ADVERTISEMENT

ಆಳ–ಅಗಲ | ದೇಶದಲ್ಲಿರುವ ಬಡವರೆಷ್ಟು?

ಜಯಸಿಂಹ ಆರ್.
ಸುಕೃತ ಎಸ್.
Published 27 ಫೆಬ್ರುವರಿ 2024, 23:30 IST
Last Updated 27 ಫೆಬ್ರುವರಿ 2024, 23:30 IST
   

ದೇಶದಲ್ಲಿನ ಬಡವರು ಯಾರು? ದೇಶದಲ್ಲಿನ ಬಡವರ ಸಂಖ್ಯೆ ಎಷ್ಟು ಎಂಬ ಪ್ರಶ್ನೆಗಳನ್ನು ಮುಂದಿಟ್ಟರೆ, ಅದಕ್ಕೆ ನೇರವಾದ ಮತ್ತು ಸ್ಪಷ್ಟವಾದ ಉತ್ತರ ಸಿಗಲಾರದು. ಏಕೆಂದರೆ ದೇಶದಲ್ಲಿ ಈಗ ಬಡತನದ ವ್ಯಾಖ್ಯಾನ ಬದಲಾಗಿದೆ. ಬದಲಾಗಿರುವ ವ್ಯಾಖ್ಯಾನದ ಪ್ರಕಾರ ಈಗ ದೇಶದಲ್ಲಿ ಬಡತನವಿಲ್ಲ, ಬದಲಿಗೆ ದೇಶದಲ್ಲಿ ಈಗ ಇರುವುದು ಬಹು ಆಯಾಮದ ಬಡತನ. ದೇಶದಲ್ಲಿರುವ ಬಹು ಆಯಾಮದ ಬಡವರ ಪ್ರಮಾಣ ಶೇ 11.28ರಷ್ಟು. ಹಾಗಿದ್ದರೆ ಬಹು ಆಯಾಮದ ಬಡವರ ಸಂಖ್ಯೆಯೆಷ್ಟು ಎಂದು ಕೇಳಿದರೆ ಅದಕ್ಕೂ ಉತ್ತರ ಸಿಗಲಾರದು. ಏಕೆಂದರೆ ದೇಶದ ಜನಸಂಖ್ಯೆಯಲ್ಲಿ ಶೇ 11.28ರಷ್ಟನ್ನು ಲೆಕ್ಕಹಾಕಲು, ಇತ್ತೀಚೆಗೆ ಜನಗಣತಿಯೇ ನಡೆದಿಲ್ಲ. ಹೀಗಾಗಿ ಬಡವರ ನಿಖರ ಸಂಖ್ಯೆ ಸಿಗುವುದಿಲ್ಲ.

2011–12ರಲ್ಲಿ ದೇಶದಲ್ಲಿ, ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ 27 ಕೋಟಿ ಎಂದು ಅಂದಾಜಿಸಲಾಗಿತ್ತು. ಅದು ಅಂದಿನ ಜನಸಂಖ್ಯೆಯ ಶೇ 21.5ರಷ್ಟಿತ್ತು. ನೀತಿ ಆಯೋಗವು ಇದೇ ಜನವರಿಯಲ್ಲಿ ಬಿಡುಗಡೆ ಮಾಡಿದ ‘ಬಹು ಆಯಾಮದ ಬಡತನ ಸೂಚ್ಯಂಕ: ಪ್ರಗತಿ ಪರಿಶೀಲನೆ ವರದಿ’ಯಲ್ಲಿ, ‘2013–14 ಮತ್ತು 2022–23ರ ನಡುವೆ ದೇಶದ 24.28 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಗೆ ಬಂದಿದ್ದಾರೆ’ ಎಂದು ಘೋಷಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿ ಕೇಂದ್ರದ ಹಲವು ಸಚಿವರು ಮತ್ತು ಬಿಜೆಪಿ ನಾಯಕರು ಈ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ದೇಶದಲ್ಲಿ ಈಗ ಇರುವ ಬಡವರೆಷ್ಟು ಎಂಬುದನ್ನು ಮಾತ್ರ ಹೇಳಿರಲಿಲ್ಲ. ಹೀಗಾಗಿ ಅದನ್ನು ನಾವೇ ಲೆಕ್ಕಮಾಡಿಕೊಳ್ಳಬೇಕಿದೆ.

