ADVERTISEMENT

ಆಳ–ಅಗಲ | ಲೋಕ ರಾಜಕಾರಣ ಸರಣಿ–3: ಕಾಂಗ್ರೆಸ್‌ ಪುಟಿದೆದ್ದ ಬಗೆ

ಪ್ರಜಾವಾಣಿ ವಿಶೇಷ
Published 14 ಜೂನ್ 2024, 23:30 IST
Last Updated 14 ಜೂನ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

–ರಾಯಿಟರ್ಸ್

ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಇರುವವರಾದರೆ, ಕಳೆದ ವಾರ ಒಂದು ಮೀಮ್‌ ಚಿತ್ರವನ್ನು ನೋಡಿಯೇ ಇರುತ್ತೀರಿ. ಅದರಲ್ಲಿ ಒಬ್ಬ ವ್ಯಕ್ತಿ ಶೇ 85ರಷ್ಟು ಅಂಕ ಪಡೆದಿದ್ದರೂ ಬಹಳ ಬೇಸರದಲ್ಲಿ ಇದ್ದಾನೆ. ಮತ್ತೊಬ್ಬ ವ್ಯಕ್ತಿ ಶೇ 45ರಷ್ಟು ಅಂಕ ಗಳಿಸಿಯೂ ಬಹಳ ಉತ್ಸಾಹ ಮತ್ತು ಸಂಭ್ರಮದಲ್ಲಿ ಇದ್ದಾನೆ. ಈ ಚಿತ್ರವನ್ನು ಗೇಲಿ ಮಾಡುವ, ತಮಾಷೆ ಮಾಡುವ ಉದ್ದೇಶದಿಂದ ಹಂಚಿಕೊಳ್ಳಲಾಗಿತ್ತು. ತಮಾಷೆ ಏನೆಂದರೆ, ಇದು ತಮಾಷೆಯ ವಿಷಯವೇ ಅಲ್ಲ.

ADVERTISEMENT

ಬಿಜೆಪಿಯು ತನಗೆ ಗೊತ್ತಿಲ್ಲದೇ ಹಂಚಿಕೊಂಡ ಈ ರೀತಿಯ ಟ್ರೋಲ್‌ಗಳು ರಾಜಕೀಯದ ಆಳವಾದ ವಿಷಯವೊಂದನ್ನು ಧ್ವನಿಸಿತ್ತು ಮತ್ತು ಅದು ಈ ಬಾರಿಯ ಫಲಿತಾಂಶಕ್ಕೆ ಹಿಡಿದ ಕನ್ನಡಿದಂತಿತ್ತು. ನೀವು ಯಾವ ದೃಷ್ಟಿಕೋನದಿಂದ ಇಂಥ ಟ್ರೋಲ್‌ಗಳನ್ನು ಹಂಚಿಕೊಳ್ಳುತ್ತೀರಿ ಎನ್ನುವುದು ಮುಖ್ಯವಲ್ಲ. ಅದು ಹೇಗೆ ಈ ಫಲಿತಾಂಶದೊಂದಿಗೆ ಹೊಂದಿಕೆಯಾಯಿತು ಎಂಬುದು ಮುಖ್ಯ.

