ಕರ್ನಾಟಕದಲ್ಲಿ ಒಳ ಮೀಸಲಾತಿಯ ಸಮಸ್ಯೆಯು ಎಡ - ಬಲದ ಎರಡು ಪ್ರಬಲ ಜಾತಿಗಳಿಂದ ಆಗಿದೆ. ವರ್ಗೀಕರಣದ ಹಂಚಿಕೆಯಲ್ಲಿ ಹೆಚ್ಚು ಚೌಕಾಸಿಗೆ ಆಸ್ಪದ ಮಾಡಿಕೊಡದೆ, ತಮಗಿಂತಲೂ ತಳದಲ್ಲಿರುವ ಜಾತಿಗಳು ಮೇಲೆ ಬರಲಿ ಎಂಬ ಸದಾಶಯದಿಂದ ನೋಡಬೇಕು
ಮೀಸಲಾತಿ ಎನ್ನುವುದು ಹರಿಯುವ ನೀರಿನಂತಿರಬೇಕು. ತಗ್ಗುಗಳು ಬಂದಾಗ ಹರಿವ ಕ್ರಿಯೆ ನಿಂತಿದೆಯೆನಿಸಿದರೂ, ತುಂಬಿದಾಗ ಮತ್ತೆ ಹರಿಯುತ್ತದೆ. ಇದು ಸೃಷ್ಟಿಯಲ್ಲಿ ಸಹಜ ಪ್ರಕ್ರಿಯೆ. ನಿಂತ ನೀರಿನಲ್ಲಿ ಜೊಂಡು, ಕ್ರಿಮಿ, ಕೀಟಗಳು ಹುಟ್ಟಿ ನೀರು ಕುಡಿಯದಂತಾಗುತ್ತದೆ. ಆ ನೀರಿಗೆ ದಾರಿ ಮಾಡಿಕೊಟ್ಟರೆ ಮತ್ತೆ ಶುಭ್ರವಾಗಿ ಹರಿಯುತ್ತದೆ. ಸುಪ್ರೀಂ ಕೋರ್ಟ್‌ನ ಒಳ ಮೀಸಲಾತಿಯ ತೀರ್ಪು ಜೊಂಡುಗಟ್ಟಬಹುದಾಗಿದ್ದ ನೀರನ್ನು ಮತ್ತೆ ಹರಿಯುವಂತೆ ಮಾಡಿದೆ.
ಇಲ್ಲಿಗೆ ಒಳ ಮೀಸಲಾತಿಯ ಸಮಸ್ಯೆಗಳು ತೀರಿದವು ಎಂದರ್ಥವಲ್ಲ. ನಿಜವಾದ ಸಮಸ್ಯೆ ಮುಂದಿನ ವರ್ಗೀಕರಣದ ಪ್ರಕ್ರಿಯೆಯಲ್ಲಿದೆ. ರಾಜ್ಯ ಸರ್ಕಾರ - ರಾಜಕಾರಣಿಗಳ ನಡುವೆ ಹಾಗೂ ಫಲಾನುಭವಿಗಳ ನಡುವೆ ನಡೆವ ಚರ್ಚೆ ರಂಗೇರಬಹುದಾದರೂ ಇದಕ್ಕೆ ಸ್ವಯಂಕೃತ ಕಡಿವಾಣ ಅಗತ್ಯ. ಇಲ್ಲವಾದಲ್ಲಿ ನಮ್ಮ ವಿರುದ್ಧ ನಾವೇ ಹೋರಾಟಕ್ಕಿಳಿದಂತಾಗುತ್ತದೆ. ನಮ್ಮ ವಿವೇಚನೆಯೇ ನಮ್ಮನ್ನು ಕಾಯುವ ಕಾಲವಿದು.
ಮೊದಲನೆಯದಾಗಿ, ಒಳ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದ್ದಕ್ಕೆ ಹಾಗೂ ವರ್ಗೀಕರಣ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಹೇಳಿದ್ದಕ್ಕೆ ನಾವು ಒಮ್ಮತದಿಂದ ಸಂಭ್ರಮಿಸಬೇಕು. ಕರ್ನಾಟಕ ಸರ್ಕಾರ ಒಳ ಮೀಸಲಾತಿಯ ಹಂಚಿಕೆಗೆ ಬದ್ಧವಿರುವುದಾಗಿ ಹೇಳಿದ್ದು, ಅದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು.
