ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಜಮೀನು, ಮಠದ ಜಮೀನು, ಸ್ಮಶಾನ ಮತ್ತು ಖಬರಸ್ಥಾನಗಳು, ವಸತಿ ಪ್ರದೇಶಗಳಿಗೆ ಸಂಬಂಧಿಸಿದಂತೆ ‘ವಕ್ಫ್ ಆಸ್ತಿ’ ವಿವಾದವನ್ನು ಮುನ್ನೆಲೆಗೆ ತರಲಾಗಿದೆ. ವಿರೋಧ ಪಕ್ಷ ಬಿಜೆಪಿ–ಆಡಳಿತ ಪಕ್ಷದ ನಾಯಕರ ಮಧ್ಯೆ ವಾಕ್ಸಮರ ಜೋರಾಗಿದ್ದು, ರಾಜಕೀಯ ಬೆಳೆ ತೆಗೆಯುವ ತರಾತುರಿ ರಾಜಕಾರಣಿಗಳಲ್ಲಿ ಕಾಣಿಸುತ್ತಿದೆ. ವಕ್ಫ್ ಆಸ್ತಿ ಸಂಬಂಧ ಕೆಲವು ರೈತರಿಗೆ ನೋಟಿಸ್ ಹೋಗಿದ್ದು ವಿವಾದದ ಕೇಂದ್ರ ಬಿಂದು. ಈ ವಿಚಾರ ಈಗ ಇದ್ದಕ್ಕಿದ್ದಂತೆ ಭುಗಿಲೆದ್ದಿದ್ದು ಏಕೆ ಎಂದು ಹುಡುಕುತ್ತಾ ಹೋದರೆ, ಅದರ ಇತಿಹಾಸ 1970ರ ದಶಕದವರೆಗೂ ಚಾಚುತ್ತದೆ. ಈಚಿನ 15 ವರ್ಷಗಳಲ್ಲಿ ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳೆಲ್ಲವೂ ವಕ್ಫ್ ಆಸ್ತಿ ಮರುವಶಕ್ಕೆ ಪಡೆಯಲು ಹಲವು ಕ್ರಮಗಳನ್ನು ತೆಗೆದುಕೊಂಡಿವೆ. ಆದರೆ, ರೈತರಿಗೆ ನೋಟಿಸ್ ನೀಡುವ ಹಂತಕ್ಕೆ ಬಂದ ಕಾರಣದಿಂದಲೇ, ವಿಷಯ ಈಗ ಎಲ್ಲರ ಗಮನಕ್ಕೆ ಬಂದಿದೆ.
ಧಾರ್ಮಿಕ ಮತ್ತು ಸಾಮಾಜಿಕ ಸೇವೆಯ ಉದ್ದೇಶಕ್ಕೆಂದು ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳು ವಕ್ಫ್ ಮಂಡಳಿಗೆ ನೀಡಿದ ಜಮೀನನ್ನು ‘ವಕ್ಫ್ ಆಸ್ತಿ’ ಎಂದು ಪರಿಗಣಿಸಲಾಗುತ್ತದೆ. ಹೀಗೆ ಒಮ್ಮೆ ವಕ್ಫ್ ಮಂಡಳಿಗೆ ನೀಡಿದ ಯಾವುದೇ ರೀತಿಯ ಸ್ವತ್ತು, ಶಾಶ್ವತವಾಗಿ ವಕ್ಫ್ ಆಸ್ತಿಯಾಗುತ್ತದೆ ಎನ್ನುತ್ತದೆ ವಕ್ಫ್ ಕಾಯ್ದೆ. ಮಸೀದಿ, ದರ್ಗಾ, ಖಬರಸ್ಥಾನ, ಈದ್ಗಾಗಳ ನಿರ್ವಹಣೆ ಮಾಡುವ ವ್ಯಕ್ತಿಗಳಿಗೆ ವಕ್ಫ್ ಮಂಡಳಿಯು ಇಂತಿಷ್ಟು ಜಮೀನನ್ನು ಇನಾಂ ರೂಪದಲ್ಲಿ ನೀಡುವ ಪದ್ಧತಿ ಜಾರಿಯಲ್ಲಿತ್ತು. ಧಾರ್ಮಿಕ ಸ್ಥಳಗಳ ನಿರ್ವಹಣೆಗೆ ತಗಲುವ ವೆಚ್ಚ ಮತ್ತು ಆ ಕರ್ತವ್ಯಕ್ಕೆ ನಿಯೋಜನೆಗೊಂಡ ವ್ಯಕ್ತಿಯ ಕುಟುಂಬ ನಿರ್ವಹಣೆಗೆಂದು ಜಮೀನು ನೀಡಲಾಗುತ್ತಿತ್ತು. ಅಂತಹ ವ್ಯಕ್ತಿ ಕರ್ತವ್ಯದಿಂದ ವಿಮುಖನಾದರೆ ಆತನಿಂದ ಆ ಜಮೀನನ್ನು ವಾಪಸ್ ಪಡೆದು, ಹೊಸದಾಗಿ ನಿಯೋಜನೆಯಾದವರಿಗೆ ನೀಡಲಾಗುತ್ತಿತ್ತು.
