ಜಾಗತಿಕ ಮಟ್ಟದಲ್ಲಿ ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವಿನ ಗೆರೆ ಕಿರಿದಾಗುತ್ತಾ ಸಾಗುತ್ತಿದೆ. ಮನೆಯಿಂದ ಕೆಲಸ ಮಾಡುವ (ವರ್ಕ್ ಫ್ರಮ್ ಹೋಮ್) ಕೋವಿಡ್ ನಂತರದ ದಿನಗಳಲ್ಲಂತೂ ಇದು ಮತ್ತಷ್ಟು ದೊಡ್ಡ ಸಮಸ್ಯೆಯಾಗಿದೆ. ಭಾರತದಲ್ಲಿ ಕೆಲಸ ಮತ್ತು ಖಾಸಗಿ ಬದುಕಿನ ನಡುವೆ ಸಮತೋಲನದ ಕೊರತೆ ತೀವ್ರವಾಗುತ್ತಿದೆ. ಹೆಚ್ಚುತ್ತಿರುವ ಕೆಲಸದ ಅವಧಿ, ಒತ್ತಡ, ದೈಹಿಕ ಚಟುವಟಿಕೆಗಳ ಕೊರತೆಯಿಂದ ಭಾರತದ ಯುವ ಜನಾಂಗವು ಬಸವಳಿಯುತ್ತಿದೆ. ಮಹತ್ವಾಕಾಂಕ್ಷೆ, ಸ್ಪರ್ಧೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಏಳಿಗೆಯ ಚಕ್ರಸುಳಿಯಲ್ಲಿ ಸಿಲುಕಿರುವ ಉದ್ಯೋಗಿಗಳು ವಿಪರೀತ ಒತ್ತಡ, ದಣಿವು ಅನುಭವಿಸುತ್ತಿದ್ದಾರೆ.
–––––––––––––
ಮನುಷ್ಯನಿಗೆ ವೃತ್ತಿ ಬದುಕು ಎಷ್ಟು ಮುಖ್ಯವೋ, ವೈಯಕ್ತಿಕ ಬದುಕು ಕೂಡ ಅಷ್ಟೇ ಮುಖ್ಯ. ದಕ್ಷತೆಯಿಂದ ಕೆಲಸ ಮಾಡಬೇಕೆಂದರೆ, ವ್ಯಕ್ತಿಯ ಆರೋಗ್ಯ, ಕೌಟುಂಬಿಕ ಜೀವನ ಉತ್ತಮವಾಗಿರಬೇಕು. ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಸಾಧಿಸಬೇಕು. ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ಭಾರತದಲ್ಲಿ ಔಪಚಾರಿಕ ವಲಯದ ಉದ್ಯೋಗಿಗಳ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನದ ಕೊರತೆ ಇರುವುದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.
2024ರ ಜಾಗತಿಕ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಸೂಚ್ಯಂಕದಲ್ಲಿ ಭಾರತವು 60 ದೇಶಗಳ ಪೈಕಿ 48ನೇ ಸ್ಥಾನ ಪಡೆದಿರುವುದು ಸಮಸ್ಯೆಯ ತೀವ್ರತೆಗೆ ಕನ್ನಡಿ ಹಿಡಿಯುತ್ತಿದೆ. ಈ ಬಗ್ಗೆ ‘ಯುಕೆಜಿ ವರ್ಕ್‌ಫೋರ್ಸ್ ಇನ್‌ಸ್ಟಿಟ್ಯೂಟ್’, ‘ಯುವರ್ ದೋಸ್ತ್’ ವಿಸ್ತೃತ ಅಧ್ಯಯನ ನಡೆಸಿದ್ದು, ಸಮೀಕ್ಷೆ ನಡೆಸಿದವರ ಪೈಕಿ ಶೇ 78 ಭಾರತೀಯರು ವೃತ್ತಿ–ಮನೆ ನಡುವಿನ ಸಂಘರ್ಷದಲ್ಲಿ ಬಸವಳಿಯುತ್ತಿದ್ದಾರೆ ಎಂದು ತಿಳಿಸಿದೆ. ಸಮೀಕ್ಷೆಗಾಗಿ ‘ಯುಕೆಜಿ’ 4 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸಂದರ್ಶನ ಮಾಡಿತ್ತು. ‘ಯುವರ್ ದೋಸ್ತ್’ 5000ಕ್ಕೂ ಹೆಚ್ಚು ಉದ್ಯೋಗಿಗಳಿಂದ ಅಭಿಪ್ರಾಯ ಸಂಗ್ರಹಿಸಿದೆ.
