ADVERTISEMENT

ಆಳ–ಅಗಲ | ನರೇಂದ್ರ ಮೋದಿ ಸರ್ಕಾರಕ್ಕೆ ಒಂಬತ್ತು ವರ್ಷ

​ಪ್ರಜಾವಾಣಿ ವಾರ್ತೆ
Published 30 ಮೇ 2023, 21:32 IST
Last Updated 30 ಮೇ 2023, 21:32 IST
ನರೇಂದ್ರ ಮೋದಿ
ನರೇಂದ್ರ ಮೋದಿ   
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಕೇಂದ್ರದಲ್ಲಿ ಸರ್ಕಾರ ರಚಿಸಿ ಒಂಬತ್ತು ವರ್ಷಗಳು ತುಂಬಿವೆ. 2014ರ ಮೇಯಲ್ಲಿ ರಚನೆಯಾದ ಸರ್ಕಾರವು, 2019ರಲ್ಲಿ ಎರಡನೇ ಅವಧಿಗೂ ಆರಿಸಿಬಂದಿತ್ತು. ಈ ಒಂಬತ್ತು ವರ್ಷಗಳ ಅವಧಿಯಲ್ಲಿ ಮೋದಿ ಅವರ ಸರ್ಕಾರವು ಹಲವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ಹಲವು ಹೊಸ ಕಾರ್ಯಕ್ರಮಗಳನ್ನು ಆರಂಭಿಸಿದೆ. ಹಲವು ಕಾನೂನುಗಳನ್ನು ಬದಲಿಸಿದೆ. ಜನ ಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹ ಕ್ರಮಗಳಲ್ಲಿ, ಹಲವು ಯಶಸ್ವಿಯಾಗಿವೆ. ಇನ್ನೂ ಹಲವಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಮೋದಿ ನೇತೃತ್ವದ ಸರ್ಕಾರದ ಈ ಒಂಬತ್ತು ವರ್ಷಗಳ ಅಧಿಕಾರದಲ್ಲಿ ದೇಶದಲ್ಲಾದ ಏಳು–ಬೀಳುಗಳತ್ತ ಒಂದು ಕಿರುನೋಟ ಇಲ್ಲಿದೆ.

2014: ಸ್ವಚ್ಛಭಾರತ

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ವರ್ಷವಿದು. ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಹೊಸ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಈ ಹಿಂದಿನಿಂದ ಜಾರಿಯಲ್ಲಿದ್ದ ಹಲವು ಕಾರ್ಯಕ್ರಮಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳ ಹೆಸರನ್ನು ಬದಲಿಸಲಾಗಿದೆ. ಗಂಗಾ ನದಿ ಸ್ವಚ್ಛತೆಗಾಗಿ ಹಲವು ವರ್ಷಗಳಿಂದ ಜಾರಿಯಲ್ಲಿದ್ದ ‘ನಿರ್ಮಲ ಗಂಗಾ’ ಕಾರ್ಯಕ್ರಮದ ಹೆಸರನ್ನು ಮೋದಿ ಸರ್ಕಾರವು 2014ರಲ್ಲಿ ‘ನಮಾಮಿ ಗಂಗಾ’ ಎಂದು ಬದಲಿಸಿತ್ತು.  ಈ ವರ್ಷದಲ್ಲಿ ಸರ್ಕಾರವು ಆರಂಭಿಸಿದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ‘ಸ್ವಚ್ಛ ಭಾರತ ಅಭಿಯಾನ’ವು ಪ್ರಮುಖವಾದುದು. ಈ ಯೋಜನೆಯೂ ಸಂಪೂರ್ಣವಾಗಿ ಹೊಸದಾಗಿರಲಿಲ್ಲ. ಈ ಹಿಂದೆ ಜಾರಿಯಲ್ಲಿದ್ದ ‘ನೈರ್ಮಲ್ಯ ಭಾರತ’ ಯೋಜನೆಯ ಹೆಸರನ್ನು ಸ್ವಚ್ಛ ಭಾರತ ಎಂದು ಬದಲಿಸಲಾಗಿತ್ತು. ಆದರೆ ಯೋಜನೆಯ ರೂಪುರೇಷೆಗಳನ್ನು ಬದಲಿಸಲಾಗಿತ್ತು. ದೇಶದ ಎಲ್ಲಾ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮತ್ತು ಬಳಕೆಯನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿತ್ತು.ಈಗ ದೇಶದ ಶೇ 99.6ರಷ್ಟು ಮನೆಗಳಲ್ಲಿ ಶೌಚಾಲಯವಿದೆ ಎಂದು ಸರ್ಕಾರದ ದಾಖಲೆಗಳು ಹೇಳುತ್ತವೆ. ಇದು ಕೇಂದ್ರ ಸರ್ಕಾರದಲ್ಲಿ ಅತಿಹೆಚ್ಚು ಪ್ರಗತಿ ಸಾಧಿಸಿದ ಯೋಜನೆಗಳಲ್ಲಿ ಒಂದು. ಸ್ವಚ್ಛ ಭಾರತ ಕಾರ್ಯಕ್ರಮದ ಅಡಿ ‘ಭಾರತವು ಬಯಲು ಶೌಚ ಮುಕ್ತ ದೇಶ’ವಾಗಿದೆ ಎಂದು 2019ರ ಅಕ್ಟೋಬರ್ 2ರಂದು ಕೇಂದ್ರ  ಸರ್ಕಾರ ಘೋಷಿಸಿತ್ತು. ಆದರೆ ದೇಶದಲ್ಲಿ ಶೌಚಾಲಯ ಹೊಂದಿರುವ ಮನೆಗಳ ಪ್ರಮಾಣ ಶೇ 100ರಷ್ಟಾಗಿಲ್ಲ.

