ADVERTISEMENT

ಆಳ–ಅಗಲ: ವಿಮಾನ ತಯಾರಿಕೆಗೆ ಮುಂದಡಿ

ಭಾರತದಲ್ಲಿ ಟಾಟಾ– ಏರ್‌ಬಸ್‌ನಿಂದ ಸೇನಾ ಸರಕು ಸಾಗಣೆ ವಿಮಾನ ತಯಾರಿಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 0:10 IST
Last Updated 4 ನವೆಂಬರ್ 2024, 0:10 IST
   

ರಾಷ್ಟ್ರದ ವಿಮಾನಯಾನ ಮತ್ತು ಸೇನಾ ವಲಯದಲ್ಲಿ ಹೊಸ ಅಧ್ಯಾಯ ಬರೆಯಲು ಭಾರತ ಮುಂದಡಿ ಇಟ್ಟಿದೆ. ಸೇನಾ ಸರಕು ಸಾಗಣೆ ವಿಮಾನಗಳ ತಯಾರಿಕೆಯಲ್ಲಿ ಖಾಸಗಿ ಕಂಪನಿಗಳು ಮೊಟ್ಟ ಮೊದಲ ಬಾರಿಗೆ ಭಾಗಿಯಾಗಿವೆ. ಗುಜರಾತ್‌ನಲ್ಲಿರುವ ಟಾಟಾ ಘಟಕದಲ್ಲಿ ಏರ್‌ಬಸ್‌ನ ಸಿ–295 ವಿಮಾನ ತಯಾರಿಕೆ ಆರಂಭವಾಗಿದೆ. ಇದರಿಂದ ‘ಮೇಕ್ ಇನ್ ಇಂಡಿಯಾ’ಗೆ ಉತ್ತೇಜನ ಸಿಗುವುದಲ್ಲದೇ, ಭವಿಷ್ಯದಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಹಲವು ಸಾಧ್ಯತೆಗಳು ಅನಾವರಣಗೊಳ್ಳಲಿವೆ ಎನ್ನುವುದು ಕೇಂದ್ರ ಸರ್ಕಾರದ ನಂಬಿಕೆ. ಮುಖ್ಯವಾಗಿ, ಪ್ರಯಾಣಿಕ ವಿಮಾನಗಳ ತಯಾರಿಕೆಯ ತನ್ನ ಕನಸು ಈಡೇರಿಸಿಕೊಳ್ಳುವಲ್ಲಿ ಇದು ಆರಂಭಿಕ ಹೆಜ್ಜೆ ಎಂದೇ ಭಾರತ ಭಾವಿಸಿದೆ

ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್‌) ಮತ್ತು ಸ್ಪೇನ್‌ನ ಏರ್‌ಬಸ್ ಜಂಟಿಯಾಗಿ ಸೇನಾ ವಿಮಾನ ತಯಾರಿಕೆ ಆರಂಭಿಸಿವೆ. ಗುಜರಾತ್‌ನ ವಡೋದರಾದಲ್ಲಿ ಕಳೆದ ವಾರ ವಿಮಾನ ತಯಾರಿಕೆ ಘಟಕ ಕಾರ್ಯಾರಂಭ ಮಾಡಿದ್ದು, ಅದನ್ನು ಪ‍್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್ ಅಧ್ಯಕ್ಷ ಪೆದ್ರೊ ಸ್ಯಾಂಚೆಝ್ ಉದ್ಘಾಟಿಸಿದ್ದಾರೆ. ಏರ್‌ಬಸ್‌ನ ಮಧ್ಯಮ ಗಾತ್ರದ ಸೇನಾ ಸರಕು ಸಾಗಣೆ ವಿಮಾನ ಸಿ–295 ಇಲ್ಲಿ ತಯಾರಾಗಲಿದೆ. ಸೇನೆಗೆ ಬೇಕಾದ ವಿಮಾನವನ್ನು ಖಾಸಗಿ ಸಂಸ್ಥೆಗಳು ದೇಶೀಯವಾಗಿ ಮೊದಲ ಬಾರಿಗೆ ತಯಾರಿಕೆ ಮಾಡುತ್ತಿವೆ. ಭವಿಷ್ಯದಲ್ಲಿ ಇದು ಪ್ರಯಾಣಿಕ ವಿಮಾನ ತಯಾರಿಕೆಯೂ ಸೇರಿದಂತೆ ವಿಮಾನ ತಯಾರಿಕೆಯಲ್ಲಿ ದೇಶದ ಸ್ವಾವಲಂಬನೆಗೆ ಕಾರಣವಾಗಲಿದೆ ಎನ್ನುವ ಆಶಯ ಭಾರತದ್ದು.

