ADVERTISEMENT

ಕರ್ನಾಟಕ ಚಿನ್ನದ ಹೊಳಪು | ಸಂಘರ್ಷ, ವಿರೋಧಾಭಾಸಗಳ ನಡುವೆಯೂ ಗಣನೀಯ ಸಾಧನೆ

ಶಿಕ್ಷಣ ವ್ಯವಸ್ಥೆ: ರಾಜ್ಯದಲ್ಲಿ ಅತಿ ಹೆಚ್ಚು ಖಾಸಗೀಕರಣ; ಈಡೇರದ ಸಂವಿಧಾನ, ಸಮಾನತೆ, ಸಾಮಾಜಿಕ ನ್ಯಾಯದ ಆಶಯ

ರಾಜೇಂದ್ರ ಚೆನ್ನಿ
Published 11 ನವೆಂಬರ್ 2024, 23:38 IST
Last Updated 11 ನವೆಂಬರ್ 2024, 23:38 IST
   
ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆಯು ಸಂಘರ್ಷದ ನೆಲೆಯಾಗಿಯೇ ಬೆಳೆದಿದ್ದರೂ ಗಣನೀಯವಾದ ಸಾಧನೆಯನ್ನು ಮಾಡಿದೆ. ಅನೇಕ ಸಂಸ್ಥೆಗಳು, ದೇಶದ ಏಕಮೇವ ಸಂಸ್ಥೆಗಳು ಇಲ್ಲಿ ನೆಲೆಗೊಂಡು ಉನ್ನತವಾಗಿ ಬೆಳೆದಿವೆ. ಉದಾಹರಣೆಗೆ ಐಐಎಸ್‌ಸಿ, ಐಐಎಂ ಇತ್ಯಾದಿ. ಇವುಗಳ ಪ್ರಗತಿಯಲ್ಲಿ ಕರ್ನಾಟಕದ ಪಾಲುಗಾರಿಕೆ ದೊಡ್ಡದು. ಆಶಾದಾಯಕ ವಿದ್ಯಮಾನವೆಂದರೆ, ಇಂದಿನ ತಲೆಮಾರಿನ ಅನೇಕರು ಶಿಕ್ಷಣದ ಪಡಿಯಚ್ಚುಗಳಿಂದ ಮುಕ್ತವಾಗಿ ಕನ್ನಡದ ಮೂಲಕವೇ ಹೊಸ ಕಲಿಕೆಯ ಸೃಜನಶೀಲ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇವು ಸರ್ಕಾರದ ಅಧಿಕೃತ ಶಿಕ್ಷಣ ನೀತಿಯ ಭಾಗವಾಗಬೇಕಿದೆ.

1956ರ ಏಕೀಕರಣದ ನಂತರ 29 ಭಾಗಗಳಲ್ಲಿ ಹಂಚಿಹೋಗಿದ್ದ ಕನ್ನಡದ ಪ್ರಾಂತ್ಯಗಳು ಒಂದುಗೂಡಿ ಕರ್ನಾಟಕವು ಭಾರತ ರಾಷ್ಟ್ರದ ಭಾಷಾವಾರು ರಾಜ್ಯವೊಂದಾಗಿ ಅಸ್ತಿತ್ವವನ್ನು ಪಡೆದುಕೊಂಡಿತು. ಈ ಹಿಂದೆ ಎರಡು ಬ್ರಿಟಿಷ್ ಪ್ರೆಸಿಡೆನ್ಸಿಗಳು, ಮೈಸೂರು ಸಂಸ್ಥಾನ ಮತ್ತು ಅನೇಕ ಸಂಸ್ಥಾನಗಳಲ್ಲಿ ವಿವಿಧ ಮಾದರಿಯ ಶಿಕ್ಷಣ ವ್ಯವಸ್ಥೆಗಳಿದ್ದವು. ಅವುಗಳಲ್ಲಿ ಏಕರೂಪತೆಯನ್ನು ತರಲು ಒಂದು ದಶಕವೇ ಬೇಕಾಯಿತು. ಅಲ್ಲದೇ, ಆಗ ರಾಷ್ಟ್ರೀಯ ಶಿಕ್ಷಣ ನೀತಿಯ ಚೌಕಟ್ಟುಗಳಲ್ಲಿ ಆಗಿದ್ದ ಮುಖ್ಯ ಬದಲಾವಣೆಗಳನ್ನು ಅಳವಡಿಸುವ ಕೆಲಸವೂ ಆಗತೊಡಗಿತು.

