ADVERTISEMENT

ಆಳ–ಅಗಲ | 24 ಗಂಟೆ ಗಣಿಗಾರಿಕೆ: ಅರಣ್ಯ, ಪರಿಸರ ವ್ಯವಸ್ಥೆಗೆ ತೀರ್ಮಾನ ಮಾರಕವೇ?

ಎಸ್.ರವಿಪ್ರಕಾಶ್
Published 10 ನವೆಂಬರ್ 2024, 23:37 IST
Last Updated 10 ನವೆಂಬರ್ 2024, 23:37 IST
   
ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನಗಳ ವ್ಯಾಪ್ತಿಯಿಂದ ಹೊರಗಿಡಲು ಕಾಯ್ದೆಗೆ ತಿದ್ದುಪಡಿ ಮತ್ತು ಜೀವ ವೈವಿಧ್ಯ ಹಾಗೂ ವನ್ಯಜೀವಿ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ದಿನ 24 ಗಂಟೆಗಳೂ ಗಣಿಗಾರಿಕೆ ನಡೆಸಲು ಅನುಮತಿ ನೀಡುವ ಪ್ರಸ್ತಾವಗಳಿಗೆ ಇದೇ 14ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದರೆ, ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪೂರಕವಾಗಿ ಮಸೂದೆಗಳು ಮಂಡನೆ ಆಗಲಿವೆ. ಇವೆರಡರ ಪರಿಣಾಮ ಕರ್ನಾಟಕದ ಶ್ರೀಮಂತ ಅರಣ್ಯ, ಜೀವವೈವಿಧ್ಯ, ವನ್ಯಜೀವಿ ಮತ್ತು ಪರಿಸರ ವ್ಯವಸ್ಥೆ ದೊಡ್ಡ ಮಟ್ಟದ ಗಂಡಾಂತರಕ್ಕೆ ಸಿಲುಕಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ದಶಕದ ಹಿಂದೆ ಆದ ಅನಾಹುತ ಇಡೀ ರಾಜ್ಯಕ್ಕೆ ವ್ಯಾಪಿಸಲಿದೆ ಎಂಬ ಆತಂಕ ಪರಿಸರ ಪ್ರೇಮಿಗಳಿಂದ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್‌ 30ರಂದು ನಡೆದ ಅರಣ್ಯ ಮತ್ತು ಗಣಿ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆದಿತ್ತು. ಈ ಎರಡೂ ವಿಷಯಗಳ ಸಂಬಂಧ ಪ್ರಸ್ತಾವ ಮಂಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸಿದ್ದರಾಮಯ್ಯ ಸ್ಪಷ್ಟ ನಿರ್ದೇಶನ ನೀಡಿದ್ದರು. ಮುಖ್ಯಮಂತ್ರಿ ಅವರ ನಿರ್ದೇಶನದಂತೆ ಪ್ರಸ್ತಾವ ಮಂಡಿಸಬೇಕೇಂಬ ಸೂಚನೆಯೊಂದಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಅರಣ್ಯ ಇಲಾಖೆ ಹೆಚ್ಚುವರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಟಿಪ್ಪಣಿ ಕಳುಹಿಸಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅನುಪಸ್ಥಿತಿಯಲ್ಲಿ ಈ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ರಾಜ್ಯದಲ್ಲಿ ಗಣಿ ಬಾಬ್ತಿನಿಂದ ನಿರೀಕ್ಷಿತ ಪ್ರಮಾಣದಲ್ಲಿ ರಾಜಸ್ವ ಸಂಗ್ರಹವಾಗುತ್ತಿಲ್ಲ. ಗಣಿ ಇಲಾಖೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆದಾಯ ಸಂಗ್ರಹಿಸುವ ಉದ್ದೇಶದಿಂದ ಗಣಿಗಾರಿಕೆಗೆ ಅಡ್ಡಿಯಾಗಿರುವ ಕಠಿಣ ನಿಯಮಗಳನ್ನು ಬದಿಗೆ ಸರಿಸಲು ಸೂಚನೆ ನೀಡಲಾಗಿದೆ. ಗಣಿ ಇಲಾಖೆಯ ಮೂಲಗಳಿಂದ ಈ ವರ್ಷ ₹9,000 ಕೋಟಿ ತೆರಿಗೆ ಸಂಗ್ರಹದ ಗುರಿ ನೀಡಲಾಗಿತ್ತು. ಆದರೆ, ಸದ್ಯಕ್ಕೆ ತೆರಿಗೆ ಸಂಗ್ರಹ ಪ್ರಮಾಣ ಶೇ 46 ದಾಟಿಲ್ಲ. ಹೀಗಾಗಿ ಗಣಿ ಇಲಾಖೆ ಅಧಿಕಾರಿಗಳು ಈ ಎರಡೂ ನಿಯಮಗಳನ್ನು ಸಡಿಲಿಸುವುದು ಅತ್ಯಗತ್ಯವೆಂದು ಬಲವಾಗಿ ಪ್ರತಿಪಾದಿಸಿದಾಗ, ಮುಖ್ಯಮಂತ್ರಿಯವರು ಅದನ್ನು ಒಪ್ಪಿಕೊಂಡಿದ್ದಾರೆ. ‘ಹಲವು ರಾಜ್ಯಗಳಲ್ಲಿ ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನವೆಂದು ಪರಿಗಣಿಸುವುದಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ಅರಣ್ಯ ಉತ್ಪನ್ನ ಎಂದು ಪರಿಗಣಿಸಲಾಗುತ್ತಿದೆ. ಈ ವ್ಯವಸ್ಥೆ ಬದಲಿಸಲು ಪ್ರಸ್ತಾವ ಸಲ್ಲಿಸಿ’ ಎಂದು ಸಿದ್ದರಾಮಯ್ಯ ಅರಣ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

