ಮಲಬಾರ್ ನೌಕಾ ಕವಾಯತಿಗೆ ಆಸ್ಟ್ರೇಲಿಯಾ ಮರಳಿದೆ. ‘ಕ್ವಾಡ್’ ಕೂಟದ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯ ಜಂಟಿ ಸಮರಾಭ್ಯಾಸ ನಡೆಸಲಿವೆ. ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಶೀಲ ನಡವಳಿಕೆಗೆ ಇದೊಂದು ತಿರುಗೇಟು ಎಂದೇ ಪರಿಗಣಿಸಲಾಗುತ್ತಿದೆ. 13 ವರ್ಷಗಳ ಬಳಿಕ ಶಕ್ತಿ ಪ್ರದರ್ಶನ ದೊಡ್ಡ ಮಟ್ಟದಲ್ಲಿಯೇ ನಡೆಯಲಿದೆ
ಭಾರತವು ಲಡಾಖ್‌ನಲ್ಲಿಚೀನಾ ಜತೆ ಗಡಿ ಸಂಘರ್ಷ ಎದುರಿಸುತ್ತಿರುವ ಸಂದರ್ಭದಲ್ಲಿ ‘ಮಲಬಾರ್ ಸಮರಾಭ್ಯಾಸ’ಹೆಚ್ಚು ಮಹತ್ವ ಪಡೆದುಕೊಂಡಿದೆ. ಭಾರತ, ಅಮೆರಿಕ ಮತ್ತು ಜಪಾನ್‌ನ ನೌಕಾಪಡೆಗಳು ಪ್ರತಿ ವರ್ಷ ಬಂಗಾಳ ಕೊಲ್ಲಿಯಲ್ಲಿ ನಡೆಸುವ ಜಂಟಿ ಸಮರಾಭ್ಯಾಸಕ್ಕೆ ಈ ವರ್ಷ ಆಸ್ಟ್ರೇಲಿಯ ಸಹ ಜತೆಯಾಗುತ್ತಿದೆ. ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದ ಸಮುದ್ರ ಮಾರ್ಗದ ಆಯಕಟ್ಟಿನ ಜಾಗದಲ್ಲಿ ನಡೆಯುವ ಈ ಸಮರಾಭ್ಯಾಸದಲ್ಲಿ, ಜಾಗತಿಕ ವಾಣಿಜ್ಯ ಹಿತಾಸಕ್ತಿಯೂ ಅಡಗಿದೆ.
ದೊಡ್ಡ ಸಂಖ್ಯೆಯ ಸರಕು ಮತ್ತು ತೈಲ ಸಾಗಾಟ ಹಡಗುಗಳು ಅರಬ್ಬಿ ಸಮುದ್ರ-ಹಿಂದೂಮಹಾಸಾಗರ-ಬಂಗಾಳಕೊಲ್ಲಿ-ಮಲಕ್ಕಾ ಜಲಸಂಧಿ-ದಕ್ಷಿಣ ಚೀನಾ ಸಮುದ್ರ ಮಾರ್ಗದಲ್ಲಿ ಸಾಗುತ್ತವೆ. ಏಷ್ಯಾದ ಬಹುತೇಕ ವಾಣಿಜ್ಯ ವಹಿವಾಟು ಈ ಮಾರ್ಗದ ಮೂಲಕವೇ ನಡೆಯುತ್ತದೆ. ಈ ಮಾರ್ಗದಲ್ಲಿ ಮುಕ್ತ ಸಂಚಾರ ಇದ್ದರೆ, ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿರುವ ರಾಷ್ಟ್ರಗಳ ಆರ್ಥಿಕ ಚಟುವಟಿಕೆ ಎಂದಿನಂತೆ ನಡೆಯುತ್ತದೆ. ಇಲ್ಲದಿದ್ದಲ್ಲಿ, ಆರ್ಥಿಕತೆಗೆ ಧಕ್ಕೆಯಾಗುತ್ತದೆ. ಈ ದೇಶಗಳ ಜತೆ ವ್ಯಾಪಾರ ವಹಿವಾಟು ನಡೆಸಲು ಅಮೆರಿಕ ಮತ್ತು ಆಸ್ಟ್ರೇಲಿಯ ಸಹ ಇದೇ ಮಾರ್ಗವನ್ನು ಅವಲಂಬಿಸಿವೆ. 1990ರ ದಶಕದಲ್ಲಿ ಈ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುತ್ತಿದ್ದುದರಿಂದ ಮುಕ್ತ ಮತ್ತು ಸ್ವತಂತ್ರ ಸಮುದ್ರ ಮಾರ್ಗಕ್ಕೆ ಧಕ್ಕೆಯಾಗುತ್ತಿದೆ ಎಂಬ ಕಳವಳವನ್ನು ಹಲವು ರಾಷ್ಟ್ರಗಳು ವ್ಯಕ್ತಪಡಿಸಿದ್ದವು.