1960ರ ದಶಕದ ಕೊನೆಗೆ ರಾಜ್ಯದ ಶಿಕ್ಷಣ ವ್ಯವಸ್ಥೆಯು ಬಹುಮಟ್ಟಿಗೆ ಒಂದು ಕೇಂದ್ರೀಕೃತವಾದ ವ್ಯವಸ್ಥೆಯ ಅಡಿಯಲ್ಲಿ ಬಂದಿತು. ಬ್ರಿಟಿಷ್ ವಸಾಹತುಶಾಹಿ ಕಾಲದಿಂದ ಈ ಪ್ರದೇಶದಲ್ಲಿ ಶಿಕ್ಷಣದಲ್ಲಾದ ಬದಲಾವಣೆಗಳಿಂದಾಗಿ ಆಧುನಿಕ ಶಿಕ್ಷಣವು ಅಡಿಪಾಯವನ್ನು ಮತ್ತು ತನ್ನದೇ ಆದ ಚಹರೆಯನ್ನು ಪಡೆಯತೊಡಗಿತ್ತು. ಇದರ ವಾರಸುದಾರಿಕೆ ವಿವಿಧ ರೀತಿಯಲ್ಲಿ ತನ್ನ ಪ್ರಭಾವವನ್ನು ಬೀರಿತು. ಉಚ್ಚ ಜಾತಿಯ ಪ್ರತಿಷ್ಠಿತ ವರ್ಗವು ಆಧುನಿಕ ಶಿಕ್ಷಣದ ಪ್ರಯೋಜನವನ್ನು ಪಡೆದುಕೊಂಡು ಉದ್ಯೋಗದ ಅವಕಾಶಗಳನ್ನು, ಸಾಂಸ್ಕೃತಿಕ ಅಧಿಕಾರವನ್ನು ಪಡೆದಿತ್ತು. 1970ರ ದಶಕದ ನಂತರವೂ ಇದು ಮುಂದುವರಿದಿದೆ.

ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿ ಕಡ್ಡಾಯವಾಗಿ ಸಮಾಜದ ಎಲ್ಲಾ ವರ್ಗಗಳಿಗೂ ನೀಡಬೇಕೆನ್ನುವ ಸಂವಿಧಾನದ ಅಪೇಕ್ಷೆಯು ಈಡೇರದಿದ್ದರೂ ಸಾಕ್ಷರತೆಯಲ್ಲಿ ಆಗಿರುವ ಸತತವಾದ ಏರಿಕೆಯಿಂದ ದೀರ್ಘಕಾಲೀನ ಪರಿಣಾಮಗಳು ಉಂಟಾದವು. ಹಿಂದುಳಿದ ವರ್ಗಗಳು ಪ್ರಬಲ ಶೂದ್ರ ಜಾತಿಗಳು ಸಾಕ್ಷರತೆ, ಶಿಕ್ಷಣದಿಂದಾಗಿ ಹೊಸ ಪ್ರಜ್ಞೆಯನ್ನು ಬೆಳೆಸಿಕೊಂಡವು. ಅಲ್ಲದೇ ಇದರಿಂದಾಗಿ ನಗರೀಕರಣ, ಆಧುನಿಕತೆಗೆ ಪ್ರವೇಶ ಇವುಗಳಿಗೆ ಸಾಧ್ಯವಾದವು. ಅನೇಕ ವಿದ್ವಾಂಸರ ಪ್ರಕಾರ, ಈ ಚಲನೆಗಳ ಒಟ್ಟು ಪರಿಣಾಮವೆಂದರೆ ಎರಡು ಪ್ರಬಲ ಜಾತಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪ್ರಾಬಲ್ಯ ಪಡೆದುಕೊಂಡವು. ಶಿಕ್ಷಣವು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಅಸ್ತ್ರವಾಗಬೇಕೆನ್ನುವ ಆಶಯವು ಈಡೇರಲಿಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆಯಲ್ಲಿ ಅಪಾರವಾದ ಹೆಚ್ಚಳ, ಗ್ರಾಮೀಣ ಪ್ರದೇಶದಲ್ಲಿಯೂ ಪ್ರಾಥಮಿಕ ಹಾಗೂ ಹೈಸ್ಕೂಲು ಶಿಕ್ಷಣದ ಲಭ್ಯತೆ, ಎಷ್ಟೇ ದುರ್ಬಲವಾದರೂ ಕನಿಷ್ಠ ಮೂಲಸೌಕರ್ಯ ಇರುವ ಶಾಲೆಗಳು, ಸರ್ಕಾರಿ ಕಾಲೇಜುಗಳು, ಸರ್ಕಾರಿ ವಿಶ್ವವಿದ್ಯಾಲಯಗಳು ಇವುಗಳ ನಿರ್ಮಾಣ ಸಾಮಾನ್ಯ ವಿಷಯವೇನಲ್ಲ. ಕನಿಷ್ಠ ಪಕ್ಷ ಶೇಕಡ 50 ಸೂಕ್ತ ವಯೋಮಾನದ ಮಕ್ಕಳು, ಯುವಜನರು ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಹೊಂದಿರಬೇಕೆನ್ನುವುದು ಈಗಲೂ ಆದರ್ಶವಾಗಿಯೇ ಉಳಿದಿದೆ. ಆದರೆ, ಸಾವಿರಾರು ವರ್ಷಗಳವರೆಗೆ ಅಕ್ಷರಜ್ಞಾನದಿಂದಲೂ ವಂಚಿತರಾದ ವರ್ಗಗಳಿಗೆ ಉನ್ನತ ಶಿಕ್ಷಣವು ದೊರೆಯುವಂತಾಗಿರುವುದು ಇತ್ಯಾತ್ಮಕವೇ ಆಗಿದೆ. ಆದರೂ ವಾಸ್ತವವೆಂದರೆ ಹೋರಾಟ, ಜನಚಳವಳಿಗಳು ಇವುಗಳ ಬೆಂಬಲವಿಲ್ಲದೆ ಮತ್ತು ರಾಜಕೀಯ ಶಕ್ತಿಯಿಲ್ಲದೆ ಕರ್ನಾಟಕದ ಶಿಕ್ಷಣ ವ್ಯವಸ್ಥೆಯು ಅಸಮಾನತೆಯ ವ್ಯವಸ್ಥೆಯಾಗಿಯೇ ಉಳಿಯುತ್ತದೆ.