ಒಳ ಮೀಸಲಾತಿಯ ವರ್ಗೀಕರಣದ ವಿಧಾನಕ್ಕೆ ಸಂಬಂಧಿಸಿ ಭಿನ್ನಾಭಿಪ್ರಾಯಗಳೇಳುತ್ತವೆ. ಈಗಾಗಲೇ ಕಾಂಗ್ರೆಸ್ ಸರ್ಕಾರದ ಮಾದರಿ ಹಾಗೂ ಬಿಜೆಪಿ ಸರ್ಕಾರದ ಮಾದರಿಗಳಿದ್ದು, ಅವು ಅಧಿಕೃತವಾಗಿ ಸಂಯಮದ ಚರ್ಚೆಗೆ ಒಳಗಾಗಬೇಕು. ಅದಕ್ಕಾಗಿ ಹಳೆಯ ಗಾಯಗಳನ್ನು ಕಿತ್ತು ಹೊಸ ಗಾಯಗಳನ್ನು ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಮತ್ತೊಂದು ಸಂಗತಿ ಎಂದರೆ, ಈಗಾಗಲೇ ಪರಿಶಿಷ್ಟ ಜಾತಿಯಲ್ಲಿರುವ ಅಸ್ಪೃಶ್ಯ ಮತ್ತು ಸ್ಪೃಶ್ಯ ಸಮುದಾಯವೆಂದು ಭೇದಗಳನ್ನು ಮಾಡುತ್ತಾ ಬಿರುಕನ್ನು ದೊಡ್ಡದಾಗಿಸುವುದಕ್ಕಿಂತ ಇಬ್ಬರೂ ಸಂಯಮದ ವಿವೇಚನೆಯಿಂದ ನಡೆದುಕೊಳ್ಳಬೇಕು.
ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಫಲಾನುಭವಿಯಾಗಬೇಕೆಂಬುದೇ ಒಳ ಮೀಸಲಾತಿಯ ಮೂಲಭೂತ ಆಶಯ. ಹೀಗಾಗಿ, ‘ಪರಿಶಿಷ್ಟ ಜಾತಿಯ ಒಳಗಿರುವ ಬಲಿಷ್ಠ ಜಾತಿಗಳೂ ಸಂಯಮ ಹಾಗೂ ಔದಾರ್ಯದಿಂದ, ಸಮಗ್ರ ಜಾತಿ ಸಮುದಾಯಗಳನ್ನು ಮುಂದೆ ಕರೆದೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ’ ಎಂಬ ಅರಿವು ತಂದುಕೊಳ್ಳಬೇಕು.
ಜಾತಿ, ಜನಸಂಖ್ಯೆ ಹಾಗೂ ಹಿಂದುಳಿಯುವಿಕೆಯ ಆಧಾರದ ಮೇಲೆ ವರ್ಗೀಕರಣ ಅನಿವಾರ್ಯ. ಆದರೆ, ಇಲ್ಲಿ ಹಿಂದುಳಿಯುವಿಕೆಯ ಆಧಾರಕ್ಕೆ ಆದ್ಯತೆ ಕೊಡಬೇಕು. ಹೀಗಾದಲ್ಲಿ ಒಳ ಮೀಸಲಾತಿಯ ಮೂಲ ಆಶಯ ಈಡೇರುತ್ತದೆ ಮತ್ತು ದ್ವೇಷಾಸೂಯೆಗಳನ್ನು ಮರೆತು ಸಮಗ್ರ ಸಮುದಾಯಗಳಲ್ಲಿ ಐಕ್ಯತೆ ಮೂಡಿಸಲು ಸಾಧ್ಯ.
