ADVERTISEMENT

ಕರ್ನಾಟಕ 50 | 25 ವರ್ಷಗಳ ಮುನ್ನೋಟ: ಶೇ 48ರಷ್ಟು ಉದ್ಯೋಗ ಹೆಣ್ಣಿಗೆ ಸಿಗಲಿ

ಎಚ್.ಎಸ್.ಅನುಪಮಾ
Published 22 ನವೆಂಬರ್ 2023, 2:30 IST
Last Updated 22 ನವೆಂಬರ್ 2023, 2:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮನೆವಾರ್ತೆ ನೋಡಿಕೊಳ್ಳುತ್ತಿರುವ ಗೃಹಿಣಿಯರಿಗೆ ಮನೆಯಿಂದಾಚೆ ದುಡಿಯುವವರು ಗಳಿಸಿದ್ದರಲ್ಲಿ ಒಂದು ಭಾಗ ಸಲ್ಲುವಂತಾಗಬೇಕು. ಆಗ ಕರ್ನಾಟಕದ ಮಹಿಳೆಯರು ಬರಿಯ ಕೌಟುಂಬಿಕ ಮಹಿಳೆಯಾಗಿರದೇ ಸಾಮಾಜಿಕ ಮಹಿಳೆಯರಾಗಿ ಬೆಳೆಯುತ್ತಾರೆ

ಹೆಣ್ಣೆಂಬ ಕಾರಣಕ್ಕೆ ಮಹಿಳೆಯರು ಎದುರಿಸುತ್ತಿರುವುದು ಆದಿಮ ತಾರತಮ್ಯ. ಅದರಲ್ಲೂ ಕರ್ನಾಟಕದ ಮಹಿಳೆಯರು ಹಲವು ನೆಲೆಗಳಿಂದ ಅವಕಾಶವಂಚಿತರು. ಅವರು ಎದುರಿಸುವ ತಾರತಮ್ಯಗಳೂ ಒಂದೇ ಪ್ರಕಾರವಾಗಿಲ್ಲ. ದಲಿತ, ಆದಿವಾಸಿ, ಧಾರ್ಮಿಕ ಅಲ್ಪಸಂಖ್ಯಾತ, ಅಸಂಘಟಿತ ಕಾರ್ಮಿಕ, ಗ್ರಾಮೀಣ, ನಿರುದ್ಯೋಗಿ ಮಹಿಳೆಯರ ಸಂಕಟಗಳನ್ನು ಏಕಾಕಾರವಾಗಿ ನೋಡಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ ಸಾವಿರಾರು ವರ್ಷಗಳಿಂದ ಅನೂಚಾನವಾಗಿ ನಡೆಯುತ್ತಿರುವ ತಾರತಮ್ಯವನ್ನು 25 ವರ್ಷಗಳಲ್ಲಿ ಆಡಳಿತಾತ್ಮಕ ಕ್ರಮಗಳ ಮೂಲಕ ಸ್ವಲ್ಪವಾದರೂ ನಿವಾರಿಸುವುದು ಸಾಧ್ಯವೇ? ಅದಕ್ಕಾಗಿ ಆಗಬೇಕಿರುವ ಬದಲಾವಣೆಗಳಾವುವು ಎಂಬುದನ್ನಿಲ್ಲಿ ಪರಿಶೀಲಿಸಲಾಗಿದೆ.

