ADVERTISEMENT

ಆಳ –ಅಗಲ | ರೇಣುಕಸ್ವಾಮಿ ಹತ್ಯೆ: ಆರೋಪಿಗಳ ಪಾತ್ರ ಏನು...?

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
<div class="paragraphs"><p>ಕೃತ್ಯ ನಡೆಯಿತು ಎನ್ನಲಾದ ಪಟ್ಟಣಗೆರೆಯ ಶೆಡ್</p></div>

ಕೃತ್ಯ ನಡೆಯಿತು ಎನ್ನಲಾದ ಪಟ್ಟಣಗೆರೆಯ ಶೆಡ್

   
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಅವರನ್ನು ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳು ಒಂದೊಂದು ರೀತಿಯ ಪಾತ್ರವಹಿಸಿರುವುದು ಪೊಲೀಸ್‌ ತನಿಖೆ ವೇಳೆ ಗೊತ್ತಾಗಿದೆ. ಆರೋಪಿಗಳ ಸ್ವಂತ ಊರು, ಹಿನ್ನೆಲೆ, ನಟ ದರ್ಶನ್‌ಗೆ ಇವರು ಹೇಗೆ ಪರಿಚಯ ಎಂಬ ವಿವರ ಇಲ್ಲಿದೆ.

ಎ–1: ಪವಿತ್ರಾಗೌಡ (33)

ಬೆಂಗಳೂರಿನ ಆರ್‌.ಆರ್‌. ನಗರದಲ್ಲಿ ವಾಸ. ಮಾಡೆಲ್‌ ಹಾಗೂ ನಟಿ. ಛತ್ರಿಗಳು ಸಾರ್ ಛತ್ರಿಗಳು, ಅಗಮ್ಯ, ಸಾಗುವ ದಾರಿ, ಪ್ರೀತಿ ಕಿತಾಬು... ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಚಿತ್ರರಂಗ ದಲ್ಲಿ ಯಶಸ್ಸು ಲಭಿಸಲಿಲ್ಲ. ಹೀಗಾಗಿ, ಉದ್ಯಮದತ್ತ ಮುಖ ಮಾಡಿದ್ದರು. ರೆಡ್ ಕಾರ್ಪೆಟ್ ಸ್ಟುಡಿಯೊ–777 ಹೆಸರಿನ ಫ್ಯಾಷನ್ ಬುಟಿಕ್ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದ ಸಂಜಯ್‌ ಸಿಂಗ್ ಅವರು ಬೆಂಗಳೂರಿನಲ್ಲಿ ಐ.ಟಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಆಗ ಸಂಜಯ್‌ಸಿಂಗ್‌ ಹಾಗೂ ಪವಿತ್ರಾ ಪ್ರೀತಿಸಿ ಮದುವೆ ಆಗಿದ್ದರು. 2013ರಲ್ಲಿ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದರು. ನಂತರ, ಪವಿತ್ರಾಗೆ ಸಿನಿಮಾ ಸೆಟ್‌ವೊಂದರಲ್ಲಿ ದರ್ಶನ್‌ ಪರಿಚಯ ಆಗಿತ್ತು. ಹತ್ತು ವರ್ಷದಿಂದ ಆಪ್ತರಾಗಿದ್ದರು. ಕೃತ್ಯಕ್ಕೆ ಸಂಚು ರೂಪಿಸಿದ್ದೇ ಪವಿತ್ರಾ ಎಂಬ ಆರೋಪ ಇದೆ.