ADVERTISEMENT

ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಪ್ರವೇಶವು ಕರ್ನಾಟಕದಲ್ಲಿ ಸಾಮಾನ್ಯ ಪರೀಕ್ಷೆ (ಸಿಇಟಿ) ಮೂಲಕ ಆರಂಭವಾದದ್ದು ಶಿಕ್ಷಿತ ಮಧ್ಯಮ ವರ್ಗದ ಕುಟುಂಬಗಳಿಗೆ ಅಪಾರವಾದ ಅವಕಾಶಗಳನ್ನು ತಂದಿತು. ಸಂಪೂರ್ಣ ಖಾಸಗೀಕರಣವಾಗಬಹುದಾಗಿದ್ದ ಕ್ಷೇತ್ರದಲ್ಲಿ ಪ್ರವೇಶ ದೊರೆಯಿತು. ಹೀಗಾಗಿ ಮುಂದೆ ಉದಾರೀಕರಣ, ಜಾಗತೀಕರಣದ ವಿದ್ಯಮಾನಗಳಿಂದ ಬದಲಾದ ಸಂದರ್ಭದಲ್ಲಿ ಅದಕ್ಕೆ ಬೇಕಾದ ಕೌಶಲ, ಸಿದ್ಧತೆ ಇರುವ ಯುವ ವರ್ಗವು ಸನ್ನದ್ಧವಾಯಿತು. ಇಂದು ಅತ್ಯಂತ ಪ್ರಭಾವಿಯಾದ ಭಾರತೀಯ ಮಧ್ಯಮ ವರ್ಗವು ವಿಸ್ತಾರಗೊಂಡಿತು. ದುರಂತವೆಂದರೆ, ತಮ್ಮ ಹತೋಟಿಯಲ್ಲಿದ್ದ ವೈದ್ಯಕೀಯ, ತಾಂತ್ರಿಕ ಶಿಕ್ಷಣದಲ್ಲಿನ ಈ ಬದಲಾವಣೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ದುರ್ಬಲಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಲೇ ಬಂದಿವೆ. ಹಾಗೂ ಈ ವರ್ಗದ ನೇತಾರರು ಕರ್ನಾಟಕದಲ್ಲಿ ಪಕ್ಷಾತೀತವಾಗಿ ರಾಜಕೀಯ ವ್ಯಕ್ತಿಗಳೇ ಆಗಿದ್ದಾರೆ. ಹೀಗಾಗಿ ದೇಶದ ಶಿಕ್ಷಣದ ಮುನ್ನೆಲೆಯ ರಾಜ್ಯವೆಂದು ಈಗಲೂ ಹೆಸರಾಗಿರುವ ಕರ್ನಾಟಕವು ಶಿಕ್ಷಣ ಕ್ಷೇತ್ರದಲ್ಲಿ ಅತಿ ಹೆಚ್ಚು ಖಾಸಗೀಕರಣಗೊಂಡ ರಾಜ್ಯವೂ ಆಗಿದೆ.