2015: ನೀತಿ ಆಯೋಗ ಮತ್ತು ‘ಸೂಟು ಬೂಟಿನ ಸರ್ಕಾರ’

ADVERTISEMENT

ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿತ್ತು. ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳುವ ನಿಯಮಗಳನ್ನು ಸರಳಗೊಳಿಸಲಾಗಿತ್ತು. ಈ ಸುಗ್ರೀವಾಜ್ಞೆಗೆ ವಿರೋಧ ಪಕ್ಷಗಳಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ರೈತರ ಹಕ್ಕುಗಳನ್ನು ಮೊಟಕು ಮಾಡಲಾಗಿದೆ ಎಂದು ವಿಪಕ್ಷಗಳು ಆರೋ‍ಪಿಸಿದ್ದವು. ವಿರೋಧ ಪಕ್ಷಗಳು ನೀಡಿದ್ದ ಕೆಲವಾರು ತಿದ್ದುಪಡಿಗಳನ್ನು ಸೇರಿಸಿಕೊಂಡು ಸರ್ಕಾರವು ಹೊಸದಾಗಿ ಮಸೂದೆ ಮಂಡಿಸಿತ್ತು.  2015ರಲ್ಲಿ ಅತಿಹೆಚ್ಚು ಸದ್ದು ಮಾಡಿದ ವಿಚಾರವೆಂದರೆ ಮೋದಿ ಅವರ ಚಿನ್ನದ ಎಳೆಯ ಸೂಟು. ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ್ದರು. ಆ ಕಾರ್ಯಕ್ರಮದಲ್ಲಿ ಭಾಗಿಯಾಗುವಾಗ ಮೋದಿ ಅವರು ಧರಿಸಿದ್ದ ಸೂಟಿನಲ್ಲಿ ‘ನರೇಂದ್ರ ದಾಮೋದರದಾಸ್ ಮೋದಿ’ ಎಂದು ಚಿನ್ನದ ಎಳೆಗಳಿಂದ ಹೆಣೆಯಲಾಗಿತ್ತು. ಇದಕ್ಕೆ ವಿರೋಧ ಪಕ್ಷಗಳು ಮತ್ತು ಸಾಮಾಜಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳು ಮೋದಿ ಸರ್ಕಾರವನ್ನು ‘ಸೂಟು ಬೂಟಿನ ಸರ್ಕಾರ’ ಎಂದು ಕರೆದಿದ್ದವು. ಮೋದಿ ಸರ್ಕಾರವು ಯೋಜನಾ ಆಯೋಗದ ಹೆಸರನ್ನು ‘ನೀತಿ ಆಯೋಗ’ ಎಂದು ಬದಲಿಸಿತು.

2016: ನೋಟು ರದ್ದತಿ

‘ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ₹500 ಹಾಗೂ ₹1000 ಮುಖಬೆಲೆಯ ನೋಟುಗಳು ರದ್ದಾಗಲಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನ. 8ರಂದು ಘೋಷಣೆ ಮಾಡಿದ್ದರು. ‘ಹೆಚ್ಚು ಮುಖಬೆಲೆಯ ನೋಟುಗಳಿಂದ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಜೊತೆಗೆ ದೇಶದಲ್ಲಿನ ಭಯೋತ್ಪಾದನೆಯ ನಿಗ್ರಹಕ್ಕಾಗಿ ಈ ಕ್ರಮ ಕೈಗೊಳ್ಳುವುದು ಜರೂರು’ ಎಂದೂ ಪ್ರತಿಪಾದಿಸಿದ್ದರು. ನೋಟು ರದ್ದತಿಯ ಕಾರಣ ಸುಮಾರು 100 ಜನರು ತಮ್ಮ ಪ್ರಾಣ ಕಳೆದುಕೊಂಡರು. ‘ನನಗೆ ಇನ್ನು 50 ದಿನ ಸಮಯಾವಕಾಶ ನೀಡಿ. ಒಂದು ವೇಳೆ ಈ ದಿನಗಳ ಒಳಗೆ ನಿಮ್ಮ ಕಷ್ಟಗಳು ಸರಿಹೋಗದಿದ್ದರೆ ನನ್ನನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿ’ ಎಂದು ಪ್ರಧಾನಿ ಮೋದಿ ಅವರು ಕಾರ್ಯಕ್ರಮವೊಂದರಲ್ಲಿ ಜನರಿಗೆ ಕರೆ ನೀಡಿದ್ದರು. ‘ಇದೊಂದು ‘ಆರ್ಥಿಕ ನರಮೇಧ’ ಮತ್ತು ‘ವ್ಯವಸ್ಥಿತ ಲೂಟಿ’ ಎಂದು ವಿರೋಧ ಪಕ್ಷಗಳು ಕೇಂದ್ರವನ್ನು ದೂರಿದ್ದವು. ದೇಶದಲ್ಲಿ ಯಾವ ಪ್ರಮಾಣದಲ್ಲಿ ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ಕಡಿಮೆ ಆಗಿದೆ ಎನ್ನುವ ಬಗ್ಗೆ ಈವರೆಗೂ ಕೇಂದ್ರ ಸರ್ಕಾರವು ಯಾವುದೇ ಮಾಹಿತಿ ನೀಡಿಲ್ಲ. ಭಾರತೀ ರಿಸರ್ವ್‌ ಬ್ಯಾಂಕ್‌ 2023ರ ಮೇ 19ರಂದು ₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಿತು. ಹೆಚ್ಚುಮುಖಬೆಲೆಯ ನೋಟುಗಳು ಭಯೋತ್ಪಾದನೆ ಹೆಚ್ಚಳಕ್ಕೆ ಭ್ರಷ್ಟಾಚಾರಕ್ಕೆ ಇಂಬು ನೀಡುತ್ತದೆ ಎಂದಿದ್ದ ಕೇಂದ್ರವು ಈಗ 2000 ಮುಖಬೆಲೆಯ ನೋಟುಗಳನ್ನೂ ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿದೆ.