‘ಯುಕೆಜಿ’ ಸಮೀಕ್ಷೆಗೊಳಪಡಿಸಿದವರ ಪೈಕಿ ಶೇ 89ರಷ್ಟು ಮಂದಿ ಕೆಲಸದ ಅವಧಿ ವಿಸ್ತರಣೆ ಮಾಡಲು ಹಾಗೂ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವುದಾಗಿ ಹೇಳಿದ್ದಾರೆ. ಆದರೆ, ಅದಕ್ಕೆ ತಕ್ಕಂತೆ ಬಹುತೇಕ ಉದ್ಯೋಗಿಗಳಲ್ಲಿ ಒತ್ತಡವೂ ಏರುತ್ತಿದ್ದು, ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ. 2023ಕ್ಕೆ ಹೋಲಿಸಿದರೆ, ಭಾರತೀಯ ವೃತ್ತಿಪರರು ಶೇ 31ರಷ್ಟು ಹೆಚ್ಚು ಮತ್ತು ವಿಪರೀತ ಮಟ್ಟದ ಒತ್ತಡ ಅನುಭವಿಸುತ್ತಿದ್ದಾರೆ ಎಂದು ‘ಯುವರ್‌ದೋಸ್ತ್’ ಅಧ್ಯಯನದಲ್ಲಿ ಕಂಡುಬಂದಿದೆ.
ಇದೇ ಕಾರಣಕ್ಕೆ, ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ವಲಯದಲ್ಲಿ ಕೆಲಸದ ಅವಧಿಯನ್ನು ಹೆಚ್ಚಳ ಮಾಡುವ ಪ್ರಸ್ತಾವಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಐಟಿ ಕ್ಷೇತ್ರದ ಉದ್ಯೋಗಿಗಳಿಗೆ ದುಡಿಮೆಯ ಅವಧಿಯನ್ನು 12 ಗಂಟೆಯಿಂದ 14 ಗಂಟೆಗಳಿಗೆ ಹೆಚ್ಚಿಸಬೇಕು ಎಂದು ಉದ್ಯಮಿಗಳು ಜುಲೈನಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ‘ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿರುವುದೇ ಕಾರ್ಮಿಕ ವಿರೋಧಿ ನೀತಿ ಆಗಿದ್ದು, ಅದನ್ನು ಮತ್ತೆ 2 ಗಂಟೆ ಹೆಚ್ಚಿಸಿದರೆ ಅದು ಜೀವ ವಿರೋಧಿ ನೀತಿ ಆಗುತ್ತದೆ’ ಎಂದು ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
ತಮಿಳುನಾಡಿನಲ್ಲಿಯೂ ಎರಡು ವರ್ಷಗಳ ಹಿಂದೆ ಇದೇ ರೀತಿಯ ಪ್ರಯತ್ನ ನಡೆದಿತ್ತು. ಆಯ್ದ ವಲಯಗಳ ಸೀಮಿತ ಉದ್ಯೋಗಿಗಳಿಗೆ ಕೆಲಸದ ಅವಧಿಯನ್ನು ಹೆಚ್ಚಿಸುವುದಕ್ಕೆ ಡಿಎಂಕೆ ಸರ್ಕಾರ ಮುಂದಾಗಿತ್ತು. ಆದರೆ, ಡಿಎಂಕೆ ಮಿತ್ರಪಕ್ಷಗಳೇ ಅದನ್ನು ವಿರೋಧಿಸಿದ್ದರಿಂದ ಸರ್ಕಾರ ಪ್ರಸ್ತಾವವನ್ನು ಕೈಬಿಟ್ಟಿತು.
2023ರ ಅಕ್ಟೋಬರ್‌ನಲ್ಲಿ ಕೆಲಸದ ಅವಧಿಗೆ ಸಂಬಂಧಿಸಿ ಇನ್ಫೊಸಿಸ್ ಸಹಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ನೀಡಿದ್ದ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಭಾರತದ ಕೆಲಸದ ಸಂಸ್ಕೃತಿ ಬದಲಾಗಬೇಕಿದ್ದು, ಯುವಜನರು ವಾರಕ್ಕೆ 70 ಗಂಟೆಗೂ ಹೆಚ್ಚು ಅವಧಿ ಕೆಲಸ ಮಾಡಬೇಕು ಎಂದು ನಾರಾಯಣಮೂರ್ತಿ ಹೇಳಿದ್ದರು. ವಿಶೇಷ ಅಂದರೆ, 21ರಿಂದ 30 ವರ್ಷದ ಒಳಗಿನ ಯುವಜನರಲ್ಲಿ ಕೆಲಸದ ಒತ್ತಡ ಹೆಚ್ಚು (ಶೇ 64ರಷ್ಟು) ಎಂದು ‘ಯುವರ್‌ದೋಸ್ತ್’ ಅಧ್ಯಯನ ತಿಳಿಸಿದೆ.
