ADVERTISEMENT

ಆಳ–ಅಗಲ: ಭಾರತೀಯ ವಿದ್ಯಾರ್ಥಿಗಳ ಮೇಲೆ ಪ್ರಹಾರ

ಯುವಕ–ಯುವತಿಯರ ಮೇಲೆ ಸೈನಿಕರಿಂದ ಹಲ್ಲೆ, ಗಡಿಗಳತ್ತ ಬರಲು ವ್ಯವಸ್ಥೆಯೇ ಇಲ್ಲ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 23:15 IST
Last Updated 28 ಫೆಬ್ರುವರಿ 2022, 23:15 IST
   

ರಷ್ಯಾದ ಅತಿಕ್ರಮಣಕ್ಕೆ ಗುರಿಯಾಗಿರುವ ಉಕ್ರೇನ್‌ನಲ್ಲಿ 15,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್‌ನಿಂದ ತೆರವು ಮಾಡುವ ಭಾರತ ಸರ್ಕಾರದ ಕಾರ್ಯಾಚರಣೆಯಲ್ಲಿ ಹಲವು ನ್ಯೂನತೆಗಳಿವೆ ಎಂದು ಆ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ, ಉಕ್ರೇನ್‌–ಪೋಲೆಂಡ್‌ ಗಡಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಈ ಸಂಬಂಧ ವಿಡಿಯೊಗಳನ್ನು ಟ್ವೀಟ್ ಮಾಡುತ್ತಿದ್ದಾರೆ. ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳನ್ನು ತೆರವು ಮಾಡಲು ಭಾರತ ಸರ್ಕಾರವು ಗರಿಷ್ಠ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಇದಕ್ಕಾಗಿ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಸಚಿವಾಲಯವು ಮತ್ತು ಉಕ್ರೇನ್‌ನಲ್ಲಿನ ಭಾರತದ ರಾಯಭಾರ ಕಚೇರಿಯು ಪ್ರಕಟಣೆಗಳನ್ನು ಹೊರಡಿಸಿವೆ. ಆದರೆ ವಾಸ್ತವ ಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ರಾಯಭಾರ ಕಚೇರಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ತಟಸ್ಥ ನೀತಿಗೆ ಪ್ರತೀಕಾರ?

ADVERTISEMENT

ರಷ್ಯಾ ಅತಿಕ್ರಮಣದ ವಿಚಾರದಲ್ಲಿ ಭಾರತ ಸರ್ಕಾರವು ತಟಸ್ಥ ನೀತಿಯ ಮೊರೆ ಹೋಗಿದೆ. ಇದರ ಪರಿಣಾಮ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳ ಮೇಲಾಗುತ್ತಿದೆ ಎಂದು ಆ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ‘ಉಕ್ರೇನ್‌ ಅನ್ನು ಬೆಂಬಲಿಸಿಲ್ಲ ಎಂದು ಉಕ್ರೇನ್‌ ಜನರು ಮತ್ತು ಸೈನಿಕರು ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ರಷ್ಯಾವನ್ನು ಬೆಂಬಲಿಸಿಲ್ಲ ಎಂದು ರಷ್ಯಾ ಸೈನಿಕರು ಭಾರತೀಯ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ವಿದ್ಯಾರ್ಥಿನಿಯೊಬ್ಬರು ವಿಡಿಯೊದಲ್ಲಿ ಆರೋಪಿಸಿದ್ದಾರೆ.