‘ಅರಣ್ಯ ಇಲಾಖೆ ಅಧಿಕಾರಿಗಳು ರಾಜ್ಯದ ಹಿತಾಸಕ್ತಿ ಮತ್ತು ಅಭಿವೃದ್ಧಿಗೆ ಧಕ್ಕೆ ಮಾಡಿದರೆ ಸಹಿಸುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದರು.

ADVERTISEMENT

‘ಗಣಿ ಇಲಾಖೆಯು ಅರಣ್ಯ ಇಲಾಖೆಯೊಂದಿಗಿನ ಗೊಂದಲಗಳನ್ನು ನಿವಾರಿಸಿಕೊಂಡು  ರಾಜಸ್ವ ಸಂಗ್ರಹಣೆಗೆ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗಣಿ ಇಲಾಖೆಯ ರಾಜಸ್ವ ಸಂಗ್ರಹದ ಪ್ರಗತಿಯು ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 54ರಷ್ಟು ಇತ್ತು. ಪ್ರಸಕ್ತ ಸಾಲಿನಲ್ಲಿ ಶೇ 46ರಷ್ಟು ಮಾತ್ರ ಇದೆ. ರಾಜಸ್ವ ಸಂಗ್ರಹಣೆಗೆ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಸಾಲಿನಲ್ಲಿ ರಾಜಸ್ವ ಸಂಗ್ರಹಣೆ ಗುರಿ ₹9,000 ಕೋಟಿ ನಿಗದಿ ಮಾಡಲಾಗಿತ್ತು. ಅಕ್ಟೋಬರ್‌ವರೆಗಿನ ರಾಜಸ್ವ ಸಂಗ್ರಹ ₹4,070.22 ಕೋಟಿ. ಗಣಿಗಾರಿಕೆಗೆ ಸಂಬಂಧಿಸಿದಂತೆ ಗಣಿ ಇಲಾಖೆ ಗುರುತಿಸಿರುವ ಬ್ಲಾಕ್‌ಗಳ ಮಾಹಿತಿ ಪಡೆದು ರಾಜಸ್ವ ಸಂಗ್ರಹ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.