ADVERTISEMENT

ಆಧುನಿಕತೆಯ ಜೊತೆಜೊತೆಗೆ ಸ್ತ್ರೀದ್ವೇಷವೂ ಬೆಳೆಯುತ್ತಿರುವುದನ್ನು ನೋಡಿದರೆ ಹೆಣ್ಣುಮಗುವಿಗೆ ಹುಟ್ಟುವ ಅವಕಾಶ ನೀಡುವುದೇ ಬದಲಾವಣೆಯ ಮೊದಲ ಹೆಜ್ಜೆಯಾಗಬೇಕು. ಹೆಣ್ಣುಭ್ರೂಣ ಹತ್ಯೆ, ಹೆಣ್ಣು ಶಿಶುಹತ್ಯೆಗಳನ್ನು ತಡೆಗಟ್ಟಲು ವೈದ್ಯಕೀಯ ರಂಗದ ಕಟ್ಟುನಿಟ್ಟಾದ ನಿಯಂತ್ರಣದ ಜೊತೆಗೆ ಗಂಡು, ಹೆಣ್ಣುಮಕ್ಕಳನ್ನು ಸಮಾನವಾಗಿ ಕಾಣುವ ಸಾಮಾಜಿಕ ಪರಿಸರ ನಿರ್ಮಾಣವಾಗಬೇಕು. ಹುಟ್ಟಿದ ದಿನದಿಂದ ಮಕ್ಕಳಿಗೆ ಅಸ್ಮಿತೆಗಳ ಹೆಚ್ಚುವರಿ ತೊಗಲು ಅಂಟಿಸತೊಡಗುತ್ತೇವೆ. ಮಕ್ಕಳನ್ನು ಮಕ್ಕಳಂತೆ, ಲೋಕಪ್ರವಾಹದಲ್ಲಿ ಮುಂದೆ ಚಲಿಸುತ್ತಿರುವ ವಿಶ್ವಕಣಗಳಂತೆ ಬೆಳೆಸಬೇಕು. ಅವರ ಮಾತಿಗೆ ಕಿವಿಯಾಗುತ್ತ, ಅಭಿಪ್ರಾಯಗಳನ್ನು ಗೌರವಿಸುತ್ತ ‘ಪ್ರಜಾಪ್ರಭುತ್ವ’ದಂತೆ ಬದುಕುವ ಕ್ರಮವನ್ನು ಕುಟುಂಬ, ಶಾಲೆಯ ಮಟ್ಟದಲ್ಲಿಯೇ ರೂಢಿಸಬೇಕು.

ಶಾಲೆಯಲ್ಲಿ ಮಕ್ಕಳಿಗೆ ತಮ್ಮ ನಡುವೆ ಲಿಂಗತ್ವ-ಜಾತಿ-ವರ್ಣ-ವರ್ಗ-ಧರ್ಮ-ಕುಲ-ಪ್ರದೇಶಗಳೆಂಬ ನೂರೆಂಟು ತಾರತಮ್ಯದ ಗೋಡೆಗಳಿರುವುದು ಅರಿವಿಗೆ ಬರುತ್ತದೆ. ವಿವಿಧ ವರ್ಗಗಳ ಮಕ್ಕಳು ಕಲಿಯುವ ಶಾಲೆಗಳ ಸ್ವರೂಪ, ಸ್ಥಳ, ಚಟುವಟಿಕೆ, ಭಾಷೆ, ಸಮವಸ್ತ್ರ, ಸಿಬ್ಬಂದಿಗಳೇ ಮೊದಲಾದ ಪ್ರತಿಯೊಂದು ವಿಷಯದಲ್ಲೂ ಭಿನ್ನತೆಯಿದೆ. ಅದು ಕೊನೆಯಾಗಲು ಸಾರ್ವತ್ರಿಕ ಉಚಿತ ಸಮಾನ ಮಾತೃಭಾಷಾ ಶಿಕ್ಷಣವು ಪ್ರೌಢಶಾಲಾ ಹಂತದವರೆಗಾದರೂ ಜಾರಿಯಾಗಲೇಬೇಕು. ಹುಡುಗಿ-ಹುಡುಗರಿಬ್ಬರಿಗೂ ಒಂದೇ ತರಹದ ಸಮವಸ್ತ್ರ, ಕಲಿಕೆ-ಚಟುವಟಿಕೆಯ ಅವಕಾಶ ಸಿಗಬೇಕು. ಹುಡುಗ ಹುಡುಗಿಯರಿಗೆ, ಬೇರೆಬೇರೆ ಜಾತಿ-ಧರ್ಮದ ಮಕ್ಕಳಿಗೆ ಪ್ರತ್ಯೇಕ ಶಾಲೆಗಳಿರಬಾರದು. ಎಲ್ಲ ಸಮುದಾಯಗಳ ಗಂಡು–ಹೆಣ್ಣು ಮಕ್ಕಳೂ ಒಟ್ಟಿಗೇ ಕಲಿಯುವಂತೆ ಆಡಳಿತವು ನೋಡಿಕೊಳ್ಳಬೇಕು.