ಉಕ್ರೇನ್‌ನ ವಿವಿಧ ನಗರಗಳಿಂದ ಹೊರಟು ಪೋಲೆಂಡ್‌ ಗಡಿ ತಲುಪಿರುವ ಭಾರತೀಯ ವಿದ್ಯಾರ್ಥಿಗಳನ್ನು ಅಲ್ಲಿ ತಡೆದು ನಿಲ್ಲಿಸಲಾಗಿದೆ. ಸುರಿಯುತ್ತಿರುವ ಹಿಮದಲ್ಲಿ ಗಡಿಯಲ್ಲಿ ನೂರಾರು ವಿದ್ಯಾರ್ಥಿಗಳು ನಿಂತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿದ್ಯಾರ್ಥಿಗಳು ಟ್ವೀಟ್‌ ಮಾಡಿರುವ ವಿಡಿಯೊದಲ್ಲಿ ಹಿಮ ಬೀಳುತ್ತಿರುವ ದೃಶ್ಯಗಳು ಇವೆ. ಉಕ್ರೇನ್‌–ಪೋಲೆಂಡ್‌ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಉಕ್ರೇನ್‌ ಸೈನಿಕರು ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ವಿಡಿಯೊವನ್ನು ಸಹ ಹಂಚಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಮೇಲೆ ಸೈನಿಕರು ಹಲ್ಲೆ ಮಾಡುತ್ತಿರುವ ಮತ್ತು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ದೃಶ್ಯಗಳು ಈ ವಿಡಿಯೊದಲ್ಲಿ ಇವೆ. ವಿದ್ಯಾರ್ಥಿಯೊಬ್ಬನಿಗೆ ಸೈನಿಕರು ಒದೆಯುತ್ತಿರುವ ದೃಶ್ಯವಿರುವ ವಿಡಿಯೊ ಸಹ ವೈರಲ್ ಆಗಿದೆ.

ಉಕ್ರೇನ್‌ ಸೈನಿಕರು ಭಾರತೀಯರು ಮತ್ತು ಆಫ್ರಿಕನ್ನರನ್ನು ಮಾತ್ರ ತಡೆಯುತ್ತಿದ್ದಾರೆ. ಈ ಮೂಲಕ ಜನಾಂಗೀಯ ತಾರತಮ್ಯ ಮಾಡುತ್ತಿದ್ದಾರೆ ಎಂದೂ ಹಲವರು ಆರೋಪಿಸಿದ್ದಾರೆ.

‘ವಾಪಸ್‌ ಬರುತ್ತೇವೆಂಬ ನಂಬಿಕೆ ಇಲ್ಲ’

‘ನಾವು ಕೀವ್‌ನಲ್ಲಿ ಸಿಲುಕಿದ್ದೇವೆ. ಇಲ್ಲಿ ಒಂದು ಶಿಬಿರದಲ್ಲಿ ಇದ್ದೇವೆ. ನಮಗೆ ರಾಯಭಾರ ಕಚೇರಿ, ಭಾರತ ಸರ್ಕಾರ ನೆರವು ನೀಡುತ್ತದೆ ಎಂದು ಹೇಳಲಾಗಿತ್ತು. ಆದರೆ, ರಾಯಭಾರ ಕಚೇರಿ ಫೋನ್‌ ಕರೆ ಸ್ವೀಕರಿಸುತ್ತಿಲ್ಲ. ನಾವು ಇಲ್ಲಿಂದ ಸುರಕ್ಷಿತವಾಗಿ ವಾಪಸ್ ಆಗುತ್ತೇವೆ ಅಥವಾ ನಮ್ಮನ್ನು ಸುರಕ್ಷಿತವಾಗಿ ತೆರವು ಮಾಡಲಾಗುತ್ತದೆ ಎಂಬ ನಂಬಿಕೆ ನಮಗೆ ಇಲ್ಲ. ಈ ಯುದ್ಧದಲ್ಲಿ ಭಾರತವು ಉಕ್ರೇನ್‌ ಅನ್ನು ಬೆಂಬಲಿಸಿಲ್ಲ ಎಂದು ಉಕ್ರೇನ್‌ ಜನರು ಸಿಟ್ಟಾಗಿದ್ದಾರೆ. ನಾವು ಉಳಿದುಕೊಂಡಿರುವ ಶಿಬಿರದ ಬಾಗಿಲುಗಳನ್ನು ಇಲ್ಲಿನ ಜನರು ಬಡಿಯುತ್ತಿದ್ದಾರೆ. ನಮ್ಮ ಮೇಲೆ ದಾಳಿ ಆಗಬಹುದು’ ಎಂದು ಉತ್ತರ ಪ್ರದೇಶದ ಲಖನೌನ ವಿದ್ಯಾರ್ಥಿನಿಯೊಬ್ಬರು ವಿಡಿಯೊದಲ್ಲಿ ಅಳಲು ತೋಡಿಕೊಂಡಿದ್ದಾರೆ.

