ಸಾಮಾನ್ಯ ವಿಮೆ ವ್ಯವಹಾರ (ರಾಷ್ಟ್ರೀಕರಣ) ತಿದ್ದುಪಡಿ ಮಸೂದೆ 2021ಕ್ಕೆ ಸಂಸತ್ತಿನ ಅಂಗೀಕಾರವು ಬುಧವಾರ ದೊರೆತಿದೆ. ಪೆಗಾಸಸ್ ಕುತಂತ್ರಾಂಶ ಬಳಸಿ ನಡೆಸಿದೆ ಎನ್ನಲಾದ ಗೂಢಚರ್ಯೆಯ ಬಗ್ಗೆ ಚರ್ಚೆಗೆ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಸರ್ಕಾರ ನಿರಾಕರಿಸಿತ್ತು. ಹೀಗಾಗಿ, ಅಧಿವೇಶನ ಮಳೆಯಲ್ಲಿ ಕೊಚ್ಚಿ ಹೋದಂತೆಯೇ ಆಗಿತ್ತು.
ಆದರೆ, ಇತರ ಹಿಂದುಳಿದ ವರ್ಗಗಳನ್ನು (ಒಬಿಸಿ) ಗುರುತಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡುವ ಸಂವಿಧಾನದ 127ನೇ ತಿದ್ದುಪಡಿಯನ್ನು ವಿರೋಧ ಪಕ್ಷಗಳು ಬೆಂಬಲಿಸಿದ್ದವು. ಹಾಗಾಗಿ ರಾಜ್ಯಸಭೆ ಕಲಾಪ ಬುಧವಾರ ಸ್ವಲ್ಪ ಮಟ್ಟಿಗೆ ಸುಗಮವಾಗಿ ನಡೆದಿತ್ತು. ಸಾಮಾನ್ಯ ವಿಮೆ ವ್ಯವಹಾರ (ರಾಷ್ಟ್ರೀಕರಣ) ತಿದ್ದುಪಡಿ ಮಸೂದೆಯನ್ನು ಸರ್ಕಾರವು ಅಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳುವುದರೊಂದಿಗೆ ರಾಜ್ಯಸಭೆಯ ಚಿತ್ರಣ ಮತ್ತೆ ಬದಲಾಯಿತು. ವಿರೋಧ ಪಕ್ಷಗಳ ಸದಸ್ಯರು ಮತ್ತೆ ಕೋಲಾಹಲ ಎಬ್ಬಿಸಿದರು. ನಿರಂತರ ಗದ್ದಲದಲ್ಲಿಯೇ ಇದ್ದ ಮುಂಗಾರು ಅಧಿವೇಶನವು ಗದ್ದಲದೊಂದಿಗೇ ಕೊನೆಯಾಯಿತು.
ಜೀವ ವಿಮಾ ನಿಗಮ (ಎಲ್‌ಐಸಿ), ಜನರಲ್ ಇನ್ಸೂರೆನ್ಸ್ ಕಾರ್ಪೊರೇಷನ್, ನ್ಯೂ ಇಂಡಿಯಾ ಅಶ್ಶೂರೆನ್ಸ್ ಕಂಪನಿ ಲಿ., ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿ ಲಿ., ಮುಂತಾದ ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳು ಈಗ ಅಸ್ತಿತ್ವದಲ್ಲಿವೆ. ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳ ಶೇ 51ಕ್ಕಿಂತ ಹೆಚ್ಚಿನ ಪಾಲು ಸರ್ಕಾರದ ವಶದಲ್ಲಿಯೇ ಇರಬೇಕುಎಂಬ ನಿಯಮ ಈವರೆಗೆ ಇತ್ತು. ಶೇ 51ರಷ್ಟುಪಾಲನ್ನು ಸರ್ಕಾರ ಹೊಂದಿರಬೇಕಿಲ್ಲ ಎಂದು ಈಗತಿದ್ದುಪಡಿ ಮಾಡಲಾಗಿದೆ.