ಭಾರತದ ಟಾಟಾ ಆ್ಯಂಡ್ ಸನ್ಸ್ ಒಡೆತನದ ಟಿಎಎಸ್‌ಎಲ್‌ ಬಹಳ ಹಿಂದಿನಿಂದಲೂ ಭಾರತೀಯ ಸೇನೆಗೆ ಬೇಕಾದ ಜೀಪ್, ಟ್ರಕ್ ಮುಂತಾದ ವಾಹನಗಳನ್ನು ಪೂರೈಸುತ್ತಿದೆ. ಏರ್‌ಬಸ್‌ ಸ್ಪೇನ್ ಮೂಲದ ಕಂಪನಿಯಾಗಿದ್ದು, ಯುರೋಪ್‌ನ ನಾಲ್ಕು ರಾಷ್ಟ್ರಗಳಲ್ಲಿ (ಫ್ರಾನ್ಸ್, ಬ್ರಿಟನ್‌, ಜರ್ಮನಿ ಮತ್ತು ಸ್ಪೇನ್) ತನ್ನ ಪ್ರಮುಖ ತಯಾರಿಕಾ ಘಟಕಗಳನ್ನು ಹೊಂದಿದೆ. ಭಾರತವು ಒಟ್ಟು 56 ಸಿ–295 ಸೇನಾ ವಿಮಾನಗಳಿಗೆ ಬೇಡಿಕೆ ಸಲ್ಲಿಸಿದ್ದು, ಅವುಗಳ ಪೈಕಿ 16 ವಿಮಾನಗಳನ್ನು ಸ್ಪೇನ್ ಪೂರೈಸಲಿದೆ; ಉಳಿದ 40 ವಡೋದರಾದಲ್ಲಿ ತಯಾರಾಗಲಿವೆ.

ADVERTISEMENT

ಸಿ–295 ಸೇನಾ ಸರಕು ಸಾಗಣೆ ವಿಮಾನದ ತಯಾರಿಕೆ ಆರಂಭ ಅಷ್ಟೇ. ದೇಶದ ಗುರಿ ಇರುವುದು ‘ಮೇಕ್ ಇನ್ ಇಂಡಿಯಾ’ದಲ್ಲಿ ಪ್ರಯಾಣಿಕ ವಿಮಾನ ತಯಾರಿಕೆಯನ್ನು ಒಳಗೊಳ್ಳುವುದು. ಅಂದರೆ, ದೇಶೀಯವಾಗಿ ಪ್ರಯಾಣಿಕ ವಿಮಾನಗಳ ತಯಾರಿಕೆ ಮಾಡುವುದು. ವಡೋದರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮಾತನಾಡಿದ್ದಾರೆ. ಆದರೆ, ಪ್ರಯಾಣಿಕ ವಿಮಾನಗಳ ತಯಾರಿಕೆ ಅತಿ ದೀರ್ಘವಾದ ಹಾಗೂ ಸಂಕೀರ್ಣ ಪ್ರಕ್ರಿಯೆಯಾಗಿದೆ.

