ADVERTISEMENT

ಆಳ-ಅಗಲ: ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಯ ವೈವಿಧ್ಯ

ಜಯಸಿಂಹ ಆರ್.
Published 19 ಅಕ್ಟೋಬರ್ 2022, 20:43 IST
Last Updated 19 ಅಕ್ಟೋಬರ್ 2022, 20:43 IST
ಭಾರತೀಯ ರಾಷ್ಟ್ರೀಯ ಸೇನೆಯ ಸೈನಿಕರೊಂದಿಗೆ ಸುಭಾಷ್ ಚಂದ್ರ ಬೋಸ್‌   ಚಿತ್ರ:ಕಾಂಗ್ರೆಸ್‌ ಆರ್ಕೈವ್
ಭಾರತೀಯ ರಾಷ್ಟ್ರೀಯ ಸೇನೆಯ ಸೈನಿಕರೊಂದಿಗೆ ಸುಭಾಷ್ ಚಂದ್ರ ಬೋಸ್‌   ಚಿತ್ರ:ಕಾಂಗ್ರೆಸ್‌ ಆರ್ಕೈವ್   

ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್‌ ಈಗ 137 ವರ್ಷಗಳನ್ನು ಪೂರೈಸಿದೆ. 1885ರಿಂದ 2022ರವರೆಗೆ ಪಕ್ಷವು ಹಲವು ಏರಿಳಿತಗಳನ್ನು ಕಂಡಿದೆ. ಸ್ವಾತಂತ್ರ್ಯಪೂರ್ವ ಭಾರತ ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲೂ ಕಾಂಗ್ರೆಸ್‌ ಹಲವು ಭಾರಿ ವಿಭಜನೆಯಾಗಿದೆ. ಈ ಅವಧಿಯಲ್ಲಿ ಒಟ್ಟು 63 ಮಂದಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದಾರೆ. ಮೋತಿಲಾಲ್‌ ನೆಹರೂ ಅವರಿಂದ ರಾಹುಲ್‌ ಗಾಂಧಿಯವರೆಗೆ ಈ ಕುಟುಂಬದಿಂದ ಪಕ್ಷದ ಅಧ್ಯಕ್ಷ ಹುದ್ದೆಗೆ ಏರಿದವರ ಸಂಖ್ಯೆ ಆರು.

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಕಾಲದಲ್ಲಿ ದೇಶದ ಎಲ್ಲಾ ಭಾಗಗಳ ರಾಜಕೀಯ ನಾಯಕರು ಕಾಂಗ್ರೆಸ್‌ ಅನ್ನು ಮುನ್ನಡೆಸಿದ್ದಾರೆ. ದಕ್ಷಿಣ, ಉತ್ತರ, ಮಧ್ಯ ಭಾರತ, ಪಶ್ಚಿಮ ಮತ್ತು ಈಶಾನ್ಯ ಭಾರತದ ನಾಯಕರೂ ಸಹ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದಿದ್ದಾರೆ. ಮಹಾತ್ಮ ಗಾಂಧಿ ಮತ್ತು ನೆಹರೂ ಅವರ ವಿಚಾರಗಳಿಗಿಂತ ಭಿನ್ನ ನಿಲುವು ಹೊಂದಿದ್ದವರೂ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. ಒಟ್ಟಾರೆ ಪಕ್ಷದ ಅಧ್ಯಕ್ಷ ಹುದ್ದೆ ನಿರ್ವಹಿಸಿದವರ ಪಟ್ಟಿಯು ದೇಶದ ಭೌಗೋಳಿಕ, ಸಾಂಸ್ಕೃತಿಕ, ಭಾಷಿಕ, ಸೈದ್ಧಾಂತಿಕ ಮತ್ತು ಸಾಮಾಜಿಕ ವೈವಿಧ್ಯದ ಪ್ರತೀಕದಂತಿದೆ.