ಔದ್ಯೋಗಿಕ ವಲಯಕ್ಕೆ ಜೆನ್ ಜೆಡ್ ಪ್ರವೇಶದಿಂದ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿದ್ದು, ಅವರು ಹೆಚ್ಚು ಅವಧಿಯನ್ನು ಕೆಲಸದಲ್ಲಿ ಕಳೆಯುತ್ತಿದ್ದಾರೆ. ಇದರಿಂದ ಉತ್ತೇಜಿತವಾಗಿರುವ ಕೆಲವು ಕಂಪನಿಗಳು, ವಾರಕ್ಕೆ ನಾಲ್ಕು ದಿನ ಕೆಲಸದ ನೀತಿಯನ್ನು ಅಳವಡಿಕೊಳ್ಳಲು ಮುಂದಾಗಿವೆ. ಮನೆಯಿಂದ ಕೆಲಸ ಮಾಡುವ ಕೆಲವರು ಮೂನ್‌ಲೈಟಿಂಗ್ (ಏಕಕಾಲಕ್ಕೆ ಎರಡು ಉದ್ಯೋಗ ಮಾಡುವುದು) ಕೂಡ ಮಾಡುತ್ತಿದ್ದಾರೆ. ಇದು ಒಂದು ಹಂತದವರೆಗೆ ಉತ್ತಮವಾಗಿ ಕಂಡರೂ ಉದ್ಯೋಗದಾತರ ಬೇಡಿಕೆ ಮತ್ತು ಉದ್ಯೋಗಿಯ ಅಗತ್ಯಗಳ ನಡುವೆ ಸಮನ್ಯಯ ಸಾಧ್ಯವಾಗದಿದ್ದರೆ, ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಅಂತಿಮ ಪರಿಣಾಮ ಎದುರಿಸಬೇಕಾದವರು ಉದ್ಯೋಗಿಗಳೇ ಆಗಿದ್ದಾರೆ.
ದೇಶದಲ್ಲಿ ಕೋಟ್ಯಂತರ ಮಂದಿ ಕೆಲಸ ಮತ್ತು ಮನೆಯ ನಡುವೆ ಸಮನ್ವಯ ಸಾಧಿಸಲು ಹೋರಾಟವನ್ನೇ ನಡೆಸುತ್ತಿದ್ದಾರೆ. ಇದು ಅವರ ದೈಹಿಕ ಮತ್ತು ಮಾನಸಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿದೆ. ಕೆಲವು ಕಂಪನಿಗಳು ಉದ್ಯೋಗಿಗಳ ಒತ್ತಡ ನಿವಾರಣೆಗಾಗಿ ಹಲವು ರೀತಿಯ ಮನರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿವೆ; ಜಿಮ್, ಯೋಗ ಶಿಬಿರಗಳನ್ನು ಆಯೋಜಿಸುತ್ತಿವೆ. ಉದ್ಯೋಗಿಗಳ ವೃತ್ತಿಬದುಕಿನ ಜತೆಗೆ ಸಾಮಾಜಿಕ ಬದುಕನ್ನೂ ಪ್ರೋತ್ಸಾಹಿಸುತ್ತಿವೆ.
ಕೆಲವು ಉದ್ಯೋಗಿಗಳು ಕೆಲಸದ ಅವಧಿಯ ಹೆಚ್ಚಳದ ಪರವಾಗಿದ್ದರೂ ಬಹುತೇಕರು ಅದನ್ನು ವಿರೋಧಿಸುತ್ತಿದ್ದು, ವೈಯಕ್ತಿಕ ಜೀವನದ ಕಡೆ ಗಮನ ಕೊಡಲು ಅಗತ್ಯ ಸಮಯ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೌಟುಂಬಿಕ ಜೀವನ, ಅಗತ್ಯ ಪ್ರಮಾಣದ ದೈಹಿಕ ಚಟುವಟಿಕೆ, ಮನರಂಜನೆ, ಊಟ, ನಿದ್ರೆ ಎಲ್ಲವೂ ಸಮರ್ಪಕವಾಗಿದ್ದಾಗ ಮಾತ್ರ ಉತ್ತಮವಾಗಿ ಕೆಲಸ ಮಾಡಲು ಸಾಧ್ಯ. ದೀರ್ಘಕಾಲದ ವೃತ್ತಿಜೀವನವನ್ನು ಉತ್ತಮವಾಗಿ ಸಾಗಿಸಬೇಕು ಎಂದರೆ, ಕೆಲಸದ ಗುಣಮಟ್ಟ, ಉತ್ಪಾದಕತೆ ಚೆನ್ನಾಗಿರಬೇಕು ಎಂದರೆ ಉದ್ಯೋಗಿಗೆ ಬಿಡುವಿನ ಅವಧಿ ಮುಖ್ಯ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ.
––––––––––
ಆಧಾರ: ಪಿಟಿಐ, ಯುಕೆಜಿ ವರ್ಕ್‌ಫೋರ್ಸ್ ಇನ್‌ಸ್ಟಿಟ್ಯೂಟ್, ರಿಮೋಟ್:ಜಾಗತಿಕ ವೃತ್ತಿ–ಖಾಸಗಿ ಬದುಕು ಸಮತೋಲನ ಸೂಚ್ಯಂಕ–2024, ಯುವರ್‌ದೋಸ್ತ್:ಎಮೊಷನಲ್ ವೆಲ್‌ನೆಸ್ ಆಫ್ ಸ್ಟೇಟ್ ಎಂಪ್ಲಾಯೀಸ್
***********
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.