ಬ್ರಿಟಿಷ್ ಭಾರತದುದ್ದಕ್ಕೆ ಮತ್ತು ಸ್ವತಂತ್ರ ಭಾರತದ ಮೊದಲ ಎರಡು–ಎರಡೂವರೆ ದಶಕಗಳವರೆಗೂ ಇದೇ ಪದ್ಧತಿ ಜಾರಿಯಲ್ಲಿತ್ತು. ಈ ಪದ್ಧತಿ ಬದಲಾಗಿದ್ದು ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯ ಬಳಿಕ. ಅದೇ ಮಾದರಿಯ ಕಾಯ್ದೆಯನ್ನು ಕೇಂದ್ರ ಸರ್ಕಾರವೂ ತರುವಾಯ ಜಾರಿಗೊಳಿಸಿತು. ಈ ಕಾಯ್ದೆಯ ಅನುಸಾರ ಜಮೀನ್ದಾರಿ–ಇನಾಮದಾರಿ ಮತ್ತು ಗೇಣಿದಾರ ಪದ್ಧತಿ ರದ್ದಾಯಿತು. ನಂತರ ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದಿತು. ಕರ್ನಾಟಕ ಸರ್ಕಾರವು 1974ರಿಂದ 1979ರವರೆಗೆ ಹಲವು ಕಾಯ್ದೆಗಳು, ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತಂದು ಭೂಸುಧಾರಣಾ ನೀತಿಗಳನ್ನು ಅನುಷ್ಠಾನಕ್ಕೆ ತಂದಿತು. ರಾಜ್ಯದಲ್ಲಿಯೂ ಜಮೀನ್ದಾರಿ–ಇನಾಮದಾರಿ ಮತ್ತು ಗೇಣಿದಾರ ಪದ್ಧತಿಗಳು ರದ್ದಾದವು.
1974ರಿಂದ 1979ರ ಮಧ್ಯೆ ಜಾರಿಗೆ ಬಂದ ಈ ಕಾಯ್ದೆಗಳ ಅನ್ವಯ ಇನಾಮದಾರಿ ಮತ್ತು ಗೇಣಿದಾರ ಪದ್ಧತಿಯಲ್ಲಿ ಉಳುಮೆ ಮಾಡುತ್ತಿದ್ದವರಿಗೇ ಜಮೀನಿನ ಪಟ್ಟಾ ಮಾಡಿಕೊಡಲಾಯಿತು. ಜಮೀನ್ದಾರರಿಂದ, ಭೂಮಾಲೀಕರಿಂದ, ಮಠಗಳಿಂದ ಮತ್ತು ವಕ್ಫ್ ಮಂಡಳಿಯಿಂದಲೂ ಉಳುವವರಿಗೆ ಭೂಮಾಲೀಕತ್ವವನ್ನು ವರ್ಗಾಯಿಸಿಕೊಡಲಾಯಿತು. ಉಳುವವನೇ ಭೂಒಡೆಯ ನೀತಿ ರಾಜ್ಯದಲ್ಲಿ ಅನುಷ್ಠಾನಕ್ಕೆ ಬರುವುದಕ್ಕೂ ಮುನ್ನ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಒಡೆತನದಲ್ಲಿ ರಾಜ್ಯದಾದ್ಯಂತ ಒಟ್ಟು 1.70 ಲಕ್ಷ ಎಕರೆಯಷ್ಟು ಜಮೀನು ಇತ್ತು. ಉಳುವವರಿಗೇ ಭೂಮಾಲೀಕತ್ವ ವರ್ಗಾವಣೆ ಪ್ರಕ್ರಿಯೆಯಲ್ಲಿ ವಕ್ಫ್‌ನ 79,000 ಎಕರೆಗಳಷ್ಟು ಜಮೀನು ಸಾರ್ವಜನಿಕರಿಗೆ ವರ್ಗಾವಣೆಯಾಯಿತು. ಆಗ ವರ್ಗಾವಣೆಯಾಗಿದ್ದ 79,000 ಎಕರೆಗಳಲ್ಲಿ ಕೆಲವು ಜಮೀನಿಗೆ ಸಂಬಂಧಿಸಿದ ಪಹಣಿಗಳಲ್ಲೇ ‘ವಕ್ಫ್ ಆಸ್ತಿ’ ಎಂದು ಈಚೆಗೆ ನಮೂದಾಗಿದ್ದು.