ಬಿಜೆಪಿಯ 240 ಸ್ಥಾನಗಳಿಗೆ ಹೋಲಿಸಿಕೊಂಡರೆ, ಕಾಂಗ್ರೆಸ್‌ ಪಡೆದುಕೊಂಡ 99 ಸ್ಥಾನಗಳು ದೊಡ್ಡ ಸಂಖ್ಯೆಯೇನಲ್ಲ. ಹೌದು, ಇದು ಕಾಂಗ್ರೆಸ್‌ ಗಳಿಸಿದ ಮೂರನೇ ಅತ್ಯಂತ ಕಡಿಮೆ ಸ್ಥಾನಗಳು. ಆದರೆ ರಾಜಕೀಯದಲ್ಲಿ ಕೇವಲ ಸಂಖ್ಯೆಗಳೇ ಎಲ್ಲ ಕಥೆಗಳನ್ನೂ ಹೇಳುವುದಿಲ್ಲ. ನಿಜ ಸಂಗತಿ ಏನೆಂದರೆ, 1980ರ ಬಳಿಕ ಕಾಂಗ್ರೆಸ್‌ ಮತ್ತೆ ಪುಟಿದೆದ್ದ ಎರಡನೇ ನಿದರ್ಶನ ಇದು. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷವು, ನೈತಿಕವಾಗಿ ಬಹಳ ಕುಸಿದಿತ್ತು. ಪಕ್ಷವು 44 ಹಾಗೂ 52 ಸ್ಥಾನಗಳನ್ನಷ್ಟೇ ಪಡೆದುಕೊಂಡಿತ್ತು. ಇನ್ನೂ ದಯನೀಯ ಸ್ಥಿತಿ ಎಂದರೆ, 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದುಕೊಂಡಿದ್ದ 52 ಕ್ಷೇತ್ರಗಳ ಪೈಕಿ, 32 ಕ್ಷೇತ್ರಗಳು ಮೂರೇ ರಾಜ್ಯಗಳಿಂದ  (ಕೇರಳ, ತಮಿಳುನಾಡು ಮತ್ತು ಪಂಜಾಬ್‌) ಬಂದಿದ್ದವು. ಈ ಯಾವ ರಾಜ್ಯಗಳಲ್ಲಿಯೂ ಬಿಜೆಪಿಯು ಕಾಂಗ್ರೆಸ್‌ನ ನೇರ ಎದುರಾಳಿ ಆಗಿರಲಿಲ್ಲ. ಜೊತೆಗೆ, ತಮಿಳುನಾಡಿನಲ್ಲಿ ಕಾಂಗ್ರೆಸ್‌ ಪಕ್ಷವು ಡಿಎಂಕೆ ಜತೆಗಿನ ಮೈತ್ರಿಕೂಟದಲ್ಲಿ ಕಿರಿಯ ಮಿತ್ರಪಕ್ಷವಾಗಿತ್ತು.

ಈ ಬಾರಿ 400ರ ಗಡಿ ದಾಟುವ (ಅಬ್‌ ಕಿ ಬಾರ್ 400 ಪಾರ್‌) ಬಿಜೆಪಿಯ ಆರ್ಭಟದ ಘೋಷಣೆಯ ಹಿಂದೆ ಇದ್ದ ನಿಜವಾದ ಗುರಿ, ಕಾಂಗ್ರೆಸ್‌ ಅನ್ನು ಇನ್ನಷ್ಟು ಕುಗ್ಗಿಸುವುದೇ ಆಗಿತ್ತು. ರಾಷ್ಟ್ರಮಟ್ಟದಲ್ಲಿ ತನಗೆ ಎದುರಾಳಿಯಾಗಿರುವ, ಸೈದ್ಧಾಂತಿಕ ಎದುರಾಳಿಯೂ ಆಗಿರುವ ಮತ್ತು ಪ್ರಬಲ ಪೈಪೋಟಿ ನೀಡಲು ಸಾಧ್ಯವಿರುವ ಕಾಂಗ್ರೆಸ್‌ ಅನ್ನು ರಾಷ್ಟ್ರ ರಾಜಕಾರಣದಿಂದ ಇಲ್ಲವಾಗಿಸುವ ಹವಣಿಕೆಯೂ ಈ ಆರ್ಭಟದ ಘೋಷಣೆಯ ಹಿಂದೆ ಇತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 40ಕ್ಕಿಂತ ಕಡಿಮೆ ಸ್ಥಾನಗಳಿಗೆ ಕುಸಿಯಲಿದೆ ಮತ್ತು ಕಾಂಗ್ರೆಸ್‌ ‘ದಕ್ಷಿಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌’ ಎಂದಾಗಲಿದೆ ಎಂಬ ಮಾತನ್ನು ಚಾಲ್ತಿಗೆ ತರಲಾಗಿತ್ತು. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಧೃತಿಗೆಡದ ಕಾಂಗ್ರೆಸ್‌ ತನ್ನ ನೆಲೆಯಲ್ಲಿ ಬಲವಾಗಿ ನಿಂತಿತು ಮತ್ತು ತನ್ನ ಸ್ಥಾನಗಳನ್ನು ದ್ವಿಗುಣ ಮಾಡಿಕೊಂಡಿತು. ಒಟ್ಟಾರೆಯಾಗಿ ಕಾಂಗ್ರೆಸ್‌ ಆರೋಹಣದ ಹಾದಿ ಹಿಡಿದಿದೆ ಮತ್ತು ಅದು ಪುಟಿದೆದ್ದ ರೀತಿಗೆ ಮಹತ್ವವಿದೆ.