ಒಳ ಮೀಸಲಾತಿಯ ಸಮೂಹಗಳನ್ನಾಗಿ ವರ್ಗೀಕರಿಸಿದ ಜಾತಿಗಳ ಪಟ್ಟಿಯ ಸಂಖ್ಯೆಯಲ್ಲಿ ತೆಗೆಯುವ, ಸೇರಿಸುವ ಕ್ರಿಯೆಯಾಗಬಹುದು ಅಥವಾ ಸಮೂಹಗಳಿಗೆ ನಿಗದಿಪಡಿಸಿದ ಶೇಕಡಾವಾರು ಮೀಸಲಿನ ಸಂಖ್ಯೆಯಲ್ಲಿ ವ್ಯತ್ಯಾಸಗಳಾಗಬಹುದು. ನಮಗೆ ಒಳ ವರ್ಗಿಕರಣವೇ ದೊಡ್ಡ ಸಮಸ್ಯೆಯಾಗಬಾರದು. ಅದಕ್ಕಿಂತಲೂ ದೊಡ್ಡ ಸಮಸ್ಯೆಗಳು ನಮ್ಮ ಮುಂದಿರುವುದರಿಂದ, ಮುಂದಿನ ಹೋರಾಟಗಳಿಗೆ ಇದು ಸಕಾರಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗುವಂತಿರಬೇಕು. ತಳಜಾತಿಗಳಲ್ಲಿ ರಾಜಕೀಯ ಅರಿವನ್ನು ತುಂಬಿ ಪರಸ್ಪರ ಸಹಕಾರದೊಂದಿಗೆ ಆಯಾ ಕ್ಷೇತ್ರಗಳಲ್ಲಿ ಹೋರಾಡುವ ಸಂಯುಕ್ತವಾದ ಬಾಳಿಗೆ ನಾವು ಹೊಸ ಮುನ್ನುಡಿ ಬರೆಯಬೇಕು.
ಗ್ರಾಮೀಣ ವ್ಯವಸ್ಥೆಯಲ್ಲಿ ಜಾತಿಯ ಗೋಡೆಗಳನ್ನು ದಾಟುವ ಕ್ರಿಯೆ ಅಧಿಕೃತವಾಗಿ ಪರಿಶಿಷ್ಟ ಜಾತಿಗಳಲ್ಲಿ ನಡೆಯಲಿಲ್ಲ ಮತ್ತು ಭಾವನಾತ್ಮಕ ಸಂಬಂಧಗಳು ಮೀರಿ ಬೆಳೆಯದೆ ಹೋದವು. ದಲಿತ ಸಂಘಟನೆಗಳು ಒಡೆದ ಕನ್ನಡಿಯಾದಾಗ ಜಾತಿ ಸಂಘಟನೆಗಳು ತಲೆಯೆತ್ತಿದವು. ಹೀಗಾಗಿ ‘ದಲಿತರಲ್ಲಿಯ ಅಖಂಡತ್ವ ಒಡೆಯುತ್ತದೆ’ ಎನ್ನುವುದು ಕೇವಲ ಗ್ರಹಿಕೆಯಾಗಿತ್ತು ಎನಿಸುತ್ತದೆ.
ಒಳ ವರ್ಗೀಕರಣದಿಂದ ಊಟದ ತಟ್ಟೆಗಳು ಬೇರೆಯಾಗಬಹುದೇ ವಿನಾ ಮನೆಯೇ ಒಡೆದಿದೆ ಎಂದರ್ಥವಲ್ಲ. ಜಾತಿಯ ಗೋಡೆಗಳು ನಮ್ಮ ನಡುವೆ ಜೀವಂತವಾಗಿವೆ. ಸುಪ್ರೀಂ ಕೋರ್ಟ್ ಇದನ್ನೇ ಇನ್ನೊಂದು ಪರಿಭಾಷೆಯಲ್ಲಿ ಹೇಳಿದೆ. ಹೀಗಿದ್ದಾಗಲೂ ನಾವೆಲ್ಲ ಅಸ್ಪೃಶ್ಯರು, ಶೋಷಿತರಾಗಿದ್ದು ‘ಮೀಸಲಾತಿ’ಯೇ ಮಂತ್ರದಂಡವಾಗಿಸಿ ಏಕತೆಯ ಸೂತ್ರವನ್ನಾಗಿಸಿಕೊಂಡಿದ್ದೆವು. ಈಗಲೂ ಆ ಸೂತ್ರವನ್ನೇ ಮುಂದಿಟ್ಟುಕೊಳ್ಳಬೇಕು. ಭ್ರಾತೃತ್ವ ಭಾವದ ಐಕ್ಯತೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಅವಕಾಶಗಳಿವೆ. ವರ್ಗೀಕರಣದ ಸಂದರ್ಭದಲ್ಲಿ ನಾವು ಹೇಗೆ ವರ್ತಿಸುತ್ತೇವೆ ಎಂಬುದನ್ನು ಇದು ಅವಲಂಬಿಸಿದೆ.