ಇದರ ಇನ್ನೊಂದು ಪರಿಣಾಮವೆಂದರೆ, ರಾಜ್ಯದಲ್ಲಿರುವ ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಶ್ರೇಷ್ಠ ಉನ್ನತ ಶಿಕ್ಷಣ ಸಂಸ್ಥೆಗಳು ರಾಜ್ಯದಲ್ಲಿ ಇವೆಯೇ ಹೊರತು ರಾಜ್ಯದ ವಿದ್ಯಾರ್ಥಿಗಳು ಅವುಗಳಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಒಂದು ಕಡೆಗೆ ದುರ್ಬಲ ವರ್ಗಗಳಿಗೆ ಮೀಸಲಾತಿ, ಆರ್ಥಿಕ ನೆರವು, ಶಿಷ್ಯವೇತನ ಇವುಗಳನ್ನು ನೀಡಬೇಕೆನ್ನುವ ನೀತಿಗಳು ಇರುವುದರ ಜೊತೆಗೆ ಶಿಕ್ಷಣವನ್ನು ಜಾಗತಿಕ ಮಾರುಕಟ್ಟೆಯ ಸರಕನ್ನಾಗಿಸುವ ಯಶಸ್ವಿ ಪ್ರಯತ್ನಗಳು ಕರ್ನಾಟಕದ ಕೊಡುಗೆಗಳಾಗಿವೆ. ಈ ವಿರೋಧಾಭಾಸದ ನಡುವೆ ನಾವು ಇದ್ದೇವೆ. ಇದೇ ವಿದ್ಯಮಾನಗಳ ಪರಿಣಾಮವಾಗಿ ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮದ ಕಡೆಗೆ ಪಾಲಕರ ಮತ್ತು ವಿದ್ಯಾರ್ಥಿಗಳ ಒಲವು ಗಂಭೀರ ಪ್ರಮಾಣದಲ್ಲಿ ಜಾಸ್ತಿಯಾಗಿದೆ. ಈ ಬಿಕ್ಕಟ್ಟಿಗೆ ಸರಳವಾದ ಪರಿಹಾರಗಳಿಲ್ಲ. ಹಾಗೆಯೇ ಮಾನವಿಕ ವಿಷಯಗಳು ಮತ್ತು ಸಾಮಾಜಿಕ ವಿಜ್ಞಾನ ವಿಷಯಗಳು ಅನುತ್ಪಾದಕವೆನ್ನುವ ನಂಬಿಕೆ ಬಲವಾಗಿ ಬೇರೂರಿದ್ದರಿಂದ ಉನ್ನತ ಶಿಕ್ಷಣದಲ್ಲಿ ಏರುಪೇರಾಗಿದೆ. ಜ್ಞಾನಶಿಸ್ತುಗಳಲ್ಲಿಯೂ ಅಸಮಾನತೆಯು ಗಂಭೀರ ಸಮಸ್ಯೆಯಾಗಿದೆ. ಸಮಗ್ರ ಶಿಕ್ಷಣ, ವ್ಯಕ್ತಿತ್ವ ವಿಕಸನದ ಬದಲು ಜಾಗತಿಕ ಬಂಡವಾಳದ ಬೇಡಿಕೆಗಳನ್ನು ಪೂರೈಸುವುದೇ ಶಿಕ್ಷಣ ವ್ಯವಸ್ಥೆಯ ಉದ್ದೇಶವಾಗಿ ಬಿಟ್ಟಿದೆ. ವಿಸ್ತರಣೆ ಹಾಗೂ ಗುಣಮಟ್ಟದಲ್ಲಿ ಸುಧಾರಣೆ ಮತ್ತು ಸಾಮಾಜಿಕ ಮೌಲ್ಯದ ದೃಷ್ಟಿಯಿಂದ ಸಂಕುಚಿತತೆಗಳು ಏಕಕಾಲಕ್ಕೆ ಶಿಕ್ಷಣ ವ್ಯವಸ್ಥೆಯ ವಾಸ್ತವಗಳಾಗಿವೆ.