‘ಹಾಗಾದರೆ 2016ರಲ್ಲಿ ಕೇಂದ್ರದ ನೋಟು ರದ್ದತಿಯು ‘ತಪ್ಪು ನಡೆ’ಯಾಗಿತ್ತೇ?’ ಎಂದು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದಿಕೊಂಡಿವೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ: ಗ್ರಾಮೀಣ ಮಹಿಳೆಯರು ಸೌದೆ ಒಲೆ ಉರಿಸಬಾರದು. ಇದರಿಂದ ಅವರಿಗೆ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಜೊತೆಗೆ ಪರಿಸರಕ್ಕೂ ಮಾರಕವಾದುದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯನ್ನು ಜಾರಿಗೆ ತಂದಿತು. 2016ರ ಮೇ 1ರಂದು ಪ್ರಧಾನಿ ಮೋದಿ ಅವರು ಈ ಯೋಜನೆಯನ್ನು ಉದ್ಘಾಟನೆ ಮಾಡಿದರು. ಎಲ್‌‍ಪಿಜಿ ಸಿಲಿಂಡರ್‌ಗಳಿಗೆ ಕೇಂದ್ರವು ಸಹಾಯಧನ ನೀಡುತ್ತಿತ್ತು. ಆದರೆ ಕಾಲಕ್ರಮೇಣ ಸಿಲಿಂಡರ್‌ ಬೆಲೆಯು ಗಗನಮುಖಿಯಾಗಿದ್ದರಿಂದ ಗ್ರಾಮೀಣ ಭಾಗದ ಮಹಿಳೆಯರು ಸಿಲಿಂಡರ್‌ ತೊರೆದು ಮತ್ತೊಮ್ಮೆ ಸೌದೆ ಒಲೆಯತ್ತ ವಾಲಿದರು ಎಂದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ನಿರ್ದಿಷ್ಟ ದಾಳಿ: ಸೆ.18ರಂದು ಉರಿ ಸೇನಾ ನೆಲೆಗೆ ನುಗ್ಗಿದ್ದ ಭಯೋತ್ಪಾದಕರು ಭಾರತದ 19 ಸೈನಿಕರನ್ನು ಹತ್ಯೆ ಮಾಡಿದರು. ಇದಕ್ಕೆ ಪ್ರತೀಕಾರವಾಗಿ ಕೇಂದ್ರ ಸರ್ಕಾರವು ಸೆ.28ರಂದು ‘ನಿರ್ದಿಷ್ಟ ದಾಳಿ’ ನಡೆಸಿತು. ಸರ್ಕಾರದ ಈ ಕ್ರಮವನ್ನು ಹಲವು ವಿರೋಧ ಪಕ್ಷಗಳು ಸ್ವಾಗತಿಸಿದರೆ ಕೆಲವರು ವಿರೋಧಿಸಿದರು. ದಾಳಿಯ ಕುರಿತು ಮೊದಲು ಮೆಚ್ಚುಗೆಯ ಮಾತನಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನಂತರದ ದಿನಗಳಲ್ಲಿ ಮೋದಿ ಅವರು ‘ರಕ್ತದ ವ್ಯಾಪಾರಿ’ ಎಂದು ಕರೆದಿದ್ದರು.