ADVERTISEMENT

ಪವಿತ್ರಾಗೌಡ

ಎ–2: ದರ್ಶನ್‌ ಅಲಿಯಾಸ್‌ ಡಿ ಬಾಸ್‌ (47)

ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್‌ ಟೌನ್‌ಶಿಪ್‌ನಲ್ಲಿ ವಾಸ. ಕನ್ನಡ ಚಿತ್ರರಂಗದ ಪ್ರಸಿದ್ಧ ನಟ. ತನ್ನ ಆಪ್ತ ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಮಾಹಿತಿ ತಿಳಿದ ಮೇಲೆ ರೇಣುಕಸ್ವಾಮಿ ಅವರನ್ನು ಅಪಹರಿಸಲು ಸಂಚು ರೂಪಿಸಿದ್ದರು ಎಂಬ ವಿಷಯ ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ. ಪಟ್ಟಣಗೆರೆಯ ಶೆಡ್‌ನಲ್ಲಿ ಕೊಲೆಯಾದ ವ್ಯಕ್ತಿಗೆ ಕಾಲಿನಿಂದ ಒದ್ದಿದ್ದರು. ಅಲ್ಲದೇ ಕೊಲೆ ಪ್ರಕರಣ ಮುಚ್ಚಿ ಹಾಕಲು ನಾಲ್ಕು ಮಂದಿಯನ್ನು ಪೊಲೀಸರಿಗೆ ಶರಣಾಗುವಂತೆ ಹೇಳಿ ₹30 ಲಕ್ಷಕ್ಕೆ ಡೀಲ್ ನೀಡಿದ್ದರು ಎಂಬುದು ಇವರ ಮೇಲಿರುವ ಆರೋಪ.

ದರ್ಶನ್‌ ಅಲಿಯಾಸ್‌ ಡಿ ಬಾಸ್‌

ಎ–3 ಪುಟ್ಟಸ್ವಾಮಿ ಅಲಿಯಾಸ್‌ ಕೆ.ಪವನ್‌

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಅಕ್ಕೂರು ಗ್ರಾಮದ ಪವನ್‌, ಆರ್‌.ಆರ್‌.ನಗರದ ಕೆಂಚೇನಹಳ್ಳಿಯ 24ನೇ ಕ್ರಾಸ್‌ನಲ್ಲಿ ಬಾಡಿಗೆ ಮನೆ ಪಡೆದು ನೆಲೆಸಿದ್ದರು. ದರ್ಶನ್‌ – ಪವಿತ್ರಾಗೌಡ ಅವರಿಗೆ ಸಹಾಯಕರು. ರೇಣುಕಸ್ವಾಮಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ವಿಚಾರವನ್ನು ದರ್ಶನ್ ಗಮನಕ್ಕೆ ತಂದಿದ್ದರು. ರೇಣುಕಸ್ವಾಮಿ ಮೃತಪಟ್ಟ ಬಳಿಕ ಮೃತದೇಹ ಎಸೆಯಲು ಹಾಗೂ ಕೇಶವ, ನಿಖಿಲ್‌, ಕಾರ್ತಿಕ್‌ ಶರಣಾಗುವಂತೆ ಯೋಜನೆ ರೂಪಿಸಿದ್ದ ಎನ್ನುವ ಆರೋಪ ಇವರ ಮೇಲಿದೆ.