ಚೀನಾದ ಈ ಪ್ರಾಬಲ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ 1992ರಲ್ಲಿ ಅಮೆರಿಕ ಮತ್ತು ಭಾರತ ಜಂಟಿ ಸಮರಾಭ್ಯಾಸ ಆರಂಭಿಸಿದವು. ಈ ಸಮುದ್ರ ಮಾರ್ಗದಲ್ಲಿ ತುರ್ತು ಸಂದರ್ಭಗಳು ಎದುರಾದರೆ, ಅದನ್ನು ನಿಭಾಯಿಸುವುದು ಹೇಗೆ ಮತ್ತು ಎರಡೂ ದೇಶಗಳ ನೌಕಾಪಡೆಗಳ ನಡುವಣ ಸಹಕಾರ ಹೇಗಿರಬೇಕು ಎಂಬುದರ ಪ್ರಾತ್ಯಕ್ಷಿಕೆ ಈ ಸಮರಾಭ್ಯಾಸ. 1998ರಲ್ಲಿ ಭಾರತವು ಅಣ್ವಸ್ತ್ರ ಪರೀಕ್ಷೆ ನಡೆಸಿದ ನೆಪವೊಡ್ಡಿ, ಅಮೆರಿಕವು ಇದರಿಂದ ಹಿಂದಕ್ಕೆ ಸರಿಯಿತು. ಆದರೆ 2002ರಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಟದ ಹೆಸರಿನಲ್ಲಿ ಈ ಸಮರಾಭ್ಯಾಸಕ್ಕೆ ಮತ್ತೆ ಚಾಲನೆ ನೀಡಲಾಯಿತು.
2007ರಲ್ಲಿ ಈ ಸಮರಾಭ್ಯಾಸಕ್ಕೆ ಜಪಾನ್, ಆಸ್ಟ್ರೇಲಿಯ ಮತ್ತು ಸಿಂಗಪುರವನ್ನು ಆಹ್ವಾನಿಸಲಾಯಿತು.ಸಿಂಗಪುರ ಹೊರತುಪಡಿಸಿ ಉಳಿದೆಲ್ಲಾ ರಾಷ್ಟ್ರಗಳು ಭಾಗವಹಿಸಿದವು. ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದ ಚೀನಾ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿತ್ತು. ಆಗ ಚೀನಾ ಜತೆ ಆಸ್ಟ್ರೇಲಿಯ ಉತ್ತಮ ವ್ಯಾಪಾರ ಸಂಬಂಧ ಹೊಂದಿತ್ತು. ಚೀನಾವನ್ನು ಈ ಗುಂಪಿನಿಂದ ಹೊರಗಿಡಲಾಗಿದೆ ಎಂದು ಕಾರಣ ಹೇಳಿ ಆಸ್ಟ್ರೇಲಿಯ ಅದೇ ವರ್ಷ ಹೊರನಡೆಯಿತು. ಆನಂತರ ಅಮೆರಿಕ ಮತ್ತು ಭಾರತ ಪ್ರತೀ ವರ್ಷ ಸಮರಾಭ್ಯಾಸ ನಡೆಸುತ್ತಿವೆ. ಜಪಾನ್ ಕೆಲವು ವರ್ಷ ಭಾಗವಹಿಸದೇ ಇದ್ದರೂ, ಕಳೆದ ಐದು ವರ್ಷಗಳಿಂದ ಸಕ್ರಿಯವಾಗಿದೆ.