2017: ಜಿಎಸ್‌ಟಿ: ಒಂದು ದೇಶ ಒಂದು ತೆರಿಗೆ

ಒಂದು ದೇಶ ಒಂದು ತೆರಿಗೆ ಪರಿಕಲ್ಪನೆಯಲ್ಲಿ ‘ಸರಕು ಮತ್ತು ಸೇವಾ ತೆರಿಗೆ–ಜಿಎಸ್‌ಟಿ’ಯನ್ನು 2017ರ ಜುಲೈನಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿತು. ಈ ಹಿಂದಿನ ಯುಪಿಎ ಸರ್ಕಾರವು ತರಲು ಹೊರಟಿದ್ದ ಜಿಎಸ್‌ಟಿಗಿಂತ ಸಂಪೂರ್ಣ ಭಿನ್ನವಾದ ಜಿಎಸ್‌ಟಿ ಇದಾಗಿತ್ತು. ಯುಪಿಎ ಸರ್ಕಾರವು ಗರಿಷ್ಠ ಶೇ 18ರಷ್ಟು ತೆರಿಗೆ ಹೇರುವ ಪ್ರಸ್ತಾವ ಇರಿಸಿಕೊಂಡಿತ್ತು. ಆದರೆ ಮೋದಿ ಸರ್ಕಾರವು ಗರಿಷ್ಠ ತೆರಿಗೆ ಪ್ರಮಾಣವನ್ನು ಶೇ 28ರವರೆಗೆ ನಿಗದಿ ಮಾಡಿತ್ತು. ಟ್ರ್ಯಾಕ್ಟರ್‌ ಮತ್ತು ಕೃಷಿ ಯಂತ್ರೋಪಕರಣಗಳಿಗೆ ಶೇ 28ರಷ್ಟು ಜಿಎಸ್‌ಟಿ ನಿಗದಿ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಜಿಎಸ್‌ಟಿ ಜಾರಿಯಲ್ಲಿ ಹಲವು ತೊಡಕುಗಳು ಎದುರಾದರೂ ಎಲ್ಲಾ ರಾಜ್ಯಗಳೂ ಜಿಎಸ್‌ಟಿ ವ್ಯವಸ್ಥೆಗೆ ವರ್ಗಾವಣೆಯಾದವು. ಈ ವ್ಯವಸ್ಥೆಯಿಂದ ರಾಜ್ಯ ಸರ್ಕಾರಗಳಿಗೆ ಆದ ತೆರಿಗೆ ನಷ್ಟವನ್ನು ತುಂಬಿಕೊಡಲು ಕೇಂದ್ರ ಸರ್ಕಾರ ಒಪ್ಪಿಕೊಂಡಿತು. ಇದಕ್ಕಾಗಿ ಜಿಎಸ್‌ಟಿ ಪರಿಹಾರ ನೀಡುವ ವ್ಯವಸ್ಥೆ ಜಾರಿಗೆ ಬಂದಿತು. ಆದರೆ ಈ ವ್ಯವಸ್ಥೆ ಅಡಿ ರಾಜ್ಯ ಸರ್ಕಾರಗಳಿಗೆ ನೀಡಬೇಕಿದ್ದ ಪರಿಹಾರವನ್ನು ಈವರೆಗೆ ಪೂರ್ಣಪ್ರಮಾಣದಲ್ಲಿ ನೀಡಿಯೇ ಇಲ್ಲ. ಜಿಎಸ್‌ಟಿ ವ್ಯವಸ್ಥೆಯಿಂದ ದೇಶದಲ್ಲಿ ತೆರಿಗೆ ವರಮಾನ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳಿಗೆ ತೆರಿಗೆ ಹೊರೆ ಹೆಚ್ಚಾಗಿದೆ ಎಂಬ ಆರೋಪವೂ ಇದೆ. ದ್ವಿಚಕ್ರವಾಹನಗಳ ಮೇಲೂ ದೊಡ್ಡ ಪ್ರಮಾಣದ ಜಿಎಸ್‌ಟಿ ಹೊರೆ ಇದೆ. ಇದರಿಂದ ಅವುಗಳ ಮಾರಾಟ ಕುಸಿಯುತ್ತಿದೆ. ಇದನ್ನು ಇಳಿಸಿ ಎಂದು ದ್ವಿಚಕ್ರವಾಹನಗಳ ತಯಾರಕರ ಒಕ್ಕೂಟ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದೆ.

2018: ಆಯುಷ್ಮಾನ್‌ ಭಾರತ

ಆಯುಷ್ಮಾನ್‌ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಎಂಬ ರಾಷ್ಟ್ರೀಯ ಆರೋಗ್ಯ ಭದ್ರತೆಯ ಯೋಜನೆಯನ್ನು ಸೆ. 23ರಂದು ಆರಂಭಿಸಲಾಯಿತು. 10 ಕೋಟಿ ಕುಟುಂಬಗಳ ಸುಮಾರು 50 ಕೋಟಿ ಜನರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

