ADVERTISEMENT

ಅನುಭವ ಮಂಟಪ | ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಲಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 0:29 IST
Last Updated 15 ಅಕ್ಟೋಬರ್ 2024, 0:29 IST
ಎಚ್‌.ಕೆ. ಕುಮಾರಸ್ವಾಮಿ
ಎಚ್‌.ಕೆ. ಕುಮಾರಸ್ವಾಮಿ   

ದಲಿತರೂ ಸೇರಿದಂತೆ ಅವಕಾಶ ವಂಚಿತ ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿ ನೀಡಬೇಕು ಎನ್ನುವುದಕ್ಕೆ ನಮ್ಮ ಸಹಮತವಿದೆ. ಒಳ ಮೀಸಲಾತಿ ಜಾರಿಗೊಳಿಸುವ ಸಂಪೂರ್ಣ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎನ್ನುವುದನ್ನು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ. ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ರಾಜ್ಯ ಸರ್ಕಾರಗಳು ಒಳ ಮೀಸಲಾತಿ ಜಾರಿ ಮಾಡಲು ಕೇಂದ್ರದ ಅನುಮತಿ ಪಡೆಯುವ ಅಗತ್ಯವಿಲ್ಲ. ಹಾಗಾಗಿ, ಹಾದಿ ಸುಗಮವಾಗಿದೆ.

ಒಳ ಮೀಸಲಾತಿ ಜಾರಿಗೆ ಇದ್ದ ಎಲ್ಲ ಅಡೆತಡೆಗಳೂ ಈಗ ನಿವಾರಣೆಯಾಗಿದ್ದರೂ, ಒಳಮೀಸಲಾತಿ ನೀಡುವ ಮೊದಲು ಇಡೀ ರಾಜ್ಯದಲ್ಲಿನ ಪರಿಶಿಷ್ಟ ಸಮುದಾಯದಲ್ಲಿರುವ ಎಲ್ಲ ಜಾತಿಯವರ ಜನಸಂಖ್ಯೆಯ ವಿವರಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಬೇಕಿದೆ. ಜಾತಿವಾರು ಜನಸಂಖ್ಯೆಯನ್ನು ಖಚಿತಪಡಿಸಿಕೊಳ್ಳದೇ ನೀಡುವ ಒಳ ಮೀಸಲಾತಿ ಇನ್ನಷ್ಟು ಸಮಸ್ಯೆಗಳನ್ನು ಹುಟ್ಟುಹಾಕುವ ಸಾಧ್ಯತೆ ಇರುತ್ತದೆ. ಹಾಗಾಗಿ, ರಾಜ್ಯ ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬೇಕು. ರಾಜ್ಯದಲ್ಲಿ 101 ಪರಿಶಿಷ್ಟ ಜಾತಿಗಳಿವೆ. ಎಲ್ಲ ಜಾತಿಗಳಿಗೂ ಸೂಕ್ತ ನ್ಯಾಯ ಸಿಗುವಂತೆ ಕ್ರಮ ಕೈಗೊಳ್ಳಬೇಕು.

ಯಾವುದೇ ಒಂದು ಜಾತಿ ಮೀಸಲಾತಿ ಸೌಲಭ್ಯ ಬಳಸಿಕೊಳ್ಳುವುದರಲ್ಲಿ ಎಷ್ಟು ಪ್ರಮಾಣದಲ್ಲಿ ಹಿಂದುಳಿದಿದೆ, ಅದಕ್ಕೆ ಕಾರಣವಾದ ಅಂಶಗಳು, ಜನಸಂಖ್ಯೆ ಪ್ರಮಾಣ, ಶೈಕ್ಷಣಿಕ ಮಟ್ಟ, ಸರ್ಕಾರಿ ಉದ್ಯೋಗ ಪಡೆದವರ ಸಂಖ್ಯೆಯನ್ನು ವೈಜ್ಞಾನಿಕ ಸಮೀಕ್ಷೆಯ ಆಧಾರದಲ್ಲಿ ಸಂಗ್ರಹಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.

ADVERTISEMENT

ಒಳ ಮೀಸಲಾತಿ ಕುರಿತು ಅಧ್ಯಯನ ನಡೆಸಲು ರಚಿಸಿದ್ದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಾಗಲಿ, ರಾಜ್ಯ ಸರ್ಕಾರ ಹಿಂದೆ ಕೈಗೊಂಡ ಜಾತಿ ಗಣತಿಯಾಗಲಿ ಇಂದು ಅಪ್ರಸ್ತುತವೆನಿಸುತ್ತವೆ. ದಶಕದ ಹಿಂದೆ ಮಾಡಿದ ಸದಾಶಿವ ಆಯೋಗದ ಶಿಫಾರಸು ಈಗ ಮೌಲ್ಯ ಕಳೆದುಕೊಂಡಿದೆ. ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ಜಾತಿ ಗಣತಿಯಲ್ಲಿನ ಅಂಕಿಅಂಶಗಳು ಈಗ ಹಳತಾಗಿದ್ದು, ಈಗಿನ ಸಂದರ್ಭಕ್ಕೆ ಸೂಕ್ತವೆನಿಸದು. 

ರಾಜ್ಯ ಸರ್ಕಾರ ಜಾತಿಗಳ ನಿಖರ ಅಂಕಿಅಂಶಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಬೇಕು. ನಂತರ ಒಳ ಮೀಸಲಾತಿಯ ಕುರಿತು ಖಚಿತ ನಿರ್ಧಾರ ತೆಗೆದುಕೊಳ್ಳಬೇಕು. ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಚುನಾವಣಾ ಸಮಯದಲ್ಲಿ ರಾಜಕೀಯ ಕಾರಣಗಳಿಗಾಗಿ ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರಗಳಿಂದ ಆಗಿದ್ದ ಪರಿಣಾಮಗಳನ್ನೂ ಕಾಂಗ್ರೆಸ್‌ ಸರ್ಕಾರ ಅರಿತುಕೊಳ್ಳಬೇಕು. 

ಲೇಖಕ: ಜೆಡಿಎಸ್‌ ರಾಜ್ಯ ಘಟಕದ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.