ಯಾವುದೇ ಮರುಹಂಬಲವಿಲ್ಲದೆ ಹೊರಳಿ ನೋಡಿದರೆ ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆಯು ಸಂಘರ್ಷದ ನೆಲೆಯಾಗಿಯೇ ಬೆಳೆದಿದ್ದರೂ ಗಣನೀಯವಾದ ಸಾಧನೆಯನ್ನು ಮಾಡಿದ್ದು ಕಾಣುತ್ತದೆ. ಅನೇಕ ಸಂಸ್ಥೆಗಳು, ದೇಶದ ಏಕಮೇವ ಸಂಸ್ಥೆಗಳು ಇಲ್ಲಿ ನೆಲೆಗೊಂಡು ಉನ್ನತವಾಗಿ ಬೆಳೆದಿವೆ. ಉದಾಹರಣೆಗೆ ಐಐಎಸ್‌ಸಿ, ಐಐಎಂ ಇತ್ಯಾದಿ. ಇವುಗಳ ಪ್ರಗತಿಯಲ್ಲಿ ಕರ್ನಾಟಕದ ಪಾಲುಗಾರಿಕೆ ದೊಡ್ಡದು. ರಾಜ್ಯದ ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದ ವಿದ್ವಾಂಸರನ್ನು, ಸಂಶೋಧಕರನ್ನು ಒಂದು ಕಾಲದಲ್ಲಿ ಸೃಷ್ಟಿಸಿದವು. ಕನ್ನಡದ ಬಹುಪಾಲು ಆತ್ಮಕತೆಗಳು ಶಿಕ್ಷಣದಿಂದಾಗಿ ಬದುಕು ಪರಿವರ್ತನೆಗೊಂಡುದರ ನಿರೂಪಣೆಗಳಾಗಿವೆ. ಅನೇಕ ತಲೆಮಾರುಗಳಿಗೆ ದಂತಕತೆಗಳಾಗಿರುವ ಶ್ರೇಷ್ಠ ಶಿಕ್ಷಕರ ಪರಂಪರೆ ಇದೆ. ಇಷ್ಟೇ ಮುಖ್ಯವೆಂದರೆ 70, 80ರ ದಶಕಗಳಿಂದ ಹುಟ್ಟಿಕೊಂಡ ಜನಪರ ಚಳವಳಿಗಳಿಗೆ ಶಿಕ್ಷಣ ಸಂಸ್ಥೆಗಳು ಚಳವಳಿಗಾರರನ್ನು ನೀಡಿವೆ. ಅಲ್ಲದೆ ಈ ಚಳವಳಿಗಳ ಉಗಮ ಸ್ಥಾನಗಳೂ ಆಗಿವೆ.

ವಿದ್ವಾಂಸರು ಒಪ್ಪದೇ ಇದ್ದರೂ ಕರ್ನಾಟಕದ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆಗೂ ಸಾಮಾಜಿಕ, ಸಾಂಸ್ಕೃತಿಕ ಚಳವಳಿಗಳಿಗೂ ಅವಿನಾ ಸಂಬಂಧವಿದೆ. ಲಂಕೇಶ್‌, ಅನಂತಮೂರ್ತಿ, ಎಂ.ಡಿ.ನಂಜುಂಡಸ್ವಾಮಿ ಇವರೆಲ್ಲ ಶಿಕ್ಷಣ ವ್ಯವಸ್ಥೆಯ ಭಾಗವೇ ಆಗಿದ್ದರು. ದಲಿತ ಕವಿ ಸಿದ್ಧಲಿಂಗಯ್ಯ ಮತ್ತು ಡಿ.ಎಸ್.ಎಸ್. ಸಂಸ್ಥಾಪಕರಲ್ಲಿ ಒಬ್ಬರಾದ ಬಿ.ಕೃಷ್ಣಪ್ಪ ಕೂಡ ಈ ವ್ಯವಸ್ಥೆಯ ಭಾಗವೇ ಆಗಿದ್ದರು; ಬಹುಮುಖ್ಯವಾಗಿ ಕುವೆಂಪು ಕೂಡ. ನನ್ನ ದೃಷ್ಟಿಯಲ್ಲಿ ತಮ್ಮ ಚಿಂತನೆಗಳಿಂದ ರಾಜ್ಯದ ಶಿಕ್ಷಣ ನೀತಿಗಳ ಮೇಲೆ ಅತ್ಯಂತ ಆಳವಾದ ಪ್ರಭಾವ ಬೀರಿದವರು ಕುವೆಂಪು ಅವರೇ. ಶಿವರಾಮ ಕಾರಂತರು ಪರ್ಯಾಯ ಶಿಕ್ಷಣ ಕಲಿಕೆಗಳಲ್ಲಿ ಮಾಡಿದ ಪ್ರಯೋಗಗಳು ಅತ್ಯಂತ ಸೃಜನಶೀಲವಾಗಿವೆ.