ಚೀನಾದಿಂದ ಆಫ್ರಿಕಾ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಸರಕುಗಳನ್ನು ಸಾಗಿಸುವ ಹಡಗುಗಳು ದಕ್ಷಿಣ ಚೀನಾ ಸಮುದ್ರ ಮತ್ತು ಮಲಕ್ಕಾ ಜಲಸಂಧಿ, ಬಂಗಾಳಕೊಲ್ಲಿ ಮಾರ್ಗವಾಗಿಯೇ ಹೋಗಬೇಕು. ಬೇರೆ ಮಾರ್ಗದ ಮೂಲಕ ಸಾಗಿದರೆ ದೂರವು ದುಪ್ಪಟ್ಟಾಗುತ್ತದೆ. ಕೊಲ್ಲಿ ರಾಷ್ಟ್ರಗಳಿಂದ ಚೀನಾಗೆ ಹೊರಡುವ ತೈಲವಾಹಕ ಹಡಗುಗಳು, ಭಾರತ ಮತ್ತು ಜಪಾನ್, ಭಾರತ ಮತ್ತು ಅಮೆರಿಕ ನಡುವಣ ಸರಕುಸಾಗಣೆ ಇದೇ ಮಾರ್ಗವನ್ನು ಅವಲಂಬಿಸಿದೆ.
ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ತನ್ನ ಒಡೆತನವನ್ನು ಪ್ರತಿಪಾದಿಸುತ್ತಿದೆ. ಈ ಒಡೆತನವನ್ನು ಬೇರೆ ರಾಷ್ಟ್ರಗಳು ಒಪ್ಪಿಕೊಂಡರೆ, ಈ ಮಾರ್ಗವನ್ನು ಬಳಸುವುದಕ್ಕೆ ಚೀನಾಗೆ ತೆರಿಗೆ ನೀಡಬೇಕಾಗಬಹುದುಮತ್ತು ಚೀನಾ ಈ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚುವ ಅಪಾಯವೂ ಇದೆ. ಚೀನಾ ಹೀಗೆ ಮಾಡದಂತೆ ತಡೆಯುವುದರಲ್ಲಿ ಉಳಿದೆಲ್ಲಾ ರಾಷ್ಟ್ರಗಳ ವಾಣಿಜ್ಯ ಹಿತಾಸಕ್ತಿ ಇದೆ. ಹೀಗಾಗಿಯೇ ಚೀನಾದ ಈ ಪ್ರಯತ್ನಕ್ಕೆ ತಡೆಯೊಡ್ಡುವ ಕಾರ್ಯತಂತ್ರದ ಭಾಗವಾಗಿಯೇ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯ ಜತೆಯಾಗಿ ಕೂಟವೊಂದನ್ನು ರಚಿಸಿಕೊಂಡಿವೆ. ನಾಲ್ಕು ರಾಷ್ಟ್ರಗಳ ಈ ಕೂಟವನ್ನು ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡಯಲಾಗ್ ಅಥವಾ ಕ್ವಾಡ್ ಎಂದು ಕರೆಯಲಾಗುತ್ತಿದೆ.
ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶವನ್ನು ಹಾದುಹೋಗುವ ಸಮುದ್ರ ಮಾರ್ಗದ ಆಯಕಟ್ಟಿನ ಜಾಗದಲ್ಲಿ ಕ್ವಾಡ್ ಕೂಟದ ಮಲಬಾರ್ ಸಮರಾಭ್ಯಾಸ ನಡೆಯುತ್ತದೆ. ದಕ್ಷಿಣ ಚೀನಾ ಸಮುದ್ರವನ್ನು ದಾಟಿದ ಹಡಗುಗಳು ಮಲೇಷ್ಯಾ ಮತ್ತು ಇಂಡೊನೇಷ್ಯಾಗಳ ನಡುವಣ ಇಕ್ಕಟ್ಟಾದ ಮಲಕ್ಕಾ ಜಲಸಂಧಿಯನ್ನು ದಾಟಬೇಕು. ಈ ಜಲಸಂಧಿಯನ್ನು ದಾಟಿಯೇ ಬಂಗಾಳಕೊಲ್ಲಿಯನ್ನು ಪ್ರವೇಶಿಸಬೇಕು. ಈ ಜಲಸಂಧಿಯು ಬಂಗಾಳಕೊಲ್ಲಿಯನ್ನು ಕೂಡುವ ಜಾಗದಲ್ಲಿ ಭಾರತದ ಜಲಗಡಿ ಆರಂಭವಾಗುತ್ತದೆ. ಮಲಕ್ಕಾ ಜಲಸಂಧಿಯ ಈ ದ್ವಾರವನ್ನು ಭಾರತವು ಮುಚ್ಚಿದರೆ, ಇಡೀ ಸಮುದ್ರ ಮಾರ್ಗವೇ ಸ್ಥಗಿತಗೊಳ್ಳುತ್ತದೆ. ಈ ಪ್ರವೇಶ ದ್ವಾರಕ್ಕೆ ಸಮೀಪವಿರುವ ಭಾರತದ ಜಲಗಡಿಯಲ್ಲಿ ಈ ಸಮರಾಭ್ಯಾಸ ನಡೆಯುತ್ತದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಹಡುಗಗಳ ಸಂಚಾರಕ್ಕೆ ಚೀನಾ ತಡೆ ಒಡ್ಡಿದರೆ, ಅದಕ್ಕೆ ಪ್ರತಿಯಾಗಿ ಭಾರತವು ಮಲಕ್ಕಾ ಜಲಸಂಧಿಯನ್ನು ಮುಚ್ಚಲು ಅವಕಾಶವಿದೆ. ಇದನ್ನು ಸಾಧಿಸಲು ಭಾರತವು ತನ್ನ ಎಲ್ಲಾ ನೌಕಾಪಡೆಗಳನ್ನು ಇತ್ತ ಒಯ್ಯಬೇಕಾಗುತ್ತದೆ. ಆಗ ಭಾರತದ ಪಶ್ಚಿಮ ಮತ್ತು ಪೂರ್ವ ಕರಾವಳಿಯಲ್ಲಿ ನೌಕಾಪಡೆಯ ಕಾವಲು ಇರುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ಕ್ವಾಡ್ ಕೂಟವು ನೆರವಿಗೆ ಬರುತ್ತದೆ. ಈ ಗುಂಪಿನಲ್ಲಿರುವ ರಾಷ್ಟ್ರಗಳ ಯುದ್ಧನೌಕೆಗಳು ಮಲಕ್ಕಾ ಜಲಸಂಧಿಯನ್ನು ಬಂದೋಬಸ್ತ್ ಮಾಡಿದರೆ, ಭಾರತದ ನೌಕಾಪಡೆಯು ಬೇರೆಡೆ ಇರುವ ತನ್ನ ಎಲ್ಲಾ ನೌಕೆಗಳನ್ನು ಮಲಕ್ಕಾ ಜಲಸಂಧಿಗೆ ಒಯ್ಯಬೇಕಿಲ್ಲ. ಚೀನಾದ ಬಹುತೇಕ ವಾಣಿಜ್ಯ ವಹಿವಾಟು ಮಲಕ್ಕಾ ಜಲಸಂಧಿಯ ಮೂಲಕವೇ ನಡೆಯುವುದರಿಂದ, ಚೀನಾ ಸಹ ಇಂತಹ ಬೆಳವಣಿಗೆಯನ್ನು ಬಯಸುವುದಿಲ್ಲ. ಹೀಗೆ ಚೀನಾ ಮೇಲೆ ಒತ್ತಡ ಸೃಷ್ಟಿಸುವ ಮೂಲಕ ಈ ಸಮುದ್ರಮಾರ್ಗವನ್ನು ಮುಕ್ತ ಮತ್ತು ಸ್ವತಂತ್ರವಾಗಿರಿಸುವ ಕಾರ್ಯತಂತ್ರವಿದು.