ಕರ್ನಾಟಕ ಅರಣ್ಯ ಕಾಯ್ದೆಗೆ 1980 ಮತ್ತು 1989ರ ನಡುವೆ ಹಲವು ತಿದ್ದುಪಡಿಗಳನ್ನು ತಂದು, ಕೆಲವು ಅರಣ್ಯ ಉತ್ಪನ್ನಗಳ ಮೇಲೆ ಶೇ 12ರಷ್ಟು ತೆರಿಗೆ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ. ಅರಣ್ಯ ಪ್ರದೇಶದಲ್ಲಿ ಗುತ್ತಿಗೆ ಅಥವಾ ಪರವಾನಗಿ ಪಡೆದು ಸಂಗ್ರಹಿಸುವ ಉತ್ಪನ್ನಗಳಿಗೆ ಈ ತೆರಿಗೆ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.

ಅರಣ್ಯ ಉತ್ಪನ್ನದಿಂದ ಕಬ್ಬಿಣದ ಅದಿರು ಹೊರಕ್ಕೆ?

ಅರಣ್ಯ ಉತ್ಪನ್ನದ ಪಟ್ಟಿಯಿಂದ ಕಬ್ಬಿಣದ ಅದಿರನ್ನು ತೆಗೆಯಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನ ಅರಣ್ಯ ಇಲಾಖೆಯಲ್ಲಿ ತಲ್ಲಣ ಸೃಷ್ಟಿಸಿದೆ. ಶೇ 80ರಷ್ಟು ಕಬ್ಬಿಣದ ಅದಿರು ನಿಕ್ಷೇಪಗಳು ವಿವಿಧ ರೀತಿಯ ಅರಣ್ಯಗಳ ವ್ಯಾಪ್ತಿಯಲ್ಲೇ ಬರುತ್ತವೆ.

‘ಕಾಯ್ದೆಗೆ ತಿದ್ದುಪಡಿಯಾದರೆ, ಕಬ್ಬಿಣ ಅದಿರು ಗಣಿಗಾರಿಕೆ ಮತ್ತು ಅಕ್ರಮಗಳಿಗೆ ದಿಡ್ಡಿ ಬಾಗಿಲು ತೆರೆದಂತೆ ಆಗುತ್ತದೆ. ರಾಜಧನದ ಜತೆ ತೆರಿಗೆಯ ಮೂಲಕವೂ ಹೆಚ್ಚು ಆದಾಯ ಗಳಿಸಬಹುದು ಎಂಬ ಉದ್ದೇಶ ಸರ್ಕಾರಕ್ಕೆ ಇರಬಹುದು. ಆದರೆ  ರಾಜ್ಯದ ಅರಣ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಇದು ತಪ್ಪು ನಿರ್ಧಾರ’ ಎನ್ನುತ್ತಾರೆ ನಿವೃತ್ತ ಪಿಸಿಸಿಎಫ್‌ ಪರಮೇಶ್ವರಪ್ಪ.

‘80ರ ದಶಕದಲ್ಲಿ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದಾಗ ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನದ ವ್ಯಾಪ್ತಿಗೆ ತರಲಾಯಿತು. ಇದರಿಂದ ಬೇಕಾಬಿಟ್ಟಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಕಡಿವಾಣ ಬಿದ್ದಿತು ಮತ್ತು ಎಲ್ಲೆಲ್ಲಿ ಗಣಿಗಾರಿಕೆ ಆಗುತ್ತದೆಯೋ ಪರ್ಯಾಯವಾಗಿ ಸಸಿಗಳನ್ನು ನೆಟ್ಟು ಅರಣ್ಯ ಬೆಳೆಸಬೇಕು ಎಂಬ ನಿಯಮವೂ ಜಾರಿಗೆ ಬಂದಿತು. ಹೊಸ ನಿಯಮ ಜಾರಿಗೆ ಬಂದರೆ, ಎಲ್ಲವನ್ನೂ ಗಾಳಿಗೆ ತೂರಿ ಗಣಿಗಾರಿಕೆ ನಡೆಸುವ ಅಪಾಯವಿದೆ’ ಎನ್ನುವುದು ಅವರ ವಾದ.

