ADVERTISEMENT

ಆಳ–ಅಗಳ | Karnataka Election 2023 | ಯಾತ್ರೆಯ ರಂಗು ಫಸಲಿನ ಗುಂಗು

ರಾಜೇಶ್ ರೈ ಚಟ್ಲ
Published 3 ಮಾರ್ಚ್ 2023, 23:00 IST
Last Updated 3 ಮಾರ್ಚ್ 2023, 23:00 IST
   

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸಮಯ ಸನ್ನಿಹಿತವಾಗುತ್ತಿರುವಂತೆ, ಭರ್ಜರಿ ಫಸಲು ತೆಗೆಯಲು ರಾಜಕೀಯ ಪಕ್ಷಗಳ ನಾಯಕರು ರಾಜ್ಯ ಸುತ್ತಾಟಕ್ಕಿಳಿದಿದ್ದಾರೆ. ಮತದಾರರ ಓಲೈಕೆ, ಮತಭಿಕ್ಷೆ ಭರಾಟೆ ಜೋರಾಗಿದೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಮಾತುಗಳಲ್ಲಿನ ಜಿದ್ದು, ಚುನಾವಣಾ ಪ್ರಚಾರದಲ್ಲೂ ಕಾಣಿಸಿಕೊಳ್ಳಲಾರಂಭಿಸಿದೆ.

ಅಧಿಕಾರದ ಗದ್ದುಗೆ ಏರಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್‌ ನಾಯಕರು, ಬಿಜೆಪಿ ಸರ್ಕಾರವು ವಿಫಲವಾಗಿದೆ ಎಂದು ಆರೋಪಿಸುತ್ತಿದ್ದಾರೆ; ಭ್ರಷ್ಟಾಚಾರ ಆರೋಪ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳನ್ನು ಜನರ ಮುಂದಿಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ತಾನು ಮಾಡಿದ್ದ ಸಾಧನೆಗಳನ್ನು ಮುಂದಿಟ್ಟು ‘ಕೈ ಜೋಡಿಸಿ ಕರುನಾಡಿಗಾಗಿ’ ಎಂದು ಯಾತ್ರೆ ಹೊರಟಿದ್ದಾರೆ. ಜೊತೆಗೆ ಸಾಲು, ಸಾಲು ‘ಗ್ಯಾರಂಟಿ’ ಯೋಜನೆಗಳ ಭರವಸೆ. ಆದರೆ, ಮುಂದೆಯೂ ‘ಬಿಜೆಪಿಯೇ ಭರವಸೆ’ ಎನ್ನುವುದು ಕಮಲ ನಾಯಕರ ವಾಗ್ದಾನ. ‘ಮಿಷನ್‌– 123’ ಗುರಿಯಲ್ಲಿ ಜೆಡಿಎಸ್‌ನ ‘ಪಂಚರತ್ನ’ ಯಾನ!

ಹಾಗೆ ನೋಡಿದರೆ, ರಾಜಕೀಯ ಚಿತ್ರಣವನ್ನೇ ಯಾತ್ರೆಗಳು ಬದಲಿಸಿದ ಇತಿಹಾಸವಿದೆ. ಎಚ್.ಡಿ. ದೇವೇಗೌಡ, ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಯಾತ್ರೆ–ಪಾದಯಾತ್ರೆ ನಡೆಸಿ ಚುನಾವಣೆಗಳಲ್ಲಿ ಭರಪೂರ ಲಾಭ ಎತ್ತಿದವರೇ. ಮತ್ತೊಂದು ಚುನಾವಣೆ ಮುಂದಿರುವಂತೆ, ಇಂತಹ ಯಾತ್ರೆಗಳ ಲಾಭ–ನಷ್ಟದ ವಿಷಯ ಚರ್ಚೆಯ ವಸ್ತು.