‘ಸರ್ಕಾರ ಮೋಸ ಮಾಡುತ್ತದೆ ಎಂದುಕೊಂಡಿರಲಿಲ್ಲ’

‘ನಾವು ಪೋಲೆಂಡ್‌ ಗಡಿಗೆ ಬಂದಿದ್ದೇವೆ. ಬೇರೆಲ್ಲಾ ದೇಶಗಳ ವಿದ್ಯಾರ್ಥಿಗಳನ್ನು ಗೌರವಯುತವಾಗಿ ಗಡಿ ದಾಟಿಸಲಾಗುತ್ತಿದೆ. ಆದರೆ ಭಾರತದ ವಿದ್ಯಾರ್ಥಿಗಳನ್ನು ಬಿಡುತ್ತಿಲ್ಲ. ನಮಗೆ ನೀರು, ಆಹಾರ ಏನೂ ಇಲ್ಲ. ಇಲ್ಲಿನ ಪೆಟ್ರೋಲ್‌ ಬಂಕ್‌ನಲ್ಲಿ ಉಳಿದುಕೊಂಡಿದ್ದೇವೆ. ಎರಡು ದಿನ ಆಗಿದೆ. ನಮ್ಮಲ್ಲಿ ಒಬ್ಬರನ್ನೂ ಗಡಿ ದಾಟಲು ಬಿಟ್ಟಿಲ್ಲ. ಭಾರತೀಯ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಆದರೆ ಈ ನಿರ್ಲಕ್ಷ್ಯ ಏಕೆ ಎಂಬುದು ಗೊತ್ತಾಗುತ್ತಿಲ್ಲ. ಇಲ್ಲಿ ಚಳಿ ತಡೆಯಲಾಗುತ್ತಿಲ್ಲ. ಆದರೆ, ನಮ್ಮನ್ನು ಭೇಟಿ ಮಾಡಲು ನಮ್ಮ ರಾಯಭಾರ ಕಚೇರಿಯ ಒಬ್ಬ ಸಿಬ್ಬಂದಿಯೂ ಇಲ್ಲಿ ಇಲ್ಲ. ನಮ್ಮ ಸರ್ಕಾರ ನಮ್ಮನ್ನು ಹೀಗೆ ವಂಚಿಸುತ್ತದೆ ಎಂದುಕೊಂಡಿರಲಿಲ್ಲ’ ಎಂದು ವಿದ್ಯಾರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

‘ಸರ್ಕಾರದ ಹೇಳಿಕೆಯನ್ನು ನಂಬಬೇಡಿ’

‘ಹೇಗಾದರು ಮಾಡಿ ಗಡಿಗೆ ಬನ್ನಿ ಎಂದು ರಾಯಭಾರ ಕಚೇರಿ ಮಾರ್ಗಸೂಚಿ ಹೊರಡಿಸಿದೆ. ರಾಯಭಾರ ಕಚೇರಿಯ ಫೋನ್‌ ಸಂಖ್ಯೆ ನೀಡಲಾಗಿದೆ. ಆದರೆ ಎಷ್ಟು ಬಾರಿ ಕರೆ ಮಾಡಿದರೂ ಅಲ್ಲಿನ ಸಿಬ್ಬಂದಿ ಕರೆಯನ್ನು ಸ್ವೀಕರಿಸುತ್ತಿಲ್ಲ. ನಾವಿರುವ ಜಾಗದಿಂದ ಗಡಿ 800 ಕಿ.ಮೀ. ದೂರ ಇದೆ. ಅಲ್ಲಿಗೆ ತಲುಪುವುದಾದರೂ ಹೇಗೆ? ಮಾರ್ಗಸೂಚಿ ಹೊರಡಿಸುವುದು ಬಿಟ್ಟು ಸರ್ಕಾರ ಬೇರೇನನ್ನೂ ಮಾಡುತ್ತಿಲ್ಲ. ಆದರೆ ವಿದ್ಯಾರ್ಥಿಗಳನ್ನು ತೆರವು ಮಾಡುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಮಾಧ್ಯಮಗಳೂ ಅದೇ ಸುದ್ದಿಯನ್ನು ಪ್ರಸಾರ ಮಾಡುತ್ತಿವೆ. ಆದರೆ ಪರಿಸ್ಥಿತಿ ಹಾಗಿಲ್ಲ. ಸರ್ಕಾರದ ಹೇಳಿಕೆಗಳನ್ನು ನಂಬಬೇಡಿ’ ಎಂದು ವಿದ್ಯಾರ್ಥಿನಿಯೊಬ್ಬರು ಕೇಳಿಕೊಂಡಿದ್ದಾರೆ.