ಎರಡು ಕಂಪನಿಗಳ ಏಕಸ್ವಾಮ್ಯ: ಜಾಗತಿಕ ಮಟ್ಟದಲ್ಲಿ ಪ್ರಯಾಣಿಕ ವಿಮಾನಗಳ ತಯಾರಿಕೆಯು ಎರಡು ಕಂಪನಿಗಳ (ಬೋಯಿಂಗ್ ಮತ್ತು ಏರ್‌ಬಸ್‌) ಹಿಡಿತದಲ್ಲಿದೆ. ಮಾರುಕಟ್ಟೆಯ ಶೇ 90ರಷ್ಟು ಪಾಲನ್ನು ಈ ಎರಡು ಕಂಪನಿಗಳೇ ಹೊಂದಿವೆ. ಭಾರತದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್‌) ಲಘು ಯುದ್ಧವಿಮಾನ, ಹೆಲಿಕಾಪ್ಟರ್‌ಗಳನ್ನು ಈಗಾಗಲೇ ತಯಾರಿಸಿದೆ. ವಿದೇಶಿ ಕಂಪನಿಗಳೊಂದಿಗಿನ ಸಹಭಾಗಿತ್ವದಲ್ಲೂ ಸೇನಾ ವಿಮಾನಗಳನ್ನು ಅಭಿವೃದ್ಧಿಪಡಿಸಿದೆ. ಹಾಗೆಯೇ 19 ಆಸನಗಳ ಪ್ರಯಾಣಿಕ ವಿಮಾನದ ತಯಾರಿಕೆಯಲ್ಲೂ ಎಚ್‌ಎಎಲ್ ತೊಡಗಿದೆ. ಆದರೆ, ಒಂದು ಪೂರ್ಣ ಪ್ರಯಾಣಿಕ ವಿಮಾನವನ್ನು ತಯಾರು ಮಾಡುವುದು ಭಾರಿ ಕಷ್ಟದ ವಿಚಾರ. ಹಲವು ವರ್ಷಗಳ ಹಿಂದೆಯೇ ಈ ದಿಕ್ಕಿನಲ್ಲಿ ಪ್ರಯತ್ನ ನಡೆಸಿದ್ದ ಚೀನಾ, ಈಗ ದೇಶೀಯವಾಗಿ ಪ್ರಯಾಣಿಕ ವಿಮಾನ ತಯಾರಿಕೆಯನ್ನು ಆರಂಭಿಸುವ ಹಂತಕ್ಕೆ ಬಂದಿದೆ. ಭಾರತ ಅದೇ ಕನಸಿನೊಂದಿಗೆ ಈಗ ಖಾಸಗಿಯವರ ಮೂಲಕ ಸೇನಾ ವಿಮಾನ ತಯಾರಿಕೆಗೆ ಮುಂದಡಿ ಇಟ್ಟಿದೆ.

ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ರಾಷ್ಟ್ರವಾಗಿರುವ ಭಾರತವು, 2047ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ದೇಶವಾಗುವ ದಿಸೆಯಲ್ಲಿ ಪ್ರಯತ್ನಿಸುತ್ತಿದೆ. ದೇಶದಲ್ಲಿ ಮಧ್ಯಮ ವರ್ಗದ ಜನಸಂಖ್ಯೆಯೂ ಹೆಚ್ಚುತ್ತಿದ್ದು, ವಿಮಾನ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಲಿದೆ ಎಂದು ಏರ್‌ಬಸ್‌ನ ಇತ್ತೀಚಿನ ವರದಿ ತಿಳಿಸಿದೆ. ಭಾರತದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆಯು 2040ರ ಹೊತ್ತಿಗೆ ಶೇ 6.2ರಷ್ಟು ಆಗಲಿದ್ದು, ಇದು ಮುಂದುವರಿದ ಆರ್ಥಿಕತೆ ಗಳಲ್ಲಿಯೇ ಅತಿ ದೊಡ್ಡ ಪ್ರಮಾಣವಾಗಿದೆ ಮತ್ತು ಜಾಗತಿಕ ಪ್ರಮಾಣಕ್ಕಿಂತಲೂ (ಶೇ 3.9) ಹೆಚ್ಚಿದೆ. ಏರುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ದೇಶವು ಈಗಾಗಲೇ 1,200 ವಿಮಾನಗಳಿಗಾಗಿ ಕಂಪನಿಗಳಿಗೆ ಬೇಡಿಕೆ ಸಲ್ಲಿಸಿದೆ. ಮುಂದಿನ 20 ವರ್ಷಗಳಲ್ಲಿ ದೇಶಕ್ಕೆ ಒಟ್ಟು 2,210 ಹೊಸ ವಿಮಾನಗಳು ಬೇಕು ಎಂದು ಅಂದಾಜಿಸಲಾಗಿದೆ.