2019: ಪುಲ್ಮಾಮಾ ದಾಳಿ ಮತ್ತು ಬಿಜೆಪಿಯ ಗೆಲುವು

2019 ಮೋದಿ ನೇತೃತ್ವದ ಸರ್ಕಾರಕ್ಕೆ ಅತ್ಯಂತ ಮಹತ್ವದ ವರ್ಷವಾಗಿತ್ತು. ಮೋದಿ ಸರ್ಕಾರವು ಲೋಕಸಭಾ ಚುನಾವಣೆ ಎದುರಿಸಬೇಕಿತ್ತು. ಚುನಾವಣೆ ಇನ್ನೇನು ಹತ್ತಿರದಲ್ಲಿದೆ ಎನ್ನುವಾಗ ಜಮ್ಮುವಿನ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ವಾಹನಗಳ ಮೇಲೆ ಉಗ್ರರ ದಾಳಿ ನಡೆದಿತ್ತು. ಸಿಆರ್‌ಪಿಎಫ್‌ನ 40 ಯೋಧರು ಮೃತಪಟ್ಟಿದ್ದರು. ಅಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಜಮ್ಮುವಿಗೆ ತಂದಿದ್ದು ಹೇಗೆ ಎಂಬುದರ ಕುರಿತು ನಡೆಯುತ್ತಿರುವ ತನಿಖೆ ಇನ್ನೂ ಮುಗಿದಿಲ್ಲ. ‘ಸರ್ಕಾರದ ಕಡೆಯಿಂದ ಲೋಪಗಳಾಗಿತ್ತು’ ಎಂದು ಜಮ್ಮು–ಕಾಶ್ಮೀರದ ಅಂದಿನ ರಾಜ್ಯಪಾಲರಾಗಿದ್ದ ಸತ್ಯಪಾಲ್‌ ಮಲಿಕ್‌ ಈಚೆಗೆ ಹೇಳಿದ್ದರು. ಪುಲ್ವಾಮ ದಾಳಿಯ ಬೆನ್ನಲ್ಲೇ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ದಾಳಿ ನಡೆಸಿತ್ತು. ಬಾಲಾಕೋಟ್‌ ವೈಮಾನಿಕ ದಾಳಿ ಮತ್ತು ನಂತರದ ಸೇನಾ ಕಾರ್ಯಾಚರಣೆಗಳು ಹೆಚ್ಚು ಸದ್ದು ಮಾಡಿದ್ದವು. ನಂತರ ನಡೆದ ಚುನಾವಣೆಯಲ್ಲಿ ಮೋದಿ ಸರ್ಕಾರವು ಅಭೂತಪೂರ್ವ ಗೆಲುವು ಸಾಧಿಸಿತ್ತು. ಅದೇ ವರ್ಷದ ಆಗಸ್ಟ್‌ನಲ್ಲಿ ಜಮ್ಮು–ಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ರದ್ದುಪಡಿಸಲಾಯಿತು ಮತ್ತು ಜಮ್ಮು–ಕಾಶ್ಮೀರ ಮತ್ತು ಲಡಾಖ್‌ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಯಿತು. ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನವನ್ನೂ ವಾಪಸ್‌ ಪಡೆಯಲಾಯಿತು. ಇದಕ್ಕೆ ಅಲ್ಲಿನ ನಿವಾಸಿಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ರಾಜಕೀಯ ನಾಯಕರನ್ನು ವರ್ಷಗಟ್ಟಲೆ ಗೃಹಬಂಧನದಲ್ಲಿ ಇರಿಸಲಾಗಿತ್ತು. ಕಾಶ್ಮೀರದಲ್ಲಿ ಹಲವು ತಿಂಗಳವರೆಗೆ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗಿತ್ತು. ಪೌರತ್ವ ಕಾಯ್ದೆಗೆ (ಸಿಎಎ) ತಿದ್ದುಪಡಿ ತಂದಿದ್ದು ಮೋದಿ ಸರ್ಕಾರದ ಅತ್ಯಂತ ಪ್ರಮುಖ ನಿರ್ಧಾರಗಳಲ್ಲಿ ಒಂದು. ಭಾರತದ ನೆರೆಯ ದೇಶಗಳಲ್ಲಿ ಕಿರುಕುಳಕ್ಕೆ ಗುರಿಯಾದ ಧಾರ್ಮಿಕ ಅಲ್ಪಸಂಖ್ಯಾತ ಹಿಂದೂ ಸಿಖ್‌ ಜೈನ ಬೌದ್ಧ ಕ್ರೈಸ್ತ ಧರ್ಮೀಯರಿಗೆ ಭಾರತದ ಪೌರತ್ವ ನೀಡುವ ಸರ್ಕಾರದ ಈ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಕಾಯ್ದೆಯಿಂದ ಮುಸ್ಲಿಮರನ್ನು ಹೊರಗಿಡಲಾಗಿತ್ತು. ಇದರ ವಿರುದ್ಧ ಅಸ್ಸಾಂನಲ್ಲಿ ಭಾರಿ ಪ್ರತಿಭಟನೆ ನಡೆಯಿತು. ದೆಹಲಿಯಲ್ಲಿ ಆರಂಭವಾದ ಪ್ರತಿಭಟನೆ ದೇಶದಾದ್ಯಂತ ಪಸರಿಸಿತು. ಮೋದಿ ಆಡಳಿತದಲ್ಲಿ ಸರ್ಕಾರದ ವಿರುದ್ಧ ನಡೆದ ಮೊದಲ ಅತ್ಯಂತ ದೊಡ್ಡ ಪ್ರತಿಭಟನೆ ಇದು. ಹಲವು ತಿಂಗಳ ಕಾಲ ನಡೆದ ಈ ಪ್ರತಿಭಟನೆ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಲೇ ಹೋಯಿತು. ಕೆಲವೆಡೆ ಹಿಂಸಾಚಾರವೂ ನಡೆದಿತ್ತು. ಆದರೆ ವರ್ಷಾಂತ್ಯದ ವೇಳೆಗೆ ಕೋವಿಡ್‌ ಬಂದದ್ದರಿಂದ ಮತ್ತು 2020ರಲ್ಲಿ ಲಾಕ್‌ಡೌನ್‌ನ ಕಾರಣದಿಂದ ಪ್ರತಿಭಟನೆ ನಿಂತುಹೋಯಿತು.