ಶಿಕ್ಷಣ ವ್ಯವಸ್ಥೆಯು ಜಡವಾದ ಅಧಿಕಾರಶಾಹಿ ವ್ಯವಸ್ಥೆಯಾಗಿ ರಾಜ್ಯದಲ್ಲಿ ಬೆಳೆಯದೆ ಇದ್ದಿದ್ದರೆ ಇವು ನಮ್ಮ ರಾಜ್ಯದ ಶಿಕ್ಷಣ ನೀತಿಯ ಅವಿಭಾಜ್ಯ ಅಂಗಗಳಾಗಿರುತ್ತಿದ್ದವು. ಆಶಾದಾಯಕ ವಿದ್ಯಮಾನವೆಂದರೆ, ಇಂದಿನ ತಲೆಮಾರಿನ ಅನೇಕರು ಶಿಕ್ಷಣದ ಪಡಿಯಚ್ಚುಗಳಿಂದ ಮುಕ್ತವಾಗಿ ಕನ್ನಡದ ಮೂಲಕವೇ ಹೊಸ ಕಲಿಕೆಯ ಸೃಜನಶೀಲ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇವು ಸರ್ಕಾರದ ಅಧಿಕೃತ ಶಿಕ್ಷಣ ನೀತಿಯ ಭಾಗವಾಗಬೇಕಿದೆ. ಶಿಕ್ಷಣವು ಮೂಲಭೂತವಾಗಿ ಸಮಾಜದ ಹಾಸು-ಹೊಕ್ಕು ಆಗಿರುತ್ತದೆ. ಅದರ ಸಾಂಸ್ಥೀಕರಣವು ಮುಖ್ಯವಲ್ಲ. ಇದನ್ನು ಇಂದಿನ ಸರ್ಕಾರವು ಅರ್ಥಮಾಡಿಕೊಳ್ಳಬೇಕು. ಜಗತ್ತಿನಾದ್ಯಂತ ಶಿಕ್ಷಣ ವ್ಯವಸ್ಥೆಯ ಕುರಿತು ಬಹುಮುಖ್ಯ ಒಳನೋಟಗಳು ಆ ವ್ಯವಸ್ಥೆಯ ಆಚೆಯಿಂದಲೇ ಬಂದಿವೆ. ಉದಾಹರಣೆಗೆ ಬುದ್ಧ, ಗಾಂಧಿ, ಪಾವೋಲೋ ಫ್ರೇರೆ (Paulo Freire) ಇವರಿಂದ; ಮುಖ್ಯವಾಗಿ ಅಂಬೇಡ್ಕರ್ ಅವರಿಂದ, ಅವರ ಗುರುಗಳಾದ ಜಾನ್‌ ಡೇವೇ ಅವರಿಂದ.