ಕೆ.ಪವನ್‌

ಎ– 4: ರಾಘವೇಂದ್ರ


ಅಖಿಲ ಕರ್ನಾಟಕ ದರ್ಶನ್‌ ತೂಗುದೀಪ ಸೇನಾ ಅಧ್ಯಕ್ಷ ರಾಘವೇಂದ್ರ ಚಿತ್ರದುರ್ಗದ ಕೋಳಿ ಬುರುಜಿನಹಟ್ಟಿ ನಿವಾಸಿ. ನಟ ದರ್ಶನ್‌ ಅಭಿಮಾನಿಯಾಗಿದ್ದ ಈತ ‘ಡಿ ಬಾಸ್‌’ ಹೆಸರಿನಲ್ಲಿ ವಿವಿಧ ಚಟುವಟಿಕೆ ನಡೆಸುತ್ತಿದ್ದರು.  ಚಿತ್ರದುರ್ಗ ಭಾಗಕ್ಕೆ ದರ್ಶನ್‌ ಬಂದಾಗಲೆಲ್ಲಾ ಅವರ ಜೊತೆಯಲ್ಲಿ ಇರುತ್ತಿದ್ದ ರಾಘವೇಂದ್ರ, ದರ್ಶನ್‌ ಏನೇ ಹೇಳಿದರೂ ಚಾಚೂ ತಪ್ಪದೇ ಮಾಡುತ್ತಿದ್ದರು. ರೇಣುಕಸ್ವಾಮಿ ಅವರನ್ನು ಬೆಂಗಳೂರಿಗೆ ಕರೆದೊಯ್ಯುವ ವಿಚಾರದಲ್ಲೂ ರಾಘವೇಂದ್ರ ಹಿಂದೆ ಮುಂದೆ ಯೋಚನೆ ಮಾಡದೇ ದರ್ಶನ್‌ ಹೇಳಿದಂತೆ ಮಾಡಿದ್ದಾರೆ. ವೃತ್ತಿಯಿಂದ ಆಟೊ ಚಾಲಕ.

ರಾಘವೇಂದ್ರ

ಎ–5: ನಂದೀಶ


ಮಂಡ್ಯ ಜಿಲ್ಲೆಯ ಚಾಮಲಾಪುರ ಗ್ರಾಮದ ನಂದೀಶ್‌, ಆರ್‌ಆರ್‌ ನಗರದ ಕೃಷ್ಣಪ್ಪ ಲೇಔಟ್‌ನ 2ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ನೆಲೆಸಿದ್ದರು. ಹಿಂದಿನ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ದರ್ಶನ್‌ಗೆ ಮಂಡ್ಯದಲ್ಲಿ ಪರಿಚಯ. ನಂತರ ದರ್ಶನ್‌ ಜತೆಗೆ ಸೇರಿಕೊಂಡು ಕೆಲಸ ಮಾಡುತ್ತಿದ್ದರು. ರೇಣುಕಸ್ವಾಮಿ ಮೇಲೆ ಹಲ್ಲೆ ಹಾಗೂ ಎಲೆಕ್ಟ್ರಿಕ್‌ ಶಾಕ್‌ ನೀಡಿದ್ದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.

ನಂದೀಶ

ಎ–6: ಜಗದೀಶ್‌


ಜಗ್ಗು ಅಲಿಯಾಸ್‌ ಜಗದೀಶ ಚಿತ್ರದುರ್ಗದಲ್ಲಿ ಆಟೊ ಚಾಲಕರು. ಅಗಸನಕಲ್ಲು ಬಡಾವಣೆ ನಿವಾಸಿ. ರಾಘವೇಂದ್ರನಿಗೂ ಮೊದಲು ಈತ ದರ್ಶನ್ ತೂಗುದೀಪ ಸೇನಾ ಅಧ್ಯಕ್ಷ. ಸ್ಥಳೀಯವಾಗಿ ದರ್ಶನ್‌ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದರು. ದರ್ಶನ್‌ ಭೇಟಿ ಮಾಡಲು ರಾಘವೇಂದ್ರ ಕರೆದಾಗ ಈತ ನೇರವಾಗಿ ತೆರಳಿದ್ದಲ್ಲದೇ, ರೇಣುಕಸ್ವಾಮಿಯನ್ನು ಕರೆದೊಯ್ಯಲು ಸಹಾಯ ಮಾಡಿದ್ದರು. ಹಲವು ಸಂದರ್ಭಗಳಲ್ಲಿ ದರ್ಶನ್‌ ಭೇಟಿ ಮಾಡಿ ಫೋಟೊ ತೆಗೆಸಿಕೊಂಡಿದ್ದರು. ಮನೆ ತುಂಬೆಲ್ಲಾ ದರ್ಶನ್‌ ಜೊತೆಯಿರುವ ಚಿತ್ರಗಳನ್ನು ಹಾಕಿಕೊಂಡಿರುವ ಇವರು ಕಟ್ಟಾ ಅಭಿಮಾನಿ.