ಎಲ್ಲ ರೀತಿಯಲ್ಲಿಯೂ ಕಾಂಗ್ರೆಸ್‌ ಈ ಬಾರಿ ಗಳಿಕೆಯನ್ನೇ ಮಾಡಿದೆ. ಹಿಂದಿ ಭಾಷಿಕ ಪ್ರದೇಶಗಳಲ್ಲಿ, ಅಂದರೆ ಹರಿಯಾಣದಿಂದ ಬಿಹಾರದ ವ್ಯಾಪ್ತಿಯಲ್ಲಿ 5 ಸ್ಥಾನಗಳನ್ನು ಕಳೆದ ಚುನಾವಣೆಯಲ್ಲಿ ಗಳಿಸಿಕೊಂಡಿತ್ತು. ಈ ಚುನಾವಣೆಯಲ್ಲಿ ಈ ಸಂಖ್ಯೆಯನ್ನು ಪಕ್ಷವು 23ಕ್ಕೆ ಏರಿಸಿಕೊಂಡಿದೆ. ತನ್ನ ಭದ್ರನೆಲೆಯಾಗಿದ್ದ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಪಕ್ಷವು, ಬಿಜೆಪಿಗೆ ಬಿಟ್ಟುಕೊಡದೆ, ಹೆಚ್ಚಿನ ಮತಗಳನ್ನು ತಾನೇ ಗಳಿಸಿಕೊಂಡಿದೆ. ಪಂಜಾಬ್‌ನಲ್ಲಿ ಬಿಜೆಪಿಗೆ ಒಂದೂ ಸ್ಥಾನವನ್ನೂ ಗೆಲ್ಲುವ ಅವಕಾಶವನ್ನು ಕಾಂಗ್ರೆಸ್‌ ಮಾಡಿಕೊಡಲಿಲ್ಲ. ಜನಾಂಗೀಯ ಸಂಕಷ್ಟ ಪೀಡಿತವಾಗಿರವ ಮಣಿಪುರದ ಎರಡೂ ಕ್ಷೇತ್ರಗಳನ್ನು, ನಾಗಾಲ್ಯಾಂಡ್‌ ಹಾಗೂ ಮೇಘಾಲಯದಲ್ಲಿ ಒಂದೊಂದು ಕ್ಷೇತ್ರಗಳನ್ನು ಗೆಲ್ಲುವುದರ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನು ಗಣನೀಯ ರೀತಿಯಲ್ಲಿ ಮರುಗಳಿಸಿಕೊಂಡಿದೆ. ಈ ಹಗ್ಗಜಗ್ಗಾಟದಲ್ಲಿ ವಿಪಕ್ಷಗಳ ತಂಡದಲ್ಲಿ ದುರ್ಬಲ ಕೊಂಡಿಯಾಗಿದ್ದ ಕಾಂಗ್ರೆಸ್‌, ಈಗ ತನ್ನ ನೆಲವನ್ನು ಗಟ್ಟಿಗೊಳಿಸಿಕೊಂಡು ಪಟ್ಟುಬಿಗಿಗೊಳಿಸಿದೆ.

ಈ ಫಲಿತಾಂಶದ ನಿಜವಾದ ಕಥೆಯು ಮತಪ್ರಮಾಣದಲ್ಲಿ ಅಡಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್‌ನ ಮತ ಪ್ರಮಾಣವು 1.7 ಶೇಕಡವಾರು ಅಂಶಗಳಷ್ಟು ಹೆಚ್ಚಾಗಿದೆ. ಆದರೆ ಈ ಸಂಖ್ಯೆ ಕಾಂಗ್ರೆಸ್‌ ಪುಟಿದೆದ್ದ ನಿಜವಾದ ಕತೆಯನ್ನು ಹೇಳುವುದಿಲ್ಲ. ಏಕೆಂದರೆ 2019ರಲ್ಲಿ ತಾನು ಸ್ಪರ್ಧಿಸಿದ್ದಕ್ಕಿಂತ 93ರಷ್ಟು ಕಡಿಮೆ ಕ್ಷೇತ್ರಗಳಲ್ಲಿ, ಕಾಂಗ್ರೆಸ್‌ ಕಣಕ್ಕೆ ಇಳಿದಿತ್ತು. ಹೀಗೆ ಕಾಂಗ್ರೆಸ್‌ ಕಣಕ್ಕೆ ಇಳಿದಿದ್ದ ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳನ್ನು ಗಮನಿಸಬೇಕು. 2019ರ ಚುನಾವಣೆಗೆ ಹೋಲಿಸಿದರೆ 2024ರ ಚುನಾವಣೆಯಲ್ಲಿ, ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಮತ ಪ್ರಮಾಣದಲ್ಲಿ 9.8 ಶೇಕಡಾವಾರು ಅಂಶಗಳಷ್ಟು ಏರಿಕೆಯಾಗಿದೆ. ಇದನ್ನು ಬಿಜೆಪಿಗೆ ಹೋಲಿಸಿದರೆ ನಿಜವಾದ ಚಿತ್ರಣ ದೊರೆಯಲಿದೆ. ಕಾಂಗ್ರೆಸ್‌ ತಾನು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಅದರ ಮತ ಪ್ರಮಾಣ 9.8 ಶೇಕಡಾವಾರು ಅಂಶಗಳಷ್ಟು ಏರಿಕೆಯಾಗಿದ್ದರೆ, ಬಿಜೆಪಿ ತಾನು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಅದರ ಮತ ಪ್ರಮಾಣವು 1.6 ಶೇಕಡಾವಾರು ಅಂಶಗಳಷ್ಟು ಕುಸಿದಿದೆ. 