ADVERTISEMENT

ಅದು 1999ರ ವಿಧಾನಸಭೆ ಚುನಾವಣೆ. ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್.ಎಂ. ಕೃಷ್ಣ, ಆಗ ಕಾಂಗ್ರೆಸ್ ಪಾಲಿಗೆ ಎಲ್ಲವೂ ಆಗಿದ್ದರು. ಅವರ ‘ಪಾಂಚಜನ್ಯ’ ‌ಯಾತ್ರೆಯ ಸದ್ದಿಗೆ ಅಂದು ಜೆಡಿಯು-ಬಿಜೆಪಿಯವರು ಕೊಚ್ಚಿ ಹೋಗಿದ್ದರು. ಒಂದೇ ಬಸ್‌ನಲ್ಲಿ ನಾಯಕರೆಲ್ಲ ಬಹುತೇಕ ಕ್ಷೇತ್ರಗಳಲ್ಲಿ ಸುತ್ತಾಡಿದ ಪರಿಣಾಮ ಕಾಂಗ್ರೆಸ್‌ಗೆ ಬಹುಮತ ಬಂದಿದ್ದು, ಹೈಟೆಕ್ ಮುಖ್ಯಮಂತ್ರಿಯಾಗಿ ಅವರು ರಾಜ್ಯ ಆಳಿದ್ದು ಈಗ ಇತಿಹಾಸ. ಆ ನೆನಪುಗಳು ಕಾಂಗ್ರೆಸಿಗರ ಪಾಲಿಗೆ ಈಗಲೂ ಸಂಭ್ರಮದ ಮೆಲುಕು.

ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ. ಕೃಷ್ಣ ಅವರು ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ 2002ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಮಂಡ್ಯವರೆಗೆ ಆರು ದಿನ 100 ಕಿ.ಮೀ. ಪಾದಯಾತ್ರೆ ನಡೆಸಿ ಕಾವೇರಿ ಅಚ್ಚುಕಟ್ಟು ಭಾಗದ ಜನರ ಮನ ಗೆಲ್ಲಲು ಯತ್ನಿಸಿದ್ದರು. ಆದರೆ, 2004ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ರಾಜಕೀಯ ಲಾಭ ಆಗಲಿಲ್ಲ. ನೀರಾ ತೆಗೆಯುವ ವಿಷಯದಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದನ್ನು ವಿರೋಧಿಸಿ ಚನ್ನಪಟ್ಟಣದ ವಿಠಲೇನಹಳ್ಳಿಯಿಂದ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಮಹತ್ಮಾಗಾಂಧಿ ಪ್ರತಿಮೆವರೆಗೆ ದೇವೇಗೌಡರು ನಡೆಸಿದ್ದ ಪಾದಯಾತ್ರೆಯಿಂದ ಜೆಡಿಎಸ್‌ಗೆ ಲಾಭವಾಗಿದ್ದು ವಾಸ್ತವ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಪಾರುಪತ್ಯ ಸಾಧಿಸಿ, ‘ಪಾದಯಾತ್ರೆ ರಾಜಕೀಯ’ದ ಶಕ್ತಿ ತೋರಿಸಿಕೊಟ್ಟಿತ್ತು.

ಬಿಜೆಪಿ ಅಧಿಕಾರದಲ್ಲಿದ್ದ (2010) ದಿನಗಳು. ಸಚಿವರಾಗಿದ್ದ ಗಣಿ ಉದ್ಯಮಿ ಜನಾರ್ದನ ರೆಡ್ಡಿ, ಶ್ರೀರಾಮುಲು, ‘ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ’ ಎಂದು ಸಿದ್ದರಾಮಯ್ಯಗೆ ವಿಧಾನಸಭೆಯಲ್ಲಿಯೇ ಸವಾಲು ಹಾಕಿದ್ದರು. ತೊಡೆತಟ್ಟಿದ್ದ ಸಿದ್ದರಾಮಯ್ಯ, ‘ಬಳ್ಳಾರಿಗೆ ಬಂದೇ ಬರುತ್ತೇವೆ. ತಾಕತ್ತಿದ್ದರೆ ತಡೆಯಿರಿ’ ಎಂದು ಮರುಸವಾಲು ಹಾಕಿದ್ದರು‌. ಪಕ್ಷದ ನಾಯಕರ ಜೊತೆ 2010ರ ಜುಲೈ 25ರಂದು ಬೆಂಗಳೂರಿನಿಂದ ಸಿದ್ದರಾಮಯ್ಯ ‘ಬಳ್ಳಾರಿ ಚಲೋ’ ಪಾದಯಾತ್ರೆ ನಡೆಸಿದ್ದರು. ಬಳ್ಳಾರಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದ ಸಮಾವೇಶದಲ್ಲಿ ಗಣಿ ಉದ್ಯಮಿಗಳು ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಅಬ್ಬರಿಸಿದ್ದರು.

ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಕೃಷ್ಣಾದಿಂದ ಹಂಚಿಕೆಯಾದ ಪೂರ್ಣ ಪ್ರಮಾಣದ ನೀರು ಬಳಸಿಕೊಳ್ಳಲು ಮತ್ತು ನೀರಾವರಿ ಯೋಜನೆಗೆ ಅನುಷ್ಠಾನಗೊಳಿಸಲು ವಿಫಲವಾಗಿದೆ ಎಂದು 2013ರ ಚುನಾವಣಾ ಪೂರ್ವದಲ್ಲಿ ‘ಕಾಂಗ್ರೆಸ್ ನಡಿಗೆ - ಕೃಷ್ಣೆಯ ಕಡೆಗೆ’ ಪಾದಯಾತ್ರೆಯನ್ನು ಕಾಂಗ್ರೆಸ್‌ ಕೈಗೊಂಡಿತ್ತು. ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಬಜೆಟ್‌ನಲ್ಲಿ ₹ 10 ಸಾವಿರ ಕೋಟಿ ಮೀಸಲಿಡಲಾಗುವುದು ಎಂದು ನಾಯಕರು ಭರವಸೆಯನ್ನೂ ನೀಡಿದ್ದರು. ಹೊಸಪೇಟೆಯಿಂದ ಆರಂಭಿಸಿ ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ ಮಾರ್ಗವಾಗಿ ಕೂಡಲಸಂಗಮದವರೆಗೆ ನಡೆದ ಈ ಪಾದಯಾತ್ರೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ, ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿತ್ತು.‌

ಹೀಗೆ ಯಾತ್ರೆಗಳ ನೆನಪಿನಲ್ಲಿಯೇ, ಎದುರಿರುವ ಚುನಾವಣೆಯಲ್ಲಿಯೂ ರಾಜಕೀಯ ಲಾಭದ ಫಸಲು ತೆಗೆಯಲು ವರ್ಷದ ಹಿಂದೆಯೇ ಮೇಕೆದಾಟು ಸಂಗಮದಿಂದ ಬೆಂಗಳೂರುವರೆಗೆ ಕಾಂಗ್ರೆಸ್‌ ನಾಯಕರು ‘ಮೇಕೆದಾಟು’ ಪಾದಯಾತ್ರೆ ಹಮ್ಮಿಕೊಂಡಿದ್ದರು. ಈ ‘ನಮ್ಮ ನೀರು ನಮ್ಮ ಹಕ್ಕು’ ಯಾತ್ರೆಯ ನೇತೃತ್ವವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಹಿಸಿದ್ದರು. ಕೋವಿಡ್‌ ಕೋಲಾಹಲದ ಮಧ್ಯೆಯೂ ಈ ಯಾತ್ರೆ ಜನಬೆಂಬಲ ಪಡೆಯುವಲ್ಲಿ ಯಶಸ್ಸು ಕಂಡಿತ್ತು. ಆ ಬಳಿಕ ದಾವಣಗೆರೆಯಲ್ಲಿ ‘ಸಿದ್ದರಾಮಯ್ಯ–75’ ಅಮೃತ ಮಹೋತ್ಸವ‌, ಸ್ವಾತಂತ್ರ್ಯ ನಡಿಗೆ, ರಾಹುಲ್‌ಗಾಂಧಿಯ ‘ಭಾರತ್‌ ಜೋಡೊ’ ಯಾತ್ರೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ಗೆ ಬಲ ತಂದುಕೊಟ್ಟಿದೆ.