ಸುಪ್ರೀಂ ಕೋರ್ಟ್‌ನ ತೀರ್ಪಿನ ಅನ್ವಯ ‘ಕೆನೆಪದರ’ದ ಪ್ರಶ್ನೆ, ಒಳ ಮೀಸಲಾತಿಯ ಹಂಚಿಕೆಗೆ ಮೂಲಭೂತವಾಗಿ ಬಾಧಕವಾಗಿಲ್ಲ. ಹೀಗಾಗಿ, ಇಂದಿನ ಸಂದರ್ಭದಲ್ಲಿ ಕೆನೆಪದರದ ಪ್ರಶ್ನೆ ಹಿಂದುಳಿಯುತ್ತದೆ. ಮೇಲಾಗಿ ಪರಿಶಿಷ್ಟ ವರ್ಗದಲ್ಲಿ ಕೆನೆಪದರಿಗಿಂತ; ನೊರೆಪದರ ಅಧಿಕವಾಗಿದೆ ಎನ್ನುವ ಅರಿವು ನಮ್ಮಲ್ಲಿರಬೇಕು.
ಕರ್ನಾಟಕದಲ್ಲಿ ಒಳ ಮೀಸಲಾತಿಯ ಸಮಸ್ಯೆಯು ಎಡ - ಬಲದ ಎರಡು ಪ್ರಬಲ ಜಾತಿಗಳಿಂದ ಆಗಿದೆ. ವರ್ಗೀಕರಣದ ಹಂಚಿಕೆಯಲ್ಲಿ ಹೆಚ್ಚು ಚೌಕಾಸಿಗೆ ಆಸ್ಪದ ಮಾಡಿಕೊಡದೆ, ತಮಗಿಂತಲೂ ತಳದಲ್ಲಿರುವ ಜಾತಿಗಳು ಮೇಲೆ ಬರಲಿ ಎಂಬ ಸದಾಶಯದಿಂದ ನೋಡಬೇಕು. ಕಾನ್ಶಿರಾಂ ಅವರು ಹೇಳುವಂತೆ, ‘ನಮ್ಮದು ಬೇಡುವ ಕೈಯಾಗದೆ ಕೊಡುವ ಕೈಯಾಗಬೇಕು’. ಇದರರ್ಥ, ಅಸ್ಪೃಶ್ಯ ವರ್ಗ ಅಖಂಡ ರಾಜಕೀಯ ಶಕ್ತಿಯಾಗಿ ಎದ್ದು ನಿಲ್ಲುವ ಕಡೆಗೆ ಮುಖ ಮಾಡಬೇಕು.
ಉತ್ತರ ಪ್ರದೇಶಕ್ಕಿಂತ ಮೊದಲೇ ಕರ್ನಾಟಕದಲ್ಲಿ ದಲಿತ ಸಂಘಟನೆ ಕಾಣಿಸಿಕೊಂಡರೂ ಅದರ ಮಟ್ಟಕ್ಕೆ ಏರುವಲ್ಲಿ ಸೋತಿದ್ದರ ಕಾರಣಗಳನ್ನು ಈಗಲಾದರೂ ಅರಿತುಕೊಂಡು ಕಾರ್ಯಾಚರಣೆಗೆ ಇಳಿಯಬೇಕು.