ಪ್ರತಿ ಕುಟುಂಬದ ಯಜಮಾನನಿಂದ ಹಿಡಿದು ಕರ್ನಾಟಕವನ್ನು ಆಳಿದ/ಆಳುವ ವ್ಯಕ್ತಿಗಳಲ್ಲೂ ಲಿಂಗಾಧಾರಿತ ಪೂರ್ವಗ್ರಹ ತುಂಬಿಕೊಂಡು ಮಹಿಳಾ ದೌರ್ಜನ್ಯಗಳಿಗೆ ಕಾರಣವಾಗಿದೆ. ವಾಸಿಸುವ, ಓದುವ, ವಿಹರಿಸುವ, ವಿರಮಿಸುವ, ಉದ್ಯೋಗ ಮಾಡುವ ಸ್ಥಳಗಳಲ್ಲಿ ಮಹಿಳೆಯರು ಲೈಂಗಿಕ ಹಿಂಸೆ, ದೌರ್ಜನ್ಯ, ಹತ್ಯೆಗೊಳಗಾಗುತ್ತಿದ್ದಾರೆ. ಬಾಲ್ಯವಿವಾಹ, ವರದಕ್ಷಿಣೆ, ವಧುದಹನ, ಕೌಟುಂಬಿಕ ದೌರ್ಜನ್ಯ ಎಗ್ಗಿಲ್ಲದೇ ಮುಂದುವರಿದಿವೆ. ಮಹಿಳಾಪರ ಕಾನೂನುಗಳೇನು ಕಡಿಮೆಯೇ? ಆದರೆ ಈಗಲೂ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ. ಹೆರುವ ವೇಳೆ ತಾಯಂದಿರು ಸಾವಿಗೀಡಾಗುತ್ತಿದ್ದಾರೆ. ಎಳೆಯ ಹುಡುಗಿಯರು, ಯುವತಿಯರು ಮಾನವ ಸಾಗಾಟಕ್ಕೊಳಗಾಗುತ್ತಿದ್ದಾರೆ. ಜಾತಿ ಹೆಸರಿನಲ್ಲಿ ದೌರ್ಜನ್ಯ, ಅವಕಾಶ ವಂಚನೆ, ಲೈಂಗಿಕ ಹಿಂಸೆ ಎದುರಿಸುತ್ತಿದ್ದಾರೆ. ಈಗಾಗಲೇ ಇರುವ, ಮಹಿಳಾ ಘನತೆಯನ್ನು ಎತ್ತಿಹಿಡಿಯುವ ಕಾನೂನು, ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಬೇಕು.

ಯಾವುದೇ ಸಂಘ–ಸಂಸ್ಥೆ, ನಿಯೋಜನೆ, ನೇಮಕಾತಿ, ಆಯ್ಕೆಗಳಲ್ಲಿ ಮಹಿಳೆಯರು ಶೇ 48ರಷ್ಟು ಇರಲೇಬೇಕು; ಶೇ 2ರಷ್ಟು ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಬೇಕು ಎಂಬ ನಿಯಮ ಜಾರಿಯಾಗಬೇಕು. ಮಹಿಳಾ ಮೀಸಲಾತಿಯನ್ನು ಕೆಲವೆಡೆಗಳಲ್ಲಿ ತೋರಿಕೆಗೆಂದು ನೀಡಿದರೂ ಆ ಸ್ಥಾನಕ್ಕೆ ಮಹಿಳೆಯರು ಬರುವುದನ್ನು ತಡೆಯಲಾಗುತ್ತಿದೆ. ಹಾಗಾಗದಂತೆ ಸಮಾಜದ ಲಿಂಗಪೂರ್ವಗ್ರಹಗಳನ್ನು ನಿವಾರಿಸುವ ಲಿಂಗಸೂಕ್ಷ್ಮತೆಯ ಕಾರ್ಯಾಗಾರಗಳನ್ನು ನಿರಂತರ ನಡೆಸಬೇಕು. ಒಂದಲ್ಲ ಒಂದು ಹಂತದಲ್ಲಿ ಪ್ರತಿ ಪ್ರಜೆಯೂ ಅಂತಹ ಕಾರ್ಯಾಗಾರದಲ್ಲಿ ಭಾಗಿಯಾಗಿ ಅಭಿಪ್ರಾಯ ಬದಲಿಸಿಕೊಳ್ಳುವಂತಾಗಬೇಕು. ಅದಕ್ಕಾಗಿ ಸರ್ಕಾರವು ಚಿಂತಕರ, ಕಲಾವಿದರ, ಸರ್ಕಾರೇತರ ಸಂಸ್ಥೆಗಳ ನೆರವನ್ನು ಪಡೆಯಬೇಕು.