2020–21: ದೇಶವನ್ನು ಹೈರಾಣಾಗಿಸಿದ ಕೋವಿಡ್‌

2020ರಲ್ಲೇ ಕೋವಿಡ್‌ ಪ್ರಕರಣ ಪತ್ತೆಯಾದರೂ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರವು ವಿಳಂಬ ಮಾಡಿತು. ಆದರೆ ಸೋಂಕು ತೀವ್ರವಾಗಿ ಹರಡಿದಾಗ ಸರ್ಕಾರವು ದಿಢೀರ್ ಲಾಕ್‌ಡೌನ್‌ ಹೇರಿತು. ದೇಶದ ಸಾರಿಗೆ ವ್ಯವಸ್ಥೆ ಸ್ಥಗಿತವಾಗಿತ್ತು. ಉದ್ಯೋಗವೂ ಇಲ್ಲದ ಕಾರಣ ಕೋಟ್ಯಂತರ ಜನರು ನಗರ ಪ್ರದೇಶಗಳಿಂದ ತಮ್ಮ ಊರುಗಳತ್ತ ಪ್ರಯಾಣ ಹೊರಟರು. ಜನಸಾಮಾನ್ಯರು ಸಾವಿರಾರು ಕಿ.ಮೀ. ಅನ್ನು ನಡೆದು ಮತ್ತು ಸೈಕಲ್‌ ಏರಿ ಕ್ರಮಿಸಿದರು. ದುಡಿಮೆ ನಷ್ಟ ಮತ್ತು ಆರ್ಥಿಕ ಸಂಕಷ್ಟದಿಂದ ನಲುಗಿದ ಜನರ ನೆರವಿಗೆ ಉಚಿತ ಪಡಿತರ ನೀಡಲಾಯಿತು. ಆರ್ಥಿಕತೆ ಸ್ಥಗಿತವಾದ ಕಾರಣ ಕೋಟ್ಯಂತರ ಮಂದಿ ಸಂಕಷ್ಟಕ್ಕೆ ತುತ್ತಾದರು. ಇದರ ಮಧ್ಯೆಯೂ ದೇಶದಾದ್ಯಂತ ಕೋವಿಡ್‌ ವ್ಯಾಪಕವಾಗಿ ಹರಡಿತು. ಕೋವಿಡ್‌ ತೀವ್ರವಾದ ಕಾರಣ ಜನರು ಸಾಯತೊಡಗಿದರು. ಇದು ದೇಶದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯ ಎಂದರೆ ತಪ್ಪಾಗಲಾರದು. ಕೋವಿಡ್‌ ಅನ್ನು ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. ಕೋವಿಡ್‌ ಮೊದಲ ಅಲೆ ಮುಗಿದು ಆರ್ಥಿಕತೆಗೆ ಚಾಲನೆ ದೊರೆಯಿತು ಎನ್ನುವಷ್ಟರಲ್ಲಿ ಕೋವಿಡ್‌ನ ಎರಡನೇ ಅಲೆ ಬಂದೆರಗಿತು. 2021ರ ಏಪ್ರಿಲ್‌ನಲ್ಲಿ ತೀವ್ರವಾಗಿದ್ದ ಈ ಅಲೆ ದೇಶವನ್ನು ಹೈರಾಣಾಗಿಸಿತು. ಕೋವಿಡ್‌ ಎರಡನೇ ಅಲೆಯನ್ನು ನಿರ್ವಹಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಯಿತು ಎಂಬುದು ವಿರೋಧ ಪಕ್ಷಗಳ ಆರೋಪ. ಅದನ್ನು ಪುಷ್ಟೀಕರಿಸುವಂತೆ ರೋಗದ ತೀವ್ರತೆ ಗರಿಷ್ಠ ಮಟ್ಟದಲ್ಲಿ ಇದ್ದ ಕಾರಣ ಜನರು ದೊಡ್ಡ ಪ್ರಮಾಣದಲ್ಲಿ ಸಾಯತೊಡಗಿದರು. ಆಮ್ಲಜನಕದ ಕೊರತೆ ಉಂಟಾಯಿತು. ಆಮ್ಲಜನಕ ಸಿಗದೆಯೇ ಆಸ್ಪತ್ರೆಗಳಲ್ಲಿ ರೋಗಿಗಳು ಸಾಯತೊಡಗಿದರು. ಸಾವಿನ ಸಂಖ್ಯೆ ಹೆಚ್ಚಾದರಿಂದ ಶವಸಂಸ್ಕಾರಕ್ಕೂ ತೊಡಕಾಯಿತು. ಗಂಗಾ ನದಿ ತಟದಲ್ಲಿ ಹೂಳಲಾಗಿದ್ದ ಶವಗಳು ನದಿಯಲ್ಲಿ ತೇಲಿ ಬಂದು ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಸರ್ಕಾರ ಸಾವಿನ ಸಂಖ್ಯೆಯನ್ನು ಮುಚ್ಚಿಟ್ಟಿದೆ ಎಂದು ಕೆಲವು ಸ್ವಯಂಸೇವಾ ಸಂಸ್ಥೆಗಳು ಆರೋಪಿಸಿದವು. ಸತ್ತವರ ಒಟ್ಟು ಸಂಖ್ಯೆಯನ್ನು ಸರ್ಕಾರ ಪದೇ ಪದೇ ಬದಲಿಸಿತು. ಆ ಎರಡು ವರ್ಷಗಳ ಮರಣ ನೋಂದಣಿ ದಾಖಲೆಗಳನ್ನೂ ತೀರಾ ವಿಳಂಬ ಮಾಡಿ ಬಿಡುಗಡೆ ಮಾಡಲಾಯಿತು. ಇದರ ಮಧ್ಯೆ ಕೋವಿಡ್‌ ಲಸಿಕೆ ಕಾರ್ಯಕ್ರಮವನ್ನು ಸರ್ಕಾರ ಆರಂಭಿಸಿತು. ಆರಂಭದಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ಹಿನ್ನಡೆಯಾದರೂ ನಂತರದ ದಿನಗಳಲ್ಲಿ ಜನರು ಲಸಿಕೆ ಹಾಕಿಸಿಕೊಂಡರು. 4.5 ಕೋಟಿ ಈವರೆಗೆ ಕೋವಿಡ್ ತಗುಲಿದ ಜನರ ಸಂಖ್ಯೆ 53 ಲಕ್ಷ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 220 ಕೋಟಿ ಡೋಸ್‌ನಷ್ಟು ಲಸಿಕೆಗಳನ್ನು ಈವರೆಗೆ ನೀಡಲಾಗಿದೆ * ಚೀನಾ ಜತಗಿನ ಗಡಿ ವಿವಾದ ಗಾಲ್ವಾನ್‌ ಸಂಘರ್ಷ ಪ್ಯಾಂಗಾಂಗ್‌ ಸರೋವರದ ಬಳಿ ಚೀನಾ ಅತಿಕ್ರಮಣ ಈ ಅವಧಿಯಲ್ಲಿನ ಅತ್ಯಂತ ಮಹತ್ವದ ಬೆಳವಣಿಗೆಗಳಾಗಿದ್ದವು