‘ಎಡ’ದವರು ಬಿಜೆಪಿ ಸೇರಿದ್ದರಿಂದ ದಲಿತ ಸಂಘಟನೆ ಶಕ್ತಿಹೀನವಾಯಿತು’ ಎನ್ನುವುದಿದೆ. ‘ಎಡದವರು ತಾವಾಗಿಯೇ ಬಿಜೆಪಿ ಸೇರಿದರೊ ಅಥವಾ ಅವರನ್ನು ನಾವಾಗಿಯೇ ಆ ಕಡೆಗೆ ತಳ್ಳಿದವೊ’ ಎಂದು ನಮ್ಮೊಳಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದಾಗದಿದ್ದರೆ, ತಳಜಾತಿಯವರನ್ನು ನಮ್ಮವರೆಂದು ಅಪ್ಪಲಾಗದು. ಪರಿಶಿಷ್ಟ ಜಾತಿ ಎಂದು ಒಂದೇ ಸಮೂಹವಿದ್ದಾಗಲೇ ಒಡೆದು ಆಳಿದ ರಾಜಕೀಯ ಪಕ್ಷಗಳು, ಇನ್ನೂ ಹೆಚ್ಚಿನ ಗುಂಪುಗಳಾದಾಗ ಒಡೆದು ಆಳುವುದು ಇನ್ನಷ್ಟು ಸುಲಭವಾಗುತ್ತದೆ. ಹೀಗಾಗಿ ವರ್ಗೀಕರಣದ ಆಂತರಿಕ ಸಮಸ್ಯೆಗಳು ಏನೇ ಇದ್ದರೂ, ಹಿತಮಿತದಲ್ಲಿಯೇ ಅರಗಿಸಿಕೊಳ್ಳುವ ಅಗತ್ಯವಿದೆ. ಇಲ್ಲವಾದಲ್ಲಿ ಮೀಸಲಾತಿಯ ಈ ಟೈಟಾನಿಕ್ ಹಡಗು ನಮ್ಮವರಿಂದಲೇ ಆದ ತೂತುಗಳಿಂದ ನೀರು ತುಂಬಿ ಮುಳುಗಿ ಹೋಗುವ ಸ್ವರೂಪಕ್ಕೆ ಬರಬಹುದು.
ಉತ್ತರ ಭಾರತದ ಬಹು ರಾಜ್ಯಗಳು ಒಳ ಮೀಸಲಾತಿಯನ್ನು ವಿರೋಧಿಸುತ್ತವೆ. ಚಮ್ಮಾರರೇ ಪ್ರಬಲ ಜಾತಿಯವರೆಂದು ಅಲ್ಲಿ ಗುರುತಿಸಿಕೊಂಡ ಪರಿಣಾಮದಿಂದಾಗಿ, ಒಳ ಮೀಸಲಾತಿಗಾಗಿ ಅಲ್ಲಿ ಹೋರಾಡಿದ್ದು ಕಡಿಮೆ. ಉತ್ತರ ಭಾರತಕ್ಕೂ, ದಕ್ಷಿಣ ಭಾರತಕ್ಕೂ ಚರ್ಮಕಾರರ ಸ್ಥಿತಿಗತಿಗಳಲ್ಲಿ ವ್ಯತ್ಯಾಸವಿರುವುದನ್ನು ಅರಿಯಬೇಕು.
ಮೀಸಲಾತಿಯಲ್ಲಿ ಒಂದು ಸಮುದಾಯವನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಿದ ಮೇಲೆ ಒಳಜಾತಿಗಳನ್ನು ಕೇಳುವುದು ಅಪರಾಧ ಎನ್ನುವ ನಡೆ ಕಾನೂನಾಗಿದ್ದಲ್ಲಿ ಒಗ್ಗಟ್ಟು ತಾನಾಗಿಯೇ ಸೃಷ್ಟಿಯಾಗುತ್ತಿತ್ತು. ಅಂತಹ ಅವಕಾಶವನ್ನು ಕಳೆದುಕೊಂಡಿದ್ದೇವೆ. ಜಾತಿಯನ್ನು ವಿರೋಧಿಸುತ್ತಾ, ಜಾತಿ ಹೆಸರಿನಲ್ಲೇ ಉಸಿರಾಡುತ್ತಿದ್ದೇವೆ.