ಆದರೆ, ಭಾರತವಷ್ಟೇ ಅಲ್ಲದೇ ಲ್ಯಾಟಿನ್ ಅಮೆರಿಕ, ಗಲ್ಫ್‌ ದೇಶಗಳು ಸೇರಿದಂತೆ ಜಗತ್ತಿನ ಹಲವು ದೇಶಗಳಿಂದಲೂ ಹೆಚ್ಚಿನ ವಿಮಾನಗಳಿಗೆ ಬೇಡಿಕೆ ಬರುತ್ತಿರುವುದರಿಂದ ಸಕಾಲಕ್ಕೆ ಪೂರೈಕೆ ಮಾಡಲು ಬೋಯಿಂಗ್ ಮತ್ತು ಏರ್‌ಬಸ್‌ ಕಂಪನಿಗಳಿಗೆ ಸಾಧ್ಯವಾಗುತ್ತಿಲ್ಲ.

ಭಾರತದಲ್ಲಿ ವಿಮಾನದ ಬಿಡಿಭಾಗಗಳ ತಯಾರಿಕೆ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಬೋಯಿಂಗ್ ಮತ್ತು ಏರ್‌ಬಸ್ ಕಂಪನಿಗಳು ಸಂಶೋಧನೆ, ತಾಂತ್ರಿಕತೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ದೇಶದಲ್ಲಿ ತೆರೆದಿವೆ. ಹೀಗಾಗಿ ವಿಮಾನ ತಯಾರಿಕಾ ಕ್ಷೇತ್ರವನ್ನು ಪ್ರವೇಶಿಸಲು ಭಾರತಕ್ಕೆ ಇದು ಸಕಾಲವಾಗಿದೆ. ಈ ದಿಸೆಯಲ್ಲಿ ಸಿ–295 ಸೇನಾ ವಿಮಾನ ತಯಾರಿಕೆಗೆ ವಡೋದರಾದಲ್ಲಿ ಘಟಕ ಆರಂಭವಾಗಿರುವುದು ನಿರ್ಣಾಯಕ ಹೆಜ್ಜೆ ಎನ್ನಲಾಗುತ್ತಿದೆ.