ಈಶ್ವರ ಖಂಡ್ರೆ ವಿರೋಧ?

ಈ ಎರಡೂ ಪ್ರಸ್ತಾವಗಳ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಸಹಮತವಿಲ್ಲ. ಅವುಗಳನ್ನು ವಿರೋಧಿಸಲು ಮತ್ತು ಅರಣ್ಯ ಇಲಾಖೆಯ ವಾದವನ್ನು ಸಮರ್ಥವಾಗಿ ಮಂಡಿಸಲು
ಟಿಪ್ಪಣಿಯೊಂದನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಯವರು ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದ ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಈ ಬಗ್ಗೆ ಚಕಾರ ಎತ್ತದೇ ಒಪ್ಪಿಕೊಂಡು ಬಂದ ಬಗ್ಗೆ ಅರಣ್ಯ ಇಲಾಖೆಯಲ್ಲಿ ದೊಡ್ಡ ಮಟ್ಟದ ಅಸಮಾಧಾನ ವ್ಯಕ್ತವಾಗಿದೆ ಎಂದು
ಮೂಲಗಳು ತಿಳಿಸಿವೆ.

ಪ್ರಮುಖ ಅರಣ್ಯ ಉತ್ಪನ್ನಗಳು

ಹಣ್ಣುಗಳು, ಬೀಜಗಳು, ಅಣಬೆಗಳು, ಜೇನುತುಪ್ಪ ಮತ್ತು ಖಾದ್ಯ ಎಲೆಗಳು, ಔಷಧೀಯ ಸಸ್ಯಗಳು, ಬಿದಿರು, ರಾಳಗಳು, ಅಂಟುಗಳು, ವಾರ್ನಿಷ್‌ಗಳು, ಇದ್ದಿಲು, ಮರದ ಎಣ್ಣೆ, ತೊಗಟೆ, ಲ್ಯಾಕ್‌, ಸುಗಂಧದ ಹೂವುಗಳು, ಮರಗಳು, ಎಲೆಗಳು, ಹುಲ್ಲು, ಬಳ್ಳಿ, ಕೊಂಬು, ಮೂಳೆ, ಗೂಡು, ರೇಷ್ಮೆ, ಜೇನುಮೇಣ, ಪ್ರಾಣಿ ಉತ್ಪನ್ನಗಳು, ಮೇಲ್ಮೈ ಮಣ್ಣು, ಬಂಡೆಗಳು, ಉಪ ಖನಿಜಗಳು, ಅದಿರುಗಳು, ಖನಿಜ ಎಣ್ಣೆ, ಸುಣ್ಣದ ಕಲ್ಲು, ಲ್ಯಾಟರೈಟ್.

‘ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಬೇಕಾದೀತು’

ರಾಜ್ಯ ಸರ್ಕಾರದ ಈ ಎರಡೂ ನಡೆಯಿಂದ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಏಕೆಂದರೆ ಗಣಿ ಕಂಪನಿಗಳು, ಅರಣ್ಯ ಬೆಳೆಸುವುದಕ್ಕಾಗಿ ಅರಣ್ಯ ಅಭಿವೃದ್ಧಿ ತೆರಿಗೆ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ಪಾವತಿಸಿದ್ದ ₹3,400 ಕೋಟಿ ಮೊತ್ತವನ್ನು ಬಳಸಿಲ್ಲ ಎಂಬ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇದೆ. ಅದು ಇನ್ನೂ ಇತ್ಯರ್ಥವಾಗಿಲ್ಲ.