ಈಗಾಗಲೇ ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯಗಳು ನೀರು ಪಾಲಾಗಿವೆ. ನೌಕರರ ಕ್ಷೇತ್ರದಲ್ಲಿಯೂ ಸ್ಥಿತಿ ಹೇಳಿಕೊಳ್ಳುವಂತಿಲ್ಲ. ಜನಸಂಖ್ಯೆ ಆಧಾರದಲ್ಲಿ ನಡೆಯುವ ವರ್ಗೀಕರಣದಿಂದಾಗಿ ರಾಜಕೀಯ ಧ್ರುವೀಕರಣವಾಗಲಿದೆ. ಇದರಿಂದ, ಉತ್ತರ ಭಾರತದವರೇ ಮೇಲುಗೈ ಸಾಧಿಸಲಿದ್ದಾರೆ ಎಂಬ ಊಹೆಗಳಿವೆ.
ಇನ್ನೊಂದು ರೀತಿ ಆಲೋಚಿಸಿದರೆ, ಈ ಒಳ ಮೀಸಲಾತಿಯ ಒಡೆದು ಹಂಚುವ ಕ್ರಿಯೆ, ಇದೇ ಅಂತಿಮವಾದುದ್ದಲ್ಲ. ಇದಕ್ಕೆ ಅಂತ್ಯವೆನ್ನುವುದೂ ಇಲ್ಲ. ಆರಂಭದಲ್ಲಿ ಹೇಳಿದಂತೆ, ಇದು ಹರಿಯುವ ನೀರಂತಿರಬೇಕು ಮತ್ತು ಕಾಲಕಾಲಕ್ಕೆ ಆರೋಗ್ಯಕರ ಮಾರ್ಗವನ್ನು ಅನುಸರಿಸುವಂತಾಗಬೇಕು. ಹೀಗಾಗಿ ಯಾವುದಕ್ಕೂ ಹೆಚ್ಚು ಜೋತು ಬೀಳುವುದರಲ್ಲಿ ಅರ್ಥವಿಲ್ಲ.
ಲೇಖಕ: ಕವಿ, ವಿಮರ್ಶಕ
ಪರಿಶಿಷ್ಟ ಜಾತಿಯೊಳಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹಂಚುವ ಮೂಲಕ ಎಲ್ಲರಿಗೂ ಪಾಲು ನೀಡುವುದು ಮತ್ತು ಸಮಾನವಾಗಿ ಹಂಚಿ ಉಣ್ಣುವ ನ್ಯಾಯಕ್ರಮವೇ ಒಳ ಮೀಸಲಾತಿ ಎಂದು ಸರಳವಾಗಿ ಹೇಳಬಹುದು.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಲ್ಲೇ ಗರಿಷ್ಠ ಶೇ 39ರಷ್ಟು ಪ್ರಮಾಣದಲ್ಲಿರುವ ಮಾದಿಗ ಮತ್ತು ಸಂಬಂಧಿತ ಸಮುದಾಯಗಳು ಒಳ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಈಗ ತಾರ್ಕಿಕ ಅಂತ್ಯ ತಲುಪಿದೆ. ಸುಪ್ರೀಂ ಕೋರ್ಟ್‌ನ ತೀರ್ಪು ಪರಿಶಿಷ್ಟ ಜಾತಿಗಳ ಪಾಲಿಗಷ್ಟೇ ಒಳ ಮೀಸಲಾತಿಯ ಮಹಾಮಾರ್ಗವಾಗಿರದೆ, ಇತರೆ ಹಿಂದುಳಿದ, ಶೋಷಿತ ಜನಜಾತಿಗಳ ಪಾಲಿಗೂ ವಿಸ್ತರಿಸಿಕೊಳ್ಳಬಹುದಾದ ಕರಾರುವಾಕ್ಕಾದ ಮಾದರಿಯೂ ಆಗಬಲ್ಲದು.