ಈಗ ಸರ್ಕಾರಿ ಸ್ವಾಮ್ಯದಲ್ಲಿರುವ ವಿಮಾ ಕಂಪನಿಗಳ ಮೇಲಿನ ಹತೋಟಿಯನ್ನು ಸರ್ಕಾರವು ಮುಂದೊಂದು ದಿನ ಕೈಬಿಡುವುದಕ್ಕೆ ತಿದ್ದುಪಡಿ ಕಾಯ್ದೆಯು ಅವಕಾಶ ಕೊಡುತ್ತದೆ. ಈ ಎಲ್ಲ ಬದಲಾವಣೆಗಳು ವಿಮಾ ಕ್ಷೇತ್ರವನ್ನು ಪೂರ್ಣವಾಗಿ ಖಾಸಗಿ ಕ್ಷೇತ್ರಕ್ಕೆ ಬಿಟ್ಟುಕೊಡುವ ಪ್ರಕ್ರಿಯೆಯ ಭಾಗ ಎಂದು ಹೇಳಲಾಗುತ್ತಿದೆ. ಇದನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿವೆ.
2021ರ ತಿದ್ದುಪಡಿ ಕಾಯ್ದೆ
ಮೂರು ಮುಖ್ಯ ಬದಲಾವಣೆಗಳನ್ನು ತಿದ್ದುಪಡಿ ಕಾಯ್ದೆ ಪ್ರಸ್ತಾಪಿಸಿದೆ.ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳಲ್ಲಿ ಕೇಂದ್ರ ಸರ್ಕಾರವು ಹೊಂದಿರುವ ಪಾಲುದಾರಿಕೆಯ ಕನಿಷ್ಠ ಮಿತಿಯನ್ನು ಈ ಕಾಯ್ದೆ ತೆಗೆದುಹಾಕಿದೆ. ಕೇಂದ್ರ ಸರ್ಕಾರದ ಪಾಲು ಶೇ 51ರಷ್ಟು ಇರಬೇಕು ಎಂಬ ನಿಬಂಧನೆಯನ್ನು ತಿದ್ದುಪಡಿ ಮಸೂದೆ ತೆರವುಗೊಳಿಸಿದೆ. ಇದರರ್ಥ ಈ ವಿಮಾ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಬಹುದಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು2021ರ ಬಜೆಟ್‌ನಲ್ಲಿ ಸಾಮಾನ್ಯ ವಿಮಾ ಕಂಪನಿಗಳನ್ನು 2021-22ರಲ್ಲಿ ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದರು.
ಹೊಸದಾಗಿ ಸೆಕ್ಷನ್ 24 ಬಿ ಅನ್ನು ಸೇರಿಸಲಾಗಿದೆ. ಒಂದು ನಿರ್ದಿಷ್ಟ ದಿನಾಂಕದಿಂದ, ಈ ಸಾರ್ವಜನಿಕ ಸಾಮಾನ್ಯ ವಿಮಾ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ಹೊಂದಿರುವ ನಿಯಂತ್ರಣವನ್ನು ನಿಲ್ಲಿಸಬಹುದು ಎಂದು ಈ ಸೆಕ್ಷನ್ ವಿವರಿಸುತ್ತದೆ. ನಿರ್ದೇಶಕರನ್ನು ನೇಮಿಸುವ ಅಧಿಕಾರ, ನಿರ್ವಹಣೆ ಅಥವಾ ನೀತಿ ನಿರ್ಧಾರಗಳ ಮೇಲೆ ಸರ್ಕಾರದ ಅಧಿಕಾರ ಕೊನೆಯಾಗಲಿದೆ.
ಆಡಳಿತಾತ್ಮಕ ದೃಷ್ಟಿಯಿಂದ ಸೆಕ್ಷನ್ 31 ಎ ಅನ್ನು ಸೇರ್ಪಡೆ ಮಾಡಲಾಗಿದೆ. ವಿಮಾ ಕಂಪನಿಗಳ ನಿರ್ದೇಶಕರು ಕೆಲವೊಂದು ಕ್ರಿಯೆಗಳಿಗೆ ಮಾತ್ರ ಜವಾಬ್ದಾರರಾಗಿರುತ್ತಾರೆ. ಯಾವ ಕೆಲಸಗಳು ನಿರ್ದೇಶಕರ ತಿಳಿವಳಿಕೆ ಮತ್ತು ಒಪ್ಪಿಗೆಯೊಂದಿಗೆ ಆಗಿರುತ್ತವೆಯೋ ಅದಕ್ಕೆ ಮಾತ್ರ ಅವರು ಬಾಧ್ಯಸ್ಥರಾಗಿರುತ್ತಾರೆ ಎಂದು ತಿದ್ದುಪಡಿ ಕಾಯ್ದೆ ಹೇಳುತ್ತದೆ.