‘ಭಾರತ್‌ ಜೋಡೊ’ ನಡಿಗೆಯ ಬೆನ್ನಿಗೆ ಸಿದ್ದರಾಮಯ್ಯ ಬಸ್‌ ಯಾತ್ರೆಗೆ ಸಜ್ಜಾಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್‌ನಲ್ಲೆ ಕೆಲವರು ಅಸಹನೆ ವ್ಯಕ್ತಪಡಿಸಿದ್ದರು. ಒಬ್ಬಂಟಿ ಯಾತ್ರೆಯು ಸಾಮೂಹಿಕ ನಾಯಕತ್ವ, ಒಗ್ಗಟ್ಟಿನ ಹೋರಾಟವೆಂಬ ಸೂತ್ರಕ್ಕೆ ಧಕ್ಕೆ ತರಲಿದೆ ಎಂದೂ ರಾಗ ಎಳೆದಿದ್ದರು. ಮಧ್ಯಪ್ರವೇಶಿಸಿದ ವರಿಷ್ಠರು, ಜಂಟಿಯಾಗಿ ರಾಜ್ಯ ಪ್ರವಾಸ ಕೈಗೊಳ್ಳುವಂತೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ಗೆ ಸೂಚಿಸಿದ್ದರು.

‘ಬಿಜೆಪಿಯ ಅಸಲಿಯತ್ತು ಬಯಲು ಮಾಡುತ್ತೇವೆ’ ಎಂದು ಇದೇ ಜ. 11ರಂದು ‘ಪ್ರಜಾಧ್ವನಿ’ ಹೆಸರಿನಲ್ಲಿ ಬೆಳಗಾವಿಯಿಂದ ಜಂಟಿಯಾಗಿ ಹೊರಟ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮೊದಲ ಹಂತದಲ್ಲಿ 20 ಜಿಲ್ಲೆ ಸುತ್ತಾಡಿದರು. ಎರಡನೇ ಹಂತದಲ್ಲಿ ಬಸವಣ್ಣನ ಕರ್ಮಭೂಮಿ ಬಸವ ಕಲ್ಯಾಣದಿಂದ ಸಿದ್ದರಾಮಯ್ಯ, ಕೋಲಾರದ ಕುರುಡುಮಲೆಯಿಂದ ಡಿ.ಕೆ. ಶಿವಕುಮಾರ್‌ ಪ್ರತ್ಯೇಕ ಯಾತ್ರೆ ಕೈಗೊಂಡಿದ್ದಾರೆ. ಈ ಯಾತ್ರೆಗಳಿಗೆ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗಿದೆ. ಇದು ಕಾಂಗ್ರೆಸ್ಸಿನ ಒಳಗೇ ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಬಣಗಳ ನಡುವೆ ಲಾಭನಷ್ಟದ ಚರ್ಚೆಯನ್ನು ಮುಂಚೂಣಿಗೆ ತಂದಿದೆ. ಜೊತೆಗೆ, ಕಾಂಗ್ರೆಸ್‌ ವೃದ್ಧಿಸಿಕೊಂಡಿರುವ ಸಂಘಟನಾತ್ಮಕ ಬಲ ಚುನಾವಣಾ ಸಂಗ್ರಾಮದಲ್ಲಿ ಬಿಜೆಪಿ, ಜೆಡಿಎಸ್‌ ಪಾಲಿಗೆ ದುಬಾರಿ ಆಗಲಿದೆಯೇ ಎನ್ನುವುದನ್ನು ಕಾದು ನೋಡಬೇಕು.