2007ರಲ್ಲಿ ಮಲಬಾರ್ ಸಮರಾಭ್ಯಾಸದಿಂದ ಹೊರನಡೆದಿದ್ದ ಆಸ್ಟ್ರೇಲಿಯ 2020ರಲ್ಲಿ ಮತ್ತೆ ಈ ಗುಂಪನ್ನು ಸೇರಿಕೊಳ್ಳುತ್ತಿದೆ. ಚೀನಾದಿಂದ ಕೊರೊನಾವೈರಸ್ ಹರಡುವಿಕೆಯ ಬಗ್ಗೆ ಜಾಗತಿಕ ಮಟ್ಟದ ತನಿಖೆಯಾಗಬೇಕು ಎಂದು ಆಸ್ಟ್ರೇಲಿಯ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಆಸ್ಟ್ರೇಲಿಯದಿಂದ ವೈನ್, ದನದ ಮಾಂಸ ಮತ್ತು ಬಾರ್ಲಿ ಆಮದನ್ನು ಚೀನಾ ನಿಷೇಧಿಸಿತು. ಚೀನಾ ಜತೆಗಿನ ವಾಣಿಜ್ಯ ಸಂಬಂಧ ಹದಗೆಟ್ಟ ಬೆನ್ನಲ್ಲೇ ಆಸ್ಟ್ರೇಲಿಯ ಮತ್ತೆ ಈ ಗುಂಪನ್ನು ಸೇರಿದೆ. ‘2007ರಲ್ಲಿ ನಾವು ಕ್ವಾಡ್ ಕೂಟವನ್ನು ತೊರೆದು ತಪ್ಪು ಮಾಡಿದೆವು’ ಎಂದು ಆಸ್ಟ್ರೇಲಿಯ ಹೇಳಿದೆ.
ಚೀನಾ ಜತೆ ಗಡಿ ಸಂಘರ್ಷ ಎದುರಿಸುತ್ತಿರುವ ಭಾರತವು, ಚೀನಾ ವಿರುದ್ಧ ಪ್ರಬಲ ರಾಷ್ಟ್ರಗಳ ಒಕ್ಕೂಟ ರಚಿಸಿಕೊಳ್ಳುತ್ತಿದೆ. ಈ ಮೂಲಕ ಚೀನಾ ಮೇಲೆ ಒತ್ತಡ ಹೇರುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ನೇರ ಭೇಟಿ ಇಲ್ಲ
ಸಮರಾಭ್ಯಾಸಕ್ಕೂ ಮುನ್ನ ಆತಿಥ್ಯ ವಹಿಸಿರುವ ದೇಶದಲ್ಲಿ ನಾಲ್ಕೂ ದೇಶಗಳ ನೌಕಾಪಡೆಯ ಸಿಬ್ಬಂದಿ ಒಟ್ಟು ಸೇರುತ್ತಾರೆ. ತರಬೇತಿಉದ್ದೇಶಕ್ಕಾಗಿ ಸೇನಾ ಸಿಬ್ಬಂದಿಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಆದರೆ ಈ ಬಾರಿಯದ್ದು ‘ಸಂಪರ್ಕರಹಿತ’ ಕಾರ್ಯಾಚರಣೆ ಎಂದು ಭಾರತೀಯ ರಕ್ಷಣಾ ಸಚಿವಾಲಯ ಘೋಷಿಸಿದೆ. ಕೋವಿಡ್ ಕಾರಣದಿಂದ ಭಾಗಿ ದೇಶಗಳ ಸಿಬ್ಬಂದಿಯ ವೈಯಕ್ತಿಕ ಭೇಟಿ ಇಲ್ಲ. ವಿನಿಮಯವೂ ಇರುವುದಿಲ್ಲ ಎನ್ನಲಾಗಿದೆ.