ಮದುವೆ, ತಾಯ್ತನಗಳು ಹೆಣ್ಣು ತಲುಪಲೇಬೇಕಾದ ಅನಿವಾರ್ಯ ಗುರಿಗಳೆಂಬ ಮನೋಭಾವ ಬದಲಾಗಬೇಕು. ಮದುವೆಯಾದ ತಕ್ಷಣವೇ ಕೊನೆಮೊದಲಿರದ, ಏಕತಾನತೆಯ ಪುಕ್ಕಟೆ ಮನೆಗೆಲಸ ಮಹಿಳೆಯರ ಬೆನ್ನೇರುತ್ತದೆ. ಕೀಳರಿಮೆ, ಗುಲಾಮಿ ಮನಃಸ್ಥಿತಿಯನ್ನು ಪ್ರಚೋದಿಸಿ ಮಹತ್ವಾಕಾಂಕ್ಷೆಗಳಿರದಂತೆ ಮಾಡುತ್ತದೆ. ಉನ್ನತ ವಿದ್ಯಾಭ್ಯಾಸ, ಪದೋನ್ನತಿ, ಅಧಿಕಾರ ಸ್ಥಾನ, ರಾಜಕೀಯ-ಸಾಮಾಜಿಕ ತೊಡಗಿಕೊಳ್ಳುವಿಕೆಗಳಲ್ಲಿ ಮಹಿಳೆ ಕಾಣಿಸದಿರಲು ಮನೆವಾರ್ತೆಯೇ ಕಾರಣವಾಗಿದೆ. ಮನೆಗೆಲಸವು ಮನೆಯಲ್ಲಿರುವ ಸ್ತ್ರೀಪುರುಷರಲ್ಲಿ ಸಮಾನವಾಗಿ ಹಂಚಿಕೆಯಾಗುವುದನ್ನು ಉತ್ತೇಜಿಸಲು ಮನೆಗೆಲಸವೂ ಉದ್ಯೋಗವೆಂದು ಪರಿಗಣಿಸಲ್ಪಡಬೇಕು. ಪಾಲಕತನದ ರಜೆಯನ್ನು ತಂದೆತಾಯಿಗಳಿಬ್ಬರಿಗೂ ಹಂಚಬೇಕು. ಮನೆವಾರ್ತೆ ನೋಡಿಕೊಳ್ಳುತ್ತಿರುವ ಗೃಹಿಣಿಯರಿಗೆ ಮನೆಯಿಂದಾಚೆ ದುಡಿಯುವವರು ಗಳಿಸಿದ್ದರಲ್ಲಿ ಒಂದು ಭಾಗ ಸಲ್ಲುವಂತಾಗಬೇಕು. ಆಗ ಕರ್ನಾಟಕದ ಮಹಿಳೆಯರು ಬರಿಯ ಕೌಟುಂಬಿಕ ಮಹಿಳೆಯಾಗಿರದೇ ಸಾಮಾಜಿಕ ಮಹಿಳೆಯಾಗಿ ಬೆಳೆಯುತ್ತಾರೆ. ನಿರ್ಧಾರಕ ಸ್ಥಾನಗಳಲ್ಲೂ ಅವರನ್ನು ಕಾಣುವುದು ಸಾಧ್ಯವಾಗುತ್ತದೆ.

ಸಾಮಾಜಿಕ ತಾರತಮ್ಯಗಳ ಯಥಾಸ್ಥಿತಿ ಮುಂದುವರಿದಿರುವುದರಲ್ಲಿ ಮಾಧ್ಯಮಗಳ ಪಾಲು ದೊಡ್ಡದಿದೆ. ಸಿನಿಮಾ, ಧಾರಾವಾಹಿ, ಜಾಹೀರಾತು, ಜಾಲತಾಣದಲ್ಲಿ ಬರುವ ಅಸಂಖ್ಯ ತುಣುಕು ಸುದ್ದಿ-ವೀಡಿಯೊಗಳು ಲಿಂಗ-ಜಾತಿಮತ ತಾರತಮ್ಯವನ್ನೇ ಉಸಿರಾಡುವ, ಪೋಷಿಸುವ ಯಜಮಾನ (ಗಂಡು) ಮನಃಸ್ಥಿತಿ ಸೃಷ್ಟಿಸಿರುವಂಥವಾಗಿವೆ. ಮೌಢ್ಯ, ಅಸಹನೆ, ತಾರತಮ್ಯ, ಕ್ರೌರ್ಯವನ್ನು ಉತ್ತೇಜಿಸುವಂತಹ; ಸಮುದಾಯಗಳನ್ನು, ಮಹಿಳೆ-ಮಕ್ಕಳನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ಬಿಂಬಿಸುವ ದೃಶ್ಯ ಮಾಧ್ಯಮ-ಜಾಲತಾಣಗಳನ್ನು ನಿಯಂತ್ರಿಸಲು ಸರ್ಕಾರ ಮಂಡಳಿ ರಚಿಸಬೇಕು ಮತ್ತು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು.