ಜಗದೀಶ್‌

ಎ–7: ಅನುಕುಮಾರ್‌


ಚಿತ್ರದುರ್ಗದ ಸಿಹಿನೀರು ಹೊಂಡ ಬಡಾವಣೆಯಲ್ಲಿ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದು ವೃತ್ತಿಯಲ್ಲಿ ಆಟೊ ಚಾಲಕರು. ರೇಣುಕಸ್ವಾಮಿ ಅಪಹರಣದಲ್ಲಿ ಈತ ರಾಘವೇಂದ್ರನಿಗೆ ಸಹಾಯ ಮಾಡಿದ್ದರು. ರೇಣುಕಸ್ವಾಮಿ ಜೊತೆ ಪಟ್ಟಣಗೆರೆ ಶೆಡ್‌ಗೆ ತೆರಳಿದ್ದ ಇವರನ್ನು ಅಲ್ಲಿ ಶೆಡ್‌ನೊಳಗೆ ಬಿಟ್ಟಿರಲಿಲ್ಲ. ರೇಣುಕಸ್ವಾಮಿ ಕೊಲೆಯಾದ ನಂತರ ಕೊಲೆ ತಪ್ಪು ಒ‍ಪ್ಪಿಕೊಳ್ಳುವಂತೆ ದರ್ಶನ್‌ನ ಇತರ ಸಹಚರರು ಒತ್ತಾಯ ಮಾಡಿದ್ದರು. ಅದಕ್ಕೆ ಒಪ್ಪದ ಈತ ಜೂನ್‌ 8ರ ರಾತ್ರಿಯೇ ಚಿತ್ರದುರ್ಗಕ್ಕೆ ವಾಪಸ್‌ ಹೋಗಿದ್ದರು. ಇವರು ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಸುದ್ದಿ ತಿಳಿದ ಈತನ ತಂದೆ ಚಂದ್ರಣ್ಣ ಹೃದಯಾಘಾತದಿಂದ ಮೃತಪಟ್ಟರು.

ಅನುಕುಮಾರ್‌

ಎ–8: ರವಿ


ಚಿತ್ರದುರ್ಗದ ತಾಲ್ಲೂಕಿನ ಐನಳ್ಳಿ ಕುರುಬರಹಟ್ಟಿ ಗ್ರಾಮದ ಸಿವಾಸಿಯಾದ ರವಿ, ದರ್ಶನ್‌ ಅಭಿಮಾನಿಯಲ್ಲ. ರಾಘವೇಂದ್ರ ತನ್ನ ಸ್ನೇಹಿತನೊಬ್ಬನ ಕಡೆಯಿಂದ ಕಾರು ಬಾಡಿಗೆಗೆ ಪಡೆದಿದ್ದರು, ಆ ಕಾರಿನ ಚಾಲಕರಾಗಿ ರವಿ ಬಂದಿದ್ದರು. ಬೆಂಗಳೂರಿಗೆ ಬಾಡಿಗೆಗೆ ಹೋಗುವುದಷ್ಟೇ ಇವರಿಗೆ ಗೊತ್ತಿತ್ತು. ರಾತ್ರಿ ರೇಣುಕಸ್ವಾಮಿ ಕೊಲೆಯಾದ ನಂತರ ಕೊಲೆ ಪ್ರಕರಣ ಒಪ್ಪಿಕೊಳ್ಳುವಂತೆ ಇವರಲ್ಲೂ ಮನವಿ ಮಾಡಲಾಗಿತ್ತು. ನಿರಾಕರಿಸಿದ್ದ ಇವರು ಕಾರಿನ ಬಾಡಿಗೆ ಪಡೆದು ಊರಿಗೆ ಹಿಂತಿರುಗಿದ್ದರು. ಪ್ರಕರಣದ ಗಂಭೀರತೆ ಅರಿತು ಚಿತ್ರದುರ್ಗದ ಡಿವೈಎಸ್‌ಪಿ ಕಚೇರಿಯಲ್ಲಿ ಶರಣಾಗಿದ್ದರು.