ಆಧಾರ: ಪಿಟಿಐ, ಏರ್‌ಬಸ್ ವೆಬ್‌ಸೈಟ್

ಎವ್ರೊ–748 ಸ್ಥಾನ ತುಂಬಲಿರುವ ಸಿ–295
ಭಾರತದಲ್ಲೇ ತಯಾರಾಗಲಿರುವ ಮಧ್ಯಮ ಗಾತ್ರದ ಸಿ–295 ಸೇನಾ ಸರಕುಸಾಗಣೆ ವಿಮಾನಗಳು ಭಾರತೀಯ ವಾಯುಪಡೆಯಲ್ಲಿ ದಶಕಗಳಿಂದ ಕಾರ್ಯಾಚರಿಸುತ್ತಿರುವ ಎವ್ರೊ ಎಚ್‌ಎಸ್‌–748 ವಿಮಾನಗಳ ಜಾಗ ತುಂಬಲಿವೆ. 1960ರ ದಶಕದಲ್ಲಿ ತಯಾರಾಗಿರುವ ಈ ವಿಮಾನಗಳು ಈಗ ಹಳೆಯದಾಗಿದ್ದು, ಅವುಗಳ ನಿರ್ವಹಣೆಯೇ ವಾಯುಪಡೆಗೆ ದೊಡ್ಡ ಸವಾಲಾಗಿದೆ. ಈ ವಿಮಾನಗಳ ಬದಲಿಗೆ ಅತ್ಯಾಧುನಿಕ ಮತ್ತು ಬಹೂಪಯೋಗಿ ಸಿ–295 ಸರಕು ಸಾಗಣೆ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ತೀರ್ಮಾನಿಸಿತ್ತು. 56 ವಿಮಾನಗಳನ್ನು ಖರೀದಿಸಲು ಭಾರತ ಏರ್‌ಬಸ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. ಎರಡು ಟರ್ಬೊಪ್ರೊಪೆಲ್ಲರ್‌ ಎಂಜಿನ್‌ಗಳನ್ನು ಹೊಂದಿರುವ ಸಿ–295 ವಿಮಾನವನ್ನು ಕಡಿಮೆ ಉದ್ದದ ರನ್‌ವೇ ಇರುವ ಜಾಗಗಳಲ್ಲೂ ಇಳಿಸಬಹುದು. ಪ್ರತಿಕೂಲ ಅಥವಾ ತುರ್ತುಪರಿಸ್ಥಿತಿಯಲ್ಲಿ ಕಡಿಮೆ ಸ್ಥಳಾವಕಾಶ ಇರುವಲ್ಲಿಯೂ ವಿಮಾನವನ್ನು ಇಳಿಸಬಹುದು. ಟೇಕ್‌ ಆಫ್‌ ಮಾಡಬಹುದು. ಕನಿಷ್ಠ 670 ಮೀಟರ್‌ ಉದ್ದದ ರನ್‌ವೇ ಇದ್ದರೆ ಸಲೀಸಾಗಿ ಟೇಕ್‌ ಆಫ್‌ ಮಾಡಬಹುದು. ಇಳಿಯುವುದಕ್ಕೆ 320 ಮೀಟರ್‌ ಉದ್ದದ ರನ್‌ವೇ ಸಾಕು. ಸೇನಾ ಸರಕು ಸಾಗಣೆ ಮಾತ್ರವಲ್ಲದೇ ವಿವಿಧ ಉದ್ದೇಶಗಳಿಗೂ ಬಳಸಬಹುದು ಎನ್ನುವುದು ಈ ವಿಮಾನದ ಹೆಗ್ಗಳಿಕೆ. ಸೈನಿಕರು, ಪ್ಯಾರಾಟ್ರೂಪರ್‌ಗಳನ್ನು ಕರೆದೊಯ್ಯಲು, ರಕ್ಷಣಾ ಕಾರ್ಯಾಚರಣೆಗೆ, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ, ನೌಕಾ ನಿಗಾ ವ್ಯವಸ್ಥೆಗೆ, ಗಡಿ ಕಾಯಲು, ಆಗಸದಲ್ಲೇ ವಿಮಾನಗಳಿಗೆ ಇಂಧನ ತುಂಬಿಸಲು ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಈ ವಿಮಾನವನ್ನು ಬಳಸಬಹುದು.
ಸ್ವಾವಲಂಬನೆಯಲ್ಲಿ ಮಹತ್ವದ ಹೆಜ್ಜೆ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಮೇಕ್‌ ಇನ್‌ ಇಂಡಿಯಾ’ ಯೋಜನೆ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ಭಾರತದ ಪ್ರಯತ್ನದಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ. 40 ವಿಮಾನಗಳು ಪೂರ್ಣವಾಗಿ ಟಾಟಾದ ತಯಾರಿಕಾ ಘಟಕದಲ್ಲೇ ತಯಾರಾಗಲಿವೆ. ಅದಕ್ಕಾಗಿ ಕೆಲವು ಬಿಡಿ ಭಾಗಗಳು ಹೈದರಾಬಾದ್‌ನಲ್ಲಿರುವ ಏರ್‌ಬಸ್‌ನ ಘಟಕದಿಂದ ಪೂರೈಕೆಯಾದರೆ, ವಿಮಾನದ ಪ್ರಮುಖ ಭಾಗಗಳು, ಬಹುತೇಕ ಬಿಡಿಭಾಗಗಳು ಟಾಟಾ ಘಟಕದಲ್ಲೇ ತಯಾರಾಗಲಿವೆ. ಬಿಡಿ ಭಾಗಗಳ ಪೂರೈಕೆಗಾಗಿ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ 37 ಕಂಪನಿಗಳೊಂದಿಗೆ ಟಾಟಾ, ಏರ್‌ಬಸ್‌ ಒಪ್ಪಂದ ಮಾಡಿಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.