ಸಮರಾಭ್ಯಾಸದಲ್ಲಿ ಯಾವ ನೌಕೆ ಇರಲಿವೆ?
ಕಳೆದ ವರ್ಷ ಭಾರತವು ಎರಡು ಚಿಕ್ಕ ಸಮರನೌಕೆಗಳನ್ನು ಕಳುಹಿಸಿತ್ತು. ಈ ಬಾರಿ ಬೃಹತ್ ನೌಕೆಗಳನ್ನು ಬಳಸಿಕೊಳ್ಳಲಿದೆ. ನಿಮಿಟ್ಸ್ ಹಾಗೂ ರೊನಾಲ್ಡ್ ರೇಗನ್ ಎಂಬಬೃಹತ್ ಯುದ್ಧ ನೌಕೆಗಳನ್ನು ಅಮೆರಿಕವು ಬಂಗಾಳ ಕೊಲ್ಲಿಗೆ ರವಾನಿಸಲಿದೆ. ಜಪಾನ್ ಸಹ ಇಜುಮೊ ಸರಣಿಯ ಹೆಲಿಕಾಪ್ಟರ್ ವಾಹಕನೌಕೆ ಕಳುಹಿಸಿಕೊಡಲಿದೆ.ಆಸ್ಟ್ರೇಲಿಯ ತನ್ನ ಹೊಸ ನೌಕೆ ಹೋಬರ್ಟ್ ಅನ್ನು ಕಳುಹಿಸುವ ಸಾಧ್ಯತೆಯಿದೆ.
2017ರಲ್ಲಿ 44,570 ಟನ್ ತೂಕದ ಭಾರತದ ಐಎನ್‌ಎಸ್ ವಿಕ್ರಮಾದಿತ್ಯ, 27 ಸಾವಿರ ಟನ್ ತೂಕದ ಜಪಾನ್ ಇಜುಮೊ ಹಾಗೂ 1 ಲಕ್ಷ ಟನ್ ತೂಕದ ಅಣು ಇಂಧನ ಚಾಲಿತ ಅಮೆರಿಕದ ನಿಮಿಟ್ಜ್ ಸಮರನೌಕೆಗಳು ಭಾಗಿಯಾಗಿದ್ದವು.
ಸಮರಾಭ್ಯಾಸ ಹೇಗೆ ನಡೆಯುತ್ತದೆ?
ಸಾಮಾನ್ಯವಾಗಿ ಎರಡು ಹಂತಗಳಲ್ಲಿ ಸಮರಾಭ್ಯಾಸ ನಡೆಯುತ್ತದೆ. ಸಮುದ್ರದಲ್ಲಿ ಸಮರಾಭ್ಯಾಸ ಹಾಗೂ ಸಮದ್ರತೀರದಲ್ಲಿ ತರಬೇತಿ ಇರುತ್ತದೆ. ಜಂಟಿ ನೌಕಾ ದಾಳಿ ನಡೆಸುವ ವಿಧಾನ, ಕಡಲ ಗಸ್ತು, ಜಲಾಂತರ್ಗಾಮಿಗಳ ವಿರುದ್ಧ ಕಾರ್ಯಾಚರಣೆ, ಶೋಧ, ಜಪ್ತಿ ಮೊದಲಾದವಿಷಯಗಳ ಕುರಿತು ತಜ್ಞರು ತರಬೇತಿಯಲ್ಲಿ ವಿವರಿಸುತ್ತಾರೆ.