ಕಾಂಗ್ರೆಸ್‌ ಅಸ್ತಿತ್ವಕ್ಕೆ ಬಂದಂದಿನಿಂದ ಪಕ್ಷವು ಅಧಿವೇಶನಗಳನ್ನು ಆಯೋಜಿಸುತ್ತಾ ಬಂದಿದೆ. ಅಧಿವೇಶನಗಳಲ್ಲಿ ಪಕ್ಷದ ಅಧ್ಯಕ್ಷರನ್ನು ಚುನಾಯಿಸಲಾಗುತ್ತಿತ್ತು ಮತ್ತು ಪಕ್ಷದ ಮುಂದಿನ ಹೋರಾಟವನ್ನು ನಿರ್ಧರಿಸಲಾಗುತ್ತಿತ್ತು. ಹೀಗಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮತ್ತು ಕಾಂಗ್ರೆಸ್‌ ಇತಿಹಾಸದಲ್ಲಿ ಈ ಅಧಿವೇಶನಗಳಿಗೆ ಮಹತ್ವದ ಸ್ಥಾನಗಳಿವೆ. ಈವರೆಗೆ ಇಂತಹ 84 ಅಧಿವೇಶಗಳನ್ನು ಹಾಗೂ ಹತ್ತಾರು ಕಿರು ಅಧಿವೇಶನಗಳನ್ನು ಪಕ್ಷವು ನಡೆಸಿದೆ.

ADVERTISEMENT

ಆರಂಭದಿಂದಲೂ ಕಾಂಗ್ರೆಸ್‌ ಅಧ್ಯಕ್ಷರ ಅಧಿಕಾರದ ಅವಧಿ ಒಂದು ವರ್ಷ ಮಾತ್ರ. 1990ರ ದಶಕದವರೆಗೂ ಈ ಪದ್ಧತಿಯನ್ನೇ ಅನುಸರಿಸಿಕೊಂಡು ಬರಲಾಗಿದೆ. ಪಕ್ಷದ ಅಧ್ಯಕ್ಷರನ್ನು ಚುನಾವಣೆಯ ಮೂಲಕ ಮತ್ತು ಒಮ್ಮತದ ಮೂಲಕ ಆಯ್ಕೆ ಮಾಡುವ ಎರಡು ಪದ್ಧತಿಗಳನ್ನು ಪಾಲಿಸಿಕೊಂಡು ಬರಲಾಗಿದೆ. ಅಧ್ಯಕ್ಷರಾಗಿದ್ದವರ ಕಾರ್ಯವೈಖರಿ ಮತ್ತು ನಿಲುವುಗಳು ಅವರು ಮರುಆಯ್ಕೆ ಆಗುವಂತೆ ಮಾಡಿವೆ. ಹಲವರು ಸತತ ಎರಡು ಅವಧಿಗೆ ಆಯ್ಕೆಯಾಗಿದ್ದರೆ, ಕೆಲವರು ಸತತ ನಾಲ್ಕು ಅವಧಿಗೂ ಆಯ್ಕೆಯಾಗಿದ್ದಾರೆ. ಹೀಗಿದ್ದೂ ಪಕ್ಷದ ಇತಿಹಾಸದಲ್ಲಿ ಅಧ್ಯಕ್ಷರ ಹುದ್ದೆಗೆ ನಡೆದ ಕೆಲವು ಚುನಾವಣೆಗಳು ಮಾತ್ರ ಹೆಚ್ಚು ಮಹತ್ವ ಪಡೆದಿವೆ. ಮಹಾತ್ಮ ಗಾಂಧಿ ಬೆಂಬಲಿತ ಅಭ್ಯರ್ಥಿ ಮತ್ತು ಸುಭಾಷ್‌ ಚಂದ್ರ ಬೋಸ್‌ ನಡುವಿನ ಸ್ಪರ್ಧೆ, 1998ರಲ್ಲಿ ಸೋನಿಯಾ ಅವರ ಸ್ಪರ್ಧೆ ಮತ್ತು ಈಗ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅವರ ಮಧ್ಯೆ ನಡೆದ ಸ್ಪರ್ಧೆಯು ಮಹತ್ವದ ಸ್ಥಾನ ಪಡೆದಿವೆ.

ಪಕ್ಷದ ಅಧ್ಯಕ್ಷ ಹುದ್ದೆಯಲ್ಲಿ ಅತಿಹೆಚ್ಚು ಅವಧಿಗೆ ಇದ್ದವರಲ್ಲಿ ನೆಹರೂ–ಗಾಂಧಿ ಕುಟುಂಬದವರದ್ದೇ ಸಿಂಹ ಪಾಲು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸಹ ಒಂದು ಅವಧಿಗಿಂತಲೂ ಹೆಚ್ಚು ಕಾಲ ಈ ಹುದ್ದೆಯನ್ನು ನಿರ್ವಹಿಸಿದ್ದಾರೆ. ಆದರೆ ಅತಿಹೆಚ್ಚು ಅವಧಿಗೆ ಈ ಹುದ್ದೆ ನಿರ್ವಹಿಸಿದ್ದು ಸೋನಿಯಾ ಗಾಂಧಿ (19 ವರ್ಷ). ಮಧ್ಯಂತರ ಅಧ್ಯಕ್ಷೆಯಾಗಿಯೂ ಅವರು ಎರಡೂವರೆ ವರ್ಷ ಪಕ್ಷವನ್ನು ಮುನ್ನಡೆಸಿದ್ದಾರೆ.