ಸರ್ಕಾರ ಕಬ್ಬಿಣದ ಅದಿರು ಅರಣ್ಯ ಉತ್ಪನ್ನ ಅಲ್ಲ ಎಂದು ನಿರ್ಧಾರ ತೆಗೆದುಕೊಂಡರೆ, ಗಣಿ ಕಂಪನಿಗಳು ಅದನ್ನು ಪ್ರಶ್ನಿಸುತ್ತವೆ. ಅಲ್ಲದೇ, ತಮ್ಮ ಹಣ ವಾಪಸ್‌ ಮಾಡುವಂತೆ ತಕರಾರು ತೆಗೆಯುತ್ತವೆ. ಏನಾದರೂ ಮಾಡಿ ಹೆಚ್ಚು ಆದಾಯ ಸಂಗ್ರಹಿಸಬೇಕು ಎಂಬ ಧಾವಂತದಲ್ಲಿ ರಾಜ್ಯ ಸರ್ಕಾರ ಎಡವಟ್ಟು ಮಾಡಿ ಕೊಳ್ಳಲು ಹೊರಟಿದೆ. ಗಣಿ ಇಲಾಖೆ ಯಾವ ಕಾರಣಕ್ಕೆ ಹೆಚ್ಚು ಆದಾಯ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಮತ್ತು ಎಲ್ಲಿ ಲೋಪವಾಗಿದೆ ಎಂಬ ಅಧ್ಯಯನ ಮಾಡದೇ, ಗಣಿ ಅಧಿಕಾರಿಗಳ ಸಲಹೆಯನ್ನು ಕಣ್ಣು ಮುಚ್ಚಿ ಕಾನೂನಾಗಿ ಜಾರಿ ಮಾಡಿದರೆ ಸುಪ್ರೀಂ ಕೋರ್ಟ್‌ನ ಚಾಟಿ ಏಟಿನಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಅದಿರು ಗಣಿಗಾರಿಕೆ ವಿಚಾರ 'ಸುಪ್ರೀಂ' ಕಣ್ಗಾವಲಿನಲ್ಲಿ ಇದೆ ಎಂಬುದನ್ನು ಸರ್ಕಾರ ಮರೆತಿರಬೇಕು ಎಂಬುದು ಕಾನೂನು ಪಂಡಿತರ ಅಭಿಮತ. 24 ಗಂಟೆ ಗಣಿಗಾರಿಕೆಗೆ ಅನುಮತಿ ನೀಡಬೇಕು ಎಂದು ಇವರಿಗೆ ಸಲಹೆ ಕೊಟ್ಟವರು ಯಾರು? ಇದಕ್ಕೆ ಕೇಂದ್ರ ಅರಣ್ಯ ಇಲಾಖೆಯ ಅನುಮತಿ ಬೇಕು ಎಂಬುದು ಗೊತ್ತಿಲ್ಲವೇ? ಒಡಿಶಾದಲ್ಲಿ ರಾತ್ರಿ ವೇಳೆ ಮಾತ್ರ ಅದಿರನ್ನು ಸಾಗಿಸುತ್ತಾರೆ. 24 ಗಂಟೆ ಸಾಗಿಸುವುದಿಲ್ಲ. ಕರ್ನಾಟಕದಲ್ಲಿ ಹಗಲು– ರಾತ್ರಿ ಗಣಿಗಾರಿಕೆ ಮಾಡಿ ಸಾಗಣೆ ಮಾಡಿ ಜನರನ್ನು ಏನು ಮಾಡಬೇಕು ಅಂತಿದ್ದಾರೆ. ಜನರು ಬದುಕಬೇಕೋ ಬೇಡವೋ. ಗಣಿಗಾರಿಕೆಯ ಹಳೇ ದುರ್ದಿನಗಳನ್ನು ಸ್ಥಾಪಿಸಲು ಹೊರಟಂತಿದೆ ಎನ್ನುತ್ತಾರೆ ಅವರು.