****

ಕಾಂಗ್ರೆಸ್‌ ಯಾತ್ರೆಗಳಿಗೆ ಜನಜಾತ್ರೆ

ಮೇಕೆದಾಟು ಪಾದಯಾತ್ರೆ; 6 ಲಕ್ಷ– 7 ಲಕ್ಷ

ಸ್ವಾತಂತ್ರ್ಯ ನಡಿಗೆ; 2ಲಕ್ಷ– 2.50 ಲಕ್ಷ

ಪ್ರಜಾಧ್ವನಿ; ಪ್ರತಿ ಜಿಲ್ಲೆಯಲ್ಲಿ 50ಸಾವಿರ– 1 ಲಕ್ಷ

****

‘ಕರುನಾಡ ಕಟ್ಟೋಣ’ ಸಂಕಲ್ಪ ಯಾತ್ರೆ

ಚುನಾವಣೆ ದೃಷ್ಟಿಯಲ್ಲಿಟ್ಟು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಫೆ. 27ರಿಂದ ‘ಕರುನಾಡ ಕಟ್ಟೋಣ’ ಸಂಕಲ್ಪ ಯಾತ್ರೆ ಬೆಂಗಳೂರಿನಿಂದ ಆರಂಭವಾಗಿದೆ. ಸಮಿತಿ ಕಳೆದ ವರ್ಷ 45 ದಿನಗಳ ‘ಜನಚೈತ್ರ ಯಾತ್ರೆ’ ಹಮ್ಮಿಕೊಂಡಿತ್ತು. 31 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪ್ರಸ್ತುತ ರಾಜಕೀಯ, ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆ ಕುರಿತು ರೆಡ್ಡಿ ಜನ ಜಾಗೃತಿ ಮೂಡಿಸಿದ್ದರು. ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧು ಸ್ವಾಮಿ ನೇತೃತ್ವದಲ್ಲಿ ಪಕ್ಷದ ವಿಚಾರಗಳು, ಉದ್ದೇಶ, ಪ್ರಣಾಳಿಕೆ ಜನರಿಗೆ ತಲುಪಿಸಲು ಮೂರು ತಿಂಗಳ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಉಪಾಧ್ಯಕ್ಷ ಎಸ್‌.ಎಚ್‌.ಲಿಂಗೇಗೌಡ ನೇತೃತ್ವದಲ್ಲಿ ಜನರಿಂದ ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲು ರಾಜ್ಯದ 25 ಜಿಲ್ಲೆಗಳಲ್ಲಿ ಮಹಾಭಿಕ್ಷಾ ಯಾತ್ರೆ ಆಯೋಜಿಸಲಾಗಿತ್ತು. ನ್ಯಾಯ ಸಮ್ಮತ ಚುನಾವಣೆಗೆ ಆಗ್ರಹಿಸಿ ಮುಖ್ಯ ಚುನಾವಣಾಧಿಕಾರಿ, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ರೆಡ್ಡಿ ಅವರು ಇದೇ ಜ. 25ರಿಂದ 15 ದಿನ ಭೇಟಿ ಮಾಡಿ ಹಣ, ಸೀರೆ, ಕುಕ್ಕರ್ ಹಂಚಿಕೆ ತಡೆಗೆ ಆಗ್ರಹಿಸಿದ್ದರು.

ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ: ಜನಾಂದೋಲನ ಮಹಾಮೈತ್ರಿ ಸಂಘಟನೆಯು ಸಿಟಿಜನ್‌ ಫಾರ್ ಡೆಮಾಕ್ರಸಿ, ಜನತಂತ್ರ ಪ್ರಯೋಗ ಶಾಲೆ ಸಹಯೋಗದಲ್ಲಿ, ಸಂಘಟನೆಯ ಮುಖಂಡರಾದ ಎಸ್‌.ಆರ್‌. ಹಿರೇಮಠ, ಬಡಗಲಪುರ ನಾಗೇಂದ್ರ, ಪಿ.ಆರ್‌.ಎಸ್‌.ಮಣಿ, ಎಚ್‌.ವಿ. ದಿವಾಕರ್ ನೇತೃತ್ವದಲ್ಲಿ ಇದೇ ಜ.2ರಿಂದ 11ರವರೆಗೆ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ಹಮ್ಮಿಕೊಂಡಿತ್ತು. ಎಲ್ಲರನ್ನೂ ಒಳಗೊಳ್ಳುವ ನೀತಿ, ಸಮತಾ ಸಮಾಜ ನಿರ್ಮಾಣದ ಆಶಯ ಇಟ್ಟುಕೊಂಡು ಕೂಡಲ ಸಂಗಮ, ಹಾವೇರಿ ಜಿಲ್ಲೆ ಕುಸನೂರು, ಮಂಗಳೂರು ಹಾಗೂ ಕೋಲಾರದಿಂದ ನಾಲ್ಕು ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಸರ್ಕಾರದ ಕರಾಳ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು, ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಉದ್ಯೋಗ ಖಾತ್ರಿ ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಿ, ಒಂದು ದಿನಕ್ಕೆ ₹ 600 ಕೂಲಿ ಪಾವತಿಸಬೇಕು. ದಲಿತರು, ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು. ಖಾಸಗೀಕರಣ ನಿಲ್ಲಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳು ಯಾತ್ರೆಯ ಹಕ್ಕೊತ್ತಾಯಗಳಾಗಿದ್ದವು.