ಕೇರಳ, ಒಡಿಶಾ ಹಾಗೂ ಪಂಜಾಬ್‌ ರಾಜ್ಯಗಳನ್ನು ಹೊರತುಪಡಿಸಿ, ಉಳಿದ ಎಲ್ಲ ಪ್ರಮುಖ ರಾಜ್ಯಗಳಲ್ಲಿಯೂ ಕಾಂಗ್ರೆಸ್‌ ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್ ಯಾವೆಲ್ಲಾ ರಾಜ್ಯಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಕಿರಿಯ ಮಿತ್ರಪಕ್ಷವಾಗಿ ಅಥವಾ ಸರಿಸಮನಾದ ಮಿತ್ರಪಕ್ಷವಾಗಿ ಕಣಕ್ಕೆ ಇಳಿದಿತ್ತೋ, ಆ ರಾಜ್ಯಗಳಲ್ಲೇ ಕಾಂಗ್ರೆಸ್‌ ಗಣನೀಯ ಮತ ಗಳಿಕೆ ಸಾಧಿಸಿದೆ. ಇಂತಹ ರಾಜ್ಯಗಳಲ್ಲಿ ಕಾಂಗ್ರೆಸ್‌ ತಾನು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ, ಅದರ ಮತ ಪ್ರಮಾಣವು 22.8 ಶೇಕಡಾವಾರು ಅಂಶಗಳಷ್ಟು ಏರಿಕೆಯಾಗಿದೆ. ಆದರೆ ‘ಇಂಡಿಯಾ’ ಮೈತ್ರಿಕೂಟದ ಪ್ರಧಾನ ಮಿತ್ರಪಕ್ಷವಾಗಿ ಮತ್ತು ಸ್ವತಂತ್ರವಾಗಿ ಸ್ಪರ್ಧಿಸಿದ್ದ ರಾಜ್ಯಗಳಲ್ಲಿ, ಕಾಂಗ್ರೆಸ್‌ ಕಣಕ್ಕೆ ಇಳಿದಿದ್ದ ಕ್ಷೇತ್ರಗಳ ಮತಪ್ರಮಾಣದಲ್ಲಿ ಆದ ಏರಿಕೆ 3 ಶೇಕಡಾವಾರು ಅಂಶಗಳಷ್ಟು ಮಾತ್ರ. 