ಸರ್ಕಾರವನ್ನು ಮಣಿಸಿದ ರೈತರು

ಕೃಷಿಯಲ್ಲಿ ಖಾಸಗಿ ಕಂಪನಿಗಳ ಹೂಡಿಕೆಗೆ ಮತ್ತು ಕಾರ್ಪೊರೇಟ್‌ ಮಟ್ಟದಲ್ಲಿ ಗುತ್ತಿಗೆ ಕೃಷಿಗೆ ಅವಕಾಶ ಮಾಡಿಕೊಡುವ ಮೂರು ನೂತನ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ 2020ರಲ್ಲಿ ಜಾರಿಗೆ ತಂದಿತ್ತು.  ಇದನ್ನು ವಿರೋಧಿಸಿ ಪಂಜಾಬ್‌ ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ದೆಹಲಿಗೆ ನಡೆಸಿದ ಪಾದಯಾತ್ರೆ ಮತ್ತು ಅವರು ದೆಹಲಿ ಗಡಿಯಲ್ಲಿ ವರ್ಷ ಕಾಲ ನಡೆಸಿದ ಪ್ರತಿಭಟನೆ ಅತ್ಯಂತ ಪ್ರಮುಖವಾದ ಬೆಳವಣಿಗೆ. ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರವು ಪೊಲೀಸರು ಅರೆಸೇನಾ ಪಡೆಗಳನ್ನು ನಿಯೋಜಿಸಿತ್ತು. ಹಲವು ಸುತ್ತಿನ ಮಾತುಕತೆಯಲ್ಲೂ ರೈತರು ತಮ್ಮ ಪಟ್ಟು ಸಡಿಲಿಸಲಿಲ್ಲ. ರೈತರು ದೆಹಲಿ ಗಡಿಯಲ್ಲಿ ಮಳೆ–ಚಳಿ ಎನ್ನದೆ ವರ್ಷದ ಕಾಲ ಅಹೋರಾತ್ರಿ ಧರಣಿ ನಡೆಸಿದರು. ಹೀಗಿದ್ದೂ ಪ್ರಧಾನಿ ನರೇಂದ್ರ ಮೋದಿ ಅವರು ಒಮ್ಮೆಯೂ ರೈತರನ್ನು ಭೇಟಿ ಮಾಡಲಿಲ್ಲ ಎಂಬುದು ವ್ಯಾಪಕ ಟೀಕೆಗೆ ಒಳಗಾಗಿತ್ತು.  ವರ್ಷದ ಕಾಲ ಶಾಂತಿಯುತವಾಗಿ ನಡೆದ ಈ ಪ್ರತಿಭಟನೆಗೆ ಸರ್ಕಾರವು ಕೊನೆಗೂ ಮಣಿಯಿತು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಇರುವಾಗ ಈ ಕಾಯ್ದೆಗಳನ್ನು ಸರ್ಕಾರ ವಾಪಸ್‌ ಪಡೆಯಿತು. ಇದು ದೇಶದ ರೈತರಿಗೆ ಸರ್ಕಾರದ ವಿರುದ್ಧ ದೊರೆತ ಅತ್ಯಂತ ದೊಡ್ಡ ಗೆಲುವು ಎಂದು ಬಣ್ಣಿಸಲಾಗಿತ್ತು.