ಮುಂಬರುವ ವರುಷಗಳಲ್ಲಿ ಮನುಷ್ಯ ಸಮಾಜವೇ ಕುಟುಂಬ ನೆಲೆಯಿಂದ ಸಾಮೂಹಿಕತೆಯೆಡೆಗೆ ಹಂತಹಂತವಾಗಿ ಚಲಿಸಬೇಕು. ಅದಕ್ಕೆ ಸರ್ಕಾರ ಇಂಬು ಕೊಡಬೇಕು. ಶಾಲೆ, ಆಸ್ಪತ್ರೆ, ಪಂಚಾಯಿತಿಗಳ ಹಾಗೆ ನಿಗದಿತ ಜನಸಂಖ್ಯೆಗೆ ಸಾಮೂಹಿಕ ಅಡುಗೆಮನೆಗಳು, ಶಿಶುಕಾಳಜಿ ಕೇಂದ್ರಗಳು, ವೃದ್ಧಾಲಯಗಳನ್ನು ಜೊತೆಜೊತೆಗೆ ಸ್ಥಾಪಿಸಬೇಕು. ಇದು ನಿರುದ್ಯೋಗಿಗಳಿಗೆ ಕೆಲಸವನ್ನೂ, ಉದ್ಯೋಗಿಗಳಿಗೆ ಕೆಲಸ ಮಾಡಲು ನಿರಾಳತೆಯನ್ನೂ ಕೊಡುತ್ತದೆ.

ಮಹಿಳೆಯರು ಸಾಮೂಹಿಕತೆ, ಸರಳ ಬದುಕು, ದಿಟದ ನಡೆಗಳನ್ನು ರೂಢಿಸಿಕೊಳ್ಳಬೇಕು. ಆದರೆ ಬಯಲಿನೆಡೆಗಿನ ಹಾದಿ ಸುಲಭವಿಲ್ಲ. ಗುರಿಯತ್ತ ನಡೆಯಲಾಗದಂತೆ ಕುಟುಂಬ-ಜಾತಿ-ಪಕ್ಷ-ಧರ್ಮ ರಾಜಕಾರಣಗಳು ಮಹಿಳಾ ಸಮೂಹವನ್ನು ಒಡೆಯುತ್ತಲೇ ಇರುತ್ತವೆ. ತಮ್ಮ ಸ್ಥಿತಿಯ ಅರಿವೂ ಅವರಿಗಾಗದಂತೆ ಮಾರುಕಟ್ಟೆಯು ಕಣ್ಕಟ್ಟಿನ ಮಾಯಾಜಾಲವನ್ನು ಹೆಣೆಯುತ್ತದೆ. ಅಂತಹ ಹುಸಿಪರದೆಗಳ ಅತ್ತ ಸರಿಸಬೇಕು. ಮುಳ್ಳುಬೇಲಿಗಳ ಕಿತ್ತೊಗೆಯಬೇಕು. ಕಾಯ್ದೆಕಾನೂನು, ಸರ್ಕಾರದ ನೆರವಿಗಾಗಿ ಕಾಯದೇ ಈ ನೆಲದ ಹೆಣ್ಣುಗಳು ಕೈಕೈ ಹಿಡಿದು ನಡೆಯಬೇಕು.

ಆಗ ಉದಯಿಸುವ ಕರ್ನಾಟಕವು ಈಗಿರುವ ಕರ್ನಾಟಕವಾಗಿರುವುದಿಲ್ಲ. ಅಂತಹ ಕರ್ನಾಟಕದಲ್ಲಿ ‘ಸಾಮರಸ್ಯದ ಬಾಳುವೆ’ಯನ್ನು ಕುಂಡದಲ್ಲಿಟ್ಟು ಪೋಷಿಸಬೇಕಾಗಿಲ್ಲ. ಅದು ತಂತಾನೇ ಅರಳುತ್ತದೆ, ಬೆಟ್ಟದ ಹೂವಿನಂತೆ.

ಲೇಖಕಿ: ಬರಹಗಾರ್ತಿ, ಸಾಮಾಜಿಕ ಹೋರಾಟಗಾರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.