ವಿಮೆ ನೌಕರರ ಸೇವಾ ನಿಯಮಗಳು ಮತ್ತು ಷರತ್ತುಗಳನ್ನು ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ಈ ಕಾಯ್ದೆ ಅಧಿಕಾರ ನೀಡುತ್ತದೆ. ಈ ಸಂಬಂಧ ಸರ್ಕಾರವು ಯೋಜನೆಗಳನ್ನು ರೂಪಿಸಬಹುದು. ಆದರೆ ವಿಮಾ ಸಂಸ್ಥೆಗಳ ಆಡಳಿತ ಮಂಡಳಿಗಳು ಈ ಯೋಜನೆಗಳನ್ನು ಬದಲಾಯಿಸಬಹುದು ಅಥವಾ ಹೊಸ ನೀತಿಗಳನ್ನು ರೂಪಿಸಬಹುದು. ಇಂತಹ ಯೋಜನೆಗಳನ್ನು ರೂಪಿಸುವ ಕೇಂದ್ರ ಸರ್ಕಾರದ ಅಧಿಕಾರವು ಮುಂದೆ ವಿಮಾ ಕಂಪನಿಗಳ ನಿರ್ದೇಶಕರ ಮಂಡಳಿಗೆ ವರ್ಗಾವಣೆಯಾಗಲಿದೆ.
ಪ್ರತಿಪಕ್ಷಗಳ ಆಕ್ರೋಶ
ವಿಮಾ ಮಸೂದೆಯ ಸಾಧಕ-ಬಾಧಕಗಳ ಬಗ್ಗೆ ಸರಿಯಾದ ಚರ್ಚೆಯನ್ನು ನಡೆಸದೇತರಾತುರಿಯಲ್ಲಿ ಅಂಗೀಕರಿಸಿದ್ದು ಪ್ರತಿಪಕ್ಷಗಳನ್ನು ಸಿಟ್ಟಿಗೇಳಿಸಿದೆ. ಮಸೂದೆ ಅಂಗೀಕಾರದ ಸಮಯದಲ್ಲಿ ಸರ್ಕಾರ ನಡೆದುಕೊಂಡ ರೀತಿಯು ಚರ್ಚೆ ಹುಟ್ಟುಹಾಕಿವೆ.ವಿಮೆ ಮಸೂದೆಗೆಶತಾಯಗತಾಯ ಅಂಗೀಕಾರ ಪಡೆದುಕೊಳ್ಳಲು ನಿರ್ಧರಿಸಿದ್ದ ಕೇಂದ್ರ ಸರ್ಕಾರವು, ರಾಜ್ಯಸಭೆಯಲ್ಲಿ ಬೃಹತ್ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿತ್ತು ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಆರೋಪಿಸಿದ್ದಾರೆ. ಇದಕ್ಕೆ ದನಿಗೂಡಿಸಿರುವ ಟಿಎಂಸಿ ಸಂಸದ ಡೆರೆಕ್ ಓಬ್ರಿಯಾನ್, ರಾಜ್ಯಸಭೆಯಲ್ಲಿ ಸಂಸದರಿಗಿಂತ ಭದ್ರತಾ ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು ಎಂದಿದ್ದಾರೆ.
ಕಾಯ್ದೆಯಾಗಿ ಇದು ಜಾರಿಗೆ ಬಂದ ನಂತರ ದೊಡ್ಡ ಪ್ರಮಾಣದ ನೌಕರರ ವಜಾ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ಪ್ರತಿಪಕ್ಷಗಳು ಹೇಳಿವೆ.
ಉದ್ಯೋಗಿಗಳಲ್ಲಿ ಆತಂಕ
ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ ಉದ್ಯೋಗಿಗಳು ತಿದ್ದುಪಡಿ ಮಸೂದೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರದ ಪಾಲು ಮಿತಗೊಳಿಸುವಿಕೆ ಹಾಗೂ ಖಾಸಗೀಕರಣಗೊಳಿಸುವ ನಿರ್ಧಾರಗಳು ಆಕ್ರೋಶ ಸೃಷ್ಟಿಸಿವೆ. ಈ ಕಾಯ್ದೆಯನ್ನು ವಿರೋಧಿಸಿ ಆಗಸ್ಟ್ 4ರಂದು ಒಂದು ದಿನದ ಮುಷ್ಕರವನ್ನೂ ನೌಕರರು ನಡೆಸಿದ್ದರು.