ಸರ್ಕಾರವೇ ಹೇಳುತ್ತಿರುವಂತೆ 24.28 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಗೆ ಬಂದಿದ್ದರೆ, ಉಳಿದ ಬಡವರೆಷ್ಟು ಎಂಬ ಪ್ರಶ್ನೆ ಮೂಡುತ್ತದೆ. 2011–12ರಲ್ಲಿ 27 ಕೋಟಿಯಷ್ಟು ಇದ್ದ ಕಡುಬಡವರಲ್ಲಿ, 24.28 ಕೋಟಿಯನ್ನು ಕಳೆದರೆ 2.72 ಕೋಟಿಯಷ್ಟು ಬಡವರು ಉಳಿಯುತ್ತಾರೆ. ಅಂದರೆ ದೇಶದಲ್ಲಿರುವ ಬಡವರ ಸಂಖ್ಯೆ ಕೇವಲ 2.72 ಕೋಟಿಯೇ. ಖಂಡಿತ ಇಲ್ಲ. ದೇಶದ ಅಧಿಕೃತ ಜನಸಂಖ್ಯೆಗೆ (2011ರ ಜನಗಣತಿಯಂತೆ 126 ಕೋಟಿ) ಹೋಲಿಸಿದರೆ, 2.72 ಕೋಟಿ ಜನರ ಪ್ರಮಾಣವು ಶೇ 2.1ರಷ್ಟು ಮಾತ್ರ. ಆದರೆ ಜನವರಿಯಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ನೀತಿ ಆಯೋಗವು, ‘ಇನ್ನೂ ಶೇ 11.28ರಷ್ಟು ಜನರು ಬಹು ಆಯಾಮದ ಬಡವರಿದ್ದಾರೆ’ ಎಂದು ಹೇಳಿತ್ತು. 126 ಕೋಟಿ ಜನರಲ್ಲಿ ಶೇ 11.28ರಷ್ಟು ಅಂದರೆ, ಅದು 14.2 ಕೋಟಿಯಷ್ಟಾಗುತ್ತದೆ. 2011ರ ಜನಗಣತಿಯ ಸಂಖ್ಯೆಯ ಪ್ರಕಾರ ದೇಶದಲ್ಲಿ 14.2 ಕೋಟಿ ಜನ ಬಹು ಆಯಾಮದ ಬಡವರಿದ್ದಾರೆ. ಅಂದರೆ ಈ ಸರ್ಕಾರದ ಅವಧಿಯಲ್ಲಿ 24 ಕೋಟಿಗೂ ಹೆಚ್ಚು ಜನರು ಬಹು ಆಯಾಮದ ಬಡತನದಿಂದ ಹೊರಗೆ ಬಂದಿದ್ದರೂ, 12 ಕೋಟಿಗೂ ಹೆಚ್ಚು ಜನರು ಬಡತನಕ್ಕೆ ದೂಡಲ್ಪಟ್ಟಿದ್ದಾರೆ.

ADVERTISEMENT

ಆದರೆ, ಈ ಮೇಲಿನ ಲೆಕ್ಕಾಚಾರವೂ ದೇಶದಲ್ಲಿನ ಬಡವರ ಸಂಖ್ಯೆಯ ಬಗ್ಗೆ ವಾಸ್ತವ ಸ್ಥಿತಿಯನ್ನು ವಿವರಿಸುವುದಿಲ್ಲ. ಏಕೆಂದರೆ ಶೇ 11.28ರಷ್ಟು ಬಹು ಆಯಾಮದ ಬಡವರನ್ನು 2011ರ ಜನಗಣತಿಗೆ ಹೋಲಿಸಿ ಲೆಕ್ಕಾಚಾರ ಮಾಡಬೇಕೇ ಅಥವಾ ಈಗಿನ ಅಂದಾಜು  ಜನಸಂಖ್ಯೆಗೆ ಹೋಲಿಸಿ ಲೆಕ್ಕಾಚಾರ ಮಾಡಬೇಕೇ ಎಂಬುದನ್ನು ಸರ್ಕಾರವು ಸ್ಪಷ್ಟವಾಗಿ ಹೇಳಿಲ್ಲ. ವಿಶ್ವ ಸಂಸ್ಥೆಯ ಲೆಕ್ಕಾಚಾರದಂತೆ ಭಾರತದ ಈಗಿನ (2023ರಲ್ಲಿ) ಅಂದಾಜು ಜನಸಂಖ್ಯೆ 142.8 ಕೋಟಿ. 142 ಕೋಟಿಯಲ್ಲಿ ಶೇ 11.28ರಷ್ಟು ಎಂದರೆ, 16.1 ಕೋಟಿಯಷ್ಟಾಗುತ್ತದೆ. ಈ ಪ್ರಕಾರ ಭಾರತದಲ್ಲಿರುವ ಬಡವರ ಸಂಖ್ಯೆ 16 ಕೋಟಿಗೂ ಹೆಚ್ಚು. ಆದರೆ ಬಹು ಆಯಾಮದ ಬಡತನ ಲೆಕ್ಕಾಚಾರದಲ್ಲೇ ನ್ಯೂನತೆಗಳಿವೆ ಎಂಬ ಆರೋಪ ಇರುವ ಕಾರಣ, ಈ ಸಂಖ್ಯೆಯನ್ನೂ ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಳ್ಳಲಾಗದು ಎಂಬುದು ವಿರೋಧ ಪಕ್ಷಗಳ ಪಟ್ಟು.