****

ವರ್ಷದ ಮೊದಲೇ ಯಾತ್ರೆ ಆರಂಭಿಸಿದ್ದ ಜೆಡಿಎಸ್‌

ಜೆಡಿಎಸ್‌ ಪಕ್ಷವು ವರ್ಷದ ಮೊದಲೇ ವಿಧಾನಸಭಾ ಚುನಾವಣಾ ತಯಾರಿ ಆರಂಭಿಸಿತ್ತು. ನೀರಾವರಿ ಯೋಜನೆಗಳ ಅನುಷ್ಠಾನದ ಭರವಸೆ ನೀಡಿ ಮತದಾರರ ಮನಗೆಲ್ಲಲು 2022ರ ಏಪ್ರಿಲ್‌ನಲ್ಲೇ ‘ಜನತಾ ಜಲಧಾರೆ’ ಎಂಬ ಕಾರ್ಯಕ್ರಮ ಆಯೋಜಿಸಿತ್ತು.

‘ಜನತಾ ಜಲಧಾರೆ’ ರಥಯಾತ್ರೆ ಮೂಲಕ ರಾಜ್ಯದ ಉದ್ದಗಲಕ್ಕೆ ಸಂಚರಿಸಿ ಎಲ್ಲ ನದಿಗಳು ಮತ್ತು ಪ್ರಮುಖ ಜಲ ಮೂಲಗಳಿಂದ ನೀರು ಸಂಗ್ರಹಿಸಿ ಅದನ್ನು ಬೆಂಗಳೂರಿಗೆ ತರಲಾಗಿತ್ತು. ನೆಲಮಂಗಲದ ಬಳಿ ಮೇ 13ರಂದು ನಡೆದ ಬೃಹತ್‌ ಸಮಾವೇಶದಲ್ಲಿ ಗಂಗಾ ಆರತಿ ಮತ್ತು ಗಂಗಾ ಪೂಜೆಯ ಮೂಲಕ ಈ ಯಾತ್ರೆ ಸಮಾರೋಪಗೊಂಡಿತ್ತು.

ಈ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಶಿಕ್ಷಣ, ಆರೋಗ್ಯ, ರೈತ ಸಬಬಲೀಕರಣ, ಯುವಕರು ಮತ್ತು ಮಹಿಳೆಯರ ಸಬಲೀಕರಣ ಹಾಗೂ ರಾಜ್ಯದ ಎಲ್ಲರಿಗೂ ವಸತಿ ಕಲ್ಪಿಸುವ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದಾಗಿ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಅವರ ಈ ಪರಿಕಲ್ಪನೆಗೆ ಪೂರಕವಾಗಿ ‘ಪಂಚ ರತ್ನ’ ಯೋಜನೆ ಪ್ರಕಟಿಸಲಾಗಿದೆ.

‘ಪಂಚ ರತ್ನ’ ರಥಯಾತ್ರೆ ಮೂಲಕ ಈ ಯೋಜನೆ ಕುರಿತು ಪ್ರಚಾರ ಮಾಡುವ ಅಭಿಯಾನವನ್ನು ಜೆಡಿಎಸ್‌ 2022ರ ನವೆಂಬರ್‌ 17ರಿಂದ ಆರಂಭಿಸಿತ್ತು. ಈವರೆಗೆ 75 ಕ್ಷೇತ್ರಗಳಲ್ಲಿ ಯಾತ್ರೆ ಮುಗಿದಿದೆ. ಕುಮಾರಸ್ವಾಮಿ ಖುದ್ದಾಗಿ ಯಾತ್ರೆಯಲ್ಲಿ ಭಾಗವಹಿಸಿ ಮತ ಯಾಚಿಸುತ್ತಿದ್ದಾರೆ.

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.