‘ನಮ್ಮನ್ನು ಕೇಳುವವರೇ ಇಲ್ಲ’

‘ಪೋಲೆಂಡ್ ಗಡಿಗೆ ಬರಲು ಹೇಳಲಾಗಿತ್ತು. ಇಲ್ಲಿಗೆ ಬಂದಿದ್ದೇವೆ. ಚಳಿ ಮೈಕೊರೆಯುತ್ತಿದೆ. ಕರೆ ಮಾಡಿದರೆ ರಾಯಭಾರ ಕಚೇರಿ ಕರೆ ಸ್ವೀಕರಿಸುತ್ತಿಲ್ಲ. ಗಡಿ ದಾಟಲೂ ಬಿಡುತ್ತಿಲ್ಲ. ನನ್ನ ಕಿರಿಯ ಮಿತ್ರರಿಗೆ ಸಮಾಧಾನ ಹೇಳಿ ಹೇಳಿ ಸಾಕಾಗಿ ಹೋಗಿದೆ. ಇಲ್ಲಿ ನಮ್ಮನ್ನು ಕೇಳುವರರು ಯಾರೂ ಇಲ್ಲ. ಅಪ್ಪ–ಅಮ್ಮನೂ ಇಲ್ಲ, ಸರ್ಕಾರವೂ ಇಲ್ಲ, ಯಾವ ಅಧಿಕಾರಿಯೂ ಇಲ್ಲ. ನಾವು ವಾಪಸ್‌ ಬರುವುದಾದರೂ ಹೇಗೆ?’ ಎಂದು ವಿದ್ಯಾರ್ಥಿಯೊಬ್ಬರು ಕಣ್ಣೀರಿಟ್ಟಿದ್ದಾರೆ.

‘ಚುನಾವಣೆಯೇ ಮುಖ್ಯ’

‘ಯುದ್ಧ ನಡೆಯುವ ಬಗ್ಗೆ ತಿಂಗಳ ಹಿಂದೆಯೇ ಸೂಚನೆ ದೊರೆತಿತ್ತು. ಬೇರೆಲ್ಲಾ ದೇಶಗಳು ಉಕ್ರೇನ್‌ನಿಂದ ತಮ್ಮ ವಿದ್ಯಾರ್ಥಿಗಳನ್ನು ಯುದ್ಧ ಆರಂಭವಾಗುವ ಮುನ್ನವೇ ತೆರವು ಮಾಡಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಏನೂ ಮಾಡಿಲ್ಲ. ಅವರು ಉತ್ತರ ಪ್ರದೇಶದ ಚುನಾವಣೆ ಪ್ರಚಾರದಲ್ಲಿದ್ದರು. ಅವರಿಗೆ ಚುನಾವಣೆಯೇ ಮುಖ್ಯವಾಯಿತು’ ಎಂದು ವಿದ್ಯಾರ್ಥಿನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಗೆ ಕರೆ, ಪೋಷಕರ ಆಕ್ರೋಶ