ಅರಣ್ಯ ಮತ್ತು ಪರಿಸರವನ್ನು ಅತಿಯಾಗಿ ಶೋಷಣೆ ಮಾಡುವ ಮೂಲಕ ಏನು ಮಾಡಲು ಹೊರಟಿದ್ದಾರೆ? ಇವರ ಉದ್ದೇಶವೇನು? ಯಾಕಾಗಿ ಹೆಚ್ಚು ಸಂಪನ್ಮೂಲ ಸಂಗ್ರಹಿಸಲು ಹೊರಟಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇಂತಹ ಅದ್ಭುತ ಯೋಚನೆಗಳು ಎಲ್ಲಿಂದ ಬರುತ್ತವೆ ಎಂದು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಜ್ಞರೊಬ್ಬರು ಪ್ರಶ್ನಿಸಿದರು.

24 ಗಂಟೆ ಗಣಿಗಾರಿಕೆಯಿಂದ ಹಲವು ತೊಂದರೆ

ಗಣಿಗಾರಿಕೆ, ಸ್ಫೋಟದಿಂದ ವಾಯು ಮಾಲಿನ್ಯ ಮತ್ತು ಜಲಮಾಲಿನ್ಯ ಉಂಟಾಗುತ್ತದೆ. ಇದರಿಂದ ನೀರಿನ ಮೂಲಗಳು ಕಲುಷಿತವಾಗಿ ಮನುಷ್ಯರು ಮತ್ತು ಜಾನುವಾರುಗಳು ಕಾಯಿಲೆಗಳಿಗೆ ಒಳಗಾಗಬೇಕಾಗುತ್ತದೆ. ವಾಯು ಮಾಲಿನ್ಯದಿಂದ ಶ್ವಾಸಕೋಶದ ತೊಂದರೆಗೆ ಸಿಲುಕಬೇಕಾಗುತ್ತದೆ. ಗಣಿ ಪ್ರದೇಶದ ಸುತ್ತಮುತ್ತಲಿನ ಪ್ರದೇಶ ದೂಳುಮಯವಾಗುತ್ತದೆ ಎನ್ನುತ್ತಾರೆ ವನ್ಯಜೀವಿ ಕಾರ್ಯಕರ್ತ ಗಿರಿಧರ್‌ ಕುಲಕರ್ಣಿ.

ಜೀವ ವೈವಿಧ್ಯ ಮತ್ತು ವನ್ಯಜೀವಿಧಾಮಗಳಲ್ಲದ ಅರಣ್ಯ ಪ್ರದೇಶಗಳಲ್ಲೂ ನಾನಾ ರೀತಿಯ ವನ್ಯಜೀವಿಗಳು ಇರುತ್ತವೆ. ಹುಲಿ, ಕರಡಿ, ನರಿ, ತೋಳ ಇರುತ್ತವೆ. ಬಳ್ಳಾರಿ, ವಿಜಯನಗರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಗಣಿಗಾರಿಕೆ ಹೆಚ್ಚಾಗಿ ನಡೆಯುತ್ತಿದ್ದು, ಇಲ್ಲಿ ಈ ರೀತಿಯ ಪ್ರಾಣಿಗಳಿಗೆ ತೊಂದರೆ ಆಗಿವೆ. ಮಾನವ– ವನ್ಯಜೀವಿ ಸಂಘರ್ಷಕ್ಕೂ ಇದೇ ಕಾರಣವಾಗಿದೆ. 24 ಗಂಟೆ ಗಣಿಗಾರಿಕೆ ಅವಕಾಶ ನೀಡಿದ್ದೇ ಆದರೆ, ಅನಾಹುತ ಊಹಿಸಲೂ ಸಾಧ್ಯವಿಲ್ಲ. ಚಿರತೆ, ಕರಡಿ ಮುಂತಾದವು ಊರಿಗೆ ನುಗ್ಗಿ ಹಾವಳಿ ಎಬ್ಬಿಸುವ ಸಾಧ್ಯತೆ ಹೆಚ್ಚು ಎನ್ನುವುದು ಅವರ ವಾದ. ಇವೆರಡೂ ನಿಯಮಗಳು ಜಾರಿಯಾದರೆ, ಅರಣ್ಯ ಇಲಾಖೆ ಎನ್‌ಒಸಿ ಬೇಕಾಗುವುದಿಲ್ಲ. ಆಗ ಅರಣ್ಯ ಸಂಪತ್ತನ್ನು ಬೇಕಾಬಿಟ್ಟಿ ಲೂಟಿ ಮಾಡಲಾಗುತ್ತದೆ ಎನ್ನುತ್ತಾರೆ.