2022: ಭಾರತಕ್ಕೆ ಬಂದ ಚೀತಾ

ಭಾರತಕ್ಕೆ ಚೀತಾಗಳನ್ನು ಮರುಪರಿಚಯಿಸುವ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಯಿತು. ಆರಂಭದಲ್ಲಿ ಎಂಟು ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಬಯಲು ಬಂಧನದಲ್ಲಿ ಇರಿಸಲಾಯಿತು. ನಂತರ ಅವುಗಳಲ್ಲಿ ಕೆಲವನ್ನು ಅರಣ್ಯಕ್ಕೆ ಬಿಡಲಾಯಿತು. ಈ ಕಾರ್ಯಕ್ರಮಕ್ಕೆ ತಜ್ಞರ ವಿರೋಧವಿದ್ದಾಗ್ಯೂ ಚಾಲನೆ ನೀಡಲಾಯಿತು ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಈಗ ಕೆಲವು ಚೀತಾಗಳು ಮತ್ತು ಚೀತಾ ಮರಿಗಳು ಸಾವನ್ನಪ್ಪಿದ್ದರಿಂದ ಟೀಕೆ ವ್ಯಾಪಕವಾಗಿದೆ. 2022ರಲ್ಲಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್ ವಿರುದ್ಧ ನೀಡಿದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಜಾಗತಿಕ ಮಟ್ಟದಲ್ಲಿ ಕಟುಟೀಕೆಯ ಕಾರಣ ಬಿಜೆಪಿ ತನ್ನ ನಾಯಕರ ಮೇಲೆ ಕ್ರಮ ತೆಗೆದುಕೊಂಡಿತು. ವಂದೇ ಭಾರತ್ ರೈಲುಗಳಿಗೆ ಚಾಲನೆ ಈ ವರ್ಷದ ಅತ್ಯಂತ ಮಹತ್ವದ ಬೆಳವಣಿಗೆಗಳಲ್ಲಿ ಒಂದು.

2023: ರಾಷ್ಟ್ರಪತಿ ಹೊರಗಿಟ್ಟು ಸಂಸತ್ ಭವನ ಉದ್ಘಾಟನೆ

ಈ ವರ್ಷದಲ್ಲಿ ಇನ್ನು ಐದು ತಿಂಗಳಷ್ಟೇ ಕಳೆದಿದ್ದರೂ ಬಿಜೆಪಿ ಸರ್ಕಾರದ ಪಾಲಿಗೆ ಇದು ಪ್ರಮುಖವಾದ ಅವಧಿಯದ್ದಾಗಿದೆ. ಈ ವರ್ಷ ನಡೆದ ಕೆಲವು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಸೆಂಟ್ರಲ್‌ ವಿಸ್ತಾದ ಭಾಗವಾದ ನೂತನ ಸಂಸತ್ ಭವನ ಈಗ ಲೋಕಾರ್ಪಣೆಯಾಗಿದೆ. ಸಾಂವಿಧಾನಿಕ ಮುಖ್ಯಸ್ಥರಾದ ಮತ್ತು ಸಂಸತ್ತಿನ ಭಾಗವಾದ ರಾಷ್ಟ್ರಪತಿಯನ್ನು ಹೊರಗಿಟ್ಟು ಪ್ರಧಾನಿ ನರೇಂದ್ರ ಮೋದಿಯೇ ನೂತನ ಸಂಸತ್ ಭವನವನ್ನು ಉದ್ಘಾಟಿಸಿದರು. ಇದು ಸಂವಿಧಾನ ಮತ್ತು ರಾಷ್ಟ್ರಪತಿಗೆ ಮಾಡಿದ ಅವಮಾನ ಎಂದು ವಿರೋಧ ಪಕ್ಷಗಳು ಟೀಕಿಸಿವೆ.  ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕೇ ಹೆಚ್ಚು ಅಧಿಕಾರ ಎಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಕೇಂದ್ರ ಸರ್ಕಾರಕ್ಕೆ ಆದ ಹಿನ್ನಡೆ ಎಂದೇ ಅರ್ಥೈಸಲಾಗಿದೆ. ಆದರೆ ಆ ತೀರ್ಪನ್ನು ತಿರುವು ಮುರುವಾಗಿಸುವಂತಹ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಆ ಸುಗ್ರೀವಾಜ್ಞೆ ವಿರುದ್ಧ ಒಟ್ಟಾಗಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.