ಕೊನೆಯದಾಗಿ, ಶಿಕ್ಷಣ ಹಾಗೂ ಉದ್ಯೋಗಗಳ ಬಗ್ಗೆ ಇರುವ ಗೊಂದಲಗಳ ಬಗ್ಗೆ; ಕೆಲವು ದಶಕಗಳಿಂದ ಶಿಕ್ಷಣದ ಸಮರ್ಥನೆಯಿರುವುದು ಅದು ಇಂದಿನ ಉದ್ಯೋಗಗಳಿಗೆ ಅವಶ್ಯಕವಾದ ಕೌಶಲಗಳನ್ನು ಕಲಿಸಿಕೊಡುತ್ತದೆ ಎನ್ನುವುದರಲ್ಲಿ. ಯಾವ ಉದ್ಯೋಗಗಳು ಲಭ್ಯವಿವೆ, ಅವು ನಿರ್ದಿಷ್ಟವಾಗಿ ಏನನ್ನು ಬಯಸುತ್ತವೆ ಎನ್ನುವುದರಿಂದ ಈ ಚರ್ಚೆ ಆರಂಭವಾಗಬೇಕು. ಅದರ ಬದಲಾಗಿ, ಈಗ ಶಿಕ್ಷಣ ವ್ಯವಸ್ಥೆಯು ತಾನೇ ಈ ತೀರ್ಮಾನಗಳನ್ನು ಮಾಡಿ ಕಲಿಕೆಯ ಮಾದರಿಗಳನ್ನು ಸೃಷ್ಟಿಸುತ್ತಿದೆ. ತಾರ್ಕಿಕವಾಗಿ ಶಿಕ್ಷಣದಲ್ಲಿ ಉದ್ಯೋಗಕ್ಕೆ ಬೇಕಾದ ಬದಲಾವಣೆಗಳನ್ನು ತರುವುದಾದರೆ ಈ ಉದ್ಯೋಗಗಳು ಯಾವುವು ಎನ್ನುವುದರ ನಿಖರವಾದ ಮಾಹಿತಿ ಬೇಕಿದೆ. ಏಕೆಂದರೆ, ಈ ಬಗೆಯ ವ್ಯಾಖ್ಯಾನಗಳನ್ನು ನಂಬಿ ಶಿಕ್ಷಣ ಸಂಬಂಧಿ ಆಯ್ಕೆಗಳನ್ನು ಮಾಡಿದ ಲಕ್ಷಾಂತರ ಯುವಜನರು ಯಾಕೆ ಇಂದು ನಿರುದ್ಯೋಗಿಗಳಾಗಿದ್ದಾರೆ? ಯಾಕೆ ಇಂದಿಗೂ ಒಂದು ಕಾಲದಲ್ಲಿ ಅತ್ಯಂತ ಕೀಳು ಅಥವಾ ಕಳಂಕಿತವೆನ್ನುತ್ತಿದ್ದ ನೌಕರಿಗಳಿಗೆ ಪಿಎಚ್.ಡಿ. ಮಾಡಿದ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಭ್ರಮಾತ್ಮಕ ಸಂದರ್ಭದಲ್ಲಿ ಬಲಿಪಶುಗಳಾಗುತ್ತಿರುವ ಯುವ ಜನರ ಬಗ್ಗೆ ನಾನು ಆತಂಕಿತನಾಗಿದ್ದೇನೆ.