ಬಡತನ ರೇಖೆಯ ಲೆಕ್ಕಾಚಾರ
ಭಾರತದಲ್ಲಿ ಮೊದಲು ಬಡತನವನ್ನು ‘ಬಡತನ ರೇಖೆ’ಯ ಆಧಾರದಲ್ಲಿ ನಿರ್ಧರಿಸಲಾಗುತ್ತಿತ್ತು. ಬಡತನ ರೇಖೆ ಎಂದರೆ ಗ್ರಾಮೀಣ ಕುಟುಂಬವೊಂದು ತಿಂಗಳೊಂದರಲ್ಲಿ ₹816 ಮತ್ತು ನಗರ ಪ್ರದೇಶದ ಕುಟುಂಬವೊಂದು ತಿಂಗಳೊಂದರಲ್ಲಿ ₹1,000 ವೆಚ್ಚ ಮಾಡಲು ಸಾಧ್ಯವಾಗದಿದ್ದರೆ, ಅದನ್ನು ಬಡತನದ ರೇಖೆಗಿಂತ ಕೆಳಗೆ ಇರುವ ಕುಟುಂಬ ಎಂದು ಪರಿಗಣಿಸಲಾಗುತ್ತಿತ್ತು (2011–12ರಲ್ಲಿ). ಆದರೆ ಈಗ ಸರ್ಕಾರವು ಈ ಲೆಕ್ಕಾಚಾರವನ್ನೇ ಬಿಟ್ಟಿದೆ.

ನೀತಿ ಆಯೋಗವು ರೂಪಿಸಿರುವ ಈ ಬಹು ಆಯಾಮದ ಬಡತನದ ಸೂಚ್ಯಂಕದಲ್ಲಿ, ಒಟ್ಟು ಸೂಚ್ಯಂಕದ ಮೊತ್ತವು 0.33ರಷ್ಟು ಮತ್ತು ಅದಕ್ಕಿಂತ ಹೆಚ್ಚು ಇದ್ದರೆ ಮಾತ್ರ ಆ ಕುಟುಂಬವು ಬಹು ಆಯಾಮದ ಬಡ ಕುಟುಂಬ ಎನಿಸಿಕೊಳ್ಳುತ್ತದೆ.

ಮೇಲೆ ವಿವರಿಸಲಾದ ಕುಟುಂಬವು ಅಪೌಷ್ಟಿಕತೆಯಿಂದ ಬಳಲುತ್ತಿದೆ ಮತ್ತು ಅದಕ್ಕೆ ಪಕ್ಕಾ ಮನೆ ಇಲ್ಲ. ಜತೆಗೆ ಆ ಕುಟುಂಬಕ್ಕೆ ಕುಡಿಯುವ ನೀರಿನ ಸಂಪರ್ಕವೂ ಇಲ್ಲ. ಆದರೆ, ಆ ಕುಟುಂಬವು ಸರ್ಕಾರದ ಕಡೆಯಿಂದ ಉಚಿತವಾಗಿ ಒದಗಿಸಲಾದ ಅಡುಗೆ ಅನಿಲ ಸಂಪರ್ಕ, ವಿದ್ಯುತ್ ಸಂಪರ್ಕವನ್ನು ಹೊಂದಿದೆ. ಜತೆಗೆ ಆ ಕುಟುಂಬದ ಸದಸ್ಯರು ಕನಿಷ್ಠ ಆರು ವರ್ಷಗಳ ಶಿಕ್ಷಣ ಪಡೆದಿದ್ದಾರೆ. ಹೀಗಾಗಿ ಆ ಕುಟುಂಬದ ಬಹು ಆಯಾಮದ ಬಡತನದ ಸೂಚ್ಯಂಕವು 0.33ರಷ್ಟಾಗುವುದಿಲ್ಲ. ಪರಿಣಾಮವಾಗಿ ಆ ಕುಟುಂಬವು ಬಹು ಆಯಾಮದ ಬಡತನದ ವ್ಯಾಖ್ಯೆಯಿಂದ ಹೊರಗೆ ಉಳಿಯುತ್ತದೆ. ಆ ಕುಟುಂಬಕ್ಕೆ ಪೌಷ್ಟಿಕಾಂಶಯುಕ್ತವಾದ ಆಹಾರವನ್ನು ಒದಗಿಸಿಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೂ, ಅದು ಬಡಕುಟುಂಬಎನಿಸಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರ ಮತ್ತು ನೀತಿ ಆಯೋಗವು ಹೇಳುತ್ತಿರುವಂತೆ 24.28 ಕೋಟಿ ಬಡಕುಟುಂಬಗಳನ್ನು, ಬಡತನದ ಮೇಲಕ್ಕೆ ಎತ್ತಿದ್ದು ಇದೇ ರೀತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.