ರವಿ

ಎ –9: ರಾಜಾ


ಬೆಂಗಳೂರಿನ ಗಿರಿನಗರದ ನಿವಾಸಿ ರಾಜಾ ಅಲಿಯಾಸ್‌ ಧನರಾಜ್‌, ದರ್ಶನ್‌ ತಂಡದಲ್ಲಿ ಗುರುತಿಸಿಕೊಂಡಿದ್ದವರು. ಪವಿತ್ರಾಗೌಡ ಅವರ ಕಾರು ಚಾಲಕ. ಪವಿತ್ರಾ ಅವರ ಬುಟೀಕ್‌ ಶಾಪ್‌ ನಿರ್ವಹಣೆ ಮಾಡುತ್ತಿದ್ದ ಅವರು ಪವಿತ್ರಾ ಜತೆಗೆ ಶೆಡ್‌ಗೆ ಬಂದಿದ್ದರು. ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಮೃತದೇಹ ಸಾಗಿಸಲು ಸಹಾಯ ಮಾಡಿದ್ದರು. ಅಲ್ಲದೇ ರೇಣುಕಸ್ವಾಮಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡಿದ್ಬಾರೆಂಬ ಎಂಬ ಆರೋಪ ಇವರ ಮೇಲಿದೆ.

ರಾಜಾ ಅಲಿಯಾಸ್‌ ಧನರಾಜ್‌

ಎ–10: ವಿನಯ್

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಸ್ಟೋನಿ ಬ್ರೂಕ್‌ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ ಮಾಲೀಕರು. ದರ್ಶನ್‌ ಆಪ್ತರು. ತಮ್ಮ ಮಾವ ಪಟ್ಟಣಗೆರೆ ಜಯಣ್ಣಗೆ ಸೇರಿದ ಶೆಡ್ ಅನ್ನು ನಿರ್ವಹಣೆ ಮಾಡುತ್ತಿದ್ದರು. ಕೃತ್ಯಕ್ಕೂ ಮೊದಲು ದರ್ಶನ್‌ ಹಾಗೂ ಪವಿತ್ರಾಗೌಡ, ವಿನಯ್‌ ಪಬ್‌ನಲ್ಲಿ ಪಾರ್ಟಿ ನಡೆಸಿದ್ದರು. ಕೊಲೆ ನಡೆದ ಮೇಲೆ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದ ಆರೋಪ ಇವರ ಮೇಲಿದೆ.

ವಿನಯ್

ಎ–11: ನಾಗರಾಜ್‌


ಮೈಸೂರು ರಾಮಕೃಷ್ಣ ನಗರದ ನಿವಾಸಿ. ಮೈಸೂರು ಸ್ಥಳೀಯ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಕಳೆದ 15 ವರ್ಷಗಳಿಂದ ದರ್ಶನ್‌ ಜತೆಗೆ ಕೆಲಸ ಮಾಡುತ್ತಿದ್ದಾರೆ. ದರ್ಶನ್‌ ಅವರ ವೈಯಕ್ತಿಕ ಕೆಲಸಗಳನ್ನು ಮಾಡಿಕೊಡುತ್ತಿದ್ದರು. ಮೈಸೂರಿನಲ್ಲಿರುವ ದರ್ಶನ್‌ ಅವರ ಫಾರಂ ಹೌಸ್‌ನಲ್ಲಿ ಇರುತ್ತಿದ್ದರು.