ಹಲವು ರಾಜ್ಯಗಳ ಪ್ರಾತಿನಿಧ್ಯ

ದೇಶದ ಬಹುತೇಕ ರಾಜ್ಯಗಳ ರಾಜಕೀಯ ನಾಯಕರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ದಕ್ಷಿಣದ ಕರ್ನಾಟಕ, ಅವಿಭಜಿತ ಆಂಧ್ರ ಪ್ರದೇಶ, ತಮಿಳುನಾಡಿನ ಮುತ್ಸದ್ದಿಗಳೂ ಕಾಂಗ್ರೆಸ್‌ ಅನ್ನು ಹಲವು ಬಾರಿ ಮುನ್ನಡೆಸಿದ್ದಾರೆ. ಗುಜರಾತ್‌ನಿಂದ ಹಿಡಿದು, ಈಶಾನ್ಯ ಭಾರತದ ಅಸ್ಸಾಂ ನಡುವಣ ರಾಜ್ಯಗಳ ನಾಯಕರು ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದೇ ಇದ್ದಾರೆ.

ನೇತಾಜಿ ಕಾಂಗ್ರೆಸ್‌ ಅಧ್ಯಕ್ಷರಾದಾಗ...

ನೇತಾಜಿ ಸುಭಾಷ್‌ ಚಂದ್ರ ಬೋಸ್ ಸಹ ಎರಡು ಅವಧಿಗೆ ಕಾಂಗ್ರೆಸ್‌ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಪಕ್ಷದ ಅಧ್ಯಕ್ಷರ ಹುದ್ದೆಗೆ ನಡೆದ ಚುನಾವಣೆಗಳಲ್ಲಿ ನೇತಾಜಿ ಅವರು ಕಣಕ್ಕೆ ಇಳಿದಿದ್ದ ಚುನಾವಣೆಯೂ ಮಹತ್ವದ್ದು.

1930ರ ವೇಳೆಗೆ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯಗಳು ರೂಪುಗೊಂಡಿದ್ದವು. ಒಂದೆಡೆ ಅಹಿಂಸಾ ಮಾರ್ಗದ ಹೋರಾಟವನ್ನು ಬೆಂಬಲಿಸಿದ್ದ ಗಾಂಧಿವಾದಿಗಳಿದ್ದರೆ, ಮತ್ತೊಂದೆಡೆ ಸಶಸ್ತ್ರ ಹೋರಾಟ ಬೇಕು ಎನ್ನುವ ನಾಯಕರ ಗುಂಪು ಇತ್ತು. ಸಶಸ್ತ್ರ ಹೋರಾಟವನ್ನು ಬೆಂಬಲಿಸಿದ್ದವರಲ್ಲಿ ಸುಭಾಷ್‌ ಚಂದ್ರ ಬೋಸ್‌ ಪ್ರಮುಖರು. 1938ರಲ್ಲಿ ನಡೆದ ಹರಿಪುರ ಕಾಂಗ್ರೆಸ್‌ ಸಮ್ಮೇಳನದಲ್ಲಿ ಮಹಾತ್ಮ ಗಾಂಧಿ ಬೆಂಬಲಿತ ಪಟ್ಟಾಭಿ ಸೀತಾರಾಮಯ್ಯ ಅವರು ಕಣದಲ್ಲಿದ್ದರು. ಅವರ ಎದುರಾಳಿಯಾಗಿ ಸುಭಾಷ್ ಚಂದ್ರ ಬೋಸ್‌ ಕಣಕ್ಕೆ ಇಳಿದಿದ್ದರು. ಆ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಸುಭಾಷ್‌ ಚಂದ್ರ ಬೋಸ್‌ ಅವರು 1938ರ ಫೆಬ್ರುವರಿ 19ರಂದು ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