‘ಈ ಕಂಪನಿಗಳ ಸರಿಯಾದ ಕಾರ್ಯನಿರ್ವಹಣೆಗೆ ಕೇಂದ್ರ ಸರ್ಕಾರದ ಬೆಂಬಲ ಅತ್ಯಗತ್ಯ. ಇಲ್ಲದಿದ್ದರೆ, ಸಂಸ್ಥೆಗಳು ಕುಸಿಯಲಿದ್ದು, ಗ್ರಾಹಕರು ಮತ್ತು ಸಿಬ್ಬಂದಿ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ’ ಎಂದು ವಿಮಾ ಸಂಸ್ಥೆಯೊಂದರ ನಿವೃತ್ತ ನೌಕರ ಅಭಿಪ್ರಾಯಪಟ್ಟಿದ್ದಾರೆ.
ಕಾಯ್ದೆ ಜಾರಿಗೊಂಡ ಬಳಿಕ, ಖಾಸಗಿಯವರು ವಿಮೆ ಕ್ಷೇತ್ರದಲ್ಲಿ ಬಂಡವಾಳ ಹೂಡುತ್ತಾರೆ. ಕಡಿಮೆ ಅವಧಿಯಲ್ಲಿ ಲಾಭ ಗಳಿಸುವುದು ಅವರ ಉದ್ದೇಶವಾಗಿರುತ್ತದೆ. ಇದು ವಿಮಾ ಕ್ಷೇತ್ರಕ್ಕೆ ಹೊಂದಿಕೆಯಾಗುವುದಿಲ್ಲ ಎಂಬುದು ತಜ್ಞರ ಮಾತು. ಕೋವಿಡ್ ಪರಿಹಾರ ಹಣ ಪಾವತಿಯ ಕಾರಣ,ಭಾರತದಲ್ಲಿ ಸಾಮಾನ್ಯ ವಿಮಾ ಕಂಪನಿಗಳು ಶೇ 110ಕ್ಕಿಂತ ಹೆಚ್ಚು ಪ್ರಮಾಣದ ನಷ್ಟ ಎದುರಿಸುತ್ತಿರುವಾಗ ಖಾಸಗೀಕರಣ ಮಾಡುವ ಅಗತ್ಯ ಇರಲಿಲ್ಲ ಎಂಬುದು ನೌರರರ ಅಭಿಪ್ರಾಯವಾಗಿದೆ.
ಸರ್ಕಾರದ ಪ್ರತಿಪಾದನೆ:ವಿಮಾ ವಲಯದಲ್ಲಿ ಬಂಡವಾಳದ ತೀವ್ರ ಅವಶ್ಯಕತೆ ಇದೆ. ಆದ್ದರಿಂದ ಈ ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸುವ ತುರ್ತು ಅವಶ್ಯಕತೆ ಇತ್ತು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಖಾಸಗಿ ಹೂಡಿಕೆದಾರರು ಕ್ಷೇತ್ರಕ್ಕೆ ಬರುವುದರಿಂದ ಬಂಡವಾಳದ ಹರಿವು ಹೆಚ್ಚುತ್ತದೆ ಎಂದು ಸರ್ಕಾರ ಪ್ರತಿಪಾದಿಸಿದೆ.
ವಿಲೀನದಿಂದ ಹಿಂದೆ ಸರಿದ ಸರ್ಕಾರ
ದೇಶದ ಸರ್ಕಾರಿ ಸ್ವಾಮ್ಯದ ಸಾಮಾನ್ಯ ವಿಮೆ ಕಂಪನಿಗಳಾದ ಓರಿಯಂಟಲ್ ಇನ್ಶೂರೆನ್ಸ್, ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಮತ್ತು ನ್ಯಾಷನಲ್ ಇನ್ಶೂರೆನ್ಸ್ ಲಿಮಿಟೆಡ್‌ಗಳನ್ನು ವಿಲೀನ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ 2018ರಲ್ಲಿ ಸಿದ್ಧಪಡಿಸಿತ್ತು. ಈ ಮೂರೂ ಕಂಪನಿಗಳನ್ನು ವಿಲೀನಗೊಳಿಸಿದ ನಂತರ, ಆ ಕಂಪನಿಯನ್ನು ಷೇರು ಮಾರುಕಟ್ಟೆ ವಹಿವಾಟಿಗೆ ತರುವುದು ಸರ್ಕಾರದ ಮುಖ್ಯ ಉದ್ದೇಶವಾಗಿತ್ತು. ಕಂಪನಿಯ ಕೆಲವು ಷೇರುಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುವ ಪ್ರಸ್ತಾವವೂ ಸರ್ಕಾರದ ಮುಂದೆ ಇತ್ತು.ಆದರೆ ವಿವಿಧ ಕಾರಣಗಳಿಂದಾಗಿ ಸರ್ಕಾರವು ಆ ಪ್ರಸ್ತಾವವನ್ನು ಕೈಬಿಟ್ಟಿತು.