ನಾಗರಾಜ್‌

ಎ–12: ಲಕ್ಷ್ಮಣ್‌


ದರ್ಶನ್‌ ಅವರ ಕಾರು ಚಾಲಕ. ಬೆಂಗಳೂರಿನ ಆರ್‌ಪಿಸಿ ಲೇಔಟ್‌ನಲ್ಲಿ ನೆಲೆಸಿದ್ದ ಇವರು ಕೃತ್ಯ ನಡೆದ ಸ್ಥಳದಲ್ಲಿದ್ದರು. ಕೊಲೆ ಪ್ರಕರಣದಲ್ಲಿ ದರ್ಶನ್‌ ರಕ್ಷಣೆಗೆ ಮುಂದಾಗಿದ್ದ ಇವರು ದರ್ಶನ್‌ ಬಚಾವ್‌ ಮಾಡಲು ನಾಲ್ವರಿಗೆ ಹಣದ ಆಸೆ ತೋರಿಸಿದ್ದಾರೆ ಎಂಬ ಆರೋಪ ಇದೆ. 

ಲಕ್ಷ್ಮಣ್‌

ಎ–13: ದೀಪಕ್‌

ಬೆಂಗಳೂರಿನ ರಾಜರಾಜೇಶ್ವರಿ ನಗರ ಬಿಇಎಂಎಲ್‌ ಲೇಔಟ್‌ ನಿವಾಸಿ. ದರ್ಶನ್‌ ಆಪ್ತ ಬಳಗದ ಸದಸ್ಯರು. ಬಿಜೆಪಿಯ ಬೆಂಗಳೂರಿನ ಪ್ರಭಾವಿ ಶಾಸಕ, ಮಾಜಿ ಸಚಿವರೊಬ್ಬರ ಸಂಬಂಧಿ. ಈತ ರಿಯಲ್‌ ಎಸ್ಟೇಟ್‌, ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದಾರೆ. ಪಟ್ಟಣಗೆರೆಯ ಶೆಡ್‌ ಅನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದರಲ್ಲದೇ, ಕೊಲೆ ಪ್ರಕರಣದಲ್ಲಿ ಇವರು ಸಹ ಭಾಗಿ ಆಗಿರುವುದಕ್ಕೆ ಪೊಲೀಸರಿಗೆ ಪುರಾವೆಗಳು ಸಿಕ್ಕಿವೆ.

ಎ.14: ಪ್ರದೂಷ್‌


ಬೆಂಗಳೂರಿನ ಗಿರಿನಗರ ನಿವಾಸಿ. ದರ್ಶನ್ ಅಭಿಮಾನಿ. ಕೊಲೆ ಪ್ರಕರಣದಲ್ಲಿ ದರ್ಶನ್‌ ರಕ್ಷಣೆ ಮಾಡಲು ₹30 ಲಕ್ಷ ಪಡೆದಿದ್ದ ಇವರು, ಇತರೆ ನಾಲ್ವರಿಗೆ ನೀಡಿದ್ದರು. ಈ ಹಣವನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಎ–15: ಕಾರ್ತಿಕ್‌ ಅಲಿಯಾಸ್‌ ಕಪ್ಪೆ (27)

ಗಿರಿನಗರದ ಜಿ.ಬ್ಲಾಕ್‌ನಲ್ಲಿ ಕಾರ್ತಿಕ್ ನೆಲೆಸಿದ್ದರು. ಪಟ್ಟಣಗೆರೆಯ ಶೆಡ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಇವರ ವಿರುದ್ಧ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಗಲಾಟೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಕೊಲೆ ಆರೋಪ ಹೊತ್ತು ದರ್ಶನ್‌ ಪರವಾಗಿ ಜೈಲಿಗೆ ಹೋಗಲು ಸಿದ್ಧವಾಗಿದ್ದರು. ಪೊಲೀಸ್‌ ವಿಚಾರಣೆಯಲ್ಲಿ ದರ್ಶನ್‌ ಹೆಸರು ಹೇಳುವುದಿಲ್ಲ ಎಂದು ಒಪ್ಪಿಕೊಂಡು ವಿನಯ್‌ನಿಂದ ₹5 ಲಕ್ಷ ಪಡೆದುಕೊಂಡಿದ್ದಾರೆ ಎಂಬ ಆರೋಪವಿದೆ.