ಒಳ ಮೀಸಲಾತಿ ಅಳವಡಿಸುವಾಗ ಸಮರ್ಪಕ ದತ್ತಾಂಶವಿರಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವು ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಒಂದು ಸವಾಲು ಎಂದು ಅನಿಸುವುದಿಲ್ಲ. ಸದಾಶಿವ ಆಯೋಗದ ವರದಿಯು ಅಂತಹ ಸಮರ್ಪಕ ದತ್ತಾಂಶವನ್ನು ಹೊಂದಿದೆ. ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರವೇ ನಡೆಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಒಳಮೀಸಲು ಹಂಚಿಕೆಗೆ ಬಳಸಿಕೊಳ್ಳುವ ಅವಕಾಶವೂ ಇದೆ. ಇದನ್ನು ಸರ್ಕಾರ ಕೈಚೆಲ್ಲಬಾರದು.
ಒಳ ಮೀಸಲಾತಿ ಒಂದು ರಾಜಕೀಯ ಸಮಸ್ಯೆಯಲ್ಲ; ಅದೊಂದು ಸಾಮಾಜಿಕ ಸಮಸ್ಯೆ. ಇದನ್ನು ಇತ್ಯರ್ಥಪಡಿಸಲು ರಾಜಕೀಯ ಬದ್ಧತೆ ಬೇಕಿದೆಯಷ್ಟೆ. ರಾಜಕೀಯ ಪಕ್ಷಗಳು ಎಲ್ಲಾ ಕಾಲಕ್ಕೂ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಲೇ ಬಂದಿವೆ. ಮೀಸಲಾತಿ ಬೇಕು ಎನ್ನುವವರು ಒಳ ಮೀಸಲಾತಿಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. ಒಳ ಮೀಸಲಾತಿಯನ್ನು ವಿರೋಧಿಸುವವರು ಮೀಸಲಾತಿಯಿಂದ ಮೊದಲು ಹೊರಹೋಗಬೇಕಾಗುತ್ತದೆ.
ಒಕ್ಕೂಟ ಸರ್ಕಾರಕ್ಕೆ ಇದ್ದ ಒಳ ಮೀಸಲು ಅಧಿಕಾರವನ್ನು ರಾಜ್ಯ ಸರ್ಕಾರಗಳ ಕೈಗೆ ಹಸ್ತಾಂತರಿಸುವ ಮೂಲಕ ಸುಪ್ರೀಂ ಕೋರ್ಟ್, ರಾಜ್ಯಗಳು ಒಕ್ಕೂಟ ಸರ್ಕಾರದ ಮರ್ಜಿಗೆ ಕಾಯುವ, ಬೇಡುವ ವಸಾಹತು ಸ್ಥಿತಿಯಿಂದ ಹೊರಬರುವಂತೆ ಮಾಡಿದೆ. ಒಳ ಮೀಸಲಾತಿ ಕುರಿತು ‘ಸುಪ್ರೀಂ’ ತೀರ್ಪಿನಿಂದ 1975, 1994, 1997ರಲ್ಲಿ ಪಂಜಾಬ್, ಹರಿಯಾಣ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಕೈಗೊಂಡ ನಿರ್ಧಾರಗಳಿಗೆ ಬಲ ಬಂದಿದೆ.