ಇವೆಲ್ಲಾ ಆರಂಭ ಮಾತ್ರ. ಹೀಗಾಗಿ ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಈ ಸಾಫಲ್ಯದ ನಡುವೆಯೂ ಪರಾಮರ್ಶಗೆ ಒಳಪಡಿಸಬೇಕಾದ ಹಲವು ವೈಫಲ್ಯಗಳು ಕಾಂಗ್ರೆಸ್‌ ಮುಂದಿವೆ. ತೆಲಂಗಾಣದಲ್ಲಿ ಪ್ರಧಾನ ಪಕ್ಷವಾಗಿ ಸ್ಥಾಪಿತವಾದರೂ ಬಿಆರ್‌ಎಸ್‌ನ ಮತ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ಈವರೆಗೆ ಬಿಜೆಪಿಯೊಟ್ಟಿಗೆ ಕೈಜೋಡಣೆ ಮತ್ತು ದೂರಸರಿಯುವುದನ್ನೇ ಪುನರಾವರ್ತಿಸಿದ ಒಡಿಶಾದ ಬಿಜೆಡಿಗೆ ಪರ್ಯಾಯ ಶಕ್ತಿಯಾಗಿ ರೂಪುಗೊಳ್ಳುವ ಸುವರ್ಣ ಅವಕಾಶವನ್ನು ಕಾಂಗ್ರೆಸ್‌ ಕೈಚೆಲ್ಲಿದೆ. ಕರ್ನಾಟಕದಲ್ಲಿ ತಾನು ನೀಡಿದ್ದ ‘ಗ್ಯಾರಂಟಿ’ಗಳೆಲ್ಲವನ್ನೂ ಅನುಷ್ಠಾನಕ್ಕೆ ತಂದುದರ ಲಾಭವನ್ನು ಗಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇನ್ನು ಗುಜರಾತ್, ಮಧ್ಯಪ್ರದೇಶ, ಛತ್ತೀಸಗಡ ಮತ್ತು ಉತ್ತರಾಖಂಡದಲ್ಲಿ ಕಾಂಗ್ರೆಸ್‌ ಇನ್ನಷ್ಟೇ ದಾರಿ ಮಾಡಿಕೊಳ್ಳಬೇಕಿದೆ. ಪಶ್ಚಿಮ ಬಂಗಾಳದಲ್ಲಿ ಸಾಧ್ಯವಿದ್ದ ಪ್ರಬಲ ಮೈತ್ರಿಯನ್ನು ಕಳೆದುಕೊಂಡಿತು. ಆ ಮೂಲಕ ಕಾಂಗ್ರೆಸ್‌ ಬಿಜೆಪಿಗೆ ಆರು ಕ್ಷೇತ್ರಗಳನ್ನು ಉಡುಗೊರೆಯಾಗಿ ನೀಡಿತು. ತಾನು 15 ವರ್ಷ ಆಳ್ವಿಕೆ ನಡೆಸಿದ್ದ ದೆಹಲಿಯಲ್ಲಿ ಕಾಂಗ್ರೆಸ್‌ ಇನ್ನೂ ಚೇತರಿಸಿಕೊಳ್ಳಬೇಕಿದೆ.

ರಾಜಕಾರಣದ ಈ ‘ಅನ್‌ಲಿಮಿಟೆಟ್‌ ಟೆಸ್ಟ್‌ ಮ್ಯಾಚ್‌’ನಲ್ಲಿ ಕಾಂಗ್ರೆಸ್‌ ಆಡಬೇಕಿರುವ ಆಟ ಇನ್ನಷ್ಟಿದೆ. ಕೆಟ್ಟ ಪಿಚ್‌, ದಾಳಿಕೋರ ಬೌಲರ್‌ಗಳು, ಭ್ರಷ್ಟ ಅಂಪೈರ್‌ಗಳು ಮತ್ತು ತನ್ನ ವಿರುದ್ಧವೇ ಇದ್ದ ಕಾಮೆಂಟೇಟರ್‌ಗಳ ಮಧ್ಯೆಯೂ ಕಾಂಗ್ರೆಸ್‌ ಗಳಿಸಿದ ‘99 ನಾಟ್‌ ಔಟ್‌’ ಕೆಟ್ಟ ರನ್‌ ಏನಲ್ಲ.

ಒಡೆದ ಮಿಥ್ಯೆಗಳು

‘ಭಾರತ ಜೋಡೊ ಯಾತ್ರೆ’ಯಿಂದ ಆರಂಭಗೊಂಡ ಗತಿಶೀಲ 21 ತಿಂಗಳ ಸುದೀರ್ಘವಾದ ಕಾಂಗ್ರೆಸ್‌ನ ಪ್ರಯಾಣವು, ಪಕ್ಷದ ಕುರಿತು ಇದ್ದ ಹಲವು ಮಿಥ್ಯೆಗಳನ್ನು ಒಡೆದು ಹಾಕಿದೆ:

ಮಿಥ್ಯೆ 1: ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್‌ ಅನ್ನು ಮೂರನೇ ಅತಿ ದೊಡ್ಡ ಪಕ್ಷದ ಸ್ಥಾನಕ್ಕೆ ಕುಸಿಯುವಂತೆ ಮಾಡಿದರೆ, ಅದು ಮತ್ತೆಂದೂ ಎದ್ದು ಬಾರದು:

ತೆಲಂಗಾಣದ ಗೆಲುವು ಈ ಮಿಥ್ಯೆಯನ್ನು ಒಡೆಯಿತು. 2019ರ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷವು ಮೂರನೇ ಸ್ಥಾನಕ್ಕೆ ಕುಸಿದಿತ್ತು. 2024ರ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲೂ ಕಾಂಗ್ರೆಸ್‌ನ ಈ ಸಾಧನೆ ಪ್ರತಿಬಿಂಬಿಸಿತು

ಮಿಥ್ಯೆ 2: ಹಿಂದಿ ಭಾಷಿಕ ಪ್ರದೇಶದಲ್ಲಿನ ಲೋಕಸಭಾ ಚುನಾವಣೆಯಲ್ಲಿ ನೇರ ಹಣಾಹಣಿಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ:

ಕಳೆದ ಚುನಾವಣೆಯಲ್ಲಿ ಇಂಥ 150 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಒಂದು ಮತ್ತು ಎರಡನೇ ಸ್ಥಾನದಲ್ಲಿದ್ದವು. ಇವುಗಳಲ್ಲಿ ಕಾಂಗ್ರೆಸ್‌ ಕೇವಲ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿಯ ಚುನಾವಣೆಯಲ್ಲಿ, ಹೀಗೆ ಕಾಂಗ್ರೆಸ್‌ ಹಾಗೂ ಬಿಜೆಪಿಯ ಮಧ್ಯೆ ನೇರ ಹಣಾಹಣಿ ಇದ್ದ 215 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 62 ಸ್ಥಾನಗಳನ್ನು ಗೆದ್ದುಕೊಂಡಿದೆ. ಇನ್ನುಳಿದ ಕ್ಷೇತ್ರಗಳಲ್ಲಿ ಕಳೆದ ಬಾರಿಗೆ ಹೋಲಿಸಿದರೆ, ಬಿಜೆಪಿಯ ಗೆಲುವಿನ ಅಂತರವನ್ನು ಕಾಂಗ್ರೆಸ್‌ ಅರ್ಧದಷ್ಟು ಕಡಿತ ಮಾಡಿದೆ. ಜೊತೆಗೆ, ಹಿಂದಿ ಭಾಷಿಕ ಪ್ರದೇಶದ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕಳಪೆ ಪ್ರದರ್ಶನ ತೋರಿದರೆ, ಲೋಕಸಭಾ ಚುನಾವಣೆಯಲ್ಲಿಯೂ ಕಳಪೆ ಪ್ರದರ್ಶನ ತೋರಲಿದೆ ಎಂಬ ಮಿಥ್ಯೆಯೂ ಇತ್ತು. ಈ ಬಾರಿ ಇದನ್ನೂ ಕಾಂಗ್ರೆಸ್‌ ಒಡೆದುಹಾಕಿದೆ. ರಾಜಸ್ಥಾನ ಹಾಗೂ ಹರಿಯಾಣದಲ್ಲಿ ಕಾಂಗ್ರೆಸ್‌ ಉತ್ತಮ ಸ್ಥಾನಗಳನ್ನು ಗಳಿಸಿಕೊಂಡಿದೆ.

ಮಿಥ್ಯೆ 3: ಪ್ರಾದೇಶಿಕ ಪಕ್ಷಗಳು ಹಾಗೂ ಜಾತಿ ಸಮುದಾಯಗಳನ್ನು ಆಧರಿಸಿದ ರಾಜಕೀಯ ಪಕ್ಷಗಳು ತನ್ನಿಂದ ಕಸಿದುಕೊಂಡ ಮತಗಳನ್ನು ಅಥವಾ ಸ್ಥಾನಗಳನ್ನು ಕಾಂಗ್ರೆಸ್‌ಗೆ ಮತ್ತೊಮ್ಮೆ ಪಡೆದುಕೊಳ್ಳಲು ಸಾಧ್ಯವಿಲ್ಲ:

ಅಸ್ಸಾಂನ ಬದ್ರುದ್ದೀನ್‌ ಅಜ್ಮಲ್‌ ಅವರ ಎಐಯುಡಿಎಫ್‌ ಪಕ್ಷ ಹಾಗೂ ಹರಿಯಾಣದ ಜೆಜೆಪಿ ಪಕ್ಷಗಳ ಮತಗಳನ್ನು ಕಾಂಗ್ರೆಸ್‌ ಪಡೆದುಕೊಂಡಿದೆ. ಆ ಮೂಲಕ ಪ್ರಾದೇಶಿಕ ಪಕ್ಷಗಳನ್ನು ತನ್ನಿಂದ ಕಸಿದುಕೊಂಡಿದ್ದನ್ನು ಕಾಂಗ್ರೆಸ್‌ ಮರಳಿ ಪಡೆದುಕೊಂಡಿದೆ.