ಸರ್ಕಾರವೇ ಅಧಿಸೂಚನೆ ಮೂಲಕ ನೀಡಿದ್ದ ಜಮೀನನ್ನು ಮರುವಶಕ್ಕೆ ಪಡೆಯಲು ವಕ್ಫ್ ಈಗ ಯತ್ನಿಸುವುದು ಏಕೆ ಎಂಬುದನ್ನು ಹುಡುಕುತ್ತಾ ಹೋದರೆ, ಅದರ ಮೂಲ ಸುಪ್ರೀಂ ಕೋರ್ಟ್ 26 ವರ್ಷಗಳ ಹಿಂದೆ ನೀಡಿದ್ದ ಆದೇಶದಲ್ಲಿದೆ. 1974–79ರ ಅವಧಿಯಲ್ಲಿ ಉಳುವವರ ಹೆಸರಿಗೆ ವರ್ಗಾವಣೆಯಾದ ಜಮೀನಿಗೆ ಸಂಬಂಧಿಸಿದಂತೆ 1998ರವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ‘ಸಯ್ಯದ್ ಅಲಿ ಮತ್ತು ಇತರರು ವರ್ಸಸ್ ಆಂಧ್ರಪ್ರದೇಶ ವಕ್ಫ್ ಮಂಡಳಿ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 1998ರ ಜನವರಿ 28ರಂದು ನೀಡಿದ ತೀರ್ಪು ಎಲ್ಲವನ್ನೂ ಬದಲಿಸಿತು.
ಸುಪ್ರೀಂ ಕೋರ್ಟ್, ‘ಒಮ್ಮೆ ವಕ್ಫ್ ಎಂದು ಜಮೀನು ದಾಖಲೆಯಾಗಿದ್ದಲ್ಲಿ ಅದು ಕಾಯಂ ಆಗಿ ವಕ್ಫ್ ಆಸ್ತಿ ಆಗಿರುತ್ತದೆ. ಇನಾಮದಾರಿ ಮತ್ತು ಗೇಣಿದಾರ ಪದ್ಧತಿ, ಭೂಸುಧಾರಣಾ ಕಾಯ್ದೆಗಳ ಅನ್ವಯ ಅನ್ಯರ ಹೆಸರಿಗೆ ವಕ್ಫ್ ಜಮೀನು ವರ್ಗಾವಣೆಯಾಗಿದ್ದಲ್ಲಿ, ಅದು ಅನೂರ್ಜಿತ. ಅದನ್ನು ರದ್ದುಪಡಿಸಿ ಜಮೀನನ್ನು ವಕ್ಫ್ ಮರುವಶಕ್ಕೆ ಪಡೆಯಬಹುದು. ವಕ್ಫ್ ಜಮೀನುಗಳ ಒತ್ತುವರಿಯನ್ನೂ ತೆರವು ಮಾಡಬೇಕು’ ಎಂದು ತೀರ್ಪಿತ್ತಿತು. ದೇಶದ ಇತರ ರಾಜ್ಯಗಳಲ್ಲೂ ಇದು ಜಾರಿಯಾಯಿತು. ಕರ್ನಾಟಕದಲ್ಲೂ ಈ ತೀರ್ಪಿನ ಅನುಷ್ಠಾನಕ್ಕೆ ಹಲವು ಯತ್ನಗಳು ನಡೆದವು. 2000ನೇ ಇಸವಿಯ ನಂತರ ವಕ್ಫ್‌ಮಂಡಳಿ, ಕಾನೂನು ಇಲಾಖೆ, ಅಲ್ಪಸಂಖ್ಯಾತ ಆಯೋಗಗಳು ಇದನ್ನು ಜಾರಿಗೆ ತರುವ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಾ ಬಂದವು. ಈಗ ಅದು ಕಡೆಯ ಹಂತಕ್ಕೆ ಬಂದಿದ್ದು, ಈ ಜಮೀನುಗಳ ಪಹಣಿಯಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಿಸಲಾಗಿದೆ. ರೈತರಿಂದ ಮತ್ತು ಇತರ ಸ್ವತ್ತುಗಳ ಸದ್ಯದ ಮಾಲೀಕರಿಂದ ವಿವರಣೆ ಪಡೆದುಕೊಳ್ಳಲು ನೋಟಿಸ್ ನೀಡಲಾಗಿದೆ.