ಸಮುದ್ರದಲ್ಲಿ ಜಂಟಿ ಸಮರಾಭ್ಯಾಸ ನಡೆಯುತ್ತದೆ. ಸದಸ್ಯ ದೇಶಗಳ ನಡುವೆ ಸೇನಾ ಸಮನ್ವಯ ಸಾಧಿಸುವ ಬಗೆ, ಯುದ್ಧತಂತ್ರ ರೂಪಿಸುವಿಕೆ ಮತ್ತು ಕಾರ್ಯಗತಗೊಳಿಸುವಿಕೆಯ ತರಬೇತಿನಡೆಯುತ್ತದೆ.ಯುದ್ಧನೌಕೆಗಳ ಸಂಚಾರ, ಮಧ್ಯಮ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುವುದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳುವುದನ್ನು ಅಭ್ಯಾಸ ಮಾಡಲಾಗುತ್ತದೆ.
ಜಂಟಿ ಕಾರ್ಯಾಚರಣೆ ಏಕೆ?
lಅಂತರರಾಷ್ಟ್ರೀಯ ಸಂಬಂಧ ಸುಧಾರಿಸಲು, ರಾಜತಾಂತ್ರಿಕ ಹಿತಾಸಕ್ತಿ ವಿಸ್ತರಿಸಲು ‘ಮಿಲಿಟರಿ ರಾಜತಾಂತ್ರಿಕತೆ’ಯನ್ನು ಪ್ರಮುಖ ಸಾಧನವಾಗಿ ಬಳಸಲಾಗುತ್ತಿದೆ
lಜಂಟಿ ಸೇನಾ ಕಸರತ್ತು ವಿವಿಧ ದೇಶಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಸದಸ್ಯ ರಾಷ್ಟ್ರಗಳ ನಂಬಿಕೆಯನ್ನು ಬಲಗೊಳಿಸುತ್ತದೆ
lಮಿತ್ರರ ಬಲ ಪ್ರದರ್ಶಿಸಿ, ಶತ್ರುದೇಶಗಳಿಗೆ ಅಥವಾ ನೆರೆಯ ದೇಶಗಳಿಗೆ ಎಚ್ಚರಿಕೆ ನೀಡುವ ಉದ್ದೇಶ ಇದೆ
lಯುದ್ಧಕ್ಕೆ ನಿಯೋಜಿಸಬಹುದಾದ ಶಸ್ತ್ರಾಸ್ತ್ರ ಸಾಮರ್ಥ್ಯ ಪ್ರದರ್ಶನ, ಯುದ್ಧ ಸಿದ್ಧತೆ ಹಾಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ
lಭಾಗವಹಿಸುವ ಪಡೆಗಳು ಮಿತ್ರದೇಶಗಳಾಗಿದ್ದರೂ, ಸೇನೆಯ ಕ್ಷಮತೆ ಪರೀಕ್ಷಿಸಲು ಅಣಕು ಪ್ರದರ್ಶನ ನಡೆಸಲಾಗುತ್ತದೆ
lಶಸ್ತ್ರಾಸ್ತ್ರ ಜ್ಞಾನ, ಸೈನಿಕರಿಗೆ ತರಬೇತಿ, ಮಾಹಿತಿ ಹಾಗೂ ತಂತ್ರಜ್ಞಾನ ವಿನಿಮಯ ಸಾಧ್ಯವಾಗುತ್ತದೆ
lನೈಜ ಯುದ್ಧದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಮಿತ್ರದೇಶಗಳು ಒಟ್ಟಾಗಿ ಹೇಗೆ ಮೆಟ್ಟಿನಿಲ್ಲಬೇಕು ಎಂಬ ಪಾಠ ಕಲಿಸಲಾಗುತ್ತದೆ
lಈ ಕಾರ್ಯಾಚರಣೆಯು ಶಸ್ತ್ರಾಸ್ತ್ರ ತಯಾರಕರಿಗೆ ಉತ್ಪನ್ನ ಹಾಗೂ ತಂತ್ರಜ್ಞಾನದ ಜಾಹೀರಾತು ಎನಿಸಿದರೆ, ಸೈನಿಕರಿಗೆ ವೃತ್ತಿಪರ ಸಾಮರ್ಥ್ಯ ಪ್ರದರ್ಶನದ ವೇದಿಕೆ ಎನಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.