ಈಶಾನ್ಯ, ದಕ್ಷಿಣ ರಾಜ್ಯಗಳು ಅದಿರು ಶ್ರೀಮಂತ 

ಭಾರತದಲ್ಲಿ ಹೆಮಟೈಟ್‌ ಮತ್ತು ಮ್ಯಾಗ್ನೆಟೈಟ್‌ ಎಂಬ ಎರಡು ಕಬ್ಬಿಣದ ಅದಿರುಗಳಿವೆ. ದೇಶದಾದ್ಯಂತ 3,530 ಕೋಟಿ ಟನ್‌ಗಳಷ್ಟು ಕಬ್ಬಿಣದ ಅದಿರು ಇದೆ ಎಂದು ಅಂದಾಜಿಸಲಾಗಿದೆ (2,410 ಕೋಟಿ ಟನ್‌ ಹೆಮಟೈಟ್‌, 1,120 ಕೋಟಿ ಟನ್‌ ಮ್ಯಾಗ್ನಟೈಟ್‌) . ಮ್ಯಾಗ್ನೆಟೈಟ್‌ಗೆ ಹೋಲಿಸಿದರೆ ಹೆಮಟೈಟ್‌ ಅದಿರು ಉತ್ತಮ ಗುಣಮಟ್ಟ ಹೊಂದಿದೆ.   

ಹೆಮಟೈಟ್‌ ಹೆಚ್ಚಾಗಿ ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಕಂಡು ಬಂದರೆ, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಮ್ಯಾಗ್ನಟೈಟ್‌ನ ನಿಕ್ಷೇಪ ಹೆಚ್ಚಿವೆ. ಅಸ್ಸಾಂ, ಬಿಹಾರ, ಛತ್ತೀಸಗಢ, ಜಾರ್ಖಂಡ್‌, ಒಡಿಶಾ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಶೇ 79ರಷ್ಟು ಹೆಮಟೈಟ್‌ ಇದೆ. ಶೇ 93ರಷ್ಟು ಮ್ಯಾಗ್ನೆಟೈಟ್‌ ಅದಿರು ಕರ್ನಾಟಕ, ಆಂಧ್ರಪ್ರದೇಶ, ಗೋವಾ, ತಮಿಳುನಾಡು, ಕೇರಳಗಳಲ್ಲಿ ಇದೆ. ದೇಶದಲ್ಲಿ ಇಟ್ಟು ಲಭ್ಯವಿರುವ ಮ್ಯಾಗ್ನಟೈಟ್‌ನಲ್ಲಿ ಶೇ 72 ಪ್ರಮಾಣ ಕರ್ನಾಟಕ ಒಂದರಲ್ಲೇ ಇದೆ.

ದೇಶದಲ್ಲಿ ಇರುವ ಕಬ್ಬಿಣದ ಅದಿರನ್ನು ಎರಡು ವಿಭಾಗಗಳನ್ನಾಗಿ ಮಾಡಲಾಗಿದೆ. ಒಂದು ಈಗಾಗಲೇ ಗುರುತಿಸಿರುವ ನಿಕ್ಷೇಪಗಳು (ರಿಸರ್ವ್‌ ಕೆಟಗರಿ). ಇನ್ನೊಂದು ನಿಕ್ಷೇ‍ಪಗಳಿಂದ ಹೊರತಾದ ಪ್ರದೇಶದಲ್ಲಿನ ಅದಿರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.