‘ಭಾರತದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ. ಇಲ್ಲದಿದ್ದರೆ, ಅವರು ತ್ವರಿತವಾಗಿ ನಮ್ಮನ್ನು ತೆರವು ಮಾಡುವುದಿಲ್ಲ’ ಎಂದು ಹಲವು ವಿದ್ಯಾರ್ಥಿಗಳು ವಿಡಿಯೊದಲ್ಲಿ ಹೇಳಿದ್ದಾರೆ. ದೆಹಲಿಯಲ್ಲಿರುವ ರಷ್ಯಾ ರಾಯಭಾರ ಕಚೇರಿ ಬಳಿ ಹಲವು ಪೋಷಕರು ಧರಣಿ ನಡೆಸಿದ್ದಾರೆ. ಆದರೆ ಅವರನ್ನು ಅಲ್ಲಿಂದ ತೆರಳಲು ಸೂಚಿಸಲಾಗಿದೆ. ಆಗ ಪೋಷಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಮ್ಮ ಮಕ್ಕಳು ಅಲ್ಲಿದ್ದಾರೆ. ನಮ್ಮನ್ನು ಕಾಪಾಡಿ ಎಂದು ಕಣ್ಣೀರಿಟ್ಟಿದ್ದಾರೆ. ಅವರನ್ನು ಯಾವಾಗ ಕರೆತರುತ್ತೀರಿ ಎಂದು ಕೇಳಲು ಬಂದಿದ್ದೇವೆ. ಆದರೆ ನಮ್ಮನ್ನು ಇಲ್ಲಿಂದ ಓಡಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರ ಉತ್ತರ ನೀಡುವವರೆಗೂ ನಾವು ಹೋಗುವುದಿಲ್ಲ’ ಎಂದು ಸೋನು ಜೈನ್‌ ಎಂಬ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತೆರವಿಗೆ ಮತ್ತೆ ಮತ್ತೆ ವಿಳಂಬ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಯುದ್ಧ ಸಾರುವುದಾಗಿ ಫೆಬ್ರುವರಿ 24ರಂದು ಘೋಷಿಸಿದರು. ಈ ಘೋಷಣೆಗೆ ಒಂದು ತಿಂಗಳ ಮೊದಲೇ ಉಕ್ರೇನ್‌ನಲ್ಲಿ ಯುದ್ಧದ ಭೀತಿ ಆವರಿಸಿತ್ತು. ಉಕ್ರೇನ್‌ನ ಭಾರತದ ರಾಯಭಾರ ಕಚೇರಿಯು ದೇಶದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ಮಾಹಿತಿಯನ್ನು ಫೆ. 15ರಂದು ಹೊರಡಿಸಿದ್ದ ಸಲಹೆಯಲ್ಲಿ ನೀಡಿತ್ತು. ಉಕ್ರೇನ್‌ನಲ್ಲಿರುವ ಭಾರತೀಯರು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಅಗತ್ಯ ಕೆಲಸ ಇಲ್ಲದಿದ್ದರೆ ತಾತ್ಕಾಲಿಕವಾಗಿ ಉಕ್ರೇನ್ ತೊರೆಯಬಹುದು ಎಂದು ಸೂಚಿಸಿತ್ತು. ಆದರೆ, ಹೊರಡಲೇಬೇಕು ಎಂದು ಖಚಿತವಾಗಿ ಹೇಳಿರಲಿಲ್ಲ. ವಿದ್ಯಾರ್ಥಿಗಳನ್ನು ತೆರವು ಮಾಡುವಲ್ಲಿ ವಿಳಂಬವಾದದ್ದು ಇಲ್ಲೇ.

ಫೆ. 20ರಂದು ನೀಡಿದ್ದ ಸಲಹೆ ಪ್ರಕಾರ, ಉಕ್ರೇನ್‌ಗೆ ಬರುವಾಗ ನೆರವು ನೀಡಿದ್ದ ಏಜೆಂಟರ ಜೊತೆ ವಿದ್ಯಾರ್ಥಿಗಳು ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಿತ್ತು. ಆಗಲೂ ವಿದ್ಯಾರ್ಥಿಗಳನ್ನು ಸರ್ಕಾರವೇ ತೆರವು ಮಾಡಲು ಯಾವುದೇ ಕ್ರಮ ಘೋಷಿಸಲಿಲ್ಲ. ಫೆ. 25ರಂದು ಕೀವ್‌ನಿಂದ ದೆಹಲಿಗೆ ತೆರಳಲು ವ್ಯವಸ್ಥೆ ಮಾಡಿರುವ ವಿಶೇಷ ವಿಮಾನಗಳ ಮಾಹಿತಿಯನ್ನು ಫೆ. 21ರ ಸಲಹೆಯಲ್ಲಿ ಪ್ರಕಟಿಸಿತ್ತು. ಆದರೆ ಯುದ್ಧ ಘೋಷಣೆಯಾದ ಕಾರಣ, ವಾಯುಮಾರ್ಗ ಬಳಕೆ ಮೇಲೆ ಉಕ್ರೇನ್ ನಿರ್ಬಂಧ ಹೇರಿತು. ಹೀಗಾಗಿ ಪೂರ್ವನಿಗದಿಯಾಗಿದ್ದ ವಿಮಾನಗಳ ಹಾರಾಟ ರದ್ದುಗೊಂಡಿತು.