ಈ ಕ್ರಮಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ, ‘ಮೂರ್ನಾಲ್ಕು ದಶಕಗಳ ಹಿಂದೆಯೇ ಈ ಜಮೀನುಗಳು ಕಾನೂನುಬದ್ಧವಾಗಿ ಸಾವಿರಾರು ಮಂದಿಗೆ ಹಂಚಿಕೆಯಾಗಿವೆ. ಅವುಗಳ ಮಾಲೀಕತ್ವ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾವಣೆಯಾಗಿದೆ. ಕೆಲವರು ಜಮೀನನ್ನು ಮಾರಾಟ ಮಾಡಿದ್ದಾರೆ. ಕೆಲವು ಜಮೀನು ಹಲವು ಬಾರಿ ಮಾರಾಟವಾಗಿವೆ. ಈ ಕೃಷಿ ಜಮೀನುಗಳು ಬಡಾವಣೆಗಳಾಗಿವೆ, ಹಲವೆಡೆ ದೊಡ್ಡ–ದೊಡ್ಡ ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗಿವೆ. ಪರಿಸ್ಥಿತಿ ಹೀಗಿರುವಾಗ, ನೋಟಿಸ್ ನೀಡಿದರೆ ಮತ್ತು ‘ವಕ್ಫ್ ಆಸ್ತಿ’ ಎಂದು ನಮೂದಿಸಿದರೆ ಗೊಂದಲ ಮತ್ತು ಆತಂಕ ಉಂಟಾಗಿಯೇ ಆಗುತ್ತದೆ. ನ್ಯಾಯಾಲಯದ ಆದೇಶದಂತೆಯೇ ಈ ಕ್ರಮಗಳನ್ನು ಕೈಗೊಂಡಿದ್ದರೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟುಗಳಿಗೆ ಇದು ಕಾರಣವಾಗುತ್ತದೆ’ ಎಂದು ಚರ್ಚೆಯಾಗಿದೆ.
‘ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕಾನೂನು ತಜ್ಞರು, ವಕ್ಫ್ ಮಂಡಳಿ, ಸಮಾಜ ವಿಜ್ಞಾನಿಗಳ ಜತೆ ಚರ್ಚಿಸಬೇಕು. ಸಾಮಾಜಿಕ ಶಾಂತಿ ಕದಡದೇ ಇರುವಂತಹ ಮತ್ತು ಯಾರಿಗೂ ಸಮಸ್ಯೆಯಾಗದಂತಹ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬೇಕು’ ಎಂದು ಸಭೆಯಲ್ಲಿ ತೀರ್ಮಾನವಾಗಿದೆ. ಇದರ ಭಾಗವಾಗಿಯೇ ಪಹಣಿಗಳಲ್ಲಿನ ಬದಲಾವಣೆಯನ್ನು ರದ್ದುಪಡಿಸುವ ಮತ್ತು ನೋಟಿಸ್‌ಗಳನ್ನು ವಾಪಸ್ ಪಡೆಯುವ ಕೆಲಸ ಆರಂಭವಾಗಿದೆ.
ಆಧಾರ: ಸಯ್ಯದ್ ಅಲಿ ಮತ್ತು ಇತರರು ವರ್ಸಸ್ ಆಂಧ್ರಪ್ರದೇಶ ವಕ್ಫ್ ಮಂಡಳಿ–ಸುಪ್ರೀಂ ಕೋರ್ಟ್ ತೀರ್ಪು, ವಿಧಾನಸಭೆ ಮತ್ತು ವಿಧಾನ ಪರಿಷತ್ ಪ್ರಶ್ನೋತ್ತರಗಳು, ರಾಜ್ಯ ಸರ್ಕಾರದ ಆದೇಶಗಳು, ಅನ್ವರ್ ಮಾಣಿಪ್ಪಾಡಿ ವರದಿ ಮೇಲಿನ ನಡಾವಳಿಗಳು ಮತ್ತು ಆದೇಶಗಳು
1.70 ಲಕ್ಷ ಎಕರೆ 1974ಕ್ಕೂ ಮುನ್ನ ರಾಜ್ಯ ವಕ್ಫ್ ಮಂಡಳಿ ಬಳಿ ಇದ್ದ ಒಟ್ಟು ಜಮೀನು 79,000 ಎಕರೆ 1974ರ ನಂತರ ಇನಾಮದಾರರಿಗೆ, ಗೇಣಿದಾರರಿಗೆ ವಕ್ಫ್ ಮಂಡಳಿ ಬಿಟ್ಟುಕೊಟ್ಟಿದ್ದ ಜಮೀನು
ಸರ್ಕಾರಿ ಸಂಸ್ಥೆ
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ರಾಜ್ಯ ಸರ್ಕಾರದ ಸಂಸ್ಥೆ. ಈ ಮಂಡಳಿಗೆ ಸಚಿವರು ಇರುತ್ತಾರೆ. ಅಧ್ಯಕ್ಷರು ಸರ್ಕಾರದಿಂದಲೇ ನೇಮಕವಾಗುತ್ತಾರೆ ಮತ್ತು ಸಂಸ್ಥೆಯ ಎಲ್ಲ ಸಿಬ್ಬಂದಿ ಸರ್ಕಾರಿ ನೌಕರರೇ ಆಗಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.