1939ರಲ್ಲಿ ನಡೆದ ಚುನಾವಣೆಯಲ್ಲೂ ಸುಭಾಷ್ ಚಂದ್ರ ಬೋಸ್‌ ಅವರು ಪಕ್ಷದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಚುನಾಯಿತರಾಗಿದ್ದರು. ಆದರೆ, ಅದೇ ವರ್ಷದ ಮಾರ್ಚ್‌ನಲ್ಲಿ ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಜತೆಗೆ ಮಹಾತ್ಮ ಗಾಂಧಿ ಸಹ ರಾಜಕೋಟ್‌ನಲ್ಲಿ ಉಪವಾಸದಲ್ಲಿದ್ದರು. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಮಂಡಳಿಯು ಸಭೆ ನಡೆಸಿ, ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿತ್ತು. ಆ ಸಭೆಯ ತೀರ್ಮಾನಗಳನ್ನು ಖಂಡಿಸಿ, ಸುಭಾಷ್ ಚಂದ್ರ ಬೋಸ್‌ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ವ್ಯವಸ್ಥಿತ ಚುನಾವಣೆ

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೀಯ ಚುನಾವಣೆಯನ್ನು, ಕಾಂಗ್ರೆಸ್ ಕೇಂದ್ರೀಯ ಚುಣಾವಣಾ ಪ್ರಾಧಿಕಾರವು (ಸಿಇಎ) ನಡೆಸುತ್ತದೆ. ಕಾಂಗ್ರೆಸ್‌ ಪಕ್ಷದ ಸಂವಿಧಾನದ 18ನೇ ವಿಧಿ ಪ್ರಕಾರ ಚುನಾವಣೆ ನಡೆಯುತ್ತದೆ. ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು. ಇವರಿಗೆ ಸೂಚಕರ ಬೆಂಬಲವಿರಬೇಕು.

ಸ್ಪರ್ಧೆ ಮಾಡಲು ಇಚ್ಚಿಸುವವರು ಕಾಂಗ್ರೆಸ್ ಕಚೇರಿಯಿಂದ ನಾಮಪತ್ರ ಪಡೆದು ಚುನಾವಣಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ನಾಮಪತ್ರ ಪರಿಶೀಲನೆ ಬಳಿಕ, ಅಂತಿಮವಾಗಿ ಕಣದಲ್ಲಿ ಉಳಿದ ಆಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುತ್ತದೆ. ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಸದಸ್ಯರು ಅಥವಾ ಪ್ರತಿನಿಧಿಗಳು ಮತದಾನದ ಹಕ್ಕು ಹೊಂದಿರುತ್ತಾರೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯು ವಿವಿಧ ರಾಜ್ಯಗಳಿಗೆ ತೆರಳಿ ಪ್ರಚಾರ ನಡೆಸಬಹುದು. ಇವರಿಗೆ ಆಯಾ ಪ್ರದೇಶ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು ನೆರವು ನೀಡಬಹುದು. ಆದರೆ, ನಿರ್ದಿಷ್ಟ ಅಭ್ಯರ್ಥಿಯ ಪರ ಪ್ರಚಾರ ಮಾಡಬಯಸುವ ಪಕ್ಷದ ಮುಖಂಡರು, ಅದಕ್ಕೂ ಮುನ್ನ ಪಕ್ಷದಲ್ಲಿ ತಾವು ಹೊಂದಿರುವ ಸಂಘಟನಾತ್ಮಕ ಹುದ್ದೆಗೆ ರಾಜೀನಾಮೆ ನೀಡಬೇಕು. ಮತದಾನವು ಮತಪತ್ರದ ಮೂಲಕ ನಡೆಯುತ್ತದೆ. ದೆಹಲಿಯಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿ ಹಾಗೂ ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿಗಳಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಮಾಡುವ ಮೂಲಕ ಪ್ರತಿನಿಧಿಗಳು ತಮ್ಮ ಆಯ್ಕೆಯನ್ನು ತಿಳಿಸಬೇಕು. ಮತದಾನದ ಬಳಿಕ ಮತ ಪೆಟ್ಟಿಗೆಗಳನ್ನು ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಗೆ ರವಾನೆ ಮಾಡಲಾಗುತ್ತದೆ. ಅಲ್ಲಿ, ಮತ ಎಣಿಕೆ ನಡೆಯುತ್ತದೆ.

ಆಧಾರ: ಕಾಂಗ್ರೆಸ್‌ ಅಧಿಕೃತ ಜಾಲತಾಣ, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.