ಕಾರ್ತಿಕ್‌ ಅಲಿಯಾಸ್‌ ಕಪ್ಪೆ

ಎ–16: ಕೇಶವಮೂರ್ತಿ(27)

ಬೆಂಗಳೂರಿನ ಗಿರಿನಗರದ ಹೀರಣ್ಣಗುಡ್ಡದಲ್ಲಿ ನೆಲೆಸಿದ್ದರು. ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಇವರು ದರ್ಶನ್‌ ಅಭಿಮಾನಿ. ಕೊಲೆ ಪ್ರಕರಣದಲ್ಲಿ ಆರೋಪ ಹೊತ್ತು ಜೈಲಿಗೆ ಹೋಗಲು ಸಿದ್ಧರಾಗಿದ್ದರು. ಶೆಡ್‌ನಿಂದ ಸುಮನಹಳ್ಳಿ ರಾಜಕಾಲುವೆಗೆ ಮೃತದೇಹ ಸಾಗಿಸಿ ಎಸೆಯುವ ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಪೊಲೀಸರಿಗೆ ಶರಣಾದ ಮೇಲೆ ವಿಚಾರಣೆ ವೇಳೆ ಕೊಲೆ ರಹಸ್ಯ ಬಾಯ್ಬಿಟ್ಟಿದ್ದರು. ಇವರ ಹೇಳಿಕೆ ಆಧಾರದಲ್ಲಿಯೇ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ನಂತರ, ತನಿಖೆಯ ದಿಕ್ಕೇ ಬದಲಾಯಿತು.

ಎ–17: ನಿಖಿಲ್‌ ನಾಯಕ್‌ (21)

ಬನ್ನೇರುಘಟ್ಟ ಮುಖ್ಯರಸ್ತೆಯ ಕೆಂಬತಹಳ್ಳಿಯಲ್ಲಿ ವಾಸ. ದರ್ಶನ್‌ ಅವರಿಂದ ದುಡ್ಡು ಪಡೆದು ಪೊಲೀಸರಿಗೆ ಶರಣಾದ ಆರೋಪಿಗಳಲ್ಲಿ ಒಬ್ಬರು. ಕೃತ್ಯ ನಡೆದ ಸ್ಥಳಕ್ಕೆ ಬಂದಿದ್ದರು. ಪವಿತ್ರಾಗೌಡ ಅವರ ಸಹಾಯಕ ಪವನ್‌ ಸೂಚನೆ ಮೇರೆಗೆ ಸ್ಥಳಕ್ಕೆ ಬಂದಿದ್ದರು. ಮೃತದೇಹ ಎಸೆದು ಸಾಕ್ಷ್ಯನಾಶ ಮಾಡಲು ಒಪ್ಪಿಕೊಂಡಿದ್ದ ಆರೋಪ ಇವರ ಮೇಲಿದೆ. ಈ ಕೃತ್ಯಕ್ಕೆ ₹5 ಲಕ್ಷಕ್ಕೆ ಒಪ್ಪಂದ ಆಗಿತ್ತು. ಶರಣಾದ ಮೇಲೆ ವಿಚಾರಣೆಯಲ್ಲಿ ದರ್ಶನ್‌ ಆಪ್ತ ವಿನಯ್‌, ನಾಗರಾಜ್‌, ಪವನ್‌ ಹೆಸರು ಬಾಯ್ಬಿಟ್ಟಿದ್ದರು. ಈ ಹೇಳಿಕೆ ಆಧಾರದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.

ನಿಖಿಲ್‌ನಾಯಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.