ಹಾರಿಸಲು ನೆರವಾಗುತ್ತಿದ್ದ ಬಿಡಿ ಭಾಗಗಳ ಮೇಲೆ ನಿಷೇಧ ಹೇರಿದ್ದರು. ನ್ಯಾಷನಲ್ ರೈಫಲ್ ಅಸೋಸಿಯೇಷನ್ (ಎನ್‌ಆರ್‌ಎ) ಪ್ರತಿಪಾದನೆಯನ್ನು ಒಪ್ಪಿಕೊಂಡಿದ್ದ ಅವರು, ತಾವು ಅಧಿಕಾರಕ್ಕೆ ಬಂದರೆ ಬೈಡನ್ ಜಾರಿಗೆ ತಂದಿರುವ ಬಂದೂಕು ಬಗೆಗಿನ ಎಲ್ಲ ಬಿಗಿ ನಿಯಮಗಳನ್ನು ಹಿಂಪಡೆಯುವುದಾಗಿ ಇತ್ತೀಚೆಗೆ ಘೋಷಿಸಿದ್ದಾರೆ.

ಎನ್‌ಆರ್‌ಎ ಲಾಬಿ

ನ್ಯಾಷನಲ್ ರೈಫಲ್ ಅಸೋಸಿಯೇಷನ್ (ಎನ್‌ಆರ್‌ಎ) ಎನ್ನುವುದು ಅಮೆರಿಕದಲ್ಲಿ ಬಂದೂಕು ಬಳಕೆಯನ್ನು ಉತ್ತೇಜಿಸುವ ಸಂಸ್ಥೆ. ಇದು 30 ಲಕ್ಷ ಸದಸ್ಯರನ್ನು ಹೊಂದಿದೆ. 1871ರಲ್ಲಿ ಆರಂಭವಾದ ಸಂಸ್ಥೆಯು, ಅಮೆರಿಕದ ಅತ್ಯಂತ ಬಲಿಷ್ಠ ರಾಜಕೀಯ ಸಂಘಟನೆಯಾಗಿ ಬೆಳೆದಿದೆ. ಬಂದೂಕುಗಳು ದೇಶಕ್ಕೆ ಹೆಚ್ಚು ಭದ್ರತೆ ನೀಡುತ್ತವೆ ಎಂದು ಪ್ರತಿಪಾದಿಸುವ ಎನ್‌ಆರ್‌ಎ, ಬಂದೂಕುಗಳ ಮೇಲೆ ನಿರ್ಬಂಧ ವಿಧಿಸುವ ಕಾನೂನು, ನಿಯಮಗಳನ್ನು ವಿರೋಧಿಸುತ್ತದೆ.

ಅಮೆರಿಕ ಸಂವಿಧಾನದ ಎರಡನೇ ತಿದ್ದುಪಡಿಯನ್ನು ಬಲವಾಗಿ ಸಮರ್ಥಿಸುವ ಎನ್‌ಆರ್‌ಎ, ತನ್ನ ನಿಲುವುಗಳನ್ನು ಬೆಂಬಲಿಸುವ ರಾಜಕಾರಣಿಗಳು ಹಾಗೂ ಅಧಿಕಾರಸ್ಥರಿಗೆ ನೇರವಾಗಿ ದೊಡ್ಡ ಮೊತ್ತದ ಧನಸಹಾಯ ಮಾಡುತ್ತದೆ. ಅಮೆರಿಕದ ಕೆಲವು ಶಾಲೆಗಳಲ್ಲಿ ಬಂದೂಕು ದಾಳಿಗಳು ನಡೆದು, ಹಲವು ಮಕ್ಕಳು ಬಲಿಯಾದಾಗ ಬಂದೂಕು ಬಳಕೆಗೆ ನಿರ್ಬಂಧ ಹೇರಬೇಕೆನ್ನುವ ಕೂಗು ಎದ್ದಿತ್ತು. ಆಗಲೂ ಅದನ್ನು ವಿರೋಧಿಸಿದ್ದ ಎನ್‌ಆರ್‌ಎ, ಬಂದೂಕು ನಿರ್ಬಂಧದ ಬದಲಿಗೆ ಶಾಲೆಗಳಲ್ಲಿ ಹೆಚ್ಚು ಭದ್ರತೆ ಕೈಗೊಳ್ಳುವಂತೆ ಸಲಹೆ ನೀಡಿತ್ತು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.