ಮಿಥ್ಯೆ 4: ಆಪರೇಷನ್‌ ಕಮಲದ ಪರಿಣಾಮವನ್ನು ತಡೆದುಕೊಳ್ಳುವ ಶಕ್ತಿ ಕಾಂಗ್ರೆಸ್‌ಗೆ ಇಲ್ಲ:

ಲೋಕಸಭಾ ಚುನಾವಣೆಯ ವೇಳೆಯೇ ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಉಪಚುನಾವಣೆಯೂ ನಡೆದಿತ್ತು. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿಕೊಂಡು ಈ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅರ್ಧದಷ್ಟು ಮಂದಿಯು ಸೋತರು. ಇದೇ ಹಿಮಾಚಲದ ಜನರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತಚಲಾಯಿಸಿದ್ದರು.

ಮಿಥ್ಯೆ 5: ‘ಇಂಡಿಯಾ’ ಮೈತ್ರಿಕೂಟದ ಪಾಲಿಗೆ ಕಾಂಗ್ರೆಸ್‌ ಪಕ್ಷವು ಹೊರೆಯಂತಿದೆ. ಯಾಕೆದಂತೆ, ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಳ್ಳಲು ಪಕ್ಷಕ್ಕೆ ಬಲ ಇಲ್ಲ:

ಈ ಹಿಂದೆ ಇದೇ ಪರಿಸ್ಥಿತಿ ಇತ್ತು. ಆದರೆ, ಈ ಬಾರಿ ಕಾಂಗ್ರೆಸ್‌ ಈ ಮಿಥ್ಯೆಯನ್ನು ಸುಳ್ಳಾಗಿಸಿದೆ. ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ದೆಹಲಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಈ ಮಿಥ್ಯೆಯನ್ನು ಕಾಂಗ್ರೆಸ್‌ ಒಡೆದಿದೆ. ಈ ಎಲ್ಲ ರಾಜ್ಯಗಳಲ್ಲಿ ತನ್ನ ಮಿತ್ರ ಪಕ್ಷಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿಲ್ಲವಾದರೂ, ಮತಪ್ರಮಾಣದ ವಿಚಾರದಲ್ಲಿ ಕಾಂಗ್ರೆಸ್‌ ಮಿತ್ರಪಕ್ಷಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ. ಇದಕ್ಕೆ ವ್ಯತಿರಿಕ್ತ ಪರಿಣಾಮ ಬಂದದ್ದು ಜಾರ್ಖಂಡ್‌ನಲ್ಲಿ. ಇಲ್ಲಿ ಜೆಎಂಎಂಗಿಂತ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಿತ್ತು. ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷವು ಜೆಎಂಎಂ ಪಕ್ಷಕ್ಕೆ ಹೆಚ್ಚಿನ ಮತಗಳು ಬರುವಂತೆ ಮಾಡಿತು. ಜೊತೆಗೆ ಸೈದ್ಧಾಂತಿಕವಾಗಿಯೂ ತನ್ನೊಂದಿಗೆ ಜೊತೆ ಕರೆದುಕೊಂಡು ಹೋಯಿತು.

ಮಿಥ್ಯೆ 6: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಅಸ್ತಿತ್ವವೇ ಇಲ್ಲ ಎಂಬುದು ಕಳೆದ ವಿಧಾನಸಭಾ ಚುನಾವಣೆಯಲ್ಲೇ ಸಾಬೀತಾಗಿದೆ:

ಶೇ 2ರಷ್ಟು ಮತಪ್ರಮಾಣಕ್ಕೆ ಇಳಿದ ಪಕ್ಷವೊಂದಕ್ಕೆ ಉತ್ತರ ಪ್ರದೇಶದ ಲೋಕಸಭಾ ಚುನಾವಣಾ ಫಲಿತಾಂಶವು ಅದ್ಭುತ ತಿರುವನ್ನೇ ಕೊಟ್ಟಿದೆ. ಸಮಾಜವಾದಿ ಪಕ್ಷಕ್ಕಿಂತಲೂ ಹೀನಾಯ ಸ್ಥಿತಿ ಕಾಂಗ್ರೆಸ್‌ಗೆ ಉತ್ತರ ಪ್ರದೇಶದಲ್ಲಿತ್ತು. ಎಲ್ಲರ ಕುತೂಹಲ ಕೆರಳಿಸಿದ್ದ ಆ ಎರಡು ಕ್ಷೇತ್ರಗಳಲ್ಲಿ ಮಾತ್ರವಲ್ಲದೇ ಅಲಹಾಬಾದ್‌, ಸಹಾರನ್‌ಪುರ, ಸೀತಾಪುರ ಹಾಗೂ ಬಾರಾಬಂಕಿಯಲ್ಲೂ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ದಲಿತರ ಮತಗಳು ಬಿಎಸ್‌ಪಿಯಿಂದ ಸ್ವಲ್ಪ ಪ್ರಮಾಣದಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೆ ಬರಲು, ಮುಸ್ಲಿಂ ಅಭ್ಯರ್ಥಿಯನ್ನೇ ಬಿಎಸ್‌ಪಿಯು ಕಣಕ್ಕಿಳಿಸಿದ್ದರೂ ‘ಇಂಡಿಯಾ’ ಮೈತ್ರಿಕೂಟಕ್ಕೇ ಮುಸ್ಲಿಮರು ಮತ ಹಾಕುವಂತೆ ಮಾಡುವಲ್ಲಿ ಕಾಂಗ್ರೆಸ್‌ ಪ್ರಮುಖ ಪಾತ್ರವಹಿಸಿದೆ.

ಮಿಥ್ಯೆ 7: ಸರ್ಕಾರದ ವಿರುದ್ಧದ ಯಾವುದೇ ಚಳವಳಿಯಲ್ಲಿ ಕಾಂಗ್ರೆಸ್‌ಗೆ ಗುರುತಿಸಿಕೊಳ್ಳಲೂ ಆಗದು ಮತ್ತು ಅಂತಹ ಪ್ರಬಲ ಚಳವಳಿಯನ್ನು ರೂಪಿಸಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ:

ಹಲವು ದಶಕಗಳವರೆಗೆ ಕಾಂಗ್ರೆಸ್‌ ಪ್ರಭುತ್ವದಲ್ಲಿತ್ತು. ಇದೇ ಕಾರಣಕ್ಕೆ ಕಾಂಗ್ರೆಸ್‌ಗೆ ಚಳವಳಿಗಳನ್ನು ರೂಪಿಸಲು ಸಾಧ್ಯವಿರಲಿಲ್ಲ ಮತ್ತು ಅಂತಹ ಚಳವಳಿಗಳ ಜತೆ ಗುರುತಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಆದರೆ, ಈ ಬಾರಿ ಕಾಂಗ್ರೆಸ್‌ಗೆ ಇದು ಸಾಧ್ಯವಾಗಿದೆ. ಪಂಜಾಬ್‌, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರು ನಡೆಸಿದ ರೈತ ಚಳವಳಿಯು ಕಾಂಗ್ರೆಸ್‌ಗೆ ಲಾಭ ತಂದುಕೊಟ್ಟಿದೆ. ಜೊತೆಗೆ, ಮುಸ್ಲಿಮರು ಮುನ್ನಡೆಸಿದ ಸಿಎಎ ಹೋರಾಟ ಕೂಡ ಪಕ್ಷಕ್ಕೆ ಅನುಕೂಲ ಮಾಡಿಕೊಟ್ಟಿದೆ. (ಛತ್ತೀಸಗಢದಲ್ಲಿ ಗಣಿಗಾರಿಕೆ ವಿರೋಧಿ ಹೋರಾಟದೊಂದಿಗೆ ಗುರುತಿಸಿಕೊಳ್ಳದೇ ಇದ್ದದ್ದೇ, ಕಾಂಗ್ರೆಸ್‌ ಅಲ್ಲಿ ವಿಫಲವಾಗಲು ಕಾರಣ ಎಂದೂ ವಿಶ್ಲೇಷಿಸಬಹುದು). ಭಾರತ ಜೋಡೊ ಯಾತ್ರೆ, ರಾಜಕೀಯೇತರ ಚಳವಳಿಗಳು, ಜನ–ಸಂಘಟನೆಗಳು, ದೇಶದ ನಾಗರಿಕರು ಮತ್ತು ‘ಇಂಡಿಯಾ’ ಮೈತ್ರಿಕೂಟದಂತಹ ಜನ–ಸಂಘಟಿತ ಸಂಗತಿಗಳಿಗೆ ಈ ಬಾರಿಯ ಲೋಕಸಭಾ ಚುನಾವಣೆ ಸಾಕ್ಷಿಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.