‘ಆಪರೇಷನ್ ಗಂಗಾ’ ಹೆಸರಿನಲ್ಲಿ ತೆರವು ಕಾರ್ಯಾಚರಣೆ ಆರಂಭಿಸಿದ ಭಾರತ, ರಸ್ತೆ ಮಾರ್ಗದ ಮೂಲಕ ಉಕ್ರೇನ್‌ ಪಶ್ಚಿಮ ಗಡಿಗಳತ್ತ ಬರುವಂತೆ ಸಲಹೆ ನೀಡಿತ್ತು. ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲು ಸಾಧ್ಯವಿರುವ ಎಲ್ಲ ಯತ್ನಗಳನ್ನು ಮಾಡುತ್ತಿರುವುದಾಗಿ ತಿಳಿಸಿತ್ತು. ಉಕ್ರೇನ್‌ ಜೊತೆ ಗಡಿ ಹಂಚಿಕೊಂಡಿರುವ ರೊಮೇನಿಯಾ ಹಾಗೂ ಹಂಗೆರಿ ಗಡಿಗಳಲ್ಲಿರುವ ಚೆಕ್‌ಪಾಯಿಂಟ್‌ಗಳನ್ನು ತಲುಪುವಂತೆ ಭಾರತೀಯರಿಗೆ ಸೂಚನೆ ನೀಡಿತ್ತು. ಮಾಹಿತಿ ಸಿಗುವಂತೆ ನೋಡಿಕೊಳ್ಳಲು ಪ್ರತ್ಯೇಕ ಟ್ವಿಟರ್ ಹ್ಯಾಂಡಲ್ ರಚಿಸಲಾಯಿತು. ಹಂಗೆರಿ, ಪೋಲೆಂಡ್, ರೊಮೇನಿಯಾ, ಸ್ಲೊವಾಕಿಯಾದ ಸಹಾಯವಾಣಿ ಸಂಖ್ಯೆಗಳನ್ನು ಇದರಲ್ಲಿ ಹಂಚಿಕೊಳ್ಳಲಾಯಿತು. ಪೋಲೆಂಡ್ ಗಡಿಗಳನ್ನು ತಲುಪಿದ ಭಾರತೀಯರು ಪ್ರಯಾಣಿಸಲು 10 ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಇವು ಫೆ. 28ರಿಂದ ಕಾರ್ಯಾಚರಣೆ ಮಾಡಲಿವೆ ಎಂದು ಮಾಹಿತಿ ನೀಡಲಾಗಿತ್ತು. ಆದರೆ ಕೀವ್‌ ಹಾಗೂ ಹಾರ್ಕಿವ್‌ನಿಂದ ನೆರೆಯ ದೇಶಗಳ ಗಡಿಗಳಿಗೆ ಭಾರತೀಯರನ್ನು ಕರೆತರುವ ವ್ಯವಸ್ಥೆಯನ್ನು ರಾಯಭಾರ ಕಚೇರಿ ಮಾಡಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಗಡಿಗಳತ್ತ ಪ್ರಯಾಸದ ನಡಿಗೆ

ಉಕ್ರೇನ್‌ನ ಪ್ರಮುಖ ನಗರಗಳಾದ ಕೀವ್ ಹಾಗೂ ಹಾರ್ಕಿವ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಹೆಚ್ಚಾಗಿ ವಾಸವಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ವೈದ್ಯ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಈ ಎರಡೂ ನಗರಗಳಿಂದ ನೆರೆಯ ದೇಶಗಳಾದ ರೊಮೇನಿಯಾ, ಪೋಲೆಂಡ್, ಸ್ಲೊವಾಕಿಯಾ ಹಾಗೂ ಹಂಗೆರಿ ಗಡಿಗಳಿಗೆ ಸಂಚರಿಸಲು ವಿದ್ಯಾರ್ಥಿಗಳಿಗೆ ಯಾವುದೇ ವ್ಯವಸ್ಥೆ ಇಲ್ಲ.