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಒಳ ಮೀಸಲಾತಿಯನ್ನು ನ್ಯಾಯ ಮತ್ತು ಆದರ್ಶದ ಪರಿಕ್ರಮದಲ್ಲಿ ಅನುಷ್ಠಾನಗೊಳಿಸುವ ಮೂಲಕ ಬದ್ಧತೆ ತೋರಬೇಕು. ಸಾಮಾಜಿಕ ನ್ಯಾಯವೆಂಬುದು ಕಟ್ಟಕಡೆಯ ದುರ್ಬಲ ವ್ಯಕ್ತಿಗೂ ದಕ್ಕಿದಾಗ ಅದು ಸಾರ್ಥಕಗೊಳ್ಳುತ್ತದೆ. ಮೀಸಲಾತಿಯನ್ನು ಪಡೆಯುವಾಗ ಇದ್ದ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಪ್ರತಿಪಾದನೆ ಒಳ ಮೀಸಲಾತಿ ವಿಷಯದಲ್ಲೂ ಇರಬೇಕಾಗುತ್ತದೆ. ಒಳ ಮೀಸಲಾತಿಯನ್ನು ವಿರೋಧಿಸುವವರು ಅಂತಿಮವಾಗಿ ಮೀಸಲಾತಿಯ ವಿರೋಧಿಗಳೂ ಆಗಿರುತ್ತಾರೆ.
–ಎನ್.ರವಿಕುಮಾರ್, ಪತ್ರಕರ್ತ
ಪರಿಶಿಷ್ಟ ಜಾತಿಗಳ ಮೀಸಲಾತಿಯು ಸಾಮಾಜಿಕವಾಗಿ ನೂರಾರು ವರ್ಷಗಳಿಂದ ಶೋಷಣೆಗೆ ಒಳಗಾದ ಸಮುದಾಯಗಳಿಗೆ ನೀಡಿರುವ ಒಂದು ಸವಲತ್ತು. ಈ ಸಮುದಾಯಗಳು ಸಮಾಜದಲ್ಲಿ ಮುನ್ನೆಲೆಗೆ ಬರಬೇಕು; ಅದರ ಮೂಲಕ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಮೆಟ್ಟಿ ಹೊರಬರಬೇಕು ಎನ್ನುವುದು ಅದರ ಆಶಯ. ಒಳ ಮೀಸಲಾತಿಯ ಗುರಿಯೂ ಇದೇ ಆಗಿದೆ.
ಪರಿಶಿಷ್ಟ ಜಾತಿಯಲ್ಲಿನ ಕೆಲವು ಸಮುದಾಯಗಳು ಸಾಮಾಜಿಕವಾಗಿ ಉಳಿದ ಪರಿಶಿಷ್ಟ ಜಾತಿಗಳಿಗಿಂತ ಹಿಂದುಳಿದಿವೆ ಎಂಬುದು ನಮ್ಮೆಲ್ಲರ ಕಣ್ಣಿಗೆ ರಾಚುವಂತಹ ಸತ್ಯವಾಗಿದೆ. ಇದನ್ನು ಕೂಲಂಕಷವಾಗಿ ಪರಿಗಣಿಸಿಯೇ ಸುಪ್ರೀಂ ಕೋರ್ಟ್ ಒಳಮೀಸಲಾತಿಯನ್ನು ರಾಜ್ಯ ಸರ್ಕಾರಗಳು ಜಾರಿಮಾಡಬಹುದೆಂಬ ತೀರ್ಪು ನೀಡಿರುವುದು. ಸಾಮಾಜಿಕ ನ್ಯಾಯವನ್ನು ಒಪ್ಪುವ ಯಾವುದೇ ಸರ್ಕಾರ ಮೊದಲು ಒಳಮೀಸಲಾತಿಯನ್ನು ಜಾರಿ ಮಾಡಬೇಕಿದೆ. ಈ ಮೂಲಕ ಕರ್ನಾಟಕ ಸರ್ಕಾರ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿ.
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಸಂವಿಧಾನ ರಚನೆಯ ವಿಚಾರದಲ್ಲಿ ಅಷ್ಟು ಶ್ರಮಿಸಿದ್ದು ಇದೇ ಆಶಯಕ್ಕೆ ಎಂಬುದನ್ನು ಸರ್ಕಾರಗಳು ಎಂದಿಗೂ ಮರೆಯಬಾರದು. ಒಳಮೀಸಲಾತಿ ಜಾರಿ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಕ್ಕೆ ಮತ್ತು ಸಂವಿಧಾನಕ್ಕೆ ತೋರುವ ಅಗೌರವವಾಗಿದೆ.
–ಚಂದ್ರು ತರಹುಣಿಸೆ, ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.