‘ಮೂರೂ ಕಂಪನಿಗಳ ಆರ್ಥಿಕ ವಹಿವಾಟು ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ಈ ಕಂಪನಿಗಳನ್ನು ವಿಲೀನಗೊಳಿಸಿ, ರಚಿಸಲಾದ ಹೊಸ ಕಂಪನಿಯು ಆರಂಭದಲ್ಲೇ ಹಣಕಾಸಿನ ಮುಗ್ಗಟ್ಟನ್ನು ಎದುರಿಸಬೇಕಾಗುತ್ತದೆ. ಹೊಸ ಕಂಪನಿಯು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕಾದರೆ, ಸರ್ಕಾರವು ₹12,500 ಕೋಟಿಯಷ್ಟು ಬಂಡವಾಳವನ್ನು ತೊಡಗಿಸಬೇಕಾಗುತ್ತದೆ. ಇದು ಹೆಚ್ಚು ಲಾಭಕರವಲ್ಲದ ಕ್ರಮ ಎಂದು ತಜ್ಞರು ವರದಿ ನೀಡಿದ್ದರು’ ಎಂದು ಮೂಲಗಳು ಹೇಳಿವೆ.
‘ಮೂರೂ ಕಂಪನಿಗಳು ಬಳಸುತ್ತಿರುವ ತಂತ್ರಜ್ಞಾನ ಭಿನ್ನವಾದದು. ಕಾರ್ಯನಿರ್ವಹಣೆ ವಿಧಾನವೂ ಸಂಪೂರ್ಣ ಭಿನ್ನ. ವಿಲೀನಗೊಳಿಸಲು ಏಕೈಕ ತಂತ್ರಜ್ಞಾನ ರೂಪಿಸಬೇಕು ಮತ್ತು ಏಕರೂಪದ ಕಾರ್ಯನಿರ್ವಹಣೆ ವಿಧಾನವನ್ನು ಅಭಿವೃದ್ಧಿಪಡಿಸಬೇಕು. ಜತೆಗೆ ಆ ಕಾರ್ಯನಿರ್ವಹಣೆ ವಿಧಾನಕ್ಕೆ ಸಿಬ್ಬಂದಿಯನ್ನು ತಯಾರು ಮಾಡಬೇಕು. ಇವೆಲ್ಲವೂ ಹೆಚ್ಚು ಹಣ ಮತ್ತು ಸಮಯ ಬೇಡುವ ಪ್ರಕ್ರಿಯೆಗಳು. ವಿಲೀನ ಮತ್ತು ತರಬೇತಿ ಪ್ರಕ್ರಿಯೆ ಪರಿಣಾಮಕಾರಿಯಾಗಿ ಅನುಷ್ಠಾನವಾಗದೇ ಇದ್ದರೆ, ಕಂಪನಿ ಮತ್ತಷ್ಟು ಆರ್ಥಿಕ ಮುಗ್ಗಟ್ಟಿಗೆ ಸಿಲುಕಬಹುದು. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ವಿಲೀನ ಪ್ರಕ್ರಿಯೆ ಒಳ್ಳೆಯದಲ್ಲ ಎಂಬ ತಜ್ಞರ ಸಲಹೆಯನ್ನು ಸರ್ಕಾರ ಮಾನ್ಯ ಮಾಡಿತು’ ಎಂದು ಮೂಲಗಳು ಹೇಳಿವೆ.
ಈ ಕಂಪನಿಗಳನ್ನು ಖಾಸಗೀಕರಣ ಮಾಡಲಾಗುತ್ತದೆ ಎಂದು ಸಿಬ್ಬಂದಿಯು ಆತಂಕ ವ್ಯಕ್ತಪಡಿಸಿದ್ದರು. ವಿಲೀನ ಮತ್ತು ಖಾಸಗೀಕರಣದ ವಿರುದ್ಧ ಸಿಬ್ಬಂದಿ ಮುಷ್ಕರ ನಡೆಸಿದ್ದರು. ವಿಲೀನ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೋವಿಡ್ ಸಾಂಕ್ರಾಮಿಕವು ಆಕ್ರಮಿಸಿತು. ಲಾಕ್‌ಡೌನ್‌ನಲ್ಲಿ ಈ ಕಂಪನಿಗಳ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಹೀಗಾಗಿ ವಿಲೀನ ಪ್ರಕ್ರಿಯೆಯನ್ನು ಸರ್ಕಾರ ರದ್ದುಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.