ಯುದ್ಧ ಆರಂಭವಾಗಿದ್ದರಿಂದ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು. ದೇಶದಲ್ಲಿ ಕರ್ಫ್ಯೂ ಹೇರಲಾಗಿತ್ತು. ಭಾರತೀಯರನ್ನು ಕರೆಸಿಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿಯವರೆಗೆ ವಿದ್ಯಾರ್ಥಿಗಳು ವಾಹನಗಳ ವ್ಯವಸ್ಥೆ ಮಾಡಿಕೊಂಡು ಹೇಗಾದರೂ ಮಾಡಿ ಗಡಿಗಳನ್ನು ತಲುಪುವಂತೆ ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ಸಲಹೆಯಲ್ಲಿ ತಿಳಿಸಿತ್ತು.

ದೇಶದ ಪಶ್ಚಿಮ ಭಾಗದಲ್ಲಿರುವ ರೊಮೇನಿಯಾದ ಪೊರುಬ್ನೆ ಸಿರೆಟ್, ಪೋಲೆಂಡ್‌ನ ಶೆಹೆಹೈ, ಸ್ಲೊವಾಕಿಯಾದ ಉಝೋರೊಡ್ ಹಾಗೂ ಹಂಗೆರಿ ದೇಶದ ಚಾಪ್‌ಝಹೋ ಚೆಕ್‌ಪೋಸ್ಟ್‌ಗಳನ್ನು ಭಾರತೀಯರು ತಲುಪಬೇಕಿತ್ತು. ಈ ಚೆಕ್‌ಪಾಯಿಂಟ್‌ಗಳಲ್ಲಿರುವ ಆಯಾ ದೇಶಗಳ ಭಾರತೀಯ ರಾಯಭಾರ ಕಚೇರಿಗಳು ಅಲ್ಲಿ ತಾತ್ಕಾಲಿಕ ಕಚೇರಿಗಳನ್ನು ಸ್ಥಾಪಿಸಿದ್ದು, ಉಕ್ರೇನ್‌ನಿಂದ ಬರುವ ಭಾರತೀಯರಿಗೆ ಎಲ್ಲ ನೆರವು ದೊರೆಯಲಿದೆ ಎಂದು ತಿಳಿಸಲಾಗಿತ್ತು.

ಈ ಚೆಕ್‌ಪಾಯಿಂಟ್‌ಗಳನ್ನು ತಲುಪಬೇಕಾದರೆ ವಿದ್ಯಾರ್ಥಿಗಳಿಗೆ ಇದ್ದ ದಾರಿ ಕಾಲ್ನಡಿಗೆ ಮಾತ್ರ. ಕೀವ್ ಹಾಗೂ ಹಾರ್ಕಿವ್‌ನಲ್ಲಿದ್ದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ವಿವಿಧ ದೇಶಗಳ ಗಡಿಗಳತ್ತ ಸಾಗುತ್ತಿದ್ದಾರೆ. ಅವರಿಗೆ ಕುಡಿಯುವ ನೀರು, ಆಹಾರ, ವಿಶ್ರಾಂತಿ ಸಿಕ್ಕಿಲ್ಲ. ಗಡಿ ತಲುಪಿದರೆ ಕಷ್ಟ ಕರಗಿತು ಎಂದುಕೊಂಡು ಧಾವಂತದಿಂದ ಗಡಿಗಳತ್ತ ಹೆಜ್ಜೆಹಾಕಿದ ವಿದ್ಯಾರ್ಥಿಗಳಿಗೆ ಚೆಕ್‌ಪಾಯಿಂಟ್‌ಗಳಲ್ಲಿ ನಿರಾಸೆ ಕಾದಿತ್ತು.

ಆಧಾರ: ರಾಯಿಟರ್ಸ್, ಪಿಟಿಐ, ಬಿಬಿಸಿ, ವಿದೇಶಾಂಗ ಸಚಿವಾಲಯದ ಟ್ವೀಟ್‌ಗಳು, ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಮಾಡಿರುವ ಟ್ವೀಟ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.