ಸ್ತ್ರೀ ಶಿಕ್ಷಣ ಹಿಂದಕ್ಕೆ ತಳ್ಳುವ ಪ್ರಯತ್ನ ಒಪ್ಪಲಾಗದು

ರಾಜ್ಯದ ಶಿಕ್ಷಣ ವ್ಯವಸ್ಥೆಯ ಮುಖ್ಯ ಸಾಧನೆಯೆಂದರೆ ಸಂಪ್ರದಾಯದ ಶಕ್ತಿಗಳ ವಿರೋಧದ ನಡುವೆಯೂ ವಿದ್ಯಾರ್ಥಿನಿಯರು, ಮಹಿಳೆಯರು ಇಂದು ಶಿಕ್ಷಣದ ಬಹುಸಂಖ್ಯಾತ ಫಲಾನುಭವಿಗಳಾಗಿರುತ್ತಿರುವುದು. ಭಾರತದಲ್ಲಿ ಸ್ತ್ರೀ ಶಿಕ್ಷಣದ ಚರಿತ್ರೆಯೇ ಅತ್ಯಂತ ಕುತೂಹಲಕಾರಿಯಾಗಿದೆ. ಸಾವಿತ್ರಿಬಾಯಿ ಫುಲೆ, ಪಂಡಿತಾ ರಮಾಬಾಯಿ ಅವರು ಆರಂಭಿಸಿದ ಚಳವಳಿಯು ತಂದ ಹೊಸ ಚಿಂತನೆಯ ನೇರ ಪ್ರಭಾವವಿಲ್ಲದೆಯೂ ಮೈಸೂರು ಸಂಸ್ಥಾನದಲ್ಲಿ ಅಂಬಳಿ ನರಸಿಂಹ ಅಯ್ಯಂಗಾರ್ ಹಾಗೂ ರಾಜಮನೆತನದ ಬೆಂಬಲದಿಂದಾಗಿ ಸ್ತ್ರೀ ಶಿಕ್ಷಣ ರಾಜ್ಯದಲ್ಲಿ ಆರಂಭವಾಯಿತು. ಬ್ರಿಟಿಷ್ ಆಳ್ವಿಕೆಯೂ ಇದಕ್ಕೆ ಸ್ಪಲ್ಪಮಟ್ಟಿಗೆ ಪೂರಕವಾಗಿತ್ತು. ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಮಹಿಳಾ ವಿರೋಧಿಯಾದ ಬಲಪಂಥೀಯ ರಾಜಕೀಯ ಹಾಗೂ ಅದರ ಪರಿವಾರದ ಸಂಸ್ಥೆಗಳು ಸ್ತ್ರೀ ಶಿಕ್ಷಣವನ್ನು ಒಂದು ನೂರು ವರ್ಷ ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿವೆ. ಅವುಗಳ ಮೂಲ ಬುನಾದಿಯೇ ಸ್ತ್ರೀದ್ವೇಷವಾಗಿದೆ. ಅವುಗಳ ಒತ್ತಡದಲ್ಲಿ ಸರ್ಕಾರವು ಖಚಿತವಾದ ನೀತಿಯೇ ಇಲ್ಲದೇ ಸೈದ್ಧಾಂತಿಕ ಬಲವೇ ಇಲ್ಲದೇ ಹೋರಾಟ ಮಾಡಲಾರದು. ಹೀಗಾಗಿ, ಈ ವಿಷಯದಲ್ಲಿ ಈವರೆಗೆ ಆಗಿರುವ ಪ್ರಗತಿಯನ್ನು ಹಿಂದಕ್ಕೆ ತಳ್ಳುವ ಯಾವುದೇ ಕ್ರಮವನ್ನು ಒಪ್ಪಬಾರದು. ಸಾಂಸ್ಕೃತಿಕವಾಗಿ ಈಗ ಕನ್ನಡ ಸಂಸ್ಕೃತಿಯಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿರುವುದು ಸೂಕ್ತವಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಹೋರಾಟವನ್ನು ರೂಪಿಸುತ್ತಿರುವ ಮಹಿಳೆಯರು ಚಿಂತಕರೂ ಆಗಿದ್ದಾರೆ. ಇದನ್ನು ಗಟ್ಟಿಯಾಗಿ ಹೇಳಲು ಕಾರಣವೆಂದರೆ, ಸ್ತ್ರೀಪರವಾದ ಶಿಕ್ಷಣ ನೀತಿಗಳನ್ನು ಧಿಕ್ಕರಿಸಲು ಪ್ರಯತ್ನಿಸಿದ ಕರ್ನಾಟಕದ ಬಲಪಂಥೀಯ ರಾಜಕೀಯ ಹಾಗೂ ಈ ರಾಜಕೀಯವನ್ನು ಬೆಂಬಲಿಸಿದ ಪಕ್ಷಗಳು ಸುಪ್ರೀಂ ಕೋರ್ಟ್‌ನಿಂದ ಸರಿಯಾದ ತಪರಾಕಿ ಪಡೆದಿವೆ. ಆದರೆ, ಈ ರಾಜಕೀಯದ ಹಿಂದೆ ಗಂಡಾಳ್ವಿಕೆ, ಪುರುಷ ಪ್ರಾಧಾನ್ಯದ ಬಹು ಅಪಾಯಕಾರಿ ಸುಳಿಗಳಿವೆ. ರಾಜ್ಯಮಟ್ಟದಲ್ಲಿ ನ್ಯಾಯಾಂಗವು ಶಿಕ್ಷಣ ವ್ಯವಸ್ಥೆಯ ಮೂಲ ಸಾಂವಿಧಾನಿಕ ಆಶಯಗಳನ್ನು ಸಮರ್ಥಿಸುತ್ತಿಲ್ಲ ಎನ್ನುವುದು ಆತಂಕದ ವಿಷಯವಾಗಿದೆ.

 ಲೇಖಕ: ನಿವೃತ್ತ ಪ್ರಾಧ್ಯಾಪಕ, ವಿಮರ್ಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.